ಮಂಗಳೂರು, ಫೆಬ್ರವರಿ 6, 2024: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಆಗಿ, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಆಗಿ, ಮಂಗಳೂರು ವಿಭಾಗ ಸಂಘಚಾಲಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಗೋಪಾಲ್ ಚೆಟ್ಟಿಯಾರ್ (78) ಅವರು ಇಂದು ಬೆಳಗ್ಗೆ 2:45ಕ್ಕೆ ದೈವಾಧೀನರಾಗಿದ್ದಾರೆ.

1946 ಅಗಸ್ಟ್ 8ರಂದು ಜನಿಸಿದ ಶ್ರೀ ಗೋಪಾಲ್ ಚೆಟ್ಟಿಯಾರ್ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲದವರು. ವಿದ್ಯಾರ್ಥಿ ಜೀವನದಿಂದಲ್ಲೇ ಸಂಘದ ಸ್ವಯಂಸೇವಕರು, ಕಾರ್ಯಕರ್ತರು. ತಹಸೀಲ್ದಾರರಾಗಿದ್ದ ಅವರು ನಿವೃತ್ತಿಯ ನಂತರ ಪೂರ್ಣಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಶಿಸ್ತುಬದ್ಧ ಜೀವನಶೈಲಿ, ಸೇವಾಭಾವ ಜಾಗರಣ, ಸಾಮಾಜಿಕ ಸಮರಸತೆಯ ಕಾರ್ಯ ಕಾರ್ಯಕರ್ತರಿಗೆ ಮೇಲ್ಪಂಕ್ತಿ.

ಅವರ ಅಂತಿಮ ವಿಧಿವಿಧಾ‌ನಗಳು ಉಪ್ಪಳ ಸಮೀಪದ ಬಂದ್ಯೋಡು ಮನೆಯಲ್ಲಿ ಬೆಳಗ್ಗೆ 11:00ಕ್ಕೆ ನಡೆಯಲಿದೆ.

ಆರ್ ಎಸ್ ಎಸ್ ಸಂತಾಪ: ಅಗಲಿದ ಗೋಪಾಲ್ ಚೆಟ್ಟಿಯಾರ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ, ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ನಂದಕುಮಾರ್, ಆರ್ ಎಸ್ ಎಸ್ ಅಖಿಲ‌ ಭಾರತೀಯ ಕಾರ್ಯಕಾರಿಣಿ ಸದಸ್ಯ ಡಾ. ರಾಮ್ ಮಾಧವ್ ಸಂತಾಪ ಸೂಚಿಸಿದ್ದಾರೆ.

ಸಂತಾಪ ಸಂದೇಶ:

ಶ್ರೀ ಗೋಪಾಲ ಚೆಟ್ಟಿಯಾರರ ನಿಧನದ ಸುದ್ದಿ ಅತೀವ ದುಃಖಕರ. ಅವರ ಕುಟುಂಬಕ್ಕೆ ಹಾಗೂ ಪರಿಚಿತರು, ಅಭಿಮಾನಿಗಳಿಗೆ ನನ್ನ ತೀವ್ರ ಸಂತಾಪಗಳು. ಸಂಘಕಾರ್ಯಕ್ಕೆ ಜೀವನ ಮುಡಿಪಿಟ್ಟು ಸಮಾಜದ ಹಲವು ಮುಖಗಳಲ್ಲಿ ಸಕ್ರಿಯರಾಗಿದ್ದು ಮೌನ ತಪಸ್ಸು ಗೈದ ಚೆಟ್ಟಿಯಾರರು ಆದರ್ಶ ಸ್ವಯಂಸೇವಕರಾಗಿ ಬದುಕಿದರು. ಅಂಥ ಶ್ರೇಷ್ಠ ಜೀವನಕ್ಕೆ ನಮನಗಳು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಪರಮಾತ್ಮ ಗತಿಸಿದ ಆತ್ಮಕ್ಕೆ ಸದ್ಗತಿ ನೀಡಲಿ. ಓಂ ಶಾಂತಿಃ॥

ದಣಿವರಿಯದ ಪರಿಶ್ರಮ
ಬತ್ತದ ಪ್ರೀತಿ, ಮಾಸದ ಕಿರುನಗೆ;
ಸಂಘಟನೆಯ ಶಿಸ್ತು
ಸಮತೋಲನದ
ಸಾದಾ ಜೀವನ – ಉನ್ನತ ಚೇತನ
ತನು ಮನ ಧನ ಜೀವನ
ರಾಷ್ಟ್ರಕ್ಕೆ ಸಮರ್ಪಣ !!

– ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.