

ಡಿಸೆಂಬರ್,17, 2020, ಬೆಂಗಳೂರು: ಕರ್ನಾಟಕದ ರಾಜ್ಯಪಾಲ ವಾಜೂಭಾಯಿ ರುಡಾ ಭಾಯಿ ವಾಲಾರನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನ ಸದಸ್ಯರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ (ಡಿಸೆಂಬರ್ 16) ರಾಜಭವನದಲ್ಲಿ ಭೇಟಿಯಾದರು.
ಅಯೋಧ್ಯಾ ರಾಮಮಂದಿರ ಕಾರ್ಯಕ್ಕೆ ಸಮಸ್ತರ ಬೆಂಬಲ ಸಹಕಾರ ಅಪೇಕ್ಷಿಸಿ ದಕ್ಷಿಣ ರಾಜ್ಯಗಳ ಸಂಚಾರದಲ್ಲಿರುವ ಶ್ರೀಗಳು ನಾಡುನ ಜನತೆಯ ಬೆಂಬಲ ನೀಡುವಂತೆ ರಾಜ್ಯಪಾಲರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡರು.
ಶ್ರೀಗಳವರನ್ನು ಶ್ರದ್ಧೆಯಿಂದ ಬರಮಾಡಿಕೊಂಡು ಗೌರವ ಅರ್ಪಿಸಿದ ರಾಜ್ಯಪಾಲರು ಕೆಲ ಸಮಯ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು. 1953ರಲ್ಲಿ ಗುರೂಜಿ ಗೋಳ್ವಲ್ಕರ್ ಅವರು ಗೋಹತ್ಯಾ ನಿಷೇಧಕ್ಕೆ ಕರೆ ಕೊಟ್ಟಾಗ ತಾನಿನ್ನೂ ಎಳೆಯ ಯುವಕನಾಗಿದ್ದೆ. ಇನ್ನೋರ್ವ ಸ್ನೇಹಿತನೊಂದಿಗೆ ಸೈಕಲ್ ನಲ್ಲಿ ಗುಜರಾತಿನ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಿದ್ದು. ಸಾಕ್ಷರತೆಯ ಕೊರತೆ ಇದ್ದ ಆ ಕಾಲದಲ್ಲಿ ಜನರು ಹೆಬ್ಬೆಟ್ಟೊತ್ತಿ ಬೆಂಬಲಿಸಿದ್ದನ್ನು ಸ್ಮರಿಸಿದರು . ಮತ್ತು ಅಯೋಧ್ಯಾ ಆಂದೋಲನದ ವಿವಿಧ ಹಂತಗಳಲ್ಲಿ ಪಾಲ್ಗೊಂಡದ್ದನ್ನು ಸ್ಮರಿಸಿ ರಾಮ ಮಂದಿರ ನಿರ್ಮಾಣದ ಕಾರ್ಯದಲ್ಲಿ ಪೂರ್ಣ ಬೆಂಬಲಿಸುವುದಾಗಿ ತಿಳಿಸಿದರು .


ಪೇಜಾವರ ಶ್ರೀಗಳು ರಾಜ್ಯಪಾಲರಿಗೆ ಶಾಲು ಹೊದೆಸಿ ಸ್ಮರಣಿಕೆ ಫಲ ಪುಷ್ಠ ಸಹಿತ ಆಶೀರ್ವದಿಸಿದರು . ವಿ ಹಿಂ ಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಶ್ರೀಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.