ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ಕರ್ನಾಟಕದ ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ.)

ಕರ್ನಾಟಕದಲ್ಲಿನ ನಯನ ಮನೋಹರ ಪ್ರವಾಸಿ ತಾಣಗಳಲ್ಲಿ ನಿಮ್ಮ ಮತ ಯಾವುದಕ್ಕೆ ಎಂಬ ಪ್ರಶ್ನೆಗೆ ಮೈಸೂರು ಅರಮನೆ, ಹಂಪಿ, ಹಾಗೂ ಜೋಗ ಜಲಪಾತ ಮೊದಲ ಮೂರು ಸ್ಥಾನದಲ್ಲಿದ್ದವು. ಪ್ರವಾಸ ಎಲ್ಲರಿಗೂ ಮುದ ನೀಡುತ್ತದೆ. ಯಾವ ಸ್ಥಳಕ್ಕೆ ಹೋಗಬೇಕು ಎಂಬುದು ಸಂದರ್ಭಕ್ಕೆ ತಕ್ಕಂತೆ, ಕಾಲಕ್ಕೆ ತಕ್ಕಂತೆ ಜನರ ಮನದಲ್ಲಿ ಬದಲಾಗುತ್ತಿರುತ್ತದೆ. ಚಾರಣಕ್ಕೆ ಹೋಗಲು ಮಳೆಗಾಲ ಸೂಕ್ತವಲ್ಲ. ಜಲಪಾತ ನೋಡಲು ಮಳೆಗಾಲದಲ್ಲಲ್ಲದೆ ಬೇಸಿಗೆಯಲ್ಲಿ ಹೋದರೆ ಅದರ ವೈಭವ ಸವೆಯುವುದು ಕಷ್ಟಸಾಧ್ಯ. ದೇವಸ್ಥಾನಗಳಿಗೆ ಸದಾ ಕಾಲ ಹೋಗಬಹುದು. ಕೋಟೆ ಕೊತ್ತಲಗಳನ್ನು ನೋಡಲು ಸೂಕ್ತ ಸಮಯವನ್ನು ಗುರುತು ಮಾಡಿಕೊಳ್ಳಬೇಕಾಗುತ್ತದೆ.

ಇವನ್ನೆಲ್ಲ ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ, ನಾಡಿನ ಸಂಸ್ಕೃತಿ ಸಾರುವುದು ನಮ್ಮ ರಾಜ ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿತವಾದ ಅರಮನೆಗಳು, ಕೋಟೆ, ದೇವಸ್ಥಾನಗಳು ಎಂಬುದು ನಾವು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಬಂದ ರೀತಿಯಿಂದ ತಿಳಿದು ಬರುತ್ತದೆ. ಮೈಸೂರಿನ ಅರಮನೆಯನ್ನು ನೋಡಲು, ಕಣ್ಣು ತುಂಬಿಸಿಕೊಳ್ಳಲು ಕೇವಲ ನಮ್ಮ ರಾಜ್ಯ, ದೇಶಗಳಿಂದಲ್ಲದೇ ಹೊರದೇಶಗಳಿಂದಲೂ ಜನರು ಬರುತ್ತಾರೆ. ಸಾಂಸ್ಕೃತಿಕ ನಗರಿ ಎಂದೇ ಕರೆಯಲ್ಪಡುವ ಮೈಸೂರು, ಕರ್ನಾಟಕದ ಸಂಸ್ಕೃತಿಯನ್ನು ಸಾರುತ್ತದೆ. ಅರಮನೆಯನ್ನು ನೋಡುವಾಗ, ನಮ್ಮದೇ ರಾಜ್ಯದಲ್ಲಿ ಮೈಸೂರಿನ ಅರಸರನ್ನು ಬಿಟ್ಟು ಮೈಸೂರಿನ ರಾಜರನ್ನು , ಕನ್ನಡವನ್ನು ಕಡೆಗಣಿಸಿದ, ಟಿಪ್ಪುವಿನ ಜಯಂತಿ ಮಾಡಿದ ಸರ್ಕಾರವನ್ನು ನೆನೆದು ಹೇವರಿಕೆ ಹುಟ್ಟುತ್ತದೆ. ಇನ್ನು ಹಂಪಿ. ಕುವೆಂಪುರವರು ಬರೆದಿರುವಂತೆ, “ಹಾಳಾಗಿಹ ಹಂಪೆಗೆ ಕೊರಗುವ ಮನ.” ಹಂಪಿಗೆ ಹೋದ ಯಾತ್ರಿಕರು ನೆನಪಿಸಿಕೊಳ್ಳುವ ಸಂಗತಿಯಂದರೆ, ಅವರಿಗೆ ಅಲ್ಲಿನ ಯಾತ್ರಾ ಮಾರ್ಗದರ್ಶಕ ಕೇಳುವ ಮೊದಲ ಪ್ರಶ್ನೆ- “ನೀವು ಎಷ್ಟು ದಿನ ಇಲ್ಲಿ ಇರುತ್ತೀರಿ?” ತಿಂಗಳುಗಟ್ಟಲೆ ಇರುವಿರಾದರೆ ಹಂಪಿಯನ್ನು ನೋಡುವ ವಿಧಾನ, ಒಂದೆರಡು ದಿನಗಳಲ್ಲಿ ನೋಡಬೇಕಾದರೆ ನೋಡುವ ವಿಧಾನ, ಒಂದು ವಾರ ಇರುವುದಾದರೆ ನೋಡುವ ವಿಧಾನವೇ ಬೇರೆ. ಪ್ರತಿ ಬಾರಿ ಹಂಪಿಯಲ್ಲಿ ಪ್ರವಾಸ ಮಾಡುವಾಗ ಅಲ್ಲಿನ ದೇವಸ್ಥಾನಗಳನ್ನು ನಿಧಿಗಾಗಿ, ಹಿಂದೂ ಸಂಸ್ಕೃತಿಯ ನಾಶಕ್ಕಾಗಿ ಹಂಬಲಿಸಿದ ಮುಸಲ್ಮಾನ ರಾಜರುಗಳನ್ನು ಹಳಿಯುವ ಪರಿಸ್ಥಿತಿ ಉಂಟಾಗುತ್ತದೆ.

ಮೂರನೆಯ ಸ್ಥಾನದಲ್ಲಿ ಜೋಗ ಜಲಪಾತ. ಜೋಗ ಜಲಪಾತ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದು. ಶರಾವತಿ ನದಿಯು ರಾಜಾ-ರಾಣಿ-ರಾಕೆಟ್-ರೋರರ್ ಎಂಬಾಗಿ ಸೀಳೊಡೆದು ಧುಮುಕುವ ಈ ಜಲಪಾತ ಮಳೆಗಾಲದಲ್ಲಿ ಸುತ್ತಲಿನ ಹಸಿರು, ಬೆಟ್ಟ ಗುಡ್ಡಗಳ ಜೊತೆ ನೋಡಲು ರಮಣೀಯ.

ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ

Leave a Reply

Your email address will not be published.

This site uses Akismet to reduce spam. Learn how your comment data is processed.