ಸಿಟಿಜೆನ್ಸ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆಯು ಚುನಾವಣೋತ್ತರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಘೋರ ಹಿಂಸಾಚಾರದ ಕುರಿತಾಗಿ ಕಾಲ್ ಫಾರ್ ಜಸ್ಟಿಸ್ ಎಂಬ ನಾಗರಿಕ ಸಮಾಜದ ಸತ್ಯ ಶೋಧನಾ ವರದಿಯನ್ನು ಆಧರಿಸಿ ಆಲೈನ್ ಚರ್ಚೆಯನ್ನು ಇಂದು ನಡೆಸಿತ್ತು. ಬಂಗಾಳದಲ್ಲಿ ಇತ್ತೀಚಿಗೆ ಚುನಾವಣೆ ಮುಗಿದ ನಂತರ, ಫಲಿತಾಂಶ ಹೊರಬೀಳುವ ಗಂಟೆಗಳೊಳಗೆ ಹಿಂಸಾಚಾರ ಭುಗಿಲೆದ್ದಿತು. ಯಾವ ಹಿಂಸಾಚಾರವೂ ನಡೆದೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾದಿಸಿದ್ದರು. ಆದರೆ ಸೈದ್ಧಾಂತಿಕವಾಗಿ ತಮ್ಮಿಂದ ದೂರವಾದ ಜನಸಾಮಾನ್ಯರನ್ನು ಅಮಾನುಷವಾಗಿ ಹತ್ಯೆಗೈಯಲಾಗಿತ್ತು, ಮಹಿಳೆಯರ ಮೇಲೆ ಅವ್ಯಾಹತವಾಗಿ ಅತ್ಯಾಚಾರಗಳು ನಡೆದಿದ್ದವು. ಮನೆಗಳನ್ನು ಸುಡುವುದು, ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದ ಜನಸಾಮಾನ್ಯರು ತಮ್ಮ ಊರುಗಳನ್ನು ಬಿಟ್ಟು ಹೋಗುತ್ತಿದ್ದ ಘಟನೆಗಳು ಸಾಮಾನ್ಯವಾಗಿತ್ತು. ಕಾಲ್ ಫಾರ್ ಜಸ್ಟಿಸ್, ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಗಲಭೆ ನಡೆದ ಪ್ರದೇಶಗಳಿಗೆ ಹೋಗಿ, ತನಿಖೆ ನಡೆಸಿ, ವರದಿಯನ್ನು ಕೇಂದ್ರ ಸರ್ಕಾರದ ಗೃಹ ಕಚೇರಿಗೆ ಸಲ್ಲಿಸಿತು.

ಸತ್ಯ ಶೋಧನಾ ಸಮಿತಿಯ ವರದಿಯನ್ನು ಇಲ್ಲಿ ಓದಬಹುದು

ಇಂದಿನ ಚರ್ಚೆಯಲ್ಲಿ ಝಾರ್ಕಂಡ್ ನ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಮತಿ ನಿರ್ಮಲ್ ಕೌರ್, ಕೇರಳಾ ರಾಜ್ಯದ ಪೂರ್ವ ಮುಖ್ಯ ಕಾರ್ಯದರ್ಶಿಗಳಾದ ಡಾ. ಆನಂದ ಬೋಸ್. ಕರ್ನಾಟಕ ರಾಜ್ಯದ ಪೂರ್ವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಮದನ್ ಗೋಪಾಲ್ ಭಾಗವಹಿಸಿದರು. ಇವರೆಲ್ಲರೂ ಕಾಲ್ ಫಾರ್ ಜಸ್ಟಿಸ್ ಸತ್ಯ ಶೋಧನಾ ಸಮಿತಿಯ ಸದಸ್ಯರುಗಳು. ಸಿಟಿಜೆನ್ಸ್ ಫಾರ್ ಡೆಮೊಕ್ರಸಿಯ ಶ್ರೀಮತಿ ಕ್ಷಮಾ ನರಗುಂದ್ ಚರ್ಚೆಯನ್ನು ನಿರ್ವಹಿಸಿದರು.

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಿನ ಚುನಾವಣೋತ್ತರ ಹಿಂಸಾಚಾರ ಭಾರತ ತಲೆತಗ್ಗಿಸುವಂತೆ ಮಾಡಿದೆ. ಭಾರತದ ಇತಿಹಾಸದಲ್ಲಿಯೇ ಹಿಂದೆದೂ ಕಾಣದ ರೀತಿಯಲ್ಲಿ ಎಲ್ಲಾ ತರಹದ ದಾದಾಗಿರಿ, ಹಿಂಸಾಚಾರ, ನಡೆದದ್ದರಿಂದ ಪ್ರಜಾಪ್ರಭುತ್ವವೇ ಕುಸಿದು ಬಿದ್ದಂತೆ ಕಂಡುಬಂತು ಎಂದು ಡಾ. ಆನಂದ ಬೋಸ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಭಾರತದ ಬಹುತ್ವವನ್ನೇ ಪ್ರಶ್ನಿಸುವ, ಈ ಕೃತ್ಯಗಳು ಪೂರ್ವ ಯೋಜಿತ ಹಾಗೂ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲ್ಲದೆ ಹೇಗೆ ನಡೆಯಲು ಸಾಧ್ಯ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಕಾಲ್ ಫಾರ್ ಜಸ್ಟಿಸ್ ಒಂದು ಜವಾಬ್ದಾರಿಯುತ ನಾಗರಿಕ ಸೇವೆಯಿಂದ ನಿವೃತ್ತರಾದವಾರ ಸಮೂಹವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರವನ್ನು ಸತ್ಯದ ದೃಷ್ಟಿಯಿಂದ ಕಂಡು, ಅಲ್ಲಿಯ ಜನರನ್ನು ಮಾತನಾಡಿಸಿ ವರದಿಯನ್ನು ತಯಾರು ಮಾಡುವುದರಿಂದ, ಸಮಿತಿಯ ಸದಸ್ಯರು ಬಂಗಾಳಕ್ಕೆ ಬಂದಾಗ ಭದ್ರತೆ ಒದಗಿಸುವಂತೆ ಕೇಳಿಕೊಂಡಾಗ್ಯೂ ಬಂಗಾಳದ ಮುಖ್ಯ ಕಾರ್ಯದರ್ಶಿಗಳು ತಮ್ಮ ಪ್ರಯಾಣವನ್ನು ರದ್ದುಗೊಳಿಸಿ, ಈ ತರಹದ ಸತ್ಯಶೋಧನೆಯ ಅವಶ್ಯಕತೆಯೂ ಇಲ್ಲವೆಂದು ಹೇಳಿದರು ಎಂದು ಶ್ರೀ ಮದನ್ ಗೋಪಾಲ್ ನೆನಪಿಸಿಕೊಂಡರು. ಸತ್ಯವನ್ನು ಕಂಡರೆ ಹೆದರಿಕೊಳ್ಳುವ, ಅದನ್ನು ಮುಚ್ಚಿಡುವ ಪ್ರಯತ್ನವನ್ನು ಬಂಗಾಳದ ರಾಜ್ಯದ ಸರ್ಕಾರಿ ಅಧಿಕಾರಿಗಳು ಮಾಡಿದ್ದು ಹೇಯ ಕೃತ್ಯ ಎಂದರು.

ಕಲ್ಯಾಣಿಯ ನೆಹರು ಆಸ್ಪತ್ರೆಗೆ ಹೋದಾಗ ವ್ಯಕ್ತಿಯೊಬ್ಬನು ಆಸ್ಪತ್ರಯಲ್ಲಿನ ರೋಗಿಗಳನ್ನು ತೋರಿಸಿದ್ದಕ್ಕೆ, ನಂತರದ ದಿನಗಳಲ್ಲಿ ಅವನ ಮನೆಯನ್ನು ಸುಟ್ಟುಹಾಕಲಾಯಿತು. ಎಡ ಪಕ್ಷದವರು ಸೋತಾಗಲೂ ಈ ರೀತಿಯ ಹಿಂಸಾಚಾರ ನಡೆದಿರಲಿಲ್ಲ. ಒಂದು ಹಳ್ಳಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿರೋಧಪಕ್ಷವನ್ನು ಬೆಂಬಲಿಸಿದ್ದಕ್ಕೆ ಸಂಪರ್ಕಕ್ಕಿದ್ದ ಸೇತುವೆಯನ್ನೇ ಕಡಿದುಹಾಕಲಾಗಿದೆ. ದೇವಸ್ಥಾನಗಳನ್ನು ಒಡೆದುಹಾಕಲಾಗಿದೆ ಎಂದು ತಮ್ಮ ಸತ್ಯ ಶೋಧನಾ ಸಮಿಟಿಯು ಕಂಡ ಅನುಭವಗಳನ್ನು ಹಂಚಿಕೊಂಡರು. ಮಾನವೀಯ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕೆಲ ಸಂಘಟನೆಗಳು, ವ್ಯಕ್ತಿಗಳು, ಬಂಗಾಳದಲ್ಲಿನ ಈ ಸಂದರ್ಭದಲ್ಲಿ ಚಕಾರವೆತ್ತದೆ ನಡೆದ ಹಿಂಸಾಚಾರವನ್ನು ಬೆಂಬಲಿಸಿದ್ದು ತಪ್ಪಲ್ಲವೇ ಎಂದು ಮದನ್ ಗೋಪಾಲ್ ಪ್ರಶ್ನಿಸಿದರು. ಬಂಗಾಳದಲ್ಲಿ ಕೆಲವರ್ಷಗಳಿಂದ ನಡೆದಿರುವ ಜನಸಂಖ್ಯಾ ಬದಲಾವಣೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಬೇಕಿದೆ, ಅಲ್ಲದೆ ಈ ಜನಸಂಖ್ಯಾ ಅಸಮತೋಲನದಿಂದಾಗಿ ಎದುರಾಗಿರುವ ವ್ಯತಿರಿಕ್ತ ಪರಿಸ್ಥಿತಿಯ ಅಧ್ಯಯನ ನಡೆಯಬೇಕೆಂದು ಆಗ್ರಹಿಸಿದರು.

– ಶ್ರೀ ಮದನ್ ಗೋಪಾಲ್, ಕರ್ನಾಟಕ ರಾಜ್ಯದ ಪೂರ್ವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದ್ದಾದರೂ, ಜನರು ಸರ್ಕಾರದ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆಂದು ಹಿಂಸಾಚಾರವನ್ನು ಪ್ರಚೋದಿಸುವ ಸರ್ಕಾರ ಯಾವ ಪ್ರಜಾಪ್ರಭುತ್ವದ ಮೌಲ್ಯವನ್ನೂ ಗೌರವಿಸುತ್ತಿಲ್ಲ ಎಂದು ಶ್ರೀಮತಿ ನಿರ್ಮಲ್ ಕೌರ್ ಆಪಾದಿಸಿದರು. ಒಂದು ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ಗಮನಿಸಬೇಕಾದ ವಿರೋಧ ಪಕ್ಷವನ್ನು, ಅವರ ಬೆಂಬಲಿಗರನ್ನು ದಾರುಣ ರೀತಿಯಲ್ಲಿ ಹಿಂಸಿಸುವುದು ಹೇಗೆ ಪ್ರಜಾಪ್ರಭುತ್ವವೆನಿಸುತ್ತದೆ ಎಂದು ನಿರ್ಮಲ್ ಕೌರ್ ಪ್ರಶ್ನಿಸಿದರು. ನಮ್ಮನ್ನು ಬೆಂಬಲಿಸದಿದ್ದರೆ ನೆತ್ತರಿನ ಹೊಳೆ ಹರಿಯುತ್ತದೆ ಎಂದು ಕೂಗಾಡುತ್ತಿದ್ದ ಗುಂಡಾಗಳು, ತಂದೆಯರ ಎದುರು ಹೆಣ್ಣು ಮಕ್ಕಳ, ಗಂಡನ ಎದುರು ಹೆಂಡತಿಯ, ಮಕ್ಕಳ ಎದುರು ವಯಸ್ಸಾದ ತಾಯಿಯ ಅತ್ಯಾಚಾರ, ಕೊಲೆಗಳು ಬಂಗಾಳದಲ್ಲಿ ನಡೆದದ್ದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಹಲಾಲ್ ನಡೆದಂತೆ ಎಂದು ನುಡಿದರು. ಟ್ಯಾಗೋರ್, ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್ ಅಂತಹ ಧೀಮಂತರು, ಸಮಾಜ ಸುಧಾರಕರು ಹುಟ್ಟಿದ ಬಂಗಾಳದಲ್ಲಿ ಇಂದು ಯಾವುದೇ ಮಾನವೀಯ ಮೌಲ್ಯಗಳು ಉಳಿದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.


ಸ್ಟಾನ್ ಸ್ವಾಮಿಯವರ ಸಾವಿಗೆ ಇಡಿಯ ಭಾರತ ಮಿಡಿಯುವ ರೀತಿ ಒಂದೆಡೆಯಾದರೆ, ಲಕ್ಷಗಟ್ಟಲೆ ಅಮಾಯಕರು ಸಾಯುತ್ತಿದ್ದಾಗ ಪ್ರಗತಿಪರರ, ಮಾನವೀಯ ಹಕ್ಕುಗಳ ಪ್ರತಿಪಾದಕರ ಹೃದಯ ಮಿಡಿಯಲೇ ಇಲ್ಲ. ಪೊಲೀಸ್, ಸರ್ಕಾರ, ಅಧಿಕಾರವಲಯ ಯಾರೂ ಅಮಾಯಕರಿಗೆ ಭದ್ರತೆಯನ್ನು ನೀಡಲಿಲ್ಲ, ಕಡೆಯಪಕ್ಷ ಘಟನಾ ಸ್ಥಳಕ್ಕೆ ತೆರಳಿ ಸಾಂತ್ವಾನವನ್ನೂ ಹೇಳಿಲ್ಲ ಎಂದು ತಮ್ಮ ತನಿಖೆಯನ್ನು ಉಲ್ಲೇಖಿಸಿದರು.

ಮಾನವೀಯ ಹಕ್ಕುಗಳಲ್ಲಿ ವ್ಯಕ್ತಿಯೊಬ್ಬ ತನ್ನ ಇಚ್ಛೆಗೆ ಅನುಗುಣವಾಗಿ ಚುನಾವಣೆಯಲ್ಲಿ ಮತ ಚಲಾಯಿಸಬೇಕೆ ಹೊರತು ಭಯೋತ್ಪಾದನೆಯಿಂದ ಮಂಡಿಯೂರುವಂತೆ ಮಾಡಿದ ಇಂತಹ ಕೃತ್ಯವನ್ನು ಖಂಡಿಸಿದರು.

ನಾಗರಿಕ ಸೇವೆಯಲ್ಲಿ ನಿರತ ಅಧಿಕಾರಿಗಳು ತಮ್ಮ ನಿಯತ್ತನ್ನು ಸಂವಿಧಾನಕ್ಕಿರಿಸದೆ, ರಾಜಕೀಯ ಪಕ್ಷಗಳಿಗೆ, ರಾಜಕೀಯ ನೇತಾರರನ್ನು ಓಲೈಸಲು ನಿಂತರೆ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಪ್ರಶ್ನೆಗೆ ಉತ್ತರಿಸುತ್ತಾ ನಿರ್ಮಲ್ ಕೌರ್ ನುಡಿದರು. ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಡಿ ಅಭದ್ರವಾಗಿರುವುದರಿಂದ ಅಲ್ಲಿಂದ ಭಾರತಕ್ಕೆ ಬಂದು ಇಲ್ಲಿನ ನಾಗರಿಕರನ್ನು ಹಿಂಸಿಸುವ, ಸಿಕ್ಕಿಹಾಕಿಕೊಳ್ಳುವ ಭಯವಿದ್ದಾಗ ಪುನಃ ಸ್ವದೇಶಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ ವಾಪಸ್ಸಾಗಿ ಮತ್ತೊಂದು ಹಿಂಸೆಯಲ್ಲಿ ತೊಡಗುವವರನ್ನು ಮಟ್ಟಹಾಕಬೇಕಿದೆ ಎಂದು ವಾದಿಸಿದರು. ಈ ತರಹದ ಅಸಾಮಾನ್ಯ ಘಟನೆಗಳನ್ನು ಅಸಾಮಾನ್ಯ ರೀತಿಯಲ್ಲೇ ಬಗೆಹರಿಸಬೇಕಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ, ಇಂತಹ ಘಟನೆಗಳನ್ನು ಎದುರಿಸಲು ಕೇಂದ್ರ ಸರ್ಕಾರಕ್ಕಿರುವ ಸೀಮಿತ ಅಧಿಕಾರಗಳನ್ನು ಪರಿಶೀಲಿಸಿ ಗಟ್ಟಿಗೊಳಿಸಬೇಕಿದೆ, ಹಾಗೂ ಇಂತಹವುಗಳನ್ನು ತಡೆಯಲು ಇನ್ನಷ್ಟು ಬಲವನ್ನು ಕಾನೂನು ರೀತ್ಯಾ ಸ್ಥಾಪಿಸುವ ಅಗತ್ಯವಿದೆ ಎಂದು ಡಾ. ಆನಂದ ಬೋಸ್ ಪ್ರಶ್ನೆಯನ್ನು ಉತ್ತರಿಸುತ್ತ ತಿಳಿಸಿದರು. ಒಂದು ರೀತಿಯಲ್ಲಿ ರಾಜಕೀಯ ಹಿಂಸಾಚಾರದ ಜೊತೆಗೆ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವಲಯಗಳ ಪ್ರಭಾವವನ್ನು, ಬೆಂಗಳೂರಿನ ಹಿಂಸಾಚಾರದಲ್ಲಿಯೂ ಕಾಣಿಸಿಕೊಂಡಿದ್ದ ಲ್ಯಾನ್ಡ್ ಜಿಹಾದ್ ಕೂಡ ಬಂಗಾಳದಲ್ಲಿ ಪ್ರಮುಖ ಪಾತ್ರವಹಿಸಿದೆ, ಫಲಿತಾಂಶ ಹೊರಬೀಳುವ ಗಂಟೆಗಳೊಳಗೆ ಬಾಂಬ್, ಪಿಸ್ಟೋಲ್ ಅಟ್ಟಹಾಸ ಮೆರೆಯುತ್ತದೆಂದರೆ ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಮದನ್ ಗೋಪಾಲ್ ಪ್ರಶ್ನೆಯನ್ನು ಉತ್ತರಿಸುತ್ತಾ ತಿಳಿಸಿದರು.

ವರದಿ: ಪ್ರವೀಣ್ ಪಟವರ್ಧನ್

Leave a Reply

Your email address will not be published.

This site uses Akismet to reduce spam. Learn how your comment data is processed.