ಪ್ರೋ. ನಂದಿನಿ ಲಕ್ಷ್ಮೀಕಾಂತ, ಮಾಧ್ಯಮ ಸಂಶೋಧಕರು ಹಾಗೂ ಲೇಖಕರು, ರಾಷ್ಟ್ರೀಯ ಸಹ ಕಾಯ೯ದಶಿ೯, ವಿದ್ಯಾಭಾರತಿ


ರಾಜ್ಯದೆಲ್ಲೆಡೆ ರಾಷ್ಟ್ರೀಯ ಶಿಕ್ಷಣ ನೀತಿ – ಎನ್ ಇ ಪಿ 2020 ಅಳವಡಿಕೆಯ ಕುರಿತು ಹಿಂದೆಜ್ಜೆಯಿಡಲು ಹಠ ತೊಟ್ಟಿರುವ ರಾಜ್ಯ ಸಕಾ೯ರದ ನಿಲುವಿನ ವಿರುದ್ಧದ ಹೋರಾಟಕ್ಕೆ ಇದೀಗ ಮಕ್ಕಳು ಹಾಗೂ ಪಾಲಕರ ಆಗಮನವಾಗಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಎನ್ ಇ ಪಿ ಯ ಅಳವಡಿಕೆಯಾಗಿ 3 ವಷ೯ಗಳು ಕಳೆದಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರಲ್ಲಿ ಕಾಣತೊಡಗಿದ ಬದಲಾವಣೆ ಹಾಗೂ ಉನ್ನತ ಶಿಕ್ಷಣದಲ್ಲಿ ಹೊಸದನ್ನು ಕಲಿಯುವ ಅವಕಾಶದ ರುಚಿಯನ್ನು ಕಂಡ ಶಿಕ್ಷಣ ಕ್ಷೇತ್ರ, ಬದಲಾವಣೆಯ ಹಾದಿಯಲ್ಲಿಯೇ ಸಾಗಬಯಸಿದೆ ಎನ್ನುವುದನ್ನು ಈ ಅಭಿಯಾನ ಖಚಿತ ಪಡಿಸಿದೆ. ಶಿಕ್ಷಣಕ್ಕೆ ಹೊಸ ರೂಪ ನೀಡುವ ವ್ಯವಸ್ಥೆಗೆ ಶಿಕ್ಷಣ ಸಂಸ್ಥೆಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರಯತ್ನದ ಬೆಂಬಲಕ್ಕೆ ಪೀಪಲ್ಸ್ ಫೋರಮ್ ಫಾರ್ ಎಡುಕೇಷನ್, ವಿದ್ಯಾಭಾರತಿ, ಎಬಿವಿಪಿ, ಅಖಿಲ ಭಾರತೀಯ ಶೈಕ್ಷಣಿಕ ಮಹಾಸಂಘ ಹೀಗೆ ರಾಜ್ಯದ ವಿವಿಧ ಶಿಕ್ಷಣ ಸಂಘಟನೆಗಳು ತಮ್ಮ ಬೆಂಬಲ ಸೂಚಿಸಿದ್ದು, ರಾಜ್ಯದಲ್ಲಿ ಇದೀಗ ಕೋಟಿ-ಕೋಟಿ ಸಂಖ್ಯೆಯಲ್ಲಿ ಎಲ್ಲ ಸ್ತರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾಥಿ೯ಗಳು ಹಾಗೂ ಅವರ ಪಾಲಕರು ಎನ್ ಇ ಪಿ – 2020ರ ಅಳವಡಿಕೆಯ ಅಗತ್ಯತೆಯ ಪರ ಸಹಿ ಸಂಗ್ರಹ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಕೇಸರೀಕರಣಕ್ಕಾಗಲೀ , ಕಾಂಗ್ರೆಸ್ಸೀಕರಣಕ್ಕಾಗಲೀ ಅವಕಾಶ ನೀಡುವುದಿಲ್ಲ , ಎಂಬ ಪ್ರಾಥಮಿಕ ಶಿಕ್ಷಣ ಸಚಿವರ ಹೇಳಿಕೆ, ಔದ್ಯೋಗಿಕ ಮಾಹಿತಿಯನ್ನು ವಿದ್ಯಾಥಿ೯ಗಳಿಗೆ ಎಸ್ ಇ ಪಿ ನೀಡುತ್ತದೆ ಎಂಬ ಉನ್ನತ ಶಿಕ್ಷಣ ಸಚಿವರ ಭರವಸೆಯ ಮಾತುಗಳು , ಇದಕ್ಕೆ ವಿರುದ್ಧವಾಗಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬ್ರಿಟಿಷ್ ರ ಕೊಡುಗೆ ಮಹತ್ವವೆಂದು ವೇದಿಕೆಯೊಂದರಲ್ಲಿ ಸ್ಮರಿಸಿದ ಮುಖ್ಯಮಂತ್ರಿಯವರು, ಇನ್ನು 6 ತಿಂಗಳುಗಳಲ್ಲಿ ವರದಿ ಸಿದ್ಧಪಡಿಸುತ್ತೇವೆ ಎಂಬ ರಾಜ್ಯ ಶಿಕ್ಷಣ ಸಮಿತಿಗೆ ನೇಮಕ ಗೊಂಡಿರುವ ಶಿಕ್ಷಣ ತಜ್ಞರ ಹೇಳಿಕೆಗಳಿಂದ ವಿಶೇಷವಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ಕಳವಳಕ್ಕೀಡಾಗಿರುವ ಕಾರಣವೇ ಸಹಿಯ ಈ ಅಭಿಯಾನಕ್ಕೆ ಚಾಲನೆ ದೊರೆತಿದೆ ಎ೦ದು ಬೇರೆಯಾಗಿ ಹೇಳಬೇಕಿಲ್ಲ.
ವಿಶ್ವದಲ್ಲೇ ಅತ್ಯುತ್ತಮವಾಗಿದ್ದ ಭಾರತೀಯ ಶಿಕ್ಷಣ ಪದ್ಧತಿಗೆ ಬರೆ ಎಳೆದು, ಕೇವಲ ಪಠ್ಯ ಪುಸ್ತಕ ಸೀಮಿತ ಶಿಕ್ಷಣಕ್ಕೆ ನಾಂದಿ ಹಾಕಿದ ವಸಾಹತುಗಾರರನ್ನು ನೆನಪಿಸಿಕೊ೦ಡ ಮುಖ್ಯಮಂತ್ರಿಗಳಿ೦ದ ನಾವು ಏನನ್ನು ತಾನೇ ನಿರೀಕ್ಷಿಸಬಹುದು ಎನ್ನುವ ಭಾವ, ಜೊತೆಗೆ ಸಾಮಾನ್ಯವಾಗಿ ಭಾರತೀಯ ಹಿನ್ನೆಲೆಯ ಶಿಕ್ಷಣವನ್ನು ಕೇಸರೀಕರಣವೆ೦ದು ಬಣ್ಣ ಬಳೆಯುವ ರಾಜಕಾರಣಿಗಳ ಮನೋಭಾವ ಪಾಲಕರನ್ನು – ಶಾಲೆಗಳನ್ನು ನಡೆಸುತ್ತಿರುವ ಹಿ೦ದೂ ಮಠಾಧೀಶರಲ್ಲಿ ತಳಮಳವನ್ನುಂಟುಮಾಡಿದೆಯೆನ್ನಬಹುದು. ವಿದ್ಯಾ ದೇವತೆ ಸರಸ್ವತಿಯ ಪ್ರಾಥ೯ನೆಯನ್ನು ವಿದ್ಯಾಥಿ೯ಗಳು ಶಾಲೆಗಳಲ್ಲದೆ ಇನ್ನೆಲ್ಲಿ ಮಾಡಬೇಕು? ಹೀಗೆಯೇ ಮುಂದುವರೆದರೆ ಮನೆಗಳಲ್ಲಿ ನಡೆವ ಹಬ್ಬದ ಪರಂಪರೆಗಳಿಗೆ, ದಸರೆಯಲ್ಲಿ ನಡೆಯುವ ಸರಸ್ವತಿಯ ಪೂಜೆಗೂ ಈ ರಾಜಕಾರಣಿಗಳು ಕೇಸರೀಕರಣದ ನೆಪದಲ್ಲಿ ಅಡ್ಡಬಂದಾರೆಂಬ ಭಯ ಇದೀಗ ಪಾಲಕರನ್ನ ಕಾಡುತ್ತಿದೆ. ಜೊತೆಗೆ, ರಾಜ್ಯದ ಸಕಾ೯ರಿ ಮತ್ತು ಸಕಾ೯ರದ ಶಿಕ್ಷಣ ಮಂಡಳಿಯ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ ಅಭ್ಯಸಿಸುತ್ತಿರುವ ಮಕ್ಕಳು, ರಾಷ್ಟ್ರೀಯ ಸ್ತರದ ಶಿಕ್ಷಣ ವಾಹಿನಿಯಿಂದ ವಂಚಿತರಾಗುವ ಭೀತಿಯನ್ನು ಅನುಭವಿಸುತ್ತಿರುವ ಹಿನ್ನಲೆಯಲ್ಲೆಯೂ ಈ ಅಭಿಯಾನಕ್ಕೆ ಚಾಲನೆ ನೀಡಿದೆಯೆನ್ನಬಹುದು.


ಎನ್ ಇ ಪಿ 2020 ರ ಸಿದ್ಧತೆಯ ಸ೦ದಭ೯ದಲ್ಲಿ ದೇಶದೆಲ್ಲಡೆ ನಡೆದ ವಿವಿಧ ಹ೦ತಗಳ ಅಭಿಪ್ರಾಯ ಸ೦ಗ್ರಹಣದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊ೦ಡ ಅ೦ದು ಅಧಿಕಾರದಲ್ಲಿದ್ದ ಸಿದ್ಧರಾಮಯ್ಯನವರ ನೇತೃತ್ವದ ಸಕಾ೯ರವೇ ಈಗ ಮತ್ತೆ ಅಧಿಕಾರಕ್ಕೆ ಬ೦ದ ಮೇಲೆ ಶಿಕ್ಷಣದ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವುದಕ್ಕೆ ಕೇವಲ ರಾಜಕಾರಣದ ಲೇಪನವೇ ಹೊರತು ಶಿಕ್ಷಣದ ಕುರಿತು ಕಾಳಜಿಯಲ್ಲ ಎ೦ದು ಪಾಲಕರು, ವಿದ್ಯಾಥಿ೯ಗಳು ಮನಗ೦ಡ೦ತೆ ಕಾಣುತ್ತದೆ. ಕಾರಕೂನರನ್ನು ಸಿದ್ಧಪಡಿಸುವತ್ತದ ಕೇವಲ ಪಠ್ಯಕ್ರಮ ಆಧಾರಿತದ ವಿದ್ಯೆಯ ಅನಿವಾರ್ಯತೆಯನ್ನು ಸೃಷ್ಟಿಸಿದ ಪಾಶ್ಚತ್ಯರ ನಿಲುವನ್ನು ಬದಲಾದ ಇ೦ದಿನ ಪರಿಸ್ಥಿತಿಯಲ್ಲೂ ಚುನಾವಣೆಯ ನ೦ತರ ಆಡಳಿತಕ್ಕೆ ಬ೦ದ ಸಕಾ೯ರದ ರಾಜಕೀಯ ಮುಖ೦ಡರು ಇ೦ದಿಗೂ ಅವರನ್ನೇ ಹೊಗಳಿ ಕೊ೦ಡಾಡುವ ಮನೋಭಾವ ತೋರುತ್ತಿರುವುದು ನಮ್ಮ ಮಕ್ಕಳು ಅದರಲ್ಲೂ ಸಕಾ೯ರಿ ಶಾಲೆಗಳಲ್ಲಿ ಕಲಿವ ಮಕ್ಕಳು ಜಾಗತಿಕ ಮಟ್ಟದ ಸ್ಪದೆ೯ಗೆ ಸಿದ್ಧರಾಗುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಶಿಕ್ಷಣದಿ೦ದ ವಂಚಿತರಾಗಬೇಕೇ ಎನ್ನುವ ಆತಂಕ ಪಾಲಕರ ಮನದಲ್ಲಿ ಬಂದಿದೆ.


ನಮ್ಮ ದೇಶದ ಸ೦ಪತ್ತನ್ನು, -ಸ೦ಸ್ಕೃತಿಯನ್ನು ಲೂಟಿ ಮಾಡಿ ದಬ್ಬಾಳಿಕೆಯ ಆಡಳಿತವನ್ನು ನಡೆಸುತ್ತಿದ್ದವರ ವಿರುದ್ಧ ಹೋರಾಡಿದ ವೀರರ ಕುರಿತು ಪರಿಚಯಿಸುವ ಪಾಪಠ್ಯದಿಂದಠಗಳನ್ನು ‘ಕಿತ್ತೋಗೆದವರು’; ಭಾರತದ ಚಿಕಿತ್ಸಾ ಪದ್ದತಿಯನ್ನು ತೆಗೆದು, ಜಾತೀಯತೆಯನ್ನು ಬಿಂಬಿಸುವ ಪಾಠವನ್ನು ಅಳವಡಿಸಿದವರು; ಭಾರತದ ವೈವಿಧ್ಯತೆಯನ್ನು ತಿಳಿಸಿಕೊಡುವ, ತ್ಯಾಗ ಮಾಡಿದ ಭಾರತದ ನಿಜ ಇತಿಹಾಸ, ಕಲೆ ಸಾಹಿತ್ಯವನ್ನು ಮಕ್ಕಳಿಗೆ ತಿಳಿಸಿಕೊಡುವ ಪಾಠಗಳನ್ನು ಬದಲಿಸಿದ ಸಕಾ೯ರದ ನಡೆ ಪಾಲಕರಲ್ಲಿ ಎಚ್ಚರದ ಗಂಟೆಯನ್ನು ಮೊಳಗಿಸಿದೆ. ಜಾತೀಯತೆಯ ಮನಸ್ಥಿತಿಯನ್ನು ಮೊಳಕೆಯಲ್ಲಿಯೇ ತುಂಬಿ, ನಮ್ಮ ಸಂಸ್ಕೃತಿ-ಇತಿಹಾಸ ಕುರಿತು ತಪ್ಪು ಮಾಹಿತಿಯನ್ನು ನೀಡುವತ್ತದ ಶಿಕ್ಷಣ ನೀಡುವ ಪ್ರಯತ್ನ ಪಾಲಕರನ್ನು ಗಂಭೀರವಾಗಿಸಿದೆ . ಇದಕ್ಕೆ ಕಾರಣ ತಾವು ಪಡೆದ ಶಿಕ್ಷಣ ಹಾಗೂ ನಂತರ ಜೀವನ ರೂಪಿಸಿಕೊಳ್ಳಲು ಉಪಯೋಗಕ್ಕೆ ಬಾರದ ಪದವಿ – ತಮ್ಮ ಅನುಭವ ಮಕ್ಕಳಿಗೇಕೆ ಎನ್ನುವ ಭಾವ ಮೂಲ ಕಾರಣವಿರಬೇಕು ಅಲ್ಲವೇ?


ಸ್ವಾತ೦ತ್ರ್ಯದ ಅಮೃತೋತ್ಸವ ಆಚರಿಸಿರುವ ನಾವು ಇದುವರೆಗೂ ಕೇವಲ ಎರಡು ರಾಷ್ರೀಯ ಶಿಕ್ಷಣ ನೀತಿಯನ್ನು ನೋಡಿದ್ದೇವೆ. ಹೊಸ ಶಿಕ್ಷಣ ನೀತಿ ಎನ್ ಇ ಪಿ -೨೦೨೦ ಮೂರನೇಯದ್ದು. ಕಾ೦ಗ್ರೆಸ್ ಪಕ್ಷದ ನೇತೃತ್ವದಲ್ಲಿ ರಚಿತವಾದ ಮೊದಲೆರಡೂ ಶಿಕ್ಷಣ ನೀತಿಗಳನ್ನು ಒಮ್ಮೆ ದೀಘ೯ವಾಗಿ ಅಧ್ಯಯನಿಸಿ ನೋಡಿದಾಗ ಆ ಶಿಕ್ಷಣ ನೀತಿಗಳು ಎಲ್ಲರನ್ನೂ ಒಳಗೊಳ್ಳುವ, ಸಮಾನ ರೂಪದ ಹಾಗೂ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ಸಫಲವಾದವೇ? ಎ೦ಬ ಪ್ರಶ್ನೆಗೆ ಉತ್ತರ ನಕಾರಾತ್ಮಕವಾಗಿದೆ .


ಎಲ್ಲರನ್ನೂ ತಲುಪುವ ಶಿಕ್ಷಣವನ್ನು ಸಮಾಜಕ್ಕೆ ನೀಡುವ ಉದ್ದೇಶಕ್ಕೆ ಪ್ರಾಮುಖ್ಯತೆಯನ್ನು ನೀಡುವ ಮನೋಭಾವ ಮೊದಲಿನ ಎರಡೂ ಶಿಕ್ಷಣ ನೀತಿಗಳ ಸಲಹೆಗಳಲ್ಲಿ ಕೇವಲ ಮೇಲ್ನೋಟಕ್ಕೆ ಸೀಮಿತವೆಂದು ನಮಗೆ 2020ರ ಎನ್ ಇ ಪಿ ಯನ್ನು ಗಮನಿಸಿದಾಗ ಅನ್ನಿಸುತ್ತದೆ. ಇದುವರೆಗಿನ ಪ್ರಯತ್ನದಲ್ಲಿ ಎಲ್ಲರನ್ನೂ ಸಾಕ್ಷರಸ್ಥರನ್ನಾಗಿ ಮಾಡುವ ಪ್ರಯತ್ನ ಪ್ರಮುಖವೆನ್ನಿಸುತ್ತದೆಯೇ ಹೊರತು ಶಿಕ್ಷಿತರನ್ನಾಗಿ ಅಲ್ಲವೆನ್ನುವುದು ಸ್ಪಷ್ಠತೆ ಪಡೆಯುತ್ತದೆ. ಈ ಭಾವನೆಯನ್ನು ಇನ್ನೂ ವಿಸ್ತರಿಸಬೇಕೆಂದರೆ ನಮ್ಮ ಮಕ್ಕಳಿಗೆ ದೊರೆವ ಶಿಕ್ಷಣ ಒಳಗೊಳ್ಳುವಿಕೆ, ಸಮಾನತೆ ಹಾಗೂ ಗುಣಾತ್ಮಕ ಸ್ವರೂಪದ್ದಾಗಿದ್ದು, ಅದು ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸುವಂತಾಗಬೇಕು ಅಲ್ಲವೇ? ಈ ಭಾವ 2015ರಲ್ಲಿ ವಿಶ್ವದಾದ್ಯಂತ ಅಳವಡಿಕೆಯಾದ ಸುಸ್ಥಿರ ಅಭಿವೃದ್ಧಿ ಗುರಿಗಳ ಅಳವಡಿಕೆಗಾಗಿ ಬಂದದ್ದು ಎನ್ನುವ ವಾದವನ್ನು ಮು೦ದಿಟ್ಟುಕೊ೦ಡರೂ, ಸ್ವತಂತ್ರ ಭಾರತದಲ್ಲಿ ಶಿಕ್ಷಣದ ಮೂಲ ಉದ್ದೇಶ ಎಲ್ಲರನ್ನೂ ಒಳಗೊಳ್ಳುವುದು ಮತ್ತು ಸಮಾನ ಶಿಕ್ಷಣವನ್ನು ನೀಡುವುದು ಎ೦ಬುದಾಗಿತ್ತು ಎನ್ನುವತ್ತಲೇ ವಾದವನ್ನು ತಿರುಗಿಸಿದರೂ ಒಳಗೊಳ್ಳುವಿಕೆಯ ನಿಜಾಥ೯
ಕಲಿಸುವುದು ಮತ್ತು ಕಲಿಯುವ ನಿರಂತರತೆಯಲ್ಲಿ, ಅನುಭವ ನೀಡುವ ಶಿಕ್ಷಣದ ಮಾದರಿಯಲ್ಲಿ ಮತ್ತು ಮಕ್ಕಳ ಕಲಿಕಾ ಸಾಮಥ್ಯ೯ವನ್ನು ಕೇವಲ ಮೂರು ಗಂಟೆಗಳ ಪರೀಕ್ಷಾಪದ್ಧತಿಯಲ್ಲಿ ಅಳೆಯದೇ ಅವರ ಕಲಿಕಾ ಸಾಮಥ್ಯನ್ನು ಸತತ ಪರಿವೀಕ್ಷಣೆ ಮಾಡುವ ಪದ್ಧತಿಯನ್ನು ಅನುಸರಿಸುವುದು ಅಲ್ಲವೇ?


ಹಾಗಲ್ಲದೇ ನಾವು ಸಮಾನ ರೀತಿಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡುವತ್ತ ಗಮನಹರಿಸಲು ಉದ್ದೇಶಿಸಿದ್ದೆವು ಎಂದಾದಲ್ಲಿ ಮಕ್ಕಳ ಬುದ್ಧಿಮತ್ತೆಗೆ ಪೂರಕವಾದ ಶಿಕ್ಷಣವನ್ನು ಅವರ ಸಾಮಾಜಿಕ ಮತ್ತು ಆಥಿ೯ಕ ಸ್ವರೂಪದ ಹಿನ್ನಲೆಯ ಹೊರತಾಗಿಯೂ ನೀಡುವಂತೆ ಮಾಡಿದ್ದೇವೆ ಎಂದು ಎದೆಯುಬ್ಬಿಸಿ ಹೇಳಬಲ್ಲವೇ? ಪಾಲಕರ ಆಥಿ೯ಕ ಸಾಮಥ೯ಕ್ಕೆ ಅನುಸಾರ ಮಕ್ಕಳ ಶಿಕ್ಷಣವಾಗುತ್ತಿದೆಯೇ ಹೊರತು ಅವರ ಬುದ್ದಿಮತ್ತೆಯ ಸಾಮಥ್ಯ೯ಕ್ಕೆ ಅನುಸಾರವಾಗಿ ಅಲ್ಲ ಎನ್ನುವುದು ಕಬ್ಬಿಣದ ಕಡಲೆಯೇ ಅದರೂ ಅದನ್ನು ಎಲ್ಲರಿಗೂ ಸಮಾನ ಶಿಕ್ಷಣ ನೀಡುವತ್ತದ ಹೊಣೆ ಹೊತ್ತಿರುವ ಸಕಾ೯ರ ಅರಗಿಸಿಕೊಳ್ಳಲೇ ಬೇಕು. ಇನ್ನು ಗುಣಾತ್ಮಕ ಶಿಕ್ಷಣದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.


ಶತಮಾನಗಳ ಹಿಂದೆಯೇ ಆಚರಣೆಯಲ್ಲಿ ಗುಣಾತ್ಮಕ ಜ್ಞಾನಾರ್ಜನೆಯ ಸ್ವರೂಪ, ಸ್ವಾವಲಂಬನೆ, ಸ್ವಾಭಿಮಾನ, ಆತ್ಮಗೌರವ ನೀಡುವ ಶಿಕ್ಷಣ ಪದ್ಧತಿಯ ಮಾದರಿಯನ್ನು ಭಾರತ ಇಡೀ ಜಗತ್ತಿಗೆ ತೋರಿಸಿದೆ. ಔಪಚಾರಿಕ ಮತ್ತು ಅನೌಪಚಾರಿಕ ಎರಡೂ ವಿಧಿಯಲ್ಲಿ ನಡೆಯುತ್ತಿದ್ದ ಶಿಕ್ಷಣ ಕ್ರಮದಲ್ಲಿ ಅನೌಪಚಾರಿಕ ಶಿಕ್ಷಣ ಪದ್ದತಿಗೇ ಆದ್ಯತೆ ನೀಡಿದವರು ನಾವು ಭಾರತೀಯರು . ಭಾರತೀಯ ಸಂಸ್ಕೃತಿ, ಕಲೆಯನ್ನು ಪ್ರತಿಬಿಂಬಿಸುವ ಕುಶಲ ಕಲೆಗಳು, ನಮ್ಮ ಪೂರ್ವಿಕರು ನಡೆಸುತ್ತಿದ್ದ ವ್ಯವಹಾರಗಳಲ್ಲಿ ತೋರುತ್ತಿದ್ದ ಚತುರತೆ, ಎಲ್ಲವೂ ಅನೌಪಚಾರಿಕ ಶಿಕ್ಷಣದ ಫಲಶೃತಿ. ಅಂದರೆ ಶಿಕ್ಷಣ ಔಪಚಾರಿಕ ಮತ್ತು ಅನೌಪಚಾರಿಕ ಎರಡರ ಸಮ್ಮಿಳಿತವಾದರೆ ಗುಣಾತ್ಮಕ ಸ್ವರೂಪ ಪಡೆಯುತ್ತದೆ, ಆ ನಿಟ್ಟಿನಲ್ಲಿ ಪಡೆದ ಶಿಕ್ಷಣ ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಮಥ೯ವಾಗುತ್ತದೆ. ಶರವೇಗದ ತಾಂತ್ರಿಕ ಬದಲಾವಣೆಯ ಇಂದಿನ ದಿನದ ಅಗತ್ಯತೆ ತಕ್ಕ ಹಾಗೆ ಶಿಕ್ಷಣವನ್ನು ಆಯಾ ಪ್ರದೇಶದ ಸಂಸ್ಕೃತಿಗೆ ತಕ್ಕ ಹಾಗೆ ರೂಪಿಸಲು ಸಲಹೆ ಮಾಡಿರುವ ಎನ್ ಇ ಪಿ -2೦2೦ನ್ನು ರಾಜ್ಯ ಸಕಾ೯ರ ತಿರಸ್ಕರಿಸಲು ಕಾರಣವೇನು? ಕೇವಲ ಕಾರಕೂನರನ್ನು ಸೃಷ್ಠಿಮಾಡುವ ಶಿಕ್ಷಣ ಪದ್ಧತಿಯನ್ನೇ ಹೊಗಳುತ್ತ, ನಮ್ಮದಲ್ಲದ ಪದ್ಧತಿಗೇ ನಾವು ಅಂಟಿರಬೇಕೆಂಬ ಹಠವೇ?


ಶಿಕ್ಷಣ ಕೇವಲ ಪಠ್ಯಕ್ಕೇ ಸೀಮಿತವಾದೇ, ಜೀವನ ಕಲೆಗಳ ಮತ್ತು ಕೌಶಲ್ಯ ಕಲಿಕೆಯನ್ನೂ ಶಿಕ್ಷಣದಲ್ಲಿ ಅಳವಡಿಸುವ , ಸಾ೦ಪ್ರದಾಯಿಕ ಕಲೆಗಳ ಪುನರುತ್ತಾನದತ್ತ ಶ್ರಮಿಸುವ ಎನ್ ಇ ಪಿ -2೦2೦ನ್ನು ರಾಜ್ಯ ತಿರಸ್ಕರಿಸುವ ನಿಣ೯ಯಕ್ಕೆ ಕೇವಲ ರಾಜ್ಯ ಶಿಕ್ಷಣ ನೀತಿಯನ್ನು ತರುವುದು ಉತ್ತರವೆನಿಸದು. ಪಾಲಕರಿಗೆ, ಮಕ್ಕಳಿಗೆ ಮತ್ತು ಉನ್ನತ ಶಿಕ್ಷಣದ ವಿದ್ಯಾಥಿ೯ಗಳು ಒಪ್ಪುವ ಸೂಕ್ತ ಕಾರಣ ನೀಡುವುದು ಸಕಾ೯ರದ ಜವಾಬ್ದಾರಿ ಕೂಡ. ಶಿಕ್ಷಣದಲ್ಲಿ ರಾಜಕಾರಣದ ಛಾಯೆ ತರಲಾಗದು. ಹಿಂದಿನ ಶಿಕ್ಷಣ ನೀತಿಗಳಿಗೆ ಯಾವುದೇ ರಾಜ್ಯ ಸಕಾ೯ರಗಳು ವಿರೋಧಿಸಿರುವ ಉದಾಹರಣೆಗಳಿಲ್ಲ. ರಾಷ್ಟ್ರಕ್ಕೊಂದೇ ಶಿಕ್ಷಣ ನೀತಿ ಎನ್ನುವ ತಮ್ಮದೇ ಪಕ್ಷದ ರಾಷ್ಟ್ರೀಯ ನಾಯಕರ ಕನಸನ್ನು ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಧಿಕ್ಕರಿಸುವ ಆಲೋಚನೆ ಬಂದಿರುವುದಕ್ಕೂ ಆಡಳಿತ ಪಕ್ಷ ತಮ್ಮ ಪಕ್ಷದ ಹೈಕಮಾಂಡ್ಗೆ ಉತ್ತರ ನೀಡಬೇಕು. ಅಥವಾ ಆ ಪಕ್ಷದ ಇಂದಿನ ರಾಷ್ಟ್ರೀಯ ನಾಯಕರೂ ತಮ್ಮ ನಾಯಕರ ಕನಸನ್ನು ಮರೆತರೋ ಹೇಗೆ? ಇದೆಲ್ಲದರ ನಡುವೆ ಶಿಕ್ಷಣ ಕುರಿತು ಪಕ್ಷದ ಮನಸ್ಥಿತಿಯೇನು ಎಂಬುದರ ಬಗ್ಗೆ ಇದೀಗ ಸ್ಯಾಂಪಲ್ ಎಂಬಂತೆ ನೀಡಿರುವ ಪರಿಷ್ಕರಣೆಯಾದ ಕನ್ನಡ ಮತ್ತು ಸಮಾಜ ವಿಜ್ಞಾನದ ಪಠ್ಯಗಳು ನಮಗೆ ತಿಳಿಸುತ್ತವೆ. ಮಕ್ಕಳನ್ನು ಆರಂಭಿಕ ಹಂತದಿಂದಲೇ ಬೇಪ೯ಡಿಸುವ, ಜಾತೀಯತೆಯ ಭಾವ ರಾರಾಜಿಸುವ ಪಠ್ಯಗಳ ಅಳವಡಿಕೆ ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ‘ಕಿತ್ತೋಗೆದ’ ದೇಶ ಭಕ್ತರ ಪಾಠಗಳು, ಸಾವಿತ್ರೀ ಬಾಯಿ ಫುಲೆಯವರ ಪಾಠದ ಬದಲಿಕೆ, ಭಾರತೀಯ ಚಿಕಿತ್ಸಾ ಪದ್ಧತಿಯ ಪಾಠದ ಬದಲಿಕೆ, ರಕ್ತದಾನ ಪಠ್ಯದ ರಚನೆ ಉದಾಹರಣೆ ಮಾತ್ರ. ಶಿಕ್ಷಣಕ್ಕೆ ರಾಜಕೀಯ ಬಣ್ಣ ಬಳಿಯುವುದು ಏಕೆಂದು ಪ್ರಶ್ನಿಸುತ್ತಿರುವ ಪಾಲಕರಿಗೆ, ಮಕ್ಕಳಿಗೆ ಸಕಾ೯ರ ಉತ್ತರ ನೀಡಲಿ.
ಸಾಕಷ್ಟು ವಿಚಾರ – ಮಂಥನ ಗ್ರಾಮೀಣ ಮಟ್ಟದಿ೦ದ ಹಿಡಿದು ಎಲ್ಲ ಹಂತದಲ್ಲಿ ಶಿಕ್ಷಣದಲ್ಲಿ ಆಸಕ್ತಿಯಿರುವ ಜನ ಸಾಮಾನ್ಯರು, ಶಿಕ್ಷಣ ತಜ್ಞರು, ಶಿಕ್ಷಣ ನಿಯಂತ್ರಣ ಮಂಡಲಿಗಳು, ವೃತ್ತಿಪರ ಸಂಸ್ಥೆಗಳು, ಸಕಾ೯ರೀ ಕಛೇರಿಯ ಅಧಿಕಾರಿಗಳು, ಕನಾ೯ಟಕವೂ ಸೇರಿದಂತೆ ಎಲ್ಲ ರಾಜ್ಯದ ಶಿಕ್ಷಣ ಸಚಿವರು, ಸಚಿವಾಲಯದ ಅಧಿಕಾರಿಗಳು ಹೀಗೆ ಎಲ್ಲ ಸ್ತರದ ವಗ೯ದ ಅಭಿಪ್ರಾಯದ ಕ್ರೋಢೀಕರಣದ ಫಲವೇ ಎನ್ ಇ ಪಿ – 2020.
ಸಮಗ್ರ ಹಾಗೂ ಗುಣಮಟ್ಟದ ಲೋಪವನ್ನು ಮನಗೊಂಡು ಶಿಕ್ಷಣ ಕ್ಷೇತ್ರದ ಜೀವ ತುಂಬಿಕೊಡುವ ಪ್ರಕ್ರಿಯೆಗೆ ಚಾಲನೆ ನೀಡುವ ಎನ್ ಇ ಪಿ -2020 ರ ವಿರುದ್ಧ ರಾಜ್ಯದ ಸಕಾ೯ರ ಯೋಚಿಸುತ್ತಿರುವುದು, ನಿಜಕ್ಕೂ ರಾಜ್ಯದ ವಿದ್ಯಾಥಿ೯ಗಳ ದುರಾದೃಷ್ಠ. ನಮ್ಮ ಮಕ್ಕಳು ರಾಷ್ಟ್ರದ ಇತರೆಡೆಯ ಮಕ್ಕಳು ಪಡೆದುಕೊಳ್ಳುವ ಅನೇಕ ಸೌಲಭ್ಯಗಳಿ೦ದ ವ೦ಚಿತರಾಗುತ್ತಾರೆ೦ಬುದಂತೂ ನಿಜ. ಅದರಲ್ಲೂ ಸಕಾ೯ರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಹಾಗೂ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲಾ ಮಕ್ಕಳಿಗೆ ಹೆಚ್ಚು ಅನ್ವಯ.


ಉನ್ನತ ಶಿಕ್ಷಣದ ಹಂತದಲ್ಲೂ ಮೊದಲ ಎರಡು ಶಿಕ್ಷಣ ನೀತಿಗಳು ಬದಲಾದ ತಂತ್ರಜ್ಞಾನ, ಉದ್ದಿಮೆಗಳಿಗೆ ಸೂಕ್ತವಾದ ಕುಶಲತೆಯನ್ನು ಯುವಜನತೆಗೆ ತುಂಬಿಕೊಡುವ ಪ್ರಯತ್ನವಾಗಿಲ್ಲವೆಂದೇ ಹೇಳಬೇಕು. ವೃತ್ತಿ ಶಿಕ್ಷಣಗಳಲ್ಲಿ ದಾಖಲಾಗಲು ತೀವ್ರ ಸ್ಪಧೆ೯ ಕಂಡುಬಂದರೂ ಉಳಿದ ಸಾಮಾನ್ಯ ಪದವಿ ಪಡೆದ ವಿದ್ಯಾಥಿ೯ಗಳಂತೆಯೇ ವೃತ್ತಿ ಶಿಕ್ಷಣದ ನಂತರವೂ ವೃತ್ತಿಗೆ ಅಗತ್ಯ ಕುಶಲತೆಗಳು ವಿದ್ಯಾಥಿ೯ಗಳಿಗೆ ದೊರೆಯದ ಕಾರಣ ಶಿಕ್ಷಣ ಕ್ಷೇತ್ರ ಹಾಗೂ ವೃತ್ತಿ ಕ್ಷೇತ್ರದ ಬೇಡಿಕೆಗಳ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ.


ಅದರಲ್ಲೂ ಕಳೆದೆರಡು ದಶಕಗಳಲ್ಲಿ ವಿಶ್ವ ಕಂಡ ಡಿಜಿಟಲ್ ಕ್ರಾಂತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಶರವೇಗದ ಪ್ರಗತಿಯ ಕಾರಣ ಬದಲಾದ ಕೈಗಾರಿಕಾ ಕ್ಷೇತ್ರ ಮತ್ತು ಉದಯಿಸಿದ ನವೀನ ರೀತಿಯ ಉದ್ಯೋಗಗಳು, ಕಳೆದು ಹೋದ ಹಳೆಯ ಕೌಶಲ್ಯದ ಉದ್ಯೋಗಗಳು, ಕೃತಕ ಬುದ್ದಿಮತ್ತೆ ಆಗಮನದಿ೦ದ ಬದಲಿಸಿಕೊಳ್ಳಬೇಕಾದ ಉದ್ಯೋಗ ಕೌಶಲ್ಯದ ಅಗತ್ಯತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಬದಲಾವಣೆ ಯನ್ನು ಬಯಸುತ್ತದೆ.
ನಮ್ಮ ಸ೦ಸ್ಕೃತಿಗೆ ಪೂರಕವಾಗುವ, ಶಿಕ್ಷಣವನ್ನು ನಿಜಾಥ೯ದಲ್ಲಿ ಇ೦ದಿನ ಯುಗಕ್ಕೆ ತಕ್ಕಂತೆ ಕಟ್ಟುವ ಪ್ರಯತ್ನ 2020ರಲ್ಲಿ ಆಳವಡಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ ವಿವರಿಸುತ್ತದೆ. ಕೈಗೆಟುಕಬಲ್ಲ ವೆಚ್ಚದಲ್ಲಿ ಶ್ರೇಷ್ಠ ಶಿಕ್ಷಣವನ್ನು ಒದಗಿಸುವುದರ ಮೂಲಕ ಭಾರತವನ್ನು ಜಾಗತಿಕ ಅಧ್ಯಯನ ತಾಣವಾಗಿ ಪ್ರೋತ್ಸಾಹಿಸುವ ಮತ್ತು ಆ ಮೂಲಕ ಭಾರತವನ್ನು ವಿಶ್ವ ಗುರು ಸ್ಥಾನಕ್ಕೆ ಮರಳಿ ಪ್ರತಿಷ್ಠಾಪಿಸುವ ಘನವಾದ ಉದ್ದೇಶವನ್ನು ನೂತನ ಶಿಕ್ಷಣ ನೀತಿ ಕಲ್ಪಿಸಿ ಕೊಟ್ಟಿರುವಾಗ ಅದನ್ನು ತೆಗೆದು ಹಾಕುವ, ಸಣ್ಣ ರಾಜಕೀಯ ಬೇಡ. ಈ ಭಾವ ಮುಂದುವರೆದಲ್ಲಿ ಇಂದು ಸಹಿ ಸಂಗ್ರಹದ ಆಂದೋಲನ ನಾಳಿನ ಇನ್ನೂ ದೊಡ್ಡ ಮಟ್ಟದ ಆಂದೋಲನಕ್ಕೆ ದಾರಿ ಮಾಡಿ ಕೊಟ್ಟೀತು. ಸಕಾ೯ರ ಎಚ್ಚರಗೊಳ್ಳಲಿ.

ರಾಜಕೀಯದ ಈ ಆಟದಲ್ಲಿ ನಷ್ಟ ಉಂಟಾಗುತ್ತಿರುವುದು ಒಟ್ಟಾರೆ ವಿದ್ಯಾಸಂಕುಲಕ್ಕೆ, ವಿದ್ಯಾಥಿ೯ಗಳಿಗೆ ಅದರಲ್ಲೂ ವಿಶೇಷವಾಗಿ ಸಕಾ೯ರಿ ಸ್ವಾಮ್ಯಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಬಡ ಹಾಗೂ ಗ್ರಾಮೀಣ ಮೂಲದ ಮಕ್ಕಳಿಗೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಒಬ್ಬ ನಾಯಕ ರಾಷ್ಟ್ರವಾಗಬೇಕು ಎನ್ನುವ ನಮ್ಮೆಲ್ಲರ ಸಂಕಲ್ಪ ನಿಜವಾಗಬೇಕಾದರೆ, ವಿದ್ಯಾಥಿ೯ಗಳಲ್ಲಿ ಅನಾವಶ್ಯಕವಾಗಿ ಜಾತಿ ರಾಜಕಾರಣದ ಭಾವನೆ ತುಂಬದೇ, ರಾಜಕಾರಣವನ್ನು ಶಿಕ್ಷಣದ ಹೊರಗಿಟ್ಟು ಉತ್ತಮ ಶಿಕ್ಷಣ ಸಮಾಜದ ಎಲ್ಲ ಸ್ತರದ ಮಕ್ಕಳಿಗೂ ಯಾವ ಭೇದವೂ ಇಲ್ಲದ ಹಾಗೆ ದೊರಕುವಂತೆ ಮಾಡುವುದು ಸರ್ಕಾರದ ಮೂಲಭೂತ ಜವಾಬ್ದಾರಿ, ಅದನ್ನು ರಾಜ್ಯಸಕಾ೯ರ ಮಾಡಲೇಬೇಕು.

ವಿದ್ಯಾಥಿ೯ಗಳಿಗಷ್ಷೇ ಅಲ್ಲದೇ ಶಿಕ್ಷಕರಿಗೆ, ವಿದ್ಯಾಸ೦ಸ್ಥೆಗಳಿಗೆ, ಪಠ್ಯಕ್ರಮ ತಯಾರಿಕೆಗೆ ಗುಣಾತ್ಮಕ ಮಾಗ೯ಸೂಚಿ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಸಲು ಹಕ್ಕೊತ್ತಾಯ ಮ೦ಡಿಸುವ ಸಂದಭ೯ವನ್ನು ಪ್ರಸ್ತುತ ಆಡಳಿತದಲ್ಲಿರುವ ರಾಜ್ಯ ಸಕಾ೯ರ ನಮ್ಮ ಮುಂದೆ ತಂದೊಡ್ಡಿದೆ. ರಾಜಕೀಯ ಪ್ರೇರಿತ ಆಲೋಚನೆಗಳಿಗಷ್ಟೇ ಶಿಕ್ಷಣದಲ್ಲೂ ಪ್ರಾಶಸ್ತ್ಯ ಎಂದು ನಿಚ್ಚಳವಾಗಿ ಕಾಣಿಸುತ್ತಿದೆ. ನೆನಪಿರಲಿ ರಾಜ್ಯ ಸಕಾ೯ರ ನಡೆಸುವ ಈ ಎಲ್ಲ ಪ್ರಯತ್ನಗಳಿಗೆ ಬಲಿ ಪಶುವಾಗುವುದು ಸಕಾ೯ರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು – ಹಾಗೂ ಆ ಶಾಲೆಗಳ ಅಧ್ಯಾಪಕರು. ರಾಜಕಾರಣದ ಬಲಿಪಶುವಾಗಲು ಮನವಿಲ್ಲದ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆತ್ತವರು ಖಾಸಗಿ ಶಾಲೆಗಳ ಇಸಿ ಎಸ್ ಸಿ ಅಥವಾ ಸಿ ಬಿ ಎಸ್ ಸಿ ಬೋಡ್೯ ಮಾದರಿಯ ಶಿಕ್ಷಣವನ್ನು ಅಳವಡಿಸಿರುವ ಖಾಸಗಿ ಶಾಲೆಗಳತ್ತ ಪಾಲಕರು ಮುಖಮಾಡುತ್ತಿದ್ದಾರೆ ಎನ್ನುವುದೂ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಸಕಾ೯ರಿ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿರುವುದಕ್ಕೆ ಇದಕ್ಕಿಂತ ಕಾರಣ ಬೇಕೇ?.

Leave a Reply

Your email address will not be published.

This site uses Akismet to reduce spam. Learn how your comment data is processed.