ಸ್ವಾತಂತ್ರ್ಯದ ಅಮೃತಮಹೋತ್ಸವದ ಮುನ್ನಾದಿನವಾದ ಆಗಸ್ಟ್ ೧೪ ರಂದು ರಸ ಋಷಿ ಕುವೆಂಪುರವರ ಕವಿಮನೆಯಲ್ಲಿ ಅಪರೂಪದ ‘ಕವಿಸಮ್ಮಿಲನ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.ಈ ಹಿನ್ನೆಲೆಯಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ೬೭೦ ಕವಿಗಳ ಪೈಕಿ ಅಯ್ಕೆಯಾದ ೭೫ ಕವನಗಳ ರಚನಾಕಾರರಿಗೆ ಅಂದು ತಮ್ಮ ಕವನವನ್ನು ವಾಚಿಸಲು ಅವಕಾಶ ಕಲ್ಪಿಸಲಾಗಿತ್ತು.

ಬಾಗಲಕೋಟೆ,ಯಲ್ಲಾಪುರ,ಬೆಂಗಳೂರು,ಮೈಸೂರು,ಪುತ್ತೂರು ಹೀಗೆ ರಾಜ್ಯದ ನಾನಾ ಭಾಗಗಳಿಂದಲ್ಲದೇ ದೂರದ ಚೆನ್ನೈ,ಕೊಯಮತ್ತೂರು, ಕಾಸರಗೋಡಿನಿಂದಲೂ ಆಗಮಿಸಿದ ಕವಿಗಳು ಕವಿಮನೆಯ ಸುಂದರ ಪರಿಸರದಲ್ಲಿ ಬಿರು
ಮಳೆಯ ನಡುವೆಯೂ ತಮ್ಮ ಕವನವನ್ನು ವಾಚಿಸುವ ಮೂಲಕ ಕಾವ್ಯದ ಕಂಪನ್ನು ಪಸರಿಸಿದರು.

ಒಟ್ಟು ಹದಿಮೂರು ಜನರು ಬಹುಮಾನಕ್ಕೆ ಭಾಜನರಾಗಿದ್ದು ಡಾ.ರಾಘವೇಂದ್ರ ರಾವ್ ಪ್ರಥಮ,ಯಶಸ್ ನಗರ ದ್ವಿತೀಯ,ಸುಜಾತಾ ಹೆಗ್ಡೆ ತೃತೀಯ ಹಾಗೂ ಹತ್ತು ಕವಿಗಳು ಸಮಾಧಾನಕರ ಬಹುಮಾನವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಕವಿ,ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ರಸಾದರು ಸಮಾಜಕ್ಕೆ “ಮೌಲ್ಯವನ್ನು ತಿಳಿಸುವ ಕೆಲಸ ನಮ್ಮದಿದೆ, ಕರ್ತವ್ಯಭಾವವನ್ನರಳಿಸುವ,
ಕಾಲೋಚಿತ ರೀತಿಯ ಕವನಗಳ ರಚನೆಯಾಗಲಿ, ಹಳೆಯ ಒಳಿತನ್ನುಳಿಸಿ ಹೊಸತನಕ್ಕೆ ತೆರೆದುಕೊಳ್ಳೋಣ” ಎಂಬ ಆಶಯ ವ್ಯಕ್ತಪಡಿಸಿದರು.
ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದ ಶ್ರೀಯುತ ದಿವಾಕರ್ ಹೆಗ್ಡೆ, ವಿಜಯ ಕುಮಾರ್ , ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಹಲವು ದೇಶಭಕ್ತಿಗೀತೆಗಳ ಕರ್ತೃ ಕಳಸದ ಶ್ರೀ ಬಾಲಕೃಷ್ಣ ಕಾಮತ್ ಹಾಗೂ ಅಖಿಲಭಾರತೀಯ ಸಾಹಿತ್ಯ ಪರಿಷದ್, ತೀರ್ಥಹಳ್ಳಿಯ ಕಾರ್ಯದರ್ಶಿಯಾದ ಶ್ರೀಅಣ್ಣಪ್ಪ ಅಬರಕಟ್ಟೆಯವರು,ವಿಕಾಸ್ ಟ್ರಸ್ಟ್ ಶಿವಮೊಗ್ಗದ ಶ್ರೀನಿವಾಸ್ ರವರು ,ಅಖಿಲಭಾರತೀಯ ಸಾಹಿತ್ಯ ಪರಿಷದ್ ನ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ನಾರಾಯಣ ಶೇವಿರೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕವಿಗಳೊಂದಿಗೆ ಸಂವಾದ ನಡೆಸಿದ ಅಖಿಲಭಾರತೀಯ ಸಾಹಿತ್ಯ ಪರಿಷದ್ ನ ಬೆಂಗಳೂರು ಮಹಾನಗರ ಸಹ ಸಂಯೋಜಕರೂ,ಕವಿ ಹಾಗೂ ರಂಗಕರ್ಮಿಯಾದ ಶ್ರೀ ವಿಜಯಕುಮಾರ್ ರವರು ಇಂದಿನ ಬದಲಾದ ಕಾಲಘಟ್ಟದಲ್ಲಿನ ಕಾವ್ಯದ ಸ್ವರೂಪ, ಮತ್ತದನ್ನು ಜನಮಾನಸಕ್ಕೆ ತಲುಪಿಸುವ ಕುರಿತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.ಸಮಾರೋಪ ನುಡಿಗಳನ್ನಾಡಿದ ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರೂ,ಕವಿ,ಲೇಖಕ ಹಾಗೂ ನಾಟಕ ರಚನೆಕಾರರಾದ ಶ್ರೀ ದಿವಾಕರ ಹೆಗ್ಡೆಯವರು, “ಕವಿಗಳು ಆಧುನಿಕ ವಿಷಯಗಳನ್ನು ಹೇಳುವಾಗ ನಿರ್ಭೀತಿಯಿಂದ ಹೇಳಬೇಕು,ಸಮಾಜ ಸುಧಾರಣೆಯಲ್ಲಿ ನಮ್ಮದೂ ಒಂದು ಕರ್ತವ್ಯವಿದೆ” ಎಂದು ಕಿವಿ ಮಾತು ಹೇಳಿದರು.
ಅನುಭವದಿಂದ ಪಕ್ವಗೊಂಡ ಹಿರಿಯರೂ,ಈಗ ತಾನೇ ಟಿಸಿಲೊಡೆಯುತ್ತಿರುವ ಯುವ ಕವಿಮನಸ್ಸುಗಳನ್ನೂ ಒಳಗೊಂಡಂತೆ ನಡೆದ ಈ ಕಾರ್ಯಕ್ರಮ ಕವಿಮನೆಯ ಪರಿಸರದಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣಮಾಡಿತ್ತು.

ಸಮಯಕ್ಕೆ ಸರಿಯಾಗಿ ಆರಂಭಗೊಂಡು ಸುಸಂಪನ್ನವಾದ ಕಾರ್ಯಕ್ರಮ,
ವ್ಯವಸ್ಥೆಯಲ್ಲಿನ ಅಚ್ಚುಕಟ್ಟುತನ,ಮಲೆನಾಡಿನ ಹಲಸಿನ ಹಪ್ಪಳ,ದಿಂಡಿನ ಗೊಜ್ಜು,ಹುರುಳಿ ಸಾರು,ಪತ್ರೊಡೆ ಮುಂತಾದವುಗಳನ್ನೊಳಗೊಂಡ ಭೋಜನದೊಂದಗೆ ಆದರಾತಿತ್ಯದಲ್ಲಿ ಗಮನಸೆಳೆಯುವಂತಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.