ಅಣ್ಣಾ ಹಜಾರೆಯವರು ಕರೆಕೊಟ್ಟ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಾರ್ವತ್ರಿಕ ಬೆಂಬಲ ದೊರೆತ ಹಿನ್ನೆಲೆಯಲ್ಲಿ, ಸಾರ್ವಜನಿಕ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಜನಲೋಕಪಾಲ್ ಮಸೂದೆ ಜಾರಿಗೊಳಿಸಲು ಅಣಿಯಾಗುತ್ತಿದೆ. ಎಲ್ಲೆಡೆಯೂ ಭ್ರಷ್ಟಾಚಾರವನ್ನೂ ತೊಡೆದು ಹಾಕುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಮನೆ-ಕಚೇರಿ-ಪರಿಸರಗಳಲ್ಲಿ ನಾವೆಷ್ಟರ ಮಟ್ಟಿಗೆ ಜಾಗರೂಕರಾಗಿರಬೇಕು? ನಮ್ಮ ಹೊಣೆ ಏನು? ಇಲ್ಲಿದೆ ಒಂದಷ್ಟು ಮಾಹಿತಿ.

ಜನ ಲೋಕಪಾಲ್ ಮಸೂದೆಯೆನೋ ಬಂದೀತು. ಅದು ಜಾರಿಯಾದರೆ ಸರ್ಕಾರಿ ಅಧಿಕಾರಿಗಳ, ರಾಜಕಾರಣಿಗಳ ಭ್ರಷ್ಟಾಚಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಶಿಕ್ಷೆಯ ಭಯದಿಂದ ಕೆಲವರು ಪ್ರಾಮಾಣಿಕರಾಗಿರುವ ಅನಿವಾರ್ಯತೆ ಬರಬಹುದು. ಜಾಗೃತ ಜನರು ಕೆಲವರು ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಬಹುದು. ಲಂಚ ತೆಗೆದುಕೊಳ್ಳುವವರಿಗೆ ಶಿಕ್ಷೆಯಾಗಬಹುದು. ಆದರೆ, ಅಷ್ಟೇ ಸಾಕೇ? ಅದರಿಂದಲೇ ಭ್ರಷ್ಟಾಚಾರ ಸಂಪೂರ್ಣ ನಿಂತೀತೇ? ಭ್ರಷ್ಟಾಚಾರಕ್ಕೆ ಏನು ಕಾರಣ, ಅದರ ಮೂಲ ಎಲ್ಲಿದೆ ಎನ್ನುವುದನ್ನೂ ನಾವು ಯೋಚಿಸಬೇಕಲ್ಲವೇ?

ಭ್ರಷ್ಟಾಚಾರ ಎಂದರೆ ಕೇವಲ ಸರ್ಕಾರಿ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದು ಮಾತ್ರವೇ? ಕೇವಲ ಸರ್ಕಾರಿ ಅಧಿಕಾರಿಗಳನ್ನು ಮಾತ್ರ ದೂರುವ ನಾವು, ಭ್ರಷ್ಟಾಚಾರಕ್ಕೆ ನಾವೂ ಕಾರಣಕರ್ತರಾಗುತ್ತಿದ್ದೇವೆಯೇ ಎಂದು ಯೋಚಿಸಿದ್ದುಂಟೇ? ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಪ್ರಾಮಾಣಿಕರಾಗಿದ್ದು, ಭ್ರಷ್ಟಾಚಾರಕ್ಕೆ ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಕಾರಣರಾಗದೇ ಬದುಕಿದಲ್ಲಿ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ನಾವೂ ನೀವೂ ಯೋಚಿಸಬೇಕಾದ ಕೆಲವು ಅಂಶಗಳು ಇಲ್ಲಿವೆ.

  •       ಭ್ರಷ್ಟ ಮಾರ್ಗದಿಂದ ಗಳಿಸಿದ ಹಣದಿಂದ ಅಥವಾ ತೆರಿಗೆ ವಂಚಿಸಿದ ಹಣದಿಂದ ಬಂದ ಯಾವುದೇ ವಸ್ತುಗಳನ್ನು ಉಪಯೋಗಿಸುವುದಿಲ್ಲ ಎಂದು ನಾವು ಪ್ರತಿಜ್ಞೆ ಮಾಡಬಹುದೇ?
  •       ಕಾಲೇಜು ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರನ್ನು ಮೊಬೈಲಿಗಾಗಿಯೋ ಬೈಕಿಗಾಗಿಯೋ ಪೀಡಿಸದೇ, ನಾವೇ ಗಳಿಸಿದ ಹಣದಿಂದ ಅದನ್ನು ಕೊಂಡುಕೊಳ್ಳುತ್ತೇವೆ ಎಂದು ಯೋಚಿಸಬಹುದೇ? ಹಾಗಾದಲ್ಲಿ ತಂದೆ ತಾಯಿಯರು ಹೆಚ್ಚಿನ ಹಣಕ್ಕಾಗಿ ಭ್ರಷ್ಟ ಹಾದಿ ತುಳಿಯುವ ಸಂದರ್ಭ ಕಡಿಮೆಯಾದೀತಲ್ಲವೇ?
  •       ನಮ್ಮ ಸ್ವಂತ ಉದ್ಯೋಗದಿಂದ ಬರುವ ಸರಿಯಾದ ಆದಾಯವನ್ನು ತೋರಿಸದೇ ಸುಳ್ಳು ಲೆಕ್ಕ ತೋರಿಸಿ ಶಾಸ್ತ್ರಕ್ಕೆಂಬಂತೆ ತೆರಿಗೆ ಕಟ್ಟುವುದನ್ನು ನಿಲ್ಲಿಸಿ, ನಿಜವಾದ ಆದಾಯಕ್ಕನುಗುಣವಾಗಿ ಸರಿಯಾದ ತೆರಿಗೆ ಕಟ್ಟಲು ಪ್ರಾರಂಭಿಸಬಹುದೇ?
  •       ನಮ್ಮ ಮಕ್ಕಳ ಸೀಟಿಗೆ ಅವರಿವರ ಶಿಫಾರಸ್ಸು ಉಪಯೋಗಿಸುವುದರ ಬದಲು ಅವರ ಯೋಗ್ಯತೆಗೆ ತಕ್ಕಂತೆ ಸಿಗುವ ಕಾಲೇಜಿನಲ್ಲೇ ಓದಿಸಬಹುದೇ? ಪ್ರತಿಭಾವಂತ ಬಡ ಮಕ್ಕಳೂ ಓದಿ ಮುಂದೆ ಬರಲಿ. ಅಲ್ಲವೇ?

  •       ಸುತ್ತಮುತ್ತ ಸ್ವಲ್ಪವೂ ಜಾಗ ಬಿಡದೇ, ಪಕ್ಕದ ಮನೆಯ ಗೋಡೆಗೆ ತಾಗಿಸಿ ಮನೆ ಕಟ್ಟಿ, ನಕ್ಷೆ ಮಂಜೂರಾತಿಗಾಗಿ ಲಂಚ ನೀಡುವ ಬದಲು ಕಾನೂನಿನ ಪ್ರಕಾರವೇ ಮನೆ ಕಟ್ಟಿ ಲಂಚ ಕೊಡದೇ ಸ್ವಾಭಿಮಾನಿಗಳಾಗಿ ಬದುಕಬಹುದೇ?
  •       ಸುಳ್ಳು ಆದಾಯ ಪ್ರಮಾಣ ಪತ್ರ ಪಡೆದು ಸರ್ಕಾರಿ ಯೋಜನೆಗಳಿಗೆ ಅರ್ಜಿ ಗುಜರಾಯಿಸುವ ಬದಲು, ನಿಜವಾದ ಬಡವರಿಗೆ ಅದರ ಉಪಯೋಗವಾಗಲು ಅನುವು ಮಾಡಿಕೊಡಬಹುದೇ?
  •       ಉದ್ಯೋಗ ಖಾತ್ರಿ ಯೋಜನೆಯ ಹಣದ ಆಶೆಗಾಗಿ ಉದ್ಯೋಗವಿದ್ದೂ ನಿರುದ್ಯೋಗಿ ಯೆಂದು ನೋಂದಾಯಿಸದಿರಬಹುದೇ? ಕಾಗದದಲ್ಲೇ ಕೆಲಸವಾಗಿದೆಯೆಂದು ತೋರಿಸಿ ಹಣ ಪಡೆಯುವುದನ್ನು ನಿಲ್ಲಿಸಬಹುದೇ?
  •       ಏಕಮುಖ ಸಂಚಾರದ ವ್ಯವಸ್ಥೆಯಿರುವ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ಹೋಗಿಯೂ ಸಬೂಬು ಹೇಳಿ ದಂಡ ಕಟ್ಟದಿರುವ ಬದಲು, ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ಕಟ್ಟಿ ಉತ್ತಮ ಪ್ರಜೆಗಳಾಗಬಹುದೇ?
  •       ಮನೆ ಪಕ್ಕದ ಖಾಲಿ ಸರ್ಕಾರಿ ಜಮೀನಲ್ಲಿ ಅಥವಾ ಖಾಲಿ ಸೈಟಿನಲ್ಲಿ ಕಸ ಹಾಕುವುದನ್ನು ನಿಲ್ಲಿಸಬಹುದೇ? ಸರತಿ ಸಾಲನ್ನು ತಪ್ಪಿಸುವುದನ್ನು ನಿಲ್ಲಿಸಿ, ಶಿಸ್ತಿನಿಂದ ಸಾಲಿನಲ್ಲಿ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬಹುದೇ?
  •       ಚಾಕಲೇಟು, ಬಿಸ್ಕತ್ತು ಇತ್ಯಾದಿ ತಿಂದು ಅದರ ಪ್ಯಾಕೆಟ್ಟನ್ನು ರಸ್ತೆಯಲ್ಲಿಯೇ ಬಿಸಾಡುವುದನ್ನು ನಿಲ್ಲಿಸಬಹುದೇ?
  •       ಮಕ್ಕಳು ಶಾಲೆಗೆ ರಜೆ ಹಾಕಿದಾಗ ಸತ್ತ ಅಜ್ಜಿಯನ್ನು ಪುನಃ ಪುನಃ ಸಾಯಿಸುವುದರ ಬದಲು ಅಥವಾ ಹುಶಾರಿಲ್ಲವೆಂದೋ ಸುಳ್ಳು ಹೇಳಿಸುವ ಬದಲು, ನಿಜವಾದ ಕಾರಣ ಹೇಳುವಂತೆ ಮಕ್ಕಳಿಗೆ ತಿಳಿ ಹೇಳಬಹುದೇ?
  •       ನಮ್ಮ ಪ್ರಾಮಾಣಿಕತೆಯ ಬೆಲೆ ಎಷ್ಟು? ಅದು ಕೆಲವು ಲಕ್ಷ ಕೋಟಿಗಳೇ ಅಥವಾ ಅದು ಬೆಲೆ ಕಟ್ಟಲಾಗದ್ದೇ?
  •       ಕದ್ದು ಮುಚ್ಚಿ ತಿಂದ ಬಾಳೆಹಣ್ಣು ನಮಗೆ ಆನಂದ ಕೊಡುವುದೋ ಅಥವಾ ಇರುವ ಒಂದು ಹಣ್ಣನ್ನು ಎಲ್ಲರಿಗೂ ಹಂಚಿ ಕೊನೆಗೆ ತಿನ್ನುವ ಸಣ್ಣ ತುಣುಕು ಆನಂದ ಕೊಡುವುದೋ?  ಯೋಚಿಸಿ ನೋಡೋಣ. ಹಾಗಾದರೆ, ನಿಜವಾದ ಸುಖ ಆನಂದ ಎಲ್ಲಿದೆ?
  •       ಭ್ರಷ್ಟರಿಗೆ ಕೊರಗು, ಕೀಳರಿಮೆ, ಭಯ ಕಾಡಿದರೆ ಪ್ರಾಮಾಣಿಕನಿಗೆ ಸಮಾಧಾನ, ಆತ್ಮವಿಶ್ವಾಸ, ನಿಶ್ಚಿಂತೆಗಳು ಅದ್ಭುತ ಶಕ್ತಿಯನ್ನು ನೀಡುತ್ತವೆಯೆನ್ನುವುದು ನಮಗೆ, ನಮ್ಮ ಮನೆಮಂದಿಗೆ ತಿಳಿದಿದಿಯೇ?
  •       ನಮ್ಮ ಮಾತಿಗೆ ಎಂದೂ ಬದ್ಧರಾಗಬಲ್ಲ ಶಕ್ತಿ ನಮಗಿದೆ ತಾನೇ? ಕೊಟ್ಟ ಮಾತಿಗೆ ತಪ್ಪುವವರೆಗೆ ನಾವು ಭ್ರಷ್ಟರಾಗಲಾರೆವು.
  •       ಪೋಲೀಸ್‌ರೂ ಸೇರಿದಂತೆ ಯಾವುದೇ ಸರಕಾರಿ ನೌಕರರು ಯಾವುದೇ ಕಾರಣಕ್ಕೆ ಲಂಚ ಕೇಳಿದರೆ ಎಷ್ಟು ಮಾತ್ರಕ್ಕೂ ಜಗ್ಗಬಾರದು. ಲಂಚ ಕೊಡುವವರು ಇರುವ ತನಕ ಲಂಚ ತಗೊಳ್ಳುವವರು ಇದ್ದೇ ಇರುತ್ತಾರೆ
  •       ವರದಕ್ಷಿಣೆ ಸ್ವೀಕಾರ ಯಾವುದೇ ಧರ್ಮ ಆಧಾರಿತವಲ್ಲ. ಅದು ಭ್ರಷ್ಟಾಚಾರದ ಇನ್ನೊಂದು ಬಗೆ. ವರದಕ್ಷಿಣೆಯಿಲ್ಲದ ಮದುವೆಗಳಿಗೆ ಪ್ರೋತ್ಸಾಹ, ವರದಕ್ಷಿಣೆ ಕೇಳುವ ಗಂಡನ ಕಡೆಯವರಿಗೆ ತಿರಸ್ಕಾರವೇ ಮದ್ದು. ವರದಕ್ಷಿಣೆ ಸ್ವೀಕರಿಸುವ ಮದುವೆ ಸಮಾರಂಭಕ್ಕೆ ಹೋಗದಿರುವುದೇ ಲೇಸು.
  •       ವಿಶ್ವಾಸದ್ರೋಹ, ಮೋಸ, ವಂಚನೆ ಎಲ್ಲವೂ ನೈತಿಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಶಬ್ದಗಳೇ. ಹೊಸಬನೊಬ್ಬ ಸಿಕ್ಕಾಗ ಪ್ರೀತಿಸಿದ ಯುವಕನಿಗೆ ಕೈಕೊಡುವ ಹುಡುಗಿ, ಹೆತ್ತವರನ್ನೇ ಅಲಕ್ಷಿಸಿ ಅವರ ನಂಬಿಕೆಗೆ ದ್ರೋಹಮಾಡುವ ಮಕ್ಕಳು, ಇವರೆಲ್ಲರೂ ನೈತಿಕ ಭ್ರಷ್ಟರೇ.
  •       ಸಾರ್ವಜನಿಕ ಸಂಸ್ಥೆಗಳಲ್ಲಿ ಜಾತಿ ಹೆಸರಲ್ಲಿ ಉದ್ಯೋಗವನ್ನು ಸ್ವಜಾತಿಯ ಬಂಧುಗಳಿಗೆ ಮಾತ್ರ ನೀಡುವುದು ಎಲ್ಲಿಯ ನ್ಯಾಯ? ಜಾತಿ ಮೀರಿದ ವಿದ್ಯಾರ್ಹತೆ ಮಾನದಂಡ ವಾದಾಗಲೇ ಈ ಸಮಸ್ಯೆ ಪರಿಹಾರ ಸಾಧ್ಯ.
  •       ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆಯ ವೇಳೆ ನಕಲು ಮಾಡುವ ಪ್ರವೃತ್ತಿಗೆ ಏನೆನ್ನಬೇಕು? ನಕಲು ಮಾಡಿ ಪರೀಕ್ಷೆಯಲ್ಲಿ ಪಾಸಾಗುವ ವಿದ್ಯಾರ್ಥಿಗಳು ಅದಾವ ಬಗೆಯ ವಿದ್ಯಾವಂತರು?

ಹೀಗೆ, ಪಟ್ಟಿ ಮಾಡುತ್ತಾ ಹೋದರೆ ನೂರಾರು ಅಂಶಗಳು ಸಿಗಬಹುದು. ಕೆಲವು ವಿಷಯಗಳಂತೂ ಯಾರಾದರೂ ಬೆರಳು ತೋರಿಸಿ ಹೇಳಿದ ಮೇಲೆಯೇ ’ಹೌದಲ್ವಾ?’ ಎಂದು ನಮಗೆ ಅನ್ನಿಸುವಷ್ಟು ಸಾಮಾನ್ಯವಾಗಿ ಬಿಟ್ಟಿವೆ! ಮೇಲೆ ಹೇಳಿದ ವಿಷಯಗಳಲ್ಲಿ ನಾವು ಇನ್ನೂ ತಿದಿಕೊಳ್ಳಬೇಕಾದದ್ದು ಇದೆಯೆಂದಾ ದರೆ, ಅವಕಾಶ ಸಿಕ್ಕರೆ ನಾವೂ ಲಂಚ ತೆಗೆದುಕೊಳ್ಳವ ನೌಕರರೇ ಆದೇವೆಂದು ತಿಳಿದುಕೊಳ್ಳುವುದು ಒಳ್ಳೆಯದು! ಅದನ್ನು ನಾವು ಆದಷ್ಟು ಬೇಗ ತಿದ್ದಿಕೊಳ್ಳುವುದು ಒಳ್ಳೆಯದು.

ಭ್ರಷ್ಟಾಚಾರವೆನ್ನುವುದು ಒಂದು ಮಾನಸಿಕತೆ ಅಷ್ಟೇ. ಅದು ಸ್ವಾರ್ಥದ ಒಂದು ಮುಖ. ಅಣ್ಣಾ ಹಜಾರೆಯನ್ನು ಬೆಂಬಲಿಸುವ ನಾವು ಆಗಾಗ ನಾವು ಹೇಗೆ ಯೋಚಿಸುತ್ತಿದ್ದೇವೆ, ಹೇಗೆ ಬದುಕುತ್ತಿದ್ದೇವೆನ್ನುವುದನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಿರಬೇಕು.

ಅಗತ್ಯವಿದ್ದೆಡೆ ನಮ್ಮಲ್ಲಿ ಪರಿವರ್ತನೆ ಆಗುತ್ತಿರಬೇಕು. ಆಗ ಮಾತ್ರ ’ಬದುಕು, ಬದುಕಲು ಬಿಡು’ ಎಂದು ಯೋಚಿಸಲು ನಮಗೆ ಅಭ್ಯಾಸವಾದೀತು. ಇಲ್ಲವಾದಲ್ಲಿ, ಮೊದಲ ಭಾಗ ಮಾತ್ರ ನಮ್ಮ ತಲೆಯಲ್ಲಿರುತ್ತದೆ. ಅದೇ ಭ್ರಚ್ಟಾಚಾರಕ್ಕೆ ಕಾರಣ! ಅದಕ್ಕೇ, ನಮ್ಮೊಳಗಿನ ಲೋಕಪಾಲನಿಗೆ ಮೊದಲು ಶಕ್ತಿ ತುಂಬೋಣ. ಆಗಲೇ ಜನ ಲೋಕಪಾಲ ಕಾನೂನಿಗೂ ಬಲ. ಇಲ್ಲವಾದರೆ, ನಾವೇ ಜಾರಿಗೆ ತಂದ ಜನ ಲೋಕಪಾಲ ಕಾನೂನು ಹತ್ತರೊಟ್ಟಿಗೆ ಹನ್ನೊಂದನೆಯ ಕಾನೂನಾದೀತು!!

Leave a Reply

Your email address will not be published.

This site uses Akismet to reduce spam. Learn how your comment data is processed.