ಮೈಸೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ನಗರದ ಯುಗಾದಿ ಉತ್ಸವವು ಮಾರ್ಚ್‌ ೨೨ರ ಯುಗಾದಿಯಂದು ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತದ ಪ್ರಚಾರ ಪ್ರಮುಖರಾದ ಶ್ರೀ ಇ.ಎಸ್.ಪ್ರದೀಪ್‌ ಅವರು ಉತ್ಸವದಲ್ಲಿ ನೆರೆದಿದ್ದ ಸ್ವಯಂಸೇವಕರು, ಸಂಘದ ಹಿತೈಷಿಗಳು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.


ಅವರು ಮಾತನಾಡುತ್ತಾ, “ಯುಗಾದಿ ಉತ್ಸವ ಮತ್ತೆ ಬಂದಿದೆ. ಉತ್ಸವ ಎಂದರೆ ಹೆಚ್ಚಿಸುವುದು ಎಂದರ್ಥ. ನಮ್ಮ ಕೌಟುಂಬಿಕ ಜೀವನವನ್ನು, ಸಾಮಾಜಿಕ ಜೀವನವನ್ನು ಎತ್ತರಿಸಿಕೊಳ್ಳುವ ಸುಸಮಯ ಈ ರೀತಿಯ ಉತ್ಸವಗಳು. ಅದರಲ್ಲೂ ಉತ್ಸವಪ್ರಿಯವಾದ ಭಾರತೀಯ ಸಮಾಜದಲ್ಲಿ ಈ ಬಗೆಯಲ್ಲಿ ಉತ್ಸವಗಳ ಮೂಲಕ ಸಮಾಜ, ವ್ಯಕ್ತಿ ತನ್ನನ್ನು ಎತ್ತರಕ್ಕೇರಿಸಿಕೊಳ್ಳುವ ಅವಕಾಶ ಹೆಚ್ಚು.ನಮ್ಮ ವಿಚಾರವನ್ನು, ಚಿಂತನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ಸಹಕಾರಿ” ಎಂದರು.


ಮುಂದುವರೆದು ಮಾತನಾಡಿದ ಅವರು, “ಪ್ರಕೃತಿಯಲ್ಲಿ ಈ ಮಾಸದಲ್ಲಿ ಬದಲಾವಣೆ ಎನ್ನುವುದು ಅನುಭವಕ್ಕೆ ಬರುತ್ತಿದೆ. ಅದನ್ನು ಕೆಲವರು ಸಾಹಿತ್ಯದ ಶೈಲಿಯಲ್ಲಿ ಹೇಳುತ್ತಾರೆ, ಕೆಲವರು ವರದಿಗಾರಿಕೆಯ ರೀತಿಯಲ್ಲಿಯೂ ಹೇಳುತ್ತಾರೆ. ಕೆಲವರು ವಿಜ್ಞಾನದ ಆಧಾರದ ಮೇಲೆ ನೋಡುತ್ತಾರೆ, ಕೆಲವರು ಅದನ್ನು ತತ್ತ್ವಜ್ಞಾನದ ದೃಷ್ಟಿಯಿಂದ ಕಾಣುತ್ತಾರೆ.ಹೀಗೆ ಒಂದು ವಿದ್ಯಮಾನವನ್ನು ಹಲವು ಆಯಾಮದಿಂದ ರೀತಿಯಿಂದ ನೋಡುವ ಪರಿಪಾಠವಿದೆ. ಹೀಗೆ ಜಗತ್ತಿನ ಆಗುಹೋಗುಗಳನ್ನು ಹಲವಾರು ಆಯಾಮಗಳ, ಹಲವು ಪದರಗಳಲ್ಲಿ ತೆರೆದು ನೋಡಬಹುದು. ಭಾರತೀಯ ದರ್ಶನಶಾಸ್ತ್ರಗಳಲ್ಲೆದರಲ್ಲೂ ಅತ್ಯಂತ ಚರ್ಚಿತವಾದ ವಿಷಯವೆಂದರೆ, ಅದು “ಜಗತ್ತಿನ ಸೃಷ್ಟಿಗೆ ಕಾರಣ” ಅದರಿಂದ ಮೊದಲ್ಗೊಂಡು ಎಲ್ಲಾ ವಿಚಾರಗಳನ್ನೂ ಹಿಂದೂ ಸಮಾಜ ವಿಷದವಾಗಿ ಚಿಂತನೆ ನಡೆಸಿ ಅದನ್ನು ಅಳವಡಿಸಿಕೊಳ್ಳುವ, ಆಚರಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ ” ಎಂದರು.


“ಸಾಮಾಜಿಕ ನೆಲೆಯಿಂದ ಯುಗಾದಿಯನ್ನು ಕಂಡಾಗ, ಭಾರತೀಯರ ಮನಸ್ಸಿನಲ್ಲಿ ಅರಳಿರುವ ಆಚರಣೆಯಿದು. ಹಿಂದೂ ಸಮಾಜ ಇದನ್ನು ಆಚರಿಸುತ್ತಾ ಬಂದಿದೆ. ಆದರೆ ಇದು ಕೇವಲ ಹಿಂದೂ ಸಮಾಜಕ್ಕೇ ಸೀಮಿತವಾಗಬೇಕೆಂಬ ಯಾವ ಮಿತಿಯೂ ನಮ್ಮಲ್ಲಿ ಇಲ್ಲ. ಆದರೆ ಭಾರತ ಅಥವಾ ಹಿಂದೂಗಳು ಸೃಷ್ಟಿಯಲ್ಲಿ ನಡೆದ ಬದಲಾವಣೆಗೆ ಪ್ರತಿಕ್ರಿಯಿಸಿದ ರೀತಿ ಏನು? ಈ ಪ್ರಕ್ರಿಯೆಯನ್ನು ಕೇವಲ ಗಮನಿಸಿ ಸುಮ್ಮನಾಗದೆ ಸಂಭ್ರಮಿಸಿದ್ದು ಹಿಂದೂ ಸಮಾಜ. ಜಗತ್ತಿನ ಯಾವುದೇ ಸಮಾಜ ಹೀಗೆ ಪ್ರಕೃತಿಯನ್ನು ಸಂಭ್ರಮಿಸುವುದನ್ನು ಭಾರತದಿಂದ ಕಲಿಯಬಹುದು. ಸಾಂಸ್ಕೃತಿಕವಾಗಿ ಇದನ್ನು ಹಿಂದೂ ಸಮಾಜ ಉತ್ಸವದಂತೆ ಆಚರಿಸುವ ಕ್ರಮವನ್ನು ಅನುಸರಿಸಿತು.ಇದು ಸೃಷ್ಟಿಯ ಜೊತೆಗೆ ಸಮನ್ವಯಗೊಂಡಿರುವ ವಿಧಾನ ಇದೊಂದು ಜೀವನ ವಿಧಾನ. ಇದೇ ಹಿಂದುತ್ವ. ಇನ್ನು ಸಮಕಾಲೀನ ಚರ್ಚೆಯ ಕಡೆಗೆ ನೋಡಿದರೆ ಇತ್ತೀಚೆಗೆ ಇನ್ಕ್ಲೂಸಿವ್‌ನೆಸ್‌ ಅಂದರೆ ಒಳಗೊಳ್ಳುವಿಕೆಯ ಕುರಿತು ಮಾತು ಹೊರಳುತ್ತಿದೆ. ಆದರೆ ನಮ್ಮ ಸಮಾಜ ಎಕ್ಸ್‌ಕ್ಲೂಸಿವ್‌ ಆಗಿದ್ದು ಯಾವಾಗ? ಅಂದರೆ ನಮ್ಮ ಚಿಂತನೆಗಳು ಸಮಗ್ರವಾಗಿದೆಯೆ? ಪಶ್ಚಿಮದ ಚಿಂತನೆಗಳು ನಮ್ಮನ್ನು ಪ್ರಭಾವಿಸಿದೆಯೇ? ಈ ರೀತಿ ಬೈನರಿಯ ಭಾಷೆಯಲ್ಲಿ ಮಾತನಾಡುವ ಪರಿಪಾಠ ಆರಂಭವಾಗಿದ್ದು, ವೈಚಾರಿಕ ಸಂಘರ್ಷ ನಡೆಯುತ್ತಿದೆ.”


ಸಮಕಾಲೀನ ಸಮಾಜದ ಕುರಿತು ಮಾತನಾಡುತ್ತಾ “ಇದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಇವತ್ತು ಪಶ್ಚಿಮವನ್ನು ಎದುರಿಸುತ್ತಾ ನಾವು ಅವರಾಗದೆ ಬೇರಿನಲ್ಲಿ ಗಟ್ಟಿಯಾಗುತ್ತಾ, ಸಮಾಜದ ವ್ಯಕ್ತಿತ್ವದಲ್ಲಿ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕಿದೆ. ನಾವು ಯಾವುದೇ ಬಾಹ್ಯ ಪ್ರಭಾವಕ್ಕೆ ಒಳಗಾಗದ ಯುಗಾದಿಯ ಉತ್ಸರ್ಗದ ಸಂದರ್ಭದಲ್ಲಿ ಅವಲೋಕನ ಮಾಡಿಕೊಳ್ಳಬೇಕಿದೆ. ಸಾಂಸ್ಕೃತಿಕ ಆಕ್ರಮಣದ ಈ ಕಾಲದಲ್ಲಿ ಪಶ್ಚಿಮದ ಎಲ್ಲಾ ಬಾಹ್ಯ ಪ್ರಭಾವಗಳನ್ನು ಮನೆಯಿಂದ ಮನಸ್ಸಿನಿಂದ ತೆಗೆದು ಹಾಕುವುದು ಹೇಗೆ ಎನ್ನುವುದರ ಕುರಿತು ಚಿಂತನೆ ನಡೆಯಬೇಕಿದೆ.ಅಷ್ಟು ಮಾತ್ರವೇ ಅಲ್ಲದೆ ಚಿಂತನೆಯ ಫಲ ಯಾವುದು ಎಂದೂ ಪ್ರಶ್ನಿಸಿಕೊಳ್ಳಬೇಕಿದೆ.”ಎಂದರು.


ಅದೇ ನೆಲೆಗಟ್ಟಿನಲ್ಲಿ ಸಂಘದ ಹುಟ್ಟು ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಾ ಬೆಳಕು ಚೆಲ್ಲಿದ ಅವರು,”ಡಾಕ್ಟರ್‌ಜೀಯವರ ಕಾಲದಲ್ಲಿ ನಡೆದ ಅವರ ಚಿಂತನೆಯ ಫಲವೇ ಆರ್‌ಎಸ್‌ಎಸ್. ಆಗಿನ ಕಾಲದ ಆಖ್ಯಾಯಿಕೆಯನ್ನು ಪ್ರಶ್ನಿಸುತ್ತಾ ಮೂಲಭೂತ ಸಂಗತಿಗಳನ್ನು ಜಿಜ್ಞಾಸೆಯಿಂದ ನೋಡಿದ ಪರಿಣಾಮವಾಗಿ ಸಮಸ್ಯೆಯನ್ನು ಮೂಲದಿಂದ ಎದುರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾದರು. ಅಲ್ಲದೆ ಆ ಚಿಂತನೆಗೆ ಒಂದು ಸಾದೃಶ್ಯವಾದ ರೂಪು ನೀಡಿ ಕೆಲಸಗಳನ್ನು ಅತ್ಯಂತ ಆಳವಾದ ಒಳನೋಟಗಳೊಂದಿಗೆ ಬೆಳೆಸಿದರು. ಅಂತಹ ಹೊಳಹು, ಚಿಂತನೆಗಳಿಂದ ಇಷ್ಟು ದೊಡ್ಡ ಸಂಘಟನೆ ಕಟ್ಟಲು ಸಾಧ್ಯವಾಯಿತು. ಇಂದು ಹೊಸ ವಿಚಾರಗಳೇ ಜಗತ್ತನ್ನು ಆಳಲು ಸಾಧ್ಯವಿದೆ” ಎಂದರು.


ಸಭೆಯಲ್ಲಿ ಶ್ರೀ ಸದಾಶಿವೇ ಗೌಡರು ಅಧ್ಯಕ್ಷತೆ ವಹಿಸಿದ್ದರು, ವಿಭಾಗದ ಸಂಘಚಾಲಕರಾದ ಡಾ.ಬಾಪಟ್‌ ಅವರು, ಮಹಾನಗರದ ಸಂಘಚಾಲಕರಾದ ವಾಸುದೇವ್‌ ಭಟ್‌ ಅವರು ಉಪಸ್ಥಿತರಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.