ಸುದರ್ಶನ್ ಜಿ ಯವರನ್ನು ಸನ್ಮಾನಿಸುತ್ತಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಸದಸ್ಯರು.

ಬೆಂಗಳೂರು, ಸಪ್ಟೆಂಬರ್ ೧೫, VSK
ಸಮಾಜದಲ್ಲಿ ಐಕ್ಯತೆ ಸಾಧಿಸಲು ಹಿಂದು ಮತ್ತು ಮುಸ್ಲಿಮ್ ಸಮಾಜ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಆರೆಸ್ಸೆಸ್ಸಿನ ನಿಕಟ ಪೂರ್ವ ಸರಸಂಘಚಾಲಕ ಕು. ಸೀ. ಸುದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ನಗರದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ ಈದ್ ಮಿಲಾದ್ ನಿಮಿತ್ತದ ಮತೀಯ ಸೌಹಾರ್ದ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೆಲವು ತಥಾಕಥಿತ ಸೆಕ್ಯುಲರ್ ರಾಜಕಾರಣಿಗಳು ಆರೆಸ್ಸೆಸ್ ಒಂದು ಮುಸ್ಲಿಮ್ ವಿರೋಧಿ ಸಂಘಟನೆ ಎಂಬ ಆರೋಪ ಹೊರಿಸಿ  ಹಿಂದುಗಳು ಮತ್ತು ಮುಸಲ್ಮಾನರಲ್ಲಿ ಸದಾ ಬಿರುಕನ್ನು ಬಯಸುತ್ತಿದ್ದಾರೆ. ಆದರೆ ಮುಸಲ್ಮಾನ್, ಕ್ರಿಶ್ಚಿಯನ್, ಬೌದ್ಧ, ಸಿಖ್, ಶೈವ, ವೈಷ್ನವ ಇತ್ಯಾದಿ ಎಲ್ಲ ಪಂಥದವರನ್ನೊಳಗೊಂಡ ಎಲ್ಲಾ ಭಾರತೀಯರೂ ಹಿಂದುಗಳೇ ಎಂಬ ನಿಲುವು ಆರೆಸ್ಸೆಸ್ ನದ್ದು. ಹೀಗಾಗಿ ಈ ಎಲ್ಲ ಹಿಂದುಗಳ ಸಂಘಟನೆಯೇ ಆರೆಸ್ಸೆಸ್ ನ ಗುರಿ. ಆದ್ದರಿಂದ ಹಿಂದೂ ಮತ್ತು ಮುಸಲ್ಮಾನ ಸಮಾಜದ ನಡುವಿನ ಅನ್ಯೋನ್ಯತೆಯನ್ನು ಸದಾ ಆರೆಸ್ಸೆಸ್ ಬಯಸುತ್ತದೆ ಎಂದು ಸುದರ್ಶನ್ ಅವರು ಹೇಳಿದರು.
K S UDARSHAN FALICITATED BY MUSLIM LEADRES 1

ಬ್ರಿಟಿಷ ಇತಿಹಾಸಕಾರರು ವ್ಯವಸ್ಥಿತವಾಗಿ ಹಿಂದು ಮುಸ್ಲಿಂ ಸಮಾಜದ ನಡುವೆ ಬಿರುಕಾಗುವಂತೆ ಇತಿಹಾಸವನ್ನು ತಿರುಚಿ ರಚಿಸಿದ್ದಾರೆ. ಬ್ರಿಟಿಷ್ ಆಡಳಿತ ಕಾಲದಲ್ಲಿ ಯುದ್ಧದಲ್ಲಿ ಬಳಸುವ ಫಿರಂಗಿ, ಕೋವಿ, ಕಾಡತೂಸುಗಳಿಗೆ ಹಂದಿ ಹಾಗೂ ದನದ ಕೊಬ್ಬನ್ನು ಸವರಿ ಸೈನಿಕರಲ್ಲಿ ಒಡಕು ಮೂಡಿಸಲು ಯತ್ನಿಸಿದ್ದರು. ಭಾರತಕ್ಕೆ ಮೌಂಟ್ ಬ್ಯಾಟನ್ ಬಂದ ಮೇಲಂತೂ ಹಿಂದೂ ಮುಸ್ಲಿಂ ಬಿರುಕು ಪರಾಕಶ್ಟೆಗೆ ತಲಪಿ ೧೯೪೭ರಲ್ಲಿ ದೇಶ ವಿಭಜನೆಗೂ ಕಾರಣವಾಯಿತು. ಸ್ವಾತಂತ್ರ್ಯಾ ನಂತರವೂ ಈ ದ್ವೇಶಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದ ಪರಿಣಾಮ ಇನ್ನೂ ಅಲ್ಲಲ್ಲಿ ಘರ್ಷಣೆ, ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಇದರಿಂದಾಗಿ ದೇಶದ ಏಕತೆಗೆ ಭಂಗವುಂಟಾಗುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಚಿಂತಕ ಅನೀಫ್ ಉಲ್ ಹಕ್, “ನಿಜವಾದ ಹಿಂದು ಹಾಗೂ ನಿಜವಾದ ಮುಸ್ಲಿಂ ಎಂದೂ ಪರಸ್ಪರ ದ್ವೇಷ ಸಾಧಿಸಲಾರರು. ಪರಸ್ಪರ ದ್ವೇಷ ಬೀಜವನ್ನು ಬಿತ್ತಿ ವಿರಸ ಮೂಡಿಸುವ ಹಾಗೂ ಹಿಂದು ಮುಸ್ಲಿಂ ಘರ್ಷಣೆಯಿಂದ ಲಾಭ ಪಡೆಯುವ ಸೋಗಲಾಡೀ ರಾಜಕಾರಣವನ್ನು ನಾವು ಅರ್ಥೈಸಬೇಕಾಗಿದೆ. ಹಿಂದು-ಮುಸ್ಲಿಂ ಸಮಾಜದ ಆರೋಗ್ಯಪೂರ್ಣ ಸಂಬಂಧಕ್ಕೆ ಎಲ್ಲರೂ ಪ್ರಾಮಾಣಿಕ ಹೊಣೆಗಾರರಾಗಿರಬೇಕು. ಆರೆಸ್ಸೆಸ್ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಸೌಹಾರ್ದ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕು.” ಎಂದು ಅಭಿಪ್ರಾಯಪಟ್ಟರು.

ಜಾಮಾ ಮಸೀದಿಯ ನೂತನ ಮೌಲ್ವಿ ಮೌಲಾನಾ ಇಮ್ರಾನ್ ಸಾಹಿಬ್, ಮುಸ್ಲಿಂ ರಾಷ್ಟ್ರೀಯ ಮಂಚ್ ನ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಆಲಿ ಗೌರಾ, ಸ್ವಾಮಿ ರಮೇಶ್ ನಾಯರ್, ಮುಸ್ಲಿಂ ಮುಖಂಡ ಬಹದ್ದೂರ್ ಹುಸೇನ್, ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಮೈ. ಚ. ಜಯದೇವ್, ಪ್ರಾಂತ ಪ್ರಚಾರಕ್ ಮುಕುಂದ ಸೇರಿದಂತೆ ನೂರಾರು ಚಿಂತಕರು ಈ ಸಭೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published.

This site uses Akismet to reduce spam. Learn how your comment data is processed.