MS Golwalkar- SRI GURUJI

ಇಂದು ಮಾಘ ಬಹುಳ ಏಕಾದಶಿ. ಶ್ರೀ ಗುರೂಜಿ ಎಂದೇ ಪರಿಚಿತರಾದ ಮಾಧವ ಸದಾಶಿವ ಗೊಲ್ವಲ್ಕರ್ ರ 106ನೆಯ ಜಯಂತಿ. ಸಾಮಾಜಿಕ ಸಾಮರಸ್ಯ ಕುರಿತ ತೀವ್ರ ಕಾಳಜಿ ಹೊಂದಿದ್ದ ಗುರೂಜಿಯವರು ಬೇರೆ ಬೇರೆ ಸಂಧರ್ಭಗಳಲ್ಲಿ ತಮ್ಮ ಸ್ಪಷ್ಟ ಅನಿಸಿಕೆಗಳನ್ನು ಸಮಾಜಜದ ಮುಂದಿಟ್ಟಿದ್ದರು. ಸಮರಸತೆಗಾಗಿ ಶ್ರೀ ಗುರುಜಿ ಪುಸ್ತಕದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ. -ಸಂ

MS Golwalkar- SRI GURUJI

ಮನಸ್ಸಿನ ಕೊಳೆಯ ಸುತ್ತ…

ಜಾತಿ ಪದ್ಧತಿಯ ಭಯಾನಕ ಅಡ್ಡಪರಿಣಾಮವೆಂದರೆ ಅಸ್ಪೃಶ್ಯತೆಯ ಆಚರಣೆ. ಹಿಂದು ಧರ್ಮದ ವಿಚಾರಗಳಾದರೂ ಎಲ್ಲ ಜೀವಿಗಳಲ್ಲಿ ಒಂದೇ ಚೈತನ್ಯವನ್ನೂ, ಆತ್ಮವನ್ನೂ ಕಾಣುತ್ತದೆ. ಎಲ್ಲ ಮನುಷ್ಯರಲ್ಲೂ ದೇವರು ನೆಲೆಸಿದ್ದಾನೆಂದು ಹೇಳಲಾಗಿದೆ. ‘ಎಲ್ಲರ ಹೃದಯದಲ್ಲಿ ನಾನಿzನೆ’ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಉದ್ಗರಿಸಿದ್ದಾನೆ. ಇಂತಹ ಶ್ರೇಷ್ಠ ವಿಚಾರಗಳಿದ್ದರೂ ನಮ್ಮದೇ ಸಮಾಜದ ಕೋಟ್ಯಂತರ ಬಂಧುಗಳನ್ನು ‘ಅಸ್ಪೃಶ್ಯ’ರೆಂದು ದೂರ ಇಡಲಾಯಿತು. ಹಳ್ಳಿ, ಹಳ್ಳಿಗಳಲ್ಲಿ ಅವರನ್ನು ಹೊರಗಿಡಲಾಯಿತು. ಅವರನ್ನು ಮುಟ್ಟುವುದಿರಲಿ, ನೆರಳು ಬಿದ್ದರೂ ಅಪವಿತ್ರ ಎಂದೆಲ್ಲ ಹೇಳಲಾಯಿತು. ಸಾಮಾಜಿಕ ದಾಸ್ಯತೆಯನ್ನು ಅವರ ತಲೆಗೆ ಕಟ್ಟಲಾಯಿತು. ಅವರ ಕೆಲಸ, ಮನೆ, ಊಟ, ಅಡುಗೆ, ತೊಡುಗೆ ಎಲ್ಲದರಲ್ಲೂ ಕಟು ನಿಯಮಗಳನ್ನೂ ಹೇರಲಾಯಿತು. ಆ ಸಮಾಜ ಬಂಧುಗಳನ್ನು ನಿರ್ದಯೆಯಿಂದ ನಡೆಸಿಕೊಳ್ಳಲಾಯಿತು. ಪ್ರಾಣಿಗಳಿಗೂ ಮೀರಿದ ಹೀನಾಯ ಬದುಕನ್ನು ಅಸ್ಪೃಶ್ಯರಿಗೆ ವಿಧಿಸ ಲಾಯಿತು. ಅತಿರೇಕದ ಸಂಗತಿಯೆಂದರೆ ಈ ನೀಚ ಆಚರಣೆಯನ್ನೇ ಧರ್ಮವೆಂದು ಭಾವಿಸಿದ್ದು ! ಅಸ್ಪೃಶ್ಯತೆ ಆಚರಿಸದವರಿಗೆ ‘ಧರ್ಮದ್ರೋಹಿ’ ಪಟ್ಟ ಕಟ್ಟಲಾಯಿತು. ಇಂತಹ ಕಂದಾಚಾರದ ವಾಡಿಕೆಗಳು ಸಾಮಾನ್ಯರ ಹೃದಯ, ಮನಸ್ಸನ್ನು ಪ್ರವೇಶಿಸಿ ಕುಳಿತಿವೆ.

ಅಸ್ಪೃಶ್ಯತೆಯ ಆಚರಣೆ ಶ್ರೀ ಗುರೂಜಿಯವರನ್ನು ತೀವ್ರವಾಗಿ ಬಾಧಿಸಿತ್ತು. ಈ ಕೆಟ್ಟ ರೂಢಿಯನ್ನು ಬೇರು ಸಹಿತ ಕಿತ್ತೆಸೆಯಬೇಕೆನ್ನುವುದು ಅವರ ಅಂತಃಕರಣದಲ್ಲಿತ್ತು. ಅಸ್ಪೃಶ್ಯತೆಯ ಆಚರಣೆಯಲ್ಲಿ ಶ್ರೀ ಗುರೂಜಿ ಮೂರು ಮಗ್ಗಲುಗಳನ್ನು ಗುರುತಿಸುತ್ತಾರೆ.

  •     ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಸವರ್ಣೀಯ ಸಮಾಜ.
  •   ಅಸ್ಪೃಶ್ಯತೆಗೆ ಒಳಗಾಗಿ ಕೀಳರಿಮೆಯಲ್ಲಿ ನರಳುತ್ತಿರುವವರು.
  •   ಈ ಆಚರಣೆಗೆ ಧಾರ್ಮಿಕ ಮಾನ್ಯತೆ ಕೊಟ್ಟಿರುವ ಮಠಾಧೀಶರು, ಧಾರ್ಮಿಕ ನೇತಾರರು.

ಸಾಮರಸ್ಯ ಸಮಾಜದ ಕನಸು ಹೊತ್ತು ಅಸ್ಪೃಶ್ಯತೆಯ ನಿವಾರಣೆಗಾಗಿ ಈ ಮೂರು ಮಗ್ಗಲುಗಳಲ್ಲಿ ಗಂಭೀರ ಪ್ರಯತ್ನ ನಡೆಸಿದವರು ಶ್ರೀ ಗುರೂಜಿ.

ಅಸ್ಪೃಶ್ಯತೆಯ ಒಳ ಮರ್ಮವನ್ನು ಶ್ರೀ ಗುರೂಜಿ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ. ಸವರ್ಣೀಯ ಸಮಾಜದ ಮನಸ್ಸಿನ ಕೊಳೆಯೇ ಅಸ್ಪೃಶ್ಯತೆ. ಅದೊಂದು ಮಾನಸಿಕ ವಿಕೃತಿ. ಇಂತಹ ಮನಸ್ಸುಗಳನ್ನು ಸಂಸ್ಕಾರಗಳ ಮೂಲಕ ಸುಧಾರಿಸಬೇಕು. ಏಕಾತ್ಮತೆಯ, ಏಕರಸತೆಯ, ಸೋದರತ್ವದ, ಸೇವೆಯ ಭಾವಜಾಗರಣ ನಿರಂತರ ನಡೆಯಬೇಕು.

ಸಂಘದ ಶಾಖೆಯ ಕಾರ್ಯಪದ್ಧತಿ ಈ ‘ಸುಧಾರಣೆ’ಗೆ ಅದ್ವಿತೀಯ ಯಶಸ್ಸನ್ನು ತಂದುಕೊಟ್ಟಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ಸಂಘದ ಶಿಬಿರಕ್ಕೆ ಭೇಟಿ ನೀಡಿದ ಮಹಾತ್ಮಗಾಂಧಿ ಅಲ್ಲಿ  ಎಲ್ಲರೂ ಒಂದೇ ಸ್ತರದಲ್ಲಿ ಬೆರೆತಿರುವುದನ್ನು ಅನುಭವಕ್ಕೆ ತಂದುಕೊಂಡರು. ಅಲ್ಲಿ ಅಸ್ಪೃಶ್ಯತೆಯ ನೆರಳಿಗೂ ಅವಕಾಶವಿರಲಿಲ್ಲ. ಪುಣೆಯ ಸಂಘದ ತರಬೇತಿ ಶಿಬಿರಕ್ಕೆ ಬಂದಿದ್ದ ಡಾ|| ಬಾಬಾಸಾಹೇಬ ಅಂಬೇಡ್ಕರರವರಿಗೂ ಇದೇ ಸತ್ಯದ ಅನುಭವವಾಯಿತು. ಸಂಘದ ಶಾಖೆಯಲ್ಲಿ ಪಳಗಿದವರಲ್ಲಿ ಕೇವಲ ಹಿಂದುಭಾವ ಜಾಗೃತವಾಗುವುದಷ್ಟೇ ಅಲ್ಲ , ಅವರು ತಮ್ಮ ಹುಟ್ಟಿನ ಜಾತಿಯನ್ನೇ ಮರೆತು ಬಿಡುತ್ತಾರೆ.

ಸಂಘದ ತೆಕ್ಕೆಗೆ ಬಾರದ ವಿಶಾಲ ಹಿಂದು ಸಮಾಜದಲ್ಲಿನ ಈ ‘ಮಾನಸಿಕ ಕೊಳೆ’ಯನ್ನು ಶುದ್ಧ ಮಾಡುವುದು ಹೇಗೆ ? ಇದು ಶ್ರೀ ಗುರೂಜಿಯವರನ್ನು ಕಾಡುತ್ತಿದ್ದ ಪ್ರಶ್ನೆ.

‘ಹಾಗಿರುವುದೇ ಧರ್ಮ, ಉಲ್ಲಂಘಿಸಿದರೆ ಪಾಪ ತಟ್ಟೀತು’ ಅನ್ನುವಷ್ಟು ಅಸ್ಪೃಶ್ಯತೆಯ ಬೇರು ಆಳಕ್ಕಿಳಿದಿದೆ. ಒಳಗಿನಿಂದಲೇ ದುರ್ಬಲಗೊಳಿಸುವ ಈ ಸಾಮಾಜಿಕ ರೋಗ ಅನೇಕ ಸಮಾಜ ಸುಧಾರಕರ ಅವಿರತ ಪ್ರಯತ್ನದ ನಂತರವೂ ಗಟ್ಟಿಯಾಗೇ ಉಳಿದಿದೆ.

ಮಹತ್ವದ ಹೆಜ್ಜೆ

ಜನಸಾಮಾನ್ಯರಲ್ಲಿ ಬೀಡು ಬಿಟ್ಟಿರುವ ಈ ಘಾತಕ ಪರಂಪರೆಯನ್ನು ಕಿತ್ತು ಹಾಕುವುದು ನಮ್ಮೆಲ್ಲ ಮಠಾಧೀಶರ ಕಾಯಕವಾಗಬೇಕು. ವಿಶ್ವ ಹಿಂದು ಪರಿಷತ್ತಿನ ಮೂಲಕ ಶ್ರೀ ಗುರೂಜಿ ಇಂತಹದೊಂದು ಪ್ರಯತ್ನಕ್ಕೆ ಚಾಲನೆ ನೀಡಿದರು. 1966ರ ಪ್ರಯಾಗದ, 1969ರ ಉಡುಪಿಯ ಮಠಾಧೀಶರ ಸಮ್ಮೇಳನಗಳು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಬೇಕು.

ಧರ್ಮ ಬಿಟ್ಟು ಹೋದ ಹಿಂದುಗಳಿಗೆ ವಾಪಸ್ ಮನೆಗೆ ಆಹ್ವಾನಿಸುವ ಸಂದೇಶದೊಂದಿಗೆ ಪ್ರಯಾಗದ ಸಮ್ಮೇಳನ ‘ಯಾವ ಹಿಂದುವೂ ಪತಿತನಲ್ಲ’ (‘ನ ಹಿಂದು ಪತಿತೋ ಭವೇತ್’) ಎನ್ನುವ ನಿರ್ಣಯ ಕೈಗೊಂಡಿತು.

ಅಂದಿನ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ, ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿ , ಸ್ವಪ್ರಯತ್ನದಿಂದ ಐಎಎಸ್ ಪದವೀಧರರೆನಿಸಿದ ಕರ್ನಾಟಕದ ಆರ್. ಭರಣಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಉಡುಪಿಯ ಸಮ್ಮೇಳನ ಮತ್ತೊಂದು ದಿಟ್ಟ ಹೆಜ್ಜೆಯನ್ನೇ ಇಟ್ಟಿತು.

ಅಸ್ಪೃಶ್ಯತೆಯ ಆಚರಣೆಗೆ ಧರ್ಮದ ಸಮ್ಮತಿ ಇಲ್ಲ ಎಂಬ ಸಂದೇಶ ಹೊತ್ತ ಉಡುಪಿಯ ಸಮ್ಮೇಳನ ‘ಹಿಂದುಗಳೆಲ್ಲ ಸೋದರರು’ (‘ಹಿಂದವಾಃ ಸೋದರಾಃ ಸರ್ವೇ’) ಎನ್ನುವ ನಿರ್ಣಯ ಸ್ವೀಕರಿಸಿತು.

ಈ ಎರಡೂ ಸಮ್ಮೇಳನಗಳ ಹಿನ್ನೆಲೆಯಲ್ಲಿ ಶ್ರೀ ಗುರೂಜಿ ಸಾವಿರಾರು ಸಾಧು, ಸಂತ, ಮಠಾಧೀಶರನ್ನು ಪ್ರತ್ಯಕ್ಷ ಭೇಟಿ ಮಾಡಿ ‘ಅಸ್ಪೃಶ್ಯತೆ’ಯ ಕುರಿತಾಗಿ ಚರ್ಚಿಸಿದ್ದರು. ಅಂತಹ ಚರ್ಚೆಗಳಲ್ಲಿ ಶ್ರೀ ಗುರೂಜಿ ನೇರವಾದ, ಖಚಿತವಾದ ಅಭಿಪ್ರಾಯಗಳನ್ನೇ ಮುಂದಿಡುತ್ತಿದ್ದರು. ‘ಜಗದ್ಗುರುಗಳಾದ ನಿಮ್ಮ ಜಗತ್ತಿನಲ್ಲಿ ಅಸ್ಪೃಶ್ಯರು, ವಂಚಿತರು, ವನವಾಸಿಗಳು ಇದ್ದಾರೇನು ? ಅವರ‍್ಯಾರೂ ಇಲ್ಲದ ಪುಟ್ಟ ಜಗತ್ತಿಗೇಕೆ ಜಗದ್ಗುರುಗಳಾಗುತ್ತೀರಿ ? ಎಲ್ಲರನ್ನೂ ತೆರೆದ ಬಾಹುಗಳಲ್ಲಿ ಅಪ್ಪಿಕೊಂಡು ನೈಜ ಜಗದ್ಗುರುಗಳಾಗಿರಿ.’

ಉಡುಪಿ ಸಮ್ಮೇಳನದ ತರುವಾಯದ ಶ್ರೀ ಗುರೂಜಿಯವರ  ಪ್ರತಿಕ್ರಿಯೆಯೂ ಪ್ರಖರವಾಗಿಯೇ ಇತ್ತು. ‘ಉಡುಪಿಯ ಆ ಸಮ್ಮೇಳನ ಸರಿಯಾದ ದಿಕ್ಕಿನಲ್ಲಿ ಯೋಗ್ಯ ಹೆಜ್ಜೆ ಇಟ್ಟಿತ್ತು. ಶೈವ, ವೀರಶೈವ, ವೈಷ್ಣವ, ಬೌದ್ಧ, ಸಿಖ್, ಹೀಗೆ ವಿವಿಧ ಸಂಪ್ರದಾಯಗಳ ಮಠಾಧೀಶರುಗಳಿಂದ ಪ್ರತಿನಿಧಿತವಾಗಿದ್ದ ಸಮ್ಮೇಳನ ಧಾರ್ಮಿಕ  ಹಾಗೂ ಸಾಮಾಜಿಕ ವ್ಯವಹಾರಗಳಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಹಿಂದು ಸಮುದಾಯಕ್ಕೆ ಕರೆ ನೀಡಿತ್ತು.’

ಆ ಚರಿತ್ರಾರ್ಹ ಕರೆ ಹೀಗಿದೆ : ‘ಇಡೀ ಹಿಂದು ಸಮಾಜವು ಒಂದು ಅವಿಭಾಜ್ಯ ಏಕತೆಯ ತಳಪಾಯದ ಮೇಲೆ ಸಂಘಟಿತ ವಾಗಬೇಕು. ಸಮಾಜದಲ್ಲಿ ಒಡಕನ್ನು ಉಂಟು ಮಾಡುವ ಸ್ಪೃಶ್ಯಾಸ್ಪೃಶ್ಯ  ಭಾವನೆಗಳಿಗೆ, ಪ್ರವೃತ್ತಿಗಳಿಗೆ ಸ್ವಲ್ಪವೂ ಅವಕಾಶ ಕೊಡಬಾರದು. ಈ ಉzಶಕ್ಕಾಗಿ ಜಗತ್ತಿನ ಸಮಸ್ತ ಹಿಂದುಗಳು ಪರಸ್ಪರ ಸಾಮಾಜಿಕ ವ್ಯವಹಾರಗಳಲ್ಲಿ ಏಕತೆ ಹಾಗೂ ಸಮಾನತೆಯ ಭಾವನೆಯನ್ನು ಬೆಳೆಸಿಕೊಳ್ಳತಕ್ಕದ್ದು’.

ಈ ನಿರ್ಣಯದ ಮಹತ್ವವನ್ನು ಶ್ರೀ ಗುರೂಜಿ ‘ಹಿಂದು ಸಮಾಜದ ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ವಿಕೃತ ರೂಢಿಗಳ ಮೇಲೆ ಧರ್ಮದ ನೈಜ ಭಾವನೆಯು ಗಳಿಸಿದ ಮಹಾನ್ ವಿಜಯದ ಸುವರ್ಣ ಕ್ಷಣವಿದು’ ಎಂದು ಬಣ್ಣಿಸಿದ್ದಾರೆ.

ಉಡುಪಿಯ ಸಮ್ಮೇಳನದಲ್ಲಿ ‘ಹಿಂದುಗಳೆಲ್ಲರೂ ಸೋದರರು’ ನಿರ್ಣಯದ ಕುರಿತು  ಸುದೀರ್ಘ ಚರ್ಚೆ ನಡೆಯಿತು.

ಅನೇಕ ಮಠಾಧೀಶರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕೊನೆಗೆ ನಿರ್ಣಯ ಸರ್ವಸಮ್ಮತಿಯಿಂದ ಅಂಗೀಕಾರವಾಗುತ್ತಿದ್ದಂತೆಯೇ ಪುಳಕಿತರಾದವರೆಂದರೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಆರ್. ಭರಣಯ್ಯನವರು. ಅವರ ಕಣ್ಣುಗಳಲ್ಲಿ ಆನಂದಾಶ್ರು ತುಂಬಿಕೊಂಡಿತ್ತು. ಶ್ರೀ ಗುರೂಜಿಯವರನ್ನು ತಬ್ಬಿ ಹಿಡಿದ ಭರಣಯ್ಯನವರು ಗದ್ಗದಿತರಾಗಿ ‘ನೀವು ನಮ್ಮ ಸಹಾಯಕ್ಕೆ ಬಂದಿರಿ. ಈ ಉದಾತ್ತ ಕಾರ್ಯ ನೀವು ಕೈಗೆತ್ತಿಕೊಂಡಿದ್ದರಿಂದ ಸಾಧ್ಯವಾಯಿತು. ನೀವು ನಮ್ಮ ಹಿಂದೆ ಇದ್ದೀರೆಂಬುದೇ ನಿಮ್ಮ ಶ್ರೇಷ್ಠತೆಯನ್ನು ಹೇಳುತ್ತದೆ’ ಎಂದು ನುಡಿದರು.

ಮಹಾತ್ಮಗಾಂಧೀಜಿ ಅಸ್ಪೃಶ್ಯರನ್ನು ‘ಹರಿಜನ’ರೆಂದು ಕರೆದರು. ಈ ಶಬ್ದದಿಂದಾಗುವ ಆಪತ್ತಿನ ಬಗ್ಗೆ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವತ್ತೇ ಎಚ್ಚರಿಸಿದ್ದರು. ಇನ್ನೊಂದು ಶಬ್ದದಿಂದ ಪ್ರತ್ಯೇಕತೆ ಬೆಳೆದೀತು. ಬದಲಾಗಬೇಕಾದ ಮನಸ್ಸುಗಳ ಮೇಲೇನೂ ಅದು ಪರಿಣಾಮ ಬೀರದೆಂದು ಅವರು ಹೇಳಿದ್ದರು.

ಶ್ರೀ ಗುರೂಜಿಯವರೂ ಅದೇ ಧಾಟಿಯಲ್ಲಿ ಹೇಳುತ್ತಾರೆ. ‘ಗಾಂಧೀಜಿಯವರನ್ನು ಭೇಟಿಯಾದ ಸಂದರ್ಭದಲ್ಲಿ  ನಾನು ಈ ವಿಷಯ ಪ್ರಸ್ತಾಪಿಸಿದ್ದೆ. ‘ಹರಿಜನ’ ಎಂಬ ಶಬ್ದವು ಪವಿತ್ರವಾಗಿದ್ದರೂ ಅದು ಪ್ರತ್ಯೇಕತೆಗೆ ಇಂಬು ಕೊಡುತ್ತದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳನ್ನೂ ಅದು ಹುಟ್ಟುಹಾಕುತ್ತದೆ. ಸಾಮಾಜಿಕ ಏಕತೆಗೆ ಪೆಟ್ಟು ಬೀಳಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದೆ. ಆದರೆ ಗಾಂಧೀಜಿ ಹಾಗಾಗಲಾರದೆಂದು ವಿಶ್ವಾಸ ತಾಳಿದ್ದರು. ದುರದೃಷ್ಟಕರವೆಂದರೆ ದಿನಗಳೆದಂತೆ ‘ಸಾಮಾಜಿಕ ಅಂತರ’ ಬೆಳೆಯುತ್ತಲೇ ಇದೆ’

ಅಸ್ಪೃಶ್ಯತೆಯ ಪರಿಹಾರದ ಹೆಜ್ಜೆಗಳ ಬಗ್ಗೆಯೂ ಶ್ರೀ ಗುರೂಜಿ ಚರ್ಚಿಸಿದ್ದಾರೆ.

ಪುಣೆಯ ‘ನವಕಾಲ್’ ದೈನಿಕದ ಸಂಪಾದಕರ ಜೊತೆಗಿನ ಸಂವಾದದಲ್ಲಿ ಶ್ರೀ ಗುರೂಜಿಯವರಿಗೆ ‘ಅಸ್ಪೃಶ್ಯತೆ ಹೇಗೆ ದೂರವಾದೀತು?’ ಅನ್ನುವ ಪ್ರಶ್ನೆ ಎದುರಾಯಿತು.

ಉತ್ತರ : ಹರಿಜನ ಅಸ್ಪೃಶ್ಯತೆಯ ಪ್ರಶ್ನೆ ಹಿಂದು ಸಮಾಜವನ್ನು ನಗೆಪಾಟಲಿಗೀಡು ಮಾಡಿದೆ. ನಿಧಾನವಾಗಿ ಅದು ತಾನಾಗಿಯೇ ಪರಿಹಾರ ಕಂಡುಕೊಳ್ಳುವ ಸ್ಥಿತಿ ಬಂದೀತು. ಅದು ಎಷ್ಟು ಬೇಗ ಪರಿಹಾರವಾಗುತ್ತದೋ ಆಷ್ಟು ಒಳ್ಳೆಯದು. ಆದರೆ ‘ಅಸ್ಪೃಶ್ಯತೆಯ ನಿವಾರಣೆಯ ಅಭಿಯಾನ’ ನಡೆಸುತ್ತೇವೆಂದು ಡಂಗುರ ಹೊಡೆದರೆ ಸಮಸ್ಯೆ ಪರಿಹಾರ ಆಗದು. ದುರಾಗ್ರಹ ನಿರ್ಮಾಣ ಆದೀತು. ಸಮಸ್ಯೆ ಇನ್ನಷ್ಟು  ಜಟಿಲವಾಗುತ್ತದೆ. ಅಸ್ಪೃಶ್ಯರನ್ನು ಶುದ್ಧಿ ಮಾಡಬೇಕಾದ್ದಿಲ್ಲ . ಸರಳ ವಿಧಾನದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಧರ್ಮಗುರುಗಳು ಇಂತಹದೊಂದು ವಿಧಾನ ಹುಡುಕಿ, ಜಾರಿಗೆ ತಂದರೆ ಸಮಸ್ಯೆ ಕರಗಿ ಹೋಗುತ್ತದೆ.

ಪ್ರಶ್ನೆ : ಹೊಸ ವಿಧಾನ ಸರಳವಾಗಿರಬೇಕು ಎಂದರೆ ಹೇಗೆ ?

ಉತ್ತರ : ಒಂದು ಮಾಲೆ ಧರಿಸಿ ನಮಸ್ಕಾರ ಮಾಡಿದರೆ ಸಾಕು ಅನ್ನುವಷ್ಟು ಸರಳವಾಗಿರಬೇಕು.

‘ನವಕಾಲ್’ ದೈನಿಕದಲ್ಲಿ ಪ್ರಕಟವಾದ ಈ ಸಂದರ್ಶನ ಲೇಖನದ ಬಗ್ಗೆ ಪುಣೆಯ ‘ಜಾತ್-ಪಾತ್ ತೋಡಕ ಮಂಡಲ’ದ ಅಧ್ಯಕ್ಷರಾದ ಹಿರಿಯ ಸಮಾಜವಾದಿ ನೇತಾರ ಶ್ರೀ ಶಿವುಭಾವು ಲಿಮಯೆ, ಶ್ರೀ ಗುರೂಜಿಯವರ ಹತ್ತಿರ ಚರ್ಚೆ ನಡೆಸಿದರು.

ಪ್ರಶ್ನೆ : ಅಸ್ಪೃಶ್ಯತೆಯನ್ನು ದೂರ ಮಾಡುವ ಸರಳ ಮಾರ್ಗವನ್ನು ತಾವು ತೋರಿಸಿದ್ದೀರಿ. ಆದರೆ ಅಸ್ಪೃಶ್ಯರು ಯಾರು ಎಂಬುದು ನನ್ನ ಪ್ರಶ್ನೆ. ಅಸ್ಪೃಶ್ಯರನ್ನು ಶುದ್ಧೀಕರಿಸುವ ಹಕ್ಕನ್ನು ಈ ಧಾರ್ಮಿಕ ಗುರುಗಳಿಗೆ ಕೊಟ್ಟವರು ಯಾರು ? ನಾವು ಇವರನ್ನು ಧಾರ್ಮಿಕ ಗುರುಗಳೆಂದು ಒಪ್ಪುವುದೇ  ಇಲ್ಲವಲ್ಲ ?

ಉತ್ತರ : ಕೆಲವು ವಿಷಯಗಳ ಬಗ್ಗೆ ನಾವು ವಿಶೇಷ ಗಮನ ಹರಿಸಬೇಕಾಗುತ್ತದೆ. ಅಸ್ಪೃಶ್ಯತೆಯೆನ್ನುವುದು ಕೇವಲ ಅಸ್ಪೃಶ್ಯರ ಸಮಸ್ಯೆ ಮಾತ್ರವಲ್ಲ. ಯಾವನು ಎಲ್ಲಿ ಜನ್ಮ ತಳೆಯುತ್ತಾನೆಂಬ ರಹಸ್ಯವು ಯಾರ ಕೈಯಲ್ಲಿಯೂ ಇರುವುದಿಲ್ಲ. ನಾನು ಇದೇ ಕುಲದಲ್ಲಿ ಹುಟ್ಟುತ್ತೇನೆಂದು ಯಾವನೂ ಹೇಳಲಾರ.  ಅಸ್ಪೃಶ್ಯತೆಯೆನ್ನುವುದು ಸವರ್ಣೀಯರ ಸಂಕುಚಿತ ಮನೋಭಾವಕ್ಕೆ ಇನ್ನೊಂದು ಹೆಸರು ಅಷ್ಟೇ. ಆದ್ದರಿಂದ ಅಸ್ಪೃಶ್ಯತೆಯನ್ನು ನಾಶ ಗೊಳಿಸುವುದೆಂದರೆ ಸವರ್ಣೀಯರ ಈ ಸಂಕುಚಿತ ಮನೋಭಾವವನ್ನು ನಾಶಗೊಳಿಸುವುದು ಎಂದರ್ಥ.

ನಾನು ಅಥವಾ ನೀವು ಧರ್ಮಾಚಾರ‍್ಯರುಗಳಲ್ಲಿ ನಂಬಿಕೆಯಿಟ್ಟಿರಲಿ ಅಥವಾ ಇಡದಿರಲಿ, ಈ ನಂಬಿಕೆಗಳಲ್ಲಿನ ವ್ಯತ್ಯಾಸಕ್ಕೂ, ಅಸ್ಪೃಶ್ಯತೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಯಾರು ಅಸ್ಪೃಶ್ಯತೆಗೆ ಮಾನ್ಯತೆ ನೀಡುತ್ತಾರೋ ಅವರು ಧರ್ಮಾಚಾರ‍್ಯರ ಮಾತಿಗೂ ಮಾನ್ಯತೆ ನೀಡುತ್ತಾರೆ. ಅದ್ದರಿಂದಲೇ ಧರ್ಮಾಚಾರ‍್ಯರುಗಳನ್ನು ಮಾಧ್ಯಮವಾಗಿಟ್ಟುಕೊಂಡು ಈ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬಹುದಾಗಿದೆ.

ಅಲ್ಲದೇ ನನಗೆ ಕಳೆದ ಕೆಲವು ವರ್ಷಗಳಿಂದ ಅನೇಕ ಧರ್ಮಾಚಾರ‍್ಯರೊಂದಿಗೂ, ಶಂಕರಾಚಾರ‍್ಯರೊಂದಿಗೂ ನಿಕಟ ಸಂಬಂಧವಿದೆ. ಇದರ ಆಧಾರದ ಮೇಲೆ   ಧರ್ಮಾಚಾರ‍್ಯರು  ಈ ಕಾರ‍್ಯವನ್ನು ಅವಶ್ಯವಾಗಿ ಮಾಡುವರೆಂದು ಹೇಳಲು ನಾನು ಸಮರ್ಥನಾಗಿzನೆ. ಈಗಾಗಲೇ ಅಸ್ಪೃಶ್ಯತಾ ನಿವಾರಣೆಯ ಕಾರ‍್ಯವನ್ನು ಅನೇಕರು ಮಾಡಿದ್ದಾರೆ. ಅದರಲ್ಲಿ ಮಹಾತ್ಮಾಗಾಂಧಿಯವರ ಪಾಲು ಹಿರಿದಾದುದು. ಅಸ್ಪೃಶ್ಯತಾ ನಿವಾರಣೆಗಾಗಿ  ಆಗಿರುವ ಮೂವತ್ತಕ್ಕೂ ಹೆಚ್ಚಿನ ಪ್ರಯೋಗಗಳಲ್ಲಿ ನನ್ನದೂ ಒಂದು ವಿನಮ್ರ ಪ್ರಯತ್ನ.

ಶ್ರೀ ಗುರೂಜಿಯವರ ಜೀವನಶೈಲಿ ವೈಶಿಷ್ಟ್ಯಪೂರ್ಣವಾದದ್ದು. ಹೇಳುವುದೊಂದು ಮಾಡುವುದಿನ್ನೊಂದು ಇದು ಅವರ ಕಾರ್ಯಶೈಲಿಯಲ್ಲ. ಅಸ್ಪೃಶ್ಯತೆಯನ್ನು ಖಂಡಿಸುವುದಷ್ಟೇ ಅಲ್ಲ. ಪರಿಹಾರದ ಮಾರ್ಗವನ್ನು ವ್ಯವಹಾರದಲ್ಲಿ ತಂದವರು ಅವರು. ಬಿಹಾರ ಪ್ರವಾಸದಲ್ಲೊಮ್ಮೆ ಶ್ರೀ ಗುರೂಜಿ ಕೊಳಗೇರಿಯೊಂದಕ್ಕೆ ಹೋಗಿದ್ದರು. ಅಲ್ಲಿ ಆತ್ಮೀಯ ಸ್ವಾಗತ, ಮುಕ್ತ ಮಾತುಕತೆ, ಚಹಾಪಾನ ಗಳು ನಡೆದವು. ಶ್ರೀ ಗುರೂಜಿ ವಾಹನದಲ್ಲಿ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು. ಸ್ವಲ್ಪ ಹೊತ್ತಿನಲ್ಲೇ ವಾಹನದ ಚಾಲಕನಿಗೆ ವಾಕರಿಕೆ ಶುರುವಾಯಿತು. ನೋಡು, ನೋಡುತ್ತಿದ್ದಂತೆಯೇ ಜೊತೆಗಿದ್ದ ನಾಲ್ವರೂ ವಾಕರಿಕೆಯಿಂದ ಬಳಲಲಾರಂಭಿಸಿದರು. ಎಲ್ಲರೂ ಶ್ರೀ ಗುರೂಜಿಯವರಲ್ಲೂ ವಾಕರಿಕೆಯ ಲಕ್ಷಣವನ್ನು ನಿರೀಕ್ಷಿಸಿದ್ದರು. ಕೊಳೆಗೇರಿಯಲ್ಲಿ ಕುಡಿದ ಚಹಾದ ಬಗ್ಗೆ ಚರ್ಚೆ ಶುರುವಾಯಿತು. ತರುವಾಯ ಶ್ರೀ ಗುರೂಜಿ ‘ನಿಮ್ಮೆಲ್ಲರ ದೃಷ್ಟಿ ಅಲ್ಲಿನ ಬಂಧುಗಳ ಅಸ್ವಚ್ಛತೆ, ಗಲೀಜಿನ ಮೇಲಿತ್ತು. ಹಾಗಾಗಿ ಈಗ ಈ ಸಮಸ್ಯೆ. ನೀವೇನಾದರೂ ಅವರ ಅಪ್ರತಿಮ ಸ್ನೇಹ, ಪ್ರೀತಿಯನ್ನು ನೋಡುತ್ತಾ ಚಹಾ ಆಸ್ವಾದಿಸಿದ್ದರೆ ನಿಮಗದು ಜೀರ್ಣವಾಗುತ್ತಿತ್ತು. ಅಂತಹ ಶುದ್ಧ ಸ್ನೇಹದಲ್ಲಿ ವಾಕರಿಕೆ ಬಂದೀತಾದರೂ ಹೇಗೆ ?’ ಎಂದು ಪ್ರಶ್ನಿಸಿದ್ದರು.

ಕೀಳರಿಮೆ ಕಿತ್ತೆಸೆಯಿರಿ

ಅಸ್ಪೃಶ್ಯ ಬಂಧುಗಳು ತಮ್ಮನ್ನು ‘ಹೀನ’ರೆಂದು ಭಾವಿಸುವುದನ್ನು ಶ್ರೀ ಗುರೂಜಿ ಒಪ್ಪುತ್ತಿರಲಿಲ್ಲ. ಸ್ವಯಂಸೇವಕನೊಬ್ಬ ಶ್ರೀ ಗುರೂಜಿಯವರಲ್ಲಿ  ಒಂದು ಪ್ರಶ್ನೆ ಮುಂದಿಟ್ಟ ; ‘ನಾನು ಹಿಂದುಳಿದ ಜಾತಿಯಿಂದ ಬಂದವನು. ಸಂಘದಲ್ಲಿ ಕೇವಲ ಮೇಲ್ವರ್ಗದ ಜನರೇ ಕಾಣುತ್ತಾರೆ. ಹಿಂದುಳಿದ ಪರಿಶಿಷ್ಟ ಜಾತಿಗಳ ಜನರ ಪ್ರಾತಿನಿಧ್ಯ ಸಂಘದಲ್ಲಿ ಅಗತ್ಯ ಪ್ರಮಾಣದಷ್ಟು ಇಲ್ಲ. ಯಾವ ಕಾರಣದಿಂದ ಹೀಗಾಗುತ್ತದೆ ?’

ಶ್ರೀ ಗುರೂಜಿ ಶಾಂತವಾಗಿಯೇ ಉತ್ತರಿಸಿದ್ದರು. ‘ಸಂಘ ಯಾರನ್ನೂ ಹಿಂದುಳಿದ, ಮುಂದುವರಿದ ಈ ರೀತಿಯ ಚೌಕಟ್ಟುಗಳಲ್ಲಿ ನೋಡುವುದಿಲ್ಲ. ಸಂಘ ಎಲ್ಲ ಹಿಂದುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಯಸುತ್ತದೆ. ಹಿಂದುಳಿದ, ಪರಿಶಿಷ್ಟ ಜಾತಿಯ ಬಂಧುಗಳು ತಮ್ಮ ಕೀಳರಿಮೆಯನ್ನು ಕಿತ್ತೆಸೆದು ಎಲ್ಲರೊಂದಿಗೆ ಸೇರಬೇಕು. ಈ ಅಂತರಗಳು ಇದ್ದಷ್ಟು ದಿನವೂ ಅದನ್ನು ಉಳಿಸುವ ಶಕ್ತಿಗಳು ಕ್ರಿಯಾಶೀಲವಾಗಿರುತ್ತವೆ. ಇದಕ್ಕೆ ರಾಜಕಾರಣಿಗಳೂ ತಮ್ಮ ಪಾಲಿನ ಗೊಬ್ಬರ, ನೀರೆರೆದು ಬೆಳೆಸಿಯಾರು. ಸಂಘ ಇಂತಹ ವಿಕೃತ ಚಿಂತನೆಗಳಿಂದ ದೂರವಿದೆ. ಜಾತಿಯಿರಲಿ, ಭಾಷೆಯಿರಲಿ ಅಥವಾ ಅಂತಹ ಯಾವುದೇ ಭೇದಕಾರಕ ವಿಚಾರಗಳಿರಲಿ. ಅದರಿಂದ ದೂರ ಉಳಿದು ಸಂಘ ಹಿಂದು ಸಮಾಜವನ್ನು  ಸಂಘಟಿಸಲು ಬಯಸುತ್ತದೆ.’

ಕರಗಿದ ಸಂಕೋಚ !  1950ನೇ ಇಸವಿ. ಪುಣೆಯಲ್ಲೊಂದು ಸಂಘದ ತರಬೇತಿ ಶಿಬಿರ. 1300 ಸ್ವಯಂಸೇವಕರು ಪಾಲ್ಗೊಂಡಿದ್ದರು. ಅವತ್ತಿನ ಭೋಜನಕ್ಕೆ ಜಿಲೇಬಿ ತಯಾರಿಸಲಾಗಿತ್ತು. ಶ್ರೀ ಗುರೂಜಿಯವರು ಭೋಜನಕ್ಕೆ ಕುಳಿತಿದ್ದ  ಪಂಕ್ತಿಯಲ್ಲಿ ಬಡಿಸಲೆಂದು ಏಳೆಂಟು ಸ್ವಯಂಸೇವಕರನ್ನು ಆಯೋಜಿಸಲಾಗಿತ್ತು. ಅವರಲ್ಲಿ ಒಬ್ಬ ನಿರುತ್ಸಾಹದಿಂದ ಹಿಂದೆ ಸರಿದು ಕುಳಿತಿದ್ದ. ತಟ್ಟನೇ ಶ್ರೀ ಗುರೂಜಿ ಅದನ್ನು ಗುರುತಿಸಿದರು. ಸ್ವತಃ ಎದ್ದು ಹೋಗಿ ಅವನ ಹೆಗಲ ಮೇಲೆ ಕೈ ಹಾಕಿ ‘ಸಂಕೋಚ ಏಕೆ ?’  ಎಂದು ಪ್ರಶ್ನಿಸಿದರು. ಆಗವನು ‘ನಾನು ನಾರಾಯಣ ಚರ್ಮಕಾರ್. ಹೀಗಾಗಿ ಬಡಿಸಲು ಸಂಕೋಚವಾಗುತ್ತಿದೆ’ ಎಂದ. ಶ್ರೀ ಗುರೂಜಿಯವರಿಗೆ ಪಿಚ್ಚೆನಿಸಿತು. ಅವರು ಅವನ ಕೈ ಹಿಡಿದು ಜಿಲೇಬಿಯ  ತಟ್ಟೆಯೊಂದಿಗೆ ಎಲ್ಲರಿಗೂ ಬಡಿಸಲು ಹೊರಟರು. ಅವನಲ್ಲಿನ ಸಂಕೋಚ ಕರಗಿ ಕಣ್ಣಲ್ಲಿ ನೀರಾಗಿ ಹೋಗಿತ್ತು.

1932 ರಲ್ಲಿ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದ ಅಖಿಲ ಭಾರತ ವರ್ಗದಲ್ಲಿ ಈ ಬಗ್ಗೆ ಪ್ರಶ್ನೋತ್ತರ ನಡೆದಿತ್ತು.

ಪ್ರಶ್ನೆ : ಸಂಘದಲ್ಲಿ ನಾವು ಅಸ್ಪೃಶ್ಯತೆಯನ್ನು ಒಪ್ಪುವುದಿಲ್ಲ. ಆದರೆ ಸಮಾಜದಲ್ಲಿ ಅದನ್ನು  ಹೋಗಲಾಡಿಸಲು ನಾವು ಇನ್ನೂ ಏನಾದರೂ ಕಾರ್ಯಕ್ರಮದ ಬಗ್ಗೆ ಯೋಚಿಸಬಹುದೆ ?

ಶ್ರೀ ಗುರೂಜಿ : ಈಗ ಅಸ್ಪೃಶ್ಯತಾ ನಿವಾರಣೆಯ ವಿಷಯ ಹೇಳಲಾಯಿತು. ಅದರ ಯಾವುದೇ ಕಾರ್ಯಕ್ರಮದಿಂದ ಕೆಲಸವಾಗುತ್ತದೆಯೇ ? ಮಹಾತ್ಮಾ ಗಾಂಧಿ ಅಸ್ಪೃಶ್ಯತಾ ನಿವಾರಣೆಯನ್ನು  ಕಾಂಗ್ರೆಸ್ಸಿನ ಕಾರ್ಯಕ್ರಮದಲ್ಲಿ ಸೇರಿಸಿದರು.  ಅದಕ್ಕಾಗಿ ತುಂಬಾ ಶ್ರಮಿಸಿದರು. ಅದರ ಪರಿಣಾಮವೇನಾಯಿತು ? ಹರಿಜನರು ದೂರವಾದರು. ಬೇರೆಯೇ ಹೆಸರು ನೀಡಿದುದರಿಂದ ಪ್ರತ್ಯೇಕತೆಯ ಭಾವನೆ ಹೆಚ್ಚಾಯಿತು. ಹಳೆಯ ಹೆಸರಿಗೆ ಸಂಬಂಧಿಸಿದಂತೆ  ಮನಸ್ಸಿನಲ್ಲಿ ಉದಯಿಸುವ ಭಾವನೆಗಳು ಈ ಹರಿಜನ ಹೆಸರಿನಿಂದ ಹುಟ್ಟದಿರಲಿ ಎಂಬ ಅವರ ಯೋಚನೆಯೇನೋ ಸರಿ. ಆದರೆ ಆ ಭಾವನೆ ದೂರವಾಗಲಿಲ್ಲ.

ಒಬ್ಬ ಹರಿಜನ ಮುಖಂಡರೊಂದಿಗೆ ನನ್ನ ಮತ್ತು ಡಾ|| ಹೆಡಗೆವಾರ್ ಇಬ್ಬರ ಸ್ನೇಹವಿತ್ತು. ಅವರು ಹೇಳುತ್ತಿದ್ದರು, ‘ಸಂಘಕಾರ್ಯ ತುಂಬಾ ಉತ್ತಮವಾಗಿದೆ. ಆದರೂ ಸಂಘ ನಮ್ಮ ಶತ್ರು. ಏಕೆಂದರೆ ಉಳಿದವರೆಲ್ಲರೂ ನಮ್ಮ ಪ್ರತ್ಯೇಕ ಅಸ್ತಿತ್ವವನ್ನು ಸ್ವೀಕರಿಸುತ್ತಾರೆ, ನಮಗೆ ಪ್ರತ್ಯೇಕ ಅಧಿಕಾರ ಮೊದಲಾದ ಮಾತನಾಡುತ್ತಾರೆ. ಆದರೆ ಸಂಘಕ್ಕೆ ಹೋದರೆ, ನಮ್ಮ ಪ್ರತ್ಯೇಕತೆಯೇ ಮುಗಿದು ಹೋಗುತ್ತದೆ. ಮತ್ತು ನಾವು ಕೇವಲ ಹಿಂದುಗಳಾಗಿ ಉಳಿದು ಬಿಡುತ್ತೇವೆ. ಆಗ ವಿಶೇಷಾಧಿಕಾರ ಇತ್ಯಾದಿ ಹೇಗೆ ಸಿಗುತ್ತದೆ ?’

ಪ್ರತ್ಯೇಕತೆಯ ಭಾವನೆ ಅವರಲ್ಲಿ ಅತ್ಯಂತ ತೀಕ್ಷ್ಣವಾಗಿತ್ತು. ನನಗೆ ಇದರಲ್ಲಿ ಏನೂ ಆಶ್ಚರ್ಯ ಕಾಣುವುದಿಲ್ಲ. ಏಕೆಂದರೆ ಆ ವಕೀಲರ  ಹತ್ತಿರ ಮೊಕದ್ದಮೆ ಕೊಂಡೊಯ್ಯುವವರು ದೂರದಿಂದ ಫೈಲನ್ನು ಎಸೆಯುತ್ತಿದ್ದರು. ಇದರಿಂದ ಅವರ ಮನಸ್ಸಿನಲ್ಲಿ ತುಂಬಾ ವೇದನೆ ಹುಟ್ಟಿತ್ತು.  ಈ ಪ್ರತ್ಯೇಕತೆಯ ಭಾವನೆಯಿಂದಾಗಿ, ಹಿಂದು ಸಮಾಜದಲ್ಲಿ  ನಮ್ಮ ಪರಿಸ್ಥಿತಿಯೇನು ಎಂಬ ವಿಚಾರ ಅವರ ಮನಸ್ಸಿಗೆ ಬರುತ್ತದೆ.

1941 ರಲ್ಲಿ ಒಬ್ಬ ‘ಮಹಾರ್’ ಜನಾಂಗದ ಹುಡುಗ ನನ್ನನ್ನು ಭೇಟಿಯಾಗಲು ಬಂದ. ಸಂಘಕ್ಕೆ ಬರುವುದರಿಂದ ನಮಗೇನು ಲಾಭವೆಂದು ಅವನು ಕೇಳಿದ. ಈಗ ನಿನ್ನನ್ನು ಇತರರು ಪ್ರತ್ಯೇಕವಾಗಿ ಕಾಣುತ್ತಾರೆ, ಈ ಪ್ರತ್ಯೇಕತೆಯ ಗೋಡೆ ಬಿದ್ದು ಹೋಗುತ್ತದೆ. ಇದು ಲಾಭವಲ್ಲವೇ ? ಎಂದು ನಾನು ಕೇಳಿದೆ. ಆ ಹುಡುಗನೇನೋ ಒಪ್ಪಿದ. ಆದರೆ ಜತೆಯವರು ಒಪ್ಪಲಿಲ್ಲ. ಏಕೆಂದರೆ ಅವರ ಅಭಿಪ್ರಾಯದಂತೆ ಅವರ ಅಧಿಕಾರ, ರಾಜನೈತಿಕ ಲಾಭ ಇತ್ಯಾದಿ ವಿಚಾರಗಳು ಮುಗಿದು ಹೋಗುತ್ತವೆ.

ಪ್ರತ್ಯೇಕತೆಯ ಪೋಷಣೆ ಮಾಡದೆ, ಅವರ ದುಃಖ ದೂರ ಮಾಡಲು ಸಾಧ್ಯವೆ ? ಇದನ್ನು ಯೋಚಿಸಬೇಕು. ಇಲ್ಲವಾದರೆ ಸಮಸ್ಯೆಗಳುಂmಗುತ್ತವೆ.

ಅಸ್ಪೃಶ್ಯತೆ ಆಳವಾಗಿ ಬೇರು ಬಿಟ್ಟಿದೆ. ಬ್ರಾಹ್ಮಣರಲ್ಲೂ ಸಣ್ಣ ಪುಟ್ಟ ಜಾತಿಗಳಿವೆ. ಅವರಲ್ಲೂ ಒಬ್ಬರು ಇನ್ನೊಬ್ಬರ ಕೈಯ ನೀರನ್ನೂ ಕುಡಿಯುತ್ತಿರಲಿಲ್ಲ. ಈಗ ಎಲ್ಲ ಸರಿಯಾಗಿದೆ.  ಹರಿಜನರಲ್ಲೂ ಒಬ್ಬರು ಇನ್ನೊಬ್ಬರ ನೆರಳನ್ನೂ ಸಹಿಸದಿರುವವರು ಇದ್ದಾರೆ. ಸಮಸ್ಯೆ ಭಯಂಕರವಾಗಿದೆ. ಅಸ್ಪೃಶ್ಯತೆಯನ್ನು ಕೇವಲ ಬ್ರಾಹ್ಮಣರು ಮಾತ್ರ ಪಾಲಿಸುತ್ತಾರೆ ಎನ್ನಲಾಗದು.

ಸಮಸ್ಯೆಯ ಪರಿಹಾರಕ್ಕೆ ತುಂಬ ಪರಿಶ್ರಮ ಬೇಕು. ಶಿಕ್ಷಣ ನೀಡಬೇಕು. ಹಳೆಯ ಕಂದಾಚಾರಗಳನ್ನು ತೊಳೆಯಬೇಕು. ಹೊಸತನ ಬರಬೇಕು. ಬಹಳ ವರ್ಷಗಳಿಂದ ಒಳಕ್ಕೆ ನುಸುಳಿದ ವಿಚಿತ್ರ ಭಾವನೆಗಳನ್ನು ಬಲಾತ್ಕಾರವಾಗಿ ದೂರ ಮಾಡುವುದರಿಂದ ಏನೂ ಸಾಧನೆಯಾಗದು. ಪ್ರತ್ಯೇಕತೆ ಹೆಚ್ಚಾಗುತ್ತದೆ.

ಅನನ್ಯ ಕೊಡುಗೆ

ಆಧ್ಯಾತ್ಮಿಕ ಜಾಗೃತಿಯ ಕ್ಷೇತ್ರದಲ್ಲಿ ಈ ಬಂಧುಗಳ ಕೊಡುಗೆ ಅನನ್ಯವಾದದ್ದು. ಉತ್ತರದ ಸಂತ ರವಿದಾಸರು ಚರ್ಮಕಾರ ಕುಟುಂಬದಿಂದ ಬಂದರೂ ರಾಣಿಯೆನಿಸಿದ್ದ ಸಂತ ಮೀರಾಳಿಗೆ ಗುರುಗಳಾಗಿದ್ದರು. ಕರ್ನಾಟಕದ ಕನಕದಾಸರು, ಅನೇಕ ವಚನಕಾರರು ಅದ್ವಿತೀಯ ಕೊಡುಗೆ ನೀಡಿದ್ದಾರೆ. ನಮ್ಮ ಶ್ರೇಷ್ಠ ಗ್ರಂಥಗಳೆನಿಸಿದ ರಾಮಾಯಣ, ಮಹಾಭಾರತವನ್ನು ಬರೆದವರೂ ಅಂತಹ ಕೆಳಜಾತಿಯವರೇ. ಇಂತಹ ಶ್ರೇಷ್ಠ ಮಹಾಪುರುಷರಿಗೆ ಜನ್ಮ ಕೊಟ್ಟ ಜಾತಿ ಸಂಕುಲಗಳಿಗೆ ಅಸ್ಪೃಶ್ಯತೆಯ ಹಣೆಪಟ್ಟಿ ಹಚ್ಚುವುದು ಘೋರ ಪಾಪವಾಗುತ್ತದೆ.

ಈ ನಮ್ಮ ಬಾಂಧವರು ಹಿಂದು ಧರ್ಮದ ಮೇಲಿಟ್ಟಿರುವ ಅಚಲ ಶ್ರದ್ಧೆ ನಿಜಕ್ಕೂ ಅಭಿನಂದನಾರ್ಹವಾದದ್ದು. ಸ್ವಧರ್ಮೀಯ ರಿಂದ ತಿರಸ್ಕಾರದ ನೋವುಂಡರೂ ಅವರು ಪರಕೀಯರ ಆಸೆ, ಆಮಿಷಗಳಿಗೆ ಬಲಿಯಾಗಲಿಲ್ಲ. ದೇಶ ವಿಭಜನೆಯ ಸಮಯದಲ್ಲಿ ಇಸ್ಲಾಮಿಗೆ ಮತಾಂತರವಾಗದಿದ್ದರೆ ಜೀವಕ್ಕೆ ಅಪಾಯದ ಪರಿಸ್ಥಿತಿ ಇತ್ತು. ಆದರೆ ಗಟ್ಟಿ ಎದೆಯ ‘ಅಸ್ಪೃಶ್ಯರು’ ಕಷ್ಟ, ಸಂಕಟಗಳನ್ನು ಎದುರಿಸಿದರು. ಭಾರತದಲ್ಲೇ ಬಾಳಿದರು, ಹಿಂದುಗಳಾಗಿಯೇ ಉಳಿದರು.

ನಮ್ಮ ಸಮಾಜದಲ್ಲಿ ವರ್ಣವ್ಯವಸ್ಥೆ , ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯ ಇಂದಿನ ಚಿತ್ರಗಳು ಸಾಮಾಜಿಕ ಸಾಮರಸ್ಯಕ್ಕೆ ಬಾಧಕವಾಗಿವೆ. ಈ ಹಳೆಯ ಖಾಯಿಲೆಯನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಶ್ರೀ ಗುರೂಜಿಯವರದಾಗಿತ್ತು.

ವರ್ಣವ್ಯವಸ್ಥೆ  ಇರಲಿ, ಜಾತಿವ್ಯವಸ್ಥೆ ಇರಲಿ ಅವು ಅನುಪಯುಕ್ತ ಎಂದೆನಿಸಿದ ಮೇಲೆ ಅದನ್ನು ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಮುಂದಿರುವ ಮೊದಲ ಕೆಲಸವೆಂದರೆ ಏಕಾತ್ಮಭಾವನೆಯನ್ನು ಜಾಗೃತಗೊಳಿಸಿ ಸಮಾಜದಲ್ಲಿ ಸಾಮರಸ್ಯ ತರುವುದಾಗಿದೆ.

ಹೀಗೆ ಶ್ರೀ ಗುರೂಜಿಯವರ ಚಿಂತನೆಯ ಜಾಡು ಭಿನ್ನವಾಗಿತ್ತು. ಆದರೆ ಸಾಮಾಜಿಕ ಸಂಘರ್ಷದ ದಾರಿ ಹಿಡಿದವರಿರಲಿ ಅಥವಾ ಹರಿಜನೋದ್ಧಾರದ ಕಾರ್ಯ ಕೈಗೆತ್ತಿಕೊಂಡವರಿರಲಿ ಇಬ್ಬರೂ ಶ್ರೀ ಗುರೂಜಿಯವರನ್ನು ತಪ್ಪಾಗಿಯೇ ಗ್ರಹಿಸಿದ್ದಾರೆ. ಅಥವಾ ತಿಳಿದೂ ತಪ್ಪು ಗ್ರಹಿಕೆಯನ್ನೇ ಮುಂದಿಡುತ್ತಿದ್ದಾರೆ. ನಿರಪೇಕ್ಷ ಭಾವದಿಂದ ಸಾಮಾಜಿಕ ಅಧ್ಯಯನಕ್ಕೆ ಹೊರಟವರು ಶ್ರೀ ಗುರೂಜಿಯವರನ್ನು ಗುರುತಿಸದಿರುವುದು ಸಾಧ್ಯವಿಲ್ಲ.

ಕೈಗೂಡಿದ ಆ ಕನಸು: ಅಸ್ಪೃಶ್ಯತೆಯ ನಿವಾರಣೆಗಾಗಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ದೊಡ್ಡ ಸಂಘರ್ಷವನ್ನೇ ಮಾಡಿದ್ದರು. ಅದು ಮಹಾದ್ ಕರೆಯ ಸತ್ಯಾಗ್ರಹದ ಸಂದರ್ಭವಿರಲಿ ಅಥವಾ ನಾಸಿಕ್‌ನ ಕಾಳಾರಾಮ ದೇವಾಲಯದ ಸತ್ಯಾಗ್ರಹದ ಸನ್ನಿವೇಶವಿರಲಿ, ಡಾ|| ಅಂಬೇಡ್ಕರ್‌ರವರ ಇಂಗಿತ ಸ್ಪಷ್ಟವಾಗಿಯೇ ಇತ್ತು. ‘ಅಸ್ಪೃಶ್ಯತೆಯ ಆಚರಣೆಗೆ ಧರ್ಮದ ಮಾನ್ಯತೆ ಇಲ್ಲ’ ಎಂದು ಹಿಂದೂ ಧರ್ಮಾಚಾರ್ಯರು ಘೋಷಿಸಲೆಂದು ಅವರು ಆಗ್ರಹ ಪಡಿಸಿದ್ದರು. ಡಾ|| ಬಾಬಾಸಾಹೇಬರ ಆ ಕೈಗೊಡದ ಕನಸು, ಕೊನೆಗೂ ಉಡುಪಿಯಲ್ಲಿ ಶ್ರೀ ಗುರೂಜಿಯವರ ಪ್ರಯತ್ನದಿಂದಾಗಿ ನನಸಾಯಿತು.

 

Leave a Reply

Your email address will not be published.

This site uses Akismet to reduce spam. Learn how your comment data is processed.