RSS General Secreatry Bhaiyyaji Joshi facilitated Madhya Pradesh's Organic Farmer Jayaram Patidar at Theerthahalli, Karnataka on April-10-2013.

ಸುಜಲಾಂ ಸುಫಲಾಂ ಸಾಕಾರಕ್ಕೆ ಸಾವಯವವೇ ದಾರಿ

April 10 ತೀರ್ಥಹಳ್ಳಿ: ರಾಸಾಯಿನಿಕದ ಅತಿ ಬಳಕೆಯಿಂದ ಭೂಮಿ ವಿಷಮಯವಾಗುತ್ತಿದೆ. ಭೂಮಿಯ ಪುನಃಶ್ಚೇತನಕ್ಕೆ ಗೋರಕ್ಷಾ ಆಂದೋಲನ ಅನಿವಾರ್ಯ ಎಂದು ಮಧ್ಯಪ್ರದೇಶದ ಪ್ರಯೋಗಶೀಲ

ರೈತ ಜಯರಾಮ ಪಾಟೀದಾರ ಹೇಳಿದರು.

RSS General Secreatry Bhaiyyaji Joshi facilitated Madhya Pradesh's Organic Farmer Jayaram Patidar at Theerthahalli, Karnataka on April-10-2013.
RSS General Secretary Suresh Bhaiyyaji Joshi facilitated Madhya Pradesh’s Organic Farmer Jayaram Patidar at Theerthahalli, Karnataka on April-10-2013.

ಕೃಷಿಋಷಿ ಪುರುಷೋತ್ತಮರಾಯರ ಹೆಸರಿನಲ್ಲಿ ಕುರುವಳ್ಳಿಯ ಕೃಷಿ ಸಂಶೋಧನಾ ಪ್ರತಿಷ್ಠಾನ ನೀಡುವ ‘ಪುರುಷೋತ್ತಮ ಸನ್ಮಾನ’ ಸ್ವೀಕರಿಸಿ ಮಾತನಾಡಿದ ಅವರು, ಸಾವಯವ ವಿಧಾನದಲ್ಲಿ ಬದುಕಿಗೆ ಬೇಕಾದ ಎಲ್ಲ ಆಹಾರ ಉತ್ಪನ್ನಗಳನ್ನು ಬೆಳೆದುಕೊಳ್ಳಬೇಕು. ಆ ಮೂಲಕ ರೈತರು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ನನ್ನ ಭೇಟಿಯಾದ ಅನೇಕರು ’ನಿಮ್ಮ ಬದುಕಿನ ಗುರಿ ಏನು’ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಇಲ್ಲಿಯವರೆಗೆ ನನಗೆ ಉತ್ತರ ಸಿಕ್ಕಿಲ್ಲ. ಆದರೆ ಇಷ್ಟಂತೂ ಸ್ಪಷ್ಟ; ಪರಿಶ್ರಮ ಮತ್ತು ಗೋ ಸೇವೆಯಿಂದ ನನಗೆ ನೆಮ್ಮದಿ ಸಿಕ್ಕಿದೆ. ಸಾವಯವ ವಿಧಾನದ ಕೃಷಿ ಮತ್ತು ಗೋ ಸೇವೆ ಪ್ರಾರಂಭಿಸಿದ ಈ ೫ ವರ್ಷಗಳಲ್ಲಿ ನಾನಾಗಲೀ ನನ್ನ ಕುಟುಂಬದ ಸದಸ್ಯರಾಗಲಿ ಆಸ್ಪತೆಗೂ ಹೋಗಿಲ್ಲ- ಬ್ಯಾಂಕ್‌ಗೂ ಅಲೆದಾಡಿಲ್ಲ ಎಂದು ವಿವರಿಸಿದರು.

book release

ಗೋವು ಮತ್ತು ಪಂಚಗವ್ಯ ಆಧರಿತ ಉತ್ಪನ್ನಗಳ ಬಹುವಿಧ ಬಳಕೆಯಿಂದ ಗೋಶಾಲೆ, ಗೋ ಸಾಕಾಣಿಕೆ ಸ್ವಾವಲಂಬಿಯಾಗಲು ಸಾಧ್ಯ. ನನ್ನ ಊರಾದ ಚಾಕರೋದದಲ್ಲಿರುವ ಶ್ರೀ ಕೃಷ್ಣ ಬಲರಾಮ ಗೋಶಾಲೆಯಲ್ಲಿ ನಾನು ಇದನ್ನು ಸಾಧಿಸಿ ತೋರಿಸಿದ್ದೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಗೋವು ಈ ದೇಶದ ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು. ಹುಲಿಯನ್ನು ರಾಷ್ಟ್ರಪ್ರಾಣಿ ಮಾಡಿರುವುದರಿಂದ ಜನರಲ್ಲಿ ಹಿಂಸಾ ಮನೋಭಾವ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಭಗವಾನ್ ಕೃಷ್ಣ ಯಮುನಾ ನದಿಯಲ್ಲಿ ಕಾಳಿಂಗ ಮರ್ದನ ಮಾಡಿ ಆ ದಿನಗಳಲ್ಲಿಯೇ ಪರಿಸರ ಚಳವಳಿ ಹುಟ್ಟು ಹಾಕಿದೆ. ಅಂದು ಕಾಳಿಂಗನಿದ್ದ ಜಾಗದಲ್ಲಿ ಇಂದು ಕಾರ್ಖಾನೆಗಳು ಬಂದಿವೆ. ಹೀಗಾಗಿ ನದಿ ನೀರು ಬಳಸಬೇಡಿ. ಅದರಲ್ಲಿ ವಿಷ ಸೇರಿದೆ ಎಂದು ಹೇಳುವ ಸ್ಥಿತಿ ಬಂದಿದೆ ಎಂದರು.

ಸಾವಯವ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಜೋಷಿ, ಭಾರತದ ಆತ್ಮವನ್ನು ಅರಿಯದೇ ಜಾರಿಗೊಳಿಸಿದ ಪಂಚವಾರ್ಷಿಕ ಯೋಜನೆಗಳೇ ಗ್ರಾಮೀಣ ಭಾರತದ ಇಂದಿನ ದುಃಸ್ಥಿತಿಗೆ ಕಾರಣ. ಹಸಿರು ಕ್ರಾಂತಿಗೆ 50 ವರ್ಷ ತುಂಬಿರುವ ಈ ಸಂದರ್ಭದದಲ್ಲಿ ಪಂಚವಾರ್ಷಿಕ ಯೋಜನೆಗಳ ಸಾಧಕ- ಬಾಧಕಗಳ ಬಗ್ಗೆ ಪುನವಿಮರ್ಶೆ ನಡೆಯಬೇಕು ಎಂದು ಹೇಳಿದರು.

ಹೈಬ್ರೀಡ್ ತಳಿಗಳು ಮತ್ತು ರಾಸಾಯನಿಕಗಳ ಮೂಲಕ ಹಸಿರು ಕ್ರಾಂತಿ ಮಾಡಲು ಹೊರಟು ದೇಸಿ ಕೃಷಿ ಪದ್ಧತಿಯ ಅನೇಕ ಮೂಲ ಸಂಗತಿಗಳನ್ನು ಕಳೆದುಕೊಂಡೆವು. ದಿಕ್ಕುತಪ್ಪಿದ ಕೃಷಿ ನೀತಿಯಿಂದ ರೈತರು ಕಂಗಾಲಾಗಿದ್ದಾರೆ. ಕೀಟನಾಶಕಗಳ ಬಳಕೆಯಿಂದ ಕೃಷಿಗೆ ಪೂರಕವಾದ ಅನೇಕ ಕೀಟಗಳು ಕಣ್ಮರೆಯಾದವು. ಹೀಗಾಗಿ ಕೀಟ ನಿಯೋಜನೆಯಂಥ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ ಎಂದು ವಿಷಾದಿಸಿದರು.

ದಿಕ್ಕು ತಪ್ಪಿದ ಪ್ರವಾಹವನ್ನು ಮತ್ತೆ ಸರಿದಾರಿಗೆ ತರಲು ಜಯರಾಮ ಪಾಟೀದಾರ- ಪುರುಷೋತ್ತಮರಾಯರಂಥ ರೈತರ ಸಂಖ್ಯೆ ಹೆಚ್ಚಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕೃಷಿ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಸುಬ್ಬರಾವ್, ವಿಶ್ವಸ್ಥರಾದ ಎ.ಎಸ್.ಆನಂದ, ವಿ.ಕೆ.ಅರುಣ್‌ಕುಮಾರ್ ಉಪಸ್ಥಿತರಿದ್ದರು.

ಸನ್ಮಾನಕ್ಕೆ ಭಾಜನರಾದ ಜಯರಾಮ ಪಾಟೀದಾರ ಮತ್ತು ಕುಟುಂಬದವರನ್ನು ಅಲಂಕೃತ ಎತ್ತಿನಗಾಡಿಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಗಾಯತ್ರಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಕುವೆಂಪು ಸರ್ಕಲ್ ಮೂಲಕ ಸುವರ್ಣ ಸಹಕಾರ ಭವನ ತಲುಪಿತು.

Leave a Reply

Your email address will not be published.

This site uses Akismet to reduce spam. Learn how your comment data is processed.