ಹಿರಿಯರಾದ ಜಿ.ಬಿ.ಹರೀಶ್ ಅವರು ಮಾತನಾಡುವಾಗ ಒಮ್ಮೆ ‘ಕಲಕತ್ತಾ ದಿನಗಳು’ ಎಂಬ ಪುಸ್ತಕದ ಕುರಿತು ಪ್ರಸ್ತಾಪ ಮಾಡಿದ್ದರು. ವೈವಿಧ್ಯಮಯ ಜೀವನಾನುಭವದ ಮೂಸೆಯಿಂದ ಒಡಮೂಡಿದ ಆ ಕೃತಿಯಲ್ಲಿ ಲೇಖಕಿಯವರು ಅಲ್ಲಿನ ಸ್ಮಶಾನಕ್ಕೆ ಭೇಟಿ ನೀಡಿ ಅಲ್ಲಿದ್ದ 18ನೆಯ ಶತಮಾನದ ಗೋರಿಗಳನ್ನು ಹುಡುಕಿ ವಿಶಿಷ್ಟ ಕತೆಗಳನ್ನು ಬರೆದವರು, ಎಂದೇ ಹೂತುಹೋಗಿದ್ದ ಅಜ್ಞಾತ ಸ್ವಾತಂತ್ರ್ಯ ಹೋರಾಟದ ಕತೆಗಳನ್ನು, ಕ್ರಾಂತಿಕಾರಿಗಳನ್ನು ಮಾತನಾಡಿಸಿ ಬರೆದರು,ಅಲ್ಲಿನ ಒಂದೊಂದು ಸಾಂಸ್ಕ್ರತಿಕ ಎಳೆಯನ್ನೂ ಬಿಡಿಬಿಡಿಸಿ ಎಳೆಎಳೆಯಾಗಿ ನೋಡುತ್ತಾ ಬರೆದವರು, ಅಲ್ಲಿನ ಅಡುಗೆ,ಮಹಾನಗರದ ಜೀವನ,ಸಹವರ್ತಿಗಳು,ಸಾಹಿತ್ಯ,ಕಲೆ, ಗ್ರಂಥಾಲಯ ಹೀಗೆ ಅನೇಕ ವಿಚಾರಗಳನ್ನು ಬೆರಗುಗಣ್ಣುಗಳಿಂದ ನೋಡುವ ಪುಸ್ತಕ, ಅದೊಂದು ಅದ್ಭುತ ಬುತ್ತಿ. ತಮ್ಮ ಬರಹಗಳಿಂದ ಆಪ್ತವಾಗುವ, ಅಪ್ಯಾಯಮಾನವಾದ ಬರಹಗಳನ್ನು ಕಟ್ಟಿ ಕೊಟ್ಟ ಲೇಖಕಿ ಜ್ಯೋತ್ಸ್ನಾ ಕಾಮತ್!
ಆಲ್ಇಂಡಿಯಾ ರೇಡಿಯೋಗಾಗಿ ಕೆಲಸ ಮಾಡುವಾಗ 1977ರಿಂದ 1980ರವರೆಗೆ ಕಲ್ಕತ್ತೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿನ ಅನುಭವವನ್ನು ಅವರು ಪುಸ್ತಕವಾಗಿ ತಂದಿದ್ದಾರೆ.
ಸಂಸಾರದಲ್ಲಿಸ್ವಾರಸ್ಯ’, ‘ಕರ್ನಾಟಕ ಶಿಕ್ಷಣ ಪರಂಪರೆ’, ‘ಹೀಗಿದ್ದೇವೆ ನಾವು’, ‘ನೆನಪಿನಲ್ಲಿನಿಂತವರು’, ‘ನಗೆ ಕೇದಿಗೆ’ ಹಾಗೂ ‘ನಗೆ ನವಿಲು’, ‘ಕಲಕತ್ತಾ ದಿನಗಳು’ ಜ್ಯೋತ್ಸ್ನಾ ಕಾಮತ್ ಅವರ ಪ್ರಮುಖ ಕೃತಿಗಳು. 1991ರಲ್ಲಿರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿಕ್ಷಣ ಪರಂಪರೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ, ಕನ್ನಡ ಸಾಹಿತ್ಯ ಸಂಶೋಧನೆಗಾಗಿ ಕಿಟೆಲ್ ಪುರಸ್ಕಾರ ಸೇರಿ ಹಲವು ಪುರಸ್ಕಾರಗಳು ಲಭಿಸಿವೆ.
ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದು ನಂತರ 1964ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ವೃತ್ತಿಯ ಕಾರಣಕ್ಕೆ ಕಲ್ಕತ್ತ, ಜೈಪುರ, ಮುಂಬೈ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ಇವರು, ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿ, 1994ರಲ್ಲಿ ನಿವೃತ್ತಿ ಹೊಂದಿದ್ದರು.
ಜ್ಯೋತ್ಸ್ನಾ ಅವರ ಸ್ತ್ರೀ ದೃಷ್ಟಿಕೋನ ಕೇವಲ ಚಿಂತನೆಗಳಾಗಿರದೆ, ಬದುಕಿನ ಅನೇಕ ಆಯಾಮಗಳಲ್ಲಿ ಸಾಹಸದ ಮೂಲಕವೇ ಪ್ರಕಟಗೊಂಡ ಅಂಶಗಳು.ಅವರ ಸೂಕ್ಷ್ಮವಾದ ಗ್ರಹಿಕೆ,ವಾಸ್ತವವಾದಿ ಅಂಶಗಳ ಮೇಲೆ ಗಂಭೀರವಾದ ಮತ್ತು ಆಳವಾದ ಚಿಂತನೆ ಇವು ಮೇಲ್ಮೆಗೇ ಗೋಚರಿಸುವಂಥದ್ದು. ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು ಅವರ ಮಹಿಳಾ ಅಧ್ಯಯನ ಕೃತಿಗಳು.
ಕನ್ನಡದ ಲೇಖಕಿ, ಸಂಶೋಧಕಿ ಜ್ಯೋತ್ಸ್ನಾ ಕಾಮತ್ ಅವರು ಮೊನ್ನೆಯಷ್ಟೇ ಮಲ್ಲೇಶ್ವರಂನಲ್ಲಿ ಕೊನೆಯುಸಿರೆಳೆದಿದ್ದು ದೀರ್ಘವಾದ ಅನಾರೋಗ್ಯದಿಂದ ಬಳಲುತ್ತಿದ್ದರು. ಕನ್ನಡದ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ.