ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರ ನಿಧನದ ಅನಂತರ ಮಾರ್ಚ್ 5, 1966ರಂದು ಮುಂಬಯಿಯಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಆಯೋಜಿಸಿದ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆಯ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಅವರ ಅರ್ಪಿಸಿದ ನುಡಿನಮನ. ಮೇ28ರ ಸಾವರ್ಕರ್ ಜಯಂತಿಯಂದು ಅವರ ಕಾರ್ಯವನ್ನು ನೆನೆಯುವ, ಅವರ ವಿಚಾರಗಳ ಮಹತ್ವದ ಕುರಿತು ಶ್ರೀಗುರೂಜಿಯವರ ಮಾತುಗಳಲ್ಲೇ ಕಾಣುವ ಅಪರೂಪದ ಓದು…
ಹಲವು ವರ್ಷಗಳ ಹಿಂದೆ ಸಾವರ್ಕರ್ ಅವರ ಜನ್ಮದಿನದ ಸಂದರ್ಭ ದಲ್ಲಿ ಉಪಸ್ಥಿತನಾಗಿದ್ದು ಅವರ ಸುದೀರ್ಘ ಜೀವನಕ್ಕೆ ಶುಭಾಶಯಗಳನ್ನು ಹೇಳುವ ಸೌಭಾಗ್ಯ ಪ್ರಾಪ್ತವಾಗಿತ್ತು. ಆದರೆ, ಅವರದೇ ಜೀವನದ ಪರಿಸಮಾಪ್ತಿಯ ಸಂದರ್ಭದಲ್ಲಿ ಉಪಸ್ಥಿತನಾಗಿರಬೇಕಾದ ವಿಚಿತ್ರ ಪ್ರಸಂಗ ಈ ದಿನ ನನ್ನ ಮೇಲೆ ಬಂದಿದೆ.
ಮಹಾಪುರುಷರ ಅಖಂಡ ಪರಂಪರೆ : ನಮ್ಮ ಪ್ರಾಚೀನ ಸಮಾಜಚೇತನವು ಎಷ್ಟು ಪ್ರಬಲವಾಗಿದೆ ಹಾಗೂ ಶ್ರೇಷ್ಠತೆಯಿಂದ ತುಂಬಿದೆಯೆಂದರೆ ಅಸಾಮಾನ್ಯ ಮತ್ತು ಅಲೌಕಿಕ ಮಹಾಪುರುಷರು ಜನ್ಮತಾಳಿ ತಮ್ಮ ರಾಷ್ಟ್ರದ ಹೆಸರನ್ನು ಉಜ್ವಲವಾಗಿಸದ ಯಾವುದೇ ಕಾಲಖಂಡವಿಲ್ಲ. ಈ ವಿಶಿಷ್ಟವಾದ ಪರಂಪರೆ ಅತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ ಮತ್ತು ಇನ್ನು ಮುಂದೆಯೂ ಮುನ್ನಡೆಯುತ್ತಲೇ ಇರುವುದು.
ಹಿಂದೂ ಸಿದ್ಧಾಂತದ ಅನುಸಾರ ಯಾವುದೇ ವ್ಯಕ್ತಿ ಶ್ರೇಷ್ಠತೆಯ ಅಂತಿಮ ಆವಿಷ್ಕಾರದ ರೂಪದಲ್ಲಿ ಉತ್ಪನ್ನವಾಗುವುದಿಲ್ಲ ಎಂದು ಹೇಳುವುದು ಸಮಂಜಸವಲ್ಲ, ಏಕೆಂದರೆ, ತನ್ನ ಸಮಾಜದ ಹೊಸ ಹೊಸ ಶ್ರೇಷ್ಠ ಮಾನವರತ್ನಗಳ ಅವತಾರದ ಪಂಕ್ತಿಯೇ ಸಮಾಪ್ತಿಯಾಯಿತು ಎಂದು ಅದರರ್ಥವಾಗಿ ಬಿಡುತ್ತದೆ. ನಿರಂತರವಾಗಿ (ಭಾಷಣ -ಲೇಖನ-ಕಾವ್ಯ)
ಸರ್ವಸ್ವವ ಕಾದಂಬರಿ ಮಹಾಪುರುಷರು ನಿರ್ಮಾಣವಾಗಿದ್ದಾರೆ, ಆಗುತ್ತಿದ್ದಾರೆ ಹಾಗೂ ಮುಂದೆಯೂ ಆಗುತ್ತಾರೆ ಎಂದೇ ನಮ್ಮ ಎಲ್ಲ ಪ್ರಸಿದ್ಧ ವ್ಯಕ್ತಿಗಳೂ ಹೇಳುತ್ತಾರೆ. ಶ್ರೀ ಸಮರ್ಥ ರಾಮದಾಸರು | ಹೇಳಿದ್ದಾರೆ- ‘ಧರ್ಮ ಸ್ಥಾಪನೆಗೆ ಈಶ್ವರನ ಅವತಾರಿಗಳು ಈ ಹಿಂದೆಯೂ ಆಗಿ ಹೋಗಿದ್ದಾರೆ ಮತ್ತು ಮುಂದೆಯೂ ಆಗುತ್ತಾರೆ: ಭೂತಕಾಲದಿಂದ ಇನ್ನು ವರ್ತಮಾನದವರೆಗಿನ ವಿಚಾರಗಳು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಭವಿಷ್ಯದ ಅಂಧಕಾರವನ್ನು ಸೀಳಿ, ತನ್ನ ಭಾಗ್ಯದಲ್ಲಿ ಏನು ಬರೆದಿದೆಯೆಂದು ನೋಡುವ ಶಕ್ತಿ ಸಾಮಾನ್ಯ ಮನುಷ್ಯರಲ್ಲಿ ಇರುವುದಿಲ್ಲ, ಆದ್ದರಿಂದ ಆ ವಿಷಯದಲ್ಲಿ ತರ್ಕ -ವಿತರ್ಕಗಳನ್ನು ಮಾಡುವ ಅವಶ್ಯಕತೆಯೇ ಇಲ್ಲ.’
ನಮ್ಮದುರಲ್ಲಿ ಯಾವ ಪರಂಪರೆ ಸಾಗಿದೆಯೋ, ಅದರಲ್ಲಿ ಸಮಾಜದ ಪ್ರಬಲವಾದ ಚೇತನವು ದೇಹ ರೂಪವನ್ನು ತಾಳಿ ಒಬ್ಬ ವಿಭೂತಿಪುರುಷನಾಗಿ ಜನ್ಮತಾಳಿತು ಹಾಗೂ ಅನಂತರ ಆ ಮೂಲ ಚೇತನದಲ್ಲೇ ವಿಲೀನವಾಯಿತು.
ಬರುವುದು ಹೋಗುವುದು ಅದು ಎಲ್ಲರಿಗೂ ಸಹಜವೇ. ಆದರೆ ಕೆಲವು ವ್ಯಕ್ತಿಗಳ ಜನ್ಮವು ಎಲ್ಲರ ಆನಂದದ ವಿಷಯವಾಗಿರುತ್ತದೆ. ಅಂಥವರ ನಿಧನದಿಂದ ಅತ್ಯಂತ ದುಃಖವು ಉಂಟಾಗುತ್ತದೆ, ಆದರೆ ಸಮಾಜದ ದೃಷ್ಟಿಯಲ್ಲಿ ಅವರ ಜೀವನವು ಒಂದು ಗೌರವದ ವಿಷಯವಾಗುತ್ತದೆ. ಇಂಥ ಒಬ್ಬ ಅಸಾಮಾನ್ಯ ಪವಾಡಪುರುಷನ ಸ್ಮರಣೆಯನ್ನು ಮಾಡುವುದಕೋಸ್ಕರ ನಾವೆಲ್ಲರೂ ಇಂದು ಇಲ್ಲಿ ಒಂದುಗೂಡಿದ್ದೇವೆ. ಈಗ ಅವರ ಸ್ಮರಣೆಯನ್ನು ಮಾಡುವುದು ಮತ್ತು ಸ್ಮರಣೆಯ ಜೊತೆ ಜೊತೆಗೆ ಅವರಿಂದ ನಿರ್ದೇಶಿತವಾದ ಕರ್ತವ್ಯಪಥದಲ್ಲಿ ಸಾಗುವುದು ಮಾತ್ರ ನಮ್ಮೆಲ್ಲರ ಕೈಯಲ್ಲಿದೆ. ಆ ಶ್ರೇಷ್ಠ ವ್ಯಕ್ತಿಯ ಜೀವನದ ಸಂಪೂರ್ಣ ಚಿತ್ರವನ್ನೂ ಇಂದು ಇಲ್ಲಿ ನಿರೂಪಿಸುವ ಅವಶ್ಯವಿಲ್ಲ. ಕೇವಲ ಅವರು ಬಾಲ್ಯಕಾಲದಿಂದಲೇ ಉಗ್ರ ರಾಷ್ಟ್ರಭಕ್ತರಾಗಿದ್ದರು ಎಂದು ಹೇಳುವುದು ಸಮಂಜಸವೆನಿಸುತ್ತದೆ. ಕೇವಲ ರಾಷ್ಟ್ರಭಕ್ತರಲ್ಲ, ಅಪ್ಪಟ ಉಗ್ರ ರಾಷ್ಟ್ರಭಕ್ತರಾಗಿದ್ದರು. ನಾಲ್ಕು ದಿಕ್ಕುಗಳಲ್ಲೂ ಕಂಡು ಬರುತ್ತಿದ್ದ ಪರತಂತ್ರದ ವಿಷಮ ವಾತಾವರಣದ ವಿರುದ್ಧ ಅವರ ಹೃದಯದಲ್ಲಿ ಭುಗಿಲೇಳುತ್ತಿದ್ದ ಕಿಡಿ ಮತ್ತು ಅದನ್ನು ಸಮಾಪ್ತಿಗೊಳಿಸಬೇಕೆಂಬ ಅವರ ಅತೀ ಪ್ರಬಲ ನಿಶ್ಚಯದ ಭಾವನೆಗಳು ನಮಗೆಲ್ಲ ಪರಿಚಿತವೇ, ಯಾವ ವ್ಯಕ್ತಿಯು ರಾಷ್ಟ್ರದ ಬಗ್ಗೆ ಈ ರೀತಿಯ ತೀವ್ರ ಭಕ್ತಿಯಿಟ್ಟಿರುತ್ತಾನೋ ಮತ್ತು ಯಾವ ವ್ಯಕ್ತಿಗೆ ಯಾವುದೇ ರೀತಿಯ ಭಯದ ಸ್ಪರ್ಶವೂ ಆಗುವುದಿಲ್ಲವೋ, ಅವನು ಉಗ್ರ -ಭೀಷಣ ಮಾರ್ಗಗಳನ್ನು ಅನುಸರಿಸಲು ಹಿಂದೆ-ಮುಂದೆ ನೋಡುವುದಿಲ್ಲ.
ತಮ್ಮ ಇತಿಹಾಸದಲ್ಲಿ ಪರತಂತ್ರದ ವಿರುದ್ಧ ನಿರಂತರವಾದ ಸಂಘರ್ಷ, ಅಸ್ತಂಗತನಾಗದ ಸ್ವತಂತ್ರ ಸ್ವಾತಂತ್ರ್ಯ- ಸೂರ್ಯ ಉದಯಿಸುವುದನ್ನೂ ನೋಡುವ ಯಾವ ಮಹಾಪುರುಷರು ಈಗಾಗಲೇ ಬಂದು ಹೋಗಿದ್ದಾರೋ, ಅವರಿಗೆಲ್ಲಾ ಮುಕುಟಮಣಿಯ ರೂಪದಲ್ಲಿ ಶಿವಾಜಿ ಮಹಾರಾಜರ ಸಂಘರ್ಷಮಯವಾದ, ನಿರ್ಭಯ, ಪರಾಕ್ರಮದ ಜೀವನದ ಆದರ್ಶಗಳಿವೆ. ಈ ಆದರ್ಶಗಳನ್ನು ಮುಂದಿಟ್ಟುಕೊಂಡು ಒಬ್ಬ ನಿರ್ಭಯ ಹಾಗೂ ನಿಷ್ಠಾವಂತ ರಾಷ್ಟ್ರಭಕ್ತನು ಆ ಶಿವಾಜಿ ಮಹಾರಾಜನಂತೆ ಭೀಕರ ಶಸ್ತ್ರ ಪ್ರಯೋಗಳಿಂದ ಪರಕೀಯ ಶಾಸನವನ್ನು ಮುಳುಗಿಸುವುದು ಹಾಗೂ ಸ್ವಾತಂತ್ರ್ಯವನ್ನು ಸಂಪಾದಿಸುವುದೂ ತನ್ನ ಕರ್ತವ್ಯವೆಂದು ತಿಳಿಯುತ್ತಾನೆ.
ಮಾತೃಭೂಮಿಯ ಚರಣಗಳಲ್ಲಿ ಸಮರ್ಪಣೆ : ಸ್ವಾತಂತ್ರ್ಯವೀರ ಸಾವರ್ಕರ್ ಅವರು ಈ ಕರ್ತವ್ಯವನ್ನೇ ಧೈಯವಾಗಿಟ್ಟುಕೊಂಡು ತಮ್ಮ ಸಂಪೂರ್ಣ ಕಾರ್ಯವನ್ನು ನಡೆಸಿದರು. ತಮ್ಮ ಮಾತು ತಮ್ಮ ಬರೆಯುವ ಕಲೆ, ಎಲ್ಲವನ್ನು ಉಪಯೋಗಕ್ಕೆ ತರುವುದೇ ತಮ್ಮ ಕರ್ತವ್ಯವೆಂದು ಅವರು ತಿಳಿದರು. ಅವರು ಹೇಳಿದ್ದರು. – ‘ನಾನು ನನ್ನ ವಾಙ್ಮಯವನ್ನೂ ಮಾತೃಭೂಮಿಯ ಚರಣಗಳಿಗೆ ಸಮರ್ಪಣೆ ಮಾಡಿಬಿಟ್ಟಿದ್ದೇನೆ.’ ಅವರು ತಮ್ಮ ಜೀವನದ ಪ್ರಾರಂಭಾವಸ್ಥೆಯಲ್ಲಿ ಯಾವ ಮಾತುಗಳನ್ನು ಆಡಿದ್ದರೋ ಅವುಗಳನ್ನು ತಮ್ಮ ಜೀವನದ ಅಂತಿಮ ಉಸಿರಿನವರೆಗೆ ಜಾರಿಯಲ್ಲಿಟ್ಟುಕೊಂಡಿದ್ದರು ಎಂಬುದು ನಮಗೆಲ್ಲಾ ಗೊತ್ತಿದೆ.
ನಮ್ಮ ದೇಶದಲ್ಲಿ ಕುಟಿಲ ನೀತಿಯಿಂದ ತುಂಬಿ ಹೋಗಿದ್ದ ಅತಿ ಚತುರ ಪರಕೀಯ ಶಾಸನದಲ್ಲಿ ಉಗ್ರಪಂಥೀಯರಿಗೆ ಸುಖ-ಶಾಂತಿಗಳು ಅಸಂಭವ ಎಂಬುದು ತಿಳಿದಿತ್ತು. ಹಾಗೇ ಸಾವರ್ಕರ್ ಪ್ರಾರಂಭದಿಂದಲೇ ಕಷ್ಟ ಅನುಭವಿಸಬೇಕಾಯಿತು. ಮುಂದೆ ಅಂತೂ ಅವರಿಗೆ ಈ ಕಠಿಣ ಆಗ್ನಿ ಪರೀಕ್ಷೆಯ ಸುರಂಗದ ಮೂಲಕ ಸಾಗಬೇಕಾಯಿತು. ಅವರಿಗೆ ‘ಕಾಲಾಪಾನಿ’ ಶಿಕ್ಷೆಯನ್ನು ಕೊಡಲಾಯಿತು.
‘ಕಾಲಾಪಾನಿ’ ಶಿಕ್ಷೆಯ ಏಕಾಂತದಲ್ಲಿ ಭಿನ್ನ ಭಿನ್ನ ರೀತಿಯ ಕಷ್ಟಗಳನ್ನು ಸಹಿಸುತ್ತಾ, ಅವರ ಕೆಲವು ಸ್ನೇಹಿತರು ಇಹಲೋಕವನ್ನು ತ್ಯಜಿಸಿಬಿಟ್ಟರು. ಕೆಲವರು ಉನ್ಮಾದದ ಸ್ಥಿತಿಗೆ ತಲುಪಿದರು. ಅಂದರೆ ಭ್ರಮಿಷ್ಟರಾಗಿಬಿಟ್ಟರು. ಸ್ವತಃ ಶ್ರೀ ಸಾವರ್ಕರ್ ಅವರು ಗಂಭೀರ ರೂಪದ ಅಸ್ವಸ್ಥತೆಯನ್ನು ಹೊಂದಿದರು.
ಆಶ್ಚರ್ಯದ ವಿಷಯವೇನೆಂದರೆ ರುಗ್ಣಾವಸ್ಥೆಯಲ್ಲಿ, ಭಿನ್ನ ಭಿನ್ನ ಪ್ರಕಾರದ ಕಷ್ಟಗಳಲ್ಲಿ ಮಾತೃಭೂಮಿಯ ದರ್ಶನದ ಭಾಗ್ಯ ಮತ್ತೆ ಪ್ರಾಪ್ತವಾಗುತ್ತದೋ ಇಲ್ಲವೋ, ಈ ಪ್ರಕಾರದ ನಿರಾಶಾ ಮನಃಸ್ಥಿತಿಯಲ್ಲೂ ಕೂಡ, ಮಾತೃಭೂಮಿಯ ಬಗ್ಗೆ ಸಮರ್ಪಣಾಭಾವದ ಅವರ ಕಾವ್ಯಪ್ರತಿಭೆ, ವಾಗೈಖರಿಗಳು ಕುಂಠಿತವಾಗಲಿಲ್ಲ. ಬದಲಾಗಿ ಅದು ಇನ್ನೂ ತೀವ್ರ ಗತಿಯಲ್ಲಿ ಅಭಿವ್ಯಕ್ತಿಗೊಂಡಿತು. ಎಲ್ಲಾ ಪ್ರಕಾರಗಳ ಕಠಿಣ ಪರಿಸ್ಥಿತಿಗಳೂ ಅವರನ್ನು ತುಳಿಯುವ ಪ್ರಯತ್ನವನ್ನೇನೋ ಮಾಡಿದವು. ಆದರೆ ಅವರ ಪ್ರಖರವಾದ ತೇಜಸ್ಸಿನ ಎದುರು ಎಲ್ಲಾ ಕಷ್ಟಗಳೂ ಭಸ್ಮವಾಗಿ, ಅವರ ಪ್ರತಿಭೆಯು ಪ್ರಕಟವಾಯಿತು. ಯಾವುದೇ ಸಾಧನಗಳು ಇಲ್ಲದಿದ್ದಾಗ್ಯೂ, ಮೊನಚು ಕಲ್ಲಿನ ಸಹಾಯ ಮತ್ತು ಸ್ಮರಣಶಕ್ತಿ ಈ ಎರಡನ್ನೂ ಉಪಯೋಗಿಸಿಕೊಂಡು, ಸಾರಸ್ವತ ಹಾಗೂ ಸಾಹಿತ್ಯ ಲೋಕದಲ್ಲಿ ಅಮರವಾಗಿ ಉಳಿದುಹೋದ ಸ್ಫೂರ್ತಿದಾಯಕ, ತೇಜೋಮಯವಾದ ಸತ್ತ್ವಪೂರ್ಣ ಸಾಹಿತ್ಯವು ಅಲ್ಲಿ ಉಗಮಗೊಂಡಿತು.
ಭೀಷಣ ಕಷ್ಟಗಳಲ್ಲೂ ಕೂಡ ಅಂತಃಕರಣದ ಸ್ಫೂರ್ತಿಯನ್ನು ಜ್ಞಾಪಕ ಶಕ್ತಿಯಿಂದಲೇ ಉದ್ದೀಪಿಸಿ, ದಾಖಲಿಸಿ ಮುಂದೆ ಎಲ್ಲಾ ಬಂಧುಗಳಿಗೆ ಸಮರ್ಪಣೆ ಮಾಡುವುದು, ಒಂದು ಅಸಾಮಾನ್ಯವಾದ ಸಂಗತಿಯೇ ಸರಿ. ತನ್ನ ಕಷ್ಟಗಳನ್ನು ಯಾವುದೇ ವ್ಯಕ್ತಿ ಬಹಳ ನಿಷ್ಠೆಯಿಂದ ಹೇಳಿಕೊಳ್ಳಬಲ್ಲ ಆದರೆ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಸಾಹಿತ್ಯದಲ್ಲಿ ಸ್ವಂತ ದುಃಖಗಳ, ಕಷ್ಟಗಳ ವರ್ಣನೆ ಎಲ್ಲೂ ಇಲ್ಲ! ಕೇವಲ ಒಂದು ವಿಷಯ ನಮಗೆ ನಿಚ್ಚಳವಾಗಿ ಕಾಣಿಸುತ್ತದೆ. ಅದೇನೆಂದರೆ, ತಮ್ಮ ರಾಷ್ಟ್ರದ ಗೌರವಪೂರ್ಣ ಚಿತ್ರಣವನ್ನು ಎಲ್ಲರ ಎದುರುತಂದು, ಆ ಚೇತನದಿಂದ ಸ್ವಾತಂತ್ರ್ಯಸೂರ್ಯ ಉದಯಿಸುವ ಮಹತ್ವಾಕಾಂಕ್ಷೆ ಮರಣಶಯ್ಯೆಯಲ್ಲಿದ್ದಾಗ ಅವರು ಮೃತ್ಯು ದೇವನನ್ನು ಭಯದಿಂದ ಆಹ್ವಾನಿಸಲಿಲ್ಲ, ಬದಲಾಗಿ ಪ್ರೇಮದಿಂದ, ಆತ ತನ್ನ ಸ್ನೇಹಿತನೋ, ಜೊತೆಗಾರನೋ ಎಂಬಂತೆ ಬರಮಾಡಿಕೊಂಡರು, ಮೃತ್ಯುಂಜಯರಾದರು.
ನಿದ್ರಿಸುತ್ತಿದ್ದ ಸಮಾಜದ ಜಾಗರಣ : ಸ್ಥಾನಬದ್ಧ ಜೀವನದಲ್ಲಿ ಸ್ವತಂತ್ರ ವ್ಯಕ್ತಿತ್ವದ ಅಪಹರಣ ಆಗಿ ಬಿಡುತ್ತದೆ, ತಮ್ಮ ಕರ್ತೃತ್ವಕ್ಕೆ ಯಾವುದೇ ಸ್ಥಾನವಿರುವುದಿಲ್ಲ. ಇದರಿಂದ ಮನುಷ್ಯ ಸಹಜವಾಗಿ ದುಃಖಿತನಾಗುತ್ತಾನೆ, ಆದರೆ ದುಃಖಿಸುತ್ತಾ ಕೂಡುವುದು ಒಬ್ಬ ಧೀಮಂತ ವ್ಯಕ್ತಿಯ ಲಕ್ಷಣವಲ್ಲ, ಸ್ವಾತಂತ್ರ್ಯವೀರ ಸಾವರ್ಕರ್ ಅವರೂ ದುಃಖಿಸುತ್ತಾ ಕೂಡಲಿಲ್ಲ. ಅವರು ಸಮಾಜದ ಒಳಿತಿಗೋಸ್ಕರ, ಜನರನ್ನು ಜಡತ್ವದಿಂದ, ನಿದ್ರೆಯಿಂದ ಅಲುಗಾಡಿಸಿ ಎಬ್ಬಿಸಿ ನಿಲ್ಲಿಸುವ ಕೆಲಸವನ್ನು ಪ್ರಾರಂಭಿಸಿದರು. ಹೀಗೆ ಎಬ್ಬಿಸುವುದರಿಂದ ಸಮಾಜದ ಹಲವು ಮಂದಿಗೆ ಹಿತವಾಗದಿರಬಹುದು, ಕೆಲವರು ಅರೆಬರೆ ಎಚ್ಚರವಾಗಿರಬಹುದು, ಕೆಲವರಿಗೆ ಭ್ರಾಂತಿ ಅಸಮಾಧಾನವೂ ಉಂಟಾಗಿರಬಹುದು, ಆದರೆ ಒಂದು ಸಮಾಜವು ಯಾವಾಗ ಮೃತನಂತೆ ಬಿದ್ದುಕೊಂಡಿರುತ್ತದೆಯೋ, ಆಗ ಮುಟ್ಟಿ-ತಟ್ಟಿ ಅಲುಗಾಡಿಸಿ ಎಬ್ಬಿಸಬೇಕೇ ಹೊರತು, ಮಧುರ ಸಂಗೀತದಿಂದಲ್ಲ.
ಅವರ ಮನಸ್ಸಿನಲ್ಲಿ ಸಮಾಜದ ಬಗ್ಗೆ ಭಕ್ತಿ ಇರಲಿಲ್ಲ ಅಂತ ಇದರರ್ಥ ಅಲ್ಲ. ಸಮಾಜದ ಬಗ್ಗೆ ಪ್ರೇಮ ಮತ್ತು ಭಕ್ತಿ ಇಲ್ಲದಿದ್ದಲ್ಲಿ ಇಷ್ಟೊಂದು ಕೆಲಸ ಮಾಡುವ ಆವಶ್ಯಕತೆಯಾದರೂ ಅವರಿಗೆ ಯಾಕಿತ್ತು? ಅವರು ಸಮಾಜವನ್ನು ಎಬ್ಬಿಸುವ ಯಾವ ಪ್ರಯತ್ನವನ್ನು ಮಾಡಿದರೋ, ಅದು ಸಮಾಜದ ಬಗ್ಗೆ ಅವರಿಗಿದ್ದ ಭಕ್ತಿ ಭಾವನೆಯ ಖಚಿತ ಸಂಕೇತವೇ ಆಗಿದೆ.
ಅಪ್ರತಿಮ ತೇಜಸ್ಸು : ಸ್ಥಾನಬದ್ಧತೆಯಿಂದ ಮುಕ್ತರಾದ ಮೇಲೆ, ಇಡೀ ದೇಶದಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ದೊರಕಿತು. ಈ ಸ್ವಾಗತಗಳ ಸಮಯದಲ್ಲಿ ಅಸಂಖ್ಯಾತ ಜನರು ಅವರ ವಿಚಾರಗಳನ್ನು ಕೇಳಿದರು. ನಾನು ಪ್ರವಾಸದಲ್ಲಿದ್ದ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಅವರ ಅಂದಿನ ವಿಚಾರಗಳ ವರ್ಣನೆಯನ್ನು ಕೇಳಿದ್ದೇನೆ. ಜನರು ಹೇಳುತ್ತಿದ್ದರು – ‘ಅಂಡಮಾನಿನಂಥ ಪ್ರದೇಶದಲ್ಲಿ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿ, ಕಷ್ಟದಾಯಕ ಜೀವನವನ್ನು ನಡೆಸಿದ ಮೇಲೆಯೂ, ಅವರ ಮಾತಿನಲ್ಲಿದ್ದ ತೇಜಸ್ಸು ವಿಚಾರಗಳ ನಿಖರತೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ, ಅವರ ಮಾತಿನ ತೇಜಸ್ಸು ಇನ್ನೂ ಅಧಿಕವಾಗಿ ಪ್ರಕಾಶಗೊಂಡಿತು. ಪುಟವಿಟ್ಟ ಚಿನ್ನವು ಮಂಕಾಗದೆ, ಮೊದಲಿಗಿಂತ ಅಧಿಕ ಹೊಳಪನ್ನು ಪಡೆಯುವಂತೆ, ಇವರ ತೇಜಸ್ಸು ಇನ್ನಷ್ಟು ಪ್ರಕಾಶಗೊಂಡಿತು.
ಸಾವರ್ಕರ್ ಅವರ ಜೀವನದಲ್ಲಿ ಆಶ್ಚರ್ಯಕರ ಸಂಗತಿಗಳೂ ಕಂಡುಬರುತ್ತವೆ. ಅವರು ಅನೇಕಾರು ವಿಷಯಗಳ ಬಗ್ಗೆ ವಿಚಾರ ಮಾಡುತ್ತಿದ್ದರು. ಬರೀ ರಾಜನೀತಿಯಲ್ಲದೇ ಸಾಹಿತ್ಯ, ಇತಿಹಾಸ ಇತ್ಯಾದಿ ವಿಷಯಗಳ ಬಗ್ಗೆ ವಿನೂತನ ದೃಷ್ಟಿಕೋನದಿಂದ ವಿಶ್ಲೇಷಿಸಿ ಪ್ರಸ್ತುತಪಡಿಸುತ್ತಿದ್ದರು. ಅವರು ಇತಿಹಾಸದ ತೇಜೋಪುಂಜವಾದ, ಮಹತ್ತ್ವಪೂರ್ಣ ಪ್ರಸಂಗಗಳನ್ನು ಶೋಧಿಸಿ, ಸಮಾಜದ ಮುಂದಿಟ್ಟರು ಮತ್ತು ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ತಮ್ಮ ಪ್ರತಿಭೆಯನ್ನು ಅವರು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ವಾಭಿಮಾನದ ಪೋಷಣೆಯ ದೃಷ್ಟಿಯಿಂದಲೇ ಉಪಯೋಗಿಸಿದರು.
ರಾಜ್ಯಸ್ಥಾಪನೆಯಾದ ಮೇಲೆ ಛತ್ರಪತಿ ಶಿವಾಜಿಯು ಸಾಮಾನ್ಯ ವ್ಯವಹಾರದಲ್ಲಿ ರಾಜ್ಯಸ್ಥಾಪನೆಯಾದ ಮೇಲೆ ಛತ್ರಪತಿ ಶಿವಾಜಿಯು ಸಾಮಾನ್ಯ ವ್ಯವಹಾರದಲ್ಲಿ ನುಗ್ಗಿ ಪಾರಸೀ ಹಾಗೂ ಅರಬ್ಬಿ ಶಬ್ದಗಳನ್ನು ತೊಡೆಯುವ ಕಾರ್ಯವನ್ನು ಮಾಡಿದರೆಂಬುದು ನಮಗೆಲ್ಲಾ ತಿಳಿದು ವಿಷಯವೇ. ಆ ಸಮಯ ಸ್ಥಿತಿಯನ್ನು ಅವಲೋಕಿಸಿದಾಗ, ಪಾರಸೀ ಹಾಗೂ ಅರಬ್ಬಿಗಳ ಬಳಕೆಯಿಲ್ಲದೆ ಕೆಲಸವೇ ಸಾಗುತ್ತಿರಲಿಲ್ಲವೆಂದು ತಿಳಿಯುತ್ತದೆ. ಛತ್ರಪತಿ ಶಿವಾಜಿಯು ಕಲಬೆರಕೆ ಪ್ರವೃತ್ತಿಯನ್ನು ದೂರ ಮಾಡಿ, ನಮ್ಮ ಭಾಷೆಯನ್ನು ಶುದ್ಧ ರೂಪದಲ್ಲಿ ಹೊರ ತರುವ ಪ್ರಯತ್ನವನ್ನು ಮಾಡಿದರು. ಅವರ ಆಳ್ವಿಕೆಯ ಕಾಲದ ರಾಜ್ಯದ ವ್ಯವಹಾರಕೋಶವು ಪ್ರಸಿದ್ಧವೇ ಹೌದು. ಆದರೆ ಅವರ ಅನಂತರ ಈ ಪ್ರಯತ್ನವನ್ನು ಕೈಬಿಡಲಾಯಿತು. ಎಷ್ಟರ ಮಟ್ಟಿಗೆ ಎಂದರೆ, ನಿತ್ಯ ವ್ಯವಹಾರದಲ್ಲಿ ಪಾರಸೀ ಶಬ್ದದ ಅಧಿಕ ಬಳಕೆಯಿಂದಾಗಿ ಮರಾಠಿಯನ್ನು ಮರಾಠಿ ಎಂದು ಕರೆಯುವುದೇ ಕಷ್ಟವಾಯಿತು. ಇಷ್ಟಾದರೂ ಜನರಿಗೆ ಇದರ ಬಗ್ಗೆ ಅರಿವು ಇರಲಿಲ್ಲ, ಕೆಲವರಂತೂ ಇದರ ಸಮರ್ಥನೆಯನ್ನು ಕೂಡಾ ಮಾಡುತ್ತಿದ್ದರು. ಅವರ ಪ್ರಕಾರ ‘ಕೃಷಿಯತ್, ಫೈಸಲಾ’ ಇತ್ಯಾದಿ ಶಬ್ದಗಳಲ್ಲಿ ಹೆಚ್ಚು ಶಕ್ತಿ ಇದೆ ಎಂದಾಗಿತ್ತು. ಒಬ್ಬ ಮರಾಠಿ ನಾಟಕಕಾರನು ಇದರ ಅಪಹಾಸ್ಯ ಮಾಡುತ್ತಾ ಹೀಗೆ ಬರೆದಿದ್ದಾರೆ-‘ಓಹ್! ಏನು ಜೋರಾಗಿದೆ ಈ ಶಬ್ದಗಳು!’
ಇತ್ತೀಚೆಗಿನ ಒಂದು ಘಟನೆ : ತನ್ನ ಪತ್ನಿಯನ್ನು ಪರಿಚಯ ಮಾಡಿಕೊಡುತ್ತಾ ಒಬ್ಬ ಸಜನರು ನನ್ನೊಂದಿಗೆ ಹೇಳಿದರು – “ ಇವಳು ನನ್ನ ವೈಫ್”
ನಾನು ಅವರೊಂದಿಗೆ ಕೇಳಿದೆ – ‘ನೀವು ಯಾವ ಭಾಷೆಯನ್ನು ಮಾತಾಡುತ್ತೀರಿ?’
ಆಗ ಅವರು ಎಚ್ಚರಾಗಿ ಹೇಳಿದರು – “ಇವಳು ನನ್ನ ಹೆಂಡತಿ!’ ನಾನು ‘ಈಗ ನನಗೆ ಅರ್ಥವಾಯಿತು”ಎಂದೆ.
ಸ್ವಾತಂತ್ರ್ಯವೀರ ಸಾವರ್ಕರ್ ಅವರಿಗೆ ಮರಾಠಿಯು ಅನಿಷ್ಟ ಅಥವಾ ಅನವಶ್ಯಕ ಶಬ್ದಗಳಿಂದ ಅಪಹಾಸ್ಯಕ್ಕೀಡಾಗಿರುವುದನ್ನು ತೊಡೆದು, ತಮ್ಮ ಭಾಷೆಯನ್ನು ಮೊದಲಿನ ಸ್ವರೂಪಕ್ಕೆ ತರಬೇಕಾದ ಆವಶ್ಯಕತೆ ಇದೆ ಎನ್ನಿಸಿತು. ಭಾಷೆಯ ಅಶುದ್ಧಿಯ ಬಗ್ಗೆ ಜನರು ಯಾವ ಯಾವ ರೀತಿಯಲ್ಲಿ ಉದ್ಧಟತನದಿಂದ ಮಾತಾಡುತ್ತಾರೆ ಎಂಬುದಕ್ಕೆ ಅವರು ಅನೇಕ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಷ್ಟು ಸೂಕ್ಷ್ಮವಾದ ಅವಲೋಕನವನ್ನು ಯಾವಾಗ ಎಲ್ಲಿ ಹೇಗೆ ಮಾಡಿದರು? ಜನರು ದೇಶದಲ್ಲಿ ನಡೆಯುತ್ತಿದ್ದ ರಾಜನೀತಿಯ ಅಖಾಡಾದಲ್ಲಿ ಮತ್ತು ಪರಕೀಯ ಶಾಸನದೊಂದಿಗೆ ಹೋರಾಡುವಲ್ಲಿ ತಮ್ಮ ಶಕ್ತಿಯನ್ನು ಉಪಯೋಗಿಸುವುದೇ ಲೇಸು ಎಂದು ತಿಳಿದಿದ್ದರು. ಭಾಷಾಶುದ್ಧಿಯಂಥ ಮಾತುಗಳ ಆವಶ್ಯಕತೆಯಾದರೂ ಏನು, ಅದನ್ನು ಸುಲಭವಾಗಿ ಮಾಡಿಬಿಡಬಹುದು!
ರಾಷ್ಟ್ರಜೀವನದ ಶುದ್ಧ ಸ್ವರೂಪದ ಇಷ್ಟೊಂದು ವಿಚಾರವನ್ನು ಯಾರೂ ಹೇಳಿರಲಿಲ್ಲ. ಯಾರೂ, ಈ ಬಗ್ಗೆ ಗಮನ ನೀಡದಿದ್ದಲ್ಲಿ ರಾಷ್ಟ್ರದ ವಿರುದ್ಧ ಕಲ್ಪನೆಗಳಿಂದ ಮನಸ್ಸು ದೂರವಾಗುತ್ತದೆ ಎಂದು ಯೋಚಿಸಲಿಲ್ಲ. ಆದ್ದರಿಂದ ರಾಷ್ಟ್ರದ ವಿರುದ್ಧ ರೂಪವನ್ನು ಜನರೆದುರು ತಂದಿಟ್ಟು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಸ್ವಾಭಿಮಾನವು ಅಭಿವ್ಯಕ್ತವಾಗುವಂತೆ ಮಾಡುವ ಆವಶ್ಯಕತೆಯಿದೆ. ಈ ರೀತಿ ಯಾವಾಗ ಆಗುತ್ತದೆಯೋ, ಆವಾಗ ಸ್ವಾತಂತ್ರ್ಯದ ಮೌಲ್ಯವು ಉಳಿಯುತ್ತದೆ. ಕೇವಲ ರಾಜನೀತಿಯ ದಾಸ್ಯದಿಂದ ವಿಮುಕ್ತರಾದರೆ, ವಾಸ್ತವಿಕ ಸ್ವರೂಪವು ಪ್ರಕಟವಾಗುವುದಿಲ್ಲ. ರಾಷ್ಟ್ರಜೀವನದ ಅಳವಡಿಕೆಯಿಂದ ಮಾನಸಿಕ, ಬೌದ್ಧಿಕ, ದೈನಂದಿನ ಬದುಕು, ಮಾತುಕತೆ ಇತ್ಯಾದಿ ಎಲ್ಲಾ ಆಚಾರ-ವಿಚಾರಗಳಲ್ಲೂ ಆಮೂಲಾಗ್ರ ಪರಿವರ್ತನೆ ಹೊಂದಿ, ಸ್ವಾಭಿಮಾನ ಹಾಗೂ ಸತ್ತ್ವಶಕ್ತಿಯ ಸಾಕ್ಷಾತ್ಕಾರವಾಗುವುದೇ ವಾಸ್ತವಿಕ ಸ್ವಾತಂತ್ರ್ಯದ ಅರ್ಥವಾಗಿದೆ.
ಸ್ವಾತಂತ್ರ್ಯವೀರ ಸಾವರ್ಕರ್ ಅವರು ಇದರ ಸಮಗ್ರ ವಿಚಾರವನ್ನು ಮಾಡಿದರು. ಸಣ್ಣ ಪುಟ್ಟ ವಿಷಯಗಳಲ್ಲಿ ಉದಾಸೀನತೆ ಹಾಗೂ ಉಪೇಕ್ಷೆಯನ್ನು ತೋರುವ ವೃತ್ತಿ ಒಳಗಿಂದೊಳಗೇ ರಾಷ್ಟ್ರವನ್ನು ಸಂಕಟದಲ್ಲಿ ಸಿಲುಕಿಸಬಹುದೆಂದು ಯೋಚಿಸಿದರು. ಈ ದೃಷ್ಟಿಯಿಂದ ಭಾಷಾಶುದ್ಧಿಯಂಥ ಸಾಧಾರಣ ವಿಷಯಗಳನ್ನು ಎದುರಲ್ಲಿಟ್ಟುಕೊಂಡು, ಅದರ ದೋಷಗಳನ್ನು ತೊಡೆಯುವುದು ಆವಶ್ಯಕ ಎಂದು ಅವರಿಗೆ ಅನ್ನಿಸಿತು. ಈ ದೃಷ್ಟಿಯಿಂದ ರಾಷ್ಟ್ರಜೀವನದ ವಿಚಾರಗಳ ಶುದ್ದೀಕರಣದ ಕಾರ್ಯವನ್ನು ಮಾಡಿದರು. ಅದು ಯೋಗ್ಯ ಕೆಲಸವೇ ಆಗಿತ್ತು.
ಹಿಂದೂರಾಷ್ಟ್ರದ ಉದ್ಘೋಷದ ಸಾಹಸ : ನಮಗೆಲ್ಲಾ ತಿಳಿದಿದೆ, ಹಲವಾರು ಮಂದಿಗೆ ‘ಇದು ಪ್ರಾಚೀನ ರಾಷ್ಟ್ರವಲ್ಲ, ಕೇವಲ ಭಾರಿ ಜನಜಂಗುಳಿಯ ಪ್ರದೇಶ, ನಮ್ಮ ಚರಿತ್ರೆ ಕೂಡಾ ರಾಜರೆಂಬ ವ್ಯಕ್ತಿಗಳ ಪರಸ್ಪರ ಕಾದಾಟ-ದುಸ್ಸಾಹಸಗಳಿಂದ ತುಂಬಿಹೋಗಿದೆ. ಒಂದು ಮಾತೃಭೂಮಿಯ ಅರಿವು, ಒಂದು ಸಮಾಜದ ಸಾಕ್ಷಾತ್ಕಾರ, ಒಂದು ರಾಷ್ಟ್ರಜೀವನದ ಜ್ಞಾನ ಇಲ್ಲಿ ಯಾವತ್ತೂ ಇರಲಿಲ್ಲ, ಈ ಮಂದಿಯ ಪ್ರಕಾರ ಈ ಒಂದು ನೂರು ವರ್ಷಗಳ ಹಿಂದೆ ಯಾವ ರಾಜನೀತಿಯ ಆಂದೋಲನಗಳು ನಡೆದ್ದವೋ, ಅವುಗಳಿಂದಲೇ ರಾಷ್ಟ್ರಭಾವನೆಯ ನಿರ್ಮಾಣವು ಇಲ್ಲಿ ಉಂಟಾಯಿತು. ಪ್ರಪಂಚದ ವಿಭಿನ್ನ ರಾಷ್ಟ್ರಗಳು ತಮ್ಮ ಸ್ವತಂತ್ರ ಜೀವನವನ್ನು ನಡೆಸುವುದನ್ನು ಕಂಡು ಇಲ್ಲಿ ಒಂದು ಹೊಸ ರಾಷ್ಟ್ರ ಕಲ್ಪನೆ ಪ್ರಕಟವಾಯಿತು. ಅದೂ ಕೂಡಾ ಇಂಗ್ಲಿಷರ ಶಾಸನದಲ್ಲಿದ್ದ ಎಲ್ಲಾ ವ್ಯಕ್ತಿಗಳನ್ನೂ ಸೇರಿಸಿಕೊಂಡು!…’ ವ್ಹಾ ಎಂತಹ ಬುರುಡೆ ವಿಚಾರ.
ಈ ಮಂದಿಗೆ ರಾಷ್ಟ್ರವು ಹೇಗೆ ಆಗುತ್ತದೆ ಎಂಬ ಕಲ್ಪನೆಯಿಲ್ಲ. ಒಂದು ಭೂಮಿಯ ಮೇಲೆ ಜನಿಸುವ ಮೂಲಕ, ಒಂದು ಪರಂಪರೆಯಲ್ಲಿ ಬೆಳೆಯುವುದರ ಮೂಲಕ ರಾಷ್ಟ್ರ ನಿರ್ಮಾಣ ವಾಗುತ್ತದೆಯೋ, ಅಥವಾ ಕೇವಲ ಸಮಾನ ದುಃಖ, ಶತ್ರುತ್ವಗಳ ಕಾರಣ ಒಂದು ಗೂಡುವ ಜನರಿಂದ ರಾಷ್ಟ್ರ ನಿರ್ಮಾಣವಾಗುತ್ತದೆಯೋ? ಇದರ ಪರಿಣಾಮವಾಗಿ ಜನರು ಗೊಂದಲದೊಂದಿಗೆ ‘ರಾಷ್ಟ್ರ’ ಶಬ್ದದ ಉಪಯೋಗವನ್ನು ಮಾಡತೊಡಗಿದರು. ರಾಷ್ಟ್ರದ ಗೊಂದಲಪೂರ್ಣವಿಚಾರವನ್ನು ಇಟ್ಟುಕೊಂಡು, ಸಂಸಾರದಲ್ಲಿ ನಾವು ನಮ್ಮ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಹೇಗೆ ತಾನೆ ಒಂದಾಗಿ ತಲೆಯೆತ್ತಿ ನಿಲ್ಲಲು ಸಾಧ್ಯ? ನಮ್ಮ ವೈಶಿಷ್ಟ್ಯತೆಯ ಬಗ್ಗೆ ಜ್ಞಾನವಿಲ್ಲದ, ಸ್ವಾಭಿಮಾನದ ಸುಗಂಧವಿಲ್ಲದ, ಒಂದು ರಾಷ್ಟ್ರದ ಸ್ವರೂಪವೂ ಕಲಬೆರಕೆಯದೇ ಆಗಿರುತ್ತದೆ.
ದೇಶದ ನಾಲ್ಕೂ ದಿಕ್ಕುಗಳಲ್ಲಿ ಹರಡಿದ್ದ ಭ್ರಾಂತವಿಚಾರಗಳನ್ನು ತೊಡೆದು, ಶುದ್ಧ ರಾಷ್ಟ್ರದ ಚಿಂತನೆಯೊಂದಿಗೆ ರಾಷ್ಟ್ರದ ಸೇವೆಯಲ್ಲಿ ಜನರು ಕಟಿಬದ್ಧರಾಗಬೇಕು. ಇದಕ್ಕಾಗಿ ಪೂರ್ಣ ಮೌಲ್ಯಯುತವಾದ ವಿಚಾರಗಳನ್ನು ಎಲ್ಲರ ಮುಂದಿಡುವ ಸಾಹಸವನ್ನು ಸಾವರ್ಕರ್ ಅವರು ಮಾಡಿದರು. ಅತಿ ಸಾಹಸಿಯಾಗಿದ್ದ ಕಾರಣ ಅವರಿಗೆ ಇದರಲ್ಲಿ ದೊಡ್ಡ ವಿಷಯವೇನಿದೆ ಎನಿಸಿರಲಾರದು. ಆದರೆ ಆ ಸಮಯದಲ್ಲಿ ಇದು ನಿಜಕ್ಕೂ ಒಂದು ಸಾಹಸವೇ ಆಗಿತ್ತು. ರಾಷ್ಟ್ರದ ವಿಶುದ್ಧ ರೂಪವನ್ನು ಜನರ ಮುಂದೆ ತೆರೆದಿಡುವ ದೃಢ ಸಂಕಲ್ಪದೊಂದಿಗೆ ಸಂಪೂರ್ಣ ಭಾರತದಲ್ಲಿ ಅಡ್ಡಾಡಿ, ಯಾವ ಹಿಂದೂ ರಾಷ್ಟ್ರದ ಉದ್ವೇಷವನ್ನು ಅವರು ಮಾಡಿದರೋ, ಅದು ಇಂದು ಒಂದು ವೇಳೆ ಪರಿಪೂರ್ಣ ರೂಪದಲ್ಲಿ ಸಫಲತೆಯನ್ನು ಹೊಂದಿಲ್ಲದ ಹಾಗೆ ಕಂಡರೂ, ಮುಂದಿನ ದಿನಗಳಲ್ಲಿ ಅತೀ ಅಲ್ಪ ಕಾಲದಲ್ಲಿಯೇ ಅದರ ಪರಿಪೂರ್ಣ ಹಾಗೂ ಪ್ರಬಲವಾದ ಘೋಷಣೆಯಾಗುತ್ತದೆ ಮತ್ತು ಅದರ ಅನುರೂಪವಾದ ಸುವ್ಯವಸ್ಥಿತವಾದ ಜೀವನ ನಮಗೆ ಕಾಣಬರುತ್ತದೆ.
ಸತ್ಯವನ್ನು ಅಸತ್ಯವೆಂದೂ ಮತ್ತು ಅಸತ್ಯವನ್ನೇ ಸತ್ಯ ಎಂದು ಗೊಂದಲದ ಪರಿಸ್ಥಿತಿಯಲ್ಲಿ ಭಾವಿಸಲಾಗುತ್ತದೆ. ಆದ್ದರಿಂದಲೇ ಇಂದಿನ ಜನರು ಹಿಂದೂರಾಷ್ಟ್ರದ ವಿಚಾರವನ್ನು ಸತ್ಯದ ರೂಪದಲ್ಲಿ ಗ್ರಹಿಸದಿದ್ದರೂ, ಸತ್ಯದ ಅನುಕೂಲ ವಿಚಾರಗಳ ಪ್ರಬಲತೆಯು ಅತ್ಯಂತ ಪ್ರಭಾವೀ ಅಥವಾ ತೇಜೋಮಯ ಜೀವನದ ಪ್ರತ್ಯಕ್ಷಸ್ವಾನುಭವಗಳಿಂದ ತುಂಬಿದ ಪ್ರಬಲ ವಚನಗಳಿಂದ ಆಗಿಹೋಗಿದೆ. ಈಗ ಅದು ನಿಲ್ಲುವುದಿಲ್ಲ. ಸತ್ಯವನ್ನು ಯಾರೂ ತಡೆಯಲಾಗುವುದಿಲ್ಲ, ಅವರು ಏನು ಹೇಳಿದ್ದಾರೋ, ಅದು ಸಿದ್ಧಿಯಾಗಿಯೇ ಆಗುತ್ತದೆ. ಈ ವಿಷಯದಲ್ಲಿ ಯಾರಿಗೂ ಯಾವ ಸಂದೇಹವೂ ಬೇಡ. ವ್ಯತಿರಿಕ್ತ ವಿಚಾರಗಳ ಕೋಲಾಹಲದಿಂದ ಶುದ್ಧ ವಿಚಾರಗಳನ್ನು ಆಯ್ದು ಮುನ್ನುಗ್ಗುವ ನೇತಾರನು ಈಗ ಈ
ಜೀವನದಿಂದ ಹೊರಟುಹೋಗಿದ್ದಾನೆ. ಆದ್ದರಿಂದ ಈ ಸತ್ಯವಿಚಾರದ ಪ್ರಣಾಳಿಕೆಯನ್ನು ಮುಂದೆ ಸಾಗಿಸಿ ಅದರಿಂದ ಸತ್ಯಸೃಷ್ಟಿಯನ್ನು ಯಾರು ಕರಗತಗೊಳಿಸುತ್ತಾರೆ ಎಂಬ ಸಂದೇಹವೂ ಮನದಲಿ ಸುಳಿಯಲು ಕಾರಣವಿರಬಾರದು. ಈ ಶಂಕೆಗೆ ಕಾರಣವಿಲ್ಲ. ಯಾಕೆಂದರೆ ವಿರುದ್ಧ ವಿಚಾರಗಳ ಬಲವು ದಿನೇ ದಿನೇ ಹೆಚ್ಚುತ್ತಿದೆ ಮತ್ತು ಅದರಿಂದ ಒಂದು ಮಹಾನ್ ಶಕ್ತಿಯ ಉತ್ಪನ್ನವಾಗುತ್ತದೆ. ಅವರಿಂದ ವಿರೋಧೀ ವಿಚಾರ ಹಾಗೂ ವಿಕಾರ ನಷ್ಟವಾಗುತ್ತದೆ. ಆದ್ದರಿಂದ ಈ ವಿಚಾರವು ಅಲ್ಪಕಾಲದಲ್ಲಿ ತನ್ನಿಂದ ತಾನೇ ಆಗುತ್ತದೆ, ಈಗ ಅದರ ಸೂಚನೆಗಳು ಕಂಡು ಬರುತ್ತಿವೆ.
ಹಲವು ಬಾರಿ ಹೀಗೂ ಆಗುತ್ತದೆ : ಮನುಷ್ಯ ಸಿದ್ಧಾಂತ ಹೇಳುತ್ತಾನೆ. ಆ ಸಿದ್ಧಾಂತವು ಸತ್ಯವೂ ಇರುತ್ತದೆ ಆದರೆ ಏನು ಮಾಡಬೇಕು ಹಾಗೂ ಏನನ್ನು ಮಾಡಬಾರದು, ಎಂಬ ಯೋಚನೆ -ಗೊಂದಲಗಳಿಂದಾಗಿ ಸಿದ್ಧಾಂತದ ಮೂಲಪುರುಷ ಅನುಕೂಲ ಮಾರ್ಗದಿಂದ ಸತತ ಪ್ರಯತ್ನ ಮಾಡುವುದಿಲ್ಲ. ಸಾವರ್ಕರ್ ಅವರು ಕೇವಲ ಸಿದ್ಧಾಂತ ನಿರೂಪಿಸಿ ತಟಸ್ಥರಾಗಲಿಲ್ಲ. ಯಾವುದೇ ರಾಷ್ಟ್ರ ತಲೆಯೆತ್ತಿ ನಿಲ್ಲುವುದು, ಸುಖ -ಸಮ್ಮಾನಗಳನ್ನು ಹೊಂದುವುದು, ನಿರ್ಭಯವಾಗಿರುವುದು ಕೇವಲ ತತ್ತ್ವಜ್ಞಾನದ ಆಧಾರದ ಮೇಲೆ ಮಾತ್ರವಲ್ಲ.
ಪ್ರಭು ಶ್ರೀರಾಮಚಂದ್ರನ ಜನನದ ಕಾಲದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು, ತತ್ತ್ವಜ್ಞಾನಿಗಳು ಆ ಕಾಲದಲ್ಲಿ ಏನು ಕಮ್ಮಿಯಿದ್ದರು? ವಸಿಷ್ಠರಂಥ ಮಹಾನ್ ಬ್ರಹ್ಮರ್ಷಿಯೂ ಇದ್ದರು. ಅವರೆಲ್ಲರೂ ಇದ್ದೂ ಕೂಡಾ ರಾಷ್ಟ್ರದ ರಕ್ಷಣೆಯಾಗಲಿಲ್ಲ, ಅದರ ರಕ್ಷಣೆಯು ಕೋದಂಡಧಾರಿ ರಾಮಚಂದ್ರನ ಕೋದಂಡದಿಂದಲೇ ಆಯಿತು ಎಂಬುದು ಸ್ಪಷ್ಟವಾದ ವಿಚಾರ.
ಛತ್ರಪತಿ ಶಿವಾಜಿ ಮಹಾರಾಜನ ಪೂರ್ವಭಾವಿಯಾಗಿ ಮಹಾರಾಷ್ಟ್ರದಲ್ಲಿ ಸಾಧುಸಂತರ ಪರಂಪರೆನಡೆದು ಬಂದಿತ್ತು. ಎಲ್ಲರೂ ಭಜನೆ, ಪೂಜೆ, ಪಂಡರಪುರದ ಯಾತ್ರೆ ಇತ್ಯಾದಿಗಳಲ್ಲಿ ಮಗ್ನವಾಗಿದ್ದರು. ಆದರೆ ಧರ್ಮರಕ್ಷಣೆಯ ಸಲುವಾಗಿ ಕೊನೆಯಲ್ಲಿ ಶಿವಾಜಿ ಮಹಾರಾಜನ ಖಡ್ಗವನ್ನೇ ಆಧಾರವಾಗಿ ತೆಗೆದುಕೊಳ್ಳಬೇಕಾಯಿತು.
ನನಗೆ ನೆನಪಿದೆ, 1947ರಲ್ಲಿ ಇಲ್ಲಿಂದ ಇಂಗ್ಲಿಷರ ರಾಜ್ಯ ಹೊರಟುಹೋದಾಗ, ಮತ್ತು ನಮ್ಮ ರಾಜ್ಯವನ್ನು ಚಲಾಯಿಸಲು ಅಧಿಕಾರ ಸಿಕ್ಕಿದಾಗ, ಆ ಸಮಯದಲ್ಲಿ ಅನೇಕರು ಹೇಳಲು ಪ್ರಾರಂಭಿಸಿದ್ದೇನೆಂದರೆ, ನಮಗೆ ಯುದ್ಧವಿಲ್ಲದೆಯೇ ಸ್ವಾತಂತ್ರ್ಯ ಪ್ರಾಪ್ತವಾಗಿದೆ. ಆದರೆ,ಈ ಕಥಾನಕವು ಸರಿಯಲ್ಲ. ಕೆಲವು ವ್ಯಕ್ತಿಗಳು ಕ್ರಾಂತಿಕಾರ್ಯದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸ್ವತಃ ರಣ ಕಹಳೆಯನ್ನು ಊದಿದರು, ಮತ್ತು ಪ್ರಾಣವನ್ನು ಸಮರ್ಪಿಸುವುದರ ತನಕ ತಯಾರಿ ನಡೆಸಿದ್ದರೆಂಬುದು ಚರಿತ್ರೆಯಲ್ಲಿ ತಿಳಿಯುತ್ತದೆ. ಆ ವ್ಯಕ್ತಿಗಳ ಪ್ರಯತ್ನದ ಪರಿಣಾಮವಾಗಿಯೇ ಸೈನಿಕ ವಿದ್ರೋಹದ ಬಹುದೊಡ್ಡ ಸನ್ನಿವೇಶದ ನಿರ್ಮಾಣವೂ ಆಗಿತ್ತು. (ಇದರ ಬಗ್ಗೆಯೂ ವಿಚಾರ ಮಾಡಬೇಕು.) ನೇತಾಜಿ ಸುಭಾಷಚಂದ್ರ ಬೋಸರು ಪ್ರಬಲವಾದ ಸೇನೆಯೊಂದಿಗೆ ಇಂಗ್ಲೀಷರನ್ನು ಭಾರತದಿಂದ ಓಡಿಸಿ, ನಮ್ಮ ಮಾತೃಭೂಮಿಯನ್ನು ಮುಕ್ತಗೊಳಿಸಲು ಸಿದ್ಧರಾಗಿದ್ದರು. ಇದು ಯಾವುದರ ಪರಿಣಾಮವಾಗಿತ್ತು?
ಸ್ವಯಂ ಇಂಗ್ಲಿಷರೇ ಹೇಳಿದ್ದಾರೆ – ಇಲ್ಲಿ ಸಣ್ಣ ಸಣ್ಣ ಸೈನಿಕವಿದ್ರೋಹ ಉತ್ಪನ್ನ ಆಗುವ ಸಂಭವವಿತ್ತು. ಆಗಲೇ ಅವರಿಗೆ ಭಾರತದಲ್ಲಿ ಉಳಿಯುವ ಆಸಕ್ತಿ ನಷ್ಟವಾಗಿತ್ತು. ಯಾವ ಸೈನ್ಯದ ಭರವಸೆಯ ಮೇಲೆ ಅವರು ರಾಜ್ಯವನ್ನು ಆಳುತ್ತಿದ್ದರೋ, ಆ ಸೈನ್ಯವೇ ಅವರದ್ದಾಗಿರಲಿಲ್ಲ. ಅವರು ಸೈನಿಕರಿಗೆ ಯಾವ ಬಂದೂಕುಗಳನ್ನು ಕೊಟ್ಟಿದ್ದಾರೋ, ಅವುಗಳ ಮದ್ದುಗುಂಡು ಅವರ ಮೇಲೆ ಹಾರಲು ಸಜ್ಜಾಗಿದ್ದವು. ಈ ಪರಿಸ್ಥಿತಿಯಲ್ಲಿ ಇಲ್ಲಿಂದ ಗೌರವಯುತವಾಗಿ ಹೊರಟು ಹೋಗಬೇಕೆಂದು ಯೋಚಿಸಿದರು. ಆದ್ದರಿಂದ ‘ಯುದ್ಧವಿಲ್ಲದೇ ನಮಗೆ ಸ್ವಾತಂತ್ರ್ಯಸಿಕ್ಕಿತು’ ಎಂದು ಹೇಳುವುದು ಸರಿಯಲ್ಲ.
ಇನ್ನೂ ಒಂದು ಮಾತಿದೆ, ನಾವುಗಳು ಕಾದಾಡಿಲ್ಲವಾದರೂ, ನಾವು ಯುದ್ಧ ಮಾಡಿಲ್ಲವಾದರೂ, ಎಲ್ಲೋ ಒಂದು ಕಡೆ ಯುದ್ಧವು ಆಗಿ ಹೋಗಿದೆ. ಹಿಂದೂಸ್ಥಾನದಲ್ಲಿ ಆಗಿಲ್ಲದಿರಬಹುದು, ಹಿಂದೂಸ್ಥಾನದ ಹೊರಗಂತೂ ಆಯಿತು. ಇಟಲಿಯಲ್ಲಿ ಯಾವ ರೀತಿಯ ವಿಪ್ಲವ ಉಂಟಾಗಿತ್ತೋ, ಆ ರೀತಿ ನಮ್ಮ ದೇಶದಲ್ಲಿ ಆಗಿದ್ದು ನಿಜ. ಆದರೆ ಮಾಡಿದ ಪ್ರಯತ್ನಗಳಿಂದ ಇಂಗ್ಲಿಷರ ಶಕ್ತಿಯು ಕ್ಷೀಣಿಸಿತು, ಇದು ವಾಸ್ತವ.
ಯಾವ ರಾಷ್ಟ್ರವು ತನ್ನ ಜೀವನವನ್ನು ಸ್ವತಂತ್ರವಾಗಿ, ನಿರ್ಭಯವಾಗಿ, ಗೌರವಯುತವಾಗಿ, ಸುಖವಾಗಿ ಸಾಗಿಸಲು ಇಚ್ಛಿಸುತ್ತದೋ, ಅದು ಕಟ್ಟಕಡೆಯಲ್ಲಿ ತನ್ನ ಸ್ವಸಾಮರ್ಥ್ಯದ ಮೇಲೆ ನಿಂತಿರಬೇಕು, ಇದು ಅವಶ್ಯ. ಯಾರದ್ದಾದರೂ ಸಹಾಯ ಸಿಕ್ಕಿದರೆ ಸರಿಯೇ, ಆದರೆ ಅದರ ಮೇಲೆ ಪೂರ್ತಿಯಾಗಿ ಅವಲಂಬಿಸುವುದು ಎಂದರೆ ಕಷ್ಟಗಳನ್ನು ಆಮಂತ್ರಿಸುವುದು ಎಂದೇ ಅರ್ಥ. ಆದ್ದರಿಂದ, ಸ್ವಸಾಮರ್ಥ್ಯವಿಲ್ಲದಿದ್ದರೆ ಕಾರ್ಯವಾಗುವುದಿಲ್ಲ ಎಂಬುದು ಸ್ಪಷ್ಟ.
ರಾಷ್ಟ್ರದ ಸಂಘರ್ಷ ಸಾಮರ್ಥ್ಯದ ಪ್ರಕಟಣೆಯು ಎರಡು ಪ್ರಕಾರಗಳಲ್ಲಿ ಆಗುತ್ತದೆ. ಒಂದು, ರಾಷ್ಟ್ರದ ಸೇನೆಯ ಶಕ್ತಿ ಅಂದರೆ ಕಾತ್ರಬಲದಿಂದ ಮತ್ತು ಇನ್ನೊಂದು ಸಮಾಜದೊಳಗಿನ ಪ್ರಖರವಾದ ತೇಜಸ್ಸು ಮತ್ತು ಸರ್ವಸಮರ್ಪಣೆಯ ಶಕ್ತಿಯಿಂದ ಈ ಎರಡು ಶಕ್ತಿಗಳಿಂದಲೇ ಯಾವುದೇ ರಾಷ್ಟ್ರವು ಅಜೇಯ ಮತ್ತು ಸಂಪನ್ನ ವಾಗುತ್ತದೆ. ಶಕ್ತಿಯುತವಾದ, ತೇಜಸ್ಸಿನಿಂದ ಕೂಡಿದ ಸೈನಿಕ ಶಕ್ತಿ ಮತ್ತು ಪ್ರಖರವಾದ ರಾಷ್ಟ್ರಭಕ್ತಿಯುತವಾದ ಸುವ್ಯವಸ್ಥಿತ ಸಮಾಜದಿಂದ ಅಜೇಯ ರಾಷ್ಟ್ರದ ನಿರ್ಮಾಣವಾಗುತ್ತದೆ. ಈ ತತ್ತ್ವದ ಪ್ರಚಾರವನ್ನು ನಮ್ಮಲ್ಲಿ ಇಬ್ಬರು ಮಹಾಪುರುಷರು ಮಾಡಿದರು.
ಒಬ್ಬರು ನಮ್ಮ ಡಾ. ಮುಂಜೆ, ಇವರು ಸೈನಿಕ ಬಲವನ್ನು ವೃದ್ಧಿಸಲು ಬಹಳ ಪ್ರಯತ್ನವನ್ನು ಮಾಡಿದರು. ಈ ವಿಷಯದಲ್ಲಿ ಇನ್ನೊಬ್ಬ ಮಹಾಪುರುಷರು ಸಾವರ್ಕರ್, ಅತ್ಯಂತ ಪ್ರಖರವಾದ, ಪ್ರಬಲವಾದ ಧ್ವನಿಯಿಂದ ಸಮಾಜವನ್ನು ಎಬ್ಬಿಸಿದರು. ಈ ಮಹಾಪುರುಷರ ಪುಣ್ಯಸ್ಕೃತಿಯಲ್ಲಿ ನಾವೆಲ್ಲಾ ಇಂದು ಇಲ್ಲಿ ಒಂದುಗೂಡಿದ್ದೇವೆ. ಈ ಮಹಾಪುರುಷರು ತಮ್ಮ ಪ್ರಖರವಾದ, ಶಕ್ತಿಯುತವಾದ, ತೇಜೋಮಯವಾದ ಕಂಠದಿಂದ ಹೀಗೆ ನುಡಿದರು – “ಸಮಗ್ರ ಹಿಂದೂರಾಷ್ಟ್ರವು ಸೈನಿಕ ಬಲದಿಂದ, ಅಂದರೆ ಕ್ಷಾತ್ರ ಪ್ರವೃತ್ತಿಯಿಂದ ಪರಿಪೂರ್ಣವಾಗಬೇಕು. ಆಬಾಲವೃದ್ಧರೂ ಅತ್ಯಂತ ಉತ್ಕೃಷ್ಟ ಯೋಧನ ಮಾನಸಿಕತೆಯಿಂದ ನಿರ್ಭಯರಾಗಿ ಎದ್ದು ನಿಲ್ಲಬೇಕು. ಪ್ರತಿಯೊಬ್ಬ ವ್ಯಕ್ತಿಯೂ, ಅವನು ಸೈನ್ಯದಲ್ಲಿರಲಿ, ಇಲ್ಲದಿರಲಿ, ಸೈನಿಕ ದೃಷ್ಟಿಯಿಂದ ಅವನು ಎಲ್ಲಾ ಪ್ರಕಾರಗಳಲ್ಲೂ ಸುಶಿಕ್ಷಿತನಾಗಿರಬೇಕು’.
ಈ ಆಗ್ರಹವು ಎಷ್ಟು ಯೋಗ್ಯವಾಗಿತ್ತು ಎಂಬುದು ನಮಗೆ ಈಚೀಚೆಗೆ ಅನುಭವವಾಗುತ್ತಿದೆ. ಕೆಲವು ವರ್ಷ ಹಿಂದೆ ಚೀನಾವು ನಮ್ಮ ಮೇಲೆ ದಾಳಿ ಮಾಡಿತು. ಆ ಸಮಯದಲ್ಲಿ ನಮ್ಮಲ್ಲಿ ಎಂಥಾ ಕೋಲಾಹಲವಾಯಿತು! ಜನರಿಗೆ ಸಹೋದರ ಭಾವನೆಯ ಮಾತುಗಳಿಂದ ಕಾರ್ಯವಾಗುವುದಿಲ್ಲ ಎಂದು ಮನದಟ್ಟಾಯಿತು. ಎಲ್ಲಾ ಸಹೋದರ ಭಾವನೆಯೂ ಗಾಳಿಯಲ್ಲಿ ತೂರಿ ಹೋಯಿತು. ಎಲ್ಲೆಲ್ಲಿಯೂ ಸೈನಿಕೀಕರಣ, ಸೈನಿಕರ ಸಂಖ್ಯೆಗಳನ್ನು ಹೆಚ್ಚಿಸುವುದು, ಶಸ್ತ್ರಾಸ್ತ್ರಗಳು, ಇತ್ಯಾದಿ ವಿಚಾರವಾಗಿ ಗಂಭೀರ ಚಿಂತನೆಗಳು ತೊಡಗಿದವು.
ಮೈ ಮರವು: ಒಂದು ವೇಳೆ ಮೊದಲಿನಿಂದಲೇ ಈ ದೃಷ್ಟಿಯಲ್ಲಿ ವಿಚಾರ ಮಾಡಿದ್ದರೆ, ಸರ್ವೇಸಾಧಾರಣ ಸಮಾಜಲ್ಲಿ ಈ ಮನೋವೃತ್ತಿಯನ್ನು ಬೆಂಬಲಿಸಿದ್ದರೆ, ಎಂಥಾ ಪ್ರಬಲ ರಾಷ್ಟ್ರ ಸಾಮರ್ಥ್ಯವು ಉಂಟಾಗುತ್ತಿತ್ತು! ಭಗವಂತನ ಕೃಪೆಯಿಂದ ದೊಡ್ಡ ದೊಡ್ಡ ಮಾತಾಡುವ ಜನರಿಗೂ ಈ ವಿಷಯದ ಈಗ ಬಗ್ಗೆ ಅರಿವು ಮೂಡುತ್ತಿದೆ. ಆದರೆ ಈ ಕೃಪೆಯಿಂದ ಕಾರ್ಯ ಸಾಧನೆಯಾಗುವುದಿಲ್ಲ. ಮನುಷ್ಯನು ಬಹಳ ಪತನಶೀಲನೂ, ವಿಸ್ಮರಣಶೀಲನೂ ಆಗಿದ್ದಾನೆ. ಸಂಕಷ್ಟದ ಸಮಯದಲ್ಲೂ ನಮ್ಮಲ್ಲಿ ಅಧಿಕಾರದಲ್ಲಿರುವ ದೊಡ್ಡ ದೊಡ್ಡ ವ್ಯಕ್ತಿಗಳೂ ಕರ್ತವ್ಯಪಾಲನೆ ದೃಷ್ಟಿಯಿಂದ ಎಷ್ಟು ಮೈಮರೆವಿನಲ್ಲಿದ್ದಾರೆ ಎಂಬುವುದಕ್ಕೆ ಒಂದು ಉದಾಹರಣೆ ನೀಡುತ್ತೇನೆ.
ಕಳೆದ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಯುದ್ಧ ವಿರಾಮಗೊಂಡಾಗ, ನಾನು ಸಮಾಚಾರ ಪತ್ರಿಕೆಗಳಲ್ಲಿ ಓದಿದೆ, ‘MP’s feel relieved’ – ಎಂದರೆ ಲೋಕಸಭೆಯ ಪ್ರತಿನಿಧಿಗಳು ಬಿಡುಗಡೆಯ ನಿಟ್ಟುಸಿರು ಬಿಟ್ಟರು. ಮೂರೇ ವಾರಗಳ ಸಮರದಿಂದ ಸಾಕಾದರಲ್ಲ, ಇವರೆಂಥಾ ಪ್ರತಿನಿಧಿಗಳು? ಯುದ್ಧ ಇತ್ಯಾದಿ ವಿಚಾರಗಳಲ್ಲಿನ ಅವರ ಹೇಳಿಕೆಗಳು ಬರೀ ನಾಟಕೀಯ ಎಂದು ಇದರಿಂದ ಗೊತ್ತಾಗುತ್ತದೆ. ಯಾಕೆಂದರೆ ವಾಸ್ತವದಲ್ಲಿ ಅವರಿಗೆ ಗೊತ್ತಾಗಿತ್ತು, ಯಾವುದೇ ರೀತಿಯಲ್ಲಾದರೂ ಒಟ್ಟಿನಲ್ಲಿ ಯುದ್ಧ ಸಮಾಪ್ತವಾಗುತ್ತದೆಂದು ! ಈ ಲೋಕಸಭಾ ಪ್ರತಿನಿಧಿಗಳು ನೆಮ್ಮದಿಯ ಉಸಿರು ತೆಗೆದುಕೊಳ್ಳುವುದಾದರೂ ಹೇಗೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಯುದ್ಧ ನಿಂತಿರಬಹುದು. ಆದರೆ ಈ ಸಂಕಷ್ಟವು ಮತ್ತೆ ಬರದಿರುವಂತೆ ಎಲ್ಲಾ ಪ್ರಕಾರದ ಸಿದ್ಧತೆಗಳನ್ನು ಮಾಡಲು ಮುನ್ನುಗ್ಗುವ ವಿಚಾರವನ್ನು ಬಿಟ್ಟು ಲೋಕಸಭಾ ಪ್ರತಿನಿಧಿಗಳಿಗೆ ನೆಮ್ಮದಿಯ ಉಸಿರು’ ಎನ್ನುವುದು ವಿರೋಧಾಭಾಸವೇ!
ಪ್ರಖರವಾದ ವಾಗ್ಟರಿ : ಸಮಾಜದ ಬೇಜವಾಬ್ದಾರಿಯನ್ನು ಧ್ಯಾನದಲ್ಲಿಟ್ಟುಕೊಂಡು, ವಸ್ತುತಃ ಯುದ್ಧದ ಕಾರಣದಿಂದ ಸಮಾಜದಲ್ಲಿ ಉದ್ಭವಿಸಿದ ಜಾಗೃತಿಯನ್ನು ಹಾಗೇ ಕಾಪಾಡಿಕೊಳ್ಳುವುದು ಹೇಗೆ ಎಂದು ಆಲೋಚಿಸುವುದು ಆವಶ್ಯಕ. ನಿಮ್ಮ ಅಂತಃಕರಣವನ್ನು ಕೇಂದ್ರೀಕರಿಸಿ ಜಡತ್ವವನ್ನು ನಾಶಮಾಡಿ ಮುಂದೆ ಸಾರಿ ಎಂದು ಹೇಳುವ ಸಾವರ್ಕರ್ ಅವರ ಅತ್ಯಂತ ಪ್ರಬಲ ಮತ್ತು ಶಕ್ತಿಸಂಪನ್ನವಾದ ಧ್ವನಿಯು ನಮ್ಮಲ್ಲಿ ಈಗಿಲ್ಲ, ಶರೀರ ಕ್ಷೀಣಿಸಿದ ಅನಂತರವೂ ಆ ಧ್ವನಿಯು ಅತ್ಯಂತ ಪ್ರಬಲವಾಗಿದ್ದಿತು. ಅಂತಹ ಪ್ರಬಲತೆಯು ನಮ್ಮಲ್ಲಿ ಯಾರ ಧ್ವನಿಯಲ್ಲೂ ಇಲ್ಲ. ಆದರೆ ಸಹಸ್ರಾರು ಕಂಠಗಳಿಂದ ನಾವು ಆ ಪ್ರಬಲತೆಯನ್ನು ಖಂಡಿತಾ ನಿರ್ಮಿಸಬಹುದು. ಆದ್ದರಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ.
ಸಮಾಜದ ಜಡತೆಯನ್ನು ಕಂಡಾಗ ನನಗೆ ಅನೇಕ ವಿಚಾರಗಳ ಚಿಂತೆಯು ಆಗುತ್ತದೆ. ಯುದ್ಧವಿರಾಮದ ಮೊದಲು ಯಾವ ಸೈನಿಕ ಕೇಂದ್ರಗಳಲ್ಲಿ ನೂರು ನೂರು, ಇನ್ನೂರಿನ್ನೂರು ಯುವಕರ ಗುಂಪು ಇರುತ್ತಿತ್ತೋ, ಅಲ್ಲೇ ಯುದ್ಧವಿರಾಮದ ಅನಂತರ ದೊಡ್ಡ ದೊಡ್ಡ ನೇತಾರರ ಮಾತುಗಳ ಕಾರಣದಿಂದಾಗಿ ವಾಯುಮಂಡಲ ಎಷ್ಟು ಬದಲಾಯಿತೆಂದರೆ, ಈ ಕೇಂದ್ರಗಳಲ್ಲಿ ಹತ್ತು ಇಪ್ಪತ್ತು ವ್ಯಕ್ತಿಗಳನ್ನು ಕಾಣಲೂ ಕಷ್ಟವಾಗಿಬಿಟ್ಟಿತ್ತು. ಜನರಂತೂ ಸೈನಿಕರನ್ನು ತಂತಮ್ಮ ಮನೆಗೆ ವಾಪಸ್ ಕಳಿಸಬೇಕು ಎಂದು ಹೇಳಲು ಶುರು ಮಾಡಿದರು. ನಿಜ, ಜನರು ಯೋಚಿಸುವ ಪ್ರವೃತ್ತಿಯಂತೂ ಹರಿ-ಹರಿ ಎನ್ನುತ್ತ ಮನೆಯಲ್ಲಿ ಕೂಡು ಅಥವಾ ಸತ್ಯನಾರಾಯಣ ಪೂಜೆ ಮಾಡು ಎನ್ನುವಂತೇ ಇರುತ್ತದೆ, ಮತ್ತೆ ಪೆಟ್ಟು ತಿನ್ನುವ ಪರಿಸ್ಥಿತಿ ಬಂದರೆ, ಆಗ ನೋಡಿಕೊಳ್ಳೋಣ!
ಈ ಶಿಥಿಲತೆ ಬಂದಿದೆಯಲ್ಲ ಅದು ಸರಿಯಲ್ಲ. ಈ ಪ್ರಕಾರದ ಭಾವನೆಯು ಅತ್ಯಂತ ಹಾನಿಕರ. 1857ರ ಸ್ವಾತಂತ್ರ್ಯ ಯುದ್ಧದಲ್ಲಿ ನಮ್ಮ ಸೈನಿಕರು ಎಲ್ಲಾ ಪ್ರಕಾರದ ಶೌರ್ಯಗಳನ್ನು ಪ್ರಕಟಿಸಿ ಗ್ವಾಲಿಯರ್ ಕೋಟೆಯನ್ನು ಗೆದ್ದರು. ಸೈನಿಕರು ಎಲ್ಲಾ ಪ್ರಕಾರದ ಶೌರ ಮತ್ತು ಕೌಶಲ್ಯವನ್ನು ಪ್ರದರ್ಶಿಸಿದರು. ಅವರಿಗೆ ಕೋಟೆಯೊಳಗಿನ ಶಸ್ತ್ರ ಸಂಭಾಳಿಸುವುದೂ ಪ್ರಾಪ್ತವಾಗಿತ್ತು. ಇದರ ಅನಂತರ ನಮ್ಮ ಪ್ರಬಲವಾದ ಶಕ್ತಿಯಿಂದ ಇಂಗ್ಲಿಷರ ಸೇನೆಯನ್ನು ಖಂಡಿತವಾಗಿ ನಾಶಮಾಡಬಹುದಿತ್ತು. ಆದರೆ, ಇದರ ಬದಲಿಗೆ ನಮ್ಮ ಸೈನಿಕರಿಗೆ ಈ ವಿಜಯದಿಂದ ಎಷ್ಟು ಆನಂದವಾಯಿತೆಂದರೆ, ಐಷಾರಾಮಗಳಲ್ಲಿ ಮುಳುಗಿ ಹೋದರು. ಪರಿಣಾಮ ಏನೆಂದರೆ, ಅವರು ಸೋತರು. ಶ್ರೇಷ್ಠ ದೂರದರ್ಶಿತ್ವದಿಂದ ತಯಾರು ಮಾಡಿದ ಸ್ವಾತಂತ್ರ್ಯಯುದ್ಧದ ಸಂಪೂರ್ಣ ಯೋಜನೆ, ನಮ್ಮದೇ ಆದ ಐಷಾರಾಮಗಳ ಕಾರಣದಿಂದಾಗಿ ಧ್ವಂಸವಾಯಿತು. ತಾತ್ಪರ್ಯವೆಂದರೆ, ಶಿಥಿಲತೆಯ ಭಾವನೆ ಯಾವತ್ತೂ ಲಾಭದಾಯಕವಾಗಿರುವುದಿಲ್ಲ. ರಾಷ್ಟ್ರದ ಹಿತಕ್ಕೆ ಈ ಶಿಥಿಲತೆ ಬಹಳ ಹಾನಿಕಾರಕವಾಗುತ್ತದೆ.
ಇಂದು ಜನರು ತಯಾರಿ ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಪ್ರಶ್ನೆಯೆಂದರೆ, ನಾವು ಎಷ್ಟು ತಯಾರಿ ಮಾಡುತ್ತಿದ್ದೇವೆ? ಈ ತಯಾರಿಯಲ್ಲಿ ದೂರದರ್ಶಿತ್ವ, ಕೌಶಲ, ಸುರಕ್ಷಿತತೆಯ ದೃಷ್ಟಿಕೋನ ಇದೆಯೇ? ನಮ್ಮ ಕಾರ್ಖಾನೆಗಳಿವೆಯಲ್ಲಿ ಅವು ಸುರಕ್ಷಿತವಾಗಿವೆಯೇ? ಇದರಲ್ಲಿ ಯಾದರೂ ಅನಪೇಕ್ಷಿತ ವ್ಯಕ್ತಿ ಇಲ್ಲ ತಾನೆ? ಕಾಲಕಾಲದಲ್ಲಿ ಕಳ್ಳತನ, ಸುಲಿಗೆ, ಸ್ಫೋಟ ಇತ್ಯಾದಿ ಘಟನೆಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇದರಿಂದ, ಕುಟಿಲ ವ್ಯಕ್ತಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಯುತ್ತದೆ. ಈ ವ್ಯಕ್ತಿಗಳ ಮೇಲೆ ಸೂಕ್ಷ್ಮವಾದ ನಿಗಾ ಇದೆಯೆ? ಇದರೊಂದಿಗೇ, ಆಧುನಿಕ ಜಗತ್ತಿನಲ್ಲಿ ಯಾವ ರೀತಿಯ ಶಸ್ತ್ರ ಸಾಮಗ್ರಿಗಳು ಬೇಕೋ, ಅವನ್ನು ನಿರ್ಮಾಣ ಮಾಡಲು ಸರಕಾರದ ಅಧಿಕಾರಿಗಳು ಉತ್ಸುಕರಾಗಿದ್ದಾರೆಯೇ?
ಕಪಟ ಯುಕ್ತಿವಾದ : ಇಂದಿನ ನಮ್ಮ ರಕ್ಷಣಾ ಮಂತ್ರಿ ಹೇಳುತ್ತಾರಂತೆ, ಆಧುನಿಕ ಶಸ್ತ್ರಗಳ ಯಾವುದೇ ಅವಶ್ಯಕತೆಯಿಲ್ಲ ಪರಂಪರಾಗತವಾಗಿ ಯಾವುದನ್ನು ಶಸ್ತ್ರಗಳೆಂದು ಕರೆಯುತ್ತಾರೋ, ಅದೇ ಶಗಳಿಂದ ಕಾರ್ಯವಾಗುತ್ತದೆ. ಈ ಹೇಳಿಕೆ ಸಮರ್ಥನೆಯಲ್ಲಿ ಅವರು ಬಹಳಷ್ಟು ಯುಕ್ತಿವಾದವನ್ನೂ ಮಾಡುತ್ತಾರೆ. ಅವರ ತರ್ಕವೇನೆಂದರೆ, ಚೀನಿಯರು ಭಾರಿ ಟ್ಯಾಂಕುಗಳೊಂದಿಗೆ ಪರ್ವತಗಳನ್ನು ದಾಟಿ ಹೇಗೆ ಬರುತ್ತಾರೆ. ಹಿಮದ ಮಾರ್ಗದಲ್ಲಿ ತೋಪುಗಳು, ಟ್ಯಾಂಕುಗಳು ಇತ್ಯಾದಿಗಳು ಅಲ್ಲಿಯೇ ಇದ್ದು ಬಿಡುತ್ತವೆ, ಅವರನ್ನು ಬಂದೂಕಿನಿಂದಲೇ ಎದುರಿಸಬೇಕು ಮತ್ತು ಅದಕ್ಕೋಸ್ಕರ ಪರಂಪರಾಗತವಾಗಿ ಬಂದಿರುವ ಶಸ್ತ್ರಗಳೇ ಸಾಕು, ಅವು ನಮ್ಮಲ್ಲಿಯೇ ಇವೆ ಎನ್ನುತ್ತಾರೆ.
ಈ ಯುಕ್ತಿವಾದವು ನನಗಂತೂ ಅರಿವಾಗುವುದಿಲ್ಲ. ನನಗೆ ಜ್ಞಾಪಕವಿದೆ, ನೆಪೋಲಿಯನ್ನನು ಇಟಲಿಯನ್ನು ಗೆಲ್ಲುವ ಇಚ್ಛೆ ವ್ಯಕ್ತಪಡಿಸಿದಾಗ, ಅವರ ಸೇನಾಪತಿ ಕೇಳಿದನು- ‘ದಾರಿಯಲ್ಲಿ ಆಲ್ಫ್ ಪರ್ವತವಿದೆಯಲ್ಲಾ ಅದನ್ನು ಹೇಗೆ ದಾಟುವುದು? ನೆಪೋಲಿಯನ್ ಹೇಳಿದನು – There shall be no Alphs, ಎಂದರೆ, ನನ್ನ ಸೇನೆಯ ವೇಗವನ್ನು ಯಾರೂ ತಡೆಯಲಾಗುವುದಿಲ್ಲ!
ಶತ್ರುವು ಈ ದುರ್ಗಮ ಮಾರ್ಗದಿಂದ ನೆಪೋಲಿಯನ್ ಹೇಗೂ ಬರುವುದಿಲ್ಲ ಎಂದೇ ಆಲೋಚಿಸುತ್ತಿದ್ದಾಗ, ನೆಪೋಲಿಯನ್ನನ ಪೂರ್ತಿ ಸೇನೆಯು ಶಸ್ತ್ರಾಸ್ತ್ರದೊಂದಿಗೆ ಆಲ್ಫ ಪರ್ವತವನ್ನು ದಾಟಿ ಎದುರಿಗೇ ಬಂದು ನಿಂತಿತು. ಶತ್ರುವಿಗೆ ವಿಚಾರ ಮಾಡಲು ಸಮಯವೇ ಸಿಗಲಿಲ್ಲ. ಸೋಲುವುದೇ. ಅವರ ಕೈಯಲ್ಲಿತ್ತು. ಆದದ್ದೇ ಅದು. ನೆಪೋಲಿಯನ್ ಸಂಪೂರ್ಣ ವಿಜಯವನ್ನು ಗಳಿಸಿ, ಆ ಪ್ರಾಂತವನ್ನು ತನ್ನ ಸಾಮ್ರಾಜ್ಯದ ಜೊತೆ ಸೇರಿಸಿದ ಯಾವನು ಆಕ್ರಮಣವನ್ನು ಮಾಡಲು ಇಚಿಸುತ್ತಾನೋ, ಅವನು ಎಲ್ಲಾ ಅಡ್ಡಿಗಳನ್ನು ದಾಟಿ ಬಿಡುತ್ತಾನೆ.
ಚೀನಾವೂ, ಇಚ್ಛಿಸಿದಲ್ಲಿ ತನ್ನ ತೋಪುಗಳನ್ನೂ ಟ್ಯಾಂಕುಗಳನ್ನೂ ಅವಶ್ಯವಾಗಿ ಹಿಂದೆ ಕರೆಸೀತು. ಚೀನಾದೊಂದಿಗಿನ ನಮ್ಮ ಕಾದಾಟದಲ್ಲಿ ನಮ್ಮಲ್ಲಿ ಪರಂಪರಾಗತ ಶಸ್ತ್ರಗಳು, ಎಂದರೆ ಬಂದೂಕುಗಳು ಇದ್ದುಯೆಂದು ಗೊತ್ತಿತ್ತು: ಒಂದು ಪ್ರಕಾರದ ಬಂದೂಕು ಮತ್ತು ಇನ್ನೊಂದು ಪ್ರಕಾರದ ಬೇಜವಾಬ್ದಾರಿತನದಿಂದಾಗಿ ನಮ್ಮ ಬಹಾದ್ದೂರ್ ಸೈನಿಕರಿಗೆ ಶತ್ರುಗಳನ್ನು ಎದುರಿಸುವುದೆಂದರೆ ಕೇವಲ ಸಾಯುವುದಕ್ಕೇ ನಿಂತಹಾಗಾಯಿತು!
ಪರಂಪರಾಗತ ಶಸ್ತ್ರದ ಅರ್ಥ : ವಿಜ್ಞಾನದ ಯುಗದಲ್ಲಿ ಪ್ರಗತಿಯ ಜೀವನದಲ್ಲಿ ಪರಂಪರಾಗತ ಶಸ್ತ್ರದ ಅರ್ಥ ಬದಲಾಗುತ್ತಿರುತ್ತದೆ. ಪ್ರಾಚೀನ ಕಾಲದಲ್ಲಿ ಉಗುರು, ಹಲ್ಲು ಇತ್ಯಾದಿ ಶಸ್ತ್ರಾಸ್ತ್ರಗಳಿದ್ದವು, ಅನಂತರ ಲಾಠಿ, ಧನುಸ್ಸು ಬಾಣ, ಖಡ್ಗ ಇತ್ಯಾದಿ ಸಂಹಾರೀ ಶಸ್ತ್ರಗಳೂ ರೂಢಿಗೆ ಬಂದವು. ಇತ್ತೀಚೆಗೆ ವಿಮಾನಗಳಿಂದ ಉಪಯೋಗಿಸಲ್ಪಡುವ ವಿಸ್ಫೋಟಕ ಬಾಂಬ್ ರೂಢಿಯಲ್ಲಿದೆ. ನಮಗೆ ‘ಪರಮಾಣು ಅಸ್ತ್ರ’ವು ರೂಢಿಯಲ್ಲಿರುವ ಶಸ್ತ್ರಗಳಾಗುವುದಿಲ್ಲ, ಏಕೆಂದರೆ ಅವನ್ನು ನಿರ್ಮಿಸುವ ಅನುಕೂಲತೆ ಅಥವಾ ಪ್ರವೃತ್ತಿ ಎರಡೂ ನಮ್ಮಲ್ಲಿ ಈಗ ಇಲ್ಲ. ಅಥವಾ ನಾವು ಅವುಗಳನ್ನು ನಿರ್ಮಿಸುವುದೇ ಇಲ್ಲ. ಆದರೂ ಇವತ್ತಲ್ಲ ನಾಳೆ ಅವು ರೂಢಿಯಲ್ಲಿ ಬರಬಹುದು.
ಇದಕ್ಕೆ ವ್ಯತಿರಿಕ್ತವಾಗಿ, ನಾವು ಯಾವುದನ್ನು ರೂಢಶಸ್ತ್ರಗಳೆಂದು ಪರಿಗಣಿಸುವುದಿಲ್ಲವೋ, ಆ ಶಸ್ತ್ರಗಳು ಯಾರ ಹತ್ತಿರ ಹೇರಳವಾಗಿ ಇವೆಯೋ, ಅವರಿಗೆ ಇವು ರೂಢ ಶಸ್ತ್ರಗಳೇ ಆಗಿವೆ. ಯಾವುದೇ ಕ್ಷಣದಲ್ಲಿ ಇವುಗಳ ಉಪಯೋಗದಿಂದ, ಯಾವ ಅನ್ಯದೇಶಗಳಲ್ಲಿ ಈ ರೂಢ ಶಸ್ತ್ರಗಳಿಲ್ಲವೋ, ಆ ದೇಶಗಳನ್ನು ಭಯಭೀತವನ್ನಾಗಿ ಮಾಡಿ ದಾಸನನ್ನಾಗಿ ಮಾಡಿಕೊಳ್ಳಬಹುದು. ಆದ್ದರಿಂದ ಈ ರೂಢ ಶಸ್ತ್ರಗಳನ್ನು ಗಣನೆಗೆ ತೆಗೆದುಕೊಳ್ಳದೆ, ನಮ್ಮೊಂದಿಗೆ ಯಾರೂ ಕಾದಾಡುವುದಿಲ್ಲ ಎನ್ನುವ ಭ್ರಮೆ ನಿರ್ಮಿಸಲಾಗಿತ್ತು. ಹೀಗೆ ಯೋಚಿಸಿದರೆ ಶಿಥಿಲತೆಯ ಬಾಯಿಗೆ ತುತ್ತಾಗುವುದೇ ಸರಿ! ಈ ರೀತಿಯ ವಿಚಾರ ಎಂದರೆ ವಾಸ್ತವಿಕತೆಗೆ ವಿರುದ್ಧವೆನಿಸುತ್ತದೆ.
ಅದೇ ಪ್ರಕಾರ, ಶಸ್ತ್ರಸಂಧಿಯಾಯಿತು, ಸಂಧಾನವಾಯಿತು ಎಂದರೆ ಎಲ್ಲವೂ ಮುಗಿಯಿತು, ಎಂಬ ವಿಚಾರವೂ ರಾಷ್ಟ್ರದ ಸುರಕ್ಷೆಯ ದೃಷ್ಟಿಯಲ್ಲಿ ಅತ್ಯಂತ ಆತಂಕದ ಸಂಗತಿಯಾಗಿದೆ. ಜೀವನದಲ್ಲಿ ಯಾವುದೇ ರೀತಿಯ ರಾಜನೀತಿಯ ಸಂಧಾನವೂ ಸೂರ್ಯಚಂದ್ರರಂತೆ ಖಾಯಂ ಇರುವುದಿಲ್ಲ,
ಕರ್ತವ್ಯದಿಂದ ಶ್ರದ್ಧೆಯ ಅಭಿವ್ಯಕ್ತಿ : ಈ ಶಿಥಿಲತೆ ನಮ್ಮೊಳಗೆ ಮನೆ ಮಾಡಿದೆಯಲ್ಲಾ ಅದು ಅತ್ಯಂತ ಭಯಂಕರವಾದುದು. ಈ ಪರಿಸ್ಥಿತಿಯಲ್ಲಿ ಸಮಗ್ರ ಹಿಂದೂ ಸಮಾಜದ ಸೈನಿಕ ಶಕ್ತಿಯಿಂದ ಸಂಪನ್ನವಾಗಬೇಕು. ಹೀಗೆ ಹೇಳುವ, ಉದ್ದೀಪನಗೊಳಿಸುವ ಚೈತನ್ಯ ಈಗ ನಮ್ಮೊಂದಿಗಿಲ್ಲ ಎನ್ನುವ ಅರಿವು ಮಾಡಿಕೊಳ್ಳಬೇಕು. ಈ ಸ್ಥಿತಿಯಲ್ಲಿ ಶೋಕಿಸುತ್ತಾ ಕೂಡುವುದು ಸರಿಯಲ್ಲ. ಅದು ನಮ್ಮ ಕೆಲಸವೂ ಅಲ್ಲ! ಇಂದು ಶೋಕಸಭೆಯ ಪರಿಸ್ಥಿತಿ ಇದ್ದಾಗ್ಯೂ, ನಾನು ಶೋಕಿಸುವ ವಿಷಯದಲ್ಲಿ ಒಂದು ಅಕ್ಷರವನ್ನೂ ಆಡಲಿಲ್ಲ. ನನ್ನ ಸೌಭಾಗ್ಯವೆಂದರೆ, ನನ್ನ ಅತ್ಯಂತ ನಿಕಟವರ್ತಿ ವ್ಯಕ್ತಿಗಳ ದೇಹಾಂತ್ಯದ ಸಮಯದಲ್ಲೂ ನಾನು ಒಂದು ಹನಿ ಕಣ್ಣೀರನ್ನು ಬೀಳಲು ಆಸ್ಪದ ಕೊಡಲಿಲ್ಲ.
ಕಣ್ಣೀರುಸುರಿಸುವುದರಿಂದ ಶ್ರದ್ಧೆ ವ್ಯಕ್ತವಾಗುವುದಿಲ್ಲ, ಶ್ರದ್ಧೆಯು ಕರ್ತವ್ಯವನ್ನು ಪಾಲಿಸುವುದರಿಂದ, ಅದೂ ಯೋಗ್ಯ ಮಾರ್ಗದಲ್ಲಿ, ನಿರ್ಭೀತಿಯ ಕರ್ತವ್ಯ ಪಾಲನೆಯಿಂದ ವ್ಯಕ್ತವಾಗುತ್ತದೆ. ಹೀಗೆ ಆಲೋಚಿಸಿ, ಭಗವಂತನು ನಮಗೆಲ್ಲಾ ಬರೀ ಶೋಕಿಸುವ ಬುದ್ಧಿಯನ್ನು ಕೊಡದೇ, ಕರ್ತವ್ಯವನ್ನು ಮಾಡುವ ಸಾಮರ್ಥ್ಯವನ್ನು ನೀಡಲೆಂದು ಬೇಡುತ್ತೇನೆ. ಈಶ್ವರನ ಕೃಪೆಯು ಖಂಡಿತವಾಗಿಯೂ ಇರುತ್ತದೆ.
ಇಂದು ಆ ಸಮರ್ಥವಾಣಿಯ ಪ್ರಖರತೆಯು ನಮ್ಮಲ್ಲಿ ಇಲ್ಲದಿರಬಹುದು, ಆದರೆ, ಒಂದು ವೇಳೆ ಕೋಟಿಕೋಟಿ ಕಂಠಗಳನ್ನು ಒಂದುಗೂಡಿಸಿ ಅದೇ ತೇಜಸ್ಸನ್ನು ಪರಿಷ್ಕರಿಸುವಲ್ಲಿ ಕಟಿಬದ್ಧರಾದರೆ, ನಮ್ಮ ಮಹಾನ್ ರಾಷ್ಟ್ರವು ಎಂದಿಗೂ ಶತ್ರುಗಳ ಎದುರು ಜಡದಂತೆ ಕಂಡುಬರುವದಿಲ್ಲ, ಆದ್ದರಿಂದ ನಮ್ಮ ಸಮಾಜವನ್ನು ಜಾಗೃತಗೊಳಿಸಿ, ನಿತ್ಯಸಿದ್ಧಗೊಳಿಸಿ, ಶಸ್ತ್ರ-ಅಸ್ತ್ರಗಳಿಂದ ಸಂಪನ್ನಗೊಳಿಸುವ ಮನೋವೃತ್ತಿ ಯನ್ನು ಬೆಂಬಲಿಸುವ ನಿಶ್ಚಯ ಮಾಡಿ, ಈ ವಾಯುಮಂಡಲವನ್ನು ಅದಕ್ಕನುಗುಣವಾಗಿ ನಿರ್ಮಿಸಿ, ನಾಲ್ಕು ದಿಕ್ಕುಗಳಲ್ಲಿ ತೇಜೋಪೂರ್ಣವಾದ ವಾತಾವರಣವನ್ನು ನಿರ್ಮಿಸಿ ವಿಸ್ತರಿಸಿದರೆ, ಶ್ರದ್ಧೆಯನ್ನು ವ್ಯಕ್ತಪಡಿಸುವ ಉಚಿತ ಮಾರ್ಗ ಅದೇ.
ನಮ್ಮ ಸಾಮರ್ಥ್ಯದಲ್ಲಿ ಭರವಸೆಯೊಂದಿಗೆ ಎದ್ದು ನಿಲ್ಲುವ, ರಾಷ್ಟ್ರದ ಸ್ಥಾಯಿಭಾವದ ಕಾರಣ, ರಾಷ್ಟ್ರಜೀವನದ ಎಲ್ಲಾ ಮಜಲುಗಳ ತೇಜಸ್ಸಿನ ಅವಿಷ್ಕಾರ ಮತ್ತು ಅಧಿಕ ರೀತಿಯಲ್ಲಿ ಸಾಮರ್ಥ್ಯದ ನಿರ್ಮಾಣ ಅವಶ್ಯವಾಗಿದೆ. ಇದು ನಮ್ಮ ಶ್ರದ್ಧೆ, ಇದೇ ವಾಸ್ತವಿಕವಾಗಿ ಶ್ರದ್ಧಾಂಜಲಿ! ಈ ಶ್ರದ್ಧೆಯನ್ನು ಮನದಲ್ಲಿಟ್ಟುಕೊಂಡು ಕರ್ತವ್ಯಪಥದಲ್ಲಿ ಮುಂದೆ ಸಾಗೋಣ!
ಮಹಾಪುರುಷರ ಜೀವನ ಸಂಕಷ್ಟಗಳಿಂದ ಕೋಲಾಹಲ ಒಂದು ಮಾತನ್ನು ನೆನಪಿಡಿ ನಮ್ಮ ಮಾರ್ಗ ಸುಗಮವಾಗಿದೆ. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜೀವನ ಜನನದಿಂದ ಮರಣದವರೆಗೂ ದುಃಖದಿಂದ ತುಂಬಿ ಹೋಗಿತ್ತು. ದೇವರು ಅವರನ್ನು ಕಷ್ಟ ಅಥವಾ ದುಖವನ್ನು ಅನುಭವಿಸುವುದಕ್ಕಾಗಿಯೇ ನಿರ್ಮಿಸಿದ ಎಂದು ತಿಳಿಯೋಣ ಭಗವಂತನಾದ ಶ್ರೀರಾಮಚಂದ್ರನನ್ನೂ ಹೀಗೆ ಸೃಷ್ಟಿಸಲಾಗಿತ್ತು. ಅವನನ್ನು ನಾವೆಲ್ಲಾ ಭಗವಂತನ ಅವತಾರವೆಂದು ತಿಳಿಯುತ್ತೇವೆ. ಅವನ ಜೀವನವನ್ನು ಅವಲೋಕಿಸಿದಾಗ, ಬಾಲ್ಯದಲ್ಲಿಯೇ ವಿಶ್ವಾಮಿತ್ರರ ಸೇವೆಗಾಗಿ ಕಾಡಿಗೆ ಹೊರಟಿದ್ದು ತಿಳಿಯುತ್ತದೆ.ವಿವಾಹದ ಅನಂತರ ಮಲ ತಾಯಿಯ ಇಚ್ಛೆಯನ್ನು ಪೂರ್ತಿಗೊಳಿಸಲು ಮತ್ತು ಪಿತೃವಾಕ್ಯ ಪರಿಪಾಲನೆಗಾಗಿ ರಾಜ್ಯವನ್ನು ತ್ಯಜಿಸಿ ವನವಾಸಕ್ಕೆ ತೆರಳಬೇಕಾಯಿತು. ವನವಾಸದಲ್ಲಿ ರಾವಣನು ಸೀತೆಯನ್ನು ಅಪಹರಿಸಿದನು. ಅದರ ದುಃಖ ಹಾಗೂ ಅಪಮಾನಗಳನ್ನು ಸಹಿಸ ಬೇಕಾಯಿತು. ರಾವಣನ ಸಂಹಾರವಾದ ಮೇಲೆ, ವನವಾಸ ಪೂರ್ತಿಯಾದ ಮೇಲೆ, ರಾಜ್ಯಕರ್ತವ್ಯ ದಲ್ಲಿ ಯಾವುದೇ ಆಕ್ಷೇಪ ಬರಬಾರದೆಂದು ಗರ್ಭಿಣಿಯಾದ ಪತ್ನಿಯನ್ನು ತ್ಯಾಗ ಮಾಡಬೇಕಾಯಿತು. ಅಂತ್ಯದಲ್ಲಿ ಕಾಲಪುರುಷನೊಂದಿಗೆ ಮಾತನಾಡುವಾಗ ನಿಯಮದ ಉಲ್ಲಂಘನೆಯಾದ್ದರಿಂದ ತನ್ನ ಅತೀ ಪ್ರಿಯನಾದ ಲಕ್ಷ್ಮಣನನ್ನೂ ತ್ಯಜಿಸುವ ಘೋರ ದುಃಖವನ್ನು ಸಹಿಸಬೇಕಾಯಿತು. ಜನನದಿಂದ ಹಿಡಿದು ಶರೀರ ತ್ಯಜಿಸುವ ತನಕ ಸಂಪೂರ್ಣ ಜೀವನದಲ್ಲಿ ಸುಖದ ಯಾವುದೇ ಅನುಭವವಿಲ್ಲ ಮಹಾಪುರುಷರ ಜೀವನ ಯಾವತ್ತೂ ಹೀಗೆಯೇ ಇರುತ್ತದೆ.
ನನಗೆ ನೆನಪಿದೆ, ಇಂಥಾ ಪ್ರಸಂಗಗಳಿಂದ ವಿಷಾದ ಉಂಟಾಗುವ ವಿಷಯವನ್ನು ನಾನು ಒಬ್ಬ ಸಾಧುವೊಂದಿಗೆ ಕೇಳಿದಾಗ ಅವನು ಹೇಳಿದ – ‘ಇಲ್ಲಿ ಯಾಕೆ ದುಃಖಿಸಬೇಕು? ದುಖವು ಆಗಿಯೇ ಆಗುತ್ತದೆ, ಅದರ ಚಿಂತೆ ಯಾಕೆ? ಶ್ರೀ ರಾಮಚಂದ್ರನಂಥ ಮಹಾಪುರುಷರ ಜೀವನವೇ ದುಃಖಭರಿತವಾಗಿದೆಯೆಂದ ಮೇಲೆ ನಮ್ಮ ದುಃಖದ ಬಗ್ಗೆ ಚಿಂತೆ-ವಿಷಾದ ಏಕೆ? ಆನಂದದಿಂದ ಸುಖ-ದುಃಖ ಎರಡನ್ನೂ ಅನುಭವಿಸಬೇಕು! ಈ ಮಾತು ಎಷ್ಟು ಔಚಿತ್ಯಪೂರ್ಣ!’
ಮುಂದಿನ ಪೀಳಿಗೆಯ ಮಾರ್ಗವನ್ನು ಸುಗಮಗೊಳಿಸೋಣ : ಸಾವರ್ಕರ್ ಅವರ 80 ವರ್ಷಗಳ ಸುದೀರ್ಘ ಜೀವನದಲ್ಲಿ (ಅವರನ್ನು ಇಂದಿನ ಕಾಲದಲ್ಲಿ ಸುದೀರ್ಘವಾಗಿ ಬಾಳಿದವರೆಂದೇ ಹೇಳಬೇಕು), ಪ್ರಾರಂಭದಿಂದ ಅಂತ್ಯದವರೆಗೂ ಸುಖದ ಒಂದು ಕ್ಷಣವೂ ಇರಲಿಲ್ಲ, ಅದಕ್ಕೆ ಹೋಲಿಸಿದರೆ ನಮ್ಮ ದಾರಿಯು ಸುಗಮವಾಗಿದೆಯೆಂದೇ ಹೇಳಬಹುದು. ನಮಗೆ ಅನುಕೂಲಗಳು ಬಹಳವೇ. ಅವರು ಅನೇಕ ಪ್ರಕಾರದ ಕಷ್ಟಗಳನ್ನು ಅನುಭವಿಸಿ ನಮ್ಮ ಮಾರ್ಗವನ್ನು ಸುಗಮ ಮಾಡಿದ್ದಾರೆ, ಆದರೆ ಸುಗಮವಾಯಿತೆಂದು ಮನೆಯಲ್ಲಿ ಸದ್ದಿಲ್ಲದೇ ಕುಳಿತುಕೊಳ್ಳುವುದು ಸರಿಯಲ್ಲ ಸುಗಮವಿದ್ದರೆ ಮುಂದೆ ಸಾಗಿ! ಮುಂದಿನ ಮಾರ್ಗವನ್ನು ಸುಗಮಗೊಳಿಸೋಣ, ಅದರಿಂದ ಮುಂದಿನ ಪೀಳಿಗೆಯು ಸುಲಭವಾಗಿ ಮುನ್ನಡೆಯಬಹುದು, ಇದಕ್ಕಾಗಿ ನಾವು ಶ್ರದ್ಧೆಯ ಜೊತೆಗೆ ಪ್ರಯತ್ನವನ್ನು ಮಾಡಬೇಕು.
ಆ ಮಹಾಜೀವದ ಪ್ರೇರಣೆಯಿಂದ ರಾಷ್ಟ್ರದ ಸ್ಪಷ್ಟ ಕಲ್ಪನೆ, ರಾಷ್ಟ್ರದ ಅಧಿಷ್ಠಾನ ಸ್ವರೂಪದ ಸಾಮರ್ಥ್ಯವನ್ನು ಕಾಯ್ದುಕೊಂಡು, ಜೀವನದ ಎಲ್ಲಾ ಮಜಲುಗಳಲ್ಲೂ ಶುದ್ಧವಾದ ರಾಷ್ಟ್ರಜೀವನ ಅಭಿವ್ಯಕ್ತವಾಗಬೇಕು, ಈ ಭಾವನೆಯನ್ನು ಹೃದಯದಲ್ಲಿ ಇಟ್ಟುಕೊಂಡು, ಅವಿರತವಾಗಿ ಪ್ರಯತ್ನ ಮಾಡಬೇಕು. ನಮ್ಮ ಜೀವನದಲ್ಲಿ ಸುಖ ಸಿಗುತ್ತದೋ, ಇಲ್ಲವೋ, ರಾಷ್ಟ್ರ ಸಾಮರ್ಥ್ಯದ ಅಸಾಮಾನ್ಯ ಮತ್ತು ಸರ್ವವ್ಯಾಪಿ ಸ್ವರೂಪವನ್ನು ಪ್ರಕಟಿಸಲು ಜೀವನಪೂರ್ತಿ ನಮ್ಮ ಪ್ರಯತ್ನಗಳನ್ನು ಕುಂದಿಸುವುದಿಲ್ಲ ಎಂಬ ದೃಢ ನಿಶ್ಚಯ ಕೈಗೊಂಡು, ಆ ಮಹಾಪುರುಷನಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಉಚಿತವಾಗು ಇದೆ ಇದೇ ನಮ್ಮ ವಿನಮ್ರ ಶ್ರದ್ಧಾಂಜಲಿಯಾಗಿರುತ್ತದೆ! ಏನಾದರೂ ಬರೆದರೆ ಒಳ್ಳೆಯದು ಹೌದು, ಇದು ಅವರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿಯೂ ಆಗಬಹುದು. ಮುಂದಿನ ಪೀಳಿಗೆಯು ಅದನ್ನು ಓದಿದಾಗ ತಿಳಿಯುತ್ತದೆ. ಆದರೆ ನನಗನ್ನಿಸುವುದು, ಇಂದು ನಾವು ಅವರಿಗೆ ಶ್ರದ್ಧಾಂಜಲಿ ಹೇಗೆ ನೀಡಬೇಕೆಂದರೆ, ಅವರಿಂದ ಸ್ಥಾಪಿತವಾದ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು, ರಾಷ್ಟ್ರಕ್ಕೆ ಯಾವ ಶಕ್ತಿಯ ಆವಶ್ಯಕತೆ ಇದೆಯೆಂದು ವಿಚಾರ ಮಾಡಿ, ಅದರ ನಿರ್ಮಾಣದಲ್ಲಿ ನಿರಂತರ ಪ್ರಯತ್ನವನ್ನು ಮಾಡುವುದು.
ಯಾವ ಮಹಾ ಕನಸನ್ನು ಕಾಣುತ್ತಾ ಸಾವರ್ಕರ್ ಅವರು ಶರೀರವನ್ನು ತ್ಯಜಿಸಿದರೋ, ಅದನ್ನು ಸಾಕಾರರೂಪದಲ್ಲಿ ನೋಡುವ ಸ್ವರ್ಗೀಯ ಕ್ಷಣ ಹತ್ತಿರ ಬರುತ್ತಿದೆ ಎಂದು ನನಗೆ ಅನಿಸುತ್ತದೆ ಅಂದರೆ, ನಮ್ಮ ಪ್ರಯತ್ನಗಳ ಮೂಲಕ ನಾವು ಜಗತ್ತೇ ಅವರನ್ನು ಸಮ್ಮಾನಿಸುವ ಹಾಗೆ ಸ್ಥಿತಿಯನ್ನು ನಿರ್ಮಾಣ ಮಾಡಬೇಕು. ಆ ಜೀವವು ಈ ಭೂಮಿಯನ್ನು ತ್ಯಜಿಸಿ ಅನಂತದಲ್ಲಿ ವಿಲೀನವಾಗಿ ಅಲ್ಲಿಂದ ನಮಗೆ ಆಶೀರ್ವಾದ ನೀಡುತ್ತಿರುವುದು ಕಾಣುತ್ತಿದೆ. ಅಧಿಕ ತೇಜಸ್ಸಿನಿಂದ ನಾವು ಮುಂದೆ ಸಾಗುವುದನ್ನು ನೋಡಿ ಅವರು ಆನಂದಿತರಾಗುತ್ತಾರೆ, ಪುಲಕಿತರಾಗುತ್ತಾರೆ. ಆದ್ದರಿಂದ ಈ ದಿಸೆಯಲ್ಲಿ ಪ್ರಯತ್ನಶೀಲ ರಾಗುವುದು, ಪರಿಶ್ರಮ ಪಡುವುದೇ, ಇವೇ ಆ ಮಹಾಪುರುಷನಿಗೆ ನಾವು ನೀಡುವ ಕೃತಜ್ಞತಾಪೂರ್ವಕ ಶ್ರದ್ಧಾಂಜಲಿ!