ಖುದಿರಾಮ್ ಬೋಸ್ (03/12/1889 – 11/08/1908)
1905ರಲ್ಲಿ ಲಾರ್ಡ್ ಕರ್ಜನ್ ಬಂಗಾಳದ ವಿಭಜನೆ ಮಾಡಿದಾಗ, ಅದರ ವಿರುದ್ಧ ದೇಶದಾದ್ಯಂತ ಚಳುವಳಿಗಳಾದವು. 1908ರ ವೇಳೆಗೆ ಬಂಗಾಳದ ಕ್ರಾಂತಿಕಾರಿ ತರುಣರು ಪ್ರತೀಕಾರದ ಮಾರ್ಗವನ್ನು ಅನುಸರಿಸಿದರು. ಆ ಸಂದರ್ಭದಲ್ಲಿ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯವನ್ನು ಹತ್ತಿಕ್ಕಲು ಹೆಣಗಾಡಿ, ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡುವ ಮಹತ್ತರವಾದ ಕೆಲಸದ ಜವಾಬ್ದಾರಿ ಹೊತ್ತಿದ್ದೇ ಹತ್ತೊಂಭತ್ತರ ಹುಡುಗ ಖುದಿರಾಮ್ ಬೋಸ್.
ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ “ಹರೇನ್ ಸರ್ಕಾರ್” ಎನ್ನುವ ಗುಪ್ತನಾಮ ಹೊತ್ತಿದ್ದ ಈ ಯುವಕ್ರಾಂತಿಕಾರಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ಪ್ರಥಮ ಬಲಿದಾನಿ. ಅಷ್ಟೇ ಅಲ್ಲದೇ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ಮೊದಲ ಬಾರಿಗೆ ಬಾಂಬ್ ಎಸೆದ ಧೀರ.
ಬಂಗಾಳದ ಮೇದಿನಿಪುರ ಜಿಲ್ಲೆಯ ಬಹುವೇನಿ ಎಂಬ ಊರಲ್ಲಿ 3 ಡಿಸೆಂಬರ್ 1889ರಲ್ಲಿ ಜನಿಸಿದ ಖುದಿರಾಮ್ ಚಿಕ್ಕಂದಿನಲ್ಲಿಯೇ ತಾಯಿ (ಲಕ್ಷ್ಮಿಪ್ರಿಯಾದೇವಿ) ಹಾಗೂ ತಂದೆ (ತ್ರೈಲೋಕ್ಯನಾಥ)ಯ ಮೃತ್ಯುವಾದುದರಿಂದ ಅವರ ಅಕ್ಕ ಅನುರೂಪಾದೇವಿ ಹಾಗೂ ಅಕೆಯ ಪತಿ ಅಮೃತಲಾಲನ ಅಕ್ಕರೆಯಲ್ಲಿ ಬೆಳೆದ.
ತನ್ನ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತನ್ನ ಅಕ್ಕ ಮತ್ತು ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾಗಿ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಳ್ಳಲು ಪ್ರೇರಿಪಿಸಿದ್ದೇ, ಬಕೀಂಚಂದ್ರರ ಆನಂದ ಮಠ ಮತ್ತು ಆನಂದದಾತ ಕಾದಂಬರಿಗಳು.
ಬಕೀಂಚಂದ್ರರ ಆನಂದ ಮಠದ `ವಂದೇ ಮಾತರಂ’ನ ಮಂತ್ರ ಈತನ ನರನಾಡಿಗಳಲ್ಲಿ ತುಂಬಿ ಹರಿದಾಡುತ್ತಿತ್ತು. ಸುಮಾರು ಹದಿನೈದರ ಹರೆಯದಲ್ಲಿಯೇ ಖುದಿರಾಮ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡದ್ದನಲ್ಲದೇ ಕ್ರಾಂತಿಕಾರ್ಯದ ಕರಪತ್ರಗಳನ್ನು ಹಂಚಿ ಸಿಕ್ಕಿಬಿದ್ದು ಬಿಡುಗಡೆಯಾಗಿದ್ದ.
ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ “ವಂದೇ ಮಾತರಂ” ಪತ್ರಿಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನಾವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡ್ ಆ ಯುವಕನನ್ನು ಮ್ಯಾಜಿಸ್ಟ್ರೇಟ್ ನ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದ.
ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡ್ ನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡ್ ನನ್ನು ಮುಜಫರಪುರಕ್ಕೆ ವರ್ಗ ಮಾಡಿತು.
ಕಿಂಗ್ಸ್ ಫೋರ್ಡ್ ನನ್ನು ಕೊಲ್ಲಲೇಬೇಕೆಂದು ನಿರ್ಧಾರ ಮಾಡಿದ ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಅವರ ಸಹ ಕ್ರಾಂತಿಕಾರಿ ಪ್ರಫುಲ್ ಚಾಕಿಗೆ ವಹಿಸಿದರು. ದಿನಾಂಕ 30 ಎಪ್ರಿಲ್ 1905ರಂದು ಕಿಂಗ್ಸ್ ಫೋರ್ಡ್ ನ ವಾಹನದ ಮೇಲೆ ಸ್ಫೋಟಕ ಎಸೆದು ಅವನ ಕ್ರೌರ್ಯವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಮಾಡಿದರು. ಪ್ರತೀ ದಿನ ಸಂಜೆ ಕಿಂಗ್ಸ್ ಫೋರ್ಡ್ ಮನೋರಂಜನೆಗಾಗಿ ಹತ್ತಿರದ ಕ್ಲಬ್ಬಿಗೆ ಬರುವ ವಿಷಯವನ್ನು ಅರಿತು ಅವನು ಕ್ಲಬ್ಬಿನಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ಆತನ ಕಾರಿನ ಮೇಲೆ ಬಾಂಬ್ ಸಿಡಿಸಿ ಆತನನ್ನು ಹತ್ಯೆ ಮಾಡಲು ನಿರ್ಧರಿಸಿದರು.
1908ನೇ ಏಪ್ರಿಲ್ 30ರಂದು ಪೂರ್ವ ನಿರ್ಧಾರದಂತೆ ಕ್ಲಬ್ಬಿನಿಂದ ಹೊರಬಂದ ಕಿಂಗ್ಸ್ ಫೋರ್ಡ್ ಕಾರಿನಲ್ಲಿ ಯಾರು ಕುಳಿತಿದ್ದಾರೆ ಎಂಬುದನ್ನೂ ಗಮನಿಸದೇ, ನಿಗಧಿತ ಸ್ಥಳಕ್ಕೆ ಬಂದ ತಕ್ಷಣವೇ, ಬಾಂಬ್ ಹಾಕಲಾಯಿತಾ ಆ ರಾತ್ರಿ ಕಿಂಗ್ಸ್ ಫೋರ್ಡ್ ನ ವಾಹನ ಬರುತ್ತಿದ್ದಂತೆ ಅಡ್ಡಗಟ್ಟಿ ನಿಂತ ಖುದಿರಾಮ ಅದರತ್ತ ಸ್ಫೋಟಕವನ್ನು ಎಸೆದ. ವಾಹನ ಸ್ಫೋಟಗೊಳ್ಳುತ್ತಿದ್ದಂತೆ ಖುದಿರಾಮ್ ಮತ್ತು ಪ್ರಫುಲ್ಲಚಂದ್ರ ಮುಂದೆ ಪೊಲೀಸ್ ಕೈಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂದು ಯೋಚಿಸಿ, ಇತ್ತ ಕಿಂಗ್ಸ್ ಫೋರ್ಡ್ ನನ್ನು ಕೊಂದೆವೆಂದುಕೊಂಡು ಒಂದೊಂದು ದಿಕ್ಕಿಗೊಬ್ಬರು ಓಡಿದರು.
ರಾತ್ರಿ ಬೆಳಗಾಗುವುದರಲ್ಲಿ ಕಿಂಗ್ಸ್ ಫೋರ್ಡ್ ಮೇಲಾದ ದಾಳಿಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತು. ಆದರೆ ಬಾಂಬ್ ಗೆ ಕಿಂಗ್ಸ್ ಫೋರ್ಡ್ ಸಾಯದೇ ಇಬ್ಬರು ಮಹಿಳೆಯರು ಬಲಿಯಾಗಿದ್ದರು. ಇದರ ಪರಿವೆಯಿಲ್ಲದ ಖುದಿರಾಮ್ ರಾತ್ರಿ ಇಡೀ ಸುಮಾರು 40 ಕಿಲೋಮೀಟರ್ ನಡೆದು ಬೆನಿ ರೈಲು ನಿಲ್ದಾಣವನ್ನು ತಲುಪಿದ.
ಮುಜಾಫರ್ ನಗರದ ಪೊಲೀಸ್ ಸೂಪರಿಂಟೆಂಡೆಂಟ್ ಎಲ್ಲಾ ಕಡೆಗಳಲ್ಲೂ ಅಪರಾಧಿಗಳ ಶೋಧಕಾರ್ಯ ಕೈಗೊಂಡರು. ಆ ಅಪರಾಧಿಗಳನ್ನು ಬಂಧಿಸಲು ಸಹಕರಿಸುವವರಿಗೆ ರೂ. 5000ದ ಬಹುಮಾನವನ್ನೂ ಘೋಷಿಸಲಾಯಿತು. ಮತ್ತೆರಡು ದಿನಗಳ ಒಳಗಾಗಿ, ಪೊಲೀಸರಾದ ಫತೇಸಿಂಗ್ ಮತ್ತು ಶಿಯೋಸಿಂಗ್ ಖುದಿರಾಂನನ್ನು ಮುಜಾಫರ್ ನಗರದಿಂದ 25 ಮೈಲು ದೂರದಲ್ಲಿ ಒಂದು ದಿನಸಿ ಅಂಗಡಿಯ ಸಮೀಪ ಬಂಧಿಸಿದರು. ಅವರಿಂದ ಎರಡು ಪಿಸ್ತೂಲುಗಳನ್ನೂ, ಮದ್ದುಗುಂಡುಗಳನ್ನೂ ವಶಪಡಿಸಿಕೊಳ್ಳಲಾಯಿತಲ್ಲದೇ ಅವರನ್ನು ಮುಜಾಫರ್ ನಗರಕ್ಕೆ ಕರೆತರಲಾಯಿತು. ಅಲ್ಲಿ ವಿಚಾರಣೆಯಲ್ಲಿ ಖುದಿರಾಮ್ ತಪೆÇ್ಪಪ್ಪಿಗೆಯ ಹೇಳಿಕೆ ನೀಡಿದ.
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡ್ ನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ನಡುಕ ಹುಟ್ಟಿಸಿತ್ತು. ಈ ಹುಡುಗರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡ್ ನ ವಾಹನ ಚೂರು ಚೂರು ಮಾಡಿದ್ದಲ್ಲದೆ ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿತು. ಮುಜಫರಪುರದಿಂದ ಸುಮಾರು, 25 ಮೈಲುಗಳಾಚೆ ಖುದಿರಾಮ್ ನನ್ನು ಸೆರೆಹಿಡಿಯಲಾಯಿತಾದರೂ, ತಪ್ಪಿಸಿಕೊಳ್ಳಲು ಆವರು ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು.
1908 ಜೂನ್ 13ರಂದು ನ್ಯಾಯಾಧೀಶ ಕಾರ್ನ್ಡಫ್ ಗಲ್ಲು ಶಿಕ್ಷೆಯ ತೀರ್ಮಾನ ನೀಡಿದ. ಇದನ್ನು ಪ್ರಶ್ನಿಸಿ ಖುದಿರಾಮ್ ಕಲ್ಕತ್ತಾ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಆದರೆ ಜುಲೈ 13 ರಂದು ತಿರಸ್ಕೃತವಾಗಿ ಕೆಳಗಿನ ನ್ಯಾಯಾಲಯದ ತೀರ್ಮಾನವನ್ನೇ ಎತ್ತಿ ಹಿಡಿಯಲಾಯಿತು. 1908ರ ಆಗಸ್ಟ್ 11ರಂದು ಖುದಿರಾಮ್ ಬೋಸ್ಗೆ ಗಲ್ಲುಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಖುದಿರಾಮ್ ಬೋಸ್ ನಗುನಗುತ್ತಲೇ ನೇಣಿಗೇರಿ ದೇಶಮಾತೆಯ ಪದತಲದಲ್ಲಿ ತನ್ನನ್ನು ಅರ್ಪಿಸಿಕೊಂಡ.
ಆ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಕ್ರಾಂತಿಕಾರಿ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆಯೇ ಚಂದ್ರಶೇಖರ ಆಜಾದ್ ಅವರಂತೆಯೇ ತನ್ನ ಪಿಸ್ತೂಲಿನಿಂದಲೇ ತಾನೇ ಗುಂಡಿಕ್ಕಿಕೊಂಡು ಅಮರರಾಗುತ್ತಾರೆ.
ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿದ ಈ ಕೆಲಸದ ರೂವಾರಿ ಹತ್ತೊಂಭತ್ತರ ಹುಡುಗ ಖುದಿರಾಮ್ ಭೋಸ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಬಾಂಬ್ ಬಳಸಿ ಇಡೀ ಬ್ರಿಟೀಷ್ ಸಾಮ್ರಾಜ್ಯದ ನರನಾಡಿಗಳಲ್ಲಿ ಭಯವನ್ನು ಹುಟ್ಟಿಸಿದ್ದ. ಅಲ್ಲಿಯವರೆಗು ಉನ್ಮತ್ತರಾಗಿದ್ದ ಬ್ರಿಟೀಷ್ ಅಧಿಕಾರಿಗಳಿಗೆ ಭಾರತದ ಕ್ರಾಂತಿಕಾರಿಗಳ ವಿಶ್ವರೂಪದರ್ಶನವಾಯಿತು.
ಈ ಮಹಾನ್ ಕ್ರಾಂತಿಕಾರಿಯನ್ನು ಸೆಂಟ್ರಲ್ ಜೈಲಿನಲ್ಲಿ ಬ್ರಿಟಿಷರು ಇಟ್ಟಿದ್ದಾಗಿನ ಸೆಲ್ ಅನ್ನು ಇಂದು ಮುಜಾಫರ್ಪುರದಲ್ಲಿ ಸಂರಕ್ಷಿಸಲಾಗಿದೆ. ಮುಜಫರ್ಪುರದ ಕೇಂದ್ರ ಕಾರಾಗೃಹಕ್ಕೆ ಶಹೀದ್ ಖುದಿರಾಮ್ ಬೋಸ್ ಕೇಂದ್ರ ಕಾರಾಗೃಹ ಎಂದು ಹೆಸರಿಡಲಾಗಿದೆ.