ಇಂದು ಪುಣ್ಯಸ್ಮರಣೆ
ಅಣ್ಣಾವ್ರು ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ವರನಟ ಡಾ. ರಾಜ್‌ ಕುಮಾರ್‌ ಅವರ ನೆನಪು ಅಭಿಮಾನಿಗಳಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ರಂಗಭೂಮಿ ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಛಾಫು ಮೂಡಿಸಿದ್ದ ಇವರು ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗ ಗುರುತಿಸಿಕೊಳ್ಳುವಂತೆ ಮಾಡಿದವರು. ತಮ್ಮ ಸಿನಿಪಯಣ ಶುರುವಾದಾಗಿನಿಂದಲೂ ಕೊನೆಯವರೆಗೂ ಬಹುಬೇಡಿಕೆಯ ನಟನಾಗಿಯೇ ಹೆಸರನ್ನು ಉಳಿಸಿಕೊಂಡಿದ್ದರು. ನಟನೆಯಲ್ಲಿ ನಟಸಾರ್ವಭೌಮನೆನಿಸಿಕೊಂಡಿದ್ದಲ್ಲದೇ ಗಾಯನ ಮತ್ತು ಚಿತ್ರ ನಿರ್ಮಾಣದಲ್ಲೂ ಕನ್ನಡಿಗರ ಮನಗೆದ್ದಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಚಿರಸ್ಥಾಯಿಯಾಗಿರುವ ನಾಡಿನ ಹೆಮ್ಮೆಯ ವರನಟ ಡಾ.ರಾಜ್‌ ಕುಮಾರ್‌ ಅವರ ಪುಣ್ಯಸ್ಮರಣೆ ಇಂದು.


ಪರಿಚಯ
ಡಾ. ರಾಜ್‌ಕುಮಾರ್ ಅವರು ಏಪ್ರಿಲ್ 24, 1929 ರಂದು ಚಾಮರಾಜನಗರದ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮತ್ತು ತಾಯಿ ಲಕ್ಷ್ಮಮ್ಮ . ಇವರ ತಂದೆ ʼಗುಬ್ಬಿ ವೀರಣ್ಣʼ ನಾಟಕ ಕಂಪನಿಯಲ್ಲಿ ಕಲಾವಿದರಾಗಿದ್ದರು. ಮುತ್ತುರಾಜು ತಮ್ಮ ವಿದ್ಯಾಭ್ಯಾಸವನ್ನು ನಾಲ್ಕನೇ ತರಗತಿಗೆ ಬಿಟ್ಟು ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. 


ರಂಗಭೂಮಿ
ಡಾ. ರಾಜ್ ಕುಮಾರ್‌ ಅವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ತಂದೆಯಿಂದ ಪ್ರಭಾವಿತರಾಗಿದ್ದರು. ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜನಿಗೆ “ಕೃಷ್ಣಲೀಲಾ” ಎಂಬ ನಾಟಕದಲ್ಲಿ ಮೊದಲ ಬಾರಿಗೆ ಸಣ್ಣ ಪಾತ್ರ ಸಿಕಿತ್ತು. ಸ್ವಲ್ಪ ದಿನಗಳ ನಂತರ ತಂದೆ ಪುಟ್ಟಸ್ವಾಮಯ್ಯ ನವರು ಗುಬ್ಬಿ ವೀರಣ್ಣ ಕಂಪನಿ ತೊರೆದು ಎಂ.ವಿ ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದ್ದರು. ನಂತರ ಮುತ್ತುರಾಜ್‌ ಗೆ ಆಕಸ್ಮಾತ್‌ ಆಗಿ ಅಂಬರೀಶ್‌ ನಾಟಕದಲ್ಲಿ ರಮಾಕಾಂತ ಎಂಬ ಪಾತ್ರ ಸಿಕ್ಕಿತ್ತು. ನಂತರ ಕುರುಕ್ಷೇತ್ರ ನಾಟಕದಲ್ಲಿ ದೊಡ್ಡ ಪಾತ್ರದಲ್ಲಿ ಕಾರ್ಯನಿರ್ವಹಿಸಿದರು. ತದನಂತರ ತುಂಬಾ ವರ್ಷ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು.


ಚಿತ್ರರಂಗಕ್ಕೆ ಕೊಡುಗೆ
ಮೈಸೂರಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್‌ ಕಣ್ಣಪ್ಪನ ಪಾತ್ರ ನಿರ್ವಹಿಸಿದರು. ನಂತರ ಅದನ್ನು ಕಂಡ ಹೆಚ್ ಎನ್‌ ಸಿಂಹ ಅವರು ಬೇಡರ ಕಣ್ಣಪ್ಪ ಸಿನಿಮಾದ ಪಾತ್ರಕ್ಕೆ ಇವರೇ ಸರಿಸಾಟಿ ಎಂದು ನಿರ್ಮಾಪಕ ಎ.ವಿ.ಎಂ ಚೆಟ್ಟಿಯಾರ್‌ ಅವರು ಸಂಪರ್ಕಿಸಿ ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ವಿಷಯ ತಿಳಿಸಿ ಒಪ್ಪಿಸಿದರು. ನಂತರ ಮುತ್ತುರಾಜ್‌ ನಿಂದ ರಾಜ್‌ ಕುಮಾರ್‌ ಆಗಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದರು. ಅಲ್ಲಿಂದ ಶುರುವಾದ ರಾಜ್‌ ಕುಮಾರ ಸಿನಿಮಾ ಪಯಣ ಭಕ್ತ ವಿಜಯ , ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ ಮುಂತಾದ ಭಕ್ತಿ ಪ್ರಧಾನ ಚಿತ್ರದಲ್ಲಿ ಅಭಿನಯಿಸಿದರು. 1960ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು. ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿ ಅಭಿಮಾನಿಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಅವರ 39 ಚಿತ್ರಗಳು 34 ನಟರಿಂದ 9 ಭಾಷೆಗಳಲ್ಲಿ 63 ಬಾರಿ ಮರುನಿರ್ಮಾಣ ಕಂಡಿದೆ.


ಕನ್ನಡಪರ ಚಳುವಳಿ
ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಜಾರಿಗೆ ತರುವ ಆಲೋಚನೆಯಲ್ಲಿ ಇತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. 1981ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು. ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು. ಈ ಚಳವಳಿಗೆ ರಾಜ್ ಕುಮಾರ್ ಸಂಪೂರ್ಣ ಬೆಂಬಲ ನೀಡಿದ್ದರು.


ಪ್ರಶಸ್ತಿ
ಡಾ. ರಾಜ್‌ ಕುಮಾರ್‌ ಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ, 1995 ರಲ್ಲಿ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ , ಕರ್ನಾಟಕ ರತ್ನ , ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜಾ ಪ್ರಶಸ್ತಿ , ಕರ್ನಾಟಕ ಸರ್ಕಾರದಿಂದ ಗುಬ್ಬಿ ವೀರಣ್ಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಹಿನ್ನಲೆ ಗಾಯನಕ್ಕೂ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.


ಡಾ. ರಾಜ್‌ ಕುಮಾರ್‌ ಅವರು ಏಪ್ರಿಲ್‌ 12, 2006ರಲ್ಲಿ ತಮ್ಮ 76 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.