File Photo: RSS Sarasanghachalak Mohan Bhagwat today met Kanchi Kamakoti Peetam Pujyasri Jayendra Saraswati Shankaracharya Swamiji and Pujyasri Sankara Vijayendra Saraswathi Swamiji who were observing Chaturmasya Vratam and Puja at Kanchi Mutt, Tamilnadu on Aug 14, 2013

by Du Gu Lakshman

2500 ವರ್ಷಗಳ ಸುದೀರ್ಘ ಪರಂಪರೆ ಹೊಂದಿರುವ ತಮಿಳುನಾಡಿನ ಕಂಚಿಕಾಮಕೋಟಿ ಪೀಠದ ಮೇಲೆ ಕಳಂಕ ಹೊರಿಸುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರ ಕೊನೆಗೂ ವಿಫಲವಾಗಿದೆ. ನವೆಂಬರ್ ೨೭ರಂದು ಪುದುಚೆರಿ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕಂಚಿಕಾಮಕೋಟಿ ಪೀಠದ ಹಿರಿಯ ಸ್ವಾಮೀಜಿ ಜಯೇಂದ್ರ ಸರಸ್ವತಿ, ಕಿರಿಯ ಸ್ವಾಮೀಜಿ ವಿಜಯೇಂದ್ರ ಸರಸ್ವತಿ ಸೇರಿದಂತೆ ಎಲ್ಲಾ ೨೩ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಕಲೆ ಹಾಕಿದ ಬೆಟ್ಟದಷ್ಟು ಗಾತ್ರದ ಸಾಕ್ಷ್ಯಾಧಾರಗಳಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಕಂಚಿ ಕಾಮಕೋಟಿ ಪೀಠದ ಅಸಂಖ್ಯ ಭಕ್ತರಿಗೆ, ಹಿಂದೂ ಸಮಾಜಕ್ಕೆ ಈ ತೀರ್ಪು ಸಮಾಧಾನದ, ಸಂತಸದ ನಿರಾಳತೆ ತಂದಿದ್ದರೆ, ಕಂಚಿಶ್ರೀಗಳನ್ನು ಹೇಗಾದರೂ ಈ ಮೊಕದ್ದಮೆಯಲ್ಲಿ ಸಿಲುಕಿಸಿ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಹೊಂಚು ಹಾಕಿದ್ದ ದ್ರವಿಡ ಶಕ್ತಿಗಳಿಗೆ, ಪಟ್ಟಭದ್ರ ಮಾಧ್ಯಮಗಳಿಗೆ, ಕುತಂತ್ರಿ ರಾಜಕಾರಣಿಗಳಿಗೆ ಹಾಗೂ ಎಡಪಂಥೀಯ ವಿಚಾರವಾದಿಗಳಿಗೆ ತೀವ್ರ ನಿರಾಸೆಯಾಗಿದೆ. ಅದು ಸಹಜವೂ ಹೌದು!

File Photo: RSS Sarasanghachalak Mohan Bhagwat today met Kanchi Kamakoti Peetam Pujyasri Jayendra Saraswati Shankaracharya Swamiji and Pujyasri Sankara Vijayendra Saraswathi Swamiji who were observing Chaturmasya Vratam and Puja at Kanchi Mutt, Tamilnadu on Aug 14, 2013
File Photo: RSS Sarasanghachalak Mohan Bhagwat today met Kanchi Kamakoti Peetam Pujyasri Jayendra Saraswati Shankaracharya Swamiji and Pujyasri Sankara Vijayendra Saraswathi Swamiji who were observing Chaturmasya Vratam and Puja at Kanchi Mutt, Tamilnadu on Aug 14, 2013

ಕಂಚಿಕಾಮಕೋಟಿ ಪೀಠ ಆಧ್ಯಾತ್ಮಿಕದ ಮೇರು ಸಾಧನೆಗೆ ಹೆಸರುವಾಸಿಯಾದ ಅತೀ ಪ್ರಾಚೀನ ಮಠ. ಆದಿಶಂಕರರು ೨೫೦೦ ವರ್ಷಗಳ ಹಿಂದೆ ಸ್ಥಾಪಿಸಿದ ಈ ಪೀಠ ಇದುವರೆಗೆ ೭೦ ಮಂದಿ ಪೀಠಾಧಿಪತಿಗಳನ್ನು ಕಂಡಿದೆ. ಹಿರಿಯ ಸ್ವಾಮೀಜಿ ಜಯೇಂದ್ರ ಸರಸ್ವತಿ ೬೯ನೇ ಪೀಠಾಧಿಪತಿಯಾದರೆ ಅವರ ಶಿಷ್ಯ ವಿಜಯೇಂದ್ರ ಸರಸ್ವತಿ ೭೦ನೇ ಪೀಠಾಧಿಪತಿ. ೬೮ನೇ ಪೀಠಾಧಿಪತಿಯಾಗಿದ್ದ ಚಂದ್ರಶೇಖರಾನಂದ ಸರಸ್ವತಿ ಸ್ವಾಮೀಜಿ ನಾಡಿನಾದ್ಯಂತ ಖ್ಯಾತರಾಗಿದ್ದರು. ಅವರು ಕಾಲವಾದ ಬಳಿಕ ಜಯೇಂದ್ರ ಸರಸ್ವತಿ ಸ್ವಾಮೀಜಿ ತಮ್ಮ ಗುರುವಿನ ಸನ್ಮಾರ್ಗದಲ್ಲೇ ನಡೆದು ಕಂಚಿ ಕಾಮಕೋಟಿ ಪೀಠದ ಘನತೆ, ಗೌರವವನ್ನು ಎತ್ತಿ ಹಿಡಿಯುವ ಕೈಂಕರ್ಯದಲ್ಲಿ ಸಫಲರಾಗಿದ್ದರು. ಯಾವುದೇ ರಾಜಕೀಯ ಪಕ್ಷದ ಪರವಹಿಸದೆ ಸನಾತನ ಹಿಂದೂ ಧರ್ಮದ ಮೌಲ್ಯಾದರ್ಶಗಳನ್ನು ಎತ್ತಿಹಿಡಿಯುವ ಶ್ರೇಷ್ಠ ಕಾಯಕದಲ್ಲಿ ನಿರತರಾಗಿದ್ದ ಜಯೇಂದ್ರ ಸರಸ್ವತಿ ವಿರುದ್ಧ ಕೊಲೆ ಆರೋಪ ಎರಗಿ, ಅನಂತರ ಅವರು ಬಂಧನಕ್ಕೊಳಗಾಗಿದ್ದು, ಆಮೇಲೆ ೯ ವರ್ಷಗಳ ಕಾಲ ನಿರಂತರ ಕೋರ್ಟಿಗೆ ಅಲೆಯಬೇಕಾಗಿ ಬಂದಿದ್ದು ಮಾತ್ರ ಒಂದು ವಿಷಾದನೀಯ ಅಧ್ಯಾಯ. ಆದರೆ ಈ ೯ ವರ್ಷಗಳ ಅವಧಿಯಲ್ಲಿ ಜಯೇಂದ್ರ ಸರಸ್ವತಿ ಸ್ವಾಮೀಜಿ ಕಿಂಚಿತ್ತೂ ಅಧೀರರಾಗಿರಲಿಲ್ಲ. ಮನಸ್ಸಿನಲ್ಲಿ ನೋವು ತುಂಬಿಕೊಂಡಿತ್ತಾದರೂ ಸತ್ಯಕ್ಕೆ, ಧರ್ಮಕ್ಕೆ ಎಂದಿದ್ದರೂ ಗೆಲುವಾಗುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು. ಅದೀಗ ನಿಜವಾಗಿದೆ. ತಮ್ಮ ವಿರುದ್ಧದ ಕೊಲೆ ಮೊಕದ್ದಮೆ ಪ್ರಕರಣ ಖುಲಾಸೆಯಾದ ತಕ್ಷಣ ಅವರು ನೀಡಿದ ಹೇಳಿಕೆ ಕೂಡ ಇದೇ ಆಗಿತ್ತು.

೨೦೦೪ನೇ ಇಸವಿ ಸೆ. ೩ರಂದು ಕಂಚೀಪುರದ ವರದರಾಜ ಪೆರುಮಾಳ್ ದೇವಸ್ಥಾನದ ಮ್ಯಾನೇಜರ್ ಶಂಕರರಾಮನ್ ದೇಗುಲದ ಆವರಣದಲ್ಲೇ ಭೀಕರವಾಗಿ ಹತ್ಯೆಯಾಗಿದ್ದರು. ಮಾರಕಾಸ್ತ್ರಗಳಿಂದ ಇರಿದು ಅವರನ್ನು ಕೊಲ್ಲಲಾಗಿತ್ತು. ಆ ಕೊಲೆ ಏಕೆ, ಹೇಗೆ ಆಯಿತು? ಅದರ ಹಿಂದೆ ಯಾರಿದ್ದರು? ಇತ್ಯಾದಿ ಮಾಹಿತಿಗಳನ್ನು ನಿಜವಾಗಿ ಪೊಲೀಸರು ನಿಷ್ಪಕ್ಷಪಾತವಾಗಿ ಕಲೆ ಹಾಕಬೇಕಿತ್ತು. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿ ತನಿಖೆ ನಡೆಸಬೇಕಾಗಿತ್ತು. ಆದರೆ ಹಾಗಾಗಲೇ ಇಲ್ಲ. ಪೊಲೀಸರು ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವ ಬದಲು ಸರ್ಕಾರದ, ಕೆಲವು ಮಾಧ್ಯಮಗಳ ಹಾಗೂ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಂಚಿಶ್ರೀಗಳಾದ ಜಯೇಂದ್ರ ಸರಸ್ವತಿ, ವಿಜಯೇಂದ್ರ ಸರಸ್ವತಿ ಅವರೇ ಪ್ರಮುಖ ಕೊಲೆ ಆರೋಪಿಗಳು ಎಂಬ ತೀರ್ಮಾನಕ್ಕೆ ಬಂದಿದ್ದು ದುರದೃಷ್ಟಕರ. ಶಂಕರರಾಮನ್ ಹತ್ಯೆಯಾದ ಬಳಿಕ ‘ನಕ್ಕೀರನ್’ ಪತ್ರಿಕೆ ಈ ಕೊಲೆ ಪ್ರಕರಣದಲ್ಲಿ ಕಂಚಿ ಪೀಠದ ಉಭಯ ಸ್ವಾಮೀಜಿಯವರು ಶಾಮೀಲಾಗಿರಬಹುದು ಎಂದು ವರದಿ ಮಾಡಿತ್ತು. ಆದರೆ ಅದೆಷ್ಟು ನಿಜ ಎಂಬುದಕ್ಕೆ ಯಾವುದೇ ಆಧಾರಗಳನ್ನು ಅದು ಒದಗಿಸಿರಲಿಲ್ಲ. ಅಷ್ಟರಲ್ಲಿ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಡಿಎಂಕೆ, ಎಐಎಡಿಎಂಕೆ ನಡುವಣ ವಾಕ್ಸಮರಕ್ಕೆ ಕಾರಣವಾಯಿತು. ಆಗ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದದ್ದು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ. ಜಯಲಲಿತಾ ಹಿಂದಿನಿಂದಲೂ ಕಂಚಿ ಕಾಮಕೋಟಿ ಮಠದ ಪರಮ ಭಕ್ತೆಯಾಗಿದ್ದರು. ಆಗಾಗ್ಗೆ ಮಠಕ್ಕೆ ಭೇಟಿ ನೀಡಿ ಹಿರಿಯ ಸ್ವಾಮೀಜಿಯವರ ದರ್ಶನವನ್ನೂ ಪಡೆಯುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಜಯಲಲಿತಾ ಕೂಡ ಶಾಮೀಲಾಗಿದ್ದಾರೆಂದು ಡಿಎಂಕೆ ನಾಯಕ ಎಂ.ಕರುಣಾನಿಧಿ ಆರೋಪಿಸಿದ್ದರು. ಡಿಎಂಕೆ ಒಂದು ವಿರೋಧ ಪಕ್ಷವಾಗಿ ಅಂತಹ ಆರೋಪ ಎಸಗಿದ್ದು ಆಶ್ಚರ್ಯವೇನಲ್ಲ. ಅದೂ ಅಲ್ಲದೆ, ಕಂಚಿ ಕಾಮಕೋಟಿ ಪೀಠದಂತಹ ಪ್ರಾಚೀನ ಹಿಂದೂ ಪರಂಪರೆಯ ಮಠದ ಮೇಲೆ ಕಳಂಕ ಹೊರಿಸಿ, ಹಿಂದೂ ಸಮುದಾಯ ತಲೆತಗ್ಗಿಸುವಂತೆ ಮಾಡಬೇಕೆಂಬ ಇರಾದೆ ಕರುಣಾನಿಧಿ ಮತ್ತವರ ಹಿಂದೂ ವಿರೋಧಿ ಚೇಲಾಗಳಿಗೆ ಇದ್ದಿದ್ದು ರಹಸ್ಯವೇನಲ್ಲ. ಈ ಕೊಲೆ ಪ್ರಕರಣ ಆ ಮಂದಿಗೆ ಕಂಚಿ ಪೀಠವನ್ನು ಹಣಿಯಲು ಒಂದು ವರದಾನವೇ ಆಯಿತೆನ್ನಬಹುದು.

ಡಿಎಂಕೆ ನಾಯಕರು ಏನೇ ಆರೋಪ ಮಾಡಲಿ, ಕೆಲವು  ಪಟ್ಟಭದ್ರ ಮಾಧ್ಯಮಗಳು ಏನೇ ಬರೆಯಲಿ, ಅಧಿಕಾರದಲ್ಲಿದ್ದ  ಮುಖ್ಯಮಂತ್ರಿ ಜಯಲಲಿತಾ ಈ ಸಂದರ್ಭದಲ್ಲಿ ವಿಚಲಿತರಾಗದೆ, ವಿವೇಚನಾಶಕ್ತಿ ಬಳಸಿ ಈ ಪ್ರಕರಣದ ಹಿಂದಿನ ರಹಸ್ಯವನ್ನು ಭೇದಿಸಬೇಕಿತ್ತು. ಆದರೆ ಜಯಲಲಿತಾಗೆ ತನ್ನ ಅಧಿಕಾರ ಮುಖ್ಯವಾಯಿತೇ ಹೊರತು ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕೆಂಬುದು ಮುಖ್ಯವಾಗಲಿಲ್ಲ. ಜಯಲಲಿತಾ ತಕ್ಷಣ ಕಂಚಿ ಮಠದ ಹಿರಿಯ ಸ್ವಾಮೀಜಿಯ ಬಂಧನಕ್ಕೆ ಆದೇಶಿಸಿದರು. ೨೦೦೪ರ ನ. ೧೧ರಂದು ಆಂಧ್ರದ ಮೆಹಬೂಬ್ ನಗರದಲ್ಲಿ ದೀಪಾವಳಿ ಪ್ರಯುಕ್ತ ಕಾರ್ಯಕ್ರಮವೊಂದರಲ್ಲಿ ನಿರತರಾಗಿದ್ದ ಹಿರಿಯ ಶ್ರೀಗಳನ್ನು ತಮಿಳುನಾಡು ಪೊಲೀಸರು ಯಾವುದೇ ಮುನ್ಸೂಚನೆ ಇಲ್ಲದೆ ಬಂಧಿಸಿದರು. ೨ ತಿಂಗಳು ಬಂಧನದಲ್ಲಿದ್ದ ಶ್ರೀಗಳು ಅನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಹಿರಿಯ ಶ್ರೀಗಳ ಜೊತೆಗೆ ಅನಂತರ ಕಿರಿಯ ಶ್ರೀಗಳನ್ನೂ ಬಂಧಿಸಲಾಯಿತು. ಕಂಚಿ ಮಠದ ಇನ್ನಿತರ ಕೆಲವು ಸಿಬ್ಬಂದಿ ವರ್ಗದವರನ್ನೂ ಬಂಧಿಸಿ ಜೈಲಿಗಟ್ಟಲಾಯಿತು.

ಇಡೀ ದೇಶದಲ್ಲಿ ಈ ವಿದ್ಯಮಾನ ಸಾಕಷ್ಟು ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ ಬಹುತೇಕ ಮಾಧ್ಯಮಗಳು ಶಂಕರರಾಮನ್ ಕೊಲೆ ಪ್ರಕರಣದಲ್ಲಿ ಕಂಚಿಶ್ರೀಗಳ ಪಾತ್ರ ಇದೆಯೆಂದೇ ಭಾವಿಸಿದ್ದವು. ಕೆಲವು ಪತ್ರಿಕೆಗಳು ಅವರಿಗೆ ಶಿಕ್ಷೆ ವಿಧಿಸಬೇಕೆಂದು ತಾವೇ ತೀರ್ಪನ್ನೂ ನೀಡಿದ್ದವು. ಆದರೆ ಇದೊಂದು ರಾಜಕೀಯಪ್ರೇರಿತ ಬಂಧನ, ಕಂಚಿಶ್ರೀಗಳಿಗೂ ಶಂಕರರಾಮನ್ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಧೈರ್ಯವಾಗಿ ಧ್ವನಿಯೆತ್ತಿದ ಒಂದೇ ಒಂದು ಪತ್ರಿಕೆಯೆಂದರೆ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’. ಖ್ಯಾತ ಅಂಕಣಕಾರ ಎಸ್.ಗುರುಮೂರ್ತಿ ತಮಿಳುನಾಡು ಸರ್ಕಾರದ ಅನ್ಯಾಯವನ್ನು ಖಂಡಿಸಿ ಆ ಪತ್ರಿಕೆಯಲ್ಲಿ ನಿರಂತರ ೫ ಲೇಖನಗಳನ್ನು ಪ್ರಕಟಿಸಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಲೆ ಹಾಕಿದ ತಪ್ಪು ಮಾಹಿತಿಗಳನ್ನು , ಆಧಾರರಹಿತ ಸಂಗತಿಗಳನ್ನು ಗುರುಮೂರ್ತಿ ಲೇಖನದ ಮೂಲಕ ಬಯಲು ಮಾಡಿದ್ದರು. ೨೦೦೪ರ ನ. ೨೪ರಂದು ಪ್ರಕಟವಾದ ಅವರ ಲೇಖನದ ಶೀರ್ಷಿಕೆಯೇ ‘ಖಿhe ಛಿಚಿse is ಜeಚಿಜ. Who ತಿiಟಟ ಜo ಣhe ಈuಟಿeಡಿಚಿಟ ಚಿಟಿಜ Wheಟಿ?’ ಎಂದಾಗಿತ್ತು. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಇನ್ನೂ ೪ ಲೇಖನಗಳನ್ನು ಪ್ರಕಟಿಸಿ, ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಕಂಚಿಶ್ರೀಗಳ ಬಂಧನ ದುರುzಶಪೂರಿತ ಎಂಬುದನ್ನು ಆಧಾರಸಹಿತ ವರ್ಣಿಸಿತ್ತು.

ಆದರೆ ಸತ್ಯವನ್ನು ಅರಿಯುವ ಕಾಳಜಿ ತಮಿಳುನಾಡು ಸರ್ಕಾರಕ್ಕಾಗಲಿ, ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡಕ್ಕಾಗಲಿ ಸುತರಾಂ ಇರಲಿಲ್ಲ. ಏಕೆಂದರೆ ರಾಜಕೀಯದ ಒತ್ತಡ ಅವರನ್ನು ಹಾಗೆ ಮಾಡದಂತೆ ಅಂಕುಶ ಹಾಕಿತ್ತು. ಧೈರ್ಯವಾಗಿ ಈ ಲೇಖನಗಳನ್ನು ಬರೆದ ಗುರುಮೂರ್ತಿಯವರಿಗೆ ದೊರಕಿದ ಬಹುಮಾನವೆಂದರೆ ಅವರ ವಿರುದ್ಧ ಜಾರಿಯಾದ ಅರೆಸ್ಟ್ ವಾರಂಟ್! ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಲೇಖನಗಳನ್ನು ಅನುವಾದಿಸಿ ಪ್ರಕಟಿಸಿದ್ದಕ್ಕೆ ಚೊ.ರಾಮಸ್ವಾಮಿಯವರ ‘ತುಘಲಕ್’ ಪತ್ರಿಕೆಗೂ ಅಂತಹದೇ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಗುರುಮೂರ್ತಿಯವರನ್ನು ಪೊಲೀಸರು ವಿಚಾರಣೆ ನಡೆಸಿದರು. ಆ ಸಂದರ್ಭದಲ್ಲಿ ಗುರುಮೂರ್ತಿ ಪೊಲೀಸ್ ತನಿಖಾಧಿಕಾರಿಗೆ ‘ಕಂಚಿ ಶ್ರೀಗಳನ್ನು ಆರೋಪಿಯೆಂದು ನೀವು ಹೇಗೆ ಸಂಶಯಿಸುತ್ತೀರಿ?’ ಎಂದು ಪ್ರಶ್ನಿಸಿದಾಗ ‘ಕೊಲೆಗೀಡಾದ ಶಂಕರರಾಮನ್ ಕಂಚಿಶ್ರೀಗಳಿಗೆ ಬರೆದ ಸಾಕಷ್ಟು ಆಕ್ಷೇಪಾರ್ಹ ಪತ್ರಗಳು ನನ್ನ ಬಳಿ ಇವೆ. ಆತನನ್ನು ಕೊಲ್ಲುವ ಇರಾದೆ ಕಂಚಿ ಶ್ರೀಗಳಿಗಿತ್ತು ಎಂಬುದಕ್ಕೆ ಅವೇ ಆಧಾರ’ ಎಂದು ಪ್ರತಿಪಾದಿಸಿದ್ದರು. ‘ಕಂಚಿಶ್ರೀಗಳ ಮೇಲೆ ಯಾರೋ ಆಗದವರು ಸೇಡು ತೀರಿಸಿಕೊಳ್ಳಲು ಈ ಆರೋಪವನ್ನು ಹೊರಿಸಿರಬಾರದೇಕೆ?’ ಎಂದು ಗುರುಮೂರ್ತಿ ತನಿಖಾಧಿಕಾರಿಗೆ ಮತ್ತೆ ಪ್ರಶ್ನಿಸಿದಾಗ ಅವರ ಬಳಿ ಅದಕ್ಕೆ ಉತ್ತರವೇ ಇರಲಿಲ್ಲ. ಸುಮ್ಮನೆ ಮುಖಮುಖ ನೋಡಿದ್ದರು. ಶ್ರೀಗಳ ಮೇಲೆ ಕೊಲೆ ಆರೋಪ ಹೊರಿಸುವ ಮುನ್ನ ಎಲ್ಲ ಬಗೆಯ ಕ್ರಿಮಿನಲ್ ತನಿಖೆ ನಡೆಸಬೇಕಿತ್ತು ಎಂಬುದನ್ನೂ ಗುರುಮೂರ್ತಿ ತನಿಖಾಧಿಕಾರಿಯ ಗಮನಕ್ಕೆ ತಂದಿದ್ದರು. ಆದರೆ ಅಂತಹ ಯಾವುದೇ ಕ್ರಿಮಿನಲ್ ತನಿಖೆ ನಡೆದಿರಲಿಲ್ಲ. ಕಂಚಿಶ್ರೀಗಳನ್ನು ಕೊಲೆ ಆರೋಪಿಯಾಗಿ ನಿರೂಪಿಸಲು ಹೇಗೆ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಬಹುದು, ಎಂಬ ವಿಷಯದತ್ತಲೇ ಪೊಲೀಸ್ ಅಧಿಕಾರಿಯ ಸಂಪೂರ್ಣ ಗಮನವಿತ್ತು. ನಿಜವಾದ ಕೊಲೆಗಾರರು ಯಾರಾಗಿರಬಹುದು ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡೇ ಇರಲಿಲ್ಲ.

೯ ವರ್ಷಗಳ ಕಾಲ ಹಲವು ತಿರುವುಗಳನ್ನು ಕಾಣುತ್ತಾ ಸಾಗಿದ್ದ ಈ ಪ್ರಕರಣ ಏಕೋ ಹಾದಿ ತಪ್ಪುತ್ತಿದೆ, ರಾಜಕೀಯ ಹಿತಾಸಕ್ತಿಗಳಿಗೆ ತಾವು ಬಲಿಪಶುವಾಗುತ್ತಿzವೆ ಎಂಬ ಸಂಶಯ ಕಂಚಿ ಶ್ರೀಗಳನ್ನು ಕಾಡಿದ್ದು ಸ್ವಾಭಾವಿಕ. ಅದಕ್ಕೇ ಅವರು ಈ ಕೊಲೆ ಪ್ರಕರಣದ ವಿಚಾರಣೆ ತಮಿಳುನಾಡು ನ್ಯಾಯಾಲಯದ ಬದಲು ಪುದುಚೆರಿ ನ್ಯಾಯಾಲಯದಲ್ಲಿ ನಡೆಯಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಶ್ರೀಗಳ ಮನವಿ ಪುರಸ್ಕೃತವಾದ ಮೇಲೆ ಪುದುಚೆರಿ ಸೆಷನ್ಸ್ ನ್ಯಾಯಾಲಯ ಈ ಕೊಲೆ ಪ್ರಕರಣದ ಸಮಗ್ರ ವಿಚಾರಣೆ ಕೈಗೆತ್ತಿಕೊಂಡು ೧೮೯ ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಆ ಪೈಕಿ ೮೩ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದರು. ಕೊನೆಗೆ ಪ್ರಕರಣದ ೨೪ ಸಾಕ್ಷಿಗಳ ಪೈಕಿ ಯಾರೊಬ್ಬರೂ ಆರೋಪಿಗಳನ್ನು ಗುರುತಿಸುವಲ್ಲಿ ಸಫಲರಾಗಲಿಲ್ಲ. ಸ್ವತಃ ಕೊಲೆಯಾದ ಶಂಕರರಾಮನ್ ಅವರ ಪತ್ನಿ ಪದ್ಮಾ, ಪುತ್ರ ಆನಂದ್ ಶರ್ಮಾ, ಪುತ್ರಿ ಉಮಾ ಮೈತ್ರೇಯಿ, ಸಹೋದ್ಯೋಗಿ ಗಣೇಶ್, ದೊರೈಕನ್ನು, ಕುಪ್ಪುಸ್ವಾಮಿ ಮೊದಲಾದ ಫಿರ್ಯಾದಿಗಳು ಕೂಡ ಕೊಲೆಯ ಹಿಂದಿನ ಉzಶವೇನು ಎಂಬುದನ್ನು ನ್ಯಾಯಪೀಠದ ಮುಂದೆ ವಿವರಿಸುವಲ್ಲಿ ವಿಫಲರಾದರು. ಸಾಕ್ಷಿ ಹೇಳಲು ಪೊಲೀಸರು ಒತ್ತಡ ಹೇರಿ, ಬಲಾತ್ಕಾರವಾಗಿ ಕರೆಸಿದ್ದ ಇಬ್ಬರು ಕ್ರಿಮಿನಲ್ ಹಿನ್ನೆಲೆಯ ಸಾಕ್ಷಿಗಳಂತೂ ನ್ಯಾಯಾಲಯದೆದುರೇ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರು ಬಲವಂತವಾಗಿ ಹೀಗೇ ಹೇಳಬೇಕೆಂದು ತಮ್ಮ ಮೇಲೆ ಒತ್ತಡ ತಂದಿದ್ದಾರೆಂದು ಅವರು ಹೇಳಿಕೆ ನೀಡಿದ್ದರು. ಕಂಚಿಶ್ರೀಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕೆಂದು ಹೆಣೆಯಲಾಗಿದ್ದ ಷಡ್ಯಂತ್ರವೊಂದು ಕೊನೆಗೂ ವಿಫಲಗೊಂಡಿತು. ಮೊನ್ನೆ ನ. ೨೭ರಂದು ಪುದುಚೆರಿ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪು ಇದಕ್ಕೆ ಸಾಕ್ಷಿಯಾಯಿತು. ೫ ವರ್ಷಗಳ ಹಿಂದೆಯೇ, ಅಂದರೆ ೨೦೦೪ರ ನ. ೨೪ರಂದು ಗುರುಮೂರ್ತಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬರೆದ ‘ಖಿhe ಅಚಿse is ಆeಚಿಜ. Who ತಿiಟಟ ಜo ಣhe ಈuಟಿeಡಿಚಿಟ ಚಿಟಿಜ Wheಟಿ?’ ಎಂಬ ಲೇಖನ ಕೊನೆಗೂ ನಿಜವಾಗಿದೆ. ನ್ಯಾಯಾಧೀಶರು ಪ್ರಕಟಿಸಿದ ತೀರ್ಪನ್ನು ವಾಸ್ತವವಾಗಿ ಗುರುಮೂರ್ತಿಯವರೇ ೫ ವರ್ಷಗಳ ಹಿಂದೆಯೇ ಸಾರ್ವಜನಿಕರಿಗೆ ಬಯಲು ಮಾಡಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಕಾಂಗ್ರೆಸ್‌ನ ಅನೇಕ ಹಿರಿಯ ಧುರೀಣರು, ಜಯಲಲಿತಾ ಮೊದಲಾದವರಿಗೆ ಕಂಚಿಯ ಹಿರಿಯ ಶ್ರೀಗಳಾದ ಜಯೇಂದ್ರ ಸರಸ್ವತಿ ಸ್ವತಃ ರಾಜಗುರುವಾಗಿದ್ದರು. ಇನ್ನೂ ಅಸಂಖ್ಯಾತ ಗಣ್ಯರಿಗೆ ಅವರು ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು. ಅಂತಹ ಮಹಾತ್ಮರ ವಿರುದ್ಧ ಕೊಲೆ ಪ್ರಕರಣದ ಪಾಶ ಹೇಗೆ ಸುತ್ತಿಕೊಂಡಿತು ಎಂಬುದೇ ಒಂದು ಅಚ್ಚರಿಯ ಸಂಗತಿ. ಸಮಾಜಕ್ಕೆ ಎಂದೂ ಕೇಡು ಬಗೆಯದ, ಸದಾಸರ್ವದಾ ಎಲ್ಲರಿಗೂ ಒಳಿತನ್ನೇ ಬಯಸುವ ಒಬ್ಬ  ಶ್ರೇಷ್ಠ ಸಂತನಿಗೆ ಕಳಂಕ ಹಚ್ಚುವ ಹಿಂದೆ ಯಾವ ದುಷ್ಟ ಶಕ್ತಿಗಳಿದ್ದವು ಎಂಬುದು ಈಗಲಾದರೂ ಬಯಲಾಗಬೇಕಾದ ಅಗತ್ಯವಿದೆ. ತಮಿಳುನಾಡಿನ ೨ ಪ್ರಮುಖ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಶ್ರೀಗಳು ಬಲಿಪಶುವಾದರೆ? ಮಠದಿಂದ ಮಾಡಿದ್ದ ಕರೆಗಳು, ಶಂಕರರಾಮನ್ ಮಠಕ್ಕೆ ಬರೆದಿದ್ದ ಆಕ್ಷೇಪಾರ್ಹ ಪತ್ರಗಳು, ಬ್ಯಾಂಕ್ ವಹಿವಾಟುಗಳು ಮತ್ತು ತಪ್ಪೊಪ್ಪಿಗೆ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಕಂಚಿಶ್ರೀಗಳಿಗೆ ಶಿಕ್ಷೆ ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದು ಎಷ್ಟರಮಟ್ಟಿಗೆ ಸಮಂಜಸ? ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಾಗಿದೆ.

ಕೊಲೆಯಾದ ಶಂಕರರಾಮನ್‌ಗೆ ಚಂದ್ರಶೇಖರಾನಂದ ಸರಸ್ವತಿ ಸ್ವಾಮೀಜಿ ಕಂಚಿ ಪೀಠಾಧಿಪತಿಯಾಗಿದ್ದಾಗ ಮಠದಲ್ಲಿ ಪ್ರಾಮುಖ್ಯತೆ ಇತ್ತು. ೧೯೯೪ರಲ್ಲಿ ಶ್ರೀಗಳು ದೈವಾಧೀನರಾದ ಬಳಿಕ ರಾಮನ್‌ಗೆ ಮಠದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಜೊತೆಗೆ ೨೦೦೧ರಲ್ಲಿ ಜಯೇಂದ್ರ ಸರಸ್ವತಿ ಶ್ರೀಗಳ ಜೊತೆಗೆ ಮುನಿಸಿಕೊಂಡಿದ್ದ ಶಂಕರರಾಮನ್ ಮಠದ ಆರ್ಥಿಕ ವ್ಯವಹಾರಗಳ ಬಗ್ಗೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಇಷ್ಟರಿಂದಲೇ ರಾಮನ್ ಹತ್ಯೆಯ ಹಿಂದೆ ಕಂಚಿ ಶ್ರೀಗಳ ಪಾತ್ರವಿದೆ ಎಂದು ಪೊಲೀಸರು ಸಾಬೀತುಪಡಿಸಲು ಹೊರಟಿದ್ದು ಎಂತಹ ವಿಪರ್ಯಾಸ!

ಕಳಂಕಮುಕ್ತರಾಗಿರುವ ಕಂಚಿ ಹಿರಿಯ ಶ್ರೀಗಳದು ಮಾತ್ರ ಈಗಲೂ ನಿರ್ಲಿಪ್ತಭಾವ. ‘ಅದೊಂದು ಅಗ್ನಿ ಪರೀಕ್ಷೆಯ ಸಂದರ್ಭವಾಗಿತ್ತು. ಏನೇನೋ ನಡೆದು ಹೋಯಿತು. ಆದರೆ ಸತ್ಯ ಈ ಅಗ್ನಿ ಪರೀಕ್ಷೆಯಲ್ಲಿ ಪುಟವಿಟ್ಟ ಚಿನ್ನವಾಗಿ ಹೊರಗೆ ಬರುವ ನಂಬಿಕೆ ನಮಗಿತ್ತು’ ಎಂದು ಬಿಡುಗಡೆಯ ಬಳಿಕ ಅವರು ಹೇಳಿದ್ದಾರೆ. ‘ನಿಮ್ಮ ಮೇಲೆ ವೃಥಾ ಕೊಲೆ ಆರೋಪ ಹೊರಿಸಿದವರ ವಿರುದ್ಧ ನೀವು ಕ್ರಮಕ್ಕೆ ಮುಂದಾಗುತ್ತೀರಾ?’ ಎಂದು ಪ್ರಶ್ನಿಸಿದಾಗ ೭೯ರ ಹರೆಯದ ಹಿರಿಯ ಶ್ರೀಗಳು ಹೇಳಿದ್ದು: ‘ಈಗಾಗಲೇ ೯ ವರ್ಷ ಅಮೂಲ್ಯ ಸಮಯ ವ್ಯರ್ಥವಾಗಿದೆ. ನಮಗಿನ್ನೂ ಮಾಡಬೇಕಾದ್ದು ಬಹಳಷ್ಟಿದೆ. ನಮ್ಮ ಗುರುವಿನ ಆಶಯಗಳನ್ನು ಈಡೇರಿಸುವತ್ತ ಉಳಿದ ಜೀವಿತಾವಧಿಯನ್ನು ನಾವು ಬಳಸಬೇಕಾಗಿದೆ.’ ಶ್ರೀಗಳ ಈ ಹೇಳಿಕೆಯಲ್ಲಿ ಯಾರದೇ ವಿರುದ್ಧ ಪ್ರತೀಕಾರದ ಭಾವವಿಲ್ಲ. ತಮ್ಮ ಮೇಲೆರಗಿದ ಕೊಲೆ ಆರೋಪ ಒಂದು ಕೆಟ್ಟ ಕನಸೆಂದು ಭಾವಿಸುವ ನಿರ್ಲಿಪ್ತ ಮನಃಸ್ಥಿತಿ ಅವರದ್ದು. ಈ ಪ್ರಕರಣದಿಂದ ಕಂಚಿ ಕಾಮಕೋಟಿ ಪೀಠದ ಘನತೆ, ಗೌರವಕ್ಕೆ ಖಂಡಿತ ಹಾನಿಯಾಗಿಲ್ಲ. ಏಕೆಂದರೆ ಅನೇಕ ಪರಕೀಯ ಆಕ್ರಮಣಕಾರಿಗಳು ನಮ್ಮ ದೇಶದ ಮೇಲೆ ದಾಳಿ ನಡೆಸಿ ಹಲವಾರು ದೇಗುಲಗಳನ್ನು ಭಗ್ನಗೊಳಿಸಿದ್ದಾರೆ. ಇವತ್ತು ಆ ದೇಗುಲಗಳನ್ನು ನೋಡಿದಾಗ ನಿಮಗೆ ನೆನಪಾಗುವುದು – ಆ ಕೆಟ್ಟ ಆಕ್ರಮಣಕಾರಿಗಳು ಹಾಗೂ ಅವರ ಕುಕೃತ್ಯ. ಅದೇ ರೀತಿ ಮಠದ ಘನತೆ, ಗೌರವಕ್ಕೆ ಮಸಿ ಬಳಿಯಲು ಹೊಂಚು ಹಾಕಿದವರ ಕೆಟ್ಟ ನೆನಪು ಜನರಿಗೆ ಸದಾಕಾಲಕ್ಕೂ ಇರುತ್ತದೆ. ಮಠದ ಘನತೆಗೆ ಕುಂದಾಗಿದೆಯೆಂದು ಯಾರಿಗೂ ಅನಿಸುವುದಿಲ್ಲ.

ಕಾಕತಾಳೀಯವೆಂಬಂತೆ, ಕಂಚಿ ಕಾಮಕೋಟಿ ಶ್ರೀಗಳನ್ನು ಬಂಧಿಸಿ ಜೈಲಿಗಟ್ಟಿದ ಸಂದರ್ಭದಲ್ಲೇ ತಮಿಳುನಾಡಿಗೆ ಭೀಕರ ಸುನಾಮಿ ಬಂದಪ್ಪಳಿಸಿತು. ನೂರಾರು ಜನರು ಪ್ರಾಣ ಕಳೆದುಕೊಂಡರು. ಭಾರೀ ಆಸ್ತಿಪಾಸ್ತಿ ನಾಶವಾಯಿತು. ಶ್ರೇಷ್ಠ ಸಂತನೊಬ್ಬನನ್ನು ಅನ್ಯಾಯವಾಗಿ ಬಂಧಿಸಿದ್ದಕ್ಕೆ ಪ್ರಕೃತಿ ಮಾತೆ ಕೂಡ ಕೆಂಡಾಮಂಡಲವಾದಳೆ? ಆದರೆ ಅಂತಹ ದುರಂತದ ಸಂದರ್ಭದಲ್ಲಿ ಸಂತ್ರಸ್ತರನ್ನು ಸಂತೈಸಲು ನನಗೆ ಸಾಧ್ಯವಾಗಲಿಲ್ಲವಲ್ಲ ಎಂಬ ವಿಷಾದ ಕಂಚಿ ಶ್ರೀಗಳಿಗೆ ಈಗಲೂ ಇದೆ.

ಪುದುಚೆರಿ ನ್ಯಾಯಾಲಯವೇನೋ ಕಂಚಿ ಶ್ರೀಗಳನ್ನು ಕಳಂಕಮುಕ್ತರನ್ನಾಗಿಸಿದೆ. ಆದರೆ ಶಂಕರರಾಮನ್ ಹತ್ಯೆ ಮಾಡಿದವರಾರು? ಆ ಹತ್ಯೆಗೆ ಪ್ರಚೋದಿಸಿದ್ದು ಯಾರು? ಈ ಪ್ರಶ್ನೆಗಳು ಮಾತ್ರ ಹಾಗೆಯೇ ಉಳಿದಿವೆ. ಸರ್ಕಾರ ಇದಕ್ಕೆ ಉತ್ತರ ಹುಡುಕಲೇಬೇಕು. ನಿಜವಾದ ಆರೋಪಿಗಳನ್ನು ಬಯಲಿಗೆಳೆದಾಗಲೇ ಈ ಕೊಲೆ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ದೊರಕಬಹುದು.

ಬ್ಲರ್ಬ್: ಅನೇಕ ಪರಕೀಯ ಆಕ್ರಮಣಕಾರಿಗಳು ನಮ್ಮ ದೇಶದ ಮೇಲೆ ದಾಳಿ ನಡೆಸಿ ಹಲವಾರು ದೇಗುಲಗಳನ್ನು ಭಗ್ನಗೊಳಿಸಿದ್ದಾರೆ. ಇವತ್ತು ಆ ದೇಗುಲಗಳನ್ನು ನೋಡಿದಾಗ ನಿಮಗೆ ನೆನಪಾಗುವುದು – ಆ ಕೆಟ್ಟ ಆಕ್ರಮಣಕಾರಿಗಳು ಹಾಗೂ ಅವರ ಕುಕೃತ್ಯ. ಅದೇ ರೀತಿ ಮಠದ ಘನತೆ, ಗೌರವಕ್ಕೆ ಮಸಿ ಬಳಿಯಲು ಹೊಂಚು ಹಾಕಿದವರ ಕೆಟ್ಟ ನೆನಪು ಜನರಿಗೆ ಸದಾಕಾಲಕ್ಕೂ ಇರುತ್ತದೆ. ಮಠದ ಘನತೆಗೆ ಕುಂದಾಗಿದೆಯೆಂದು ಯಾರಿಗೂ ಅನಿಸುವುದಿಲ್ಲ.

 

Leave a Reply

Your email address will not be published.

This site uses Akismet to reduce spam. Learn how your comment data is processed.