ಮೈಸೂರು: ಸಿನೆಮಾ ಎನ್ನುವುದು ಭಾಷೆಗಳನ್ನು ಮೀರಿದ್ದಾದ್ದರಿಂದಲೇ ಅದನ್ನು ವೈಶ್ವಿಕ ಭಾಷೆಯೆಂದು ಕರೆಯಲಾಗುತ್ತದೆ. ಯಾವುದೇ ಭಾಷೆಯ ಬಳಕೆ ಇಲ್ಲದೆಯೂ ಭಾವಗಳ ಮೂಲಕ ಸಿನೆಮಾ ಎನ್ನುವುದು ಪ್ರೇಕ್ಷಕರ ಮನವನ್ನು ಹೊಕ್ಕು ಅಗಾಧವಾದ ಪ್ರಭಾವವನ್ನು ಬೀರಬಲ್ಲ ಸಾಮರ್ಥ್ಯವನ್ನು ಒಳಗೊಂಡಿದೆ. ಸಿನೆಮಾದ ಈ ಸಾಮರ್ಥ್ಯವನ್ನು ಬಳಸಿಕೊಂಡು ಸಾಮಾಜಿಕ ಕಾಳಜಿಗೆ ಆದರ್ಶವಾಗುವಂಥಹ ಕಾರ್ಯವೊಂದಕ್ಕೆ ಮೈಸೂರು ಸಿನೆಮಾ ಸೊಸೈಟಿ ಫೆಬ್ರವರಿ 3 ಮತ್ತು 4, 2024 ರಂದು ಆಯೋಜಿಸಿದ ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಸಾಕ್ಷಿಯಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆದ ಪರಿದೃಶ್ಯ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವವು ವಾಕ್ ಮತ್ತು ಶ್ರವಣ ದೋಷವುಳ್ಳ ವಿಶೇಷಚೇತನರಿಗಾಗಿ ವಿಶೇಷ ಚಲನಚಿತ್ರ ಪ್ರದರ್ಶನ ಏರ್ಪಡಿಸುವ ಮುಖಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಫೆಬ್ರವರಿ 3 ರಂದು ನಡೆದ ಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದ ನಂತರದ ಕಾರ್ಯಕ್ರಮವಾಗಿ ವಾಕ್-ಶ್ರವಣ ದೋಷವುಳ್ಳ ವಿಶೇಷ ಚೇತನ ಮಕ್ಕಳಿಗಾಗಿ ಮೂಕಿ ಚಿತ್ರಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನೂರಾರು ಸಂಖ್ಯೆಯ ಮಕ್ಕಳು ತಮ್ಮ ಪೋಷಕರೊಂದಿಗೆ ಆಗಮಿಸಿ ಈ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು.
ಚಲನಚಿತ್ರ ಮಾಧ್ಯಮವು ಸಂಪೂರ್ಣ ವಾಣಿಜ್ಯೀಕರಣಗೊಂಡಿರುವ ಈ ಹೊತ್ತಿನಲ್ಲಿ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದಲ್ಲಿ ಸರ್ವರಿಗೂ ಉಚಿತ ಪ್ರವೇಶ ವ್ಯವಸ್ಥೆ ಮಾಡಿ, ವಿಶೇಷಚೇತನರಿಗಾಗಿ ಉಚಿತ ಮತ್ತು ವಿಶೇಷ ಚಿತ್ರ ಪ್ರದರ್ಶನ ಕಲ್ಪಿಸಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಗಣ್ಯರ ಭಾಷಣಗಳು ಮತ್ತು ಸೂಚನೆಗಳನ್ನು ಸಂಕೇತ ಭಾಷೆಗೆ ಭಾಷಾಂತರಿಸುವ ಮುಖಾಂತರ ವಿಶೇಷ ಚೇತನ ಮಕ್ಕಳು ಇಡೀ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.
ಕಾರ್ಯಕ್ರಮವನ್ನು ಆಯೋಜಿಸಿದ್ದ ಮೈಸೂರು ಸಿನಿಮಾ ಸೊಸೈಟಿಯ ಈ ನಡೆಯನ್ನು ಚಿತ್ರರಂಗದ ಹಲವಾರು ಗಣ್ಯರು ಶ್ಲಾಘಿಸಿದ್ದಾರೆ. ಸುಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಪ್ಪಾಳೆಗಳ ಮೂಲಕ ಹಾಗೂ ಕೈಸನ್ನೆಗಳ ಮೂಲಕ ಖುಷಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದ ತಮ್ಮ ಮಕ್ಕಳನ್ನು ಕಂಡ ಪೋಷಕರು ಕೂಡ ಅಪಾರ ಸಂತಸ ವ್ಯಕ್ತಪಡಿಸಿದರು. ಪರಿದೃಶ್ಯ ಆಯೋಜಕರ ಸಾಮಾಜಿಕ ಕಾಳಜಿಗೆ ಚಿತ್ರಪ್ರೇಮಿಗಳು ಹಾಗೂ ಸಾರ್ವಜನಿಕರಿಂದಲೂ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.