– ಸಿ ಬಿ ಶೈಲಾ ಜಯಕುಮಾರ್, ಚಿತ್ರದುರ್ಗ.
ಅಂತರಾಷ್ಟ್ರೀಯ ಅನುವಾದ ದಿನದ ಪ್ರಯುಕ್ತ ಈ ಲೇಖನ.
‘ಬಾಹುಬಲಿ ‘ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಸದ್ದು ಮಾಡಿದ , ತೆಲುಗು ಭಾಷೆಯಲ್ಲಿ ಸಿದ್ದವಾದ , ಚರಿತ್ರಾರ್ಹ ದಾಖಲೆ ಮಾಡಿದ ಮಹಾನ್ ಭಾರತೀಯ ಸಿನಿಮಾ. ನಿರ್ದೇಶನ, ನಟನೆ, ಸಂಗೀತ , ಸಾಹಿತ್ಯ,ಚಿತ್ರಕಥೆ, ವಸ್ರಾಭರಣ, ಫ಼ೈಟ್ ಗಳು, ತಂತ್ರಜ್ಞಾನ… ಹೀಗೆ ಯಾವುದೇ ಕೋನದಲ್ಲಿ ನೋಡಿದರೂ ಕಣ್ಣುಗಳಿಗೆ ಹಬ್ಬವುಂಟು ಮಾಡುವ, ಅದ್ವಿತೀಯ ಎನಿಸುವಂತಹ ಸಿನಿಮಾ.ಆದರೆ ತೆಲುಗು ಭಾಷಿಕರಲ್ಲದವರಿಗೆ ಸಿನಿಮಾವನ್ನು ಸಂಪೂರ್ಣವಾಗಿ ಸುಖಿಸಲು ಸಾಧ್ಯವೇ? ನಮ್ಮದೇ ಮಾತೃಭಾಷೆಯಲ್ಲಿ ಇದ್ದಿದ್ದರೆ ಎಷ್ಟೊಂದು ಚೆಂದವಿರುತ್ತಿತ್ತಲ್ಲವೇ? ಸಾವಿರ ಸಲ ಅಂದ್ಕೊಂಡಿದ್ದೆ.
ಆ ದಿನವೂ ಬಂದೇ ಬಿಟ್ಟಿತು.
ಅದೇ ಸಿನಿಮಾ ,
ಅದೇ ನಟರು ,
ಅದೇ ನಿರ್ದೇಶನ, ಎಲ್ಲವೂ ಅದೇ. ಬದಲಾದ ಭಾಷೆಯೊಂದನ್ನು ಬಿಟ್ಟು.(ಡಬ್ಬಿಂಗ್)
ಸಿನಿಮಾ ಹೃದ್ಯವಾಯಿತು. ಅದರ ಗುಂಗು ಮತ್ತೆರಡು ದಿನ ಹಾಗೇ ಉಳಿಯಿತು. ಮಾತೃಭಾಷೆಯ ಮೋಡಿ, ತಾಕತ್ತೇ ಅಂತಹದಲ್ಲವೇ?
ಕುವೆಂಪುರವರ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕೃತಿ
‘ ಶ್ರೀ ರಾಮಾಯಣ ದರ್ಶನಂ’ ಅಧ್ಯಯನ ಮಾಡುವಾಗ, ಆ ಸಂಸ್ಕೃತ ಭೂಯಿಷ್ಟ ಸಾಲುಗಳು ಸರಾಗ ಓದುವಿಕೆಗೆ ಭಂಗ ತಂದು , ಇನ್ನಷ್ಟು ಸರಳವಾಗಿರಬಾರದಿತ್ತೇ ಎಂದೆನಿಸಿದ್ದು ಹಲವಾರು ಬಾರಿ.
ದೇ ಜವರೇಗೌಡರು ,
‘ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ’ ಎಂಬ ಹೆಸರಿನಲ್ಲಿ ಅದನ್ನು ಸರಳ್ಗನ್ನಡದಲ್ಲಿ ರಚಿಸಿದಾಗ ಮೂಲವನ್ನೇ ಓದಿದಷ್ಟೇ ಸಂತೃಪ್ತಿಯಾಯಿತು.(ಆಂತರಿಕ ಭಾಷಾಂತರ)
ತರಾಸು ಅವರ ಕಾಲ್ಪನಿಕ ಕಾದಂಬರಿ ‘ಹಂಸಗೀತೆ’ ಓದುವಾಗ ಕಥಾನಾಯಕನ ಬಡತನ,ಸಂಗೀತದ ಗೀಳು, ಗುರುವಿನ ಅನ್ವೇಷಣೆ , ಯೌವ್ವನದ ಆಕರ್ಷಣೆ , ಭಕ್ತಿಯ ಪರಾಕಾಷ್ಟತೆ ನನ್ನ ಕಲ್ಪನೆಯಲ್ಲಿ ಜಾಗೃತವಾಗಿ, ಮನುಷ್ಯರ ಆಕಾರ ತಳೆದು, ಕೊರಳೆತ್ತಿದಂತೆ ಭಾಸವಾಗುತ್ತಿತ್ತು. ನಂತರ ಜಿ ವಿ ಅಯ್ಯರ್ ಅವರ ನಿರ್ದೇಶನದ ಹಂಸಗೀತೆ ಸಿನಿಮಾ, ನನ್ನ ಕನಸನ್ನು ಸಾಕಾರಗೊಳಿಸಿತು. ಮಾಧ್ಯಮ ಬೇರೆಯದೇ ಆದರೂ ಕಲೆಯ ರೂಪಾಂತರವಾದರೂ ಅಂತರಂಗ ಬದಲಾಗಲಿಲ್ಲ. ಮುದ್ರಣ ಮಾದ್ಯಮ , ಸೆಲ್ಲ್ಯೂಲಾಯ್ಡ್ ಮಾಧ್ಯಮವಾಗಿ ಆಕಾರ ಬದಲಿಸಿದಾಗ ಸಂವೇದನೆ , ಸ್ಪಂದನೆಗಳು ಇಮ್ಮಡಿಯಾದವು.( ಅಂತರ್ ಸಂಜ್ಞಾ ವ್ಯವಸ್ಥೆಯ ಭಾಷಾಂತರ)
ಒಮ್ಮೆ ಹಂಪೆಗೆ ಹೋದಾಗ ಹಜಾರ ರಾಮ ದೇವಾಲಯದ ಸುಂದರ ಗೋಡೆ ಕೆತ್ತನೆಗಳು ರಾಮಾಯಣ ಮಹಾಕಾವ್ಯವನ್ನು ಸ್ಮರಣೆಗೆ ತಂದವು. ಮಹಾಕವಿ ವಾಲ್ಮೀಕಿ , ಮಸಿಯಲ್ಲಿ ಅದ್ದಿ ನವಿಲುಗರಿಯಿಂದ ತಾಡ ಓಲೆಗಳ ಮೇಲೆ ಬರೆದಿದ್ದನ್ನು , ಶಿಲ್ಪಿಯೊಬ್ಬ ಉಳಿ, ಚಾಣಗಳ ಮೂಲಕ ಕಲ್ಲಿನ ಮೇಲೆ ಮಹಾಕಾವ್ಯಗಳ ಪ್ರಸಂಗಗಳನ್ನೇ ರಚಿಸಿದ್ದ. ಭೌತಿಕ ಆಕಾರ ಬದಲಾದರೂ ಮೂಲದ ಬೌದ್ಧಿಕತೆಗೆ ಚ್ಯುತಿ ಬರಲಿಲ್ಲ. (ಅಂತರ್ಸಂಬಂಧಿ ಭಾಷಾಂತರ)
ಈ ಮೇಲಿನ ನಾಲ್ಕೂ ಉದಾಹರಣೆಗಳನ್ನು ಸಾಹಿತ್ಯಕ ಪರಿಭಾಷೆಯಲ್ಲಿ ತರ್ಜುಮೆ, ಭಾಷಾಂತರ, ರೂಪಾಂತರ ಅಥವಾ ಅನುವಾದವೆನ್ನುತ್ತೇವೆ.
ವಿವಾದಕ್ಕೆಡೆಗೊಡದೆ ಅನುವಾಗಿ ಅಂದರೆ ಚೊಕ್ಕವಾಗಿ ಅಪಚಾರವಾಗದಂತೆ, ತುಂಬು ಘನತೆಯಿಂದ ಸತ್ಯ ಹಾಗೂ ಸತ್ವವನ್ನುಳಿಸಿಕೊಂಡು ಭಾಷೆ ಮತ್ತು ಅಪರೂಪಕ್ಕೊಮ್ಮೆ ವೇಷವನ್ನು ಅಲ್ಪ ಸ್ವಲ್ಪ ಬದಲಿಸಿಕೊಳ್ಳುವುದೇ ಅನುವಾದ.
ಒಂದು ಭಾಷೆ ಅಥವಾ ಸಾಹಿತ್ಯ ಬೆಳೆಯಬೇಕಾದರೆ ಅದರ ಫ಼ರಿಧಿ ವಿಸ್ತಾರವಾಗಬೇಕು. ಫ಼ರಿಧಿ ವಿಸ್ತಾರವಾಗಬೇಕೆಂದರೆ ಭಾಷೆಯನ್ನಾಡುವವರ ಸಂಖ್ಯೆಯ ಹೆಚ್ಚಳವಾಗಬೇಕು. ಇಲ್ಲವಾದರೆ ತನ್ನದಲ್ಲದ ಜಾಗದಲ್ಲಿ ತನ್ನಿರುವಿಕೆಯನ್ನು ಗುರುತಿಸುವಂತೆ ಸ್ವಂತಿಕೆಯಿಂದ , ಪರಿಮಳ ಬೀರುತ್ತ ಮುನ್ನೆಡೆಯಬೇಕು. ಭಾಷಾಂತರ ಇದಕ್ಕೆ ಸಹಕಾರಿ.
ಭಾಷಾಂತರವೆಂದರೆ ಅದೊಂದು ವಿಶಿಷ್ಟ ಪ್ರಕ್ರಿಯೆ.ಒಂದು ಭಾಷೆಯ ಮಾತು ಅಥವಾ ಬರವಣಿಗೆಯನ್ನು, ಮತ್ತೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಮಾರ್ಪಾಟು ಮಾಡುವುದು . ಭಾಷಾಂತರ ಭಾಷೆಯಷ್ಟೇ ಹಳೆಯದು. (ನಮ್ಮ ಹಳೆಗನ್ನಡದ ಬಹಳಷ್ಟು ಕವಿವರೇಣ್ಯರು ,ತಮ್ಮ ಕಾವ್ಯಗಳಿಗೆ ಸಂಸ್ಕೃತದ ಕಾವ್ಯಗಳನ್ನು ಆಶ್ರಯಿಸಿದ್ದಾರೆ.)
ಭಾಷಾಂತರ ಕ್ರಿಯೆ ಅದೊಂದು ಸಾಂಸ್ಕೃತಿಕ ಸೇತುವೆ. ಸಂವಹನ ಮಾಧ್ಯಮ. ಹಲವು ಭಾಷಿಗರನ್ನು, ದೇಶಿಗರನ್ನು, ಸಂಸ್ಕೃತಿಗಳನ್ನು ಒಂದೆಡೆ ಬೆಸೆಯುವ ಮತ್ತು ಆ ಮೂಲಕ ಭಾವೈಕ್ಯವನ್ನು ಸಾಧಿಸಲು ಹಾಗೂ ‘ವಸುದೈವ ಕುಟುಂಬ’ ಎಂಬ ಆದರ್ಶದತ್ತ ಹೆಜ್ಜೆ ಹಾಕಲು ಪೂರಕವಾಗುವಂತಹದು.
ಅನುವಾದವೆನ್ನುವುದು ಈಗಾಗಲೇ ಸೃಷ್ಟಿಯಾಗಿರುವ ಕೃತಿಯ ಅನುಸೃಷ್ಟಿ ಅಥವಾ ಮರು ಸೃಷ್ಟಿ. ಸೃಜನಶೀಲತೆಯ ಇನ್ನೊಂದು ಆಯಾಮವಿದು.
ಸಾಹಿತ್ಯ ಪರಿಚಾರಿಕೆ, ಅವಧಾನ ಎಂತಲೂ ಹೇಳಬಹುದು.
ಅನುವಾದವೆಂದರೆ,ಕೇವಲ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅಕ್ಷರಗಳ ಜೋಡಣೆಯಲ್ಲ. ಒಂದೊಳ್ಳೆಯ ಅನುವಾದಕ್ಕೆ ಬಹಳ ಮುಖ್ಯವಾಗಿ ಬೇಕಾದದ್ದು ವಿಶ್ಲೇಷಣೆ, ನಿಷ್ಠೆ ಮತ್ತು ಪಾರದರ್ಶಕತೆ.
ತರ್ಜುಮೆ ತುಂಬಾ ತಾಳ್ಮೆ ,ಪರಿಶ್ರಮ ಮತ್ತು ಏಕಾಗ್ರತೆಯನ್ನು ಬೇಡುವ ಕಾರ್ಯ.
ಅನುವಾದವೆಂದರೆ , ನಮ್ಮದೇ ಮಗುವನ್ನು ನಮಗಿಷ್ಟ ಬಂದ ಹಾಗೆ ಅಲಂಕರಿಸಿ ಸಂಭ್ರಮಿಸಿದಂತಲ್ಲ, ನಮ್ಮ ಸುಪರ್ದಿಗೆ ಬಿಟ್ಟ ಇತರೆಯವರ ಮಕ್ಕಳನ್ನು ಅಲಂಕರಿಸಿದಂತೆ! ಬಲು ದೊಡ್ಡ ಹೊಣೆ. ಹೆತ್ತವರ ಮನಸ್ಥಿತಿಯನ್ನು ಅರಿತು ಅವರಿಗೂ ಚೆಂದ ಕಾಣಿಸುವಂತೆ, ಮಗುವನ್ನು ಶೃಂಗರಿಸುವ ಬಲು ಪ್ರೀತಿಯಿಂದ, ಎಚ್ಚರಿಕೆಯಿಂದ, ಸಂಭಾಳಿಸಬೇಕಾದ ಗುರುತರವಾದ ಜವಾಬ್ದಾರಿ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಶಬ್ದ ಕೋಶ , ಪಡೆನುಡಿಗಳು ,ಗಾದೆಗಳು , ವಾಕ್ಯ ರಚನಾ ಸ್ವರೂಪಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ಅರಿಯುವ ಪ್ರಯತ್ನವಾಗಬೇಕು.
The child is four years old ಎಂಬುದನ್ನು ಆ ಮಗು ನಾಲ್ಕು ವರ್ಷದ ಮುದುಕನಾಗಿದ್ದ ಎಂದೂ,
‘vacant posts’ ಎನ್ನುವುದನ್ನು ‘ಖಾಲಿ ಟಪಾಲುಗಳು’ ಎಂದೂ , ‘Malabar café ’ಯನ್ನು
‘ಮಲ ಬಾರದವರ ಕೆಫ಼ೆ’ ಎಂದೂ ಅನುವಾದಿಸಿದರೆ ಮೂಲದ ಗತಿಯೇನು? ಇಂತಹ ಭಾಷಾಂತರಗಳು ಅಪಹಾಸ್ಯಕ್ಕೆ ಎಡೆ ಮಾಡುತ್ತವೆ.
ಪ್ರತಿ ಪದಕ್ಕೂ ರೂಪ , ಅರ್ಥ , ತೂಕ ಇರುತ್ತದೆ ಎಂಬುದು ಗಮನದಲ್ಲಿರಬೇಕು.
ಕನ್ನಡದಲ್ಲಿ ರಾಮನು ಕಾಡಿಗೆ ಹೋದನು.
ಕಾಡಿಗೆ ಹೋದನು ರಾಮ.
ಹೋದನು ರಾಮ ಕಾಡಿಗೆ…ಎಂತಲೂ ಬರೆಯಬಹುದು. ಆದರೆ ಇಂಗ್ಲಿಷ್ನಲ್ಲಿ ಹೀಗೆ ಸಾಧ್ಯವೇ?Rama went to forest ಎನ್ನುವುದನ್ನು ಯಾವ ರೀತಿಯಲ್ಲೂ ಬದಲಾಯಿಸಲಾಗದಲ್ಲವೇ?
ಹೀಗಾಗಿ ಅನುವಾದಿಸುವಾಗ ವಾಕ್ಯ ರಚನೆಯ ಸೂತ್ರ – syntax ಕೂಡಾ ಬಹಳ ಮುಖ್ಯ.
ಭಿನ್ನ ಸಂಸ್ಕೃತಿಯ ಗೆಳೆಯರಿಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತ ಹೋಗುತ್ತಿರುವಾಗ ಒಬ್ಬರು, ದೂರದಲ್ಲಿದ್ದ ಬಾಲಕನ ಕಡೆ ಬೆರಳು ತೋರಿಸಿ ‘ಅವನು ವಾರಾನ್ನದ ಹುಡುಗ’ ಎಂದರು. ಆ ಮಾತು ಇನ್ನೊಬ್ಬನಿಗೆ ಅರ್ಥವಾಗಲಿಲ್ಲ…
“Does he eat once in a week ?” ಎಂದು ಕುತೂಹಲ, ಆಶ್ಚರ್ಯದಿಂದ ಕೇಳಿದರು. (ವಾರಾನ್ನವೆಂದರೆ…ಬಡ ವಿದ್ಯಾರ್ಥಿಗಳಿಗೆ, ಹೃದಯವಂತರು ವಾರದಲ್ಲೊಂದು ದಿನ ಉಚಿತವಾಗಿ ಊಟ ಹಾಕುವ ಪದ್ದತಿ) ವಾರಾನ್ನದ ಕಲ್ಪನೆಯೇ ಇಲ್ಲದವರ ಪ್ರಶ್ನೆಯದು…ಹಾಗಾಗಿ ಇಂತಹ ಸಂದರ್ಭಗಳಲ್ಲಿ ಪ್ರಾದೇಶಿಕ, ಸಾಂಸ್ಕೃತಿಕ ಹಿನ್ನೆಲೆಯ ಕೊಂಚ ಜ್ಞಾನ ಬೇಕಾಗುತ್ತದೆ. ಆದ್ದರಿಂದ ಅಡಿ ಟಿಪ್ಪಣಿಗಳನ್ನು( foot notes) ಕೊಡುವುದು ವಿಹಿತವೆನಿಸುತ್ತದೆ.
A black sheep ಎಂದರೆ ದುರುಳ…
ಕಪ್ಪು ಕುರಿ ಎಂದು ತರ್ಜುಮೆ ಮಾಡಿದರೆ ಹೇಗೆ?
A big gun ಎಂದರೆ ಗಣ್ಯ ವ್ಯಕ್ತಿ…
ದೊಡ್ಡ ಬಂದೂಕು ಎಂದು ಅನುವಾದಿಸಿದರೆ ಚೆಂದವೇ?
ಅನುವಾದಕ್ಕಾಗಿ ಅನುವಾದವಲ್ಲ. ಅನುವಾದವೆಂಬುದು ಆ ಭಾಷೆಯಲ್ಲಿ ಅಂತರ್ಗತವಾದ ಸಹಜ ಧ್ವನಿಯಾಗಿ ಹೊರಹೊಮ್ಮಬೇಕು.
ಕನ್ನಡದ ಕಣ್ವ ಬಿ ಎಂ ಶ್ರೀಯವರು ‘ಅವಳ ತೊಡುಗೆ ಇವಳಿಗಿಟ್ಟು’ ಹಾಡಬಯಸಿದರು.
ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭಿಪ್ರಾಯದಂತೆ , ಅನುವಾದವೆಂದರೆ “ಬೇರೆ ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸಿದಂತೆ. ಬೇರೆಯವರ ಭಾವನೆಗಳನ್ನು ಆವಾಹಿಸಿಕೊಂಡು ಅರ್ಥೈಸುವುದು”
ಅನುವಾದವೆನ್ನುವುದು ಒಂಥರಾ ಪರಕಾಯ ಪ್ರವೇಶ ಇದ್ದಂತೆ. ನಮ್ಮನ್ನು ಬಿಟ್ಟು ಅವರೊಳಗೆ ಹೋಗಿ , ಮತ್ತೆ ನಮ್ಮೊಳಗೆ ವಾಪಾಸಾಗಿ, ಮೂಲ ಭಾವಕ್ಕೆ ನಿಷ್ಟರಾಗಿ , ಮೂರ್ತ ರೂಪವನ್ನು ಕೊಡುವುದು.
ಯಾವುದೇ ಕೃತಿಯನ್ನು ಭಾಷಾಂತರಿಸುವ ಮುನ್ನ , ಅನುವಾದಕರು ಸಾಕಷ್ಟು ಹೋಂ ವರ್ಕ್ ಮಾಡಿಕೊಳ್ಳಬೇಕು.ಇತರರ ಸಲಹೆ, ಸೂಚನೆಗಳನ್ನು ಪರಾಂಬರಿಸಬಹುದು. ಭಾಷಾ ಜ್ಞಾನದ ಜೊತೆಗೆ ವಿಷಯದ ಪರಿಜ್ಞಾನವೂ ತೀರಾ ಅವಶ್ಯ.ಹಲವಾರು ಶಬ್ದಕೋಶಗಳ ಪರಿಶೀಲನೆಯೂ ಅನಿವಾರ್ಯ.
‘ಮಲೆಗಳಲ್ಲಿ ಮದುಮಗಳು’ ಎಂಬುದನ್ನು ‘ಕೊಂಡಲಮೊ ಪೆಳ್ಳಿ ಕುಸುರು’ ಎಂದರೆ ಸಮಂಜಸವೇ?ಆಯಾಯಾ ಭಾಷೆಯ ಜೀವಧ್ವನಿಯನ್ನು ಗುರುತಿಸಬೇಕು.
ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಗೆ ಅನುವಾದಿಸುವಾಗ ಅವರ ಅಂಕಿತನಾಮ , ‘ಕೂಡಲಸಂಗಮದೇವಾ’ ಎನ್ನುವುದನ್ನು, confluence of rivers ಎಂದರೆ ಸಹ್ಯವಾದೀತೇ? ನಾಮಪದಕ್ಕೆ ಅನುವಾದದ ಹಂಗು ಬೇಕೆ?
ಅನುವಾದವೆನ್ನುವುದು ಅಷ್ಟು ಸುಲಭವಲ್ಲ. ನಿಘಂಟುಕಾರ ಜಾನ್ಸನ್, “ಅನುವಾದಕ ಸಂಪೂರ್ಣ ಅರ್ಥವನ್ನು ಕಾಯ್ದುಕೊಂಡು ಬರೆದರೂ,ಮೂಲದ ಪರಿಣಾಮದ ಅಲ್ಪಾಂಶವಾದರೂ ಭಾಷಾಂತರದಲ್ಲಿ ನಷ್ಟವಾಗುತ್ತದೆ” ಎನ್ನುತ್ತಾನೆ.
ಸೃಷ್ಟಿಕರ್ತ… ಮೈಮರೆತರೂ ಅದು ಸೃಜನಶೀಲತೆಯಾದೀತು…ಆದರೆ ಅನುವಾದಕ , ಮರುಸೃಷ್ಟಿಕರ್ತ ಸದಾ ಜಾಗರವಿದ್ದು ನೆಟ್ಟ ಭಾಷಾ ಸಸಿಯ ಸಲಹಬೇಕು.
ಗ್ರಹಿಕೆಯಲ್ಲಿ ಹಾಗೂ ಅಭಿವ್ಯಕ್ತಿಯಲ್ಲಿ ಪ್ರತಿಭೆ , ಪರಿಶ್ರಮ, ಪಾಂಡಿತ್ಯ ಮತ್ತು ಅನ್ವೇಷಣಾ ಪ್ರವೃತ್ತಿಗಳ ಸಮಾಗಮವಾದಾಗಲೇ ಅನುವಾದ ಕಲೆಯಾಗಿ ಅರಳುತ್ತದೆ.
ಭಾಷಾಂತರಕಾರನ ಗ್ರಹಿಕೆಯಲ್ಲಿ ಸೂಕ್ಷ್ಮತೆ ಇಲ್ಲದಿರೆ ಮೂಲಕ್ಕೆ ಗ್ರಹಣ ಬಡಿಯುತ್ತದೆ. ಭಾಷಾ ಪ್ರಭುತ್ವ ಇಲ್ಲದಿರೆ ಮೂಲದ ಜೀವಂತಿಕೆ,ತಾಜಾತನ ಕಳೆದುಕೊಂಡು ಶವವಾಗುತ್ತದೆ. ಶಬ್ದಾಡಂಬರದಲ್ಲಿ ಮಿಂದರೆ,ವಸ್ತು ಸತ್ತು ಸುಣ್ಣವಾಗಿ , ಸಮಾಧಿಯಾಗುತ್ತದೆ. ಹಾಗಾಗಿ ಅನುವಾದಕ ಅತಿರೇಕಕ್ಕೆ ಜಾರದಂತೆ ಸಮಚಿತ್ತತೆಯನ್ನು ಕಾಪಾಡಿಕೊಳ್ಳಬೇಕು.
ಭಾಷೆ ಕೇವಲ ದೇಹವಿದ್ದಂತೆ.ವಸ್ತು ಆತ್ಮವಿದ್ದಂತೆ. ಆತ್ಮಗೌರವಕ್ಕೆ ಧಕ್ಕೆಯಾಗದೆ ದೇಹಾಂತರ ಹಾಗೂ ಭಾಷಾಂತರ ಕಾರ್ಯವಾದರೆ ಅದೊಂದು ಆದರ್ಶದ ಉಚ್ಛ್ರಾಯ ಸ್ಥಿತಿ.
ಅನುವಾದಗಳಿಂದ ಭಾಷಾ ಸಾಹಿತ್ಯಗಳು ಶ್ರೀಮಂತ ಆಗುವುದರೊಂದಿಗೆ ವಾಚನಾಭಿರುಚಿಯೂ ಉತ್ತಮವಾಗಿ , ಭಾಷೆಯ ಫ಼ರಿಧಿಯೂ ವಿಸ್ತಾರವಾಗುತ್ತದೆ.
ನೊಬೆಲ್ ಪ್ರಶಸ್ತಿಗೆ ಕೃತಿಯನ್ನು ಆಯ್ಕೆ ಮಾಡುವಾಗ,ಅದು ಇಂಗ್ಲೀಷಿಗೆ ಅನುವಾದವಾಗಿರಬೇಕು. ಪ್ರಶಸ್ತಿ ನಿರ್ಣಾಯಕರ ಮಂಡಳಿ ಪ್ರಾದೇಶಿಕ ಭಾಷೆಯನ್ನು ಅರ್ಥೈಸಿಕೊಳ್ಳುವುದೇ ಹಾಗೆ. ರವೀಂದ್ರನಾಥ ಠಾಗೋರ್ ಅವರು ತಮ್ಮ ಬೆಂಗಾಳಿ ಭಾಷೆಯಲ್ಲಿದ್ದ ‘ಗೀತಾಂಜಲಿ’ ಯನ್ನು ಇಂಗ್ಲಿಷ್ ಗೆ ಅನುವಾದಿಸಿದ್ದರಿಂದಲೇ,ಮಂಡಳಿ ಚಿಕಿತ್ಸಕ ದೃಷ್ಟಿಯಿಂದ ಪರಿಶೀಲಿಸಲು, ಮೌಲ್ಯ ನಿರ್ಣಯಿಸಲು ಸಾಧ್ಯವಾಗಿ ಜಾಗತಿಕ ಮಟ್ಟದಲ್ಲಿ ಭಾರತೀಯನಿಗೆ ನೊಬೆಲ್ ಪ್ರಶಸ್ತಿ ದೊರಕುವಂತಾಯಿತು.
ರಷ್ಯಾದೇಶದ ಮಹಾನ್ ಕಾದಂಬರಿಕಾರ ಟಾಲ್ಸ್ಟಾಯ್ ನ ದೇಶಾತೀತ , ಧರ್ಮಾತೀತ ಹಾಗೂ ಕಾಲಾತೀತ ಕಾದಂಬರಿಗಳಾದ Resurrection , ಮತ್ತು War and Peace ಬೃಹತ್ ಗ್ರಂಥಗಳನ್ನು ದೇ ಜ ಗೌ , ತಮ್ಮ ಅರವತ್ತನೆಯ ವಯಸ್ಸಿನಲ್ಲಿ, ಕನ್ನಡೀಕರಿಸಿದ ಬಳಿಕ ,
“ It is nerve wracking , one should not undertake such a task” ಎಂದರು.(ಇದು ಅಂತರ ಭಾಷಾಂತರ) ಜವರೇಗೌಡರು ಅನುವಾದಿಸದಿದ್ದರೆ ಕನ್ನಡ ಸಾಹಿತ್ಯಕ್ಕೆ ನಷ್ಟವಾಗುತ್ತಿತ್ತು ಎಂಬುದು ನಿಜವೇ. ಉತ್ತಮ ವಿಚಾರಗಳು ಯಾವ ಭಾಷೆಯಿಂದ ಬಂದರೂ ,
ಸ್ಪಂದಿಸುವ ಓದುಗರಿದ್ದಾರೆ.
ಅನುವಾದ ಕ್ಷೇತ್ರದಲ್ಲಿ
ಎಸ್ ವಿ ಪರಮೇಶ್ವರ ಭಟ್ಟರದು ಅಸಾಮಾನ್ಯ ಸಾಹಸ ಮತ್ತು ಸಾಧನೆ, ಅಕ್ಷರಶಃ ಮೈಲುಗಲ್ಲು!
ಭಾಸ , ಕಾಳಿದಾಸರ ಎಲ್ಲಾ ಕೃತಿಗಳನ್ನು ಸವಾಲೆಂಬಂತೆ, ಅನುವಾದಿಸಿದ ಅದ್ವಿತೀಯ ಪಂಡಿತರು ಭಟ್ಟರು. ಅನುವಾದದ ಬಗೆಗೆ ಮುಖ ಗಂಟಿಕ್ಕುವ ಹಾಗೂ ಸೃಜನಶೀಲ ಕ್ರಿಯೆಯಲ್ಲ ಎನ್ನುವವರಿಗೆ ಭಟ್ಟರು ಒಂದು ಚೌಪದಿಯ ಮೂಲಕವೇ ಜವಾಬು ನೀಡುತ್ತಾರೆ.
“ಅನುವಾದವೆಂದರೆ ಮೌಲ್ಯವು ಕಡಿಮೆಯೇ
ಓದಿದವರಿಗೆ ಅರಿವು
ಕಡ ತಂದ ಕೊಡಲಿಯ ಹರಿತವು ಕಡಿಮೆಯೇ
ಕಡಿದರೆ ಬೀಳದೆ ಮರವು” ಎಂದು ಪರಿಣಾಮಕಾರಿ ಅನುವಾದಗಳ ಮೌಲ್ಯವನ್ನು ಅಧಿಕಗೊಳಿಸುತ್ತಾರೆ.
ಭಾಷೆಯ ಮಿತಿಯನ್ನು ಮೀರುವ ತವಕವೇ ಅನುವಾದ . ಭಾಷಾಂತರವೆಂಬ ಮಹಾನ್ ಸಾಗರಕ್ಕೆ ಭಾಷಾ ಹೊನಲುಗಳು ತಮ್ಮ ಹರಿವನ್ನು ಮೀರಿ ಶರಧಿಯತ್ತ ಧಾವಿಸುವುದು ಹೆಚ್ಚಳವಾಗುತ್ತಲೇ ಇದೆ.
ಕರ್ನಾಟಕದಲ್ಲಿ ಕುವೆಂಪು ಭಾಷಾ ಭಾರತಿ ತರ್ಜುಮೆಯ ಕ್ರಿಯೆಯಲ್ಲಿ ಸಕ್ರಿಯವಾಗಿದೆ. ಭಾಷೆಯ ಮಿತಿಯನ್ನು ದಾಟಿ, ಎಲ್ಲರೊಳೊಂದಾಗುವ ಕ್ರಿಯೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ.
ಇತ್ತೀಚೆಗೆ ವೆಬ್ ಆಧಾರಿತ ಅನುವಾದಗಳು ಬರುತ್ತಿವೆಯಾದರೂ , ಮಾನವ ಅನುವಾದವು ಲಭ್ಯವಿರುವ ಅತ್ಯಂತ ವಿಶ್ವಾಸಾರ್ಹ ಮತ್ತು ನಿಖರವಾದ ಅನುವಾದವಲ್ಲವೇ?