ಇಂದು ಜಯಂತಿ

ಪಂಜಾಬ್‌ ಸಿಂಹ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಲಾಲಾ ಲಜಪತ್‌ ರಾಯ್‌ ಅವರು ಭಾರತದಲ್ಲಿ ಬ್ರಿಟಿಷ್‌ ಆಳ್ವಿಕೆಯನ್ನು ಕೊನೆಗೊಳಿಸಲು ಅವಿರತವಾಗಿ ಶ್ರಮಿಸಿದರು. ಅವರು ರಾಜಕೀಯ ನಾಯಕರಾಗಿ, ವಕೀಲರಾಗಿ, ಬಹಗಾರರಾಗಿ ಪ್ರಸಿದ್ಧಿ ಹೊಂದಿದ್ದರು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.


ಪರಿಚಯ
ಲಾಲಾ ಲಜಪತ್‌ ರಾಯ್‌ ಅವರು ಜನವರಿ 28, 1865 ರಂದು ಪಂಜಾಬ್‌ನ ಲುಧಿಯಾನ ಬಳಿಯ ಧುಡಿಕೆ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ರಾಧಾ ಕೃಷ್ಣನ್, ತಾಯಿ ಗುಲಾಭ್ ದೇವಿ.
ರಾಯ್‌. ಅವರ ಪ್ರಾರಂಭಿಕ ಶಿಕ್ಷಣ ಹರಿಯಾಣದ ರೆವಾರಿ ಎಂಬ ಊರಲ್ಲಿ ಆಯಿತು. 1880 ರಲ್ಲಿ ಲಾಹೋರ್ ಸರ್ಕಾರಿ ಕಾಲೇಜಿಗೆ ಕಾನೂನು ಕಲಿಯಲು ಸೇರಿದರು. ನಂತರ ಹರಿಯಾಣದ ಹಿಸ್ಸಾರ್‌ನಲ್ಲಿ ಕಾನೂನು ಪದವಿ ಪಡೆದರು.


ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ
ಲಾಲಾ ಲಜಪತ್ ರಾಯ್ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ವ್ಯಕ್ತಿಯಾಗಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ತಮ್ಮ ಗ್ರಾಮಗಳಲ್ಲೂ ಕಾಂಗ್ರೇಸ್ ನ ಸ್ಥಾನೀಯ ಶಾಖೆಗಳನ್ನು ಸ್ಥಾಪಿಸಿದರು. ದಯಾನಂದ ಸರಸ್ವತಿ‌ ಅವರ ಆರ್ಯ ಸಮಾಜದಿಂದಲೂ ಪ್ರಭಾವಿತರಾಗಿದ್ದ‌ ಅವರು ಮಹಾತ್ಮ ಹಂಸರಾಜ ಅವರ ಜೊತೆಗೂಡಿ ದಯಾನಂದ ಆಂಗ್ಲೋ ವೇದಿಕ್ ಶಾಲೆಯನ್ನು ಸ್ಥಾಪಿಸಿದರು. ಭಾರತೀಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರತಿಪಾದಿಸುತ್ತಿದ್ದ ಅವರು ದಿ ಟ್ರಿಬ್ಯೂನ್ ಮುಂತಾದ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿದ್ದರು. ಲಾಲ್ ಬಾಲ್ ಪಾಲ್ ಎಂದೇ ಖ್ಯಾತಿ ಪಡೆದಿದ್ದ ಇವರ ಮತ್ತು ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್ ಅವರ ಸ್ನೇಹ ಮತ್ತು ಹೋರಾಟದ ಶೈಲಿ ವಿಭಿನ್ನವಾಗಿತ್ತು. 1905ರಲ್ಲಿ ಬಂಗಾಳ ವಿಭಜನೆಯನ್ನು ಕಟುವಾಗಿ ವಿರೋಧಿಸಿದರು. ರಾಯ್‌ ಅವರ ರಾಜಕೀಯ ಚಟುವಟಿಕೆಗಳ ಕಾರಣ 1907ರಲ್ಲಿ ಬರ್ಮಾದ ಮಾಂಡಲೆಯಲ್ಲಿ ಸೆರೆವಾಸ ಅನುಭವಿಸಬೇಕಾಯಿತು. 1914ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ದೃಷ್ಟಿಯಿಂದ ವಕೀಲ ವೃತ್ತಿಯಿಂದ ಹೊರಬಂದರು. 1917 ರಲ್ಲಿ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಅಮೆರಿಕದ ನ್ಯೂಯಾರ್ಕ್ ನಲ್ಲಿ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು.


ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಕಾರ್ಮಿಕ ಹಕ್ಕುಗಳನ್ನು ಪ್ರತಿಪಾದಿಸಿದರು.ಅವರು ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದರು. 1920 ರಲ್ಲಿ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದರು.ರಾಯ್ ರೌಲತ್ ಕಾಯಿದೆಯಂತಹ ದಬ್ಬಾಳಿಕೆಯ ಕಾನೂನುಗಳನ್ನು ಕಟುವಾಗಿ ವಿರೋಧಿಸಿದರು ಮತ್ತು ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಖಂಡಿಸಿದರು.1921 ರಲ್ಲಿ ರಾಯ್ ಅವರು ಸರ್ವೆಂಟ್ಸ್ ಆಫ್ ಪೀಪಲ್ ಸೊಸೈಟಿಯನ್ನು ಸ್ಥಾಪಿಸಿದರು. 1928 ರಲ್ಲಿ, ಅವರು ಸೈಮನ್ ಆಯೋಗವನ್ನು ವಿರೋಧಿಸಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಬ್ರಿಟಿಷ್ ಅಧಿಕಾರಿ ಸ್ಕಾಟ್ ಎಲ್ಲಾ ಪ್ರತಿಭಟನಾಕಾರರಿಗೆ ಲಾಟಿ ಚಾರ್ಜ್ ಮಾಡಲು ಆದೇಶಿಸಿದ್ದಲ್ಲದೇ ವೈಯಕ್ತಿಕವಾಗಿ ಲಾಲಾ ಲಜಪತ್ ರಾಯ್ ಅವರ ಮೇಲೆ ದಾಳಿ ಮಾಡಿದ. ಇದರಿಂದ ಗಂಭೀರವಾಗಿ ಗಾಯಗೊಂಡ ಲಾಲ ಲಜಪತ್ ರಾಯ್ ಅವರು 18 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದರೂ ಫಲಕಾರಿಯಾಗದೆ ನವೆಂಬರ್ 17, 1928 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.