ಇತ್ತೀಚೆಗೆ ವ್ಯಾಟಿಕನ್‌ನಲ್ಲಿ ಭಾರತೀಯರೊಬ್ಬರಿಗೆ ಸಂತ ಪದವಿಯನ್ನು ನೀಡುವ ನಿಟ್ಟಿನಲ್ಲಿ 2004ರಿಂದ ನಡೆದ ಪ್ರಯತ್ನ ಯಶಸ್ವಿಯಾಗಿದ್ದು 18ನೆಯ ಶತಮಾನದಲ್ಲಿ ಮತಾಂತರಗೊಂಡ ನೀಲಕಂಠ ಪಿಳ್ಳೈ ಅಥವಾ ದೇವಸಹಾಯಂ ಪಿಳ್ಳೈ ಅವರಿಗೆ ಸಂತ ಪದವಿ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಲೇಖನ


ನೀಲಕಂಠ ಪಿಳ್ಳೈ ತಿರುವನಂತಪುರದ ರಾಜಾ ಮಾರ್ತಾಂಡ ವರ್ಮನ ಆಸ್ಥಾನದಲ್ಲಿ ವಿಶೇಷ ಸ್ಥಾನ ಹೊಂದಿದ್ದ ಯುವಕ. ತಂದೆ ವಾಸುದೇವ ನಂಬೂದರಿ ಮತ್ತು ತಾಯಿ ದೇವಕಿ ಅಮ್ಮ. ಕೇರಳದ ಹಿಂದೂ ಸಮಾಜದ ಪದ್ಧತಿಯಲ್ಲಿ ಸ್ವೀಕೃತವಾಗಿದ್ದ ‘ಸಂಬಂಧ’ ವಿವಾಹವಾಗಿದ್ದ ವಾಸುದೇವ-ದೇವಕಿಯರ ಪುತ್ರ ನೀಲಕಂಠ ತನ್ನ ಸೋದರಮಾವನ ಆಶ್ರಯದಲ್ಲಿ ಬೆಳೆದ. ತಿರುವನಂತಪುರ ರಾಜ್ಯದ ರಾಜ ಮಾರ್ತಾಂಡ ವರ್ಮನ ದಿವಾನ್ ರಾಮಯ್ಯನ್ ದಲವಾಯಿಯ ಸಹಾಯಕನಾಗಿ ಗಮನ ಸೆಳೆದ.


೧೭೪೧ ರಲ್ಲಿ ಡಚ್ ಕ್ಯಾಪ್ಟನ್ ಯುಸ್ಟಾಚಿಯಸ್ ಡಿ ಲಾನ್ನಾಯ್ ನ ಸೈನ್ಯವು ತಿರುವನಂತಪುರ ರಾಜ್ಯದ ಮೇಲೆ ವಿಫಲ ಆಕ್ರಮಣ ನಡೆಸಿ ಸೆರೆಯಾಯಿತು. ಲಾನ್ನಾಯ್ ಸೆರೆಮನೆ ಸೇರಿದ. ಸೆರೆಮನೆಯಲ್ಲಿದ್ದ ಲಾನ್ನಾಯ್ ಮತ್ತಿತರನ್ನು ಸೆರೆಯಲ್ಲಿಯೂ ಚೆನ್ನಾಗಿ ನೋಡಿಕೊಳ್ಳಲಾಯಿತು. ಮತ್ತು ಸೆರೆಯಾಗಿದ್ದ ಡಚ್ ಸೇನಾಧಿಪತಿಗಳ ಭವಿಷ್ಯವೂ ಅನಿಶ್ಚಿತವಾಗಿತ್ತು. ಈ ಯುದ್ಧವು ಡಚ್ ಪ್ರಭಾವವನ್ನು ಭಾರತದಲ್ಲಿ ಶಾಶ್ವತವಾಗಿ ಕಡಿಮೆಗೊಳಿಸಿತು. ಅದೇ ಸಮಯದಲ್ಲಿ ಬ್ರಿಟಿಷರ ಪ್ರಾಬಲ್ಯ ಹೆಚ್ಚುತ್ತಿತ್ತು. ರಾಜಾ ಮಾರ್ತಾಂಡವರ್ಮರ ಸೈನ್ಯಕ್ಕೆ ಯುರೋಪ್ ಯುದ್ಧಕೌಶಲ್ಯದ ಅಗತ್ಯವಿತ್ತು. ಈ ಸಂದರ್ಭದಲ್ಲಿ ತಿರುವನಂತಪುರದ ರಾಜರು ಲಾನ್ನಾಯ್ ನನ್ನು ಕ್ಷಮಿಸಿದರು ಮತ್ತು ಅವನಿಗೆ ತಮ್ಮ ಸೈನ್ಯದಲ್ಲಿ ಸೇವೆ ಮಾಡಲು ಅವಕಾಶಮಾಡಿಕೊಟ್ಟರು. ಮುಂದಿನ ಮೂವತ್ತಕ್ಕೂ ಹೆಚ್ಚು ವರ್ಷಗಳು ಲಾನ್ನಾಯ್ ತಿರುವನಂತಪುರದ ಇಬ್ಬರು ರಾಜರ ಸೈನ್ಯಗಳಲ್ಲಿ ಸೇವೆ ಸಲ್ಲಿಸಿದ. ಈ ಸೇವೆ ಅತ್ಯಂತ ನಿಷ್ಠೆಯಿಂದ ಕೂಡಿತ್ತು ಎಂಬುದು ಆಸ್ಥಾನದ ಅಭಿಪ್ರಾಯವಾಗಿತ್ತು. ಕ್ರೈಸ್ತನಾಗಿದ್ದ ಲಾನ್ನಾಯ್ ಗೆ ರಾಜರ ಅರಮನೆಗೆ ಪ್ರವೇಶ ಇರಲಿಲ್ಲ ಎಂದು ಪ್ರತೀತಿ ಇದೆ. ರಾಜರ ಸೈನ್ಯದಲ್ಲಿ ಪ್ರಮುಖ ಸ್ಥಾನಗಳಿಸಿದ್ದ ಲಾನ್ನಾಯ್ ಬೇರೆ ಅರಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಒಂದು ಚರ್ಚ್ ಅನ್ನೂ ಸ್ಥಾಪಿಸಿಕೊಂಡಿದ್ದ. ಈ ವರುಷಗಳಲ್ಲಿ ಲಾನ್ನಾಯ್ ತನ್ನ ಹುದ್ದೆ ಮತ್ತು ಪ್ರಭಾವವನ್ನು ಹಿಂದೂ ರಾಜ್ಯದಲ್ಲಿ ಕ್ರೈಸ್ತ ಮತವನ್ನು ಹರಡಲು ಮತ್ತು ಯುರೋಪಿಯನ್ ಸಾಮ್ರಾಜ್ಯಗಳು ಇಲ್ಲಿ ಬೇರೂರುವಂತೆ ಮಾಡಲು ಬಳಸಿಕೊಂಡಂತೆ ಕಾಣುತ್ತದೆ. ಪೋಪ್ ಕ್ಲೆಮೆಂಟ್ ೧೪ – ಇವರ ಅವಧಿಯಲ್ಲಿ ಲಾನ್ನಾಯ್ ಮೂಲಗಳಿಂದ ವ್ಯಾಟಿಕನ್ ಗೆ ಕ್ರೈಸ್ತಮತವಿಸ್ತರಣೆಗೆ ಅನುಕೂಲವಾಗುವ ಮಾಹಿತಿ-ಮತವಿಸ್ತರಣೆಯ ಪ್ರಯತ್ನಗಳ ಪ್ರಗತಿಯ ವಿವರಗಳು ನಿಯಮಿತವಾಗಿ ತಲುಪುತ್ತಿದ್ದವು ಎನ್ನಲು ಸಾಕ್ಷಿಗಳಿವೆ. ಇವುಗಳ ಫಲವಾಗಿಯೇ, ರಾಜರಿಗೆ ಪೋಪರಿಂದ ಪ್ರಶಂಸೆ – ಅಭಿನಂದನೆ – ಕೃತಜ್ಞತಾ ಪತ್ರವೂ ಸಹ ಬಂದಿದ್ದಿರಬಹುದು. ವ್ಯಾಟಿಕನ್ ನ ರಹಸ್ಯ ದಾಖಲೆಗಳಲ್ಲೂ ಇವುಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳಿರಲೇ ಬೇಕು . ಲಾನ್ನಾಯ್ ನ ಜೀವನವು ಬದ್ಧತೆಯ, ಗೂಢಚಾರಿಕೆಯ ಮತ್ತು ಕ್ರೈಸ್ತ-ಯೂರೋಪ್ ನ ಹಿತಾಸಕ್ತಿಗಳಿಗೆ ಸಮರ್ಪಿತ ಜೀವನವಾಗಿತ್ತು ಎಂಬುದನ್ನು ಊಹಿಸಬಹುದಾದರೂ ಇತಿಹಾಸಕಾರರೇ ಇದನ್ನು ಖಚಿತಪಡಿಸಬೇಕು.

ತನ್ನ ಸಹಾಯಕನಾಗಿದ್ದ ನೀಲಕಂಠ ಪಿಳ್ಳೈಯನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವನನ್ನು ಲಾನ್ನಾಯ್ ಪ್ರಭಾವಿಸಿದನು. ಸ್ವತಃ ಕ್ರೈಸ್ತಧರ್ಮೀಯನಾಗಿದ್ದ ಲಾನ್ನಾಯ್ ಹಿಂದೂ ರಾಜನ ಸೇವೆಯಲ್ಲಿದ್ದರೂ, ತನ್ನ ಮತಪ್ರಸಾರದ ಕಾರ್ಯಗಳನ್ನು ಎದ್ದು ಕಾಣುವಂತೆ ಅಲ್ಲದಿದ್ದರೂ, ನಡೆಸುತ್ತಲೇ ಇದ್ದ ಅಥವಾ ನಡೆಯುತ್ತಿದ್ದ ಮತಾಂತರಕ್ಕೆ ತನ್ನ ಬೆಂಬಲ ನೀಡುತ್ತಿದ್ದ. ಭಾರ್ಗವಿ ಅಮ್ಮಾಳ್ ಎಂಬ ಹಿಂದೂ ಕನ್ಯೆ ಇದೇ ವೇಳೆಗೆ ಮತಾಂತರಗೊಂಡು ಸ್ಥಳಾಂತರಗೊಂಡಿದ್ದಳು. ಬಹುಶಃ ನೀಲಕಂಠನು ಈ ಕನ್ಯೆಯಲ್ಲಿ ಆಕರ್ಷಿತನಾಗಿದ್ದ. ಮತ್ತು ಈ ಸಂಗತಿಯನ್ನು ಉಪಯೋಗಿಸಿಕೊಂಡು ಲಾನ್ನಾಯ್ ನೀಲಕಂಠನನ್ನು ಮತಾಂತರಿಸಿದ. ಬಹು ಬೇಗನೇ, ಮತಾಂತರಿತ ನೀಲಕಂಠನು ಯುರೋಪಿಯನ್ನರಿಗೆ ತಿರುವನಂತಪುರದ ರಹಸ್ಯಗಳನ್ನು ನೀಡಲು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಿದ್ಧನಾಗಿದ್ದ. ಮತ್ತು ಈ ಬಗ್ಗೆ ನೀಲಕಂಠನ ಮೇಲೆ ಆರೋಪಗಳು ಬರಲಾರಂಭಿಸಿದವು. ವಿಶ್ವಾಸಘಾತಕ ಆರೋಪಗಳು ಪ್ರಬಲವಾದಂತೆ, ನೀಲಕಂಠ ಪಿಳ್ಳೈ ಪದಚ್ಯುತನಾದ. ಸೆರೆಮನೆ ಸೇರಿದ. ಮತ್ತು ಶಿಕ್ಷೆಗೆ ಒಳಪಟ್ಟ. ರಾಜ-ರಾಜ್ಯದಿಂದ ದೂರಸರಿದ ನೀಲಕಂಠ ಪಿಳ್ಳೈ ಅರಣ್ಯಸೇರಿದ. ಆದರೆ, ತನ್ನ ರೀತಿ-ನೀತಿಗಳನ್ನು ಮುಂದುವರೆಸಿದಂತೆ ಕಾಣುತ್ತದೆ. ಇದರಿಂದ ಉಂಟಾದ ಕಲಹವೊಂದರಲ್ಲಿ ಗಾಯಗೊಂಡ. ನಂತರ ಅನಾಮಧೇಯನಾಗಿ ಮರಣಹೊಂದಿದ. ಅವನ ಮರಣದ ವಿವರಗಳು ಆಗಲೇ ವ್ಯಾಟಿಕನ್ ತಲುಪಿದವು. ಆದರೆ, ಈ ಇಡೀ ಘಟನಾವಳಿಗಳಲ್ಲಿ ಲಾನ್ನಾಯ್ ಭಾಗಿಯಾಗಿದ್ದ ಪ್ರಸ್ತಾಪಗಳಿಲ್ಲ. ನೀಲಕಂಠನ ವ್ಯವಹಾರಗಳಿಂದ ಲಾನ್ನಾಯ್ ಸಾಕಷ್ಟು ದೂರ ಕಾಯ್ದು ಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಯುರೋಪಿಯನ್ ಸೈನ್ಯಗಳು ನೀಲಕಂಠನ ಬಂಧನ ವಿಮೋಚನೆಗೆ ಸತತವಾಗಿ ಪ್ರಯತ್ನಿಸುತ್ತಾ ರಾಜಾ ಮಾರ್ತಾಂಡ ವರ್ಮರ ಮೇಲೆ ಅಗಾಧ ಒತ್ತಡ ತಂದಿದ್ದರೆಂದು ಇತಿಹಾಸದಲ್ಲಿ ದಾಖಲಾಗಿದೆ.

ನೀಲಕಂಠನ ಮತಾಂತರ-ಆರೋಪ-ಶಿಕ್ಷೆ-ಮರಣ ಇವುಗಳ ವಿವರಗಳನ್ನು ಕಾಲಕ್ರಮದಲ್ಲಿ ವ್ಯವಸ್ಥಿತವಾಗಿ ತಿದ್ದಿ ದಾಖಲಿಸಿರುವಂತೆ ಕಾಣುತ್ತದೆ. ಹಲವು ಅನಾನುಕೂಲವಾಗಿದ್ದ ವಿವರಗಳನ್ನು ಕೈಬಿಡಲಾಗಿದೆ. ದಿವಾನರ ಸಹಾಯಕನನ್ನು ಸಾಮಾನ್ಯನನ್ನಾಗಿ, ನಂಬೂದರಿಯ ಮಗನನ್ನು ದಲಿತನನ್ನಾಗಿ, ಮತಾಂತರ ಚಟುವಟಿಕೆಗಳನ್ನು ಜಾತಿವಿರೋಧೀ ಹೋರಾಟವನ್ನಾಗಿ, ಮತ್ತು ರಾಜದ್ರೋಹದ ಅಪಾದನೆಗಳನ್ನು ಮೇಲ್ಜಾತಿಯವರ ಪಿತೂರಿಯೆಂದೂ ಚಿತ್ರಿಸಲಾಯಿತು. ರಾಜಾ ಮಾರ್ತಾಂಡ ವರ್ಮರು ಯುದ್ಧಕೈದಿಗಳನ್ನು ಕ್ರೂರವಾಗಿ ನಡೆಸಿಕೊಂಡರೆಂದೂ, ನೀಲಕಂಠನನ್ನು ಅನ್ಯಾಯವಾಗಿ ಶಿಕ್ಷಿಸಿದರೆಂದೂ ಹೇಳಲಾಗುತ್ತಿದೆ. ಭಾರತದಲ್ಲಿ ಕ್ರೈಸ್ತಮತ ಪ್ರಸಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ನೀಲಕಂಠನ ಕಥಾನಕವನ್ನು ಬಳಸಿಕೊಳ್ಳಲಾಗಿದೆ. ಕಳೆದ ಹತ್ತಾರು ದಶಕಗಳಲ್ಲಿ ನೀಲಕಂಠ ಪಿಳ್ಳೈನನ್ನು ಸಂತಪದವಿಗೇರಿಸಲು ಸಿದ್ಧತೆಗಳಾಗಿವೆ. ಹಲವಾರು ಪವಾಡಗಳನ್ನು ನೀಲಕಂಠನ ಹೆಸರಿನಲ್ಲಿ ದಾಖಲಿಸಲಾಗಿದೆ. ಮತ್ತು ನಂತರದಲ್ಲಿ ಈ ಪವಾಡಗಳ ಆಧಾರದಲ್ಲಿ ನೀಲಕಂಠನನ್ನು ಸಂತಪದವಿಗೆ ಏರಿಸಲಾಯಿತು. ಇವುಗಳಿಗಾಗಿ ೩೫೦ ವರ್ಷಗಳ ಅವಧಿ ಬೇಕಾಯಿತು.


ಇಂದು ಮತ್ತು ಮುಂದೆ, ನಾಯರ್ ಸಮುದಾಯವನ್ನು ಮತಾಂತರಿತಗೊಳಿಸಲು, ನಂಬೂದರಿಗಳನ್ನು ದೂಷಿಸಲು, ಹಿಂದೂ ರಾಜರನ್ನು ಹಿಂಸಕರೆಂದೂ, ಮತಾಂಧರೆಂದೂ ಬಿಂಬಿಸಲು – ಸಾಮಾನ್ಯನೆಂದು ಪರಿಗಣಿಸಲ್ಪಟ್ಟ ನೀಲಕಂಠ ಪಿಳ್ಳೈ ಅಂದರೆ ಕ್ರೈಸ್ತ ನಾಮಾಂಕಿತನಾಗಿ ಬದಲಾದ ದೇವಸಹಾಯಂ ಅಥವಾ ಲಾಜಾರಸ್, ಭಾರತದ ಮತಾಂತರಿಗಳಿಗೆ ಒಂದು ಅಸಾಮಾನ್ಯ ಸಂತನ ರೂಪಕದಲ್ಲಿ ಒದಗಿಬರುತ್ತಾರೆ.

ಶ್ರೀಧರನ್, ವಿಶ್ವಸ್ಥರು, ವಿಶ್ವ ಸಂವಾದ ಕೇಂದ್ರ,ಕರ್ನಾಟಕ

Leave a Reply

Your email address will not be published.

This site uses Akismet to reduce spam. Learn how your comment data is processed.