ಇಂದು ಜಯಂತಿ

ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿದ್ದ ನಿಸಾರ್ ಆಹಮದ್ ಅವರು ಸಾಹಿತ್ಯ ಕ್ಷೇತ್ರ, ಕನ್ನಡ ನಾಡು ನುಡಿಗೆ ನೀಡಿರುವ ಕೊಡುಗೆ ಗಣನೀಯ. ಅವರ ನಿತ್ಯೋತ್ಸವ ಹಾಡು ಇಂದಿಗೂ ಜನಪ್ರಿಯತೆಗೊಂಡಿದೆ. ಇಂದು ಅವರ ಜಯಂತಿ.


ಪರಿಚಯ
ಕೆ.ಎಸ್ ನಿಸಾರ್ ಆಹಮದ್ ಅವರು 5, 1936 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕೆ.ಎಸ್ ಹೈದರ್ ಮತ್ತು ತಾಯಿ ಷಾನ್ ವಾಜ್ ಬೇಗಂ.
ನಿಸಾರ್ ಅಹಮದ್ ಅವರು ಭೂವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡಿದರು. ನಂತರ ಅವರು ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.


ನಿಸಾರ್ ಅವರು ಬಾಲ್ಯದಿಂದಲೇ ಸಾಹಿತ್ಯದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದರು. ಆಗಲೇ ಜಲಪಾತದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದ ಅವರು ಸಾಹಿತ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು.


ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ನಿಸಾರ್ ಅಹಮದ್ ಅವರು ವಿದ್ಯಾರ್ಥಿಯಾಗಿದ್ದಲ್ಲೇ ಸಾಹಿತ್ಯದ ಅನೇಕ ಕವನ ಸಂಕಲನಗಳನ್ನು ರಚಿಸಿದರು. ಅವರಿಗೆ ಎಂ.ಸಿ ಸೀತಾರಾಮಯ್ಯ, ಜಿ.ಪಿ ರಾಜರತ್ನಂ, ಎಲ್ ಗುಂಡಪ್ಪ ಮುಂತಾದ ಗುರುಗಳ ಪ್ರಭಾವ ಬೀರಿತು. ಜೋಗದ ಸಿರಿ ಬೆಳಕಿನಲ್ಲಿ ಎಂಬ ಹಾಡಿನ ಮೂಲಕ ಕರ್ನಾಟಕದ ಜನಸಾಮಾನ್ಯರಿಗೆ ಪರಿಚಯಗೊಂಡಿದ್ದರು.

ನಿಸಾರ್ ಅಹಮದ್ ಅವರು 2003 ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ, ಭಾರತವು ನಮ್ಮ ದೇಶ, ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ. ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ ಪ್ರಸಿದ್ಧ ಕವನ ಸಂಕಲನಗಳಾಗಿವೆ.

ನಿಸಾರ್ ಅಹಮ್ಮದ್ ಅವರು ಸಮಾರು 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು ಹಾಗೂ 13 ಸಂಪಾದನಾ ಗ್ರಂಥಗಳನ್ನು ರಚಿಸಿದ್ದಾರೆ.


ಪ್ರಶಸ್ತಿ
ನಿಸಾರ್ ಅಹಮದ್ ಅವರಿಗೆ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ, 2003 ರಲ್ಲಿನಾಡೋಜ ಪ್ರಶಸ್ತಿ, 2009 ರಲ್ಲಿ ಅರಸು ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ನಿಸಾರ್ ಅಹಮದ್ ಅವರು ಭಾಜನರಾಗಿದ್ದಾರೆ.

ಅನಾರೋಗ್ಯ ಸಮಸ್ಯೆಯಿಂದ ನಿಸಾರ್ ಅಹಮದ್ ಅವರು ಮೇ 3 , 2020 ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.