ಅಶ್ವತ್ಥನಾರಾಯಣ
ಮೈಸೂರು

ನಮ್ಮಯ ನಾಡಿದು ಕನ್ನಡ ದೇಗುಲ
ಭುವನೇಶ್ವರಿಯನು ನೆನೆಯೋಣ|
ಹೆಮ್ಮೆಯ ಬೀಡಿದು ಹಿರಿಮೆಯ ಪಡೆದಿದೆ
ನಾಡಿನ ಕವಿಗಳ ಸ್ಮರಿಸೋಣ|`

ಧೀರರು ಶೂರರು ಜನ್ಮಿಸಿ ಬಂದಿಹ
ಪುಣ್ಯದ ಭೂಮಿಯು ಕರುನಾಡು|
ಕೀರುತಿ ತಂದಿಹ ಹೊನ್ನಿನ ನಾಡಿದು
ಹಸುರಿನ ವನಸಿರಿ ನೆಲೆಬೀಡು||

ವಿವಿಧತೆಯಲ್ಲೂ ಏಕತೆ ಪಡೆದಿಹ
ಸೋದರ ಬಂಧದ ಸಿರಿನಾಡು|
ತವನಿಧಿ ಕನ್ನಡ ಉನ್ನತ ಭಾಷೆಯು
ಸರ್ವರ ಸೆಳೆವುದು ನುಡಿಹಾಡು||

ನಾರಾಣಪ್ಪನ ಪಂಪನ ರನ್ನನ
ಕಾವ್ಯದ ಸೊಬಗದು ಬಲುಮಾನ್ಯ|
ಸಾರವು ತುಂಬಿದ ಕಾವ್ಯಗಳಾಗರ
ಗ್ರಂಥವನೋದುವ ಜನಧನ್ಯ||

ಶರಣರು ನೀಡಿದ ಮೌಲ್ಯದ ವಚನವು
ಜನತೆಗೆ ನೀತಿಯ ಬೋಧಿಸಿದೆ|
ಹರಿಹರ ಜನ್ನರ ಕಾವ್ಯದ ಸುಧೆಯನು
ಸವಿಯುವ ಭಾಗ್ಯವು ಸಿಗುತಲಿದೆ||

ತುಂಗೆಯು ಭದ್ರೆಯು ಕಾವೇರಿಯಜಲ
ನಾಡಲಿ ಹಸುರನು ಹೆಚ್ಚಿಸಿದೆ|
ಶೃಂಗದ ಪರ್ವತ ಶ್ರೇಣಿಯ ಸೊಬಗದು
ತನ್ನೆಡೆ ಜನರನು ಸೆಳೆಯುತಿದೆ||

ಸುಂದರ ಶಿಲ್ಪದ ಕಲೆಯದು ಭವ್ಯವು
ನಾಡಿಗೆ ಗರಿಮೆಯ ತಂದಿಹುದು|
ಮಂದಿರದಲ್ಲಿನ ದೇವರ ಮೂರ್ತಿಯು
ಭಕ್ತಿಯ ಭಾವವ ತುಂಬಿಹುದು||

Leave a Reply

Your email address will not be published.

This site uses Akismet to reduce spam. Learn how your comment data is processed.