ತಂದೆಯವರಾದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಹಾಗೂ ತಾಯಿಯವರಾದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನರವರ ರತ್ನಗರ್ಭದಲ್ಲಿ ಅಕ್ಕರೆಯ ಸುಪುತ್ರರಾಗಿ ಜೂನ್ 4 1884ರಲ್ಲಿ , ನಿಜಅರ್ಥದಲ್ಲಿ ಜನಾನುರಾಗಿ ಎನಿಸಿದ್ದ ಧೀಮಂತ ಮಹಾರಾಜರ ಜನನವಾಯಿತು. ಅವರೇ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್.

ಬಾಲಕ ಕೃಷ್ಣರಾಜ ಒಡೆಯರ್ ರವರು ರಾಜ್ಯದ ಹೊಣೆ ಹೊತ್ತಾಗ ಕೇವಲ 10 ವರ್ಷಗಳು. ವಿಶ್ವವೇ ಕಂಡು ಬೆರಗಾಗುವ ಪಟ್ಟಾಭಿಷೇಕ ಮಹೋತ್ಸವ ಅದಾಗಿತ್ತು.1894ರಲ್ಲಿ ಇವರಿಗೆ 10 ವರ್ಷವಿದ್ದಾಗಲೇ ದುರದೃಷ್ಟವಶಾತ್ ಅವರಿಗೆ ಪಿತೃವಿಯೋಗ ಕಾದಿತ್ತು. ಮೈಸೂರು ರಾಜಮನೆತನದ 24ನೇ ರಾಜರಾದ ಇವರು ಆಳ್ವಿಕೆ ನಡೆಸಿದ್ದು 1904ರಿಂದ 1940. ಕೃಷ್ಣರಾಜ ಒಡೆಯರವರಿಗೆ 1894ರಲ್ಲಿ ಪಟ್ಟಾಭಿಷೇಕವಾದರೂ 10 ವರ್ಷವಾದ ಬಾಲಕರಾಗಿದ್ದರಿಂದ ವಯಸ್ಕನಾಗುವವರೆಗೂ ಅವರ ತಾಯಿಯಾದ ಮಾತೃಶ್ರೀ ಮಹಾರಾಣಿ ವಾಣಿವಿಲಾಸ ಸನ್ನಿಧಾನರವರೇ ಆಡಳಿತ ನಿರ್ವಹಣ ಮಾಡಿ ರಾಜಕುಮಾರರ ಸರ್ವಾಂಗೀಣ ಬೆಳವಣಿಗೆಗೂ ಹಾಗು ಸಮರ್ಥ ಆಡಳಿತಕ್ಕೂ ಹೆಚ್ಚಿನ ಒತ್ತುಕೊಟ್ಟು ಧೀರಮಾತೆ ಎನಿಸಿದರು.


ತದನಂತರ 38 ವರ್ಷಗಳ ಕಾಲ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ಅಂದಿನ ಮೈಸೂರು ಆಳ್ವಿಕೆ ರಾಜ್ಯದ ಇತಿಹಾಸದಲ್ಲಿ ದೊಡ್ಡ ಹೆಜ್ಜೆ ಗುರುತನ್ನು ಮಾಡಿದ್ದು ವೈಭೋವೋಪೇತ ಕಾಲವೆಂದು ಎನಿಸಿದ್ದು ಎಲ್ಲವೂ ಅಚ್ಚರಿಯೇ ಸರಿ.

ಜನಾನುರಾಗಿಪ್ರಜಾಪಾಲಕರೆಂದು ಖ್ಯಾತನಾಮರಾದ ನಾಲ್ವಡಿಯವರ ಸಾಧನೆಗಳು ಕಣ್ಣಿಗೆ ಕಟ್ಟುವ ಅಜರಾಮರ ಮಜಲುಗಳು. ಪ್ರಜಾಪ್ರತಿನಿಧಿಗಳ ಸಭೆಯನ್ನು ಇವರ ಕಾಲದಲ್ಲಿ ಜನಪ್ರತಿನಿಧಿಗಳ ಸಭೆಯನ್ನಾಗಿ ಪರಿವರ್ತಿಸಲಾಯಿತು. ಪ್ರಜೆಗಳ ಸಮಸ್ಯೆಯನ್ನು ಆಲಿಸಬೇಕು ಎನ್ನುವ ಏಕೋದ್ದೇಶದಿಂದ 1907ರಲ್ಲಿ ನ್ಯಾಯವಿಧೇಯಕ ಸಭೆಯನ್ನು ಸ್ಥಾಪಿಸಿದರು.
ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತುಕೊಡುತ್ತಿದ್ದ ಮಹಾರಾಜರು 1927ರಲ್ಲಿ ಮಿಲ್ಲರ್ ಆಯೋಗದ ಶಿಫಾರಸು ಮೇರೆಗೆ ಬ್ರಾಹ್ಮಣೇತರರಿಗೆ ಶೇಕಡಾ 75 ರಷ್ಟು ಮೀಸಲಾತಿ ತಂದರು. ಮೀಸಲಾತಿಯ ಶಕೆ ಆರಂಭವಾದದ್ದೇ ಇಲ್ಲಿಂದ ಎಂದು ಹೇಳಬಹುದು . ಇವರ ಅಪ್ರತಿಮ ಸಾಮಾಜಿಕ ಕಳಕಳಿಗೆ ಅದೆಷ್ಟು ಉದಾಹರಣೆಗಳಿವೆ ಎಂದರೆ ಶಿಕ್ಷಿತ ಸಮಾಜ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ 1911ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಪ್ರಾರಂಭಿಸಲು ಕಾರಣೀಭೂತರಾದರು.

1916ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಖಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯ್ದೆ ಯನ್ನು ಜಾರಿಗೆ ತಂದಿದ್ದು ಈಗಿನ ರಾಜಕಾರಣಿಗಳಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು. ಇದಷ್ಟೆ ಅಲ್ಲ 7 ಸಾವಿರಕ್ಕೂ ಮಿಕ್ಕ ವಯಸ್ಕರ ಶಿಕ್ಷಣ ಶಾಲೆಗಳನ್ನು ತೆರೆದ ಶ್ರೇಯ ಮಾಹಾರಾಜರದ್ದೇ.


1902ರ ಆಗಸ್ಟ್ 8ರಂದು ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡ ಮೇಲೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ರಾಜಮನೆತನದ ಆಳ್ವಿಕೆಯಿಂದ ಆಚೆಗೂ ಸಾಮಾನ್ಯ ಜನರ ಸರ್ವತೋಮುಖ ಏಳಿಗೆಗಾಗಿ ಅನುದಿನ ಶ್ರಮಿಸಿದ್ದರ ಫಲವೇ ಅವರ ಕಾಲದಲ್ಲಿ ಇಡೀ ಏಷ್ಯಾ ಖಂಡದಲ್ಲೇ ಮೈಸೂರು ರಾಜ್ಯವನ್ನು “ಮಾದರಿ ಸಂಸ್ಥಾನ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು,ಗ್ರಾಮನೈರ್ಮಲ್ಯ, ವಿದ್ಯಾಭ್ಯಾಸ, ಪ್ರಯಾಣ ಸೌಲಭ್ಯ, ಹೊಸ ರೈಲು ಮಾರ್ಗಗಳನ್ನು ಹಳ್ಳಿಗಳಿಗೆ ತಂದಿದ್ದು, ವೈದ್ಯಕೀಯ ಸೌಲಭ್ಯಗಳು, ಅಬ್ಬಬ್ಬಾ ಇವರ ಚಿಂತನೆಗಳು ಸಮಾಜದ ಅಮೂಲಾಗ್ರ ಬೆಳವಣಿಗೆಯತ್ತಲೇ ಸಾಗುತ್ತಿತ್ತು.


1911ರಲ್ಲಿ ಪ್ರಾರಂಭವಾದ ಕೃಷ್ಣರಾಜಸಾಗರ (ಕನ್ನಂಬಾಡಿ ಕಟ್ಟೆ) ಜಲಾಶಯ ಭಾರತದ ಮೊಟ್ಟಮೊದಲ ಬೃಹತ್ ಜಲಾಶಯ ಯೋಜನೆಯಾಗಿತ್ತು. 1900ರ ಹೊತ್ತಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಕೇಂದವನ್ನು ಪ್ರಾರಂಭಿಸಿದ್ದು ಆ ಕಾಲದಲ್ಲಿಯೇ. ಅಪ್ರತಿಮ ಸಾಧನೆಯಾಗಿತ್ತು. 1905ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ನಾನಾ ಭಾಗಗಳಲ್ಲಿ 250ಕ್ಕೂ ಹೆಚ್ಚು ಆಸ್ಪತ್ರೆಗಳು ತೆರೆದುಕೊಂಡವು. ಮೈಸೂರಿನಲ್ಲಿ ಕ್ಷಯರೋಗ ಆಸ್ಪತ್ರೆಗೆ ಹೆಚ್ಚಿನ ಸವಲತ್ತು ಒದಗಿಸಲಾಯಿತು.

ಖಾಸಗಿ ಸಹಭಾಗಿತ್ವದಿಂದ ಮೈಸೂರು ಬ್ಯಾಂಕ್ ಪ್ರಾರಂಭಗೊಂಡಿತು. ಈಗಲೂ ಬಳಕೆಗೆ ಚಂದವೇ ಇರುವ ಉತ್ತಮ ಗುಣಮಟ್ಟದ ಕಟ್ಟಡಗಳು, ರಸ್ತೆಗಳೂ, ವಿದ್ಯುತ್ ದೀಪದ ಘಟಕಗಳು, ಉದ್ಯಾನವನಗಳೂ, ಜಲಕಾರಂಜಿಗಳು, ವಿಹಾರಧಾಮಗಳು, ವಿದ್ಯಾರ್ಥಿನಿಲಯಗಳು, ಶುಲ್ಕವನ್ನು ವಿಧಿಸದ ಅನೇಕ ಅನೇಕ ಆಸ್ಪತ್ರೆಗಳು – ಎಲ್ಲವೂ ಇವರ ಕಾಲದ್ದೇ. ಅಲ್ಲದೆ ಲಲಿತಕಲೆಗಳಿಗೆ ಸಾಹಿತ್ಯ ಸಂಸ್ಕೃತಿಯ ಉದ್ದೀಪನಕ್ಕೆ ಒತ್ತುಕೊಟ್ಟಿದ್ದು ಮಹಾರಾಜರ ಹೂಮನಸ್ಸಿಗೆ ಒಂದು ಸಾಕ್ಷಿ. ಸಾಮಾಜಿಕ ಕಾನೂನುಗಳ ಹರಿಕಾರ ಎಂದೇ ಬಿರುದಾಂಕಿತರಾಗಿದ್ದ ರಾಜಶ್ರೀಗಳು ಅನೇಕ ಸಾಮಾಜಿಕ ಪಿಡುಗುಗಳನ್ನು ಬಹಿಷ್ಕರಿಸಲು ರೂಢಿಗೆ ತಂದ ಕಾನೂನುಗಳು ಹತ್ತು ಹಲವಾರು.


1909ರಲ್ಲಿ ದೇವದಾಸಿ ಪದ್ಧತಿ ನಿಷೇಧ, 1910ರಲ್ಲಿ ಬಸವೀ ಪದ್ಧತಿ ರದ್ಧತಿ, 1910ರಲ್ಲಿ ಮತ್ತೆ “ಗೆಜ್ಜೆಪೂಜೆ ಪದ್ಧತಿ” ಸಂಪೂರ್ಣ ನಿರ್ಮೂಲನೆ. 1913ರಲ್ಲಿ ಮೈಸೂರು ಗ್ರಾಮನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದ್ದು 1914ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧವನ್ನು ಹೇರಿದ್ದು, 1918ರಲ್ಲಿ ಗ್ರಾಮಪಂಚಾಯಿತಿಗಳ ಕಾಯ್ದೆಯನ್ನು ಜಾರಿಗೆ ತಂದದ್ದು, 1919ರಲ್ಲಿ ಮಾಧ್ಯಮಿಕ ಶಾಲಾಮಟ್ಟದಲ್ಲಿ ಶಿಕ್ಷಣಶುಲ್ಕ ಪದ್ಧತಿಯನ್ನು ಮಾಡಿದ್ದು, 1927ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಸಿಕೊಟ್ಟದ್ದು, 1936ರಲ್ಲಿ ವೇಶ್ಯಾವೃತ್ತಿಯನ್ನು ತಡೆಗಟ್ಟುವ ಕಾಯ್ದೆಯನ್ನು ಜಾರಿಗೆ ತಂದದ್ದು, ವಿಧವೆಯರಿಗೆ ಮರುವಿವಾಹ ಕಾಯ್ದೆಯನ್ನು ತಂದಿದ್ದು, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿಮಾಡಿದ್ದು ಇವೆಲ್ಲವೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ. ಇವರ ಹತ್ತು ಹಲವು ಕಾನೂನುಗಳು. ಇವೆಲ್ಲವೂ ಕಾನೂನಾತ್ಮಕ ಸಾಧನೆಗಳ ಆಯ್ದ ಕೆಲವು ಭಾಗಗಳು.


ಅಷ್ಟಲ್ಲದೆ ಕೈಗಾರಿಕಾ ಅಭಿವೃದ್ಧಿಗೆ ಕೆಲವು ಶತಮಾನದ ಹಿಂದೆಯೇ ಒತ್ತುಕೊಟ್ಟಿದ್ದು ಪ್ರೇರಣಾದಾಯಿಯೇ ಸರಿ. 1914ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಕೂಲ್, ಭದ್ರಾವತಿ ಕಬ್ಬಿಣ ಕಾರ್ಖಾನೆ, ಸಿಮೆಂಟು ಕಾರ್ಖಾನೆ, ಬೆಂಗಳೂರು ಸಾಬೂನು ಕಾರ್ಖಾನೆ, 1934ರಲ್ಲಿ ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಪ್ರಾರಂಭವಾದದ್ದು 1936ರಲ್ಲಿ ಮೊಟ್ಟಮೊದಲ ಪೇಪರ್ ಮಿಲ್ಲನ್ನು ಪ್ರಾರಂಭ ಮಾಡಿದ್ದು, ಮಂಗಳೂರು ಹೆಂಚು ಕಾರ್ಖಾನೆ, ಶಹಾಬಾದಿನ ಸಿಮೆಂಟು ಕಾರ್ಖಾನೆ, ಮೈಸೂರಿಗೆ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದು.


ಹೀಗೆ ಇವರ ಸಾಧನೆಗಳು ಮುಗಿಯದ ಪಟ್ಟಿಯೇ ಸರಿ. ಇಂತಹ ಧೀಮಂತ ವ್ಯಕ್ತಿತ್ವದ ದೊರೆಯ ಹುಟ್ಟುಹಬ್ಬ ಇವತ್ತು. ಅವರು ಮಾಡಿರುವ ಕೆಲಸಗಳು ಜನಸಾಮಾನ್ಯರಿಗೆ ಕೊಟ್ಟಿರುವ ಕೊಡುಗೆಗಳು. ಇನ್ನೂ ನಮ್ಮೊಡನೆ ಅಜರಾಮರವಾಗಿರುವ ಮಹಾರಾಜ ನಾಲ್ವಡಿಕೃಷ್ಣರಾಜ ಒಡೆಯರಿಗೆ ನಾಡು ನಮಿಸುತ್ತದೆ.

-ಕೌಸ್ತುಭ ಭಾರತೀಪುರಂ , ನ್ಯಾಯವಾದಿಗಳು,ಬೆಂಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.