ಭಾರತದ ಇತಿಹಾಸ ಪುಟಗಳಲ್ಲಿರುವ ಶಾಶ್ವತವಾದ ಹೆಸರುಗಳಲ್ಲೊ೦ದು ರಾಜ ರಾಮ್ ಮೋಹನ್ ರಾಯ್. ಇವರು ೧೮ನೇ ಶತಮಾನದವರಾಗಿದ್ದರೂ ಕೂಡ,ಅವರ ಆಲೋಚನೆಗಳು,ಉದ್ದೇಶಗಳು,ಕನಸುಗಳು,ಸುಧಾರಣೆಗಳು,ವಿಚಾರಗಳಾವುದು ಸಮಕಾಲೀನರಂತೆ ಇರಲಿಲ್ಲ. ತಮ್ಮ ಧರ್ಮದಲ್ಲಿ ಮತ್ತು ಇತರೆ ಧರ್ಮಗಳಲ್ಲಿ ರಾಯ್ ರವರಿಗೆ ಸರಿ ಎಂದು ಕಂಡ ಅಂಶಗಳನ್ನು ಅವರೇ ಸ್ಥಾಪಿಸಿದ ಸಂಸ್ಥೆಗಳ ಮುಖಾಂತರ,ಭಾಷಣ ,ಬರಹಗಳ ಮೂಲಕ ಬೋಧಿಸುತ್ತಿದ್ದರು.ಅವರಿಗೆ ಸರಿ ಕಾಣದ ಅಂಧಶ್ರದ್ಧೆಗಳು ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಅನೇಕ ಪ್ರಯತ್ನಗಳನ್ನು ಮಾಡಿ ಬಹುತೇಕ ಯಶಸ್ವಿಯಾಗಿದ್ದಾರೆ.ಇವರ ವಿಭಿನ್ನವಾದ ವ್ಯಕ್ತಿತ್ವ ಮತ್ತು ಕಾರ್ಯಗಳನ್ನ ತಿಳಿಯೋಣ ಬನ್ನಿ.
ರಾಜ ರಾಮ್ ಮೋಹನ್ ರಾಯ್ ಬಂಗಾಳದ ರಾಧಾ ನಗರದಲ್ಲಿ ಮೇ ೨೨, ೧೭೭೨ ರಲ್ಲಿ ಜನಿಸಿದರು . ಇವರ ತಂದೆ ರಮಾಕಾಂತ ರಾಯ್ ಮತ್ತು ತಾಯಿ ತಾರಿಣಿ ದೇವಿ. ಇವರ ವಿದ್ಯಾಭ್ಯಾಸದ ವಿವರ ವಿವಾದದಿಂದ ಕೂಡಿದೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರು ವಾಸವಿದ್ದ ಹಳ್ಳಿಯಲ್ಲೇ ಪಡೆದು, ೯ನೇ ವಯಸ್ಸಿನಲ್ಲಿ ಪಾಟ್ನಾದ ಮದರಸಾದಲ್ಲಿ ಪರ್ಷಿಯನ್ , ಅರೇಬಿಕ್ ಗಳನ್ನು ಮತ್ತು ಕಾಶಿಯಲ್ಲಿ ಸಂಸ್ಕೃತದ ವ್ಯಾಕರಣ, ವೇದ, ಉಪನಿಷತ್, ಹಿಂದೂ ಧರ್ಮದ ವಿಧಿವಿಧಾನಗಳನ್ನು ಕಲಿತಿರಬಹುದೆಂದು ಊಹಿಸಲಾಗಿದೆ.ಒಟ್ಟಿನಲ್ಲಿ ರಾಮ್ ಮೋಹನ್ ರಾಯ್ ಇವರು ಅರೇಬಿಕ್,ಪರ್ಶಿಯನ್,ಇಂಗ್ಲಿಷ್,ಫ್ರೆಂಚ್, ಲಾಟಿನ್, ಗ್ರೀಕ್ ಮತ್ತು ಹಿಬ್ರೂ ನಂತಹ ಭಾಷೆಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಬಹುಭಾಷಾ ಪಂಡಿತ.
ರಾಯ್ ರವರ ಜಾತಿಯ ಬಹುಪತ್ನಿತ್ವದ ಸಂಪ್ರದಾಯದಂತೆ ಇವರಿಗೆ ೧0 ವರ್ಷ ತುಂಬುವುದರೊಳಗೆ ಮೂರು ಬಾರಿ ಮದುವೆಯಾಯಿತು. ಮೊದಲ ಪತ್ನಿ ಬಾಲ್ಯದಲ್ಲಿಯೇ ನಿಧನ ಹೊಂದಿದರು. ರಾಧಾ ಪ್ರಸಾದ್ ಮತ್ತು ರಾಮಪ್ರಸಾದ್ ರಾಯ್ ರವರ ಇಬ್ಬರು ಗಂಡು ಮಕ್ಕಳು, ಎರಡನೇ ಪತ್ನಿಗೆ ಜನಿಸಿದವರು. ಇವರ ಮೂರನೇ ಪತ್ನಿ ಇವರ ನಿಧನದ ಬಳಿಕವೂ ಹೆಚ್ಚು ಕಾಲವಿದ್ದರು.
ಹಿಂದೆ ವಿಧವೆಯರನ್ನು ಗಂಡನ ಅಗ್ನಿ ಚಿತೆಯ ಮೇಲೆ ಬಲವಂತವಾಗಿಯಾದರೂ ಸುಡುವಂತಹ ಕ್ರೂರ ಸತಿ ಪದ್ಧತಿ ಇತ್ತು. ಅದರಂತೆಯೇ, ರಾಮಮೋಹನರ ಸಹೋದರ ಜಗ್ಮೋಹನ್ ನಿಧನರಾದಾಗ ,ಅವರ ಹೆಂಡತಿ ಅಲಕಮಂಜರಿಯನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು. ಅವಳನ್ನು ಮಹಾಸತಿ ಎಂದು ಘೋಷಿಸಿದರು. ಆದರೆ ಅತ್ತಿಗೆಯನ್ನು ಸುಡುವಾಗ ಆಕೆಯ ಕಣ್ಣಿನಲ್ಲಿದ್ದ ಭಯ, ಅವಳ ಚೀರಾಟ, ಹೃದಯ ಒಡೆಯುವ ದೃಶ್ಯ ರಾಯ್ ರವರ ಮೇಲೆ ಗಾಢವಾದ ಪ್ರಭಾವ ಬೀರಿತು. ಸ್ಮಶಾನದಲ್ಲಿಯೇ ಅವರು ಸತಿ ಪದ್ಧತಿಯನ್ನು ಕೊನೆಗೊಳಿಸುವ ಶಪಥ ಮಾಡಿದರು. ಅನೇಕರು ಗ್ರಂಥಗಳಲ್ಲಿ ಸತಿ ಪದ್ಧತಿಯ ಉಲ್ಲೇಖವಾಗಿದೆ ಎಂದು ವಾದಿಸುತ್ತಿದ್ದರು. ಎಲ್ಲಾ ಗ್ರಂಥಗಳನ್ನು ಓದಿದ ರಾಯ್ ಎಲ್ಲಿಯೂ ಸತಿ ಉಲ್ಲೇಖವಾಗಿಲ್ಲ ಎಂದು ಕೆಚ್ಚೆದೆಯಿಂದ ಹೇಳಿದರು. ಲಕ್ಷಾಂತರ ಜನ ವಿರೋಧ ವ್ಯಕ್ತಪಡಿಸಿದರೂ, ಕೊಲ್ಲುವ ಪ್ರಯತ್ನ ಮಾಡಿದರೂ ಕೂಡ ರಾಯ್ ರವರು ಇಟ್ಟ ಹೆಜ್ಜೆಯನ್ನು ಅವರಿಂದ ಸರಿ ಸಲಾಗಲಿಲ್ಲ.


ಮುಘಲ್ ದೊರೆ ಎರಡನೆಯ ಅಕ್ಬರ್ ನ ರಾಯಭಾರಿಯಾಗಿ ೧೮೩೦ರಲ್ಲಿ ರಾಜಾರಾಮ್ ಮೋಹನ್ ರಾಯ್ ಯುನೈಟೆಡ್ ಕಿಂಗ್ಡಮ್ ತೆರಳಿದರು. ಇದಕ್ಕು ಮುನ್ನ ದೊರೆಯು ಇವರಿಗೆ ‘ರಾಜ’ ಎಂಬ ಬಿರುದನ್ನು ನೀಡಿದರು. ಇಂಗ್ಲೆಂಡಿಗೆ ಹೋದ ಮೊದಲನೆಯ ಉದ್ದೇಶ ದೊರೆಗೆ ನೀಡುತ್ತಿದ್ದ ಅನುದಾನವನ್ನು ಹೆಚ್ಚಿಸುವುದು, ಎರಡನೆಯದು ಸತಿ ಪದ್ಧತಿಯನ್ನು ರದ್ದುಗೊಳಿಸುವ ಕಾನೂನು ಮಾಡಿಸಲು ಬ್ರಿಟಿಷ್ ಸಂಸತ್ತಿನ ಬೆಂಬಲ ಪಡೆಯುವುದಾಗಿತ್ತು. ಇವರು ಲಾರ್ಡ್ ವಿಲಿಯಂ ಬೆಂಟಿಕ್ ನನ್ನು ಬೆಂಬಲಿಸಿ ಸತಿ ನಿಷೇಧ ಶಾಸನವನ್ನು ಜಾರಿಗೊಳಿಸುವಂತೆ ಮಾಡಿದರು. ಸಮುದ್ರ ದಾಟುವುದು ಧರ್ಮ ವಿರುದ್ಧವಾಗಿತ್ತು. ಅದನ್ನು ವಿರೋಧಿಸಿ, ವಿರೋಧ ಗಳಿಗೆ ಒಳಗಾಗಿ, ರಾಮ್ ಮೋಹನ್ ರಾಯ್ ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿ ಕೊನೆಗೂ ಸತಿ ಎಂಬ ಘೋರ ಪದ್ಧತಿಗೆ ನಾಂದಿ ಹಾಡುವುದರಲ್ಲಿ ಯಶಸ್ವಿಯಾದರು.
ರಾಯ್ ರವರಿಗೆ ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಈ ಎಲ್ಲಾ ಮತಗಳ ತತ್ವಗಳ ಬಗ್ಗೆ ಆಳವಾದ ಅಧ್ಯಯನವಿತ್ತು. ಯೂಕ್ಲಿಡ್, ಅರಿಸ್ಟಾಟಲ್ ಇವರ ಕೃತಿಗಳನ್ನು ಓದಿದ ಪರಿಣಾಮವಾಗಿ ರಾಯ್ ರವರು ಆಧುನಿಕ ಚಿಂತನೆಗಳನ್ನು ಹೊಂದಿದ್ದರು. ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರು ಕೂಡ ಧಾರ್ಮಿಕ ವಿಧಿಗಳನ್ನು, ಸಂಪ್ರದಾಯಗಳನ್ನು ಪ್ರಶ್ನಿಸಿದವರು ಇವರು.

ಪ್ರಗತಿ ವಿರೋಧ ಕಂದಾಚಾರಗಳನ್ನು, ವಿಗ್ರಹಾರಾಧನೆ, ಮೂಢನಂಬಿಕೆಗಳನ್ನು ವಿರೋಧಿಸಿ ಬರೆದಾಗ ಅವರ ತಂದೆಯೇ ವಿರೋಧ ವ್ಯಕ್ತಪಡಿಸಿದರು. ಇದರ ಪರಿಣಾಮ ಅವರು ಮನೆಯನ್ನು ತ್ಯಜಿಸಬೇಕಾಯಿತು.
ಬಾಲ್ಯವಿವಾಹ, ಬಹುಪತ್ನಿತ್ವದ ವಿರೋಧಿಯಾದ ರಾಯ್ ರವರು ಮಹಿಳೆಯ ಮೇಲಿನ ಧಾರ್ಮಿಕ ಶೋಷಣೆಯ ವಿರುದ್ಧ ಮಾತ್ರವಲ್ಲದೆ, ಸ್ತ್ರೀಯರ ಸಮಾನ ಹಕ್ಕುಗಳಿಗಾಗಿ ಬಹಳ ಶ್ರಮಿಸಿದರು. ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಾಗೂ ಪತಿಯ ಆಸ್ತಿಯಲ್ಲಿ ಸಮಾನ ಹಕ್ಕು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು. ಇದು ಸನಾತನ ಹಿಂದೂ ಗ್ರಂಥದಲ್ಲಿಯೂ ಸಹ ಮಹಿಳೆಗೆ ನೀಡಲಾಗಿದ್ದ ಹಕ್ಕು ಎಂದವರು ತೋರಿಸಿಕೊಟ್ಟರು. ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಇವರು ಮಹಿಳಾ ಹೋರಾಟದ ಸ್ಪೂರ್ತಿಯ ಚಿಲುಮೆ ಎಂದರೆ ತಪ್ಪಾಗಲಾರದು.


ಹಿಂದೂ ಧರ್ಮದ ರಕ್ಷಣೆ ಮತ್ತು ಭಾರತೀಯರ ಹಕ್ಕುಗಳು, ವಿಶೇಷವಾಗಿ ಮಹಿಳೆಯರ ಸ್ಥಾನಮಾನ, ಹಕ್ಕುಗಳ ರಕ್ಷಣೆಗಾಗಿ ಸರ್ಕಾರದಲ್ಲಿ ದುಡಿದ ರಾಯ್ ರವರ ಶ್ರಮದ ಫಲವಾಗಿ ಬಂಗಾಳದ ಪುನರುಜ್ಜೀವನದ ಜನಕ ,ಭಾರತದ ನವೋದಯದ ಪಿತಾಮಹ ,ಭಾರತದ ಪುನರುಜ್ಜೀವನದ ತಂದೆ ಎಂಬ ಬಿರುದನ್ನು ಗಳಿಸಿದ್ದಾರೆ.
೧೮೧೪ರಲ್ಲಿ ಆತ್ಮೀಯ ಸಭಾ ಇದನ್ನು ರಾಜಾರಾಮ್ ಮೋಹನ್ ರಾಯ್ ಸ್ಥಾಪಿಸಿದರು. ಆದರೆ ೧೮೧೯ರಲ್ಲಿ ಈ ಸಭಾ ಸ್ಥಗಿತವಾಯಿತು .ನಂತರ ೧೮೨೮ರಲ್ಲಿ ಬ್ರಹ್ಮ ಸಭಾ ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣ ಮಾಡಲಾಯಿತು.


ಈ ಸಮಾಜದ ಮೂಲಕ ತಮ್ಮ ವಿಚಾರವನ್ನು ಮಂಡಿಸುತ್ತಿದ್ದರು ರಾಜಾರಾಮ್ ಮೋಹನ್ ರಾಯ್. “ದೇವರು ಒಬ್ಬನೇ ,ಪ್ರತಿ ಧರ್ಮದಲ್ಲಿ ಸತ್ಯವಿದೆ, ಮೂರ್ತಿಪೂಜೆ ಮತ್ತು ಆಚರಣೆಗಳಲ್ಲಿ ಅರ್ಥಹೀನ ಮತ್ತು ಸಾಮಾಜಿಕ ಅನಿಷ್ಟಗಳು ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ “ಎಂದು ಬ್ರಹ್ಮ ಸಮಾಜ ಬೋಧಿಸಿತು.ಇದು, ಬಾಲ್ಯ ವಿವಾಹ, ಸತಿ,ಜಾತೀಯತೆ,ಪರ್ದಾ ಪದ್ಧತಿ,ಅಸ್ಪೃಶ್ಯತೆ ಮತ್ತು ಮಾದಕ ವಸ್ತುಗಳ ಸೇವನೆಯನ್ನು ವಿರೋಧಿಸುತ್ತಿತ್ತು. ಅಂತರ್ಜಾತಿ ವಿವಾಹಗಳು ,ವಿಧವಾ ಮರುವಿವಾಹ, ಸ್ತ್ರೀ ಶಿಕ್ಷಣಕ್ಕೆ ಒತ್ತು ನೀಡಿತು.


ಬ್ರಹ್ಮ ಸಮಾಜ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿತು. ರಾಯ್ ರವರು ವೈಜ್ಞಾನಿಕ ಮನೋಭಾವ ಹೊಂದಿದ್ದರು. ಜನರನ್ನು ಅಂಧಕಾರದಿಂದ ಹೊರತರಲು ವೈಜ್ಞಾನಿಕ ಶಿಕ್ಷಣ ನೀಡಲು ಮುಂದಾದರು. ಪ್ರಗತಿಗೆ ಪೂರಕವಾದ ವಿಷಯಗಳನ್ನು ಸಮಾಜಕ್ಕೆ ತಿಳಿಸುವುದು ಅವಶ್ಯಕವೆಂದು ಅವರು ನಂಬಿದ್ದರು. ತಮ್ಮ ಸ್ವಂತ ಹಣದಿಂದ ಕಲ್ಕತ್ತಾದಲ್ಲಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಭಾರತೀಯ ವಿಜ್ಞಾನಗಳನ್ನು ಬೋಧಿಸುವ ವೇದಾಂತ ಕಾಲೇಜೊಂದನ್ನು ಸ್ಥಾಪಿಸಿದರು. ಬ್ರಹ್ಮ ಸಮಾಜ ಆಧುನಿಕ ಭಾರತ ಸಮಾಜ ನಿರ್ಮಾಣದಲ್ಲಿ ಬಹಳ ಮುಖ್ಯವಾದ ಪುನರುಜ್ಜೀವನದ ಪಾತ್ರವನ್ನು ವಹಿಸಿದೆ.
ರಾಜ ರಾಮ್ ಮೋಹನ್ ರಾಯ್ ಅವರು ಸಂಪ್ರದಾಯಸ್ಥ ಹಿಂದೂಗಳ ಮತ್ತು ಧರ್ಮಾಂಧ ಕ್ರೈಸ್ತ ಮಿಶನರಿಗಳ ಸವಾಲುಗಳನ್ನು ಎದುರಿಸಬೇಕಾಯಿತು. ರಾಯ್ ರವರು ಈಸ್ಟ್ ಇಂಡಿಯಾ ಕಂಪನಿ ಇಂದ ಕ್ರಿಶ್ಚಿಯನ್ ಮಿಷನರಿಗಳ ಪ್ರತಿನಿಧಿಯಾಗಿ ವಿಲಿಯಂ ಕ್ಯಾರಿ ಎಂಬ ಪಾದ್ರಿಯ ಪ್ರಭಾವದಿಂದ ಇತರೆ ಧರ್ಮದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಳಿಸುವುದರ ಕುರಿತಾಗಿ ಆದ ಒಪ್ಪಂದದ ವಿಚಾರವನ್ನು ರಾಯರು ಪ್ರಕಟಿಸಿದರು.


ವಿಲಿಯಂ ಕ್ಯಾರಿ ಇವರು ಬೈಬಲ್ ಅನ್ನು ಭಾಷಾಂತರ ಗೊಳಿಸಿ ಪ್ರಕಟಿಸುವ ಉದ್ದೇಶ ಹೊಂದಿದ್ದರು. ಕ್ಯಾರಿ, ವಿದ್ಯಾ ವಾಗೀಶ್ ಮತ್ತು ರಾಯ್ ಇವರು ಒಟ್ಟಾಗಿ ‘ಮಹಾನಿರ್ವಾಣ ತಂತ್ರ’ ಮತ್ತು ‘ದಿ ಒನ್ ಟ್ರೂ ಗಾಡ್’ ಎಂಬ ಧಾರ್ಮಿಕ ಪುಸ್ತಕ ರಚಿಸಿ, ಬಿಡುಗಡೆ ಮಾಡಿದರು.
ಇವರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಮುನ್ಷಿ ಯಾಗಿ ನಂತರ ದಿವಾನರಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇತರೆ ಮತಗಳ ಜನರ ಸ್ನೇಹ ಗಳಿಸಿ ಅವರ ಮತಗಳ ತತ್ವಗಳನ್ನು ಹಾಗೆಯೇ ಇತರ ಧರ್ಮದವರ ಬಗ್ಗೆ ಅವರು ಹೊಂದಿದ್ದ ಭಾವನೆಗಳನ್ನು ತಿಳಿದುಕೊಳ್ಳುತ್ತಾ ಹೋದರು.


ರಾಯ್ ಇವರು ‘ಸಂವಾದ ಕೌಮುದಿ’ ಎಂಬ ಬಂಗಾಳಿ ಪತ್ರಿಕೆಯನ್ನು ಮತ್ತು ‘ಮಿರತ್- ಉಲ್- ಅಕ್ಬಾರ್ ‘ ಎಂಬ ಪರ್ಶಿಯನ್ ಪತ್ರಿಕೆಯನ್ನು ಪ್ರಕಟಪಡಿಸಿದರು. ರಾಯ್ ಅವರ ಸ್ನೇಹಿತರಾದ ದ್ವಾರಕನಾಥ್ ಟ್ಯಾಗೋರ್ ಮತ್ತು ಪ್ರಸನ್ನಕುಮಾರ್ ಟ್ಯಾಗೋರ್ ಅವರ ಬೆಂಬಲಿಗರಾಗಿಯೂ ಇದ್ದರು.
ಸದಾ ಸಮಾಜ ಪ್ರಗತಿಗಾಗಿ ಶ್ರಮಿಸುತ್ತಿದ್ದ ರಾಯ್ ರವರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸುತ್ತಿರಲಿಲ್ಲ.೧೮೩೧ ರಲ್ಲಿ ಇಂಗ್ಲೆಂಡಿಗೆ ತೆರಳಿದ ರಾಯ್ ಹುಷಾರು ತಪ್ಪಿದರು. ಸೆಪ್ಟೆಂಬರ್ ೨೭,೧೮೩೩ ರಲ್ಲಿ ಮೆನಿಂಜೈಟಸ್ ಎಂಬ ಗಂಭೀರ ಸೋಂಕಿನಿಂದಾಗಿ ನಿಧನರಾದರು.


ಸಮಾಜ ಸುಧಾರಣೆಗೆ, ಸಮಾಜದಲ್ಲಿ ಮಹಿಳೆಯರ ಸ್ಥಾನ ಹೆಚ್ಚಿಸುವಲ್ಲಿ ರಾಯ್ ರವರ ಶ್ರಮ ಬಹಳ ಉನ್ನತವಾದುದು. ಇಂದು ರಾಜಾರಾಮ್ ಮೋಹನ್ ರಾಯ್ ಅವರ ೨೫೦ ನೇ ಜಯಂತಿ. ರಾಯ್ ರವರ ಸುಧಾರಣಾ ಕಾರ್ಯಗಳಿಂದಾಗಿ ಇಂದಿಗೂ ಅವರ ಹೆಸರು ಜೀವಂತವಾಗಿದೆ. ಇಂತಹ ಶ್ರೇಷ್ಠ ವ್ಯಕ್ತಿಗಳು ನಮ್ಮ ಭಾರತದ ಹೆಮ್ಮೆ ಮತ್ತು ಭಾರತೀಯರಿಗೆ ಸ್ಪೂರ್ತಿ.

– ವೈಷ್ಣವಿ.ಎನ್.ರಾವ್

Leave a Reply

Your email address will not be published.

This site uses Akismet to reduce spam. Learn how your comment data is processed.