ಕೊರೊನಾ ವಿರುದ್ಧದ ಹೋರಾಟ ಮತ್ತು ಶ್ರೀರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಅಭೂತಪೂರ್ವ ಸ್ಪಂದನೆಗಾಗಿ ಸಮಾಜವನ್ನು ಶ್ಲಾಘಿಸಿದ ಆರೆಸ್ಸೆಸ್.

ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಪರಿಸರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಎರಡನೇ ದಿವಸದ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಹೊಸದಾಗಿ ಸರಕಾರ್ಯವಾಹರಾಗಿ ಚುನಾಯಿತರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಮಾತನಾಡಿದರು.

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿನಿಧಿ ಸಭಾದಲ್ಲಿ ಅಂಗೀಕರಿಸಲಾದ ನಿರ್ಣಯಗಳು, ಮುಂದಿನ ವರ್ಷಗಳಲ್ಲಿ ರಾ ಸ್ವ ಸಂಘ ಕೈಗೊಳ್ಳಲಿರುವ ಕಾರ್ಯಗಳು ಮತ್ತು ಇಂದಿನ ಸಾಮಾಜಿಕ ಮಹತ್ವವುಳ್ಳ ವಿಷಯಗಳ ಕುರಿತು ಸರಕಾರ್ಯವಾಹರು ವ್ಯಕ್ತಪಡಿಸಿದ ಅಭಿಪ್ರಾಯದ ಸಾರಾಂಶ:

ಸಾಮಾನ್ಯವಾಗಿ ಸಂಘದಲ್ಲಿ ಚುನಾವಣೆ ನಡೆಯುವ ವರ್ಷ ನಾಗಪುರದಲ್ಲಿ ಪ್ರತಿನಿಧಿ ಸಭಾ ನಡೆಯುತ್ತದೆ. ಆದರೆ ಕೊರೊನಾ ಕಾರಣದಿಂದ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಸಭೆ ನಡೆದಿರಲಿಲ್ಲ. ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ಎಲ್ಲ ನಿಯಮಗಳ ಅನುಸಾರ ನಿನ್ನೆಯಿಂದ ಆರಂಭವಾಗಿದ್ದು ಇಂದು ಸಂಜೆ ಕೊನೆಗೊಳ್ಳಲಿದೆ. ಈಗಾಗಲೇ ಸಹಯೋಗಿ ಅರುಣ ಕುಮಾರ್‌ ಅವರು ಹೇಳಿದಂತೆ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮೂರು ವರ್ಷಗಳ ಚುನಾವಣೆಯ ನಂತರ ನನಗೆ ಹೊಸ ಜವಾಬ್ದಾರಿ ದೊರಕಿದ್ದು ಅದಕ್ಕಾಗಿ ತಮ್ಮೆಲ್ಲರ ಸಹಯೋಗವನ್ನು ಅಪೇಕ್ಷಿಸುತ್ತೇನೆ.

ಸಮಾಜದಲ್ಲಿ ಇಂದು ಸಂಘದ ಕಾರ್ಯ ಅಪರಿಚಿತವಲ್ಲ. ದೇಶವಿದೇಶಗಳಲ್ಲಿ ಸಂಘದ ಬಗ್ಗೆ ಪರಿಚಯವಿದೆ, ಪ್ರಶಂಸೆಯಿದೆ, ಜಿಜ್ಞಾಸೆಯಿದೆ, ಸಹಯೋಗವಿದೆ ಕೆಲವು ಪ್ರಶ್ನೆಗಳೂ ಇರಬಹುದು ಮತ್ತು ಸಂಘದ ಕಾರ್ಯದ ಸ್ವಾಗತ ಎಲ್ಲೆಡೆ ಇದೆ ಎನ್ನುವುದು ನಮಗೆ ಪ್ರತಿದಿನ ಅನುಭವದಲ್ಲಿ ಕಾಣುತ್ತದೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳವರೆಗೆ ಸಂಘದ ಕಾರ್ಯದಲ್ಲಿ ಸ್ವಯಂಸೇವಕರಿಗೆ ಸ್ನೇಹ ಮತ್ತು ಆತ್ಮೀಯತೆಯೊಂದಿಗೆ ಸಹಯೋಗ ದೊರಕುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.


ಕಳೆದ ವರ್ಷ ಕೊರೊನಾ ಕಾರಣದಿಂದ ಸಂಘದ ಕೆಲಸಲದಲ್ಲಿ ಸ್ವಲ್ಪ ತೊಡಕುಂಟಾಯಿತು, ಅಂದರೆ ನಿತ್ಯಾಶಾಖೆಗಳನ್ನು ನಾವು ನಡೆಸುವುದು ಸಾಧ್ಯವಾಗಲಿಲ್ಲ. ತೆರೆದ ಮೈದಾನಲ್ಲಿ ಸ್ವಯಂಸೇವಕರು ಒಂದೆಡೆ ಸೇರಿ ಶಾಖೆ ನಡೆಸುವುದು ಸಾಧ್ಯವಿರಲಿಲ್ಲ, ದೇಶದ ಪ್ರತಿ ನಾಗರಿಕನೂ ಕೋವಿಡ್‌ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ನಿಯಮಗಳನ್ನು ಪಾಲಿಸುವ ಅಗತ್ಯವಿತ್ತು. ಸಹಜವಾಗಿ ಸಂಘಕಾರ್ಯದ ಒಂದು ಹೊಸ ಆಯಾಮ ನಮ್ಮ ಗಮನಕ್ಕೆ ಬಂತು. ಮನೆಯಲ್ಲಿದ್ಧೂ ಸಹ ಸ್ವಯಂಸೇವಕತ್ವವನ್ನು, ಸಂಘದ ಕಾರ್ಯಕರ್ತೃತ್ವವನ್ನು ಜಾಗೃತವಾಗಿರಸುವ, ಕ್ರಿಯಾಶೀಲವಾಗಿರಿಸುವ ಕಾರ್ಯವನ್ನು ಸ್ವಯಂಸೇವಕರು ದೇಶದೆಲ್ಲೆಡೆ ಮಾಡಿದರು. ಜೊತೆಗೆ ಸಾಮಜಿಕ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದರು.


ಸ್ವಯಂಸೇವಕರು ಈ ಮಹಾಮಾರಿಯ ಸಂಕಷ್ಟದ ಕಾಲದಲ್ಲಿ ಸಮಾಜದ ಸೇವೆಯನ್ನು ಮಾಡಿದರು, ಸಮಾಜದ ಸಹಯೋಗದೊಂದಿಗೆ ಸರ್ವರ ಸೇವೆಯನ್ನೂ ಮಾಡಿದರು. ಲಕ್ಷ ಕೋಟಿ ಜನರ ದಿನನಿತ್ಯದ ಜೀವನಕ್ಕೆ ಅವಶ್ಯಕವಾದ ಆಹಾರ, ಔಶಧ ಮೊದಲಾದವುಗಳನ್ನು ತಲುಪಿಸುವ ಕೆಲಸವನ್ನು ಸಂಘದ ಸ್ವಯಂಸೇವಕರು ಮಾಡಿದರು. ಸಮಾಜದ ಋಣ ತೀರಿಸುವ ಅವಕಾಶ ಯಾವಾಗ ದೊರಕಿದರೂ ಸ್ವಯಂಸೇವಕರು ಎಂದಿಗೂ ಹಿಂದೆ ಹಜ್ಜೆ ಇಡಲಿಲ್ಲ. ಆ ಸಮಯದಲ್ಲಿಯೂ ವಿಶಾಖಾಪಟ್ಟಣ ಮತ್ತಿತರ ಕಡೆ ದುರ್ಘಟನೆಗಳು ನಡೆದವೂ, ಅನೇಕ ಕಡೆ ಪ್ರವಾಹ ಬಂತು. ಸ್ವಯಂಸೇವಕರು ಅಲ್ಲೆಲ್ಲ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು.


ಸಂಕಟಮಯ ಸನ್ನಿವೇಶದಲ್ಲಿ ಇಡೀ ದೇಶ ಒಂದಾಗಿ ನಿಲ್ಲಬೇಕು. ಇದು ವಿಶ್ವದೆಲ್ಲಡೆಯ ಇತಿಹಾಸವೂ ಹೌದು. ಇಡೀ ಭಾರತ ಕೊರೊನಾದ ಸಂದರ್ಭದಲ್ಲಿ ಒಂದಾಗಿ ನಿಂತಿತು ಮತ್ತು ಈ ಮಹಾಮಾರಿಯನ್ನು ಎದುರಿಸುವಲ್ಲಿ ಅದ್ಭುತ ಯಶಸ್ಸು ಪಡೆಯಿತು. ಸಮಾಜದ ಈ ಒಗ್ಗಟ್ಟಿನ ಸ್ಪಂದನೆಯನ್ನು ಅಖಿಲ ಭಾರತ ಪ್ರತಿನಿಧಿ ಸಭಾ ಗುರುತಿಸಿ ಶ್ಲಾಘಿಸುವ ನಿರ್ಣಯವನ್ನು ಅಂಗೀಕರಿಸಿದೆ. ದೇಶ ತನ್ನ ಶ್ರೇ‍ಷ್ಠ ಸಾಮರ್ಥ್ಯವನ್ನು, ಶಕ್ತ, ಹೊಂದಿಕೊಳ್ಳುವ ಗುಣ, ಕಾಳಜಿಯನ್ನು ಪ್ರದರ್ಶಿಸಿತು. ಈ ಕಷ್ಟದ ಸಮಯದಲ್ಲಿ ಭಾರತದ ಜನತೆ ಸ್ವಾವಲಂಬಿಯಾಗುವ ಪ್ರಯತ್ನವನ್ನೂ ಮಾಡಿದರು. ಈ ಸಂದರ್ಭದಲ್ಲಿ ದೇಶ ಸ್ಪಂದಿಸಿದ ರೀತಿಯನ್ನು ಒಂದು ಪ್ರೇರಣೆಯಾಗಿ ನಾವು ಎಂದಿಗೂ ಕಾಣಬೇಕು, ಮುಂದಿನ ತಲೆಮಾರು ಈ ದೇಶ ಎಂತಹ ಕಷ್ಟವನ್ನಾದರೂ ಎದುರಿಸಬಲ್ಲದು ಮತ್ತು ಯಶಶ್ವಿಯಾಗಬಲ್ಲದು ಎನ್ನುವುದಕ್ಕೆ ಮಾದರಿಯಾಗುವಂತೆ ಈ ಸಮಯವನ್ನು ಒಂದು ಸ್ಫೂರ್ತಿದಾಯಕ ಕಾಲ ಎಂದು ಕಾಣುತ್ತದೆ ಎನ್ನುವ ವಿಶ್ವಾಸ ನನಗಿದೆ.


ಎರಡನೆಯದಾಗಿ ಇತ್ತೀಚೆಗೆ ಸಂಪನ್ನಗೊಂಡ ಶ್ರೀ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಮಹಾಸಂಪರ್ಕ ಅಭಿಯಾನದ ಸಂದರ್ಭದಲ್ಲಿ ಭಾರತ ತನ್ನ ತನ್ನ ಅಂತರ್ಗತ ಶಕ್ತಿಯನ್ನು ಪ್ರದರ್ಶನ ನಡೆಯಿತು . ಹೊಸ ಭಾರತ ನಿರ್ಮಾಣದ ಸ್ವರ್ಣಿಮ ಅಧ್ಯಾಯ ಆರಂಭದ ಈ ಸಂದರ್ಭದಲ್ಲಿ ಸಂಘವೂ ಪೂರ್ಣ ರೂಪದಲ್ಲಿ ತೊಡಗಿಕೊಂಡಿತು. ಅದಕ್ಕಾಗಿ ಸಂಕ್ರಾಂತಿಯಿಂದ ಆರಂಭಗೊಂಡ 44 ದಿನಗಳ ಸಂಪರ್ಕ ಅಭಿಯಾನದಲ್ಲಿ ಸಂಘ ಪಾಲ್ಗೊಂಡಿತು. ಈ ಸಂದರ್ಭದಲ್ಲಿ ಸಮಾಜದ ಸ್ಪಂದನೆ ಐತಿಹಾಸಿಕವಾಗಿತ್ತು, ಅಭೂತಪೂರ್ಣವಾಗಿತ್ತು. ಸುಮಾರು 12 ಕೋಟಿ ಕುಂಟುಂಬಗಳು ಸಂಪರ್ಕಮಾಡಲಾಯಿತು, 5.5ಲಕ್ಷ ಸ್ಥಾನಗಳಲ್ಲಿ ಅಭಿಯಾನ ನಡೆಯಿತು.


ಆರೆಸ್ಸೆಸ್‌ 2025ರಲ್ಲಿ ನೂರನೇ ವರ್ಷ ತಲುಪುತ್ತಿರುವ ಸಮಯದಲ್ಲಿ ಭಾರತದಾದ್ಯಂತ ಸಂಘ ಕಾರ್ಯವನ್ನು ಪ್ರತಿ ಮಂಡಲದ ತನಕ ಮುಟ್ಟಿಸಬೇಕು ಎಂದು ನಿರ್ಣಯಿಸಲಾಗಿದೆ. ಪರಿವಾರ ಪ್ರಬೋಧನ, ಗೋಸೇವಾ, ಪರಿಸರ ಸಂರಕ್ಷಣೆ, ಜಲಸಂರಕ್ಷಣೆ, ಸಮಾಜ ಸಮರಸತೆ, ಗ್ರಾಮ ವಿಕಾಸ ಇತ್ಯಾದಿ ಸಮಾಜಹಿತ ಕಾರ್ಯಗಳಲ್ಲಿ ಸಂಘ ತೊಡಗಿಕೊಳ್ಳಲಿದೆ. ಭಾರತೀಯ ವಿಚಾರವನ್ನು ಸರಿಯಾದ ದೃಷ್ಟಿಕೋನದಲ್ಲಿ ಮುಂದಿಡಲು – ವೈಚಾರಿಕ ಪ್ರಬೋಧನ ಯೋಜನೆ ನಡೆಸಲಾಗುವುದು. ಭಾರತದ ನೆರೇಟಿವ್‌ ಅನ್ನು ವಿಶ್ವದ ಮುಂದೆ ಸರಿಯಾದ ರೀತಿಯಲ್ಲಿ ಮುಂದಿಡಲು ಒಂದು ಅಭಿಯಾನ ಮುಂದಿನ ಮೂರು ವರ್ಷಗಳಲ್ಲಿ ನಡೆಸಲಾಗುವುದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಅರುಣ ಕುಮಾರ ಅವರು ಹೊಸದಾಗಿ ಸರಕಾರ್ಯವಾಹರಾಗಿ ಚುನಾಯಿತರಾದ ಶ್ರಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪರಿಚಯಿಸಿದರು.
ಪತ್ರಿಕಾಗೋ‍ಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲಭಾರತೀಯ ಸಹ ಪ್ರಚಾರ ಪ್ರಮುಖರಾದ ಶ್ರೀ ನರೇಂದ್ರ ಠಾಕೂರ್‌ ಮತ್ತು ಶ್ರೀ ಸುನಿಲ್ ಅಂಬೇಕರ್‌, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಅವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.