Kasmiris observe Holocaust Day in Bangalore Jan 19-2013

-ಶ್ರೀನಿವಾಸ ಹೆಗ್ಡೆ. ಕೆ. ಎಂ.

ಅದೇ ದಿನವಷ್ಟೇ ಕಾಶ್ಮೀರದ ರಾಜ್ಯಪಾಲರಾಗಿ ಜಗಮೋಹನ್ ನೇಮಿಸಲ್ಪಟ್ಟಿದ್ದರು. ಫಾರೂಕ್ ಅಬ್ದುಲ್ಲ ಸರ್ಕಾರದ ಆಡಳಿತ ಸಂಪೂರ್ಣ ಹದಗೆಟ್ಟಿದ್ದ ದಿನಗಳವು. ದಿನೇ ದಿನೇ ಹೆಚ್ಚುತ್ತಿದ್ದ ಹಿಂದೂಗಳ ಹತ್ಯೆ, ಭಯೋತ್ಪಾದಕರ ಉಪಟಳ ಎಲ್ಲದರ ಬಗ್ಗೆ ಸರ್ಕಾರ ಉದ್ದೇಶಪೂರ್ವಕ ನಿರ್ಲಕ್ಷ ತಾಳಿತ್ತು. ಪ್ರತ್ಯೇಕ ಕಾಶ್ಮೀರಕ್ಕಾಗಿ ದಂಗೆಗಳೆದ್ದಿದ್ದವು. ಇದೆಲ್ಲದರ ನಡುವೆ ಜಗಮೋಹನರಂತಹ ಒಬ್ಬ ದಕ್ಷ, ನಿಷ್ಠುರ ಮತ್ತು ಪ್ರಾಮಾಣಿಕ ಆಡಳಿತಗಾರನ ನೇಮಕದಿಂದಾಗಿ ಸಹಜವಾಗಿಯೇ ಪ್ರತ್ಯೇಕತಾವಾದಿಗಳಲ್ಲಿ ಸ್ವಲ್ಪ ತಳಮಳ ಶುರುವಾಯಿತು. ಇದೇ ವಿಷಯದ ಗೊಂದಲದಲ್ಲಿ ಉಗ್ರರ ರಬ್ಬರ್ ಸ್ಟ್ಯಾಂಪ್ ಆಗಿದ್ದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ರಾಜೀನಾಮೆ ನೀಡಿ ಮೂಲೆ ಸೇರಿಕೊಂಡಿದ್ದಾಯಿತು.

Kasmiris observe Holocaust Day in Bangalore Jan 19-2013
Kasmiris observe Holocaust Day in Bangalore Jan 19-2013

ಅಂದಿಗೂ ಕೆಲವು ದಿನಗಳ ಹಿಂದಿನ ಘಟನಾವಳಿಗಳು, ಅಂದರೆ ಸುಮಾರು 1985ರಿಂದ ಕಾಶ್ಮೀರದ ಪರಿಸ್ಥಿತಿ ನೋಡಿದಾಗ ಆ ದಿನದ ಗಂಭೀರತೆ ಅರ್ಥವಾಗುತ್ತದೆ. ಪಾಕಿಸ್ಥಾನಿ ಪ್ರಚೋದಿತ, ಪ್ರಾಯೋಜಿತ ಮತಾಂಧರ ಭೀಕರ ಕ್ರೌರ್ಯಕ್ಕೆ ಸುಂದರ ಕಣಿವೆಗಳಲ್ಲಿ ನೀರವತೆ ಆವರಿಸಿತ್ತು. ಕಾಶ್ಮೀರದ ಮೂಲನಿವಾಸಿಗಳಾದ, ತಲೆಮಾರುಗಳಿಂದ  ಆ ಕಣಿವೆಗಳಲ್ಲಿ ಬದುಕು ಕಟ್ಟಿಕೊಂದಿದ್ದ ಮುಗ್ದ ಜನಾಂಗವೊಂದು ಹಿಂಸಾಚಾರಕ್ಕೆ ಅಕ್ಷರಶಃ ನಲುಗಿ ಹೋಗಿತ್ತು. ಕಾಶ್ಮೀರಿ ಪಂಡಿತರ ಜೀವನದ ಪ್ರತಿಯೊಂದು ದಿನವೂ ಕೊಲೆ, ಅತ್ಯಾಚಾರ, ಲೂಟಿಗಳಿಲ್ಲದೇ ಉರುಳುತ್ತಲೇ ಇರಲಿಲ್ಲ. “ಮತಾಂತರವಾಗಿ ನಮ್ಮೊಂದಿಗೆ ಸೇರಿ, ಇಲ್ಲವೆ ಜಾಗ ಖಾಲಿ ಮಾಡಿ, ಅಥವಾ ಜೀವತ್ಯಾಗ ಮಾಡಿ” ಎಂಬ ಪರಮ ಅಸಹಿಷ್ಣು ಕೂಗುಗಳೇ ಎಲ್ಲೆಡೆ ಕೇಳಿಸುತ್ತಿತ್ತು. ಇದೇ ವಾಕ್ಯಗಳ ಬೆದೆರಿಕೆ ಪತ್ರಗಳು ದಿನ ಬೆಳಗಾದರೆ ಅನೇಕ ಮನೆಗಳ ಬಾಗಿಲುಗಳ ಮೇಲೆ ಕಾಣಿಸುತ್ತಿತ್ತು. ಮಹಿಳೆಯರ ಬೆತ್ತಲೆ ಶವಗಳು ಮರದಲ್ಲಿ ನೇತಾಡುತ್ತಿದ್ದವು. ಪಂಡಿತ ಸಮುದಾಯದ ನಾಯಕರ ಬರ್ಬರ ಹತ್ಯೆಗಳಾಗತೊಡಗಿದವು. ಕೆಲವು ಕಡೆಗಳಂತೂ ಶವಗಳು ಅನಾಥವಾಗಿ ಬೀದಿಗಳಲ್ಲೇ ಕೊಳೆತು ಹೋದವು. ಆಳುವವರ ನಿರ್ಲಕ್ಷ, ನೆರೆಹೊರೆಯವ ದ್ವೇಷ ಮತ್ತು ತಿರಸ್ಕಾರದಿಂದ ಭಯ, ಆತಂಕ ಪಂಡಿತರ ಜೀವನದ ಅಭಿನ್ನ ಭಾಗವಾಗಿ ಹೋಯಿತು.

ಆದರೆ ಆ ದಿನ ಕಣಿವೆಗಳಲ್ಲಿ ಇದೆಲ್ಲದಕ್ಕೂ ಮೀರಿದ ಕ್ರೌರ್ಯದ ಅಟ್ಟಹಾಸವಾಗಿತ್ತು. ಕಾನೂನು ಪಾಲನೆಗೆ ರಾಜ್ಯಪಾಲರು ಬೆಳಗಿನಿಂದಲೇ ಕರ್ಫ್ಯೂ ವಿಧಿಸಿದ್ದರು. ಯಾವುದೇ ತರಹದ ಅಹಿತಕರ ಘಟನೆಯಾಗಬಾರದೆಂದು ಪೋಲೀಸರಿಗೆ ಸ್ಪಷ್ಟ ನಿರ್ದೇಶನ ರವಾನಿಸಲಾಗಿತ್ತು. ಆದರೆ ಇದಾವುದಕ್ಕೂ ಬಗ್ಗದ ಮತಾಂಧ ರಾಕ್ಷಸರ ಗುಂಪು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದಿತ್ತು. ಅವರ ರೋಷಕ್ಕೆ ಸಾವಿರಾರು ಪಂಡಿತರ ಮನೆಗಳು ಆಹುತಿಯಾಗಿದ್ದವು. ಆ ದಿನ ಮನೆಯಿಂದ ಹೋದ ಕಾಶ್ಮೀರಿಗಳ ಅಪ್ಪ, ಅಮ್ಮ, ಅಣ್ಣ, ಅಕ್ಕ ಯಾರೂ ಹಿಂದಿರುಗಿ ಬರಲೇ ಇಲ್ಲ. “ಕಾಶ್ಮೀರ್ ಮೆ ರೆಹನಾ ಹೈ ತೊ ಅಲ್ಲಾ ಹೋ ಅಕ್ಬರ್ ಕೆಹನಾ ಹೈ”, “ಅಸಿ ಗಚ್ಚಿ ಪಾಕಿಸ್ಥಾನ್ ಬತಾವೋ ರೊಸ್ತೇ ಬತಾನೇವ್ ಸಾನ್” (ಅವರಿಗೆ ಹೇಳಿ ನಮಗೆ ಪಾಕಿಸ್ಥಾನ್ ಬೇಕು, ನಿಮ್ಮ ಗಂಡಂದಿರು ಬೇಡ ನೀವು ಬೇಕು!) ಎಂಬ ರಾಷ್ಟ್ರವಿರೋಧಿ, ಲಜ್ಜೆಗೆಟ್ಟ ಘೋಷಣೆಗಳು ನಿರಂತರವಾಗಿ ಕಾಶ್ಮ್ಮೀರಿ ಮದರಸಾ ಮತ್ತು ಮಸೀದಿಗಳಿಂದ ಮುಗಿಲು ಮುಟ್ಟುವಂತೆ ಇಡೀ ದಿನ ಅಬ್ಬರಿಸತೊಡಗಿದವು. ಕೊನೆಗೂ ಆ ದಿನ ಕಾಶ್ಮೀರದ ಇತಿಹಾಸದ ಕರಾಳ ರಾತ್ರಿಯಾಯಿತು. ಕೊನೆಗೂ ಪಂಡಿತರು ಆ ರಾಕ್ಷಸೀ ಕ್ರೌರ್ಯಕ್ಕೆ ಮಣಿಯಲೇಬೇಕಾಯಿತು.

ನಿರಂತರವಾದ ಹಿಂಸೆ, ಕ್ರೌರ್ಯದಿಂದ ತತ್ತರಿಸಿ ಹೋಗಿದ್ದ ಪಂಡಿತರಿಗೆ ಅಂದು ಹೊಳೆದದ್ದು ಅದೊಂದೇ ಕೊನೆಯ ಮಾರ್ಗ. ಹೌದು, ಮರುದಿನ ಬೆಳಗಿನ ಹೊತ್ತಿಗೆ ಸುಮರು 3 ಲಕ್ಷದಷ್ಟು ಜನ ಸ್ವಂತದ್ದೆಲ್ಲವನ್ನು ತೊರೆದು ಅನಾಥರಾಗಿ ಹೊರಟು ನಿಂತಿದ್ದರು. ಒಂದು ಕಡೆ ತಲೆಮಾರುಗಳಿಂದ ನೆಲೆಸಿದ ಭೂಮಿ, ಜೀವನದ ನೋವು ನಲಿವುಗಳೊಡನೆ ಅವಿನಾಭಾವ ಸಂಬಂಧ ಹೊಂದಿದ್ದ ಸುಂದರ ಪೃಕೃತಿ. ಎಲ್ಲವೂ ಒಂದು ರಾತ್ರಿಯಲ್ಲಿ ಅವರಿಂದ ಸಾವಿರಾರು ಮೈಲಿ ದೂರ ಸರಿದು ಹೋಗಿತ್ತು. ಎಲ್ಲವೂ ಇದ್ದೂ ಅವರು ಸ್ವಂತ ದೇಶದಲ್ಲೇ ಅವರು ನಿರಾಶ್ರಿತರಾಗಿದ್ದರು. ಅದು ದೇಶದ ಇತಿಹಾಸದಲ್ಲೇ ಬಹು ದೊಡ್ದ ಸಾಮೂಹಿಕ ವಲಸೆಯಾಗಿತ್ತು. ಅಂದು ಭಾರತದ ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವದ ಮುಖಕ್ಕೆ ಕಪ್ಪು ಮಸಿ ಬಳಿದಿತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಒಂದು ಸಭ್ಯ ಸಂಸ್ಕತಿಗೆ   ದೇಶದಿಂದ ದೊರೆತ ಉಡುಗೊರೆ ಇದಾಗಿತ್ತು. ಅದು 19ನೇ ಜನವರಿ 1990. ನಿನ್ನೆಗೆ 23 ವರ್ಷಗಳೇ ಸಂದರೂ ಅದೇಕೊ ಆ ನೋವಿನ ಆಕ್ರಂದನ ಇಂದೂ ನೆನಪಾಗುತ್ತದೆ. ಅಂದಿನ ದುರ್ಘಟನೆಗಳಿಗೆ ಸುಂದರ ಕಣಿವೆಗಳ ಸ್ಮಶಾನ ನೀರವತೆಯೇ ಸಾಕ್ಷಿ.

ಇಷ್ಟೆಲ್ಲಾ ನೋವನನುಭವಿಸಿದರೂ ಅವರ ಗೋಳಿನ ಕಥೆ ಇಂದಿಗೂ ಮುಗಿದಿಲ್ಲ. ಈಗಲೂ ಅನೇಕ ಕಡೆಗಳಲ್ಲಿ ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ ಸಾವಿರಾರು ಜನ ದಿನವೂ ಕಷ್ಟಕರ ಜೀವನ ಸವೆಸುತ್ತಿದ್ದಾರೆ. ಕನಿಷ್ಠ ವ್ಯವಸ್ಥೆಗಳೂ ಇಲ್ಲದೇ ಕೊಳಕಿನ ಕೂಪಗಳಾಗಿರುವ ನಿರಾಶ್ರಿತರ ವಸತಿಗಳ ಸ್ಥಿತಿ ತೀರಾ ಶೋಚನೀಯ. ತಮ್ಮ ದೇಶದಲ್ಲೇ ಸಾಂವಿಧಾನಿಕ ಹಕ್ಕು ಪಡೆಯಲು ಪ್ರತಿ ದಿನ ಹೆಣಗುತ್ತಿರುವುದು ನಮ್ಮ ದೇಶದ ಆತ್ಮಾಭಿಮಾನದ ಅಣಕವಲ್ಲದೇ ಮತ್ತೇನು? ಒಂದು ಕಡೆ ಕಾನೂನು ಬಾಹಿರವಾಗಿ ನುಸುಳುವ ಬಾಂಗ್ಲಾದೇಶಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿ, ಸಾಂವಿಧಾನಿಕ ಹಕ್ಕು ನೀಡುವ ಓಲೈಕೆ ರಾಜಕಾರಣಿಗಳು, ಸ್ವಹಿತ ಚಿಂತಕರು. ಮತ್ತೊಂದೆಡೆ, ಕಣ್ಣೀರಿನಲ್ಲೇ ಕೈತೊಳೆಯುವ ಕಾಶ್ಮೀರಿ ಪಂಡಿತರ ಕುಟುಂಬಗಳು. ಎಂತಹ ವಿಪರ್ಯಾಸ! ಎಷ್ಟು ಸರ್ಕಾರಗಳು ಬಂದು ಹೋದರೂ ಕಾಶ್ಮೀರಿ ನಿರಾಶ್ರಿತರ ಸಮಸ್ಯೆಗೆ ದಿವ್ಯ ಮೌನವೊಂದೇ ಉತ್ತರವಾಗುತ್ತಿದೆ. ಅಲ್ಪಸಂಖ್ಯಾತರ ವಿಷಯ ಬಂದ ತಕ್ಷಣ ಗಂಟಲು ಹರಿದುಕೊಳ್ಳುವ ಜಾತ್ಯತೀತರು, ಬುದ್ಧಿಜೀವಿಗಳು ಪಂಡಿತರ ವಿಷಯ ಬಂದ ತಕ್ಷಣ ಕಾಣೆಯಾಗಿಬಿಡುತ್ತಾರೆ. ಗುಜರಾತ್ ವಿಷಯ ಹಿಡಿದು ಬೊಬ್ಬೆ ಹೊಡೆದುಕೊಂಡು ಮೈ ಪರಚಿಕೊಳ್ಳುವ ಮಾನವ ಹಕ್ಕು ಆಯೋಗಗಳಿಗೆ ಈ ವಿಷಯಕ್ಕೆ ಸಮಯವೇ ಇಲ್ಲ. ಇದು ಸದ್ಯದ ಪರಿಸ್ಥಿತಿ. ದೇಶದ ದುರ್ದೈವ!

ಪ್ರತಿವರ್ಷ ಜನವರಿ 19 ರಂದು ಕಾಶ್ಮೀರಿ ಪಂಡಿತರು ’ಹತ್ಯಾಕಾಂಡ ದಿನ’ ಎಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಕಾಶ್ಮೀರಿ ಪಂಡಿತರು ನಡೆಸಿದ ಅಂತಹ ಪ್ರತಿಭಟನೆಯಲ್ಲಿ ಹೊಸ ತಲೆಮಾರಿನ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಮಗುವೊಂದು ಹಿಡಿದುಕೊಂಡಿದ್ದ ಫಲಕ ಹೀಗಿತ್ತು. ’ಜಿಸ್‌ ಕಾಶ್ಮೀರ ಕೋ ಖೂನ್ ಸೇ ಸೀಂಚಾ, ವೋ ಕಾಶ್ಮೀರ್ ಹಮಾರಾ ಹೈ’ (ರಕ್ತವನ್ನು ಧಾರೆ ಎರೆದು ಯಾವು ಕಾಶ್ಮೀರವನ್ನು ಬೆಳೆಸಿದೆವೋ, ಆ ಕಾಶ್ಮೀರ ನಮ್ಮದು.) ಎಳೆಯ ಮಕ್ಕಳಲ್ಲೂ ಮಾತೃಭೂಮಿಯ ಸೆಳೆತ!

ಇಸ್ರೇಲಿನವರು 1300 ವರ್ಷಗಳ ಕಾಲ ದೇಶ ಬಿಟ್ಟು ಹೊರಡಗೆ ನಿರಾಶ್ರಿತರಾಗಿ ಕಾಲ ಕಳೆದರೂ, ತಮ್ಮತನವನ್ನು ಬಿಡಲಿಲ್ಲ. ತಲೆಮಾರಿನಿಂದ ತಲೆಮಾರಿಗೆ ಇಸ್ರೇಲಿನ ಕನಸನ್ನು ದಾಟಿಸುತ್ತಾ ಅದನ್ನು ಜೀವಂತವಾಗಿರಿಸಿದರು. ಕೊನೆಗೊಮ್ಮೆ ತಮ್ಮ ದೇಶವನ್ನು ಕಟ್ಟಿದರು. ಎಲ್ಲೆಲ್ಲಿಯೋ ಇದ್ದವರು ಮಾತೃಭೂಮಿಗೆ ಹಿಂತಿರುಗಿ ಹೋದರು. ಕಾಶ್ಮೀರಿ ಪಂಡಿತರಲ್ಲೂ ಅದೇ ವಿಶ್ವಾಸವಿದೆ. ಆದರೆ, ಅದಕ್ಕೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸಬೇಕಷ್ಟೇ. ಇಡೀ ದೇಶವೇ ಕಾಶ್ಮೀರಿ ಪಂಡಿತರ ಪರವಾಗಿ ಒಂದಾಗಿ ಎದ್ದು ನಿಂತು, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರೆ, ಎಲ್ಲವೂ ಸರಿಯಾಗುತ್ತದೆ. ಅದಕ್ಕೆ 1300 ವರ್ಷಗಳೇಕೆ? ಕೇವಲ ಒಂದೇ ವರ್ಷ ಸಾಕು. ನಾವು ಹಾಗೆ ಮಾಡುತ್ತೇವೆ ಎಂದು 23 ವರ್ಷಗಳಿಂದ ನಮ್ಮ ಕಾಶ್ಮೀರಿ ಬಂಧುಗಳು ಕಾಯುತ್ತಾ ಕುಳಿತಿದ್ದಾರೆ. ಅವರನ್ನು ಇನ್ನೂ ಇನ್ನೂ ಎಷ್ಟು ಕಾಯಿಸಬೇಕು?

Leave a Reply

Your email address will not be published.

This site uses Akismet to reduce spam. Learn how your comment data is processed.