ಸ್ವಾತಂತ್ರ್ಯ ಸಾಧನೆಗೆ ಒದಗಿದ್ದ ಆ ಆತ್ಮಬಲವನ್ನು ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಆವಾಹಿಸಲಾದೀತೇ?

– ಲೇಖನ : ಚೈತನ್ಯ ಹೆಗಡೆ, ಪತ್ರಕರ್ತರು

ಸ್ವಾತಂತ್ರ್ಯ ದಿನಾಚರಣೆ ಎಂಬ ಪದದೊಂದಿಗೆ ಎಷ್ಟೆಲ್ಲ ಭಾವಗಳು ಬೆರೆತುಕೊಂಡಿವೆ. ಆಗಸ್ಟ್ 15 ಎಂಬುದು ಕೇವಲ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ದಿನವಷ್ಟೇ ಆಗಿದ್ದರೆ ಬಹುಶಃ ಕೆಲವೇ ದಶಕಗಳಲ್ಲಿ ಆ ದಿನಾಚರಣೆ ತನ್ನ ಸ್ವಾರಸ್ಯ ಬತ್ತಿಸಿಕೊಂಡುಬಿಡುತ್ತಿತ್ತೇನೋ. ಸ್ವಾತಂತ್ರ್ಯ ಎಂಬ ಶಬ್ದದಲ್ಲಿ ನಮ್ಮ ಹಿರಿಯರು ಮಾಡಿದ ಪ್ರಾಣತ್ಯಾಗವಿದೆ, ಗುಲಾಮಿತನದ ಸಂಕೋಲೆಗಳಿಂದ ಬಿಡಿಸಿಕೊಂಡಿದ್ದರ ಸಂಭ್ರಮವಿದೆ, ಭಾರತೀಯರೆಂದರೆ ಆಳಿಸಿಕೊಳ್ಳುವುದಕ್ಕೆ ಮಾತ್ರ ಎಂಬ ಅವತ್ತಿನ ವಿಶ್ವದ ಅಭಿಪ್ರಾಯವನ್ನು ಬದಲಿಸಿದ ಆತ್ಮವಿಶ್ವಾಸದ ಕುರುಹು ಅಲ್ಲಿದೆ, 1947ರಿಂದ ಇಲ್ಲಿಯವರೆಗೆ ಹೇಗೆಲ್ಲ ಬೆಳೆದುಬಂದೆವು ಅಂತ ಪರಾಮರ್ಶಿಸುವುದಕ್ಕೆ ಹಾಗೂ ಮುಂದಿನ ದಾರಿ ಹೇಗಿರಬೇಕೆಂದು ಕಂಡುಕೊಳ್ಳುವುದಕ್ಕೆ ರೆಫರೆನ್ಸ್ ಬಿಂದುವಾಗುವ ದಿನಾಂಕವಿದೆ…. ಹೀಗೆ ವಿವರಿಸಿದಷ್ಟೂ ಹಿಗ್ಗುತ್ತ ಹೋಗುವ ಪದರಗಳಿವೆ.

ಹಾಗೆ ನೋಡಿದರೆ ಸ್ವಾತಂತ್ರ್ಯ ಪಡೆದ ಆ ದಿನಾಂಕ ಎಲ್ಲವೂ ಸುಸಂಪನ್ನವಾಗಿಬಿಟ್ಟ ಗಳಿಗೆ ಏನಲ್ಲ. ಆದರೆ ಎಲ್ಲವನ್ನೂ ದೇಶೀಯ ಮನೋಭಾವನೆಗೆ ತಕ್ಕಂತೆ ಒಪ್ಪ- ಓರಣ ಮಾಡಿಕೊಳ್ಳುವುದಕ್ಕೆ ಸಿಕ್ಕ ಆರಂಭ ಬಿಂದು ಅದು. ಮುಂದಿನ ಅನೇಕ ಕನಸುಗಳ ಕುಸುರಿಗೆ, ದೇಶ ಮತ್ತು ನಾಗರಿಕತೆ ಬೆಳವಣಿಗೆ ನಿಟ್ಟಿನಲ್ಲಿ ಬೇರೆ ಬೇರೆ ಪ್ರಾರಂಭ ಬಿಂದುಗಳನ್ನು ಹಾಕಿಕೊಳ್ಳುವುದಕ್ಕೆ ಆಗಸ್ಟ್ 15 ಶ್ರೀಕಾರವಾಯಿತಷ್ಟೆ. ಈ ಹಿನ್ನಲೆಯಲ್ಲಿ 2020ರ ಈ ಜಾಗತಿಕ ಕೋಲಾಹಲದ ವರ್ಷದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಹೊತ್ತಿನಲ್ಲಿ ಯಾವ ಆರಂಭವವನ್ನು ಸಂಕಲ್ಪಿಸಿಕೊಳ್ಳಬೇಕು ಎಂಬುದು ಪ್ರಸ್ತುತವಾಗುವ ಪ್ರಶ್ನೆ. ಅದಾಗಲೇ ಆ ಪ್ರಶ್ನೆಗೆ ಉತ್ತರವೂ ಸಿದ್ಧವಾಗಿಬಿಟ್ಟಿದೆ; ಬಹುತೇಕ ಬಾಯಿಪಾಠವೂ ಆಗಿದೆ – ಆತ್ಮನಿರ್ಭರ ಭಾರತ.

ಆತ್ಮನಿರ್ಭರ ಭಾರತದ ಬಗ್ಗೆ ಇರಬಹುದಾದ ಅನೇಕ ಹಿಂಜರಿಕೆಗಳನ್ನು ತಿಳಿಯಾಗಿಸಿಕೊಳ್ಳುವುದಕ್ಕೆ ಈ ಸಲದ ಸ್ವಾತಂತ್ರ್ಯ ದಿನಾಚರಣೆ ಪ್ರಾರಂಭ ಬಿಂದುವಾಗಬಲ್ಲುದೇನೋ. ಇಲ್ಲಿಯೇ ಪ್ರಶ್ನೆ ಶುರುವಾಗುತ್ತದೆ. ಆತ್ಮನಿರ್ಭರತೆ ಎಂಬುದು ಕೇಳಲಿಕ್ಕೇನೋ ಭಾವಪೂರ್ಣವಾಗಿದೆ. ಆದರೆ, ಪ್ರಾಯೋಗಿಕವಾಗಿ ಸಾಧ್ಯವಾ ಅಂತ ಹಲವರ ಸಂದೇಹವಿದೆ.

ಸ್ವಾತಂತ್ರ್ಯ ದಿನದ ಹುರುಪಲ್ಲೇ ಇದಕ್ಕೆ ಉತ್ತರ ಕಂಡುಕೊಳ್ಳಬಹುದು. ಏಕೆಂದರೆ, ಸ್ವಾತಂತ್ರ್ಯ ಹೋರಾಟ ಶುರುವಾಗಿದ್ದೂ ಮೊದಲಿಗೆ ಭಾವಸಂಗಮದಿಂದಲೇ. ಅದಿಲ್ಲದಿದ್ದರೆ ತ್ರಿವರ್ಣದಲ್ಲಿ ಒಂದಿಡೀ ಜನಸಮೂಹ ತನ್ನ ಐಡೆಂಟಿಟಿಯನ್ನು ಏಕಾದರೂ ಕಂಡುಕೊಂಡಿತು? ಧ್ವಜವೆಂದರೆ ಬರಿ ಬಟ್ಟೆ, ಯಾರು ಆಳಿದರೆ ಸಾಮಾನ್ಯನಾಗಿರುವ ನನಗೇನು ಅಂತ ಹೆಚ್ಚಿನವರೆಲ್ಲ ಔದಾಸೀನ್ಯ ತಾಳಿಬಿಡಬಹುದಿತ್ತಲ್ಲವೇ? ಇಲ್ಲ, ಇದು ನನ್ನ ದೇಶ, ಇವರೆಲ್ಲ ನನ್ನ ಜನ, ನಾವೆಲ್ಲ ಗುಲಾಮಿತನದಿಂದ ಮುಕ್ತವಾಗಬೇಕು ಎಂಬ ಭಾವೋತ್ಕರ್ಷದಿಂದಲೇ ಎಲ್ಲ ಹೋರಾಟಗಳೂ ಪ್ರಾರಂಭವಾದವು ಅಲ್ಲವೇ? ಹಾಗೆಯೇ, ಇವತ್ತಿನ ಆತ್ಮನಿರ್ಭರ ಭಾರತದ ಸಂಕಲ್ಪ ಸಹ. “ನಮ್ಮ ಕೈಲಿರುವ ಮೊಬೈಲ್ ಫೋನುಗಳೆಲ್ಲ ವಿದೇಶಿಯವೇ ಆಗಿವೆ,” “ತಂತ್ರಾಂಶಗಳು ವಿದೇಶಿ,” “ಜಾಗತೀಕರಣಕ್ಕೆ ತೆರೆದುಕೊಂಡಮೇಲೆ ಆಮದು ನಿಲ್ಲಿಸುವುದು ಸಾಧ್ಯವಿಲ್ಲ,” “ಆತ್ಮ ನಿರ್ಭರತೆ ಸಾಧಿಸಲು ಬೇಕಾದ ಮೂಲಸೌಕರ್ಯವಿಲ್ಲ” ಹೀಗೆಲ್ಲ ನಕಾರಾತ್ಮಕತೆಗೆ ಲೆಕ್ಕವಿಲ್ಲದಷ್ಟು ಕಾರಣಗಳಿದ್ದಿರಬಹುದು. ಆದರೆ ಸ್ವಾವಲಂಬನೆ ಹಾದಿ ಎಲ್ಲಿಂದಲೋ ಶುರುವಾಗಬೇಕು ಹಾಗೂ ಯಾವುದೇ ನೂತನ ಪ್ರಕ್ರಿಯೆ ಆರಂಭವಾಗುವಾಗ ತ್ರಾಸದಾಯಕವಾಗಿರುವುದೂ ಸಹಜವೇ. ಇದು ಆಮದನ್ನು ನಿಲ್ಲಿಸಿ ಜಗತ್ತಿನಿಂದ ನಾವು ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ಅಲ್ಲ, ಬದಲಿಗೆ ಈ ಆಟದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಮ್ಮತನದ ಮೊಹರು ಹಾಕುವ ಅವಕಾಶ ಅಂತ ನೋಡಬೇಕಷ್ಟೆ.

ಇದೇನೂ ಗಾಳಿಗೋಪುರವಲ್ಲ ಎನ್ನುವುದಕ್ಕೆ ನಮ್ಮ ಇತ್ತೀಚಿನ ಸಾಧನೆಗಳೇ ಬಹಳಷ್ಟಿವೆ. 2014ರ ವೇಳೆಗೆ ಕೇವಲ ಎರಡರ ಸಂಖ್ಯೆಯಲ್ಲಿದ್ದ ಮೊಬೈಲ್ ಫೋನ್ ಮತ್ತು ಅವಕ್ಕೆ ಸಂಬಂಧಿಸಿದ ಸಲಕರಣೆಗಳ ನಿರ್ಮಾಣ ಘಟಕಗಳ ಸಂಖ್ಯೆ ಈಗ ಇನ್ನೂರು ದಾಟಿರುವುದರ ಉದಾಹರಣೆ ಕಣ್ಮುಂದೇ ಇದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ ಕೊರೊನಾ ಕಾಲಘಟ್ಟದಲ್ಲಿ ಸರ್ಕಾರ ಹೊಸನೀತಿಗಳನ್ನು ಪ್ರಕಟಿಸಿದೆ. ಉತ್ಪಾದನೆ ಆಧರಿತ ಉತ್ತೇಜನಗಳ ಯೋಜನೆಯನ್ನು ಘೋಷಿಸಿದ್ದೇ ತಡ ಅದಾಗಲೇ ಜಗತ್ತಿನ 22 ಮೊಬೈಲ್ ಕಂಪನಿಗಳು ಈ ದೇಶದಲ್ಲಿ ಉತ್ಪಾದನೆ ಶುರು ಮಾಡುವುದಕ್ಕೆ ಅರ್ಜಿ ಹಾಕಿವೆ. ಪಕ್ಕಾ ಭಾರತೀಯ ಉತ್ಪನ್ನಗಳನ್ನು ಭಾರತೀಯ ಮೂಲದ ಕಂಪನಿಗಳೇ ತಯಾರಿಸುವ ಸಾಮರ್ಥ್ಯ ಸಿದ್ಧಿಗೆ ಇನ್ನೂ ಹಲವು ವರ್ಷಗಳು ಹಿಡಿಯಬಹುದು. ಆದರೆ ಪ್ರಯಾಣ ಎಲ್ಲೋ ಒಂದು ಕಡೆ ಶುರುವಾಗಬೇಕಲ್ಲ? ಆ ನಿಟ್ಟಿನಲ್ಲಿ ಗಮನಿಸಿದಾಗ ಆತ್ಮನಿರ್ಭರ ಭಾರತದ ಪ್ರಯಾಣ ಹಲವು ವಿಧಗಳಲ್ಲಿ ಆಗಲೇ ಆರಂಭವಾಗಿದೆ.

ಈ ಲೇಖನದ ಆಡಿಯೋ ವಿಡಿಯೋ ನೋಡಿ

ಕೊರೊನಾ ಹೊಡೆತದಿಂದ ವಿಶ್ವವೇ ಒಮ್ಮೆ ನಿಲ್ಲಬೇಕಾದ ಸ್ಥಿತಿ ಬಂದಮೇಲೆ ಈಗೆಲ್ಲರ ಚಿತ್ತ ಮರುನಿರ್ಮಾಣದತ್ತ. ಈ ಹಂತದಲ್ಲಿ ಭಾರತ ಆಂತರಿಕವಾಗಿ ಹಾಗೂ ಹೊರಗಿನಿಂದ ಬಹುದೊಡ್ಡ ಆಸ್ತಿಯೊಂದನ್ನು ಗಳಿಸಿಕೊಂಡಿದೆ. ಅದೆಂದರೆ ವಿಶ್ವಾಸ. ಕೊರೊನಾದ ಪ್ರಾರಂಭಿಕ ದಿನಗಳಲ್ಲಿ ಎಲ್ಲರೂ ಆತುಕೊಳ್ಳುವುದಕ್ಕೆ ಯಾವ ಹುಲ್ಲುಕಡ್ಡಿ ಸಿಕ್ಕರೂ ಸಾಕು ಅಂತ ಯೋಚಿಸುತ್ತ, ಹೈಡ್ರಾಕ್ಸಿಕ್ಲೊರೊಕ್ವಿನ್, ಪ್ಯಾರಸಿಟಮಲ್ ನಂಥ ಮಾತ್ರೆಗಳಿಗೆ ಬೇಡಿಕೆ ಸಲ್ಲಿಸಿದಾಗ ಭಾರತ ತಕ್ಷಣವೇ ಅವೆಲ್ಲವನ್ನು ಸಾಕಷ್ಟು ಪ್ರಮಾಣದಲ್ಲಿ ಸ್ವಂತಕ್ಕೆ ಖಾತ್ರಿಪಡಿಸಿಕೊಂಡು ಜಗತ್ತಿಗೂ ಕೊಡಮಾಡಿತು. ಹಾಗೆ ಕೊಡುವಾಗ, ಯಾವುದೋ ನಾಲ್ಕು ಪ್ರಬಲ ರಾಷ್ಟ್ರಗಳಿಗಷ್ಟೇ ಕೊಟ್ಟು ಪ್ರಚಾರ ಗಿಟ್ಟಿಸಲಿಲ್ಲ. ಬಹಳಷ್ಟು ಬಾರಿ ಉಪೇಕ್ಷೆಗೆ ಒಳಗಾಗುವ ಚಿಕ್ಕ ರಾಷ್ಟ್ರಗಳನ್ನೂ ಸೇರಿಸಿಕೊಂಡು 120ಕ್ಕೂ ಹೆಚ್ಚು ದೇಶಗಳಿಗೆ ಔಷಧ ವಿತರಿಸಿತು. ಇತ್ತ, ಆಂತರಿಕವಾಗಿ ಕೇವಲ ಎರಡು-ಮೂರು ತಿಂಗಳ ಅವಧಿಯಲ್ಲಿ ಪಿಪಿಇ ಕಿಟ್, ಕೃತಕ ಉಸಿರಾಟ ಯಂತ್ರಗಳು, ಹಾಗೂ ಎನ್95 ಮುಖಗವಸುಗಳಲ್ಲಿ ಸ್ವಾವಲಂಬನೆ ಸಾಧಿಸಿತು. ಈಗವು ರಫ್ತಿಗೂ ಸಿದ್ಧವಾಗಿವೆ. ಇವೆಲ್ಲ ವಿಭಾಗಗಳಲ್ಲಿ ಅವಡುಗಚ್ಚಿ ಬಹುತೇಕ ಶೂನ್ಯದಿಂದ ನೂರು ಪ್ರತಿಶತಕ್ಕೆ ಸಾಮರ್ಥ್ಯ ಬೆಳೆಸಿಕೊಳ್ಳುವ ಶಕ್ತಿ ಭಾರತಕ್ಕಿದೆ ಎಂದಾದರೆ ಮುಂದೊಂದು ದಿನ ಸೆಮಿಕಂಡಕ್ಟರ್, ಚಿಪ್ ಇತ್ಯಾದಿ ಕ್ಲಿಷ್ಟಕರ ವಿಭಾಗಗಳಲ್ಲೂ ಆತ್ಮನಿರ್ಭರತೆ ಸಾಧಿಸಿಕೊಳ್ಳುವ ಕನಸು ಕಂಡರೆ ಅದನ್ನು ಸಂದೇಹ, ಅವಿಶ್ವಾಸದಿಂದ ನೋಡಬೇಕಿಲ್ಲ. ಈ ಕ್ಷಣಕ್ಕೆ ಅಂಥ ವಿಕ್ರಮಗಳನ್ನು ಸಾಧಿಸುವುದಕ್ಕೆ ಕಚ್ಚಾ ವಸ್ತುವಿನ ಅಲಭ್ಯತೆ, ಕೌಶಲ ಕೊರತೆ ಹೀಗೆಲ್ಲ ಬೃಹತ್ ಅಡೆತಡೆಗಳು ಕಾಣುತ್ತಿರಬಹುದು. ಆದರೆ ಮುಂದಡಿಯಿಡುತ್ತ ಹೋದಂತೆ ಪರಿಹಾರಗಳೂ ಗೋಚರಿಸಿಯಾವು ಹಾಗೂ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತಕ್ಕೆ ಸಹಕರಿಸುವ ವಾತಾವರಣ ಸದ್ಯಕ್ಕಂತೂ ಇದೆ.

ವಿಸ್ತಾರದೃಷ್ಟಿಯಲ್ಲಿ ನೋಡಿದಾಗ, ಅರವತ್ತರ ದಶಕದಲ್ಲಿ ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಕಷ್ಟದ ಕಾಲದಿಂದ ತದನಂತರ ಕೆಲ ಧಾನ್ಯಗಳನ್ನು ರಫ್ತುಮಾಡುವ ಮಟ್ಟಿಗೆ ಭಾರತ ಬೆಳೆದಿದ್ದು ವಿಶ್ವಾಸ ತರುವ ಕಾರ್ಯವೇ ತಾನೇ? ತುಂಬ ಇತಿಹಾಸಕ್ಕಿಳಿಯುವ ಪುರಸೊತ್ತಿಲ್ಲ ಎನ್ನುವುದಾದರೆ ಈಚೆಗಿನ ಕೆಲವೇ ವರ್ಷಗಳಲ್ಲಿ ಭಾರತವು ಎಂಥೆಂಥ ಸಂಕೋಲೆಗಳಿಂದ ಬಿಡಿಸಿಕೊಂಡಿತು ಎಂಬುದನ್ನು ಲೆಕ್ಕ ಹಾಕಿದಾಗ ಅಮಿತ ಆತ್ಮವಿಶ್ವಾಸ ಉಕ್ಕದೇ ಇರದು.

ಯಾವುದನ್ನು ಅಂದಿನ ಪ್ರಧಾನಿ ಮನಮೋಹನ ಸಿಂಗರು ಅತಿದೊಡ್ಡ ಭದ್ರತಾ ಆತಂಕ ಎಂದಿದ್ದರೋ ಅಂಥ ನಕ್ಸಲ್ ಹಿಂಸಾಚಾರವನ್ನು ಹೆಚ್ಚು-ಕಡಿಮೆ ಮುಗಿಸಿಬಿಟ್ಟಿರುವ ಭಾರತ ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿಯಲ್ಲಿ ಮೀಯಿಸಿ, ಬೊಡೊಲ್ಯಾಂಡ್ ಸಂಘರ್ಷ, ಬ್ರೂ-ರಿಯಾಂಗ್ ನಿರಾಶ್ರಿತ ಸಮಸ್ಯೆಗಳಿಗೆ ಇತಿಶ್ರೀ ಹಾಡಿಬಿಟ್ಟಿದೆ. ಯಾವ ವಿಧಿ ಪ್ರತ್ಯೇಕತೆಯನ್ನು ಪೊರೆದುಕೊಂಡಿತ್ತೋ ಅದನ್ನು ಇಲ್ಲವಾಗಿಸಿ ಜಮ್ಮು-ಕಾಶ್ಮೀರದ ನೈಜ ವಿಲೀನವನ್ನು ಸಾಕಾರಗೊಳಿಸಿದ್ದಾಗಿದೆ. ಬಾಲಾಕೋಟಿಗೆ ನುಗ್ಗಿ ನಡೆಸಿದ ದಾಳಿಯು ಪಾಕಿಸ್ತಾನದ ಅಣ್ವಸ್ತ್ರದ ಬ್ಲಾಕ್ಮೇಲ್ ತಂತ್ರವನ್ನು ಇನ್ನಿಲ್ಲವಾಗಿಸಿದೆ. ಕತ್ತಲು ಕವಿದ ನಂತರವಷ್ಟೇ ಮನೆಯಿಂದ ಹೊರಹೋಗಿ ನೈಸರ್ಗಿಕ ಕರೆಯನ್ನು ಪೂರೈಸಿಕೊಳ್ಳಬೇಕಿದ್ದ ಕೆಟ್ಟ ದಿನಗಳನ್ನು ಐದೇ ವರ್ಷಗಳಲ್ಲಿ ಪಟ್ಟು ಹಿಡಿದು ಇಲ್ಲವಾಗಿಸಿದೆ ಸ್ವಚ್ಛ ಭಾರತ. ಹತ್ತೆಂಟು ತೆರಿಗೆಗಳಲ್ಲಿ ಹಂಚಿಹೋಗಿದ್ದ ತೆರಿಗೆ ಮಾದರಿಯೀಗ ಜಿಎಸ್ಟಿ ಮೂಲಕ ಏಕೀಕರಣಗೊಂಡಿದೆ. ಹೊಗೆಯುರಿಯಲ್ಲಿ ಆರೋಗ್ಯ ಕೆಡಿಸಿಕೊಂಡಿದ್ದ ಎಂಟುಕೋಟಿಗೂ ಮೀರಿದ ಅಮ್ಮಂದಿರ ಕಣ್ಣೀರು ಇಲ್ಲವಾಗಿಸಿದೆ ಉಜ್ವಲಾ. ಹೀಗೆ ಹಲವು ಬಗೆಗಳಲ್ಲಿ ಭಾರ ಇಳಿಸಿಕೊಂಡು ದೇವರೇ ಅಂತ ನಿಟ್ಟುಸಿರಿಡುವ ಸಂದರ್ಭದಲ್ಲಿಯೇ ಭಾರತದ ಮೌಲ್ಯ ಶ್ರೀರಾಮ ಸುಮಾರು ಐನೂರು ವರ್ಷಗಳ ವನವಾಸದ ಬಳಿಕ ಅಯೋಧ್ಯೆಗೆ ಮರಳಿದ್ದಾನೆ.

ಹೀಗೆ ಒಂದೊಂದಾಗಿ ತನ್ನ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುತ್ತಿರುವ ಭಾರತಕ್ಕೆ ಆತ್ಮನಿರ್ಭರತೆಯ ಸಂಕಲ್ಪ ಗಟ್ಟಿಗೊಳಿಸಿಕೊಳ್ಳುವುದಕ್ಕೆ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕಿಂತ ಮಿಗಿಲಾದ ಮಹೂರ್ತ ಯಾವುದಿದೆ? ಸ್ವಾತಂತ್ರ್ಯ ಸಿಕ್ಕಾಗಲೂ ಭಾರತ ಬಹಳ ವರ್ಷಗಳವರೆಗೆ ತನ್ನನ್ನು ತಾನು ಸಂಭಾಳಿಸಿಕೊಳ್ಳದು ಎಂದ ಪಂಡಿತರು ಹಲವರಿದ್ದರು. ಅದನ್ನು ಸುಳ್ಳಾಗಿಸಿದ ಭಾರತದ ಅಂತಃಶಕ್ತಿ, ಆತ್ಮನಿರ್ಭರತೆಯ ಬಗೆಗಿನ ಸಿನಿಕತೆಗಳನ್ನೂ ಸುಳ್ಳಾಗಿಸಬಲ್ಲದು.

– ಚೈತನ್ಯ ಹೆಗಡೆ

 

Sri Chaitanya Hegde, Journalist, Author

Leave a Reply

Your email address will not be published.

This site uses Akismet to reduce spam. Learn how your comment data is processed.