ಲಾಲಾ ಲಜಪತ್ ರಾಯ್ ಪಂಜಾಬ್ ಪ್ರಾಂತ್ಯದ ಫಿರೋಜಪುರ ಜಿಲ್ಲೆಯ ದುಡಿಕೆ ಎಂಬ ಹಳ್ಳಿಯಲ್ಲಿ 1865 ರ ಜನವರಿ 28 ರಂದು ಜನಿಸಿದರು. ಇವರ ತಂದೆ ಲಾಲಾ ರಾಧಾಕಿಷನ್ ಸರಕಾರಿ ಪಾಠಶಾಲೆಯಲ್ಲಿ ಉರ್ದು ಉಪಾಧ್ಯಾಯರಾಗಿದ್ದರು. ಸ್ವಾತಂತ್ರ್ಯ ಪ್ರೇಮ ಹಾಗೂ ಆತ್ಮಾಭಿಮಾನಕ್ಕೆ ಹೆಸರಾದ ಅಗರವಾಲ ಮನೆತನಕ್ಕೆ ಸೇರಿದವರು. ಲಜಪತ್ ರಾಯ್ ಅವರ ತಾಯಿ ಗುಲಾಬ್‌ದೇವಿ.

ರಾಯ್ ಅವರ ಪ್ರಾರಂಭಿಕ ಶಿಕ್ಷಣ ಪ್ರಸಕ್ತದಲ್ಲಿ ಹರ್ಯಾಣದಲ್ಲಿರುವ ರೆವಾರಿ ಎಂಬ ಊರಿನಲ್ಲಾಯಿತು.  ಲಜಪತ ರಾಯ್ ಅವರ ತಂದೆ ರಾಧಾ ಕೃಷ್ಣನ್ ಅಂದಿನ ದಿನಗಳಲ್ಲಿ ಉರ್ದು ಶಿಕ್ಷಕರಾಗಿದ್ದರು. ಬಡತನ ಮತ್ತು ಅನಾರೋಗ್ಯ ಅವರ ಉನ್ನತ ವ್ಯಾಸಂಗಗಳಿಗೆ ಅಡ್ಡಿಯಾಗಿದ್ದವು. ವಿದ್ಯಾರ್ಥಿ ವೇತನಗಳನ್ನು ಪಡೆದ. 1880 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದರು. ಅದೇ ವರ್ಷ ಪಂಜಾಬ್ ವಿಶ್ವ ವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿದರು. ಅನಂತರ ಲಾಹೋರಿನ ಸರಕಾರಿ ಕಾಲೇಜು ಸೇರಿದರು. ಜೊತೆಯಲ್ಲಿಯೇ ನ್ಯಾಯಶಾಸ್ತ್ರದ ಓದು ಸಾಗಿತು. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣ ಓದು ಎರಡು ವರ್ಷಗಳ ಕಾಲ ನಿಂತು ಹೋಯಿತು. 

1883 ರಲ್ಲಿ ನ್ಯಾಯ ಶಾಸ್ತ್ರದ ಪ್ರಥಮ ಪರೀಕ್ಷೆ ಮುಗಿಸಿದ ಮೇಲೆ ಅವರು ಮುಖ್ತಾರಿ (ಚಿಕ್ಕ ವಕೀಲ) ಕೆಲಸಕ್ಕೆ ಅನುಮತಿ ಪಡೆದರು. ಮನೆಯ ನಿರ್ವಹಣೆಯ ಭಾರವೂ ಸಹ ಅವರಿಗಿತ್ತು. 18 ವರ್ಷದ ಲಾಲಾಜಿ ಜಗ್ರಾಂವ್ ಪಟ್ಟಣದ ರೆವಿನ್ಯೂ ಕೋರ್ಟನಲ್ಲಿ ಮುಖ್ತಾರಿ ವೃತ್ತಿ ನಡೆಸಿದನು. 1889 ರಲ್ಲಿ ಪ್ಲೀಡರ್ ಪರೀಕ್ಷೆ ಮುಗಿಸಿ, ದಕ್ಷಿಣ ಪಂಜಾಬಿನ ಹಿಸಾರ ಎಂಬಲ್ಲಿಗೆ ಬಂದು ವಕೀಲ ವೃತ್ತಿ ಪ್ರಾರಂಭಿಸಿದರು. ಹಣ ಗಳಿಸುವ ಇಚ್ಛೆ ಅವರದಾಗಿರಲಿಲ್ಲ. ಇಟಲಿಯ ವೀರ ಕ್ರಾಂತಿಕಾರಿ ಮ್ಯಾಜಿನಿಯ ಜೀವನ ಚರಿತ್ರೆಯನ್ನು ಓದಬೇಕೆಂದು ಅವರಿಗೆ ಆಸೆಯಾಯಿತು. ಭಾರತದಲ್ಲಿ ಅವರಿಗೆ ಆ ಪುಸ್ತಕ ದೊರೆಯಲಿಲ್ಲ. ಇಂಗ್ಲೆಂಡಿನಲ್ಲಿದ್ದ ಸ್ನೇಹಿತರೊಬ್ಬರಿಗೆ ಬರೆದು ತರಿಸಿಕೊಂಡರು. ಆ ವೀರರ ಸಾಹಸ ಪ್ರವೃತ್ತಿ, ಉದಾರ ಸ್ವಭಾವ ದೇಶಾಭಿಮಾನ ಅವರನ್ನು ರೋಮಾಂಚನಗೊಳಿಸಿದವು.

ಸ್ವಾಮಿ ದಯಾನಂದ ಮರಣದ ನಂತರ ಲಾಲಾಜಿ ತಮ್ಮ ಸಹೋದ್ಯೋಗಿಗಳೊಂದಿಗೆ ದಯಾನಂದ ಅಂಗ್ಲೋ ವೇದಿಕ್ ಕಾಲೇಜಿನ (ಡಿ.ಎ.ವಿ ಕಾಲೇಜು) ಅಭ್ಯುದಯಕ್ಕಾಗಿ ದುಡಿದರು. ಆರ್ಯಸಮಾಜದ ಮೂರು ಧ್ಯೇಯಗಳು ಸಮಾಜ ಸುಧಾರಣೆ, ಹಿಂದೂ ಧರ್ಮದ ಏಳಿಗೆ ಮತ್ತು ವಿದ್ಯಾಭಿವೃದ್ಧಿ. ಲಾಲಾಜಿಯವರ ಮಾಸಿಕ ವರಮಾನ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಾಗಿತ್ತು. ತಂದೆ ನಿರಾತಂಕವಾಗಿರುವಂತೆ ಒಂದಿಷ್ಟು ಹಣವನ್ನು ತೆಗೆದಿಟ್ಟು, ಅದರ ಮೇಲಿನ ಬಡ್ಡಿ ತಂದೆಗೆ ಸಲ್ಲುವಂತೆ ಏರ್ಪಾಡು ಮಾಡಿದರು. ಅವರ ಆದಾಯದಲ್ಲಿ ಹತ್ತರಲ್ಲೊಂದು ಪಾಲು ದೇಶಕ್ಕೆ ಮೀಸಲು. ಅವಿಶ್ರಾಂತವಾಗಿ ಕೆಲಸ ಮಾಡಿ ಆರ್ಯ ಸಮಾಜದ ಶಾಖೆಗಳನ್ನು ಸ್ಥಾಪಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಅವರು ಜಾತಿಪರ ವ್ಯಕ್ತಿಯಾಗಿರಲಿಲ್ಲ. ಮುಸ್ಲಿಮರು ಅಧಿಕವಾಗಿದ್ದ ಕ್ಷೇತ್ರದಿಂದ ಪುರಸಭೆಯ ಸಮಿತಿಗೆ ಅವಿರೋಧವಾಗಿ ಚುನಾಯಿತರಾದರು.

ಹಿಂದೂ ಧರ್ಮ ಮತ್ತು ಮನುಸ್ಮೃತಿಗಳಿಂದ ತೀವ್ರ ಪ್ರಭಾವಿತರಾದ ಲಾಲಾ ಲಜಪತ ರಾಯ್ ರಾಜಕೀಯ ಹೋರಾಟ ಮತ್ತು ಬರವಣಿಗೆಗಳ ಕುರಿತು ಅಪಾರ ಒಲವು ಬೆಳೆಸಿಕೊಂಡರು.   ಹಿಂದೂ ಮಹಾಸಭಾದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು,  ಹಿಂದೂ ಧರ್ಮದಲ್ಲಿ ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು.  ಇದೇ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸತೊಡಗಿದರು.  

ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ರಾಯ್ ಅವರು ತಾವು ವಿದ್ಯಾರ್ಥಿಯಾಗಿದ್ದ ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು.  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು.   ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು.  ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್ ಅವರ ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು.  

ಲಾಲಾ ಲಜಪತ ರಾಯ್ ಅವರು ತಮ್ಮ ತಾಯಿ 1927ರ ವರ್ಷದಲ್ಲಿ ನಿಧನರಾದಾಗ ಅವರ ಹೆಸರಿನಲ್ಲಿ ಗುಲಾಬಿ ದೇವಿ ಟ್ರಸ್ಟ್ ಸ್ಥಾಪಿಸಿ ಅನೇಕ ಸೇವಾ ಕಾರ್ಯಗಳನ್ನು ಆರಂಭಿಸಿದರು.  

1928ರಲ್ಲಿ ಭಾರತದಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಲು ನಿಯಮಿತಗೊಂಡಿದ್ದ ಸರ್ ಜಾನ್ ಸೈಮನ್ ನೇತೃತ್ವದ ಆಯೋಗದಲ್ಲಿ  ಒಬ್ಬರೇ ಒಬ್ಬರೂ ಭಾರತೀಯ ಪ್ರತಿನಿಧಿಗಳು ಇರಲಿಲ್ಲ ಎಂಬ ನಿಟ್ಟಿನಲ್ಲಿ ಭಾರತೀಯ ಸಂಘಟನೆಗಳು ಅದನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು ದೇಶದಾದ್ಯಂತ ಚಳುವಳಿಯನ್ನು ನಡೆಸಿದವು.  1928ರ ಅಕ್ಟೋಬರ್ 30ರಂದು  ಸೈಮನ್ ಆಯೋಗವು  ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಶಾಂತಿಯುತ ಮೆರವಣಿಗೆಯ ನೇತೃತ್ವ ವಹಿಸಿದರು.  ಆ ಸಂದರ್ಭದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ದುರಹಂಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡುವ ಆದೇಶವಿತ್ತದ್ದೇ ಅಲ್ಲದೆ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವುದಕ್ಕೆ ಕಾರಣನಾದನು.  ಈ ತೀವ್ರ ಪೆಟ್ಟುಗಳಿಂದ ಹೊರಬರಲಾಗದ ಲಾಲಾ ಲಜಪತ ರಾಯ್ ಅವರು 1928ರ ನವೆಂಬರ್ 17ರಂದು ಹೃದಯಾಘಾತದಿಂದ ನಿಧನರಾದರು.  ಸ್ಕಾಟನ ಈ ದುಷ್ಕೃತ್ಯ ಮಹಾನ್ ದೇಶಭಕ್ತ, ವಿದ್ವಾಂಸ, ಅಹಿಂಸಾ ಪ್ರವೃತ್ತಿಯ ಶಾಂತಿದೂತರೆನಿಸಿದ್ದ  ಲಾಲಾ ಲಜಪತ ರಾಯ್ ಅವರ ಮರಣಕ್ಕೆ ಕಾರಣವಾಯಿತು.  ಇದರಿಂದ ತೀವ್ರವಾಗಿ ನೊಂದ ಭಗತ್ ಸಿಂಗ್, ರಾಜ ಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಅಂತಹ ವೀರರು ತೀವ್ರ ಹೋರಾಟಕ್ಕಿಳಿದು ದೇಶಕ್ಕೆ ಪ್ರಾಣಾರ್ಪಣೆ ಮಾಡಿದರು.  

Leave a Reply

Your email address will not be published.

This site uses Akismet to reduce spam. Learn how your comment data is processed.