rss-path-sanchalan-bengaluru-oct-23-2016

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅರಳಿದ ಸಂಘಸಂಸ್ಕೃತಿ

ಲೇಖನ: ಪ್ರದೀಪ ಮೈಸೂರು, ಪ್ರಾಂತ ಪ್ರಚಾರ ಪ್ರಮುಖ
ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಿತ

“ಇಟಲಿಯ ಸ್ವತಂತ್ರ ‌ದೇವಿ ರಕ್ತದ ಮಡುವಿನಲ್ಲಿ ಈಜಿಕೊಂಡು ಬಂದರೆ ಭಾರತದ ಸ್ವಾತಂತ್ರ್ಯ ದೇವಿ ಲಾರ್ಡ್‌ ಯಾಟ್ಲಿಯ ಪಾರ್ಕರ್ ಪೆನ್ನಿನ ಇಂಕಿನಿಂದ ಡ್ಯಾನ್ಸ್ ಮಾಡಿಕೊಂಡು ಬಂದಳು” – 1957-58 ರ ಸುಮಾರಿಗೆ ಮೈಸೂರಿನ ಗಣೇಶ ಪಾರ್ಕ್ ನಲ್ಲಿ ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತರಾದ ದಿ. ಶ್ರೀಪತಿ ಶಾಸ್ತ್ರಿಯವರ ಭಾಷಣದ ಈ ಸ್ವಾರಸ್ಯಕರ ವಾಕ್ಯವನ್ನು ಹುಬ್ಬಳ್ಳಿಯಲ್ಲಿ ನೆಲೆಸಿರುವ ಇನ್ನೋರ್ವ ಹಿರಿಯ ಪ್ರಚಾರಕ ಸು. ರಾಮಣ್ಣನವರು ಅನೌಪಚಾರಿಕ ಮಾತುಕತೆಯಲ್ಲಿ ಹೇಳಿದ್ದು ಇಂದಿಗೂ ಹಸಿರಾಗಿದೆ. ಭಾರತದ ಸುದೀರ್ಘ ಸ್ವಾತಂತ್ರ್ಯ ಹೋರಾಟದ ತಾರ್ಕಿಕ ಅಂತ್ಯವಾದ ಪರಿ ಅದು. ಈ ಇತಿಹಾಸವು ಜನರ ನೆನಪಿನಲ್ಲಿ ಇಂದಿಗೂ ಇದೆ. ವ್ಯಕ್ತಿಗಳು, ಘಟನೆಗಳು, ಇಸವಿ, ಸ್ಮಾರಕ, ಸಭೆಗಳು, ಯುವಕರ ಸಶಸ್ತ್ರ ಹೋರಾಟದ ಕತೆಗಳು ಎಲ್ಲವೂ. ಕೆಲವು ಸಂಗತಿಗಳು ದಾಖಲಾಗಿಲ್ಲ. ಆದರೆ ಉಲ್ಲೇಖಗಳಲ್ಲಿ ಲಭ್ಯವಿದೆ. ಜಾನಪದ ಕತೆಗಳಂತೆ ಭಾರತೀಯರ ಭಾವಕೋಶದೊಂದಿಗೆ ಬೆರೆತುಹೋಗಿದೆ. ಹೋರಾಟದಲ್ಲಿ ಭಾಗವಹಿಸುತ್ತಲೇ ಅದನ್ನು ಆಯಾ ಸಂದರ್ಭದಲ್ಲೇ ದಾಖಲಿಸುವುದು ತ್ರಾಸದಾಯಕ ಕೆಲಸ. ಸ್ವಭಾವವೂ ಬೇಕು. ಆದರೆ ಅಸಾಧ್ಯವಲ್ಲ. 1857 ರಿಂದ 1947 ರವರೆಗಿನ ಹೋರಾಟವು, ಅಂದರೆ ಗಾಂಧಿಜಿ ಪೂರ್ವ ಮತ್ತು ಗಾಂಧೀಜಿಯವರ ಕಾಲದ ವಿದ್ಯಮಾನಗಳು ಸಾಮಾಜಿಕ, ವೈಚಾರಿಕ, ಸಾಂಸ್ಥಿಕ, ಕ್ರಾಂತಿ ಮಾರ್ಗ, ಅಹಿಂಸಾ ಪಥ, ತಂತ್ರಗಾರಿಕೆ ಹೀಗೆ ಹಲವು ಕವಲುಗಳಾಗಿ ಸಾಗಿತ್ತು. ಕಾಂಗ್ರೆಸ್ ಅತಿ ದೊಡ್ಡ ಪ್ರವಾಹವಾಗಿ ಆಂದೋಲನದ ಸಣ್ಣ ಪುಟ್ಟ ತೊರೆಗಳಿಗೆ ಆಶ್ರಯ ನೀಡಿತ್ತು.

ಇದೇ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಗಳಿಕೆಯನ್ನು ಮುಖ್ಯ ಗುರಿಯಾಗಿಸಿಕೊಂಡು ನಾನಾ ಬಗೆಯ ಚಟುವಟಿಕೆಗಳು ನಡೆದೇ ಇತ್ತು. ಉದಾ : ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಬ್ರಹ್ಮ‌ ಸಮಾಜ, ಅನುಶೀಲನ ಸಮಿತಿ, ಹಿಂದು ಮಹಾ ಸಭಾ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು, ಕಾಂಗ್ರೆಸ್ ನ ಗರ್ಭದಿಂದಲೇ ಜನಿಸಿದ ಸೇವಾದಳ, ನಭ ಗೋಪಾಲ ಮಿತ್ರ ಅವರ ಹಿಂದು ಮೇಳ, ಸಂತ ಟುಕಡೋಜಿ ಮಾಹಾರಾಜರ ಶ್ರೀ ಗುರುದೇವ ಸೇವಾ ಮಂಡಲ, ಸುಭಾಷರ INA, ಸಾಗರೋತ್ತರ ಭಾರತೀಯರು ಕಟ್ಟಿದ Friends of India Society ಪ್ರಮುಖವಾದವುಗಳು. ಈ ಎಲ್ಲಾ ಕಾರ್ಯ ಚಟುವಟಿಕೆಗಳ ಅಂತರ್ನಿಹಿತ ಉದ್ದೇಶ ದೇಶದ ಸ್ವಾತಂತ್ರ್ಯ ಪ್ರಾಪ್ತಿಯೇ‌ ಆಗಿದ್ದರೂ, ಕೆಲಸ ಮಾಡಿದ ಶೈಲಿ, ಕಾರ್ಯಕಾಲ, ಕ್ಷೇತ್ರ ವ್ಯಾಪ್ತಿ ಭಿನ್ನ ಭಿನ್ನವಾಗಿಯೇ ಇತ್ತು ಮತ್ತು ವಿಶಿಷ್ಟವಾಗಿತ್ತು.

ಅನುಶೀಲನ ಸಮಿತಿ, ಹಿಂದು ಮಹಾ ಸಭಾದಂತಹ ಸಂಘಟನೆಗಳು ಆಗ್ರಹ ಮತ್ತು ಆಕ್ರಮಕ ನಿಲುವಿನೊಂದಿಗೆ ಕಾರ್ಯನಿರ್ವಹಿಸಿದರೆ ಇನ್ನೂ ಅನೇಕರು ಶಬ್ದವಿಲ್ಲದೆಯೇ ಸುಧಾರಣೆ ಮತ್ತು ಪರಿವರ್ತನೆಯ ದಾರಿಯನ್ನು ಹಿಡಿದು ಕೆಲಸ ಮಾಡಿದರು. ಇಂತಹವರ ಸಂಖ್ಯೆಯೇ ಹೆಚ್ಚಾಗಿತ್ತು ಮಾತ್ರವಲ್ಲ ಹೋರಾಟಕ್ಕೆ ಒದಗಿ ಬಂದ ಜನಪೂರೈಕೆಯ ಒಳ ಹರಿವು ಈ‌ ದಿಕ್ಕಿನೆಡೆಗೇ ಇತ್ತು. ಬ್ರಹ್ಮ, ಆರ್ಯ, ಪ್ರಾರ್ಥನಾ ಸಮಾಜ, ಹಿಂದು ಮೇಳದ ಕೆಲಸಗಳು ಅಹಿಂಸೆಯ ಮಾರ್ಗದ್ದಾಗಿತ್ತು. ವಿಪರ್ಯಾಸವೆಂದರೆ ಅಹಿಂಸೆ ಅಂದರೆ ಗಾಂಧೀಜಿ ಮತ್ತು ಕಾಂಗ್ರೆಸ್ ಮಾತ್ರ ಎಂಬ ‘ನರೇಟಿವ್’ ಬೆಳೆಯುತ್ತಾ ಹೋಯಿತು. ‌ಅದೇ‌ ಶಾಶ್ವತವಾಗಿ ಉಳಿದು ಬಿಟ್ಟಿತು. ಸಾಮಾಜಿಕವಾಗಿ, ವೈಚಾರಿಕವಾಗಿ ನಡೆದ ಅಹಿಂಸಾತ್ಮಕ ಮತ್ತು ಪ್ರಭಾವಿ ಪ್ರಯತ್ನಗಳನ್ನು ಅಂದಿನ ಕಾಂಗ್ರೆಸ್ ನಾಯಕರು ತಮ್ಮಂತೆಯೇ ಇವರೂ ಕೆಲಸ ಮಾಡುತ್ತಿದ್ದಾರೆಂದು ಮೆಚ್ಚುವುದಿರಲಿ ಬಾಯಿ‌ ಮಾತಿನ ಪ್ರಶಂಸೆಯನ್ನು ಮಾಡಲು ಸಹ ಹಿಂಜರಿದರು. ಆದರೆ, ಮಾರ್ಗದ ಆಯ್ಕೆ ಕುರಿತು ತಾಕಲಾಟ ಮತ್ತು ದ್ವಂದ್ವ ಇದ್ದದ್ದು ಕಾಂಗ್ರೆಸ್ ನಲ್ಲಿ ಎಂಬುದು ಅಪ್ರಿಯ ಸತ್ಯ. ಉಳಿದ ಸಂಘಟನೆಗಳಲ್ಲಿ ತಮ್ಮ ಶೈಲಿ ಮತ್ತು ದಾರಿಯ ಕುರಿತು ಯಾವುದೇ ಗೊಂದಲಗಳಿರಲಿಲ್ಲ.‌ ಅಂತಹವರೆಲ್ಲರ ಬಗ್ಗೆ ಕಾಂಗ್ರೆಸ್ ನ ನಾಯಕರಿಗೆ ಒಂದು critical opinion ಇತ್ತೆಂಬುದು ಮನನೀಯ. ನಾನು ಹಿಡಿದಿದ್ದೇ ಹಾದಿ, ಯಾವುದೇ ವಿಚಾರದ ಬಗ್ಗೆ ನನ್ನ ವ್ಯಾಖ್ಯಾನವೇ ಸಮಗ್ರ ಮತ್ತು ಅಂತಿಮ‌ ಎಂಬ ವೈಚಾರಿಕ ಏಕಮುಖತೆಯು ಕಾಂಗ್ರೆಸ್ ನ ನೇತೃತ್ವದಲ್ಲಿ ಬೇರು ಬಿಟ್ಟಿತ್ತು. ಹೋರಟದ ಬೆಂಬಲಕ್ಕೆ ಅಗತ್ಯವಾದ ವೈಚಾರಿಕತೆಗೆ ಸೆಮಿಟಿಸಿಸಮ್ಮಿನ ಪ್ರಭಾವವಾಗಿತ್ತು. ಎದುರಾಳಿಯ ವಿರುದ್ಧ ಯುದ್ಧ ಮಾಡುತ್ತಾ ಅವನ ಗುಣ ಸ್ವಭಾವಗಳು ತನಗರಿವಿಲ್ಲದಂತೆಯೇ ಹೋರಾಡುವವನ ಒಳಗಿಳಿಯುತ್ತದೆ ಎಂಬುದನ್ನು Rudyard Kipling ಪ್ರಾಣಿ ಲೋಕದ ಸ್ವಭಾವವನ್ನು ವಿಮರ್ಶಿಸುತ್ತಾ ತನ್ನ ಪುಸ್ತಕ The Jungle Book ನಲ್ಲಿ ಬರೆದಿದ್ದಾನೆ. ಆತನ‌ ಈ ಸ್ವಭಾವ ಮೀಮಾಂಸೆಯು ಸಾರ್ವಕಾಲಿಕ ಮತ್ತು ಸಾರ್ವದೇಶೀಯ ಎಂದರೆ ಉತ್ಪ್ರೇಕ್ಷೆ ಆಗಲಾರದು.

ಪ್ರವೇಶ ಮಾರ್ಗ ಮತ್ತು ‌ನಿರ್ಗಮನದ ಹಾದಿ

ಕುರುಕ್ಷೇತ್ರದ ಯುದ್ಧದಲ್ಲಿ ಅಭಿಮನ್ಯುವಿನ ಪ್ರಸಂಗವು ಕ್ಷಾತ್ರದ ಪರಾಕಾಷ್ಠೆಯನ್ನು ತಲುಪಿದ ಅಧ್ಯಾಯ ಎನ್ನಬಹುದು. ಅವನಿಗೆ ಚಕ್ರವ್ಯೂಹವನ್ನು ಪ್ರವೇಶಿಸುವುದು ಹೇಗೆಂಬುದು ತಿಳಿದಿತ್ತು ಆದರೆ ಅದರಿಂದ ಹೊರಬರುವ ಮಾರ್ಗ ಗೊತ್ತಿರಲಿಲ್ಲ. ಅದೇನಾದರೂ ಅಭಿಮನ್ಯುವಿಗೆ ತಿಳಿದಿದ್ದರೆ ಕತೆಯ ಓಟವೇ ಬೇರೆಯಾಗಿರುತ್ತಿತ್ತು ಎಂದು ಊಹಿಸಬಹುದು. ‌ಸಾಮಾಜಿಕ ಆಂದೋಲನದ ಹಿನ್ನೆಲೆಯಲ್ಲಿ ಇದನ್ನು ಬಿಡಿಸಿ‌ ನೋಡಿದಾಗ ನೋಡುಗನೆದುರು ಅನೇಕ ವಿಷಯಗಳು ತೆರೆದುಕೊಳ್ಳುತ್ತದೆ. ಆಂದೋಲನವನ್ನು ಪ್ರವೇಶಿಸುವವರೆದುರಿಗೆ ಸಹಜವಾಗಿ ಮೂಡುವ ಪ್ರಶ್ನೆಗಳು – ನಾವೇ ಕಟ್ಟಬೇಕಾದರೆ ಅದರ ವಿಧಾನ ಯಾವುದು? ಈಗಾಗಲೇ ನಡೆಯುತ್ತಿರುವ ಅಭಿಯಾನವಾದರೆ ಅದರೊಳಗೆ ಪ್ರವೇಶಿಸುವುದು ಹೇಗೆ? ಎಷ್ಟು ಸಮಯ ಭಾಗವಹಿಸಬೇಕು? ತಾರ್ಕಿಕ ಅಂತ್ಯ ಏನು? ಹೊರಬರುವ ಸಮಯ ಮತ್ತು ರೀತಿ ಯಾವುದು? ಈ ಎಲ್ಲಾ ವಿವರಗಳನ್ನು ಯೋಚಿಸಿ ಆಂದೋಲನ ಕಟ್ಟಿದವರಾಗಲಿ, ಭಾಗವಹಿಸಿದವರಾಗಲಿ ಕಡಿಮೆಯೇ. ಆಂದೋಲನ ನಡೆಸುವುದೇ ಅಂತಿಮ ಗುರಿಯಾದರೆ ಅದೊಂದು ವಿಧ. ಆದರೆ ಉದ್ದೇಶ ಉದಾತ್ತವೂ, ಬಹುಕಾಲ ಉಳಿಯುವ ರಚನೆಯನ್ನು ನಿರ್ಮಿಸಬೇಕು ಎಂಬುದಾಗಿದ್ದಾಗ ಹೋರಾಟ, ಅಭಿಯಾನಗಳಿಂದ ಹೊರಬರಬೇಕು. ಮುಂದಿನದ್ದನ್ನು ಯೋಚಿಸಬೇಕು. ಸುಲಭದ ಕೆಲಸವಲ್ಲ ಅದು. ಆಂದೋಲನದಿಂದ ಸಿಗುವ ಪ್ರಸಿದ್ಧಿಯಲ್ಲಿ ಮೈಮರೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ‌ಸಂಸ್ಥೆಯ ಸಾಮಾಜಿಕ ಯಾತ್ರೆಯು ಆಂದೋಲನದ ಜೀವಿತಾವಧಿಯಷ್ಟೇ ಅಗಿರುತ್ತದೆ. ಪ್ರಸಿದ್ಧವಾದ ಆಂದೋಲನದಿಂದ (Popular movement) ಹೊರಬಂದು ಮೂಲ ಉದ್ದೇಶದ ಪೂರ್ತಿಗಾಗಿ ಪ್ರಯಾಣ ಮುಂದುವರಿಸಲು ದೃಷ್ಟಿ ಸ್ಪಷ್ಟತೆ, ಪ್ರಸಿದ್ಧಿಗೆ ಬೆನ್ನು ಹಾಕುವ ಎದೆಗಾರಿಕೆ ಮತ್ತು ಸ್ವಂತದ ಪ್ರತಿಮೆಗೆ ಉಂಟಾಗುವ ಚ್ಯುತಿ ಮತ್ತು ಅಪಾರ್ಥಕ್ಕೊಳಗಾಗುವ ಅಪಾಯವನ್ನೆದುರಿಸುವ ಅಂತಃಶಕ್ತಿ ಗಳಿಸಿಕೊಳ್ಳಬೇಕು.

Dr Keshava Baliram Hedgewar,RSS Founder
Sri Aurobindo

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಭಾರತದ ಭವಿಷ್ಯಕ್ಕಾಗಿ ಮುಂದಿನ ಹೆಜ್ಜೆಗಳನ್ನು ಇಡಲು, ಅದರಿಂದ ಹೊರ ಬಂದ ಎರಡು ಉತ್ತಮ ಉದಾಹರಣೆಗಳು ಯೋಗಿ ಅರವಿಂದ ಮತ್ತು ಡಾ. ಹೆಡಗೇವಾರ್. ವಂಗ ಭಂಗ ಚಳುವಳಿಯಲ್ಲಿ ಸೇನಾಪತಿಯಂತೆಯೇ ಕೆಲಸ ಮಾಡಿದ ಅರವಿಂದರು ಆ ಹೋರಾಟ ಕೊನೆಗೊಂಡ ತರುವಾಯ ತಮ್ಮ ಮಾರ್ಗವನ್ನು ಭವಿಷ್ಯ ಭಾರತದ ನಿರ್ಮಾಣದ ಕಡೆಗೆ ಬದಲಿಸಿಕೊಂಡರು. ಚಿಂತನೆ ಮತ್ತು ಕ್ರಿಯಾಶೀಲತೆಯ ಸಮಾಗಮ ವ್ಯಕ್ತಿತ್ವ ಅರವಿಂದರದ್ದು. ಪಾಂಡಿಚೇರಿಯನ್ನು ತಮ್ಮ ಮುಂದಿನ ಕೆಲಸಗಳ ಕೇಂದ್ರ ಮಾಡಿಕೊಂಡರು. ಭಾರತ ಬಂಧಮುಕ್ತಗೊಳ್ಳುವ ಬಗ್ಗೆ ಅವರಿಗೆ ರವಷ್ಟೂ ಅನುಮಾನ ಇರಲಿಲ್ಲ. ಭಾರತದ ಆಧ್ಯಾತ್ಮಿಕ ಹೊಣೆಗಾರಿಕೆಯನ್ನು ತಮ್ಮ ಬರಹ ಮತ್ತು ಕೆಲಸಗಳ ಮೂಲಕ ನೆನಪಿಸುವ ಕೆಲಸವನ್ನು ಅವರು ಮಾಡಿದರು. ಸಾಮಾಜಿಕ ಆಂದೋಲನದಿಂದ ಹೊರ ಬರುವುದು ಮಾತ್ರವಲ್ಲ ಮನಸ್ಸಿನ ಆಂದೋಲನದಿಂದಲೂ ಹೊರ ಬರಬೇಕು.‌ ನವ ಸಮಾಜದ ಸೃಷ್ಟಿ ಆಗುವುದು ಶಾಂತಿಯಿಂದ, ಆಂದೋಲನದಿಂದಲ್ಲ. ಆದರೆ ಆಂದೋಲನದ ಅಗತ್ಯ ಇಲ್ಲವೇ ಇಲ್ಲ ಎಂಬ ತುತ್ತ ತುದಿಯ ಅಭಿಪ್ರಾಯವೂ ಅಲ್ಲ.

ಕ್ರಾಂತಿಕಾರಿಗಳ ಜೊತೆ ನಿಕಟ ಸಂಪರ್ಕವಿದ್ದ, ಸಶಸ್ತ್ರ ಹೋರಾಟದಲ್ಲೂ ಭಾಗಿಯಾಗಿದ್ದ ಹೆಡಗೇವಾರರು ಆ ಮಾರ್ಗದಿಂದ ಹೊರಬಂದು “ಸಂಘಟನೆಯ” ಹೊಸ ಮಾರ್ಗವೊಂದನ್ನು ನಿರ್ಮಿಸಿದರು. ಅಹಿಂಸೆ ದಾರಿಯಲ್ಲಿ ನಡೆಯುವವರೂ, ಕ್ರಾಂತಿ ಪಥವನ್ನು ತುಳಿದವರು ಎಲ್ಲರನ್ನೂ ಒಳಗೊಳ್ಳುವ “ಸಂಘ ಮಾರ್ಗ”ವನ್ನು ಸಮಾಜದ ಎದುರು ಸಾದರಪಡಿಸಿದರು. ಸಂಘಟಿತ ಸಮಾಜವನ್ನು ಕಟ್ಟುವ ಕೆಲಸಕ್ಕೆ ಮೊದಲ ಇಟ್ಟಿಗೆಯನ್ನು ತಾವೇ ಇಟ್ಟರು. ಸ್ವಾತಂತ್ರ್ಯ ಪ್ರಾಪ್ತಿಯವರೆಗೆ ಮಾತ್ರವಲ್ಲ, ಹಿಂದು ಸಮಾಜದ ದೃಷ್ಟಿ ಅದರಾಚೆಗೂ ವ್ಯಾಪಿಸಬೇಕು ಎಂಬ ಚಿಂತನೆ ಅವರದ್ದು.

The Sangh and Swaraj by Ratan Sharda

ಮೂರಕ್ಷರದ ಮಾಯೆ, ಮೂರಕ್ಷರದ ಸಂಕಲ್ಪ

‘ಸ್ವಾತಂತ್ರ್ಯ’ ವೆಂಬ ಮೂರಕ್ಷರದ ಮಾಯೆ ಎಂದು ಕವಿಯೊಬ್ಬ ಬರೆದಿದ್ದಾನೆ. ಆ ಮಾಯೆ ಎಂತಹವರನ್ನೂ ಬಿಡಲಿಲ್ಲ. ಆ ಮೂರಕ್ಷರವೇ ಸಾವಿರಾರು ದೇಶ ಬಾಂಧವರ ಬದುಕಿನ ಸಂಕಲ್ಪವೂ ಅಯ್ತು. ಸಂಘವೂ ಇದಕ್ಕೆ ಹೊರತಲ್ಲ.

ಹೆಡಗೇವಾರರು ಸಂಘ ಸ್ಥಾಪನೆಯ ಪೂರ್ವದಲ್ಲಿ ಮತ್ತು ಸಂಘ ಸ್ಥಾಪನೆಯ ನಂತರಲ್ಲೂ ಸ್ವಾತಂತ್ರ್ಯ ಹೋರಾಟದಲ್ಲಿ ‌ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಮಾತ್ರವಲ್ಲ ಯೋಜನೆಗಳನ್ನು ರೂಪಿಸುತ್ತಿದ್ದರು. ಅವರು 1927‌ ರವರೆಗೂ ಕಾಂಗ್ರೆಸ್ ನ ಪದಾಧಿಕಾರಿಯಾಗಿದ್ದರು. ಸಂಘ‌ ಸ್ಥಾಪನೆಯ ನಂತರ‌ ಸಹಜವಾಗಿ ಎದ್ದ ಪ್ರಶ್ನೆ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಪಾತ್ರ ಏನು? ಎಷ್ಟು? ಹೇಗೆ? ಎಂಬಿತ್ಯಾದಿ. ಮೂವತ್ತಾರರ ಹರೆಯದ ಯುವ ಹೆಡಗೇವಾರರು ಸಂಘವನ್ನು ಬೆಳೆವ ಎಳವೆಯಲ್ಲೇ *ಎಲ್ಲರೊಳಗೊಂದಾಗುವಂತೆ* ಮತ್ತು *ಎಲ್ಲರನ್ನೊಳಗೊಳ್ಳುವಂತೆ* ರೂಪಿಸಿದರು. ಅಂದು ಅವರು ತೆಗೆದುಕೊಂಡ ‌ನಿರ್ಣಯವು ಇಂದು ಶತಮಾನದ ಹೊಸ್ತಿಲಲ್ಲಿ ನಿಂತಿರುವ ಆರೆಸ್ಸೆಸ್ ನ 5 ಪೀಳಿಗೆಯ ಸ್ವಯಂಸೇವಕರ ಕಾರ್ಯ ಸಂಸ್ಕೃತಿಯನ್ನು ರೂಪಿಸಿದೆ. ಸಂಘದ ಒಳಗಿನ ವಾರ್ತಾಲಾಪದಲ್ಲಿ ಇದನ್ನು *ಸಂಘಸಂಸ್ಕೃತಿ* ಎನ್ನಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮದು ಪ್ರತ್ಯೇಕ ಪಾತ್ರ ಇರಬಾರದು, ಬದಲಿಗೆ ಈಗಾಗಲೇ ‌ವೇಗ ಪಡೆದುಕೊಂಡಿರುವ ಆಂದೋಲನದ ‌ವೇಗ ಮೊಟಕುಗೊಳಿಸುವ ಅಥವಾ ಅದನ್ನು ತೆಳುವಾಗಿಸುವ, ದುರ್ಬಲಗೊಳಿಸುವ ಕೆಲಸ ಮಾಡಬಾರದು ಎಂದು ಸ್ವಯಂಸೇವಕರಲ್ಲಿ ಸ್ಪಷ್ಟತೆ ಮೂಡಿಸಿದರು. ಗಾಂಧೀಜಿಯವರ ನೇತೃತ್ವ, ಕಾಂಗ್ರೆಸ್ ನ ಧ್ವಜ, ಅವರದ್ದೇ ಯೋಜನೆ, ಅಲ್ಲಿಯದ್ದೇ ಕಾರ್ಯ‌ಶೈಲಿಗೆ ಅನುಸಾರವಾಗಿ ‌ಸಂಘವು ಪಾಲ್ಗೊಳ್ಳಬೇಕು ಎಂಬ ನಿರ್ಣಯ ಮಾಡಿದರು. ಸಾಮಾಜಿಕ ಹೋರಾಟದಲ್ಲಿ ಇರುವ ವಾಡಿಕೆ ಎಂದರೆ – ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಘೋಷಿಸುವುದು, ಪತ್ರಿಕೆಗಳಲ್ಲಿ ಸುದ್ದಿ ಬರುವಂತೆ ನೋಡಿಕೊಳ್ಳುವುದು, ಹೋರಾಟದ ದಿನ ಒಂದು ಬಾವುಟ, ಬ್ಯಾನರ್ ಮತ್ತು ಪ್ರತ್ಯೇಕ ಸಮವಸ್ತ್ರ ಇದ್ದರೆ ಅದನ್ನು ಧರಿಸಿ ಭಾಗವಹಿಸುವುದು. ಗುಂಪಿನಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದು. ಇದು ಸಾಮಾನ್ಯವಾಗಿ ಕಾಣುವ ದೃಶ್ಯ. ಯಾವುದೇ ಗುರುತುಗಳ ಗೊಡವೆಯಿಲ್ಲದೆ ಉದ್ದೇಶದ ಸಫಲತೆಗಾಗಿ ಭಾಗವಹಿಸುವುದು ತುಸು ಕಷ್ಟವೇ. ಆದರೆ ಸ್ವಂತದ ಪ್ರಸಿದ್ಧಿ, ಗುರುತು, ಪ್ರತ್ಯೇಕ ಅಸ್ತಿತ್ವವನ್ನು ಗಳಿಸಿಕೊಳ್ಳುವ ಸೆಳೆತದಿಂದ ಸಂಘವು ಆರಂಭದ ದಿನಗಳಿಂದಲೂ ಬಚಾವಾಗಿದೆ. ಎಲ್ಲರೊಳಗೊಂದಾಗಬೇಕೆಂಬುದು ಕೇವಲ ಘೋಷಣೆ ಆಗಲಿಲ್ಲ, ಅದು “ಸಂಘಸಂಸ್ಕೃತಿ” ಯೇ ಅಯ್ತು.

ಇದೇ ಅಭ್ಯಾಸ ಮುಂದಿನ ಪೀಳಿಗೆಗಳಲ್ಲೂ ಕಾಣಿಸಿತು. ಸಂಸ್ಕೃತಿ ಎಂದರೆ ನಿಂತ ನೀರಲ್ಲ, ಅದು ಚಲನಶೀಲ ಎಂಬುದನ್ನು ಸ್ವಯಂಸೇವಕರು ನಡವಳಿಕೆಯಿಂದ ತೋರಿದ ಇನ್ನಷ್ಟು ಪ್ರಸಂಗಗಳಿವೆ.

  • 1975 – 77 ರವರೆಗೆ ಹೊರಿಸಲಾಗಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ‌ನಡೆದ ಹೋರಾಟದಲ್ಲಿ ಸಂಘವು ಮುಂಚೂಣಿಯಲ್ಲಿ ನಿಂತಿತ್ತು. ಹೋರಾಟದ ಯಶಸ್ಸಿಗೆ ಮತ್ತು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಬೇಕಾದ ಯಾವ ಕೆಲಸದಿಂದಲೂ ಅದು ಹಿಂಜರಿಯಲಿಲ್ಲ. ಆ ಹೋರಾಟವನ್ನು ಮತ್ತು ಆ ಕಾಲಘಟ್ಟದಲ್ಲಿ ನಡೆದ ಆಂದೋಲನವನ್ನು “ಜೆ.ಪಿ. ಆಂದೋಲನ” (J P movement) ಎಂದೇ ಕರೆಯಲಾಯ್ತು. ಆ ಹೋರಾಟದಲ್ಲಿ ಪಾಲ್ಗೊಂಡ ಅನೇಕ ರಾಜಕೀಯ, ಸಾಮಾಜಿಕ ಮತ್ತು ವೈಚಾರಿಕ ನಾಯಕರು ಸಂಘವನ್ನು ಮುಕ್ತಕಂಠದಿಂದ ಪ್ರಶಂಸೆ ಮಾಡಿದರು. ಅಂದಿನ ಸಂಘದ ಶೀರ್ಷ ನೇತೃತ್ವಕ್ಕಾಗಲಿ, ಸಾಮಾನ್ಯ ಸ್ವಯಂಸೇವಕನಿಗಾಗಲಿ ಹೋರಾಟದ ಗೆಲುವಿನ ಕ್ರೆಡಿಟ್ಟು ಸಂಘದ ಖಾತೆಗೆ ಜಮಾ ಆಗಲಿಲ್ಲ ಎಂಬ ಭಾವ ತಿಲ ಮಾತ್ರವೂ ಬರಲಿಲ್ಲ. ಆ ಸಂದರ್ಭದಲ್ಲಿ ಸ್ವಯಂಸೇವಕರು ಪ್ರಜಾಪ್ರಭುತ್ವದ ಪರ ನಿಂತ ಎಲ್ಲರನ್ನೂ ಬೆಸೆದರು ಮತ್ತು ಜೊತೆಗೂಡಿ ಕೆಲಸ ಮಾಡಿದರು.
  • ಹೊಸ ಸಹಸ್ರಮಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವರ ನೇತೃತ್ವದಲ್ಲಿ ನಡೆದ ಹೋರಾಟವನ್ನು ಸಂಘಟಿಸುವಲ್ಲಿ ಪಾತ್ರ ನಿರ್ವಹಿಸಿದ ಸಂಘದ ಕಾರ್ಯಕರ್ತರು ತಮ್ಮದೇ ಧ್ವಜ, ವೇಷ, ಭಾಷೆ, ಭಾಷಣವನ್ನು ಹೋರಾಟದ ಮೇಲೆ ಹೇರಲಿಲ್ಲ. ಹಾಲಿನಲ್ಲಿ ಸಕ್ಕರೆ ಬೆರೆತಂತೆ ಬೆರೆತರು‌ ಆರೆಸ್ಸೆಸ್ ಹುಡುಗರು.

ಇದೆಲ್ಲದಕ್ಕೂ ಮೂಲ ಹೆಡಗೇವಾರರು ಹಾಕಿಕೊಟ್ಟ ಆರಂಭದ ದಿನಗಳ ಸತ್ ಸಂಸ್ಕೃತಿ – ಸಂಘಸಂಸ್ಕೃತಿ.

1925 – 1962 ಕೀರ್ತಿಗಾಗಿ ಅಲ್ಲ, ನೆನಪಿಗಾಗಿ

ಸಂಘ ಸ್ಥಾಪನೆಗೆ ಮುನ್ನ ಹೆಡಗೇವಾರರು ಒಮ್ಮೆ ಸೆರೆಮನೆ ವಾಸ ಅನುಭವಿಸಿದ್ದರು. (ಅಗಸ್ಟ್ 19, 1921 ರಿಂದ ಜುಲೈ 12, 1922 ರವರೆಗೆ). ಆರೆಸ್ಸೆಸ್ ಸ್ಥಾಪನೆಯ ನಂತರದಲ್ಲಿ ಸ್ವಯಂಸೇವಕರು ಭಾಗವಹಿಸಿದ ಸ್ವಾತಂತ್ರ್ಯ ಹೋರಾಟದ ಪ್ರಸಂಗಗಳು ಹಲವು ಪುಸ್ತಕಗಳಲ್ಲಿ ದಾಖಲಾಗಿದೆ.

  • 1929 ರ ಕಾಂಗ್ರೆಸ್ ನ ಲಾಹೋರ್ ಅಧಿವೇಶನದಲ್ಲಿ ‘ಸಂಪೂರ್ಣ ಸ್ವಾತಂತ್ರ್ಯ’ ದ ಘೋಷಣೆ ಮೊಳಗಿತು. 1930 ರ ಜನವರಿ 26 ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕು ಎಂಬ ಕರೆ‌ಕೊಟ್ಟಾಗ ನಾಗಪುರದಲ್ಲಿ ನಡೆಯುತ್ತಿದ್ದ ಎಲ್ಲಾ ಶಾಖೆಗಳಲ್ಲೂ ಆ ದಿನವನ್ನು ಆಚರಿಸಲಾಯ್ತು.
  • 1930 ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸಂದರ್ಭದಲ್ಲಿ ಮಧ್ಯ ಪ್ರಾಂತ್ಯದಲ್ಲಿ ಜಂಗಲ್ ಸತ್ಯಾಗ್ರಹ ನಡೆಯಿತು. 1930 ರ ಜುಲೈ 12 ರಂದು ನಡೆದ ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಹೆಡಗೇವಾರರು ‌ತಾವು ಜಂಗಲ್ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿ ಸರಸಂಘಚಾಲಕನ (ಆರೆಸ್ಸೆಸ್ ನ‌ ಅತ್ಯುನ್ನತ ಪದವಿ) ಹೊಣೆಯನ್ನು ಎಲ್. ವಿ. ಪರಾಂಜಪೆಯವರ ಹೆಗಲಿಗೆ ವರ್ಗಾಯಿಸಿದರು. ಯವತಮಾಳದಲ್ಲಿ ಸಂಘದ ಪ್ರಮುಖರಾಗಿದ್ದ ಇತರ 11 ಜನ ಸಂಗಡಿಗರ ಜೊತೆ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಎಲ್ಲರೂ ಬಂಧನಕ್ಕೊಳಗಾದರು. ಹೆಡಗೇವಾರರಿಗೆ 11 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಯಿತು ಉಳಿದ 11 ಜನರಿಗೆ 4 ತಿಂಗಳ ಸೆರೆವಾಸ.
  • 1932 ರಲ್ಲಿ ಮಧ್ಯ ಪ್ರಾಂತ್ಯದ ಬ್ರಿಟಿಷ್ ಸರ್ಕಾರವು ಅಲ್ಲಿನ ಸರ್ಕಾರಿ ‌ನೌಕರರು ಆರೆಸ್ಸೆಸ್ ಗೆ ಸೇರಬಾರದೆಂಬ ಕಾನೂನು ತಂದಾಗ ಅಂದಿನ‌ ಕಾಂಗ್ರೆಸ್ ನಾಯಕರು ಅದನ್ನು ವಿರೋಧಿಸಿ ಸಂಘದ ಪರವಾಗಿ ನಿಂತರು. ಕಾನೂನು ಸೋತು ಸಂಘ ವಿಜಯಿಯಾಯ್ತು. ಆರೆಸ್ಸೆಸ್ ಸಂಘಟನೆಯು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದೆ ಎಂಬುದರ ಬಗ್ಗೆ ಅಂದಿನ ಕಾಂಗ್ರೆಸ್ ‌ನಾಯಕರಿಗೆ ಅನುಮಾನ ಇರಲಿಲ್ಲ.
  • ಸಂಘದ ಸ್ವಯಂಸೇವಕರಿಗೆ ನೀಡುವ ಪ್ರತಿಜ್ಞೆಯಲ್ಲಿ, ಸ್ವಾತಂತ್ರ್ಯ ‌ಪೂರ್ವದಲ್ಲಿ “ಹಿಂದೂ ರಾಷ್ಟ್ರವನ್ನು ಸ್ವತಂತ್ರ ಗೊಳಿಸಲು” ಎಂಬ ವಾಕ್ಯವಿತ್ತು. ಸ್ವಾತಂತ್ರ್ಯ ಬಂದ ನಂತರದಲ್ಲಿ ಅದು “ಹಿಂದೂ ರಾಷ್ಟ್ರದ ‌ಸರ್ವಾಂಗೀಣ ಉನ್ನತಿಯನ್ನು ಮಾಡುವುದಕ್ಕಾಗಿ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕನಾಗಿದ್ದೇನೆ” ಎಂದು‌ ಮಾರ್ಪಾಟಿಗೆ ಒಳಪಟ್ಟಿತು.
  • 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ‌ಚಳುವಳಿಯಲ್ಲಿ ಸಂಘ‌ ಭಾಗವಹಿಸಿತು. ಎಲ್ಲೆಲ್ಲಿ ಆರೆಸ್ಸೆಸ್ ಪ್ರಬಲವಾಗಿತ್ತೋ ಅಲ್ಲೆಲ್ಲ ಹೋರಾಟವು ಉಗ್ರ ರೂಪವನ್ನೇ ಪಡೆಯಿತು. ವಾರ್ಧಾದಲ್ಲಿ ನಡೆದ ಹೋರಾಟದಲ್ಲಿ ಯುವ ಸ್ವಯಂಸೇವಕ ಬಾಲಾಜಿ ರಾಯ್‌ಪುರ್ಕರ್ ಪೋಲೀಸರ ಗುಂಡಿಗೆ ಬಲಿಯಾದರೆ, ಚಿಮೂರ್ ನಲ್ಲಿ ‌ನಡೆದ ಚಳುವಳಿಯಲ್ಲಿ ಅಲ್ಲಿನ ಆರೆಸ್ಸೆಸ್ ಪ್ರಮುಖನಾದ‌ ದಾದಾ ನಾಯ್ಕ್ ಬಂಧಿತನಾದ.‌ ಅವನಿಗೆ ಮರಣ ದಂಡನೆ ವಿಧಿಸಲಾಯ್ತು. ಆದರೆ ಬ್ರಿಟಿಷ್ ವೈಸ್ರಾಯ್ ಕೌನ್ಸಿಲ್ ನ ಸದಸ್ಯರಾಗಿದ್ದ ಎನ್. ಬಿ. ಖರೆ‌ ಅವರ ಮಧ್ಯಸ್ಥಿಕೆಯ ಪರಿಣಾಮವಾಗಿ ಮರಣದಂಡನೆಯು ಜೀವಾವಧಿ ಶಿಕ್ಷೆಗೆ ಸೀಮಿತವಾಯ್ತು.
  • 1942 ರಲ್ಲಿ ಬಿಹಾರದಲ್ಲಿ ಸರ್ಕಾರಿ ಕಚೇರಿಯ ಮೇಲೆ ಧ್ವಜ ಹಾರಿಸುವ ಸಾಹಸ ಮಾಡಿದ 6 ಜನ ಹುಡುಗರನ್ನು ಪೋಲಿಸರು ಗುಂಡಿಟ್ಟು ಕೊಂದರು. ಆ ಆರರ ಪೈಕಿ ಇಬ್ಬರು ಸಂಘದ ಸ್ವಯಂಸೇವಕರು. ದೇವಿಪದ್‌ ಚೌಧರಿ ಮತ್ತು ಜಗತ್ ಪತಿ‌ ಕುಮಾರ್. ಈ ಘಟನೆ ಬೆಳಕಿಗೆ ಬಂದಿದ್ದು 1997 ರಲ್ಲಿ ನಡೆದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ.
  • 1967 ರಲ್ಲಿ ‘ಹಿಂದುಸ್ತಾನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅರುಣಾ ಅಸಫ್ ಅಲಿ ಅವರು – ತನಗೆ ಹೋರಾಟದ ಸಮಯದಲ್ಲಿ ಭೂಗತಳಾಗಿ ಕೆಲಸ ಮಾಡಲು ಆಶ್ರಯ ನೀಡಿದ್ದು ದೆಹಲಿಯ ಆರೆಸ್ಸೆಸ್ ಸಂಘಚಾಲಕರಾಗಿದ್ದ ಲಾಲಾ ಹಂಸರಾಜ ಗುಪ್ತ ಎಂದಿದ್ದಾರೆ.
  • ಸ್ವಾತಂತ್ರ್ಯ ಸಿಕ್ಕ ಕೂಡಲೇ ದೆಹಲಿಯ ಗದ್ದುಗೆ ಏರಿದ ನೆಹರು 1929 ರ ಲಾಹೋರ್ ಅಧಿವೇಶನದ ಘೋಷಣೆಯನ್ನು ನೆನಪಿಸಿಕೊಳ್ಳಲಿಲ್ಲ. ಮಾತ್ರವಲ್ಲ, 1946 ರ ಮಧ್ಯಭಾಗದಿಂದಲೇ ಕಾಂಗ್ರೆಸ್ ‌ನಾಯಕರು ಸ್ವಾತಂತ್ರ್ಯ ಬಂದ ನಂತರ ಯಾರಿಗೆ ಯಾವ ಖಾತೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದರು. ದೇಶ ತುಂಡಾಗಿ ಹೋದಾಗಲೂ ಯಾರೂ ಏನೂ ಮಾಡಲಾರದ ಸ್ಥಿತಿಯಲ್ಲಿದ್ದರು. ವಿಭಜನೆಯನ್ನು ಖಂಡಿಸಿ ಹೇಳಿಕೆ ನೀಡುವುದನ್ನು ಯಾರೂ ಮರೆಯಲಿಲ್ಲ. ಲಾಹೋರ್ ಅಧಿವೇಶನದಲ್ಲಿ ಮಾಡಿದ ಸಂಪೂರ್ಣ ಸ್ವಾತಂತ್ರ್ಯದ ಸಂಕಲ್ಪ ಬಾಕಿಯೇ ಉಳಿದಿತ್ತು. ನಂತರದಲ್ಲಿ ನಡೆದ ಗೋವಾ, ಹೈದರಾಬಾದ್, ದಾದ್ರಾ ನಗರ್ ಹವೇಲಿ ಮುಕ್ತಿಯ ಹೋರಾಟದಲ್ಲಿ ಸ್ವಯಂಸೇವಕರು ಪೂರ್ಣ ಪ್ರಮಾಣದಲ್ಲಿ ತೊಡಗಿದರು. 1962 ರಲ್ಲಿ ಫ್ರೆಂಚ್ ವಸಾಹತಿನಿಂದ ಪಾಂಡಿಚೇರಿಯನ್ನು ಬಿಡುಗಡೆಗೊಳಿಸುವ ಮೂಲಕ ಭಾರತವನ್ನು ಸಂಪೂರ್ಣ ಸ್ವತಂತ್ರಗೊಳಿಸಲಾಯ್ತು.

ಮೂಲದಿಂದ ಪತ್ರೆಯವರೆಗೆ ಏಕರಸ

ಕಾಂಗ್ರೆಸ್ ನ ಪಾಲಿಗೆ ಬ್ರಿಟಿಷರು ಭಾರತವನ್ನು ಬಿಟ್ಟು‌ ಹೋದ ನಂತರ ದೆಹಲಿಯ ಸಿಂಹಾಸನವನ್ನು ಅಲಂಕರಿಸುವುದರೊಂದಿಗೆ‌ ಸ್ವಾತಂತ್ರ್ಯ ಆಂದೋಲನದ ಸಾರ್ಥಕತೆಯನ್ನು ಕಂಡುಕೊಂಡಾಗಿತ್ತು. ಅಂದಿನ ರಾಜಕೀಯ ನಾಯಕತ್ವವು ಬಸವಳಿದಿತ್ತು ಎಂಬುದು ಅಚ್ಚರಿಯ ಸಂಗತಿಯೇನಲ್ಲ. ಮುಂದೇನು ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿತ್ತು. ದೇಶದ ವಿಭಜನೆ, ಜನಸಂಖ್ಯೆಯ ಅದಲಾಬದಲಿ, ವಿಲಯನ ಪ್ರಕ್ರಿಯೆ ಇದಾವುದಕ್ಕೂ ನೆಹರು ಸರ್ಕಾರ ತಯಾರಿ ಮಾಡಿರಲೇ ಇಲ್ಲ. ಸ್ವಾತಂತ್ರ್ಯವನ್ನು ಸ್ವೀಕರಿಸುವ ತಯಾರಿ ಇಲ್ಲದಿದ್ದದ್ದು ಚಿಂತನ ದಾರಿದ್ರ್ಯವನ್ನು, ನಿರ್ವಹಣೆಯ ಅಸಾಮರ್ಥ್ಯವನ್ನು ಬಯಲು ಮಾಡಿತು. ಗಾಂಧೀಜಿ ಮುಸ್ಲಿಮರ ನಿಂತರೆ, ನೆಹರು‌ ತಮ್ಮ ‌ಕುರ್ಚಿಗೆ ಅಂಟಿಕೊಂಡಿದ್ದರು. ‘ಹಿಂದ್‌ ಸ್ವರಾಜ್’ ಪುಸ್ತಕವು ಕಪಾಟು ಸೇರಿತು. ಸಂಘವು ಭಾರತವನ್ನು ಸ್ವತಂತ್ರ ರೂಪದಲ್ಲಿ ಕಾಣಬೇಕು ಎಂಬ ಉದ್ದೇಶವನ್ನಷ್ಟೇ ಇರಿಸಿಕೊಂಡು ಕೆಲಸ ಮಾಡುತ್ತಿರಲಿಲ್ಲವಾದ್ದರಿಂದ, ಪರಮ‌ವೈಭವದ ಸಾಧನೆಗಾಗಿ ತನ್ನ ಪ್ರಯಾಣವನ್ನು ಮುಂದುವರಿಸಿತು. ಸಂಘದ ಸಾರ್ವಜನಿಕ ಬದುಕಿನ ಸಂಸ್ಕೃತಿಯು ಬಹುವಾಗಿ ಅರಳಿದ್ದು 1925 ರಿಂದ 1947 ರವರೆಗೆ ಅವಧಿಯಲ್ಲಿ, ಬೆಂಕಿಯಲ್ಲಿ ಅರಳಿದ ಹೂವಿನಂತೆ!

ಸಂಘಸಂಸ್ಕೃತಿಯ ಸಾರವನ್ನು ಕುವೆಂಪು ಅವರ ಸಾಲುಗಳು ಸೊಗಸಾಗಿ ಬಣ್ಣಿಸಿವೆ:

“ವಸಂತ ವನದಲಿ ಕೂಗುವ ಕೋಗಿಲೆ
ರಾಜನ ಪದವಿಯ ಬಯಸುವುದಿಲ್ಲ
ಹೂವಿನ ಮರದಲಿ ಜೇನಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ”

ಈ ಸಂಸ್ಕೃತಿಯು ಸಂಘಕ್ಕೆ ದೊರೆತದ್ದು ಅದರ ಮೂಲದಿಂದ. ಮೂಲದಲ್ಲೇ ಹಪಹಪಿಕೆಯಿಲ್ಲದಿರುವಾಗ ಶಾಖೆಗಳು ಅದರಿಂದ ಪ್ರಭಾವಿತವಾಗುವುದಿಲ್ಲ, ಶಾಖೆಗಳು ಸ್ವಸ್ಥವಿರುವವರೆಗೂ ಪತ್ರೆಗಳೂ ಆರೋಗ್ಯಕರ.

Sri Pradeep Mysuru, Pranth Prachar Pramukh – Karnataka Dakshina

ಪ್ರದೀಪ ಮೈಸೂರು,
ಪ್ರಾಂತ ಪ್ರಚಾರ ಪ್ರಮುಖ

(ಪೂರಕ ಮಾಹಿತಿ: Sangh and Swaraj – ರತನ್ ‌ಶಾರದಾ)

Leave a Reply

Your email address will not be published.

This site uses Akismet to reduce spam. Learn how your comment data is processed.