“ಸತ್ಯ,ಕರುಣಾ,ಶುಚಿತ್ವ ಮತ್ತು ತಪಸ್ಸು ಈ ಧರ್ಮದ ನಾಲ್ಕು ಆಧಾರ ಸ್ಥಂಬಗಳ ಆಧಾರದ ಮೇಲೆ ಭಾರತ ನಿಂತಿದೆ.ಅದೇ ನಮ್ಮ ರಾಷ್ಟ್ರೀಯ ಜೀವನವಾಗಿದೆ.”ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸರಸಂಘಚಾಲಕರು ಮಾತನಾಡುತ್ತಾ “‘ಭಾರತ ಮಾತಾ ಕಿ ಜೈ’ ಘೋಷ ಇಡೀ ವಿಶ್ವದಲ್ಲಿ ಮೊಳಗಬೇಕಿದೆ.ಯಾಕೆಂದರೆ, ನಾವು ವಿಶ್ವವಿಜೇತರಾಗಬೇಕಿಲ್ಲ,ನಾವು ಯಾರನ್ನು ಗೆಲ್ಲಬೇಕಿಲ್ಲ ಬದಲಾಗಿ ನಾವು ಎಲ್ಲರನ್ನು ಜೋಡಿಸಬೇಕಿದೆ.ಇದೇ ಸಂಘ ಕಾರ್ಯ,ಅಂದರೆ ಜೋಡಿಸುವ ಕೆಲಸ. ಸ್ವತಂತ್ರದ ಅಮೃತ ಮಹೋತ್ಸವ ನಡೆಯುತ್ತಿದೆ ಅದರಲ್ಲಿ ‘ಸ್ವ’ ಯಾವುದು? ಈ ಜೋಡಿಸುವ ಕೆಲಸವೆ ನಮ್ಮ ಸ್ವ.” ಎಂದರು

“ನಮ್ಮ ಪೂರ್ವಜರು ಪೂರ್ಣತೆಯ ಸತ್ಯವನ್ನು ಆವಿಷ್ಕಾರ ಮಾಡಿದವರು.ಅದು ನಮ್ಮೆಲ್ಲರಲ್ಲೂ ಏಕ ಮುಖವಾಗಿ ಪ್ರಕಟಗೊಳ್ಳುತ್ತದೆ ಎಂದು ಅರಿತವರು. ವಿವಿಧತೆ ಈ ಏಕತ್ವದ ಮತ್ತೊಂದು ಆಯಾಮ.ಅದು ಪ್ರತ್ಯೇಕತೆಯಲ್ಲ.ಪರಸ್ಪರ ನಮ್ಮಲ್ಲಿ ಸಂಬಂಧದ ಭಾವ,ಆತ್ಮೀಯತೆಯ ಭಾವವಿದೆ.ಈ ಭಾವನೆಯ ಮೂಲಕವೇ ಇಡೀ ವಿಶ್ವವನ್ನು ಸತ್ಯದ ಕಡೆಗೆ ಕರೆದೊಯ್ಯುಬೇಕಿದೆ. ಸತ್ಯ,ಕರುಣಾ,ಶುಚಿತ್ವ ಮತ್ತು ತಪಸ್ಸು ಈ ಧರ್ಮದ ನಾಲ್ಕು ಆಧಾರ ಸ್ಥಂಬಗಳ ಆಧಾರದ ಮೇಲೆ ಭಾರತ ನಿಂತಿದೆ.ಅದೇ ನಮ್ಮ ರಾಷ್ಟ್ರೀಯ ಜೀವನವಾಗಿದೆ.”

ಸರಸಂಘಚಾಲಕರು ಮಾತನಾಡುತ್ತಾ “ಸಮನ್ವಯವನ್ನು ಕಲಿಸುವುದೇ ಧರ್ಮ,ಸಂತುಲನವನ್ನು ಕಲಿಸುವುದೇ ಧರ್ಮ,ಎಲ್ಲರನ್ನು ಒಳಗೊಂಡು ಎಲ್ಲರ ಉನ್ನತಿಯನ್ನು ಬಯಸುತ್ತದೆ.ಧರ್ಮದ ಸಂರಕ್ಷಣೆ ಎರಡು ರೀತಿಯದ್ದು,ಒಂದು ಆಕ್ರಮಣದಿಂದ ತಪ್ಪಿಸಿಕೊಳ್ಳುವುದು,ಅದಕ್ಕಾಗಿ ಬಲಿದಾನವೂ ನಡೆಯುತ್ತದೆ,ಯುದ್ಧವೂ ನಡೆಯುತ್ತದೆ.ಎರಡನೇಯದ್ದು ಧರ್ಮವನ್ನು ಆಚರಣೆಯಲ್ಲಿ ತರುವುದು.” ಎಂದರು.

“ನಾವು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಮುಂದೆ ಸಾಗಬೇಕಿದೆ.ಉದಾಹರಣೆಗೆ ಗ್ಯಾನವಾಪಿಯ ವಿಚಾರ ಬಂದಿದೆ.ಇಲ್ಲಿ ಇತಿಹಾಸದ ಸಾಕ್ಷಿಯಂತೂ ಇದೆ‌,ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ.ಅದು ಇವತ್ತು ಬದುಕಿರುವ ಹಿಂದು,ಮುಸಲ್ಮಾನರಿಂದ ನಡೆದ ಇತಿಹಾಸವಲ್ಲ,ಹಿಂದೆಂದೋ ಆದದ್ದು.ಇಸ್ಲಾಂ ಹೊರಗಿನಿಂದ ಆಕ್ರಮಣ ಮಾಡುತ್ತಾ ಬಂದಾಗ,ಭಾರತದ ಸ್ವತಂತ್ರ ಸೇನಾನಿಗಳ ಶ್ರದ್ಧಾ ಭಂಗಕ್ಕಾಗಿ ದೇವಸ್ಥಾನವನ್ನು ಒಡೆದರು.ಆ ರೀತಿ ದೇಶಾದ್ಯಂತ ಸಾವಿರಾರು ಘಟನೆಗಳಾಗಿದೆ.ಈಗ ಹಿಂದು ಮುಸಲ್ಮಾನ ನಡುವೆ ಮನಸ್ತಾಪಕ್ಕೆ ಕಾರಣವಾಗಬಾರದು.ಹಿಂದು ಮುಸಲ್ಮಾನರು ಒಟ್ಟಿಗೆ ಕೂತು ಈ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕಿದೆ.ಹಾಗಾಗದಿದ್ದಾಗ ಕೋರ್ಟಿಗೆ ಹೋಗಬೇಕಾಗಬಹುದು, ಆಗ ಕೋರ್ಟಿನ ನಿರ್ಣಯವನ್ನು ನಾವು ಒಪ್ಪಬೇಕು. ನಮ್ಮ ಸಂವಿಧಾನ ಸಮ್ಮತ ನ್ಯಾಯವ್ಯವಸ್ಥೆಯನ್ನು ಪವಿತ್ರ, ಸರ್ವ ಶ್ರೇಷ್ಠವೆಂದು ಪರಿಗಣಿಸಿ ನಾವು ಪಾಲಿಸಬೇಕಿದೆ‌.ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅಶ್ವಾಕ್ ಉಲ್ಲಾ ಖಾನ್‌ರಂತಹ ಮಹಾನ್ ಹೋರಾಟಗಾರರಿದ್ದಾರೆ.ಹಾಗಾಗಿ ಅವರಿಗೂ ಭಾರತ ಮಾತೃಭೂಮಿಯಾಗಿದೆ. “ಎಂದರು.

ಸಮಾರಂಭದಲ್ಲಿ ಹೈದರಾಬಾದಿನ ರಾಮಚಂದ್ರ ಮಿಷನ್ನಿನ ಶ್ರೀ ಕಮಲೇಶ್ ಪಟೇಲ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಲ್ಲದೆ ಸಮಾರಂಭದಲ್ಲಿ ಸ್ವಯಂಸೇವಕರು ಆಕರ್ಷಕವಾದ ಶಾರೀರಿಕ ಪ್ರದರ್ಶನವನ್ನು ನಡೆಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.