ನೇರ ನೋಟ:  ದು.ಗು.ಲಕ್ಷ್ಮಣ

ಇಟಲಿಯ ಕೊಲೆಗಡುಕ ನಾವಿಕರನ್ನು ಬಂಧಿಸದಂತೆಅವರಿಗೆ ಗಲ್ಲು ಶಿಕ್ಷೆಯಾಗದಂತೆ ಆಗ್ರಹಿಸುವ ಕೇಂದ್ರದ ಸಚಿವರಿಗೆಸಂಜಯ್‌ ದತ್‌ಗೆ ಕ್ಷಮಾದಾನ ನೀಡಬೇಕೆಂದು ಅಪ್ಪಣೆ ಕೊಡಿಸುವ ಮಾರ್ಕಂಡೇಯ ಖಟ್ಜು ಅವರಿಗೆ ಕಳೆದ ವರ್ಷಗಳಿಂದ ಆರೋಪಗಳೇ ಸಾಬೀತಾಗದಿದ್ದರೂ ಈಗಲೂ ಜೈಲಿನಲ್ಲಿ ಶಾರೀರಿಕವಾಗಿಮಾನಸಿಕವಾಗಿ ಚಿತ್ರಹಿಂಸೆಗೀಡಾಗಿ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿರುವ ಮಾಲೆಗಾಂವ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್‌ ಅವರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಬೇಕೆಂದು ಏಕೆ ಅನಿಸುತ್ತಿಲ್ಲಸಾಧ್ವಿ ಪ್ರಜ್ಞಾಸಿಂಗ್‌ ಅವರ ಬಗ್ಗೆ ಈ ಮಹನೀಯರು ಒಮ್ಮೆಯಾದರೂ ಕನಿಕರದ ಒಂದಾದರೂ ಮಾತು ಆಡಿದ್ದುಂಟೆ?

  • ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಶಿದ್‌ ಸಂಸತ್ತಿನಲ್ಲಿ ಹೇಳುತ್ತಾರೆ : ಕೇರಳದ ಮೀನುಗಾರರಿಬ್ಬರನ್ನು ಕೊಲೆಗೈದ ಆರೋಪ ಹೊತ್ತ ಇಟಲಿ ನೌಕಾ ಯೋಧರನ್ನು ಬಂಧಿಸಲಾಗುವುದಿಲ್ಲ ಹಾಗೂ ಆರೋಪಿಗಳಿಗೆ ಗಲ್ಲುಶಿಕ್ಷೆಯನ್ನೂ ವಿಧಿಸಲಾಗುವುದಿಲ್ಲ.
  • ಭಾರತೀಯ ಪತ್ರಿಕಾಮಂಡಳಿ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಅಪ್ಪಣೆ ಕೊಡಿಸುತ್ತಾರೆ : ಸುಪ್ರೀಂಕೋರ್ಟ್‌ನಿಂದ ಅಪರಾಧಿಯೆಂದು ಸಾಬೀತಾಗಿ ಶಿಕ್ಷೆಗೊಳಗಾಗಿರುವa ನಟ ಸಂಜಯ್‌ ದತ್‌ಗೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಕ್ಷಮಾದಾನ ನೀಡಬೇಕು.
  • ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಹೇಳುತ್ತಾರೆ : ಮುಂಬೈ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್‌ದತ್‌ ಕ್ಷಮಾದಾನ ಕೋರಿ ಮಹಾರಾಷ್ಟ್ರ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದರೆ ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರ ಬಳಸಬಹುದು. ಕ್ಷಮೆ ನೀಡಲು ಅವರಿಗೆ ಅಧಿಕಾರವಿದೆ.
  • ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್‌ ತಿವಾರಿ ಪ್ರತಿಕ್ರಿಯಿಸುತ್ತಾರೆ : ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಖಟ್ಜು ಮಾತನ್ನು ಜನ ಮತ್ತು ಸರ್ಕಾರ ಗಂಭೀರವಾಗಿ ಆಲಿಸುತ್ತದೆ. ಸಂಜಯ್‌ ದತ್‌ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದರೆ ಸೂಕ್ಷ ಸಮಯದಲ್ಲಿ ಸೂಕ್ಷ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.

ಈ ಎಲ್ಲ ಮಹನೀಯರ ಈ ಹೇಳಿಕೆಗಳನ್ನು ಗಮನಿಸಿದರೆ ಎಂಥವರಿಗಾದರೂ ಒಮ್ಮೆ ಮೈ ಕುದ್ದು ಹೋಗುತ್ತದೆ. ಕಾನೂನು ಕಾಯ್ದೆ ಎಲ್ಲರಿಗೂ ಸಮಾನ ಎಂದು ನಂಬಿರುವ ಈ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ, ಇವರೇಕೆ ಹೀಗೆ ತಲೆಕೆಟ್ಟವರಂತೆ ಆಡುತ್ತಿದ್ದಾರೆ? ಸುಪ್ರೀಂಕೋರ್ಟ್‌ ತೀರ್ಪನ್ನೇ ಲೇವಡಿ ಮಾಡುವಷ್ಟು ಭಂಡ ಧೈರ್ಯವೇ ಇವರಿಗೆ? ಎನಿಸದೇ ಇರದು.

ಇಟಲಿ ಯುಪಿಎ ಗುಪ್ತ ಒಪ್ಪಂದ?

ಮೊದಲಿಗೆ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಶಿದ್‌ ಸಂಸತ್‌ನಲ್ಲಿ ನೀಡಿರುವ ಹೇಳಿಕೆಯನ್ನು ಗಮನಿಸೋಣ. ಕೇರಳದ ಮೀನುಗಾರರಿಬ್ಬರನ್ನು ಕಾರಣವಿಲ್ಲದೆ ಗುಂಡು ಹಾರಿಸಿ ಸಾಯಿಸಿದ ಇಟಲಿ ನೌಕಾಯೋಧರನ್ನು ಬಂಧಿಸುವಂತೆ ನ್ಯಾಯಾಲಯವೇ ಹೇಳಿದೆ. ಅಲ್ಲದೆ, ಜಾಮೀನಿನ ಮೇಲೆ ಬಿಡುಗಡೆಯಾಗಿ ಇಟಲಿಗೆ ಚುನಾವಣೆಯಲ್ಲಿ ಮತ ನೀಡುವುದಕ್ಕೆ ತೆರಳಿ ವಾಪಸ್‌ ಬರದಿದ್ದುದಕ್ಕೆ ಸುಪ್ರೀಂಕೋರ್ಟೇ ತರಾಟೆಗೆ ತೆಗೆದುಕೊಂಡಿದೆ. ತಕ್ಷಣ ಅವರು ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಹೀಗಿರುವಾಗ ಸಲ್ಮಾನ್‌ ಖುರ್ಶಿದ್‌ ಆರೋಪಿಗಳಾದ ಇಟಲಿ ನೌಕಾ ಯೋಧರನ್ನು ಬಂಧಿಸಲಾಗುವುದಿಲ್ಲ ಹಾಗೂ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಹೇಳಲು ಅವರಿಗೇನು ಹಕ್ಕು? ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಆರೋಪ ಹೊತ್ತ ವ್ಯಕ್ತಿಗಳಿಗೆ ಯಾವ ಶಿಕ್ಷೆ ವಿಧಿಸಬೇಕು? ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಬೇಕೆ? ಅಥವಾ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಒಳಪಡಿಸಬೇಕೆ? ಒಂದು ವೇಳೆ ಆರೋಪಿಗಳು ವಿದೇಶಿಯರಾಗಿದ್ದರೂ, ಈ ಪ್ರಕರಣದಲ್ಲಿ ಭಾರತೀಯ ನ್ಯಾಯಾಲಯಗಳಲ್ಲಿ ಅಥವಾ ವಿಶೇಷವಾಗಿ ಯಾವ ಬಗೆಯ ವಿಚಾರಣೆ ನಡೆಸಬೇಕೆಂಬುದರ ಬಗ್ಗೆ ಮಾತನಾಡಲು ಅಧಿಕಾರವಿರುವುದು ಸುಪ್ರೀಂಕೋರ್ಟ್‌ಗೆ ಮಾತ್ರ. ವಿದೇಶಾಂಗ ಸಚಿವರಿಗೆ ಈ ವಿಷಯದಲ್ಲಿ ಯಾವುದೇ ಅಧಿಕಾರವಿಲ್ಲ. ಅದೂ ಅಲ್ಲದೆ ಯಾವುದೇ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೇ, ಬೇಡವೇ ಇತ್ಯಾದಿ ಕಾನೂನಿಗೆ ಸಂಬಂಧಪಟ್ಟ ಸಂಗತಿಗಳು ವಿದೇಶಾಂಗ ಸಚಿವರ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಿರುವಾಗ ಸಂಸತ್ತಿನ ಉಭಯ ಸದನಗಳಲ್ಲಿ ವಿದೇಶಾಂಗ ಮಂತ್ರಿ ಖುರ್ಶಿದ್‌ ನ್ಯಾಯ ಪೀಠವೊಂದು ತೀರ್ಪು ನೀಡುವ ರೀತಿಯಲ್ಲಿ ಹೇಳಿರುವುದು ನ್ಯಾಯಾಂಗಕ್ಕೇ ಬಗೆದ ಅಪಚಾರ ಹಾಗೂ ಸ್ಪಷ್ಟವಾಗಿ ಅದೊಂದು ನ್ಯಾಯಾಂಗ ನಿಂದನೆಯೇ ಸರಿ. ಭಾರತದ ನೆಲದ ಕಾನೂನಿನ ಪ್ರಕಾರ ಆರೋಪಿಯಾದವನಿಗೆ ಯಾವ ಶಿಕ್ಷೆ ವಿಧಿಸಬೇಕೆಂದು ತೀರ್ಮಾನ ಮಾಡುವುದು ಈ ದೇಶದ ನ್ಯಾಯಾಲಯಗಳೇ ಹೊರತು ಮಂತ್ರಿ ಮಹೋದಯರಲ್ಲ.

ಖುರ್ಶಿದ್‌ ಈ ಹೇಳಿಕೆಯನ್ನು ಸುಖಾಸುಮ್ಮನೆ ನೀಡಿರಲಿಕ್ಕಿಲ್ಲ. ಅವರ ಹೇಳಿಕೆಯ ಹಿಂದೆ ಇಟಲಿ ಸರ್ಕಾರದೊಂದಿಗೆ ಯಾವುದೋ ಗುಪ್ತ ಒಪ್ಪಂದ ನಡೆದಿರಲೇಬೇಕು. ಆರೋಪಕ್ಕೆ ಗುರಿಯಾದ ತನ್ನ ನೌಕಾ ಯೋಧರನ್ನು ವಿಚಾರಣೆಗಾಗಿ ಭಾರತಕ್ಕೆ ವಾಪಸ್‌ ಕಳುಹಿಸುವುದಿಲ್ಲವೆಂದು ಇಟಲಿ ಸರ್ಕಾರ ಪೊಗರಿನಿಂದ ಮೊದಲು ಹೇಳಿತ್ತು. ಅವರೇನಾದರೂ ವಿಚಾರಣೆಗಾಗಿ ವಾಪಸ್‌ ಭಾರತಕ್ಕೆ ಬರದಿದ್ದಲ್ಲಿ ಯುಪಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗುತ್ತಿದ್ದುದು ಸ್ವಾಭಾವಿಕ. ಈ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಇಟಲಿ ಸರ್ಕಾರದೊಂದಿಗೆ ಯಾವುದೋ ರಹಸ್ಯ ಒಪ್ಪಂದ ಮಾಡಿಕೊಂಡ ಬಳಿಕೇ ಇಟಲಿ ಸರ್ಕಾರ ತನ್ನ ಮೊದಲಿನ ನಿಲುಮೆಯನ್ನು ಬದಲಿಸಿದೆ. ಭಾರತ ಸರ್ಕಾರದಿಂದ ಗಲ್ಲುಶಿಕ್ಷೆ ನೀಡುವುದಿಲ್ಲ ಎಂಬ ಭರವಸೆ ಪಡೆದು ಆರೋಪಿ ಯೋಧರನ್ನು ಭಾರತಕ್ಕೆ ಕಳುಹಿಸಿದೆ. ರಹಸ್ಯ ಒಪ್ಪಂದ ಆಗಿದೆ ಎಂಬುದಕ್ಕೆ ಇಟಲಿ ವಿದೇಶಾಂಗ ಸಚಿವ ಗಿಯೋಲಿಯೋ ಟರ್ಜಿ ಅವರ ಹೇಳಿಕೆಯೇ ಸಾಕ್ಷಿ. ಗಲ್ಲು ಶಿಕ್ಷೆ ತಪ್ಪಿಸಲು ಕೆಲವೊಂದು ವೇಳೆ ರಾಜತಾಂತ್ರಿಕ ನಾಟಕ ಆಡಬೇಕಾಗುತ್ತದೆ. ಇದೀಗ ಗಲ್ಲು ಶಿಕ್ಷೆ ತಪ್ಪಿಸಲು ಸಮಯ ಬಂದಿದೆ ಎಂಬುದು ಅವರ ಹೇಳಿಕೆ. ಒಟ್ಟಾರೆ ಭಾರತ ಜಗತ್ತಿನ ಮುಂದೆ

ಅಪಹಾಸ್ಯಕ್ಕೀಡಾಗಿದೆ. ಸತ್ತಿರುವುದು ಭಾರತದ ಮೀನುಗಾರರು. ಅವರನ್ನು ಕೊಂದಿದ್ದು ಇಟಲಿಯ ಇಬ್ಬರು ನೌಕಾ ಯೋಧರು. ಅಂತಾರಾಷ್ಟ್ರೀಯ ಕಾಯ್ದೆಗಳ ಪ್ರಕಾರವೇ ಈ ಕುರಿತು ಆರೋಪಿಗಳ ಬಂಧನ, ವಿಚಾರಣೆ ನಡೆದು ಅನಂತರ ಆರೋಪಿಗಳಿಗೆ ಸೂಕ್ತ ಶಿಕ್ಷೆಯೂ ಆಗಬೇಕು. ಹೀಗಿದ್ದರೂ, ಇವೆಲ್ಲ ಗೊತ್ತಿದ್ದರೂ, ನ್ಯಾಯಾಲಯದಿಂದ ನ್ಯಾಯವೇ ಹೊರಬೀಳದಿದ್ದರೂ ಸಲ್ಮಾನ್‌ ಖುರ್ಶಿದ್‌ ಅವರನ್ನು ಗಲ್ಲಿಗೇರಿಸುವುದಿಲ್ಲ ಎಂಬ ಭರವಸೆ ನೀಡಿರುವುದು ಎಂತಹ ವಿಪರ್ಯಾಸ! ಖುರ್ಶಿದ್‌ ಇನ್ನೂ ಒಂದು ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ಒಂದುವೇಳೆ ಇಟಲಿಯ ಆರೋಪಿ ನೌಕಾ ಯೋಧರಿಗೆ ಶಿಕ್ಷೆಯಾದರೂ ಅವರು ಅದನ್ನು ಅನುಭವಿಸುವುದು ಭಾರತದಲ್ಲಿ ಅಲ್ಲವಂತೆ! ಇಟಲಿ ಜೈಲಿನಲ್ಲಿಯೇ ಅವರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸಲಾಗುವುದಂತೆ! ಈ ಇಬ್ಬರು ಕೊಲೆಗಡುಕ ಆರೋಪಿಗಳನ್ನು ದಿಲ್ಲಿಯಲ್ಲಿರುವ ಇಟಲಿ ರಾಯಭಾರ ಕಚೇರಿಯಲ್ಲಿ ರಾಜಾಶ್ರಯ ನೀಡಿ ಬಂಧನದಲ್ಲಿಡಲಾಗಿದೆ. ಕೊಲೆಗಡುಕರಿಗೆ ಈ ಬಗೆಯ ರಾಜೋಪಚಾರದ ಅಗತ್ಯವಿತ್ತೆ? ಪ್ರಕರಣದ ವಿಚಾರಣೆಗಾಗಿ ದಿಲ್ಲಿಯಲ್ಲಿ ವಿಶೇಷ ತ್ವರಿತಗತಿ ನ್ಯಾಯಾಲಯ ಸ್ಥಾಪಿಸುವುದಾಗಿ ಇಟಲಿಗೆ ಯುಪಿಎ ಸರ್ಕಾರ ಭರವಸೆ ನೀಡಿದೆ. ದೇಶದಲ್ಲಿ ಅಸಂಖ್ಯಾತ ಕ್ರಿಮಿನಲ್‌ ಕೇಸುಗಳು ಇತ್ಯರ್ಥವಾಗದೆ ಅನೇಕ ವರ್ಷಗಳಿಂದ ಕೋರ್ಟುಗಳಲ್ಲಿ ಕೊಳೆಯುತ್ತಲೇ ಇವೆ. 1993ರ ಮುಂಬೈ ಸರಣಿ ಸ್ಫೋಟದ ಆರೋಪಿಗಳ ವಿಚಾರಣೆ ನಡೆದು, ಅವರಿಗೆ ಶಿಕ್ಷೆಯ ತೀರ್ಪು ಪ್ರಕಟವಾಗಿದ್ದು ಒಂದೆರಡು ದಿನಗಳ ಹಿಂದೆ. ಅಂದರೆ ಪ್ರಕರಣ ನಡೆದು 20 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ. ಮುಂಬೈ ಸರಣಿ ಸ್ಫೋಟ ಪ್ರಕರಣ, ಹಾಗೆ ನೋಡಿದರೆ ಯಾವುದೋ ಒಂದು ಚಿಕ್ಕ ಪ್ರಕರಣವಲ್ಲ. ಇಡೀ ದೇಶವನ್ನೇ ಗಡಗಡ ನಡುಗಿಸಿದ ಪ್ರಕರಣ ಅದು. ಅಂತಹ ಪ್ರಕರಣದ ವಿಚಾರಣೆಗೆ ಯಾವುದೇ ತ್ವರಿತಗತಿ ನ್ಯಾಯಾಲಯ ಸ್ಥಾಪಿಸದ ಯುಪಿಎ ಸರ್ಕಾರ ಇಟಲಿಯ ಆರೋಪಿಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸುವುದಾಗಿ ಭರವಸೆ ನೀಡಿದ್ದೇಕೆ? ಇಟಲಿಯ ಮೇಲೇಕೆ ಅಷ್ಟೊಂದು ವ್ಯಾಮೋಹ? ಇಟಲಿ ದೇಶದ ಮರ್ಯಾದೆ ಕಾಪಾಡುವ ದರ್ದು ಯುಪಿಎ ಸರ್ಕಾರಕ್ಕೇಕೆ? ಸೋನಿಯಾ ಗಾಂಧಿ ಇಟಲಿಯ ಮಗಳು ಎಂಬ ಒಂದೇ ಕಾರಣಕ್ಕೆ ಇಂತಹ ಧೋರಣೆಯನ್ನು ಯುಪಿಎ ಸರ್ಕಾರ ಕೈಗೊಂಡಿದೆ ಎನ್ನುವುದಕ್ಕೆ ಯಾವ ತರ್ಕದ ಅಗತ್ಯವೂ ಇಲ್ಲ.

ಕುಖ್ಯಾತ ಖಟ್ಜು

ಇದೀಗ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಅವರ ವಿಚಾರಕ್ಕೆ ಬರೋಣ. ಮಾರ್ಕಂಡೇಯ ಖಟ್ಜು ಪ್ರೆಸ್‌ ಕೌನ್ಸಿಲ್‌ ಅಧ್ಯಕ್ಷರಾದ ಬಳಿಕ ಯಡವಟ್ಟು ಹೇಳಿಕೆಗಳಿಗೆ ಕುಖ್ಯಾತಿ ಪಡೆದಿದ್ದಾರೆ. ಅಧ್ಯಕ್ಷರಾದ ತಕ್ಷಣ ಅವರು ‘ಶೇ.90 ಮಂದಿ ಭಾರತೀಯರು ಮೂರ್ಖರು’ ಎಂದಿದ್ದರು. ಈ ಶೇ.90 ಮಂದಿಯಲ್ಲಿ ಅವರೂ ಕೂಡ ಸೇರಿರಬಹುದು! ಆ ವಿಚಾರ ಬೇರೆ. ಆದರೆ ಒಬ್ಬ ಮಾಜಿ ನ್ಯಾಯಮೂರ್ತಿಯಾಗಿ ಭಾರತೀಯರನ್ನು ಮೂರ್ಖರು ಎಂದು ಅಪ್ಪಣೆ ಕೊಡಿಸಲು ಅವರ್ಯಾರು? ಅವರಿಗಿರುವ ಅಧಿಕಾರವೇನು? ಅದಾದ ಬಳಿಕ, ಪತ್ರಿಕೋದ್ಯಮ ಶಿಕ್ಷಣ ಪಡೆಯದ ಪತ್ರಕರ್ತರಿಗೆ ಮಾಧ್ಯಮಗಳಲ್ಲಿ ಅವಕಾಶ ನೀಡಕೂಡದು ಎಂದು ಇನ್ನೊಂದು ವಿವಾದಾಸ್ಪದ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಪತ್ರಿಕೋದ್ಯಮ ಶಿಕ್ಷಣ ಪಡೆಯದ ಪತ್ರಕರ್ತರು ಪತ್ರಿಕಾರಂಗದ ನೀತಿ ಸಂಹಿತೆಗಳನ್ನು ಉಲ್ಲಂಘಿಸುತ್ತಾರೆ. ಅದರ ಬಗ್ಗೆ ಅವರಿಗೆ ಕನಿಷ್ಠ ಅರಿವೂ ಇರುವುದಿಲ್ಲ ಎಂಬುದು ಖಟ್ಜು ಅವರ ವಿಶ್ಲೇಷಣೆ. ಪತ್ರಿಕೋದ್ಯಮ ಶಿಕ್ಷಣ ಪಡೆದ ಪ್ರಮುಖ ಹುದ್ದೆಯಲ್ಲಿರುವ ಪತ್ರಕರ್ತರೇ ಕಾಸಿಗಾಗಿ ಸುದ್ದಿ ಹೊಸೆಯುವ, ಗಣಿದಣಿಗಳ ಹಣಕ್ಕೆ ಕೈಚಾಚುವ, ಪತ್ರಿಕೋದ್ಯಮದ ಹೆಸರಿನಲ್ಲಿ ‘ಡೀಲಿಂಗ್‌’ ನಡೆಸಿ ಅಕ್ಷರ ಹಾದರ ನಡೆಸುವ ಅದೆಷ್ಟೀ ರಾಶಿ ರಾಶಿ ನಿದರ್ಶನಗಳು ನಮ್ಮ ಮುಂದಿರುವಾಗ ಖಟ್ಜು ಅವರ ಹೇಳಿಕೆಯನ್ನು ಯಾವ ಪರಿಯಾಗಿ ಭಾವಿಸಬಹುದು?

ಅದು ಹೇಗಾದರೂ ಇರಲಿ, ಇದೀಗ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್‌ ದತ್‌ಗೆ ಕ್ಷಮಾದಾನ ನೀಡಬೇಕೆಂದು ಹೇಳಿರುವುದು ಅದೆಷ್ಟು ಸಮಂಜಸ? ನಟ ಸಂಜಯ್‌ ದತ್‌ ಈಗಾಗಲೇ ಸಾಕಷ್ಟು ನೊಂದಿರುವುದರಿಂದ ಮಾನವೀಯ ನೆಲೆಯಲ್ಲಿ ಕ್ಷಮಾದಾನ ನೀಡಬೇಕೆಂಬುದು ಅವರ ಆಗ್ರಹ. ಸಂಜಯ್‌ ದತ್‌ ಅವರ ಪೋಷಕರು ಸಮಾಜ ಸೇವೆಯಲ್ಲಿ ತೊಡಗಿದ್ದವರು. ಸಂಜಯ್‌ ಸಹ ಗಾಂಧಿ ತತ್ತ್ವಗಳನ್ನು ತಮ್ಮ ಚಿತ್ರಗಳಲ್ಲಿ ಪ್ರಚಾರ ಮಾಡಿದವರು. ಅವರಿಗಿಬ್ಬರು ಚಿಕ್ಕ ಮಕ್ಕಳೂ ಇದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ದತ್‌ಗೆ ಕ್ಷಮೆ ನೀಡಬೇಕೆಂದು ಖಟ್ಜು ಮನವಿ ಮಾಡಿದ್ದಾರೆ. ಖಟ್ಜು ಅವರ ಈ ಹೇಳಿಕೆಯನ್ನು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಿದರೆ ಕಂಡುಬರುವುದೇನು? ಆರೋಪಿ ಸಂಜಯ್‌ ದತ್‌ ಕುರಿತು ಸುಪ್ರೀಂಕೋರ್ಟ್‌ ಸರಿಯಾದ ವಿಚಾರಣೆ ನಡೆಸಿಲ್ಲ. ಒಂದುವೇಳೆ ಸರಿಯಾದ ವಿಚಾರಣೆ ನಡೆಸಿದ್ದರೂ ಅದು ತೀರ್ಪು ನೀಡುವಾಗ ಸಂಜಯ್‌ ದತ್‌ ಹಿನ್ನೆಲೆ ಹಾಗೂ ಆತನ ವ್ಯಕ್ತಿತ್ವವನ್ನು ಗಣನೆಗೆ ತೆಗೆದುಕೊಂಡಿಲ್ಲ. ಒಟ್ಟಾರೆ ಸುಪ್ರೀಂಕೋರ್ಟ್‌ ತೀರ್ಪು ಸರಿಯಾಗಿಲ್ಲ ಎಂದರ್ಥವಲ್ಲವೆ? ಕ್ರಿಮಿನಲ್‌ ಕೇಸ್‌ಗಳಲ್ಲಿ ಸಿಲುಕಿಕೊಂಡು, ಅನಂತರ ಸಾಕಷ್ಟು ನೊಂದುಬಿಟ್ಟರೆ ಅವರಿಗೆ ಕ್ಷಮಾದಾನ ನೀಡಬೇಕು ಎಂಬುದು ಖಟ್ಜು ಅವರ ಹೇಳಿಕೆ ನೀಡುವ ದಿವ್ಯ ಸಂದೇಶವಲ್ಲವೆ? ಹಾಗಿದ್ದರೆ ಜೈಲಿನಲ್ಲಿರುವ, ವಿಚಾರಣೆ ಎದುರಿಸುತ್ತಿರುವ ಸಾವಿರಾರು ಕ್ರಿಮಿನಲ್‌ಗಳನ್ನು ಅವರು ಜೈಲಿನಲ್ಲಿ ನೊಂದಿದ್ದಾರೆ ಎಂಬ ಕಾರಣಕ್ಕಾಗಿ ಅವರಿಗೆ ಬಿಡುಗಡೆಯ ಭಾಗ್ಯ ಕರುಣಿಸಬಹುದೆಂದು ಖಟ್ಜು ಹೇಳಿದಂತಿದೆ.

ಖಟ್ಜು ಅವರ ಇಂತಹ ಅಭಾಸಕರ ಹಾಗೂ ಬಾಲಿಶ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವ್ಯಾಪಕ ಟೀಕೆಗಳು ಹರಿದಿವೆ. ‘ಮುಂದೊಂದು ದಿನ ನ್ಯಾ.ಖಟ್ಜು ರಾಷ್ಟ್ರಪತಿಯಾಗುತ್ತಾರೆ. ಆಗ ಕ್ಷಮಾದಾನ ಎಲ್ಲ ಉಗ್ರರ ಆಜನ್ಮ ಸಿದ್ಧ ಹಕ್ಕಾಗುತ್ತದೆ’ ಎಂಬುದು ಟ್ವೀಟಿಗರೊಬ್ಬರ ಛೂಬಾಣ. ‘ಅವರು ಮೊದಲು ಸಾರ್ವಜನಿಕ ಹುದ್ದೆಯಿಂದ ಕೆಳಗಿಳಿಯಲಿ. ತೆರಿಗೆದಾರರ ಹಣ ಪೋಲಾಗುವುದು ಬೇಡ. ಖಾಸಗಿ ವ್ಯಕ್ತಿಯಾಗಿ ಬಾಯಿಗೆ ಬಂದದ್ದು ಹೇಳಿಕೊಂಡಿರಲಿ’ ಎನ್ನುವುದು ಮತ್ತೊಬ್ಬ ಟ್ವೀಟಿಗರ ಅಭಿಪ್ರಾಯ. ‘ಹಾಸ್ಯಾಸ್ಪದ..! ಖಟ್ಜು ಅವರೇ ವಿವೇಕ ಪ್ರದರ್ಶಿಸಿ… ನೀವೂ ಸ್ಫೋಟದ ಸಂತ್ರಸ್ತರಾಗಿದ್ದರೆ ಪ್ರತಿಕ್ರಿಯೆ ಹೀಗಿರುತ್ತಿತ್ತೆ?’ ಎಂಬುದು ಮತ್ತೊಬ್ಬರ ಕಿಡಿನುಡಿ. ಖಟ್ಜು ಮಾತ್ರ ಇಂತಹ ಟೀಕೆಗಳಿಗೆ ಕ್ಯಾರೇ ಎಂದಿಲ್ಲ. ‘ನನ್ನ ನಡೆ ನುಡಿ ಜನರ ಟೀಕೆಗೆ ಕಾರಣವಾಗಬಲ್ಲದು ಎಂಬುದು ಗೊತ್ತಿದ್ದೂ ನನಗನ್ನಿಸಿದ್ದನ್ನು ನಿರ್ಬಿಢೆಯಿಂದ ಹೇಳಿದ್ದೇನೆ. ನನ್ನ ಅಂತಃಸಾಕ್ಷಿಗೆ ಸರಿಯೆನಿಸಿದ್ದನ್ನೇ ಹೇಳುತ್ತೇನೆ’ ಎಂದು ಪ್ರತಿಕ್ರಿಯಿಸಿ ಜನರ ಮುಂದೆ ತಮ್ಮ ಬೌದ್ಧಿಕ ದಿವಾಳಿತನವನ್ನು ಇನ್ನಷ್ಟು ಪ್ರದರ್ಶಿಸಿದ್ದಾರೆ.

ನ್ಯಾಯಮೂರ್ತಿಯಾದವರೊಬ್ಬರೇ ಹೀಗೆ ಬಾಲಿಶವಾಗಿ ಮಾತನಾಡಿರುವಾಗ ಇನ್ನು ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್‌, ಪ್ರಸಾರ ಖಾತೆ ಸಚಿವ ಮನೀಶ್‌ ತಿವಾರಿ ಸಂಜಯ್‌ ದತ್‌ ಪರವಾಗಿ ಮಾತನಾಡಿರುವುದರಲ್ಲಿ ಆಶ್ಚರ್ಯವೆನಿಸುವುದಿಲ್ಲ. ಇವರಿಗೆಲ್ಲ ದೇಶದ ಪರಮೋಚ್ಚ ನ್ಯಾಯಾಲಯ ಸುಪ್ರೀಂಕೋರ್ಟ್‌ ತೀರ್ಪಿಗೆ ಗೌರವ ಸಲ್ಲಿಸುವುದು ತಮ್ಮ ಕರ್ತವ್ಯಗಳಲ್ಲೊಂದು ಎಂದೆನಿಸದೆ ಇರುವುದು ಅದೆಂತಹ ದುರಂತ! ಕಾನೂನು ಎಲ್ಲರಿಗೂ ಸಮಾನ ಎಂಬುದು ಈ ಮಂದಿಗೆ ಗೊತ್ತಿದ್ದರೂ ಹೀಗೇಕೆ ಎಡಬಿಡಂಗಿಗಳಂತೆ ವರ್ತಿಸುತ್ತಾರೆ? ಸಂಜಯ್‌ ದತ್‌ ಹಿಂದಿ ಸಿನಿಮಾ ಲೋಕದ ದೊಡ್ಡ ಹೀರೋ ಆಗಿರಬಹುದು. ಆದರೆ ಆತ ಯಾರ್ಯಾರ ಜೊತೆ ಸಂಬಂಧವಿರಿಸಿಕೊಂಡಿದ್ದ , ಬದುಕಿನಲ್ಲಿ ಏನೆಲ್ಲ ಬಾನಗಡಿಗಳನ್ನು ನಡೆಸಿದ ಎಂಬುದನ್ನು ಈ ಮಹನಿಯರೇಕೆ ಮರೆತಿದ್ದಾರೆ? ಛೋಟಾ ಶಕೀಲ್‌ ಎಂಬ ಪರಮ ಪಾತಕಿಯನ್ನು ಸಂಜಯ್‌ದತ್‌ ಅಣ್ಣ ಎಂದು ಕರೆದದ್ದಲ್ಲದೆ ತನಗೊಂದು ಚಿಪ್‌ ಕೊಡಿಸುವಂತೆ ಆತನನ್ನು ಕೇಳಿಕೊಂಡಿದ್ದಿದೆ. ಇದಕ್ಕೆ ಕೋರ್ಟ್‌ ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಛೋಟಾ ಶಕೀಲ್‌ ಸಂಜಯ್‌ ದತ್‌ ಬಗ್ಗೆ ಮಾತನಾಡುವ ಧಾಟಿ ಕೇಳಿಬಿಟ್ಟರೆ ಆತನಿಗೂ ಸಂಜಯ್‌ನಿಗೂ ಅದೆಂತಹ ನೀಚ ಸಂಬಂಧವಿತ್ತೆಂಬುದನ್ನು ಊಹಿಸಿ ಗಾಬರಿಯಾಗುತ್ತದೆ. ಸಂಜಯ್‌ ದತ್‌ ಅಷ್ಟೊಂದು ಒಳ್ಳೆಯವನಾಗಿದ್ದರೆ ಮುಂಬೈ ಸರಣಿ ಸ್ಫೋಟಕ್ಕೆ ಬಳಸಿದ್ದ ಪಿಸ್ತೂಲ್‌ ಹಾಗೂ ಎಕೆ 56 ಬಂದೂಕುಗಳು ಆತನ ನಿವಾಸಕ್ಕೆ ಹೇಗೆ ಬಂದವು? ಅವೇನು ತೆವಳಿಕೊಂಡು ಅಲ್ಲಿಗೆ ಬಂದವೆ? ಯಾರೋ ತಂದಿಟ್ಟರು, ತನಗೆ ಅದರ ಬಗ್ಗೆ ಏನೊಂದೂ ಅರಿವಿಲ್ಲ ಎಂದು ಬಾಯಲ್ಲಿ ಬೆರಳಿಟ್ಟ ಅಮಾಯಕ ಮಗುವಿನಂತೆ ಆತ ಹೇಳಿಬಿಟ್ಟರೆ ಅದನ್ನು ನಂಬಲು ಜನರೇನೂ ಕಿವಿಯಲ್ಲಿ ಹೂವಿಟ್ಟುಕೊಂಡ ಮೂರ್ಖರಲ್ಲ. ಅದೇ ಪಿಸ್ತೂಲು ಹಾಗೂ ರೈಫಲ್‌ಗಳ ಗುಂಡಿನಿಂದ ಮುಂಬೈನ ಸಾವಿರಾರು ಅಮಾಯಕರನ್ನು ಉಗ್ರಗಾಮಿಗಳು ಸಾಯಿಸಲಿಲ್ಲವೆ? ಸತ್ತ ಸಾವಿರಾರು ಅಮಾಯಕರ ಬಗ್ಗೆ ಖಟ್ಜುವಾಗಲಿ, ಸಚಿವ ಅಶ್ವನಿ ಕುಮಾರ್‌, ಮನೀಶ್‌ ತಿವಾರಿ ಅಥವಾ ಸಂಜಯ್‌ಗೆ ಕ್ಷಮೆ ನೀಡಬೇಕೆಂದು ಆಗ್ರಹಿಸುವ ಆತನ ಅಭಿಮಾನಿಗಳಿಗಾಗಲಿ ಒಂದು ತೊಟ್ಟು ಕಣ್ಣೀರು ಕೂಡ ಬರುವುದಿಲ್ಲವೆ? ಅವರ ಸಾವಿಗೆ ಹಾಗಿದ್ದರೆ ಕಿಂಚಿತ್ತೂ ಬೆಲೆಯಿಲ್ಲವೆ? ಅವರ ಪ್ರಾಣ ಅಷ್ಟೊಂದು ಅಗ್ಗವೆ? ಸಂಜಯ್‌ ದತ್‌ ಪ್ರಾಣ ಅಷ್ಷೊಂದು ಅಮೂಲ್ಯವೆ? ಕಾನೂನು ಎಲ್ಲರಿಗೂ ಒಂದೇ ಆದರೂ ಸಂಜಯ್‌ ದತ್‌ಗೆ ಅದು ಅನ್ವಯವಾಗುವುದಿಲ್ಲವೆ? ಸಂಜಯ್‌ ದತ್‌ ವಿರುದ್ಧ ಕೇಳಿಬಂದಿರುವುದು ದೇಶದ್ರೋಹದ ಗಂಭೀರ ಆರೋಪ. ನ್ಯಾಯಾಲಯದಲ್ಲಿ ಸಾಬೀತಾಗಿರುವುದು ಕೂಡ ಅದೇ ಆರೋಪ. ದೇಶದ್ರೋಹ ಯಾರೇ ಎಸಗಲಿ, ಅವರೆಷ್ಟೇ ಸೆಲೆಬ್ರಿಟಿಯಾಗಿರಲಿ ಶಿಕ್ಷೆ ಅನುಭವಿಸಲೇಬೇಕು. ಹೀಗಿರುವಾಗ ಸಂಜಯ್‌ ದತ್‌ ಯಾವ ಲೆಕ್ಕ?

ಸಾಧ್ವಿ ಬಗ್ಗೆ ಏಕಿಲ್ಲ ಕನಿಕರ?

ಇಟಲಿಯ ಕೊಲೆಗಡುಕ ನಾವಿಕರನ್ನು ಬಂಧಿಸದಂತೆ, ಅವರಿಗೆ ಗಲ್ಲು ಶಿಕ್ಷೆಯಾಗದಂತೆ ಆಗ್ರಹಿಸುವ ಕೇಂದ್ರದ ಸಚಿವರಿಗೆ, ಸಂಜಯ್‌ ದತ್‌ಗೆ ಕ್ಷಮಾದಾನ ನೀಡಬೇಕೆಂದು ಅಪ್ಪಣೆ ಕೊಡಿಸುವ ಮಾರ್ಕಂಡೇಯ ಖಟ್ಜು ಅವರಿಗೆ ಕಳೆದ 5 ವರ್ಷಗಳಿಂದ ಆರೋಪಗಳೇ ಸಾಬೀತಾಗದಿದ್ದರೂ ಈಗಲೂ ಜೈಲಿನಲ್ಲಿ ಶಾರೀರಿಕಾಗಿ, ಮಾನಸಿಕವಾಗಿ ಚಿತ್ರಹಿಂಸೆಗೀಡಾಗಿ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿರುವ ಮಾಲೆಗಾಂವ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್‌ ಅವರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಬೇಕೆಂದು ಏಕೆ ಅನಿಸುತ್ತಿಲ್ಲ? ಸಾಧ್ವಿ ಪ್ರಜ್ಞಾಸಿಂಗ್‌ ಅವರ ಬಗ್ಗೆ ಈ ಮಹನೀಯರು ಒಮ್ಮೆಯಾದರೂ ಕನಿಕರದ ಒಂದಾದರೂ ಮಾತು ಆಡಿದ್ದುಂಟೆ? ಸಂಜಯ್‌ ದತ್‌ ಆರೋಪ ಸಾಬೀತಾಗಿ ಸುಪ್ರೀಂಕೋರ್ಟ್‌ನಿಂದ ಶಿಕ್ಷೆ ಕೂಡ ಘೋಷಣೆಯಾಗಿದೆ. ಆದರೆ ಸಾಧ್ವಿ ಪ್ರಜ್ಞಾಸಿಂಗ್‌ ಅವರನ್ನು ನಾನಾ ಬಗೆಯ ವಿಚಾರಣೆಗೊಳಪಡಿಸಿದರೂ ಅವರ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಹೀಗಿದ್ದರೂ ಅವರಿಗೆ ಬಿಡುಗಡೆಯ ಭಾಗ್ಯವಿಲ್ಲ. ಬಹುಶಃ ಬಿಡುಗಡೆಯ ಭಾಗ್ಯವಿರುವುದು ಅವರ ಪಾರ್ಥಿವ ಶರೀರಕ್ಕಿರಬಹುದೇನೊ! ಸಾಧ್ವಿಯಂತಹ, ಸ್ವಾಮಿ ಅಸೀಮಾನಂದರಂತಹ ಆರೋಪ ಸಾಬೀತಾಗದ ಅದೆಷ್ಟೋ ಅಮಾಯಕರು ಜೈಲಿನಲ್ಲೇ ಅನ್ಯಾಯವಾಗಿ ಕೊಳೆಯುತ್ತಿರುವ ಸಂಗತಿ ಈ ಮಹನೀಯರಿಗೆ ಗೊತ್ತಿಲ್ಲವೆ? ಗೊತ್ತಿದ್ದರೂ ಇವರು ಆ ಬಗ್ಗೆ ಬಾಯಿ ಬಿಡುತ್ತಿಲ್ಲವೆಂದರೆ ಇವರದೆಂತಹ ಮಾನವೀಯತೆ? ಮಾನವೀಯತೆ ಪ್ರದರ್ಶನದಲ್ಲೂ ಪಕ್ಷಪಾತ ಧೋರಣೆಯೆ? ಇಂತಹ ಮಹನೀಯರಿಗೆ ಹೇಗೆ ಪಾಠ ಕಲಿಸಬೇಕು ಎಂದು ಜನರೇ ತೀರ್ಮಾನಿಸಬೇಕು.

 

Leave a Reply

Your email address will not be published.

This site uses Akismet to reduce spam. Learn how your comment data is processed.