Pushparchane to Mahatma Gandhi photo by Dr Jayaprakash, Sri V Nagaraj, Sri Dinesh Hedge, Sri Na Tippeswamy

ಮಹಾತ್ಮ ಗಾಂಧಿ ಎಂಬ ಮಹಾನ್ ವ್ಯಕ್ತಿತ್ವದ ಶ್ರದ್ಧಾವಂತ ಹಾಗೂ ಪ್ರಜ್ಞಾವಂತ ಹಿಂದು.

ಗಾಂಧಿಯ ತತ್ತ್ವಸಂಘದ ಕಾರ್ಯ ಒಮ್ಮುಖ

ಮಹಾತ್ಮ ಗಾಂಧಿಯವರ ಸಾರ್ಧ ಶತಿ – ನೂರೈವತ್ತು ವರ್ಷದ ಜನ್ಮದಿನಾಚರಣೆಯ ಅಂಗವಾಗಿ ಫ಼ೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್, (FIRST) ಬೆಂಗಳೂರು  ಮಿಥಿಕ್ ಸೊಸೈಟಿಯ ಡಾಲಿ ಮೆಮೊರಿಯಲ್ ಹಾಲ್ ನಲ್ಲಿ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ (ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ) ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜರ ಭಾಷಣ ಏರ್ಪಡಿಸಿತ್ತು. ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹರಾದ ಡಾ. ಜಯಪ್ರಕಾಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಕ್ಕೆ ಗಾಂಧಿಯವರು ಎಂದೂ ದೂರವಾಗಿರಲಿಲ್ಲ ಎಂಬ ಭಾವ ಪ್ರಾಸ್ತಾವಿಕದಲ್ಲಿ ವ್ಯಕ್ತಪಡಿಸಲಾಯ್ತು.

Pushparchane to Mahatma Gandhi photo by Dr Jayaprakash, Sri V Nagaraj, Sri Dinesh Hedge, Sri Na Tippeswamy

ಪ್ರಾಸ್ತಾವಿಕ ಭಾಷಣದಲ್ಲಿ ಡಾ. ಜಯಪ್ರಕಾಶ್ ಏಳು ದಶಕಗಳಿಂದ ಸಂಘದ ಶಾಖೆಗಳಲ್ಲಿ ಹಾಡುವ ಪ್ರಾತಃ ಸ್ಮರಣೆಯಲ್ಲಿ ಭಾರತ ದೇಶದಲ್ಲಿ ಜನ್ಮ ತಳೆದ ಮಹಾಪುರುಷರನ್ನು ಸ್ಮರಿಸಲಾಗುತ್ತದೆ ಹಾಗೂ ಅದರಲ್ಲಿ ಗಾಂಧಿಯವರನ್ನೂ ಸ್ಮರಿಸುತ್ತೇವೆ ಎಂದು ಹೇಳಿದರು. ಸಂಘದ ದೇಶೀಯ ಆಟಗಳಲ್ಲಿ ಮಹಾಪುರುಷರನ್ನು ನೆನಪಿಸಿಕೊಳ್ಳುವುದೂ ಅದರಲ್ಲಿ ಮಹಾತ್ಮ ಗಾಂಧಿಯನ್ನು ಸ್ಮರಿಸುವುದೂ ಇದೆ. ಅಂತೆಯೇ ಗಾಂಧಿಜೀ ೧೯೩೪ರಲ್ಲಿ ವಾರ್ಧಾದ ಸಂಘದ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿ ಅಸ್ಪೃಷ್ಯತೆ ಇಲ್ಲದ್ದನ್ನು ಕಂಡು ಅಚ್ಚರಿಪಟ್ಟು ಕೊಂಡಾಡಿದ್ದರು ಎಂಬುದನ್ನು ನೆನೆದರು. ಸತ್ಯಾಗ್ರಹ ಹಾಗೂ ಸಾಮಾನ್ಯರಲ್ಲೂ ದೇಶಭಕ್ತಿ ಮೂಡಿಸುವ ಕಾರ್ಯ ಇವೆರಡನ್ನೂ ಗಾಂಧಿಯವರು ಜೀವನದಲ್ಲಿ ನಿರಂತರವಾಗಿ ಮಾಡಿಕೊಂಡು ಬಂದವರು. ಸತ್ಯಾಗ್ರಹವೆಂದರೆ ಸತ್ಯ, ಸತ್ತ್ವ, ತ್ಯಾಗಗಳ ಸಮ್ಮಿಲನ. ಅಂತಹ ಸತ್ಯಾಗ್ರಹದ ರೂವಾರಿಗಳಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ಯಾಗ್ರಹದ ಮುಖೇನ ಜನರನ್ನು ಬೆಸೆದು, ಯುವಜನರನ್ನು ಪ್ರೇರೇಪಿಸಿದ ಯಶಸ್ಸು,ಶ್ರೇಯಸ್ಸು ಗಾಂಧಿಜೀಯವರಿಗೆ ಸಲ್ಲುತ್ತದೆ ಎಂದು ಪ್ರಾಸ್ತಾವಿಕದಲ್ಲಿ ಸೂಚಿಸಿದರು. ಗ್ರಾಮ ರಾಜ್ಯ,ರಾಮರಾಜ್ಯ, ಸ್ವದೇಶಿ, ಪ್ರಕೃತಿ ಹಾಗೂ ಪರಿಸರ ಕಾಳಜಿ ಮುಂತಾದ ಉತ್ಕೃಷ್ಟ ಚಿಂತನೆಗಳನ್ನೊಳಗೊಂಡ ಅವರ ತತ್ತ್ವವನ್ನು ಎಷ್ಟೋ ಜನರು ಅನುಸರಿಸುವಂತೆ ಮಾಡಿದ ಕೀರ್ತಿ ಗಾಂಧಿಜೀ ಅವರಿಗೆ ಸಲ್ಲುತ್ತದೆ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯರು, ನಾನಾಜಿ ದೇಶಮುಖರಂತಹ ಮಹನೀಯರು  ಸಮಾಜದ ಒಳಿತಿಗಾಗಿಯೇ ಬದುಕಬೇಕು ಎಂಬ ಚಿಂತನೆಗೂ ಗಾಂಧಿಯವರ ಚಿಂತನೆಯೂ ಹೋಲಿಕೆಯಾಗಬಲ್ಲುದು ಎಂದು ತಿಳಿಸಿದರು.FIRSTನ ಈ ಯೋಜನೆ ವರ್ಷವಿಡೀ ಮಹಾತ್ಮ ಗಾಂಧಿಜೀಯವರನ್ನು, ವಿವಿಧ ಆಯಾಮಗಳಲ್ಲಿ ಅವರ ಕೆಲಸಗಳನ್ನು ಅಧ್ಯಯನ ಮಾಡುವ ಯೋಜನೆಯನ್ನು ಶ್ಲಾಘಿಸಿದರು. ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಹಾಡಿನ ಸಾರಾಂಶ – ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಆತ್ಮ ಎಂಬುದಾಗಿದ್ದು ಗಾಂಧಿಯವರು ಅದೇ ರೀತಿಯಲ್ಲಿ ಬದುಕಿ ತೋರಿದವರು ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಿಂದ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮಿಸಿದ ಮಹಾತ್ಮ ಗಾಂಧಿಯವರು ಗೋಪಾಲಕೃಷ್ಣ ಗೋಖಲೆಯನ್ನು ಸಂದರ್ಶಿಸಿದಾಗ ಗಾಂಧಿಯವರಿಗೆ ’ಇಡಿಯ ದೇಶದ ಪರ್ಯಟನೆ ನಡಿಸಿ, ದೇಶವನ್ನು ಅರ್ಥಮಾಡಿಕೊಳ್ಳಬೇಕೆಂಬ ಗೋಖಲೆಯವರ ಕರೆಯಿಂದಾಗಿ ೧೯೧೫ರಲ್ಲಿ ಗಾಂಧಿಯವರು ಬೆಂಗಳೂರಿಗೆ ಆಗಮಿಸಿದ್ದ ವಿಚಾರವನ್ನು ಅದರ ಹಿಂದಿದ್ದ ಕನ್ನಡದ ಮೇರು ಕವಿಗಳಾದ ಡಿ ವಿ ಗುಂಡಪ್ಪನವರ ಕೆಲಸ ತನ್ಮೂಲಕ ಮೈಸೂರು ಸೊಷಿಯಲ್ ಸರ್ವಿಸ್ ಲೀಗ್‍ನ (ಇಂದಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ) ಹುಟ್ಟು ಎಲ್ಲವನ್ನೂ ಸವಿಸ್ತಾರವಾಗಿ ವಿ ನಾಗರಾಜ್ ತಮ್ಮ ಭಾಷಣದಲ್ಲಿ ವಿವರಿಸಿದರು.

 

ಸಮಾಜದ ಅಂತಃಶಕ್ತಿಯಿಂದಲೇ ಸಮಾಜ, ದೇಶ ಗತಿಶೀಲವಾಗಿರುತ್ತದೆ ಹಾಗೂ ಆ ಅಂತಃಶಕ್ತಿಯು ವ್ಯಕ್ತಿಯ ರೂಪದಲ್ಲಿ ಹೊರಹೊಮ್ಮುತ್ತದೆ. ಆದ ಕಾರಣದಿಂದಲೇ ಬುದ್ಧ, ಮಹಾವೀರರಂತಹ ಮಹಾಪುರುಷರು ಜನ್ಮ ತಳೆದು ದೇಶದಲ್ಲಿ ಹೊಸ ಚಿಂತನೆಯನ್ನು ಹರಿಸುವಲ್ಲಿ ಕಾರಣೀಭೂತರಾಗುತ್ತಾರೆ. 19 ರಿಂದ 20 ಶತಮಾನದಲ್ಲಿ ನಮ್ಮ ದೇಶ ದಾಸ್ಯದಲ್ಲಿದ್ದ ಕಾರಣ ಸ್ವಾತಂತ್ರ್ಯ, ಹಿಂದೂ ಸಮಾಜದ ಸುಧಾರಣೆ, ಅದರ ಜೊತೆ ಮುಂದಿನ ದಿನಗಳಲ್ಲಿ ದೇಶ ಹೇಗೆ ಮುನ್ನಡೆಯಬೇಕು ಎಂಬ ಕುರಿತಾಗಿ ಹಲವಾರು ಮಹಾಪುರುಷರು ಶ್ರಮಿಸಿದ್ದಾರೆ, ಅದರಲ್ಲಿ ಗಾಂಧಿಯವರ ಪಾತ್ರವನ್ನು ಮರೆಯುವಂತಿಲ್ಲ ಹಾಗೂ ದೇಶಕ್ಕಾಗಿಯೇ ದುಡಿದ ಮಹನೀಯರಲ್ಲಿ ಮಹಾತ್ಮ ಗಾಂಧಿಜೀ ಅಗ್ರಮಾನ್ಯರು ಎಂದು ಸಭೆಗೆ ತಿಳಿಸಿದರು.

ಗೋಪಾಲಕೃಷ್ಣ ಗೋಖಲೆಯವರು ಮಹಾತ್ಮ ಗಾಂಧಿಜೀಯವರಿಗೆ ನೀಡಿದ ಮತ್ತೊಂದು ಕರೆ “Spiritualize politics” ಅಂದರೆ ರಾಜಕಾರಣದಲ್ಲಿ ಆಧ್ಯಾತ್ಮವನ್ನು ತರುವುದು. ಮಹಾತ್ಮ ಗಾಂಧಿಜೀಯವರು ಅದನ್ನು ಸ್ವೀಕರಿಸಿಯೇ,ಭಗವದ್ಗೀತೆಯನ್ನು ಅಧ್ಯಯನ ಮಾಡಿ ಭಾಷ್ಯವೊಂದನ್ನು ಬರೆದು ’ಅನಾಸ್ತಿ ಯೋಗ’ ಎಂದು ಕರೆದವರು. ಭಗವದ್ಗೀತೆ, ಈಶಾವಾಸ್ಯ ಉಪನಿಷತ್ತುಗಳಿಂದ ಬಹುವಾಗಿ ಪ್ರೇರಿತರಾದ ಗಾಂಧಿಜೀ ತಮ್ಮ ಲೇಖನ, ಭಾಷಣಗಳಲ್ಲಿ ಅದನ್ನು ಪ್ರಸ್ತಾಪಿಸುತ್ತಿದ್ದರು. ತಮ್ಮ ಆಶ್ರಮದಲ್ಲಿ ಅದರ ಸಾರವನ್ನು ಸೇವಾವ್ರತಿಗಳಿಗೆ ಬೋಧಿಸಲಾಗುತ್ತಿತ್ತು. ಹಾಗಾಗಿಯೇ ಅವರೊಬ್ಬ ಶ್ರದ್ಧಾವಂತ, ಪ್ರಜ್ಞಾವಂತ ಹಿಂದುವಾಗಿದ್ದರು. ಅವರ ವಿಚಾರಗಳೆಲ್ಲವೂ ಹಿಂದೂ ಧರ್ಮದ ಆಧಾರದ ಮೇಲೆಯೇ  ಇದ್ದವು. ಶ್ರದ್ಧೆ,ಅಹಿಂಸೆ, ಭಗವಂತ, ಪ್ರಾರ್ಥನೆ, ಧರ್ಮ, ಆಧ್ಯಾತ್ಮ ಮುಂತಾದ ವಿಷಯಗಳನ್ನಾಧರಿಸಿ ತಮ್ಮ ರಾಜಕೀಯ ಭಾಷಣಗಳೂ ರೂಪುಗೊಳ್ಳುತ್ತಿದ್ದವು. ಗಾಂಧಿಜೀ ಸೇರಿದಂತೆ ವಿವೇಕಾನಂದರ, ಅರವಿಂದರ, ಸಂಘದ ಸ್ಥಾಪಕರಾದ ಡಾಕ್ಟರ್ ಜೀ, ಗುರೂಜೀ, ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಗಳನ್ನು ಗಮನಿಸಹೊರಟರೆ ಅವೆಲ್ಲವೂ ಸಮಾನ ಎಂದನಿಸದೇ ಇರದು. ಅದಕ್ಕೆ ಕಾರಣವೂ ಸ್ಪಷ್ಟ. ಎಲ್ಲಾ ಚಿಂತನೆಗಳೂ ಸಾವಿರಾರು ವರ್ಷದ ಹಿಂದೂ ಧರ್ಮದ ಚಿಂತನೆಗಳೇ. ಆದಕಾರಣವೇ ಗಾಂಧಿಯವರ ವಿಚಾರಗಳಾಗಲಿ, ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ವಿಚಾರಗಳಾಗಲಿ ಎಲ್ಲೂ ಸಮಾನಾಂತರ ಎಂದು ಯಾರಿಗೂ ಅನ್ನಿಸುವುದಿಲ್ಲ. ಅವು ಒಂದೇ ಆಗಿದೆ.

ನಿಜವಾದ ಸ್ವರಾಜ್ಯವೆಂದರೆ ಕೇವಲ ಹೊರಗಿನ ಶತ್ರುಗಳಿಂದ ಸ್ವಾತಂತ್ರ್ಯ ಪಡೆಯುವುದಷ್ಟೇ ಅಲ್ಲ! ದೇಶದ, ಒಳಗಿನ ಸಮಾಜದ, ವೈಯಕ್ತಿಕ ಶತ್ರುಗಳಿಂದಲೂ ಸ್ವಾತಂತ್ರ್ಯದೊರಕಿಸಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದವರು ಗಾಂಧಿಯವರು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಐದು ದಿನಗಳ ಮುನ್ನವೂ ಅಂದರೆ ಆಗಸ್ಟ್ ೧೦ ೧೯೪೭ರಂದು ತಮ್ಮ ಪತ್ರಿಕೆಯಲ್ಲಿ, ’ನಿಜವಾದ ಸ್ವಾತಂತ್ರ್ಯ ಬಹಳ ದೂರವಿದೆ’ ಎಂದು ಬರೆದಿದ್ದರು.

ಸತ್ಯಾಗ್ರಹ, ಹಾಗೂ ಸರ್ವೋದಯ ಮಹಾತ್ಮ ಗಾಂಧಿಯವರ ಎರಡು ಪ್ರಬಲ ಚಿಂತನೆಗಳು. ಯುವಕರನ್ನು, ದೇಶದ ಸಹೋದರ ಸಹೋದರಿಯರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೋಡಿಸಿದ ಗಾಂಧಿಜೀ, ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟದ ನಡುವೆಯೂ ಸ್ವದೇಶಿ ಚಿಂತನೆ, ಧರ್ಮದ ಆಚರಣೆ ಮುಂತಾದ ವಿಷಯಗಳಲ್ಲಿ ಜನರ ಜೊತೆ ಸಂವಹನ ನಡೆಸಿ ಇನ್ನಷ್ಟು ಜನರು ದೇಶದ ಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಜೀವನವನ್ನು ಸಮಗ್ರವಾಗಿ ನೋಡುತ್ತಾ ವ್ಯಕ್ತಿ ಹಾಗೂ ಸಮಾಜದ ಸರ್ವಾಂಗೀಣ ಉನ್ನತಿಯನ್ನು ಸಮನಾಗಿಯೇ ಕಾಣುತ್ತ ಸರ್ವರ  ಉದಯ ಅವರು ಕಂಡ ಕನಸಾಗಿತ್ತು. ಪಾಶ್ಚಾತ್ಯರ “Greatest good of the greatest majority” ಎಂಬ ವ್ಯಾಖ್ಯಾನವನ್ನು ಒಪ್ಪದ ಗಾಂಧಿಜೀ ದೇಶದ ಸಮಸ್ತ ಜನರೂ ವಿಕಾಸ ಹೊಂದಬೇಕೆಂಬ ಆಕಾಂಕ್ಷೆ ಹೊಂದಿದವರಾಗಿದ್ದರು. ವ್ಯಕ್ತಿಯೇ ಪ್ರಮುಖ ಎಂದು ನಂಬಿರುವ ಪಾಶ್ಚಾತ್ಯ ಸಂಸ್ಕೃತಿಗಿಂತ ವ್ಯಕ್ತಿ ಹಾಗೂ ಸಮಾಜ ಎರಡರ ಉನ್ನತಿ ದೇಶಕ್ಕೆ ಪೂರಕ ಎಂದು ನಂಬಿದ್ದವರು ಮಹಾತ್ಮ ಗಾಂಧಿಜೀ. ಹಿಂದೂ ಧರ್ಮದ ವೇದ ಕಾಲದ ಸರ್ವೇಭ್ಯಃ ಸುಖಿನಃ ಸಂತು ಎಂಬ ಶ್ಲೋಕವೂ ಅದನ್ನೇ ಬೋಧಿಸುತ್ತದೆ. ಇನ್ನು ಸಂಘವೂ ವ್ಯಕ್ತಿ ನಿರ್ಮಾಣವನ್ನೇ ನಂಬಿದೆ. ವ್ಯಕ್ತಿ ಸರಿಯಾದ ಚಿಂತನೆಗಳಿಂದ ಬಲಗೊಂಡರೆ, ಆತ ಸಮಾಜದ ಉನ್ನತಿಗೆ ಪ್ರಯತ್ನ ಪಡುತ್ತಾನೆ ಎಂಬುದು ಸತ್ಯ. ಹಾಗೂ ಸಂಘದ ಸ್ವಯಂಸೇವಕನಾದವನು ನಿತ್ಯ ಪ್ರಾರ್ಥನೆಯಲ್ಲಿ ಹೇಳುವಂಥದ್ದು – ಪರಂ ವೈಭವಂ ನೆ ತು ಮೇ ತತ್ ಸ್ವರಾಷ್ಟ್ರಂ. ಅಂದರೆ ಪ್ರತಿ ಸ್ವಯಂಸೇವಕನೂ ಪರಮ ವೈಭವ ರಾಷ್ರವನ್ನು ಕಟ್ಟುವಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು.

ಸರ್ವೋದಯದ ಚಿಂತನೆಯಲ್ಲಿ ಮಹಾತ್ಮ ಗಾಂಧಿಜೀ ಹೇಳಿರುವ ಹಲವು ವಿಚಾರಗಳಲ್ಲಿ ಕೆಲವನ್ನು ವಿ ನಾಗರಾಜರು ಪ್ರಸ್ತಾಪಿಸಿದರು:

  1. ಸಾಮಾಜಿಕ ಸಮಾನತೆಯಲ್ಲಿ ವರ್ಗ,ಜಾತಿ, ವರ್ಣ,ಅಂತಸ್ತು ಇವಾವುಗಳ ಭೇದವೂ ಕೂಡದು. ೧೯೨೧ರಲ್ಲಿ ಮಿಥಿಕ್ ಸೊಸೈಟಿಯಲ್ಲಿ ಭಾಷಣ ಮಾಡುತ್ತ ತವೊಬ್ಬ ನಿಷ್ಠಾವಂತ ಹಿಂದೂ. ಅಸ್ಪೃಶ್ಯತೆಯನ್ನು ಖಂಡಿಸುವವನು. ಆದರೆ ತಾವೊಬ್ಬ ವಿದ್ವಾಂಸರಲ್ಲದ ಕಾರಣ ಮಿಥಿಕ್ ಸೊಸೈಟಿಯವರಿಗೆ ಶಾಸ್ತ್ರದಲ್ಲಿ ಅಸ್ಪೃಷ್ಯತೆಯ ಬಗ್ಗೆ ಹುಡುಕಿರೆಂದು ತಿಳಿಸಿದ್ದರು, ಹಾಗೂ ಆ ಪಿಡುಗನ್ನು ಹೋಗಲಾಡಿಸಲು ಶ್ರಮಿಸಬೇಕೆಂದು ಕರೆ ನೀಡಿದ್ದರು.
  2. ಆರ್ಥಿಕ ಪುನಾರಚನೆಯಾಗಬೇಕು ಹಾಗೂ ಶುದ್ಧ ದೇಶೀಯ ಚಿಂತನೆಗಳಿಂದಲೇ ಆರ್ಥಿಕ ವ್ಯವಸ್ಥೆ ಬೆಳೆಯಬೇಕು ಎಂದು ಗಾಂಧಿಜೀ ಅಭಿಪ್ರಾಯಪಟ್ಟವರಾಗಿದ್ದರು. ದೇವದತ್ತವಾದ ನೀರು,ಗಾಳಿಯಂತೆ ಎಲ್ಲಾ ಸಂಪನ್ಮೂಲಗಳು ಎಲ್ಲಾ ವರ್ಗದ ಜನರಿಗೂ ಸಿಗುವಂತಾಗಬೇಕು. ಪ್ರಾಕೃತಿಕ ಸಂಪನ್ಮೂಲಗಳನ್ನು ಅನವಶ್ಯ ವ್ಯಯಮಾಡದೇ ನಮ್ಮವರೇ ಎಲ್ಲವನ್ನೂ ತರಾರಿಸುವವರಾಗಬೇಕು ಹಾಗೂ ಗ್ರಾಮಗಳಿಗೂ ಈ ಯೋಜನೆಗಳು ಮುಂದುವರೆಯಬೇಕು ಎಂದು ಸೂಚಿಸುತ್ತಿದ್ದರು.
  3. ಗ್ರಾಮ ವಿಕಾಸದ ವಿಚಾರವಾಗಿ ಸ್ವಾವಲಂಬ ದೇಶ ಕಟ್ಟಲು ಗ್ರಾಮದ ಆರ್ಥಿಕ ಜೀವನ ಸುಸ್ಥಿರವಾಗಬೇಕು ಎಂಬ ಆಸೆಯನ್ನಿರಿಸಿಕೊಂಡಿದ್ದರು
  4. ಶಿಕ್ಷಣದ ವಿಚಾರವಾಗಿಎಲ್ಲರಿಗೂ 7 ವರ್ಷದ ಮೂಲಭೂತ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣದ ಅಗತ್ಯವಿದೆಯೆಂದೂ ನಂಬಿದ್ದರು. ಅಲ್ಲದೇ ಮಾತೃಭಾಷೆಯಲ್ಲಿಯೇ ಶಿಕ್ಷಣವಾಗಬೇಕೆಂದು ಕನಸು ಕಂಡಿದ್ದರು ಅವರ ವ್ಯಾಖ್ಯೆಯಲ್ಲಿ ಶಿಕ್ಷಣ ’Drawing the best of the yourself” ಎಂಬುದೇ ಆಗಿತ್ತು.

ವೇದಿಕೆಯ ಮೇಲೆ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಹೆಗ್ಡೆ, ಆರೆಸ್ಸೆಸ್ ಕ್ಷೇತ್ರೀಯ ಸಹಕಾರ್ಯವಾಹರಾದ ಶ್ರೀ ನ ತಿಪ್ಪೇಸ್ವಾಮಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆ FIRSTನ ಜಿ ಆರ್ ಸಂತೋಷ್ ಮಾಡಿದರು. ಕಾರ್ಯಕ್ರಮದ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

ಗಾಂಧೀಜಿ ಸಮಾಜ ಕುಸಿಯುವುದಕ್ಕೆ ಸಪ್ತ ಸಾಮಾಜಿಕ ಪಾತಕಗಳಿಂದ ಸಮಾಜ ಕುಸಿಯಬಹುದೆಂದು ಹೇಳುತ್ತಿದ್ದರು – ತತ್ತ್ವವಿಲ್ಲದ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ನೀತಿಹೀನ ವಾಣಿಜ್ಯ, ಶೀಲವಿಲ್ಲದ ಶಿಕ್ಷಣ, ಮನವತಾಶೂನ್ಯ ವಿಜ್ಞಾನ, ಆತ್ಮಸಾಕ್ಷಿಯಿಲ್ಲದ ಭೋಗ, ತ್ಯಾಗವಿಲ್ಲದ ಪೂಜೆ.

Sri V Nagaraj addressing 

 

Watch the video of the talk here

Leave a Reply

Your email address will not be published.

This site uses Akismet to reduce spam. Learn how your comment data is processed.