ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಮಾರ್ಚ್‌ 12, 1930 ರಂದು  ಗುಜರಾತ್‌ ನ  ಸಬರಮತಿ ಆಶ್ರಮದಿಂದ ರಾಜ್ಯದ ಕರಾವಳಿ ಪ್ರದೇಶದವರೆಗೆ ಐತಿಹಾಸಿಕ ದಂಡಿ ಯಾತ್ರೆಯನ್ನು ಪ್ರಾರಂಭಿಸಲಾಯಿತು. ಈ ಮಹತ್ವದ ಮೆರವಣಿಗೆಯನ್ನು ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಎಂದು ಕರೆಯಲಾಯಿತು.


ಭಾರತದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿ ಅವರು ಸತ್ಯಾಗ್ರಹವನ್ನು ಕೈಗೊಂಡಿದ್ದರು. ಈ ಸತ್ಯಾಗ್ರಹ ಸುಮಾರು 24 ದಿನಗಳ ಕಾಲ ನಡೆಯಿತು. 78 ಜನರಿಂದ ಮಾರ್ಚ್ 12 ರಂದು  ಪ್ರಾರಂಭಗೊಂಡ ಈ ಯಾತ್ರೆ ಏಪ್ರಿಲ್ 6, 1930 ರಂದು ಮುಕ್ತಾಯವಾಯಿತು.


ಚಳುವಳಿ ಹಿನ್ನೆಲೆ
ಭಾರತದಲ್ಲಿ ಬ್ರಿಟಿಷ್‌ ಆಡಳಿತವಿದ್ದಾಗ ಉಪ್ಪಿನ ಮೇಲೆ ಕರವನ್ನು ವಿಧಿಸಿದ್ದರು. ಅದಲ್ಲದೆ ಭಾರತೀಯರಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಉಪ್ಪು ಉತ್ಪಾದನೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ ಜನರ ಆಹಾರಕ್ಕೆ ಉಪ್ಪು ಅತ್ಯಗತ್ಯ. ಹೀಗಾಗಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಉಪ್ಪು ಮಾರಾಟ ಮತ್ತು ಉತ್ಪಾದನೆಯ ಮೇಲಿನ ಈ ಅಸಮಂಜಸ ನಿಷೇಧವನ್ನು ವಿರೋಧಿಸಿ ಸತ್ಯಾಗ್ರಹದ ಮೂಲಕ ಹೋರಾಟ ಪ್ರಾರಂಭವಾಯಿತು.

ಸರ್ಕಾರದ ಶೋಷಣೆಯ ವಿರುದ್ಧ ಜನರ ಪ್ರಜ್ಞೆಯನ್ನು ಜಾಗೃತಿಗೊಳಿಸಿದರು. ಈ ಮೂಲಕ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದರು. ಈ ಹೋರಾಟದ ಮೂಲಕ ಜನರನ್ನು ಒಟ್ಟು ಗೂಡಿಸಿದ ಮಹತ್ಮಾಗಾಂಧಿ ಅವರು ಶೋಷಣೆಯ ವಿರುದ್ಧ ಪ್ರಶ್ನಿಸುವ ದೊಡ್ಡ ಜನಸಮೂಹದ ಜಾಗೃತಿಗೆ ಕಾರಣರಾದರು. ಭಾರತದಾದ್ಯಂತ ನಾಗರಿಕರ ಅಸಹಕಾರ ಚಳುವಳಿ ಭುಗಿಲೆದ್ದಿತ್ತು. ಬ್ರಿಟಿಷ್ ಅಧಿಕಾರಿಗಳು 60,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಗಾಂಧಿ ಅವರನ್ನು ಮೇ 5ರಂದು ಬಂಧಿಸಲಾಯಿತು. ಆದರೆ ಅವರಿಲ್ಲದೆ ಸತ್ಯಾಗ್ರಹವನ್ನು ಮುಂದುವರೆಸಲಾಯಿತು. ಮೇ 21ರಂದು ಸರೋಜಿನಿ ನಾಯ್ಡು ಅವರು ಬಾಂಬೆಯಿಂದ ಉತ್ತರಕ್ಕೆ 150 ಮೈಲಿ ದೂರದಲ್ಲಿರುವ ಧಾರಾಸನಾ ಸಾಲ್ಟ್ ವರ್ಕ್ಸ್ ನಲ್ಲಿ 2,500 ಮೆರವಣಿಗೆಗಾರರ ನೇತೃತ್ವವಹಿಸಿದ್ದರು.


ಉಪ್ಪಿನ ಸತ್ಯಾಗ್ರಹ ನಂತರ 1931 ರ ಜನವರಿಯಲ್ಲಿ ಗಾಂಧಿಯವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಈ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಲಾರ್ಡ್ ಇರ್ವಿನ್ ಅವರೊಂದಿಗೆ ಮಾತುಕತೆ ಪ್ರಾರಂಭಿಸಿದರು. ಗಾಂಧಿ-ಇರ್ವಿನ್ ಒಪ್ಪಂದಕ್ಕೆ 5 ಮಾರ್ಚ್ 1931 ರಂದು ಸಹಿ ಹಾಕಲಾಯಿತು. ಇದರಿಂದಾಗಿ ಗಾಂಧಿ ಲಂಡನ್‌ನಲ್ಲಿ ನಡೆದ ಎರಡನೇ ಸುತ್ತಿನ ಸಮ್ಮೇಳನದಲ್ಲಿ ಭಾಗವಹಿಸಲು ಕಾರಣವಾಯಿತು.ಅದೇ ವರ್ಷದ ಆಗಸ್ಟ್ ನಲ್ಲಿ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಏಕೈಕ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿಸಿದರು. ಈ ಸಭೆ ನಿರಾಶಾದಾಯಕವಾಗಿತ್ತು, ಆದರೆ ಬ್ರಿಟಿಷ್ ನಾಯಕರು ಗಾಂಧಿಯನ್ನು ನಿಗ್ರಹಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲದ ಶಕ್ತಿ ಎಂದು ಒಪ್ಪಿಕೊಂಡಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.