ಮಂಗಳೂರು : ಮಿಲಿಟರಿಯಾಗಿ ಭಾರತ ಈಗ ಸರ್ವಶಕ್ತವಾಗಿದೆ ಎಂದು ನಿವೃತ್ತ ಮೇಜರ್ ಜ| ಜಿ.ಡಿ.ಬಕ್ಷಿ ಹೇಳಿದರು. ‘ನ್ಯೂ ಇಂಡಿಯಾ: ಎ ರೈಸಿಂಗ್ ಸೂಪರ್ ಪವರ್’ ಎಂಬ ವಿಷಯದಲ್ಲಿ ಸಿಟಿಜನ್ ಮಂಗಳೂರು ಚಾಪ್ಟರ್ ವತಿಯಿಂದ ಮಂಗಳೂರು ಪುರಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ, ಮಾಡಿದರು.

ನಾವು ಮಿಲಿಟರಿ ಸಂಬಂಧಿತ ಶೇ.70ರಷ್ಟು ವಸ್ತುಗಳನ್ನು ಆಮದು ಮಾಡುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ಬದಲಾವಣೆ ಆಗುತ್ತಿದೆ. ಮೇಡ್ ಇನ್ ಇಂಡಿಯಾ ಸಾಕಾರವಾಗುತ್ತಿದೆ. ಸದ್ಯ ದೇಶವು ಜಗತ್ತಿನಲ್ಲೇ ಬಹುಪ್ರಮಾಣದ ಮಿಲಿಟರಿ ಶಕ್ತಿಯಾಗಿ ರೂಪುಗೊಂಡಿದೆ ಎಂದರು.

ಖಲಿಸ್ತಾನ ಹೋರಾಟದ ಹಿಂದೆ ಐಎಸ್‌ಐ ಹಾಗು ಹಲವು ದೇಶದ ಕೈವಾಡ ಸ್ಪಷ್ಟವಾಗಿದೆ.ಪಂಜಾಬ್‌ನಲ್ಲಿ ಡ್ರಗ್ಸ್‌ ಲೋಕವನ್ನೇ ಐಎಸ್ಐ ಸೃಷ್ಟಿಸಿದೆ. ಚೀನಾ ಕೂಡ ತನ್ನ ಮೂಗು ತೂರಿಸುತ್ತಿದೆ.ಇದಕ್ಕೆ ಪೂರಕವಾಗಿ ರಾಜಕೀಯ ವ್ಯತ್ಯಾಸದ ಕಾರಣಕ್ಕಾಗಿ ವಿಭಜನಕಾರಿ ಶಕ್ತಿಗಳೂ ಬಂದಿದೆ. ಆದರೆ ಅದನ್ನು ಸಮರ್ಥವಾಗಿ ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದರು.

“ಚೀನಾ ಹಾಗೂ ಪಾಕಿಸ್ಥಾನ ಜತೆಗೂಡಿ ದಾಳಿ ನಡೆಸಿದರೂ ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗುತ್ತಿದೆ. ಜಗತ್ತು ಒಂದೆಡೆ ಧ್ರುವೀಕರಣಗೊಂಡಿಲ್ಲ. ಬಹುಧ್ರುವೀಕರಣ ಹೊಂದುತ್ತಿದೆ” ಎಂದರು.

ಭಾರತೀಯ ಸೇನೆಯು ಹೆಚ್ಚು ಸ್ವಾವಲಂಬಿಯಾಗುತ್ತಿದೆ. ಇದು ಆತ್ಮ ನಿರ್ಭರತೆಯ ಪರಿಕಲನೆ ಎಂದ ಅವರು, ಭಾರತವನ್ನು ಟೀಕಿಸುವವರು, ಭಾರತದಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸುವವರ ವಿರುದ್ಧ ಕಿಡಿಕಾರಿದರು.

ಕೆಎಂಸಿ ಯುರೋಲಜಿ ವಿಭಾಗ ಮುಖ್ಯಸ್ಥರಾದ ಜಿಜಿ ಲಕ್ಷ್ಮಣ್, ಸಿಟಿಜನ್ಸ್ ಕೌನ್ಸಿಲ್ ಅಧ್ಯಕ್ಷ ಡಾ| ಧನೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆಶಿತ್ ನೋಂಡ, ಸಂಚಾಲಕ ಡಾ| ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.