ಇಂದು ಜಯಂತಿ

ಕೊಡಗಿನ ಗೌರಮ್ಮ ಅವರು ಕನ್ನಡದ ಮೊದಲ ಕಥೆಗಾರ್ತಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧಿ ಪಡೆದವರು. ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆ ನೀಡಿರುವ ಅವರು ತಮ್ಮ ಸಣ್ಣ ಪ್ರಾಯದಲ್ಲೇ ಅನೇಕ ಸಾಧನೆಗೈದಂತಹ ಧೀರ ಮಹಿಳೆ. ಇಂದು ಅವರ ಜಯಂತಿ.

ಪರಿಚಯ
ಕೊಡಗಿನ ಗೌರಮ್ಮ ಅವರು ಮಾರ್ಚ್‌ 5, 1912 ರಂದು ಮಡಿಕೇರಿಯ ಸಣ್ಣ ಗ್ರಾಮದಲ್ಲಿ ಜನಿಸಿದರು. ತಂದೆ ಎಸ್‌ ರಾಮಯ್ಯ, ತಾಯಿ ನಂಜಕ್ಕ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿ ಕಾನ್ವೆಂಟ್‌ ನಲ್ಲಿ ಪಡೆದರು. ಓದುತ್ತಿರುವಾಗಲೇ ಟೆನ್ನಿಸ್‌ ಮತ್ತು ಈಜುಪಟುವಾಗಿ ಪ್ರಸಿದ್ಧಿ ಹೊಂದಿದ್ದರು. ಇವುಗಳ ಜೊತೆಗೆ ಸಾಹಿತ್ಯ ಕಡೆಗೂ ಹೆಚ್ಚು ಒಲವು ತೋರಿದ್ದ ಅವರು ಅನೇಕ ಹಿರಿಯ ಸಾಹಿತಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದರು.


ಸಾಹಿತ್ಯ ಕ್ಷೇತ್ರದ ಕೊಡುಗೆ
ಕೊಡಗಿನ ಗೌರಮ್ಮ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸಣ್ಣಕಥೆಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ್ದ ಅವರು ಮುಂದೆ ಅವುಗಳಿಂದಲೇ ಹೆಚ್ಚು ಪ್ರಸಿದ್ಧಿ ಹೊಂದಿದರು. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ನಿರಂತವಾಗಿ ಭಾಗವಹಿಸುತ್ತಿದ್ದರು. ತಾವು ಬರೆದಂತಹ ಕಥೆಗಳಲ್ಲಿ ಸ್ತ್ರೀ ಪರವಾದ ಚಿಂತನೆ ಒಳಗೊಂಡಿತ್ತು.

ಕೊಡಗಿನ ಗೌರಮ್ಮ 21 ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅವರು ಬರೆದ ಕಥೆಗಳು ಪ್ರಜಾಮತ’, ‘ಜಯ ಕರ್ನಾಟಕ’, ‘ರಾಷ್ಟ್ರಬಂಧು’ ಮತ್ತು ‘ಜಯಂತ’ ದಂತಹ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದವು. ಒಂದು ಪುಟ್ಟ ಚಿತ್ರ’, ವಾಣಿಯ ಸಮಸ್ಯೆ, ಹೋಗಿಯೇ ಬಿಟ್ಟಿದ್ದ, ಕೌಸಲ್ಯಾನಂದನ, ಸನ್ಯಾಸಿ ರತ್ನ, ನನ್ನ ಮದುವೆ, ಅದೃಷ್ಟದ ಆಟ ಮೊದಲಾದ ಕಥೆಗಳನ್ನು ಬರೆದು ಮೆಚ್ಚುಗೆಗೆ ಪಾತ್ರರಾಗಿದ್ದರು. ನಂತರ ಮನುವಿನ ರಾಣಿ ಎಂಬ ಕಥೆಯ ಮೂಲಕ ಉತ್ತಮ ಕಥೆಗಾರ್ತಿ ಎಂಬ ಮೆಚ್ಚುಗೆಯನ್ನು ಪಡೆದಿದ್ದರು.

ದ.ರಾ.ಬೇಂದ್ರೆ , ನಂಜನಗೂಡ ತಿರುಮಲಾಂಬ, ಆರ್. ಕಲ್ಯಾಣಮ್ಮ ಮುಂತಾದ ದಿಗ್ಗಜರಿಂದ ಬೆಂಬಲವನ್ನೂ, ಪ್ರೋತ್ಸಾಹವನ್ನು ಪಡೆಯುತ್ತಿದ್ದ ಗೌರಮ್ಮ ಅವರು ಕನ್ನಡ ಸಾಹಿತ್ಯದಲ್ಲಿ ಭರವಸೆಯ ಕಥೆಗಾರ್ತಿಯಾಗುವತ್ತ ದಾಪುಗಾಲನ್ನಿರಿಸಿದರು.

ಸ್ವಾತಂತ್ರ್ಯ ಚಳುವಳಿ
ಸ್ವಾತಂತ್ರ್ಯ ಚಳುವಳಿಯಿಂದ ಪ್ರಭಾವಿತರಾಗಿದ್ದ ಗೌರಮ್ಮ ಅವರು ಗಾಂಧೀಜಿ ಅವರ ಅನುಯಾಯಿಯಾಗಿದ್ದು, ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದರು. 1934ರಲ್ಲಿ ಮಹಾತ್ಮಾ ಗಾಂಧೀಜಿಯವರು ಕೊಡಗು ಪ್ರವಾಸ ಕೈಗೊಳ್ಳುವ ವೇಳೆ ಮಂಜುನಾಥಯ್ಯ ಎಂಬುವರ ಮನೆಯಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕೆ ಬೆಂಬಲವಾಗಿ ಸಹಾಯ ಮಾಡಬೇಕೆಂದು ಕೊಡಗಿನ ಅನೇಕ ಮಹಿಳೆಯರು ನಿರ್ಧರಿಸಿ ತಮ್ಮ ಒಡವೆಗಳನ್ನು ನೀಡಲು ಮುಂದೆ ಬಂದರು. ಈ ಸಂದರ್ಭದಲ್ಲಿ ಗೌರಮ್ಮ ಕೂಡ ತಮ್ಮ ಮಂಗಳಸೂತ್ರ, ಕಿವಿಯೋಲೆ ಮತ್ತು ಮೂಗುತ್ತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆಭರಣಗಳನ್ನು ಗಾಂಧೀಜಿಗೆ ಹಸ್ತಾಂತರಿಸಲು ನಿರ್ಧರಿಸಿದ್ದರು. ಹಾಗೆಯೇ ಗಾಂಧೀಜಿ ಅವರು ತಮ್ಮ ಮನೆಗೆ ಭೇಟಿ ನೀಡಬೇಕೆಂದು ಬಯಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು.

ಈ ವಿಷಯವನ್ನು ತಿಳಿದ ಗಾಂಧೀಜಿಯವರು ಭೇಟಿ ನೀಡುವುದಾಗಿ ಭರವಸೆಯನ್ನು ನೀಡಿ, ಉಪವಾಸವನ್ನು ನಿಲ್ಲಿಸುವಂತೆ ಹೇಳಿಕಳುಹಿಸಿದರು. ನಂತರ ಗಾಂಧೀಜಿ ಗೌರಮ್ಮನ ಮನೆಗೆ ಭೇಟಿ ಕೊಟ್ಟಾಗ ತನ್ನ ಚಿನ್ನಾಭರಣಗಳನ್ನು ಗಾಂಧೀಜಿಗೆ ಹಸ್ತಾಂತರಿಸಿದಳು.

ಎಪ್ರಿಲ್ 13,1939 ರಂದು ಈಜಲು ಹೋಗಿದ್ದ ಕೊಡಗಿನ ಗೌರಮ್ಮ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.


Leave a Reply

Your email address will not be published.

This site uses Akismet to reduce spam. Learn how your comment data is processed.