ಇಂದು ಜಯಂತಿ

ಜ್ಯೋತಿಭಾ ಫುಲೆ ಅವರು ಸಾಮಾಜಿಕ ಕ್ರಾಂತಿಕಾರಿ ಹೋರಾಟಗಾರರಾಗಿ ಗುರುತಿಸಿಕೊಂಡವರು. ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ, ಬರಹಗಾರರಾಗಿ ಪ್ರಸಿದ್ಧಿ ಹೊಂದಿದ್ದರು. ಇವರು ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆ ನಿಮೂರ್ಲನೆ ವಿರುದ್ಧ ಹೋರಾಡಿದ ಮಹಾನ್‌ ನಾಯಕ. ಭಾರತದಲ್ಲಿ ಸಾಮಾಜಿಕ ಸುಧಾರಣೆಗೆ ಅವರು ನೀಡಿರುವ ಕೊಡುಗೆ ಗಣನೀಯ. ಇಂದು ಅವರ ಜಯಂತಿ.


ಪರಿಚಯ
ಜ್ಯೋತಿಭಾ ಫುಲೆ ಏಪ್ರಿಲ್ 11, 1827ರಲ್ಲಿ ಮಹಾರಾಷ್ಟ್ರದ ಕಟಗುಣ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್, ತಾಯಿ ಚಿಮಣಾಬಾಯಿ. ಜ್ಯೋತಿಭಾ ಜನಿಸಿದ ಕೆಲವೇ ತಿಂಗಳಲ್ಲಿ ಇವರ ತಾಯಿ ಚಿಮಣಾಬಾಯಿ ನಿಧನರಾದರು. ನಂತರ ಇವರನ್ನು ಚಿಮಣಾಬಾಯಿ ಸೋದರಿ ಸುಗುಣಾಬಾಯಿ ನೋಡಿಕೊಂಡರು. ಇವರು ಪ್ರಾಥಮಿಕ ಶಿಕ್ಷಣವನ್ನು ಕಟಗುಣದಲ್ಲಿ ಮುಗಿಸಿದರು. ನಂತರ 1841 ರಲ್ಲಿ ಪುಣೆಯ ಸ್ಕಾಟಿಷ್ ಮಿಷನ್ ಪ್ರೌಢಶಾಲಾ ವಿದ್ಯಾಭ್ಯಾಸ ಪಡೆದರು. 1847 ರಲ್ಲಿ ಇವರು ಪದವಿ ಪಡೆದರು. ತನ್ನ ಬ್ರಾಹ್ಮಣ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಂಡ ಜ್ಯೋತಿಭಾ ಫುಲೆ ಅವರನ್ನು ಹಿಂದುಳಿದ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕೆ ಸ್ನೇಹಿತನ ಹೆತ್ತವರಿಂದ ಆದ ಅವಮಾನ ಅವರ ಜೀವನದ ಮುಂದಿನ ನಿರ್ಧಾರಗಳನ್ನು ಬದಲಿಸಿತು. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಲು ಕಾರಣವಾಯಿತು.

ಸಮಾಜ ಸುಧಾರಣೆಯಲ್ಲಿ ಪಾತ್ರ:

ಜ್ಯೋತಿಬಾ ಪುಲೆ ಅವರು ಮಹಿಳೆಯರ ಹಕ್ಕುಗಳಿಗಾಗಿ ಬಲವಾದ ಪ್ರತಿಪಾದಕರಾಗಿದ್ದರು. ಅವರು ಬಾಲಕಿಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1848 ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆಯನ್ನು ತೆರೆದರು. ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುವ ಬಾಲ್ಯ ವಿವಾಹ ಪದ್ಧತಿ ವಿರುದ್ಧ ಹೋರಾಡಿದರು. ಕೆಳಜಾತಿಯ ಮಹಿಳೆಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1851 ರಂದು ಒಂದು ಶಾಲೆ ಆರಂಭಿಸಿದರು. ಆ ಶಾಲೆಗೆ ತಮ್ಮ ಪತ್ನಿ ಸಾವಿತ್ರಿ ಬಾಯಿಯನ್ನೇ ಅಧ್ಯಾಪಕಿಯಾಗಿ ನಿಯೋಜಿಸಿದರು. ಮುಂದೆ ರಾಸ್ತಾಪೇಟ್, ವಿಠಲಪೇಟೆಗಳಲ್ಲೂ ಸಹ ಮಹಿಳೆಯರ ಶಾಲೆ ತೆರೆದರು.
ರೈತರಿಗೂ ಮಹಿಳೆಯರಿಗೂ ತಮ್ಮ ಮನೆಯಲ್ಲೇ ರಾತ್ರಿ ಶಾಲೆ ತೆರೆದರು. ಇಂಗ್ಲಿಷ್ ಶಿಕ್ಷಣ, ತಾಂತ್ರಿಕ ಶಿಕ್ಷಣ ವಿಸ್ತರಣೆ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಆಗಿನ ಸಮಾಜ ಸುಧಾರಕರಾದ ಜ.ರಾನಡೆ, ಪ್ರೊ.ಭಂಡಾರಕರ್, ವಿಷ್ಣು ಶಾಸ್ತ್ರಿ ಚಿಪಳೋಣ್‌ಕರ್ ಇವರೆಲ್ಲ ಅವರ ವಿಚಾರಗಳಿಗೆ ಬೆಂಬಲ ಸೂಚಿಸಿದರು.


ಜ್ಯೋತಿರಾವ್‌ ಫುಲೆ ಅವರು ಸೆಪ್ಟೆಂಬರ್‌ 24, 1874 ರಂದು ಶೋಷಿತರ ಹಕ್ಕುಗಳ ಮೇಲೆ ಕೇಂದ್ರೀಕರಿಸುವ ಸಲುವಾಗಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಈ ಸಮಾಜದ ಮೂಲಕ ಜಾತಿ ನಿರ್ಮೂಲನೆಗಾಗಿ ಹೋರಾಡಿದವರು.ಅಷ್ಟೇ ಅಲ್ಲದೆ ಅವರು ಸತಿ ಪದ್ದತಿ ನಿರ್ಮೂಲನೆ ಮಾಡುವ ಕೆಲಸ ಮಾಡಿದರು. ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವ ಕೆಲಸ ಮಾಡಿದರು.


ಸಾಹಿತ್ಯಿಕ ಕೊಡುಗೆಗಳು
ಜ್ಯೋತಿಬಾಫುಲೆ ಅವರು ಸಾಮಾಜಿಕ ಕಾರ್ಯ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದರು. ಅವರ ಬರಹಗಳು ಸಾಮಾಜಿಕ ಬದಲಾವಣೆಯನ್ನು ಪ್ರೇರೇಪಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಗುಲಾಮಗಿರಿ, ರೈತರ ಸಂಕಷ್ಟ ಹಾಗೂ ಮೇಲ್ಜಾತಿಯ ಭೂಮಾಲೀಕರಿಂದ ಉಂಟಾಗುವ ಶೋಷಣೆಯ ಕುರಿತು ಶೆಟ್ಕಾರ್ಯಚಾ ಅಸುದ್‌ ಎಂಬ ಕೃತಿಯನ್ನು ರಚಿಸಿದರು. ಮರಾಠಿ ಭಾಷೆಯಲ್ಲಿ ಅನೇಕ ಕೃತಿಗಳನ್ನು ಬರೆದಿದ್ದು, ಇಂಗ್ಲಿಷ್‌ ಭಾಷೆಗಳಿಗೆ ಅನುವಾದಗೊಂಡಿದೆ. ಇವರು ಬರೆದಂತಹ ಪುಸ್ತಕಗಳಲ್ಲಿ 1855ರಲ್ಲಿ ತೃತೀಯಾರತ್ನ, ಬ್ರಹ್ಮಣಾಂಚೆ ಕಸಬ್, 1873ರಲ್ಲಿ ಗುಲಾಮಗಿರಿ ಪ್ರಮುಖವಾದವುಗಳು.

ಗೌರವ

ಭಾರತೀಯ ಅಂಚೆ ಇಲಾಖೆಯು 1977 ರಲ್ಲಿ ಫುಲೆಯವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು 3 ಡಿಸೆಂಬರ್ 2003 ರಂದು ನವದೆಹಲಿಯ ಸಂಸತ್ ಭವನದಲ್ಲಿ ಜ್ಯೋತಿರಾವ್ ಫುಲೆ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.


ಜ್ಯೋತಿರಾವ್‌ ಫುಲೆ ಅವರು ನವೆಂಬರ್ 28, 1890 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.