11 ಆಗಸ್ಟ್ 2019, ಬೆಂಗಳೂರು: ಮಹಾನಗರದ, ಅಕ್ಷಯನಗರದ ವಾದಿರಾಜ ಕಲಾ ಭವನದಲ್ಲಿ ಭಾನುವಾರದಂದು “ಮಂಥನ” ಚಿಂತಕರ ಚಾವಡಿಯ ಮೊದಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ನವ ಭಾರತ’ದ (New India) ವಿಷಯದ ಭಾಷಣಕಾರರಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿನಯ್ ಬೈಜಲ್ ರವರು ವಹಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇಗೂರು ನಗರ ಸಂಘಚಾಲಕರಾಗಿರುವ ಸೀತಾರಾಮ್ ಭಟ್ ರವರೂ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೇಜಸ್ವಿ ಸೂರ್ಯರವರು ನ್ಯೂ ಇಂಡಿಯಾದ ಕಲ್ಪನೆಯನ್ನು ಹಂಚಿಕೊಳ್ಳುತ್ತಾ ಜಮ್ಮು ಕಾಶ್ಮೀರದಲ್ಲಿ ವಿಧಿ 370 ತೆಗೆದುಹಾಕುವ ನಿರ್ಧಾರ ನವ ಭಾರತ ಕಲ್ಪನೆಯ ಇತ್ತೀಚಿನ ಉದಾಹರಣೆ. ಕಾಶ್ಮೀರ ಭಾರತದ ಅಂಗವಾಗಿರುವುದು ಕೇವಲ ಸಂವಿಧಾನದ ಒಂದು ಅನುಚ್ಛೇದದಿಂದಲ್ಲ. ಆದಿಶಂಕರರು ಸ್ಥಾಪಿಸಿದ ಶಾರದಾ ಪೀಠ ಹಾಗೂ ನೂರಾರು ವರ್ಷಗಳಿಂದ ನಾವು ಸ್ತುತಿಸುವ ‘ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನೀ’ ಎಂಬ ಸ್ತೋತ್ರದ ಕಾಲದಿಂದಲೂ ಕಾಶ್ಮೀರ ಭಾರತದ ಭಾಗವಾಗಿತ್ತು. ಈ ಕಲ್ಪನೆಯನ್ನು ಶ್ಯಾಮ್ ಪ್ರಸಾದ್ ಮುಖರ್ಜೀ ಹಾಗೂ ದೀನ್ ದಯಾಳ್ ಉಪಾಧ್ಯಾಯರವರು ಜೀವಂತವಾಗಿಟ್ಟಿದ್ದರು. ವಾಜಪೇಯಿ, ಆಡ್ವಾನಿಯವರುಗಳು ಮುಂದುವರಿಸಿದರು. ಇಂತಹ ದಿಗ್ಗಜರ ಹಾಗೂ ಅಸಂಖ್ಯಾತ ಕಾರ್ಯಕರ್ತರ ತ್ಯಾಗ ತಪಸ್ಸು ಈಗಿನ ನಾಯಕತ್ವಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳುವ ಶಕ್ತಿ ನೀಡಿದೆ. ಹೀಗಾಗಿ New India ಎನ್ನುವ ಕಲ್ಪನೆ ಪೂರ್ವಜರ ತಪಸ್ಸು, ಹಿರಿಯರ ಹೋರಾಟ ಹಾಗೂ ನವಯುವಕರ ಉತ್ಸಾಹದ ಸಮ್ಮಿಳನ ಎಂದು ವ್ಯಾಖ್ಯಾನಿಸಿದರು.
ಮುಂದುವರೆದು ಮಾತನಾಡುತ್ತಾ ತೇಜಸ್ವಿ ಸೂರ್ಯರವರು
ಬರೀ ಹಗರಣಗಳೇ ನಡೆಯುತಿದ್ದ ಕಾಲದಲ್ಲಿ ಮೊದಲ ಬಾರಿಗೆ ಜನರು ಸರ್ಕಾರದ ಬೊಕ್ಕಸಕ್ಕೆ ಆಗುವ ಲಾಭದ ಅಥವಾ ಉಳಿತಾಯದ ಬಗ್ಗೆ ಮಾತನಾಡುವಂತಾಯಿತು. direct benefit transfer ಸ್ಕೀಮ್ ನ ಮೂಲಕ ಪ್ರತೀ ವರ್ಷ ಭಾರತದ ಬೊಕ್ಕಸಕ್ಕೆ ಆಗುತ್ತಿದ್ದ 1 ಲಕ್ಷ ಕೋಟಿ ನಷ್ಟವನ್ನು ತಡೆಗಟ್ಟಲಾಯಿತು ಎಂದರು. ಹೀಗೆ ಜನಧನ, ಉಜ್ವಲ, ಮುದ್ರಾ ಇಂತಹ ಹಲವಾರು ಯೋಜನೆಗಳು ಒಂದು ಸರಕಾರ ಜನಸ್ನೇಹಿ ಪಾರದರ್ಶಕ ಆಡಳಿತ ನೀಡಬಹುದೆಂಬ ನಂಬಿಕೆ ಜನಮಾನಸದಲ್ಲಿ ಮೂಡಿಸಿದೆ ಎಂದು ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ಹೇಗೆ ವಿದೇಶಿ ನೀತಿಯನ್ನು ಸುಧಾರಣೆ ಮಾಡಲಾಯಿತು ಎನ್ನುವದರ ಬಗ್ಗೆ ಕೂಡ ಬೆಳಕು ಚೆಲ್ಲಿದರು. ಇತರ ರಾಷ್ಟ್ರಗಳು ಭಾರತವನ್ನು ನೋಡವ ರೀತಿಯಷ್ಟೇ ಅಲ್ಲದೇ ಭಾರತೀಯರಾದ ನಾವು ನಮ್ಮನ್ನು ನೋಡುವ ರೀತಿಯಲ್ಲಿ ಕೂಡ ಬದಲಾಗಿದೆ. ಭಯೋತ್ಪಾದನೆ ವಿರುದ್ಧ ಭಾರತ ದಿಟ್ಟ ಕ್ರಮ ಕೈಗೊಂಡಾಗ ಇಡೀ ವಿಶ್ವ ಸಮೂಹ ಭಾರತದ ಪರವಾಗಿ ನಿಂತಿದ್ದು New India ದ ಶಕ್ತಿಗೆ ಕೊಟ್ಟ ಗೌರವ.
ಸರ್ಕಾರದ ಪ್ರಸ್ತುತ ಕಾರ್ಯಕ್ಷಮತೆಯ ಬಗ್ಗೆಯ ಎಲ್ಲ ವಿವರಗಳು ಹಾಗೂ ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿಯನ್ನು gov.in ವೆಬ್ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದಾಗಿದೆ. ಆಡಳಿತಾತ್ಮಕ ಪಾರದರ್ಶಕತೆ ಹೊಸ ಭಾರತದ ಗುಣಲಕ್ಷಣ ಎಂದರು.
ಹೊಸ ಭಾರತಕ್ಕೆ ಸಂಬಧಿಸಿದ ಎಲ್ಲಾ ಮಾಹಿತಿಗಳು “ನೀತಿ ಆಯೋಗ್ ನ್ಯೂ ಇಂಡಿಯಾ @ ೭೫” ನಲ್ಲಿ ಲಭ್ಯವಿದ್ದು ಸಾರ್ವಜನಿಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳಬೇಕಾಗಿ ವಿನಂತಿಸಿದರು.
ಇವೆಲ್ಲ ಸಾಧ್ಯವಾಗಿದ್ದು ನರೇಂದ್ರ ಮೋದಿಯವರ ನಾಯಕತ್ವದಿಂದ. ಆ ನಾಯಕತ್ವದ ಶಕ್ತಿಯ ಮೂಲ ಹೊಸ ಭಾರತದ ಆಸೆ ಆಕಾಂಕ್ಷೆಗಳು ಹಾಗೂ ರಾಷ್ಟ್ರ ಸರ್ವ ಪ್ರಥಮ ಎಂಬ ಭಕ್ತಿ.
ಈ ಎಲ್ಲಾ ಕಾರಣದಿಂದಾಗಿಯೇ ೨೦೧೯ರಲ್ಲಿ ೨೦೧೪ ಕ್ಕಿಂತ ದೊಡ್ಡ ಜನಾಶೀರ್ವಾದ ಸಿಕ್ಕಿತು. ಈ ಆಶೀರ್ವಾದ ದೊಡ್ಡ ಕೆಲಸ ಮಾಡುವುದಕ್ಕಾಗಿ ದೊರೆತದ್ದು ಮತ್ತು ಆ ಕೆಲಸಗಳನ್ನು ಮಾಡುವುದು ನಿಶ್ಚಿತ ಎಂದರು.
ಕೊನೆಯಲ್ಲಿ ನೂರು ವರ್ಷದ ನಂತರವೂ ಹೊಸ ಭಾರತದ ಹೊಸ ಕಲ್ಪನೆಯಿರುತ್ತದೆ. ಆ ಹೊಸ ಕಲ್ಪನೆಯ ಮೂಲ ಕೂಡ ರಾಷ್ಟ್ರೀಯತೆಯ ಸಿದ್ಧಾಂತವೇ ಆಗಿರುತ್ತದೆ ಎಂದರು.
ನಂತರ ಮಾತನಾಡಿದ ವಿನಯ್ ಬೈಜಲ್ ರವರು ಸಂಕ್ಷಿಪ್ತವಾಗಿ ಆರೋಗ್ಯಕರವಾದ ಆಹಾರ ವಿಧಾನಗಳ ಬಗ್ಗೆ ಕೆಲವು ಮಾತುಗಳನ್ನು ಆಡಿದರು. ದೇಸಿ ಆಹಾರ ಪದ್ಧತಿ, ದೇಸಿ ಪ್ರವಾಸ ಅಂತಹುಗಳಿಂದ ದೇಸಿ ಆರ್ಥಿಕ ಬೆಳವಣಿಗೆಯಲ್ಲಿ ನಾವು ಭಾಗಿಯಾಗಬೇಕೆಂದರು.
ಕೊನೆಯಲ್ಲಿ ತೇಜಸ್ವಿ ಸೂರ್ಯರವರು ಸಭಿಕರ ಕೆಲವು ಪ್ರಶ್ನೆಗಳಿಗೆ ಉತ್ತರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ನಿಧನರಾದ ದೇಶ ಕಂಡ ಶ್ರೇಷ್ಠ ನಾಯಕಿ ಸುಷ್ಮಾ ಸ್ವರಾಜರಿಗೆ ಹಾಗೂ ಪ್ರಕೃತಿ ವಿಕೋಪದಲ್ಲಿ ನಿಧನರಾದ ಸಹದೇಶವಾಸಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಸಂತ್ರಸ್ತರು ಶೀಘ್ರ ಸಹಜಜೀವನಕ್ಕೆ ಮರಳಲೆಂದು ಪ್ರಾರ್ಥಿಸಲಾಯಿತು. ನಂತರ ವೇದಿಕೆಯಲ್ಲಿನ ಅತಿಥಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಮತ್ತು ಕುಮಾರಿ ಇಂಚರ ಅವರಿಂದ ದೇಶಭಕ್ತಿ ಗೀತೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಸರಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಜನ ಸೇರಿದ್ದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.