Sri Parameswaran awarded with Padma Vibhushana by HH President Sri Ram Nath Kovind

ಲೇಖಕರು : ಶ್ರೀ ರಾಜೇಶ್ ಪದ್ಮಾರ್

ಭಾರತೀಯ ಚಿಂತನೆಗಳ ಬುನಾದಿಯ ಮೇಲೆ ಹೊಸ ತಲೆಮಾರಿನ ಸಾವಿರಾರು ಯುವ ಚಿಂತಕರನ್ನು ಯೋಗ್ಯವಾಗಿ ರೂಪಿಸಿದ ಹಿರಿಯ ವಿದ್ವಾಂಸ, ಲೇಖಕ, ಸಂಘದ ಜ್ಯೇಷ್ಠ ಪ್ರಚಾರಕ ಪಿ.ಪರಮೇಶ್ವರನ್ ರವರಿಗೆ 2018ನೇ ಸಾಲಿನ ‘ಪದ್ಮವಿಭೂಷಣ’ ಪ್ರಶಸ್ತಿಯ ಮನ್ನಣೆ ದೊರಕಿದೆ. ಮಾರ್ಚ್ 20, 2018ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಪಿ.ಪರಮೇಶ್ವರನ್ ರವರಿಗೆ ಭಾರತ ಸರಕಾರದ ಎರಡನೇ ಅತ್ಯುಚ್ಛ ನಾಗರೀಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

Sri P Parameswaran awarded with Padma Vibhushana by HH President Sri Ram Nath Kovind

’ಭಾರತೀಯ ವಿಚಾರ ಕೇಂದ್ರ” ಎಂಬ ವಿನೂತನ ವೈಚಾರಿಕ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ ಕಳೆದ 36 ವರ್ಷಗಳಿಂದ ಅನನ್ಯ ಕೊಡುಗೆ ನೀಡಿರುವ ಪಿ.ಪರಮೇಶ್ವರನ್ ಇಂಟರ್‌ನ್ಯಾಷನಲ್ ಫೋರಂ ಫಾರ್ ಇಂಡಿಯನ್ ಹೆರಿಟೇಜ್ (IFIH) ಸಂಸ್ಥೆಯ ಸ್ಥಾಪಕ ಸದಸ್ಯರೂ ಹೌದು. ಹತ್ತಾರು ಗ್ರಂಥಗಳ ಲೇಖಕರಾಗಿ, ಭಾಷಣಕಾರರಾಗಿ, ಸಂವಾದಿಯಾಗಿ ವೈಚಾರಿಕ ಕ್ಷೇತ್ರದಲ್ಲಿ ಗಣನೀಯವಾಗಿ ಗುರುತಿಸಿಕೊಂಡವರವರು. ಹೆಸರಾಂತ ಚಿಂತಕರಾದ ಡೇವಿಡ್ ಫ್ರಾಲೆ, ಕಾನ್ರಾಡ್ ಎಲ್‌ಸ್ಟ್, ರಾಮ್ ಮಾಧವ್, ಜೆ.ನಂದಕುಮಾರ್ ಸೇರಿದಂತೆ ಅನೇಕರಿಗೆ ಮಾರ್ಗದರ್ಶಕರಾಗಿ ಸ್ಮರಣೀಯ ಕೊಡುಗೆ ಸಲ್ಲಿಸಿದವರೇ ಪರಮೇಶ್ವರನ್.
1927ರಲ್ಲಿ  ಆಲಪ್ಪುಳ ಜಿಲ್ಲೆಯ ಚೇರ್ತಲ ಗ್ರಾಮದಲ್ಲಿ ಜನಿಸಿದ ಪರಮೇಶ್ವರನ್ ಹುಟ್ಟೂರಿನಲ್ಲೇ ಶಾಲಾ ಶಿಕ್ಷಣ ಪೂರೈಸಿದರು. ತಿರುವನಂತಪುರದ ಯೂನಿವರ್ಸಿಟಿ ಕಾಲೇಜಿನಲ್ಲಿ ಪದವಿ (ಬಿಎ-ಆನರ್ಸ್-ಇತಿಹಾಸ) ಪಡೆದರು. ಬಾಲ್ಯದಿಂದಲೇ ಹಿಂದುತ್ವದ ವಿಚಾರಧಾರೆಯ ಕುರಿತು ತೀವ್ರ ಅಧ್ಯಯನದ ಆಸಕ್ತಿ ಹೊಂದಿದ್ದ ಪರಮೇಶ್ವರನ್, ಈ ಸಂಬಂಧಿತ ಸಂಘ-ಸಂಸ್ಥೆಗಳ ಸಂಪರ್ಕ-ಒಡನಾಟ ಸಾಧಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಅದಾಗಲೇ ಕೇರಳದಲ್ಲಿ ಚಿಗುರೊಡೆಯುತ್ತಿದ್ದ ವೇಳೆಯದು. ಶಾಲಾ ವಿದ್ಯಾರ್ಥಿಯಾಗಿದ್ದ ಪರಮೇಶ್ವರನ್ ವಿದ್ಯಾರ್ಥಿ ಜೀವನದ ಅನೇಕ ಸಂಜೆಗಳನ್ನು ಸಂಘದ ಅಂಗಳದಲ್ಲೇ ಕಳೆದರು. ಸಂಘದ ವಿಚಾರಧಾರೆ, ರಾಷ್ಟ್ರೀಯತೆಯ ಆಧಾರದ ಮೇಲೆ ಪರಮ ವೈಭವದ ಪರಿಕಲ್ಪನೆ – ಎಲ್ಲದರಲ್ಲೂ ಆಸಕ್ತಿ-ಅಭಿರುಚಿ ಮತ್ತು ಶ್ರದ್ಧೆ ಮೈಗೂಡಿಸಿಕೊಂಡರು. 1950 ನೇ ಇಸವಿಯಲ್ಲಿ ಆಗಿನ ಆರೆಸ್ಸೆಸ್ ಸರಸಂಘಚಾಲಕ ಶ್ರೀ ಗುರೂಜಿ ಗೋಳ್ವಲ್ಕರ್‌ರ ಇಚ್ಛೆಯಂತೆ ಸಂಘದ ಪ್ರಚಾರಕರಾಗಿ ಹೊರಟರು. ಜೀವನ ಪೂರ್ತಿ ಅವಿವಾಹಿತರಾಗಿಯೇ ಉಳಿದು ಸಮಾಜ ಸೇವೆಯೇ ಸರ್ವಸ್ವ ಎಂಬ ಸಂಕಲ್ಪವನ್ನು ತಾರುಣ್ಯದ ಹೊಸ್ತಿಲಲ್ಲೇ ಕೈಗೊಂಡರು.
ರಾಜಕೀಯ ಕ್ಷೇತ್ರವಾದ ಭಾರತೀಯ ಜನಸಂಘದ ಸಂಘಟನಾತ್ಮಕ ಬೆಳವಣಿಗೆ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಅದಕ್ಕೆ ಬಲ ನೀಡುವ ಉದ್ದೇಶದಿಂದ ಪಿ.ಪರಮೇಶ್ವರನ್‍ರನ್ನು 1957 ರಲ್ಲಿ ಜನಸಂಘದ ಸಂಘಟನಾ ಕಾರ್ಯದರ್ಶಿಯನ್ನಾಗಿ ನಿಯುಕ್ತಿ ಮಾಡಲಾಯಿತು. 1968 ರಲ್ಲಿ ಭಾರತೀಯ ಜನಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕ್ರಮೇಣ ಅದರ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. 1975-77 ರ ಅವದಿಯ ತುರ್ತು ಪರಿಸ್ಥಿತಿಯ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನೂ ಅನುಭವಿಸಿದರು.

1977ರಲ್ಲಿ ರಾಜಕೀಯ ಕ್ಷೇತ್ರದಿಂದ ವಿಮುಖರಾಗಿ ವೈಚಾರಿಕ ಕ್ಷೇತ್ರದಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ ಪಿ.ಪರಮೇಶ್ವರನ್‌ರು ಸಾಮಾಜಿಕ ಚಿಂತನೆಗಳು, ಅಭಿವೃದ್ಧಿಯ ಮೈಲಿಗಲ್ಲುಗಳ ಕುರಿತು ಹಾಗೂ ಮೂಲ ಭಾರತೀಯ ಚಿಂತನೆಗಳ ಕುರಿತು ಅಧ್ಯಯನ-ಬರವಣಿಗೆಯತ್ತ ಗಮನಹರಿಸಿದರು.
ಹಿರಿಯ ಸಾಮಾಜಿಕ ಮುಂದಾಳು ನಾನಾಜಿ ದೇಶ್‌ಮುಖ್ ಸ್ಥಾಪಿಸಿದ್ದ ದೀನದಯಾಳ್ ರಿಸರ್ಚ್ ಇನ್‌ಸ್ಟಿಟ್ಯೂಟ್, ನವದೆಹಲಿಯ ನಿರ್ದೇಶಕರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

1982ರಲ್ಲಿ ಮತ್ತೆ ಕೇರಳಕ್ಕೆ ಕಾಲಿಟ್ಟ ಪಿ.ಪರಮೇಶ್ವರನ್, ತಿರುವನಂತಪುರಂನಲ್ಲಿ ‘ಭಾರತೀಯ ವಿಚಾರ ಕೇಂದ್ರಂ’ ಎಂಬ ವೈಚಾರಿಕ ಸಂಸ್ಥೆಯನ್ನು ಪ್ರಾರಂಭಿಸಿದರು. ಭಾರತೀಯ ಚಿಂತನೆಗಳ ಆಧಾರದ ಮೇಲೆ ರಾಷ್ಟ್ರೀಯ ಪುರನರುತ್ಥಾನದ ಆಶಯದೊಂದಿಗೆ ಅಧ್ಯಯನ, ಸಂವಹನ, ಸಂಶೋಧನೆ ಮಾಡುವ ಯುವ ಚಿಂತಕರಿಗೊಂದು ಸ್ಪೂರ್ತಿಯ ವೇದಿಕೆಯಾಗಿ ‘ಭಾರತೀಯ ವಿಚಾರ ಕೇಂದ್ರಂ’ ಕಳೆದ ಮೂರುವರೆ ದಶಕದಲ್ಲಿ ಅದ್ವಿತೀಯ ಪಾತ್ರ ನಿರ್ವಹಿಸಿದೆ. ಇದರ ಜತೆಗೇ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ ಹಾಗೂ ವಿವೇಕಾನಂದ ಶಿಲಾ ಸ್ಮ್ಮಾರಕ ಸಂಸ್ಥೆಯಲ್ಲೂ ಪರಮೇಶ್ವರನ್ ತೊಡಗಿಸಿಕೊಂಡರು. ಯುವಜನರಲ್ಲಿ ಭಗವದ್ಗೀತೆಯ ಕುರಿತು ಆಸಕ್ತಿ, ಅಧ್ಯಯನ ಹೆಚ್ಚಿಸುವ ಸಲುವಾಗಿ ರೂಪುಗೊಂಡ ‘ಗೀತಾ ಸ್ವಾಧ್ಯಾಯ ಸಮಿತಿ’ಯ ಮಾರ್ಗದರ್ಶಕರಾಗಿಯೂ ಪರಮೇಶ್ವರನ್‌ರ ಕೊಡುಗೆ ಸ್ತುತ್ಯಾರ್ಹ.

ಸ್ವಾಮಿ ವಿವೇಕಾನಂದರು ಕರ್ಮಯೋಗದ ಆಧಾರದ ಮೇಲೆ ಸ್ಥಾಪಿಸಿದ ರಾಮಕೃಷ್ಣ ಮಿಷನ್ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಪರಮೇಶ್ವರನ್, ಕಾಲಡಿಯ ಅದ್ವೈತ ಆಶ್ರಮದ ಸ್ಥಾಪಕರೂ, ರಾಮಕೃಷ್ಣ ಮಠದ ಸನ್ಯಾಸಿಗಳೂ ಆದ ಸ್ವಾಮಿ ಆಗಮಾನಂದರವರ ಶಿಷ್ಯರೂ ಹೌದು. 1993ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದ ಶತಾಬ್ದಿ ವರ್ಷ ಆಚರಣೆಯಲ್ಲಿ ಪರಮೇಶ್ವರನ್ ಪಾಲ್ಗೊಂಡಿದ್ದರು.
1998ರಲ್ಲಿ ಕೇರಳದಲ್ಲಿ ಅವ್ಯಾಹತವಾಗಿ ಹೆಚ್ಚಿದ್ದ ಅಪರಾಧ ಪ್ರಕರಣಗಳು ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು. ಸಾಮಾಜಿಕ ಅಭದ್ರತೆಯೂ ಕಾಡತೊಡಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಸಂತುಲನಗೊಳಿಸಲು ಭಗವದ್ಗೀತೆಯ ಪಾರಾಯಣವೇ ರಾಮಬಾಣ ಎಂಬುದನ್ನು ಪ್ರತಿಪಾದಿಸಿದವರೇ ಪಿ.ಪರಮೇಶ್ವರನ್. ‘ಗೀತಾ ದಶಕಂ’ ಎಂಬ ವಿನೂತನ ಯೋಜನೆಯ ಮೂಲಕ ಭಗವದ್ಗೀತೆಯ ಆಶಯಗಳನ್ನು ಎಳೆಯ – ಯುವ ಮನಸ್ಸುಗಳಿಗೆ ತಲುಪಿಸುವ ಬೃಹತ್ ಅಭಿಯಾನ ನಡೆಯಿತು. ಕಳೆದ ವರ್ಷ ತ್ರಿಚೂರಿನಲ್ಲಿ ನಡೆದ ಎರಡು ದಿನಗಳ ‘ಗೀತಾ ಸಂಗಮಂ’ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಹೀಗೆ ಕೇರಳದಲ್ಲಿ ಇತ್ತೀಚೆಗೆ ಭಗವದ್ಗೀತೆಯನ್ನು ಮನೆ-ಮನೆಗೆ, ಯುವ ಜನರೆಡೆಗೆ ತಲುಪಿಸುವಲ್ಲಿ ಪರಮೇಶ್ವರನ್‍ರ ನೇತೃತ್ವ ಅಭಿನಂದನಾರ್ಹ.
ಕಳೆದ ವರ್ಷ, 2017ರಲ್ಲಿ ಪರಮೇಶ್ವರನ್‌ರಿಗೆ 90 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ನವತಿ ಆಚರಣೆ’ ಅದ್ದೂರಿಯಾಗಿಯೇ ಕೇರಳದಲ್ಲಿ ನಡೆಯಿತು. ಅದೊಂದು ಅದ್ಭುತ ವೈಚಾರಿಕ ಜಾತ್ರೆಯೇ ಸರಿ! ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗ್ವತ್ ಸೇರಿದಂತೆ ಅನೇಕ ಗಣ್ಯರು ವಿವಿಧ ಚಿಂತನ-ಮಂಥನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಲಯಾಳಂ ಪತ್ರಿಕೆಗಳಾದ ‘ಕೇಸರಿ’, ‘ಮಂಥನ’ ಇತ್ಯಾದಿಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದ ಇವರು ವಿವೇಕಾನಂದ ಕೇಂದ್ರ ಹೊರತರುತ್ತಿರುವ ‘ಯುವ ಭಾರತಿ’ ಹಾಗೂ ‘ಪ್ರಗತಿ’ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
7 ದಶಕಗಳಿಂದ ಸಮಾಜ ಜೀವನದಲ್ಲಿ ವಿಶೇಷವಾಗಿ ವೈಚಾರಿಕ ರಂಗದಲ್ಲಿ ಸಕ್ರಿಯರಾಗಿ  ಸಾವಿರಾರು ಯುವ ಚಿಂತಕರನ್ನು ರೂಪಿಸಿದ ಶ್ರೇಯಸ್ಸು ಪರಮೇಶ್ವರನ್‌ರವರದ್ದು. ಬತ್ತದ ಉತ್ಸಾಹ, ಅದಮ್ಯ ಅಧ್ಯಯನಶೀಲತೆ, ಸಾಮಯಿಕ ಒಳನೋಟ, ಅನುಭವದ ಮಹಾ ಶಿಖರ, ಎಂದಿನ ರಾಜಗಾಂಭೀರ್ಯದ ಜತೆಗೇ ಮಂದಹಾಸ – ಎಲ್ಲವೂ ಪರಮೇಶ್ವರನ್‌ರವರಲ್ಲಿ ಕಾಣಬಹುದಾದದ್ದೇ.

ಪ್ರಶಸ್ತಿಗಳು
1997 – ಹನುಮಾನ್ ಪ್ರಸಾದ್ ಪೊದ್ದಾರ್ ಪ್ರಶಸ್ತಿ, ಕಲ್ಕತ್ತಾ.
2000 – ಜವಹರಲಾಲ್ ನೆಹರು ವಿ.ವಿ., ದೆಹಲಿಯ – ಕೋರ್ಟ್ ಸದಸ್ಯತ್ವ.
2002 – ಅಮೃತ ಕೀರ್ತಿ ಪುರಸ್ಕ್ಕಾರ, ಕೊಲ್ಲಂ
2004 – ಪದ್ಮಶ್ರೀ, ಭಾರತ ಸರಕಾರ.
2018  – ಪದ್ಮವಿಭೂಷಣ

ಪುಸ್ತಕಗಳು : (ಆಂಗ್ಲ ಹಾಗೂ ಮಲಯಾಳಂ)

1. ಶ್ರೀ ನಾರಾಯಣ ಗುರು – The Prophet of Reraissance
2. ಶ್ರೀ ಅರವಿಂದನ್ – ಭಾವಿಯುತೆ ದಾರ್ಶನಿಕನ್
3. ವಿಶ್ವ ವಿಜಯಿ ವಿವೇಕಾನಂದನ್
4. Marx and Vivekananda 5. Marx to Maharshi
5. Bhagavad Gita – Vision of New World Order
6. Beyond all Isms to Humanism.
7. Heart beats of Hindu Nation (ಯುವಭಾರತಿ ಲೇಖನ ಸಂಗ್ರಹ)
8. ದಿಶಾ ಬೋಧತ್ತಿಂದೆ ದರ್ಶನಂ
9. Bhagavadgita – The nectar of Immortality.
10. ಮಾರುನ್ನ ಸಮೂಹವೂಂ, ಮಾರಾತ್ತ ಮೌಲ್ಯಂಗಳೂಂ
11. Gita’s Vision of an Ideal Society
12. ಸ್ವತಂತ್ರ ಭಾರತಂ – ಗತಿಯುಂ, ನಿಯತಿಯುಂ
13. ಹಿಂದೂ ಧರ್ಮವುಂ, ಇಂಡಿಯನ್ ಕಮ್ಯುನಿಸವುಂ
14. Hindutva Idealogy – Unique and Unsiversal.
15. Makarajyotis(A brief study of Swami Vivekananda in Malayalam)
16. Darshanasamvadam
17. Swanthantra Bharatham-Gatiyum Niyathiyum
18. Hindudarmavum Indian communisavum
19. Vivekanandanum Prabhudha Keralavum (Edited)
20. Udharedathmanathmanam
21. Heart Beats of Hindu Nation (3 volumes)

P Parameswaran

 

Leave a Reply

Your email address will not be published.

This site uses Akismet to reduce spam. Learn how your comment data is processed.