
ಮ್ಯಾನ್ ಆಫ್ ದಿ ಮಿಲೇನಿಯಾ: ಡಾ.ಹೆಡಗೇವಾರ್ ಪುಸ್ತಕ ಬಿಡುಗಡೆ
ಬೆಂಗಳೂರು: ಡಾ.ಕೇಶವ ಬಲಿರಾಮ್ ಹೆಡಗೇವಾರ್ ಒಬ್ಬ ದ್ರಷ್ಟಾರ, ಪ್ರಾಯೋಗಿಕ ವ್ಯಕ್ತಿತ್ವವುಳ್ಳವರಾಗಿದ್ದರು. ಅವರ ಆಲೋಚನೆಗಳ ಫಲಿತಾಂಶವೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ನಾನಾ ಪಾಲ್ಕರ್ ಅವರು ಡಾ. ಹೆಡಗೇವಾರ್ ಅವರ ಕುರಿತು ಬರೆದ ಪುಸ್ತಕ ಅವರ ಬಗೆಗಿನ ಅತ್ಯಂತ ಅಧಿಕೃತ ಪುಸ್ತಕ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಹೇಳಿದರು.
ಮಂಥನ ಬೆಂಗಳೂರು ವತಿಯಿಂದ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾದ ‘ಮ್ಯಾನ್ ಆಫ್ ದಿ ಮಿಲೇನಿಯಾ: ಡಾ. ಹೆಡಗೇವಾರ್’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಾಮಾಜಿಕ ಬದಲಾವಣೆ ಮತ್ತು ವ್ಯವಸ್ಥೆಯ ಪರಿವರ್ತನೆಯಲ್ಲಿ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರ ಚಿಂತನೆಗಳನ್ನು ಮತ್ತು ಕಾರ್ಯವೈಖರಿಯನ್ನು ನಾವು ಗಮನಿಸಬಹುದು. ಈ ಪುಸ್ತಕ ಪ್ರತಿ ಅಧ್ಯಾಯದಲ್ಲೂ ಇಂದಿಗೂ ಪ್ರಸ್ತುತವಾಗಬಲ್ಲ ಅವರ ಚಿಂತನೆಗಳನ್ನು ತಿಳಿಸಿಕೊಡುವ ಮೂಲಕ ಮುಂದಿನ ಪೀಳಿಗೆಗೆ, ಆಂಗ್ಲ ಭಾಷಾ ಓದುಗರಿಗೆ ಮತ್ತು ಸಂಘದ ಕಾರ್ಯಕರ್ತರಿಗೂ ಅತ್ಯುತ್ತಮ ಮಾಹಿತಿಗಳನ್ನು ಒದಗಿಸಿಕೊಡುತ್ತದೆ ಎಂದರು.
ಸಂಘದ ಶತಾಬ್ದಿ ವರ್ಷ ಸಮೀಪದಲ್ಲಿರುವ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿಚಯ ವಿಶ್ವದ ಜನರಿಗಾಗಿದೆ. ಸಂಘದ ಸಂಸ್ಥಾಪಕ ಡಾ.ಹೆಡಗೇವಾರರು ಹಲವು ಭಾಷೆಗಳಲ್ಲಿ ಅನೇಕ ಪುಸ್ತಕಗಳು ಪ್ರಕಟವಾಗಿವೆ. ದೇಶ ವಿದೇಶಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾಗಿ ಸಂಶೋಧನೆಗಳೂ ನಡೆದಿವೆ. ಆದರೆ ಇಂಗ್ಲಿಷ್ ನಲ್ಲಿ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರ ಕುರಿತಾಗಿ ಪ್ರಕಟಗೊಂಡ ಪುಸ್ತಕ ಕಡಿಮೆ. ಈ ನಿಟ್ಟಿನಲ್ಲಿ ಈ ಪ್ರಯತ್ನ ಇಂಗ್ಲೀಷ್ ಭಾಷಾ ಓದುಗರಿಗೆ ಅಧಿಕೃತ ಮಾಹಿತಿಗಳ ಪುಸ್ತಕ ಲಭಿಸಿದಂತಾಗಿದೆ ಎಂದರು.

ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಆರ್ ಎಸ್ ಎಸ್ ಸ್ಥಾಪಿಸುವುದಕ್ಕೂ ಮುನ್ನ ಕ್ರಾಂತಿಕಾರಿಯಾಗಿ, ರಾಜಕಾರಣಿಯಾಗಿ ನಂತರದ ದಿನಗಳಲ್ಲಿ ವ್ಯಕ್ತಿನಿರಪೇಕ್ಷ ಮತ್ತು ಪ್ರಚಾರ ವಿಮುಖತೆಯಿಂದ ಕಾರ್ಯನಿರ್ವಹಿಸುವ ಸ್ವಯಂಸೇವಕರನ್ನು ತಯಾರು ಮಾಡುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ ಸಂಘಟಕನಾಗಿ ಬಹುಮುಖ ವ್ಯಕ್ತಿತ್ವವನ್ನು ಉಳ್ಳವರಾಗಿದ್ದರು. ತಮ್ಮೊಂದಿಗೆ ಸೈದ್ಧಾಂತಿಕ ಬೇಧವನ್ನು ಹೊಂದಿದವರ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರ ಜೀವನವನ್ನು ಕಾಲಕ್ರಮಾನುಸಾರ ಮಾಹಿತಿಯುಳ್ಳ ಪುಸ್ತಕ ಮ್ಯಾನ್ ಆಫ್ ದಿ ಮಿಲೇನಿಯಾ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಆರ್ ಜಗನ್ನಾಥನ್ ಶತಮಾನದ ಹಿಂದೆ ಸ್ಥಾಪಿಸಿದ ಒಂದು ಸಂಘಟನೆ ಹಲವು ಮಂದಿಯ ತ್ಯಾಗದ ಕಾರಣದಿಂದಾಗಿ ಇಂದಿಗೂ ಪ್ರಸ್ತುತವಾಗಿದೆ. ಶತಮಾನದ ಕಾಲ ನಡೆದು ಬಂದ ಸಂಘಟನೆ ದೀರ್ಘಕಾಲ ಉಳಿಯುವ ವರವನ್ನು ಹೊಂದಿರುತ್ತದೆ. ಅದು ಸಂಘಟನೆಯು ತಮ್ಮ ಮೂಲ ಧ್ಯೇಯಕ್ಕೆ ಬದ್ಧರಾಗಿ ನಡೆದು ಬಂದ ಹಾದಿಯ ಕುರಿತು ತಿಳಿಸುತ್ತದೆ ಎಂದರು.

ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರು ವ್ಯಕ್ತಿ ನಿರ್ಮಾಣದ ಧ್ಯೇಯವನ್ನು ಹೊಂದಿದವರು. ರಾಜಕೀಯವಾಗಿ ಆಸಕ್ತಿ ಹೊಂದಿದ್ದರೂ ರಾಜಕೀಯದ ಹೊರತಾಗಿ ಸಂಘವನ್ನು ಪ್ರತಿ ವ್ಯಕ್ತಿಯ ಜೀವನ ನಿರ್ಮಾಣಕ್ಕಾಗಿ ಪ್ರಾರಂಭಿಸಿದರು. ಅವರ ಕುರಿತಾಗಿ ಪ್ರಾದೇಶಿಕ ಭಾಷೆಗಳಲ್ಲಿ ಕೆಲವು ಪುಸ್ತಕಗಳ ಪ್ರಕಟವಾಗಿವೆ. ಆದರೆ ಇಂಗ್ಲಿಷ್ ನಲ್ಲಿ ಪ್ರಕಟವಾದ ಸಂಖ್ಯೆ ಕಡಿಮೆ. ಇಂಗ್ಲಿಷ್ ಭಾಷೆಯ ಪುಸ್ತಕ ಜಾಗತಿಕ ಮನ್ನಣೆ ಪಡೆಯುವುದರಿಂದ ಈ ಪುಸ್ತಕ ಪ್ರಮುಖವೆನಿಸುತ್ತದೆ ಎಂದು ನುಡಿದರು.
ಡಾ.ಕೇಶವ ಬಲಿರಾಮ್ ಹೆಡಗೇವಾರರ ಮೂಲ ಚಿಂತನೆ ಸಾರಿದ ಸಂದೇಶವನ್ನು ನಂತರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಪುಸ್ತಕ ಸಂಘದ ಮೂಲ ಚಿಂತನೆಯನ್ನು ಅಧಿಕೃತ ಮಾಹಿತಿಗಳೊಂದಿಗೆ ಹೊಸ ಪೀಳಿಗೆಗೆ ತಲುಪಿಸುವ ಹೊಸ ಪುಸ್ತಕ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಜಯಕರ್ ಶೆಟ್ಟಿ, ಕರ್ನಾಟಕದ ಎರಡೂ ಪ್ರಾಂತಗಳ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಸೇರಿದಂತೆ ಚಿಂತಕರು, ಶಿಕ್ಷಣ ತಜ್ಞರು, ಸಂಘದ ಹಿತೈಷಿಗಳು ಭಾಗವಹಿಸಿದರು.
