ಸಂಗೊಳ್ಳಿ ರಾಯಣ್ಣ! ಕರ್ನಾಟಕದ ಮನೆಮನದ ತುಂಬೆಲ್ಲ ದೇಶಭಕ್ತಿಯ ಕಿಚ್ಚು ಹಚ್ಚಿದ ಸ್ವಾತಂತ್ರ್ಯದ ಸರದಾರ.ನಾಡಮುಕ್ತಿಗಾಗಿ ತನ್ನೆಲ್ಲವನ್ನೂ ತ್ಯಾಗ ಮಾಡುತ್ತಾ ಕಿತ್ತೂರನ್ನು ರಕ್ಷಿಸುವ ಪಣ ತೊಟ್ಟ ವೀರಯೋಧ ರಾಯಣ್ಣ.
ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ ನೆಯ ದಿನ ೧೭೯೬.ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವೂ ಹೌದು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಪುತ್ರನಾಗಿ ಜನಿಸಿದ ಈತನಿಗೆ ಸಹೋದರಿಯೂ ಇದ್ದಳು.
ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆಯ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ಪಡೆದುಕೊಂಡಿದ್ದನು.ರೋಗಪ್ಪ ಆಯುರ್ವೇದ ಪಂಡಿತರೂ ಆಗಿದ್ದರು. ರಾಯಣ್ಣನ ತಂದೆ ಭರಮಣ್ಣರೂ ಮಹಾನ್ ಸಾಹಸಿ. ಕಿತ್ತೂರಿನ ಸಂಸ್ಥಾನದ ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿ ನೀಡಿದ ಹೊಲವೇ ರಕ್ತಮಾನ್ಯದ ಹೊಲ.
ಆಗ ಬ್ರಿಟೀಷರು ತಾವೇ ಆಕ್ರಮಿಸಿಕೊಂಡ ಭೂಮಿಯಲ್ಲೆಲ್ಲ ದತ್ತು ಮಕ್ಕಳಿಗೆ ಯಾವ ಹಕ್ಕೂ ಇಲ್ಲ, ಮಕ್ಕಳಿಲ್ಲದೆ ಯಾವುದೇ ರಾಜ ಸತ್ತರೆ ಆ ರಾಜ್ಯ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗುತ್ತದೆ ಎಂಬ ಕಾನೂನು ತಂದಿದ್ದರು.ಈ ಕಾಯ್ದೆ ಕಿತ್ತೂರಿನ ಮೇಲೂ ಕಾರ್ಮೋಡವನ್ನು ತಂದು ನಿಲ್ಲಿಸಿತು.ಮಲ್ಲಸರ್ಜ ತೀರಿಕೊಂಡ ನಂತರ ರಾಣಿ ಚೆನ್ನಮ್ಮಾ ಮಗನ ಹೆಸರಿನಲ್ಲಿ ಅಧಿಕಾರ ವಹಿಸಿಕೊಂಡು ರಾಜ್ಯಭಾರ ಮಾಡತೊಡಗಿದಳು.ಆದರೆ ದೌರ್ಭಾಗ್ಯವೆಂಬಂತೆ 1824ರಲ್ಲಿ ಮಗನೂ ಸತ್ತಾಗ ಬ್ರಿಟಿಷ್ ಸಾಮ್ರಾಜ್ಯವು ಕಿತ್ತೂರನ್ನು ಆಕ್ರಮಿಸಿಕೊಳ್ಳಲು ಮುಂದಾದಾಗ ಚೆನ್ನಮ್ಮ ರಾಣಿ ಸಂಗೊಳ್ಳಿ ರಾಯಣ್ಣನ ಬೆಂಬಲದೊಂದಿಗೆ ಸ್ವತಃ ತಾನೇ ರಣಾಂಗಣಕ್ಕೆ ಇಳಿದು ಯುದ್ಧ ಮಾಡಿದಳು.ಆದರೆ ದುರಾದೃಷ್ಟವಶಾತ್ ತಮ್ಮ ಕಡೆಯವರ ಮಸಲತ್ತಿನಿಂದಾಗಿಯೇ ಬೈಲಹೊಂಗಲದ ಜೈಲು ಸೇರಬೇಕಾಯಿತು.
ಚೆನ್ನಮ್ಮನ ಗೈರಿನಲ್ಲೂ ಯುದ್ಧವನ್ನು ಮುಂದುವರೆಸಿದ ಸಂಗೊಳ್ಳಿ ರಾಯಣ್ಣ. ಹರಿದು ಹಂಚಿಹೋದ ಸೇನೆಯನ್ನು ಪುನಃ ಕಟ್ಟಿ, ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧದ ರೀತಿಯಲ್ಲಿ ದಾಳಿ ಮಾಡಲು ಆರಂಭಿಸಿದ. ಬ್ರಿಟಿಷ್ ಸರ್ಕಾರದ ಬಂಗಲೆ,ಆಫೀಸುಗಳನ್ನು ದಾಳಿ ಮಾಡುವುದು, ಖಜಾನೆಗಳನ್ನು ಲೂಟಿ ಮಾಡುವುದು ಹೀಗೆ ಎಲ್ಲ ರೀತಿಯ ಯುದ್ಧದ ತಂತ್ರಗಳನ್ನು ಉಪಯೋಗಿಸಿ ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾದ.
ಹೀಗೇಬಿಟ್ಟರೆ ರಾಯಣ್ಣನನ್ನು ತಡೆಯಲು ಸಾಧ್ಯವಿಲ್ಲವೆಂದು ಅರಿತ ಬ್ರಿಟಿಷರು ಮೋಸದ ಹಾದಿಯ ಮೂಲಕ ಅವನನ್ನು ಸೆರೆ ಹಿಡಿದು, ಎಲ್ಲರ ಎದುರು ಸಾರ್ವಜನಿಕವಾಗಿ ಜನವರಿ 26ರಂದು ಗಲ್ಲಿಗೇರಿಸಲಾಯಿತು.
ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಅವನ ಹೋರಾಟ, ಧೈರ್ಯ ಮತ್ತು ಸಾಹಸಗಾಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದು ಹೋಗಿದೆ ಹಾಗು ಜನಪದರ ಕಥೆಗಳಲ್ಲಿ ಲಾವಣಿಗಳಲ್ಲಿ ಜೀವಂತವಾಗಿವೆ.