– ಕಿರಣಕುಮಾರ ವಿವೇಕವಂಶಿ, ಪತ್ರಕರ್ತರು
ಕನ್ನಡ ಇಂದು ನಿನ್ನೆಯ ಭಾಷೆಯಲ್ಲ, ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯದ ಉದಯ ಹಾಗೂ ಅದಕ್ಕೆ ಕಾರಣಗಳನ್ನು ಹೇಳುವುದು ಅಷ್ಟು ಸುಲಭವಲ್ಲ, ಹೇಳುವುದಕ್ಕೆ ಆಧಾರಗಳ ಖಚಿತತೆಯೂ ಇಲ್ಲ. ದೊರೆತ ಪುರಾವೆಗಳ ಆಧಾರದ ಮೇಲೆ ಬಲ್ಲವ ತನಗೆ ತಿಳಿದಂತೆ ಊಹೆಯ ಕುದುರೆಯನ್ನು ಓಡಿಸಬಹುದು. ಸುನಿಶ್ಚಿತವಾದ ಒಂದು ಸಂಗತಿ ಎಂದರೆ ಕ್ರಿ.ಶ. 9ನೇ ಶತಮಾನದಲ್ಲಿ ರಚಿತವಾದ ‘ಕವಿರಾಜಮಾರ್ಗ’ವು ನಿರ್ವಿವಾದವಾಗಿ ದೊರೆತ ಮೊದಲ ಗ್ರಂಥವಾದರೂ ಅದು ಕನ್ನಡದ ಮೊದಲ ಗ್ರಂಥವಲ್ಲ. ಅದಕ್ಕಿಂತ ಹಿಂದೆ ಕನ್ನಡ ಸಾಹಿತ್ಯ ಹುಟ್ಟಿತ್ತು ಮಾತ್ರವಲ್ಲ, ಒಂದು ಶಿಷ್ಟಸಂಪ್ರದಾಯವಾಗಿ ರೂಪಗೊಳ್ಳುತ್ತಲಿತ್ತು. ಇದಕ್ಕೆ ‘ಕವಿರಾಜಮಾರ್ಗ’ದಲ್ಲಿಯೂ ಬೇರೆಯಾಗಿ ಪ್ರಮಾಣಗಳು ಸಿಗುತ್ತವೆ. ಆದರೆ ಎಷ್ಟು ಎಂಬುದರ ಅರಿವಿಲ್ಲ ಎಂದು ರಂ.ಶ್ರೀ.ಮುಗಳಿ ಅವರು ಹೇಳಿದ್ದನ್ನು ಕೇಳಿದ್ದೆನೆ. ಹೌದು ಅದು ಸತ್ಯವೂ ಕೂಡ!
ಅದೇನೇ ಇರಲಿ ಆದರೆ ಸದ್ಯಕ್ಕಿರುವ ದಾಖಲೆಗಳ ಪ್ರಕಾರ ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕೇವಲ ಕನ್ನಡ ನಾಡಿನಲ್ಲಿ ಅಲ್ಲದೆ ಜಗತ್ತಿನ ಬೇರೆ ರಾಷ್ಟ್ರಗಳಲ್ಲೂ ಕನ್ನಡ ಬಳಕೆಯಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ಈಜಿಪ್ಟ್ ದೇಶದಲ್ಲಿ ಸಿಕ್ಕ ಗ್ರೀಕ್ ಪ್ರಹಸನದಲ್ಲಿ ಕನ್ನಡ ಪದಗಳಿವೆ ಎಂದು ಗ್ರೀಕ್ ಮೂಲವನ್ನು ಪರಿಶೋಧಿಸಿ ರಾಷ್ಟ್ರಕವಿ ಎಮ್. ಗೋವಿಂದ ಪೈ ಅಲ್ಲಿಯ ಮಾತುಗಳು ಕನ್ನಡ ಎಂದು ತೋರಿಸಿದ್ದಾರೆ ಆದರೆ ಸದ್ಯಕ್ಕೆ ಈ ವಿಷಯದಲ್ಲಿ ಮತಬೇಧವಿದೆ. ಏನೇ ಆದರೂ ಕನ್ನಡ ಎಷ್ಟು ಶ್ರೀಮಂತ ಹಾಗೂ ವಿಸ್ತಾರ ಭಾಷೆ ಎಂದು ಈ ನಿದರ್ಶನಗಳ ಮೂಲಕ ಅರಿಯಬಹುದು. ಇಷ್ಟು ಪ್ರಾಚೀನ ಭಾಷೆಯನ್ನು ಉಳಿಸಲು ಹೋರಾಟಗಳು ನಡೆಯುತ್ತಿರುವುದು ವಿಪರ್ಯಾಸದ ಸಂಗತಿ.
“ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್” ಎಂಬ ಮಾತು ‘ಕವಿರಾಜಮಾರ್ಗ’ದಲ್ಲಿ ಹೇಳಲಾಗಿದೆ. ಅರ್ಥ ದಕ್ಷಿಣ ಕಾವೇರಿಯಿಂದ ಉತ್ತರದ ಗೋದಾವರಿವರೆಗೆ ಹರಡಿದ್ದ ವಿಸ್ತಾರವಾದ ಭೂಮಿಯೇ ಕನ್ನಡನಾಡು. ಈ ಕನ್ನಡ ನಾಡಿನ ಜನ ಹೇಗಿದ್ದರೆಂದು ಅದೇ ಕೃತಿಯಲ್ಲಿ ಹೇಳುತ್ತಾರೆ.
“ಪದನರಿದು ನುಡಿಯಲುಂ ನುಡಿ
ದುವನರಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್”
ಎಂದರೆ: ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು. ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು. ಆ ಸಾಮಾನ್ಯ ಜನರು ನಿಜವಾಗಿಯು ಚತುರರು, ಅವರು ಶಿಕ್ಷಣವನ್ನು ಪಡೆಯದಿದ್ದರೂ ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ ಶ್ರೀವಿಜಯ.
9ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎನ್ನುವುದು ನಮಗೆಲ್ಲಾ ತಿಳಿದ ವಿಚಾರ. ರನ್ನ, ಪೊನ್ನ, ಜನ್ನ, ಷಡಕ್ಷರದೇವ, ಚಾವುಂಡರಾಯ, ಅತ್ತಿಮಬ್ಬೆ, ಹರಿಹರ, ರಾಘವಾಂಕ, ನಾಗವರ್ಮ ಸೇರಿದಂತೆ ಅನೇಕ ಕವಿಪುಂಗವರು ಶ್ರೇಷ್ಠ ಸಾಹಿತ್ಯ ರಚಿಸಿ ಕನ್ನಡಕ್ಕೆ ಅರ್ಪಿಸಿ ಶ್ರೀಮಂತ ಗೊಳಿಸಿದವರು. ಈ ಕಾಲದಲ್ಲಿ ಕನ್ನಡದ ಕಂಪು ಜಗದಗಲ, ಮುಗಿಲಗಲ ಪಸರಿಸಿತು. ಮುಂದೆ 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾನ್ಯನಲ್ಲೂ ಅಡಗಿದ್ದ ಸಾಹಿತ್ಯ ಜ್ಞಾನ ಹೊರತೆಗೆದು, ಸಮಾಜದ ಅಂಕುಡೊಂಕು ಕಟುವಾಗಿ ಟೀಕಿಸಿ ತಿದ್ದಿದ ಕಾಲಘಟ್ಟವಾಗಿ ನಿಂತಿದೆ. ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿಯೇ ಮೊದಲ ‘ಸಂಸತ್ತು’ ರಚಿಸಿ ಬಹುದೊಡ್ಡ ಕ್ರಾಂತಿಗೆ ಕಾರಣವಾದವರು ಬಸವಾದಿ ಶರಣರು. ಇಂದು ಭಾರತಕ್ಕೆ ಸ್ತ್ರೀ ಸಮಾನತೆಯ ಪಾಠ ಬೋಧಿಸುವ ಜಗತ್ತಿನ ರಾಷ್ಟ್ರಗಳಿಗೆ ಅಂದು ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ, ಉರಿಲಿಂಗಪೆದ್ದಿ, ಕದಿರ ರಮ್ಮವ್ವೆ ಸೇರಿ ಅನೇಕ ಶಿವ ಶರಣೆಯರರಿಗೆ ಅವಕಾಶವಿತ್ತು, ನೈಜ ಆಚರಣೆಯ ಮೂಲಕವೇ ಸ್ತ್ರೀ ಸಮಾನತೆ ಬೋಧಿಸಿದ್ದು ಕನ್ನಡ ಸಾಹಿತ್ಯ ಅಲ್ಲವೆ..! ಅಷ್ಟೇ ಏಕೆ ಇಂದು ಕೇಳುತ್ತಿರುವ “ರೇಸಿಸಂ’ (ವರ್ಣಬೇಧ ನೀತಿ)ಗೂ ಕೂಡಾ ಪರಿಹಾರ ಒದಗಿಸಿದ್ದು ಅಂದಿನ ವಚನ ಸಾಹಿತ್ಯ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಭುಗಿಲೆದ್ದ ಜಾತಿ ಸಮಾನತೆಯ ಹೋರಾಟಕ್ಕೆ ಭಾಷ್ಯ ಬರೆದು ಸಾಕಾರಗೊಳಿಸಿದ್ದು ಕನ್ನಡ ನಾಡಿನ ವಚನಗಳ ಕಾಲವಾಗಿದೆ.
16ನೇ ಶತಮಾನದ ಈಚೆಗಿನ ದಾಸ ಪರಂಪರೆ ಮೌಢ್ಯಗಳನ್ನು ದೂರವಿರಿಸಿ, ಭಕ್ತಿಯನ್ನು ಸ್ಪುಟಗೊಳಿಸಿ, ಭಗವಂತನಲ್ಲಿ ಸದಾ ತಲ್ಲೀನನಾಗುವಂತೆ ಮಾಡಿದೆ. ಎಲ್ಲವನೂ ತೊರೆದು ಆಲೋಚನೆಯ ಪರದೆ ಆಚೆಗೆ ಹಾಗೂ ಲೌಕಿಕ ಜಗತ್ತಿನ ಆಚೆಗೆ ಚಿಂತಿಸುವಂತೆ ಮಾಡಿದ ಕಾಲವಾಗಿದೆ. ಭೋಗ-ಭಾಗ್ಯಗಳ ತೊರೆದು ಸತ್ಯ ಅರಸುತ್ತಾ ಹೊರಟ ಕನಕದಾಸ, ಪುರಂದರದಾಸ, ವಿಜಯ ವಿಠ್ಠಲ, ಶ್ರೀಪಾದರಾಯ, ವ್ಯಾಸತೀರ್ಥ, ವಾದಿರಾಜತೀರ್ಥರಂತಹ ಪ್ರಖ್ಯಾತ ತತ್ವಜ್ಞಾನಿಗಳು, ಕವಿಗಳು ಹಾಗೂ ವಿದ್ವಾಂಸರು ಈ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದರು. ತಮ್ಮ ಹಾಡುಗಳ ಮೂಲಕವೇ ಸಮಾಜಕ್ಕೆ ಭಗದ್ಪ್ರಜ್ಞೆ ನೀಡಿ, ತಪ್ಪುಗಳನ್ನು ತಿದ್ದಿದರು. ಈ ಚಳುವಳಿ ಕನ್ನಡನಾಡಿನಲ್ಲಿ ಆರಂಭವಾಗಿ ನಂತರ ದಕ್ಷಿಣ ಭಾರತದ ಬೇರೆಡೆಗೂ ಹಬ್ಬಿತು. ಮುಂದೆ ನವೋದಯ ಸಾಹಿತ್ಯದ ಉದಯವಾಗಿ ಕನ್ನಡ ಭಾಷಾ ಸಾಹಿತ್ಯ ಉಚ್ಚ್ರಾಯ ಸ್ಥಿತಿಗೆ ಏರುವುದಕ್ಕೆ ಕಾರಣವಾಯಿತು. ಬೇಂದ್ರೆ, ಕುವೆಂಪು, ಮಾಸ್ತಿ, ಗೋಕಾಕ, ಕಾರಂತ, ಜಿ.ಎಸ್. ಶಿವರುದ್ರಪ್ಪ, ಎಸ್.ಎಲ್. ಭೈರಪ್ಪ, ಗೋವಿಂದ ಪೈ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡವನ್ನು ಶ್ರೀಮಂತಗೊಳಿಸಿದರು.
ಈವರೆಗೂ ಹೇಳಿದ ಅವರೆಲ್ಲ ಕನ್ನಡದ ಕಾರಣಕ್ಕಾಗಿ ಜಗತ್ತಿಗೆ ಪರಿಚಯವಾದರು. ಕನ್ನಡದ ಕಾರಣಕ್ಕೆ ಇವರನ್ನೆಲ್ಲಾ ಇಂದು ನಾಡು ಗೌರವಿಸುತ್ತಿದೆ, ನೆನೆಯುತ್ತಿದೆ, ಆಸ್ವಾದಿಸುತ್ತಿದೆ, ಆರಾಧಿಸುತ್ತಿದೆ, ಆಚರಿಸುತ್ತಿದೆ ಮತ್ತು ಅನುಸರಿಸುತ್ತಿದೆ!
ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಹೇಳುವಂತೆ ‘ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ’. ಇಂದು ಕನ್ನಡಕ್ಕೆ ಬಂದ ಸ್ಥಿತಿಗೆ ಕಾರಣ ಕನ್ನಡಿಗರೆ ಆಗಿದ್ದಾರೆ. ಈ ಭಾಷೆ ಇಷ್ಟೊಂದು ಭವ್ಯ ಇತಿಹಾಸ ಹೊಂದಿದ್ದು ಯಾವ ಕಾರಣಕ್ಕೂ ಅಳಿಯದು. ಅಳಿವು ಎಂದಾದರೆ ಅದು ಕನ್ನಡದ್ದಲ್ಲ, ನಮ್ಮದು ಎಂದು ಭಾವಿಸಬೇಕು ಅಷ್ಟೇ! ಹೌದು, ಎಂತೆಂತಹ ದಾಳಿಗಳಿಗೇ ಬಾಗದ ಈ ಮಣ್ಣಿನ ಕ್ಷಾತ್ರತೇಜ ಇಂದು ಯಾರದ್ದೊ ಭಾಷೆ ಲಗ್ಗೆಯಿಟ್ಟ ಕಾರಣಕ್ಕೆ ನಲಗುವುದೆಂದು ಭಾವಿಸಿದ್ದೀರಾ? ಖಂಡಿತಾ ಅದು ಸಾಧ್ಯವಿಲ್ಲ. ಇಂದು ಬೆಂಗಳೂರಿನಂತಹ ಮಹಾ ನಗರದಲ್ಲಿ ಕನ್ನಡಕ್ಕಿಂತ ಅನ್ಯ ಭಾಷೆಯನ್ನೇ ಆಡುವ ಜನ ಹೆಚ್ಚು ತುಂಬಿದ್ದಾರೆ. ಇದು ಅವರ ತಪ್ಪಲ್ಲ, ನಮ್ಮ ವೈಫಲ್ಯ. ಅವರ ಭಾಷೆಯಲ್ಲಿ ವ್ಯವಹರಿಸುವ ಉದಾತ್ತ ಗುಣ ಹೊಂದಿರುವ ನಾವು, ನಮ್ಮ ಅಸ್ಮಿತೆಯನ್ನು ಬಿಟ್ಟು ಮೂಲ ಸತ್ವದೊಂದಿಗೆ ರಾಜಿಯಾಗುತ್ತಿದ್ದೇವೆ. ಭಾಷೆಯ ಪ್ರೇಮವನ್ನು ತಮಿಳರಿಂದ ನಾವು ಕಲಿಯಬೇಕಿದೆ. ಕನ್ನಡ ನಾಡಿನಾದ್ಯಂತ ಅನ್ಯಭಾಷಿಕರ ಹೇರಿಕೆ ಹೆಚ್ಚಾಗಿದೆ.
ಬೆಳಗಾವಿ ಮರಾಠಿ ಮಯ,
ಬೆಂಗಳೂರು ತಮಿಳು ಮಯ,
ಬಳ್ಳಾರಿ ತೆಲುಗು ಮಯ,
ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಅಯೋಮಯ!
ಎನ್ನುವಂತಾಗಿದೆ. ಇದಕ್ಕೆಲ್ಲಾ ನಾವು ನಮ್ಮತನವನ್ನು ಬಿಟ್ಟುಕೊಡುತ್ತಿರುವುದೇ ಕಾರಣ. ನಾವೆಲ್ಲರೂ ಇಂದು ಜಿ. ಪಿ. ರಾಜರತ್ನಂ ಹೇಳಿದಂತೆ
ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ,
ಬಾಯ್ ಒಲಿಸಾಕಿದ್ರೂನೆ –
ಮೂಗ್ನಲ್ ಕನ್ನಡ್ ಪದವಾಡ್ತೀನಿ !
ನನ್ನ ಮನಸನ್ನ್ ನೀ ಕಾಣೆ !
ಎಂದು ನಮ್ಮ ಉಸಿರಿನ ಕೊನೆಯವರೆಗೂ ಕನ್ನಡವನ್ನು ಮಾತನಾಡುವ ಶಪಥ ಮಾಡಬೇಕಿದೆ. ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ ಬಾಯಿ ಹೊಲೆಸಿ ಹಾಕಿದರೂ ಮೂಗಿನ ಮೂಲಕ ಕನ್ನಡವಾಡುತ್ತೇನೆ ಎಂದು ಗಟ್ಟಿಯಾದಾಗ ಭಾಷೆ ಮಾತ್ರವಲ್ಲ ನಾವೂ ಉಳಿಯಲು ಸಾಧ್ಯ.
ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!
ಎಂದು ಭಾವಿಸಿ ಯಾರು ನಮ್ಮನ್ನು ಬಿಟ್ಟು ಹೋದರೂ ಕನ್ನಡ ಬಿಡಲಾರೆ ಎಂಬ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಖಂಡಿತಾ ನಾವು ಸ್ವೆಚ್ಛೆಯಿಂದ ಬದುಕಲು ಸಾಧ್ಯವಾಗುತ್ತದೆ. “ಮಾತೃಭಾಷೆ ಯಾವುದೇ ಆಗಿರಲಿ ಆದರೆ ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬನ ಮನದ ಭಾಷೆ ಕನ್ನಡವಾಗಲಿ”. ”ನಮ್ಮ ಕಾರಣಕ್ಕೆ ಭಾಷೆ ಇಲ್ಲ, ಭಾಷೆಯ ಕಾರಣಕ್ಕೆ ನಾವಿದ್ದೆವೆ” ಎಂಬ ಸೂಕ್ಷ್ಮತೆಯ ಅರಿವು ನಮಗಾಗಬೇಕಿದೆ. ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆಯಾಗಿರುವುದರಿಂದ ಇಂದು ನಾವೆಲ್ಲಾ ಅದನ್ನು ಉಳಿಸಿಕೊಳ್ಳದಿದ್ದರೆ ಮುಂದೊಂದು ದಿನ ಭಾವನೆಗಳಿಲ್ಲದ ಪ್ರಾಣಿಯಂತೆ ಬದುಕಬೇಕಾದೀತು ಎಚ್ಚರ. ಭಾಷೆ ಉಳಿಸುವ ದೊಡ್ಡಮಾತುಗಳಾಡುವ ನಾವು ಮೊದಲು ನಮ್ಮನ್ನು ಉಳಿಸಿಕೊಳ್ಳಲು ಭಾಷೆ ಬೇಕಿದೆ ಎಂಬ ಸತ್ಯವನ್ನು ನುಡಿಯಬೇಕು. ಮನುಜ ಮತ, ವಿಶ್ವಪಥದಲ್ಲಿ ಕುವೆಂಪು ಹೇಳುತ್ತಾರಲ್ಲ
ಕನ್ನಡಕ್ಕಾಗಿ ಕೈಯೆತ್ತು, ಅದು ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ.
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು,
ಇಂದು ಅದೇ ಗೋವರ್ಧನಗಿರಿಧಾರಿಯಾಗುತ್ತದೆ’ ಎಂದು ಅದು ಸತ್ಯ. ಇಂದು ನಾವೆಲ್ಲಾ ಈ ವಿಚಾರದತ್ತ ಸಾಗಬೇಕಿದೆ. ನಮ್ಮ ಭಾಷೆಗಾಗಿ ನಾವು ಕಿರು ಬೆರಳಾದರೂ ಎತ್ತುವ ಸಾಹಸ ಮಾಡಬೇಕಿದೆ. “ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ” ಎಂಬುದನ್ನು ತೋರಬೇಕಾಗಿದೆ.
ನಮ್ಮಲ್ಲಿ ಭಾಷಾ ಪ್ರೇಮ ಇರದೇ ಇದ್ದಿದ್ದರೆ, ನಮಗೆ 9 ಜ್ಞಾನ ಪೀಠ ಪ್ರಶಸ್ತಿಗಳು ಬರುತ್ತಲೆ ಇರಲಿಲ್ಲ ಆದರೆ ಕೆಲವರಲ್ಲಿ ಇದು ಕಡಿಮೆಯಾಗುತ್ತಿರುವುದು ಆತಂಕಕ್ಕೆ ಅಣಿಮಾಡಿದೆ. ದಕ್ಷಿಣ ಭಾರತದಲ್ಲೇ ಪ್ರತಿ ವರ್ಷ ಅತಿ ಹೆಚ್ಚು ಕನ್ನಡದ ಪುಸ್ತಕಗಳು ಪ್ರಕಾಶಿತಗೊಳ್ಳುತ್ತವೆ ಹಾಗೂ ವರ್ಷಕ್ಕೆ ೫೦೦೦ ಕನ್ನಡದ ಪುಸ್ತಕಗಳು ಬಿಡುಗಡೆ ಆಗುತ್ತವೆ. ಇದು ಕನ್ನಡ ಭಾಷೆಯ ಶ್ರೀಮಂತಿಕೆಯ ಕೈಗನ್ನಡಿ. ಹಾಗಾದರೆ ನಮ್ಮಲ್ಲಿರುವ ಭಾಷಾಪ್ರೇಮ ಹೇಗೆ ಗೊತ್ತಾಗುತ್ತದೆ? ಕನ್ನಡದ ಪುಸ್ತಕಗಳನ್ನ ಓದುವ, ಬರೆಯುವ ಹಾಗೂ ರಚಿಸುವ ಕೆಲಸ ಮಾಡುವುದಾದರೆ ಅವನಿಂದಾಗಿ ಅನೇಕ ಕನ್ನಡದ ಲೇಖಕರ ಜೀವನ ಸಾಗುತ್ತಿರುತ್ತದೆ. ಅದಕ್ಕೂ ಮಿಗಿಲಾಗಿ ಕನ್ನಡದ ಅಚ್ಚು ಹೆಚ್ಚು ಹೆಚ್ಚಾಗಿ ಮೂಡುತ್ತಿರುತ್ತದೆ, ಉತ್ತಮ ಬರವಣಿಗೆಗಳು ಪ್ರಕಾಶನಗೊಳ್ಳುತ್ತಿರುತ್ತವೆ, ಇದನ್ನು ನಾವು ಭಾಷಾ ಪ್ರೇಮ ಎನ್ನಬಹುದು. ಹೀಗೆ ಮಾಡಿದರೆ ಖಂಡಿತಾ ನಾವು ಬದುಕಬಹುದು ಮತ್ತು ಭಾಷೆ ಬೆಳೆಯಲು ಸಾಧ್ಯ. ನಾವು ಇರಲಿ ಇಲ್ಲದೆ ಇರಲಿ ಕನ್ನಡ ಪ್ರೇಮ ಉಳಿದು ಬೆಳೆಲಿ, ಬದುಕಲು ದಾರಿಯಾಗಲಿ.
ಕನ್ನಡಿಗರು ಕೇವಲ ಅಭಿಮಾನಿಗಳಲ್ಲ, ನಿಜವಾದ ಕನ್ನಡದ ಪ್ರೇಮಿಗಳು. ಇದಕ್ಕೆ ಪ್ರತಿ ವರ್ಷ ಅಚ್ಚಾಗುತ್ತಿರುವ ಕನ್ನಡ ಪುಸ್ತಕಗಳೇ ಸಾಕ್ಷಿ. ನಮ್ಮಲ್ಲಿ ಇನ್ನೂ ಹೆಚ್ಚಿನ ಕನ್ನಡದ ಪ್ರಕಾಶಕರು ಹುಟ್ಟಲಿ, ಇನ್ನೂ ಹೆಚ್ಚಿನ ಬರಹಗಾರರು ಬೆಳೆಯಲಿ, ಇನ್ನೂ ಹೆಚ್ಚಿನ ಓದುವವರು ಜನ್ಮತಾಳಲಿ, ಅದೇ ನಿಜವಾದ ಭಾಷಾ ಪ್ರೇಮ. ಅಭಿಮಾನ ದುರಾಭಿಮಾನವಾಗದಷ್ಟು ಇದ್ದರೆ ಸಾಕು! ಕನ್ನಡ ಪ್ರೇಮ ಮುಗಿಲೆತ್ತರಕ್ಕೆ ಬೆಳೆಯುತ್ತಲೇ ಹೋಗಲಿ. ತಾಯಿ ಭುವನೇಶ್ವರಿಯ ಪಾದಪದ್ಮಗಳು ಕನ್ನಡ ಕಂದಗಳೆಂಬ ಪುಷ್ಪಗಳಿಂದ ಪೂಜಿತಗೊಂಡು, ಮನಸ್ಸು ಕನ್ನಡ ಸಾಹಿತ್ಯದ ಸುವಚನಗಳ ಸಮರ್ಪಣೆಯಿಂದ ಹರ್ಷದಿಂದ ಪುಳಕಿತವಾಗುವಂತಾಗಲಿ. ಕನ್ನಡದ ಉಳಿವಿಗಾಗಿ ನಾವಲ್ಲ, ನಮ್ಮ ಉಳಿವಿಗಾಗಿ ಕನ್ನಡ ಬೇಕಿದೆ ಎಂಬ ವಿಚಾರ ಎಲ್ಲರಿಗೂ ಮನವರಿಕೆಯಾಗಲಿ.
(ಲೇಖಕರು ಮೂಲತಃ ಹಾವೇರಿ ಜಿಲ್ಲೆಯವರು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿರುವ ಇವರು ಉತ್ತಮ ವಾಗ್ಮಿಗಳು,ಲೇಖಕರೂ ಹೌದು.ಪ್ರಸ್ತುತ ಸುವರ್ಣ ನ್ಯೂಸ್ನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.)