ಬೆಂಗಳೂರು : “1911ರಲ್ಲಿ ಬಂಗಾಲ ವಿಭಜನೆಯಾದಾಗ ಇಡಿಯ ದೇಶ ಬಂಗಾಲದ ಜೊತೆ ನಿಂತಿತ್ತು, ಪ್ರತಿಭಟನೆಗಳಾದವು, ಆದರೆ ಭಾರತವೇ 1947ರಲ್ಲಿ  ವಿಭಜನೆಯಾದಾಗ ಇಡಿಯ ಭಾರತ ಯಾಕೆ ಸುಮ್ಮನಿತ್ತು?” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಣಿ ಸದಸ್ಯರಾದ ಶ್ರೀ ರಾಮ್‌ಮಾಧವ್ ಅವರು ಹೇಳಿದರು.

ಅವರು ಸೆಪ್ಟೆಂಬರ್23ರಂದು ಬೆಂಗಳೂರಿನ ಐಐಎಸ್ಸಿಯಲ್ಲಿರುವ ಸತೀಶ್ ದವನ್ ಆಡಿಟೋರಿಯಂನಲ್ಲಿ ಅವರ ಪುಸ್ತಕ “ಪಾರ್ಟಿಷನ್ಡ್ ಫ್ರೀಡಂ” ಪುಸ್ತಕವು ಲೋಕಾರ್ಪಣೆಗೊಂಡಿತು. ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವತ್ಥನಾರಾಯಣ ಅವರು ಉಪಸ್ಥಿತರಿದ್ದು ಚಿಂತಕರಾದ ಶ್ರೀ ಕಿರಣ್ ಕೆ.ಎಸ್ ಅವರು ಸಂವಾದವನ್ನು ನಡೆಸಿಕೊಟ್ಟರು.

ರಾಮ್ ಮಾಧವ್ ಅವರು ಮಾತನಾಡುತ್ತಾ ” ಬಂಗಾಲ ವಿಭಜನೆಯಾಗುವಾಗ ಬ್ರಿಟಿಷ್ ಅಧಿಕಾರಿಗಲು ಕೆಲವು ಬಂಗಾಲಿಗಳು ಸಿಟ್ಟಾಗಬಹುದಷ್ಟೆ ಎಂದುಕೊಂಡಿದ್ದರು, ಆದರೆ ಇಡಿಯ ಭಾರತ ಬಂಗಾಲಿಗಳ ಜೊತೆ ಎದ್ದು ನಿಂತಿತು. ವಂದೇಮಾತರಂ ಎಂಬ ಮಂತ್ರ ಇಡಿಯ ಪ್ರತಿಭಟನೆಯನ್ನು ಮೇಲೆತ್ತಿತ್ತು. ಲಾಲಾಲಜಪತ್‌ರಾಯ್,ಬಿಪಿನ್‌ಚಂದ್ರಪಾಲ್, ಬಾಲ ಗಂಗಾಧರ ತಿಲಕರು ತ್ರಿಮೂರ್ತಿಗಳಾಗಿ ಮುನ್ನಡೆಸಿದರು.ಬ್ರಿಡಿಷ್ ಸರಕಾರ ತಲೆಬಾಗಿ ಸ್ವತಃ ಕಿಂಗ್ ಜಾರ್ಜ್ ವಿಭಜನೆಯನ್ನು ಹಿಂದೆ ತೆಗೆದುಕೊಳ್ಳಲು ಭಾರತಕ್ಕೆ ಓಡೋಡಿ ಬಂದ.ಆ ವಿಭಜನೆಯನ್ನು ಭಾರತ ಸಮರ್ಥವಾಗಿ ನಿಭಾಯಿಸಿ ಭಾರತ ಒಗ್ಗಟ್ಟಾಗಿ ನಿಂತಿತು.”

“1940ರಲ್ಲಿ ಲಾಹೋರಿನ ಮುಸ್ಲಿಂ ಲೀಗಿನ ಅಧಿವೇಶನದಲ್ಲಿ ಪಾಕಿಸ್ತಾನದ ಘೋಷಣೆಯಾಯಿತು,1947ರ ಹೊತ್ತಿಗೆ ಭಾರತ ಇಬ್ಭಾಗವಾಯಿತು. ಆ ಏಳು ವರ್ಷಗಳಲ್ಲಿ ಬದಲಾದದ್ದೇನು?  ಹಾಗಾದರೆ 1911ರಿಂದ 1940ರವರೆಗೆ ಬದಲಾದದ್ದೇನು? ಅಷ್ಟೆಲ್ಲ ನಡೆಯುವಾಗ ಭಾರತವೇಕೆ ಎದ್ದು ನಿಲ್ಲಲಿಲ್ಲ?”
” ಈ ಪುಸ್ತಕದಲ್ಲಿ ಇಬ್ಬರು ನಾಯಕರ ಕಥೆಯಿದೆ.ಇಬ್ಬರೂ ಗುಜರಾತಿಗರೇ, ಇಬ್ಬರೂ ಬ್ಯಾರಿಸ್ಟರ್‌ಗಳೇ, ಜಿನ್ನಾ ತನ್ನನ್ನು ತಾನು ಮುಸಲ್ಮಾನ ಗೋಖಲೆ ಎಂದು ಕರೆದುಕೊಂಡಿದ್ದ. ಮುಸಲ್ಮಾನರನ್ನು ಕಾಂಗ್ರೆಸ್ಸಿಗೆ ಹತ್ತಿರ ತರುವಲ್ಲಿ ಅವನ ಪಾತ್ರ ಬಹು ಮುಖ್ಯವಾಗಿತ್ತು. ಆದರೆ ಅವನು ಕಾಂಗ್ರೆಸ್ 1920ರಲ್ಲಿ ಬಿಟ್ಟುಹೋಗಿದ್ದ.ಅದಕ್ಕೆ ಕಾರಣವೂ ವಿಚಿತ್ರವಾಗಿತ್ತು. ಗಾಂಧಿಯವರು ಖಿಲಾಫತ್‌ ಚಳುವಳಿಯಲ್ಲಿ ಮೂಗು ತೂರಿಸಿದ್ದು ತನಗೆ ಇಷ್ಟವಾಗಲಿಲ್ಲವೆಂದು.1935ರವರೆಗೂ ತನ್ನ ಪಾಡಿಗೆ ತಾನಿದ್ದ ಜಿನ್ನಾ ಮತ್ತೆ ಮುನ್ನೆಲೆಗೆ ಬಂದಾಗ ಮುಸಲ್ಮಾನ ರಾಜಕಾರಣದ ನಾಯಕತ್ವ ವಹಿಸಿಕೊಂಡ, ಈ ಪುಸ್ತಕದಲ್ಲಿ ಅವನ ಕತೆಯಿದೆ.”

“ಮತ್ತೊಂದು ಕಡೆ ಗಾಂಧಿಯವರು, ಆಫ್ರಿಕಾದ ಗೆಲುವಿನ ನಂತರ 1915ರಲ್ಲಿ ಭಾರತಕ್ಕೆ ಬಂದವರಿಗೆ ಅನಿಸಿದ್ದು ಮೊದಲು ಹಿಂದೂ ಮುಸಲ್ಮಾನರು ಒಂದಾಗಬೇಕು, ಆನಂತರ ಸ್ವಾತಂತ್ರ್ಯ ಎಂದು.ಇದಕ್ಕಾಗಿಯೇ ಖಿಲಾಫತ್ ಚಳುವಳಿಯ ಅಧ್ಯಕ್ಷರೂ ಆದರು. ಇದಕ್ಕೆ ಬದಲಾಗಿ ಮುಸಲ್ಮಾನ ಸಮಾಜ ಸ್ವಾತಂತ್ರ್ಯ ಚಳುವಳಿಗೆ ಕಾಂಗ್ರೆಸ್ಸಿನ ಕೈಜೋಡಿಸಬೇಕೆಂದು ಬಯಸಿದರು.ಇದೇ ಕಾರಣಕ್ಕೆ ಒಂದಾದ ಮೇಲೆ ಒಂದರಂತೆ ಮುಸಲ್ಮಾನರನ್ನ ಓಲೈಸಲು ಆರಂಭಿಸಿದರು. ಅದು ವಂದೇಮಾತರಂನಿಂದ ಆರಂಭವಾಗಿ ರಾಷ್ಟ್ರ ಧ್ವಜ, ಭಜನೆ, ಭಾಷೆ ಎಲ್ಲದಕ್ಕೂ ವ್ಯಾಪಿಸಿತು. 1925ರಿಂದ 1935ರವರೆಗೆ ಸೆಪರೇಟ್ಎಲೆಕ್ಟೋರೇಟ್ಅನ್ನು ಕಾಂಗ್ರೆಸ್ ಒಪ್ಪಿಕೊಂಡಿತು. ಈ ಓಲೈಕೆಯ ರಾಜಕಾರಣ ಮುಸಲ್ಮಾನರನ್ನ ಕಾಂಗ್ರೆಸ್‌ನ ಹತ್ತಿರಕ್ಕೆ ತರುವ ಬದಲು ದೂರವೇ ಉಳಿಸಿತು, ವಿಭಜನೆಗೂ ಕಾರಣವಾಯಿತು. ಇದು ಮತ್ತೊಬ್ಬ ನಾಯಕನ ಕಥೆ”

” ಸ್ವಾತಂತ್ರ್ಯ ಹೋರಾಟದ ಕೊನೆಯ ದಶಕದಲ್ಲಿ, ಗಾಂಧಿಯವರಿಗೆ ಮೊದಲು ಸ್ವಾತಂತ್ರ್ಯ ಆಮೇಲೆ ಹಿಂದೂ ಮುಸಲ್ಮಾನ ಐಕ್ಯತೆ ಎಂಬುದು ಅರ್ಥವಾಗಿತ್ತು ಆದರೆ ಅದಾಗಲೇ ತಡವಾಗಿತ್ತು. ವಿಭಜನೆಯ ರಾಕ್ಷಸನನ್ನ ಪೋಷಿಸಿಯಾಗಿತ್ತು.ಹೀಗೆ ಮೊದಲು ಸ್ವಾತಂತ್ರ್ಯ ಎಂದ ಜಿನ್ನಾ ವಿಭಜನೆಯಲ್ಲಿ ಕೊನೆಗೊಳುವ ನಿರ್ಧಾರ ಮಾಡಿದ, ಮೊದಲು ಐಕ್ಯತೆ ಎಂದ ಗಾಂಧಿಯವರು ಸ್ವಾತಂತ್ರ್ಯವನ್ನು ಅಭಿಮತವಾಗಿಸಿದರು.”

“ಈ ದುರಂತ ಕಥನದಿಂದ ಎರಡು ಪಾಠಗಳನ್ನು ನಾವು ಕಲಿಯಬೇಕು. ಒಂದು ಈ ದೇಶವನ್ನು ಇಬ್ಭಾಗ ಮಾಡುವ ಬಗೆಗೆ ಯೋಚನೆ ಮಾಡುವವರನ್ನು ಓಲೈಕೆ ಮಾಡುವುದನ್ನು ಬಿಡಬೇಕು. ಮತ್ತು ದೇಶ ಯಾವ ನಾಯಕನ ಮೇಲೂ ಅವಲಂಬಿತವಾಗದೆ ಬಹಳ ಜಾಗರೂಕವಾದ ಸಮಾಜವಾಗಿ ದೇಶದ ಐಕ್ಯತೆಗಾಗಿ ಹೆಜ್ಜೆಯಿಡಬೇಕು”

Leave a Reply

Your email address will not be published.

This site uses Akismet to reduce spam. Learn how your comment data is processed.