ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಲೋಕದ ದಿಗ್ಗಜರು. ಇವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಾವಿರಾರು ಅಂಧ ಮಕ್ಕಳ ಬಾಳಿಗೆ ನಂದಾದೀಪವಾಗಿದ್ದ ಈ ಸಂಗೀತಗಾರರ ಜಯಂತಿ ಇಂದು.
ಪರಿಚಯ
ಪುಟ್ಟರಾಜ ಗವಾಯಿಗಳು ಮಾರ್ಚ್ 3, 1914 ರಂದು ಹಾವೇರಿ ಜಿಲ್ಲೆಯ ಹಾನಗಲ್ ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ ಮತ್ತು ತಾಯಿ ಸಿದ್ಧಮ್ಮ. ಇವರ ಮೂಲ ಹೆಸರು ಪುಟ್ಟಯ್ಯಜ್ಜ . ಸಂಗೀತದ ಜೊತೆಗೆ ಸಂಸ್ಕೃತ, ಹಿಂದಿ, ಕನ್ನಡ, ಛಂದಸ್ಸು, ಕೀರ್ತನೆಗಳನ್ನು ಬ್ರೇಲ್ ಲಿಪಿಯ ಮೂಲಕ ಕಲಿತರು. ತಮ್ಮ ಜೀವನವನ್ನು ಗುರು ಸೇವೆಗಾಗಿ ಮುಡಿಪಾಗಿಟ್ಟರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಪುಟ್ಟರಾಜ ಶಿಕ್ಷಣಕ್ಕಾಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದ್ದರು.
ಸಂಗೀತ ಕ್ಷೇತ್ರಕ್ಕೆ ಕೊಡುಗೆ
ಪುಟ್ಟರಾಜ ಗವಾಯಿಗಳು ಗುರುಗಳಲ್ಲಿ ತುಂಬಾ ಭಕ್ತಿ ಶ್ರದ್ಧೆಯಿಂದ ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ಕಲಿಯುವ ಮೂಲಕ ಸಂಗೀತ ಲೋಕದಲ್ಲಿ ವಿಶೇಷ ಸಾಧನೆಗೈದರು. ಪಂಡಿತ್ ಗವಾಯಿಗಳು ತಮ್ಮ ವಚನಗಳ ನಿರೂಪಣೆಗಾಗಿ ಹೆಚ್ಚು ಮೆಚ್ಚುಗೆ ಪಡೆದರು.
ಪುಟ್ಟರಾಜ ಗವಾಯಿಗಳು ಗುರು ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಕಂಪನಿಯನ್ನು ಸ್ಥಾಪಿಸಿದರು. ಇದು ಅಂಗವಿಕಲ ಅನಾಥರಿಗೆ ಉಚಿತ ಆಹಾರ, ಆಶ್ರಯ, ಶಿಕ್ಷಣವನ್ನು ಒದಗಿಸಲು ಹಣವನ್ನು ಸಂಗ್ರಹಿಸಲು ಸಹಾಯ ಮಾಡುವುದಲ್ಲದೆ ರಂಗಭೂಮಿ ಸಂಸ್ಕೃತಿಯನ್ನು ವಿಶಿಷ್ಠವಾಗಿ ಪಸರಿಸಿದರು. ಸ್ಥಾಪಿಸಲಾಯಿತು.
ಸಾಹಿತ್ಯ
ಪುಟ್ಟರಾಜ ಗವಾಯಿಗಳು 12ನೇ ಶತಮಾನದ ಭಕ್ತಿ ಚಳವಳಿಯ ಅನೇಕ ‘ಶರಣರ’ ಜೀವನ ಚರಿತ್ರೆಗಳ ಜೊತೆಗೆ ಆಧ್ಯಾತ್ಮಿಕತೆ , ಧರ್ಮದ ಕುರಿತು ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಬಹುಭಾಷಾ ಪಂಡಿತರಾಗಿದ್ದ ಗವಾಯಿಗಳು ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ, ಉಪನಿಷದ್, ಶ್ರೀ ರುದ್ರ ಸಂಗೀತವನ್ನು ರಚಿಸಿದ್ದಾರೆ. ಕನ್ನಡದಲ್ಲಿ, ಹಿಂದಿಯಲ್ಲಿ ಮತ್ತು ಸಂಸ್ಕೃತದಲ್ಲಿ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಸಮಾಜ ಸೇವೆ
ಪುಟ್ಟರಾಜ ಗವಾಯಿ ಅವರು ಸಂಗೀತ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದವರು. ಜನರಿಗೆ ಸಂಗೀತ ಜ್ಞಾನವನ್ನು ನೀಡಲು ಮೀಸಲಾದ ಸಂಗೀತ ಶಾಲೆಯಲ್ಲಿ ತೆರೆದರು. ವಿಶೇಷವಾಗಿ ಅಂಗವಿಕಲರಿಗೆ, ಅಂಧ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಲಾಗುತ್ತದೆ.
ಪಂಡಿತ ಪಂಚಾಕ್ಷರಿ ಗವಾಯಿ ನಾಟಕ ರಂಗಮಂದಿರವನ್ನು ಸಂಘಟಿಸಿ ಸ್ಥಾಪಿಸಿದ ಪಂಡಿತ ಪುಟ್ಟರಾಜ ಗವಾಯಿಯವರು ಅಸಂಖ್ಯಾತ ಪ್ರದರ್ಶನಗಳನ್ನು ನೀಡಿದ್ದಾರೆ. ರಂಗ ನಾಟಕದ ಕಲೆಯನ್ನು ಹೆಚ್ಚಿಸಲು ಮಾತ್ರ ಮೀಸಲಾಗಿರುವ ಈ ನಾಟಕ ಕಂಪನಿಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಸಾವಿರಾರು ರಂಗ ಕಲಾವಿದರನ್ನು ನಿರ್ಮಿಸಿದೆ.
ಭಕ್ತರು ಇವರನ್ನು ನಡೆದಾಡುವ ದೇವರು ಎಂದು ಆರಾಧಿಸುತ್ತಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಆಶ್ರಮವಾಗಿದೆ. ಇದು ಕೇವಲ ಅಂಧರು, ಅನಾಥರು ಮತ್ತು ಬಡ ಮಕ್ಕಳ ಉನ್ನತಿಗಾಗಿ ಮೀಸಲಾದ ದತ್ತಿ ಸಂಸ್ಥೆಯಾಗಿದೆ. 1000 ಕ್ಕೂ ಹೆಚ್ಚು ಮಕ್ಕಳು ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಮತ್ತು ಉಚಿತವಾಗಿ ಆಹಾರವನ್ನು ನೀಡಲಾಗುತ್ತದೆ.
ಪ್ರಶಸ್ತಿ
ಪುಟ್ಟರಾಜ ಗವಾಯಿಗಳು ಮಾಡಿದ ಸಾಧನೆಗಳಿಗಾಗಿ 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 1993ರಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2000ನೇ ಇಸವಿಯಲ್ಲಿ ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ, ಶ್ರೀ ಜಯಚಾಮರಾಜ ಒಡೆಯರ್ ಅವರಿಂದ ಸನ್ಮಾನ, ಮೈಸೂರು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್ ಹ್ಯಾರಿಸ್ ಪ್ರಶಸ್ತಿಗಳು ಬಂದಿದೆ. 2010ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಪುಟ್ಟರಾಜ ಗವಾಯಿಗಳು ಸೆಪ್ಟೆಂಬರ್ 17, 2010ರ ರಂದು ತಮ್ಮ 97ನೆಯ ವಯಸ್ಸಿನಲ್ಲಿ ನಿಧನರಾದರು.