Ram Madhav at Manthana Forum

ವರದಿ : ಶ್ರೀ ಶೈಲೇಶ್ ಕುಲಕರ್ಣಿ

ಸಂಘದ ೨ನೆಯ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೊಳವಲ್ಕರ್ ಅಥವಾ ಶ್ರೀಗುರೂಜಿ ಯವರ ೧೧೨ನೆಯ ಜನ್ಮದಿನದ ನಿಮಿತ್ತ ಬೆಂಗಳೂರು ಮಂಥನ ವೇದಿಕೆಯ ವತಿಯಿಂದ ನಗರದ ಆರ್.ವಿ .ದಂತ ವೈದ್ಯಕೀಯ ಕಾಲೇಜಿನಲ್ಲಿ ಶ್ರೀಗುರೂಜಿಯವರ “ಸಮಗ್ರ ವಿಚಾರ” ಈ ವಿಷಯದ ಕುರಿತಾಗಿ ಸಂಘದ ಪ್ರಚಾರಕರೂ ಮತ್ತು ಪ್ರಸಕ್ತ ಭಾಜಪದ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಶ್ರೀ ರಾಮ್ ಮಾಧವರ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಫೆಬ್ರುವರಿ ೧೦ರಂದು ಜಮ್ಮುವಿನಲ್ಲಿ ಪಾಕಿಸ್ತಾನಿ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮರಾದ ವೀರ ಸೈನಿಕರ ಸ್ಮರಣೆ ಮತ್ತು ಉಗ್ರವಾದದ ಖಂಡನೆಯೊಂದಿಗೆ ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ರಾಮ್ ಮಾಧವರು, ಸಮಗ್ರ ನಾಗರಿಕತೆಗೆ ಇಂದು ಶತ್ರುವಾಗಿ ಪರಿಣಮಿಸಿರುವ ಭಯೋತ್ಪಾದಕತೆಯ ವಿರುದ್ಧ ರಾಷ್ಟ್ರೀಯತೆ, ಮತ-ಪಂಥ ಗಳ ಭೇದಭಾವಗಳನ್ನು ಮೀರಿ ಎದ್ದುನಿಲ್ಲಬೇಕಾಗಿದೆ. ಉಗ್ರವಾದದ ವಿರುದ್ಧದ ಸಂಘರ್ಷದ ಪರಿಸ್ಥಿತಿಯನ್ನು ಸಿನಿಕತೆಯಿಂದಲ್ಲದೇ ಸಾಮರ್ಥ್ಯದಿಂದ, ಶಕ್ತಿಯಿಂದ ನಡೆದುಕೊಂಡಾಗಲಷ್ಟೇ ಎದುರಿಸಲು ಸಾಧ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಎರಡನೆಯ ಸರಸಂಘಚಾಲಕರಾಗಿ ಶ್ರೀ ಗುರುಜಿ ೩೩ ವರ್ಷಗಳ ದೀರ್ಘಕಾಲ ಮುನ್ನಡೆಸಿದರು. ಸಂಘವು ಸಾಮಾನ್ಯ ಗ್ರಹಿಕೆಯಂತೆ ಬರಿಯ ಸಂಘಟನೆ ಅಥವ ಸಂಸ್ಥೆಯಲ್ಲ ದೊಂದು ಪರಿಕಲ್ಪನೆ. ಈ ಪರಿಕಲ್ಪನೆ ಈ ನಾಡಿನ ಸಹಸ್ರಾರು ವರ್ಷಗಳ ಕಾಲದ ನಾಗರಿಕತೆಯ ಫಲಶ್ರುತಿ. ಸಂಘವನ್ನು ಸಂಸ್ಥೆಯೊಂದರಂತೆ ಇಲ್ಲವೇ ವಿಚಾರವಾದವೊಂದರಂತೆ ಕಾಣುವದಿದೆ. ಆದರೆ ಸಂಘಕ್ಕೆ ಸಾಧಾರಣ ಸಂಸ್ಥೆ ಯೊಂದಕ್ಕಿರುವಂತೆ ಯಾವುದೇ ನಿಶ್ಚಿತ ಚೌಕಟ್ಟಿಲ್ಲ .ಅದಕ್ಕೆ ತನ್ನದೆಂಬ ನಿಶ್ಚಿತವಾದ ಮತ್ತು ಸೀಮಿತ ತಳಹದಿಯ ವಿಚಾರವಾದವೂ ಇಲ್ಲ.ಸಂಘವು ಅಷ್ಟರ ಮಟ್ಟಿಗೆ ಮುಕ್ತ .

ಮಹಾತ್ಮಾಗಾಂಧಿ ಯವರ ದುರದೃಷ್ಟಕರ ಹತ್ಯೆಯ ನಂತರ ಸಂಘದ ಮೇಲೆ ಪ್ರತಿಬಂಧ ಹೇರಲಾಯಿತು .ಪ್ರತಿಬಂಧದ ತೆರವಿನ ನಂತರ ಸಂಘದ ಒಳಗೇ ಅನೇಕರು ಸಂಘವನ್ನು ರಾಜಕೀಯ ಪಕ್ಷವಾಗಿ ಬದಲಾಯಿಸುವ ಕುರಿತಾಗಿ ಗುರೂಜಿಯವರಲ್ಲಿ ಚರ್ಚಿಸಿದ್ದರು. ಇಂತಹ ಚರ್ಚೆಗಳಿಗೆ ಉತ್ತರವಾಗಿ ಗುರೂಜಿ ” ನಿಮ್ಮಲ್ಲರಿಗೂ ರಾಜಕೀಯ ಪಕ್ಷವಾಗಿ ಕೆಲಸ ಮಾಡುವ ಇಚ್ಛೆಯಿದ್ದಲ್ಲಿ ನಾನೋಬ್ಬ್ಬನೆ ಈ ಭಗವಾಧ್ವಜದ ಅಡಿಯಲ್ಲಿ ಶಾಖಾ ಕಾರ್ಯವನ್ನು ಮುಂದುವರೆಸುವೆ” ಎಂದು ಹೇಳಿದ್ದರು. ಮತ್ತೊಂದು ಸಂದರ್ಭದಲ್ಲಿ ,ಸಂಘದ ಧ್ಯೇಯೋದ್ದೇಶಗಳ ಪೂರ್ತಿಗೆ ಬೇರೆಯ ಪ್ರಶಸ್ತ ಮಾರ್ಗವೆಂಬುದು ಇದ್ದಲ್ಲಿ ಈಗಿರುವ ದಾರಿಯನ್ನು ಬಿಟ್ಟು ಪರ್ಯಾಯವನ್ನು ಒಪ್ಪಿಕೊಳ್ಳುವವರಲ್ಲಿ ನಾನೇ ಮೊದಲಿಗನಾಗಿರುತ್ತೇನೆ ಎಂದೂ ಹೇಳಿದ್ದರು.

ಹೀಗೆ ಡಾಕ್ಟರ್ ಜೀ ಮತ್ತು ಗುರೂಜಿಯವರ ಸಮೇತ ಅನೇಕ ಹಿರಿಯರ ಮಾರ್ಗದರ್ಶಿತ್ವದಲ್ಲಿ ಮುನ್ನಡೆಸಲ್ಪಟ್ಟ ಸಂಘವೂ ಯಾವತ್ತೂ ಕೇವಲ ಸಂಸ್ಥೆ ಅಥವಾ ನಿಶ್ಚಿತ ವಿಚಾರವಾದವಾಗಿ ಸೀಮಿತವಾಗಲಿಲ್ಲ. ಒಂದು ಸಂದರ್ಭದಲ್ಲಿ ಗುರೂಜಿಯವರಿಗೆ ಸಂಘದ ಕುರಿತಾಗಿ ತಿಳುವಳಿಕೆಗಾಗಿ ಯಾವುದಾದರೂ ಸಾಹಿತ್ಯವಿದೆಯೇ ಎಂಬ ಪ್ರಶ್ನೆಗೆ ೪ ವೇದಗಳು, ರಾಮಾಯಣ , ಮಹಾಭಾರತ, ಎಲ್ಲ ಉಪನಿಷತ್ತು ಮತ್ತು ಧರ್ಮಶಾಸ್ತ್ರಗಳೇ ಸಂಘದ ಪರಿಚಾಯಕ ಸಾಹಿತ್ಯ ಎಂದು ಹೇಳಿದ್ದರು.

Sri Ram Madhav, General Secretary BJP

ಸಂಘವು ಪ್ರಸ್ತುತ ಪಡಿಸುವ ವಿಚಾರವು ಸಂಪೂರ್ಣ ಭಾರತೀಯ ವಿಚಾರ. ಈ ಭಾರತೀಯ ವಿಚಾರವೆಂಬುದು ಸಾವಿರಾರು ವರ್ಷಗಳ ಸರಣಿಯಲ್ಲಿ ಅಗಣಿತ ಸಂತ ಮಹಂತರಿಂದ ಪ್ರಣೀತವಾದ ಲೆಕ್ಖವಿಲ್ಲದ ಚಿಂತನ ಮಂಥನಗಳ ಮೂಸೆಯಲ್ಲಿ ಅರಳಿದ ವಿಚಾರವಾಗಿದೆ. ಈ ವಿಚಾರವೇ ಈ ನಾಡಿಗೆ ವಿಶಿಷ್ಟವಾದ ಗುರುತನ್ನು ಒದಗಿಸಿಕೊಟ್ಟಿವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅರಳಿದ ನಾಗರಿಕತೆಗಳು ಅಲ್ಲಿನ ಜನರ ವಿಚಾರಗಳ ಪ್ರತಿಫಲವಾಗಿರುತ್ತವೆ. ಮೊಹಮ್ಮದ್ ಇಕ್ಬಾಲ್ ತಮ್ಮ ಪ್ರಸಿದ್ದ ಸಾರೆ ಜಹಾನ್ ಸೆ ಅಚ್ಛಾ ಎಂಬ ಗೀತೆಯಲ್ಲಿ , ಯುನಾನ್ , ಮಿಸ್ರ, ರೋಮ್ ದಂತಹ ನಾಗರಿಕತೆಗಳೇ ಅಳಿದುಹೊಗಿರುವಲ್ಲಿ ಇಂದಿಗೂ ಉಳಿದಿರುವ ಭಾರತೀಯತೆಯಲ್ಲಿ ಯಾವುದೋ ಸಾಮರ್ಥ್ಯವಿರಲೇಬೇಕು ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವದಂತಹ ಕಲ್ಪನೆ ಹುಟ್ಟಿದ್ದೂ ಇಂತಹ ನಗರಸ್ತರದ ನಾಗರಿಕತೆಗಳಲ್ಲಿಯೇ . ಆದರೆ ನಮ್ಮ ಸಂಸ್ಕೃತಿಯ ವಿಚಾರಗಳ ಉದಯವಾಗಿದ್ದು ಘೋರ ಕಾಡಿನ , ನಿಸರ್ಗದ ಮಡಿಲಲ್ಲಿ ಋಷಿಮುನಿಗಳ ತಪಸಿನ ಫಲವಾಗಿ. ಹೀಗಾಗಿಯೇ ಭಾರತೀಯ ವಿಚಾರವೆಂಬುದು ಎಲ್ಲವನ್ನೂ ಒಳಗೊಂಡಿರುವ ಸಮಗ್ರ ವಿಚಾರ. ಇದನ್ನೇ ತಿಳಿದವರು “ಭದ್ರಇಚ್ಛಾ”
ಎಂದಾಗಿ, “ಆನಂದ”ವೆಂದಾಗಿಕರೆದದ್ದು.

ಸಂಘವು ಪ್ರತಿನಿಧಿಸುವ ಈ ಭಾರತೀಯ ವಿಚಾರವನ್ನು ಕೆಲವರು ಮತ್ತೊಬ್ಬರ ಮೇಲೆ ಪಾರಮ್ಯ ಸಾಧಿಸಲು ಬಳಸುವ ವಾದ ಎಂದು ತಪ್ಪಾಗಿ ಗುರುತಿಸುತ್ತಾರೆ. ಆದರೆ ವಾಸ್ತವದಲ್ಲಿ ಸಂಘವು ಪ್ರತಿನಿಧಿಸುವ ವಿಚಾರ ಎಲ್ಲರನ್ನೂ ಒಳಗೊಂಡ ಎಲ್ಲರ ಆನಂದವೇ ಆಗಿದೆ.ಈ ವಿಚಾರದ ಮೂಲ ಸ್ತಂಭಗಳಲ್ಲಿ ಮೊದಲನೆಯದ್ದೆ ಈ ರಾಷ್ಟ್ರದ ಕುರಿತಾದ ಗುರುತು. ಕೆಲವೇ ಶತಮಾನಗಳ ಹಿಂದೆ ಅಸ್ತಿತ್ವಕ್ಕ ಬಂದ ಪಶ್ಚಿಮದ ದೇಶಗಳಂತಲ್ಲದೆ ಈ ದೇಶಕ್ಕೆ ತನ್ನದೇ ಆದ ಅಸ್ಮಿತೆಯಿದೆ. ಗ್ರೇಟ್ ಬ್ರಿಟನ್ ಎಂದು ಹೇಳಿಕೊಳ್ಳುವ ದೇಶವೂ ಇಂಗ್ಲೆಂಡ್ ,ಸ್ಕಾಟ್ಲಾಂಡ್ ಮತ್ತು ವೇಲ್ಸ್ ಗಳು ೧೮ನೆ ಶತಮಾನದ ಪೂರ್ವಕ್ಕೆ ಗುರುತಿಸಿಕೊಂಡ ಒಕ್ಕೂಟವಷ್ಟೇ ತನ್ನ ಸುತ್ತಲಿನ ದೇಶಗಳನ್ನು ಬಲವಂತವಾಗಿಯೋ ಮತದ ಆಧಾರದಲ್ಲಿಯೋ ಸೇರಿಸಿ ಅದನ್ನೇ ಸಂಯುಕ್ತ ಸಾಮ್ರಾಜ್ಯ ಎಂದು ಘೋಷಿಸಿ ಕೊಂಡಾಗ ಅಸ್ತಿತ್ವಕ್ಕೆ ಬಂದಿದ್ದು ಯುನೈಟೆಡ್ ಕಿಂಗ್ಡಂ .ಐರಿಶ್ ಜನರ ಐರ್ ಲ್ಯಾಂಡ ಈ ರಾಷ್ಟ್ರಗಳ ಒಕ್ಕೂಟದಿಂದ ಹೊರನಡೆಯುವದರೊಂದಿಗೆ ಇದರಲ್ಲಿ ಮೊದಲನೇ ಬಿರುಕು ಕಂಡಿತು. ಕೆಲವರ್ಷಗಳ ಹಿಂದಷ್ಟೇ ಸ್ಕಾಟ್ಲಾಂಡ್ ಕೂಡ ಇದೇ ರಾಗದಲ್ಲಿ ಮಾತಾಡಿತ್ತು. ಇನ್ನು ಸಂಯುಕ್ತ ಸಂಸ್ಥಾನಗಳ ಒಕ್ಕೂಟವಾಗಿರುವ ಅಮೇರಿಕೆಯೂ ಹೆಚ್ಚುಕಮ್ಮಿ ಇದೇ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ೧೩ ಆಂಗ್ಲೋ ಸ್ಯಾಕ್ಸನ್ನರ ವಸಾಹತುಗಳು ತಂತಮ್ಮ ಹಿತಾಸಕ್ತಿಗಳ ಅಧಿಕಾರಗಳ ರಕ್ಷಣೆಗೆ ಒಟ್ಟಿಗೆ ಬಂದಾಗ ರೂಪಗೊಂಡಿದ್ದೆ ಅಮೇರಿಕದ ಸಂಯುಕ್ತ ಸಂಸ್ಥಾನ .ಇಂದಿಗೂ ಸಹ ಟೆಕ್ಸಾಸ್ ರಾಜ್ಯದ ಸಂವಿಧಾನದಲ್ಲಿ ತನಗೆ ಸರಿಯೆನಿಸಿದಾಗ ಒಕ್ಕೂಟದಿಂದ ಹೊರನಡೆಯುವ ಪ್ರಾವಧಾನವಿದೆ.

ನಮ್ಮ ಕಣ್ಣಿಗೆ ಇಂದು ಕಾಣುತ್ತಿರುವ ಈ ಎಲ್ಲ ದೇಶಗಳಲ್ಲಿ ಕಂಡುಬರುತ್ತಿರುವ ಪ್ರಯೋಗಗಳು ತೀರ ಎಳಸು. ಹೀಗಾಗಿ ಇವೆಲ್ಲವುಗಳ ಆಂತರ್ಯದಲ್ಲಿ ಗೊಂದಲವಡಗಿದೆ. ಇಂತಹ ಕಲ್ಪನೆಯ ಹಿನ್ನೆಲೆಯಲ್ಲಿ ಭಾರತವನ್ನು ನೋಡಿದವರಿಗೆ, ಉದಾಹರಣೆಗೆ ಕಾಂಗ್ರೆಸ್ಸಿನ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಸುರೆಂದ್ರನಾಥ ಬ್ಯಾನರ್ಜಿ ಅಂಥವರಿಗೂ ಭಾರತವಿನ್ನೂ ರೂಪಗೊಳ್ಳುತ್ತಿರುವ ದೇಶವಾಗಿಯೇ ಕಂಡಿತು.
ಭಾರತೀಯ ವಿಚಾರವೆಂಬುದು ಭಾರತೀಯ ರಾಷ್ಟ್ರೀಯತೆ ಎಂಬ ವೈಚಾರಿಕ ತಳಹದಿಯ ಮೇಲೆಯೇ ಸಹಸ್ರಾರು ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತು. ಇಂತಹ ತಳಹದಿಗೆ ಯಾವುದೇ ಪ್ರವಾದಿಯ ಐತಿಹಾಸಿಕತೆಯ ಹಂಗಾಗಲಿ ರಾಜಕೀಯ ಸಿದ್ದಾಂತಗಳ ಹಿನ್ನೆಲೆಯಾಗಲಿ ಬೇಕಾಗುವುದಿಲ್ಲ. ಕ್ರೈಸ್ತನೆಂಬ ವ್ಯಕ್ತಿಯ ಐತಿಹಾಸಿಕತೆಯನ್ನು ನಿರಾಕರಿಸಿದ್ದೇ ಆದಲ್ಲಿ ಅನೇಕ ಸೆಮೆಟಿಕ ಮತಗಳ ಬುನಾದಿಯೇ ಬಿದ್ದುಹೋಗಬಹುದು. ಆದರೆ ಭಾರತವನ್ನು ಮುನ್ನಡೆಸುವದು ಯಾವುದೇ ಚಾರಿತ್ರಿಕ ಘಟನೆ , ಭೌಗೋಳಿಕತೆ ಅಥವಾ ರಾಜಕೀಯ ಸಿದ್ಧಾಂತಗಳಲ್ಲ ಬದಲಾಗಿ ಇವೆಲ್ಲವನ್ನೂ ಮೀರಿದ ಮೌಲ್ಯಾಧಾರಿತ ಪರಿಕಲ್ಪನೆಗಳು. ಭಾರತದ ಪರಿಚಯವೇ ಸಾರ್ವಕಾಲಿಕ ಮೌಲ್ಯಗಳು.

ಈ ಹಿನ್ನೆಲೆಯಲ್ಲಿಯೇ ಅದೊಮ್ಮೆ ನಿಮಗೆ ಯಾವರೀತಿಯ ಸರ್ಕಾರದ ಒಲವಿದೆ ಎಂದು ಗಾಂಧೀಜಿಯವರಲ್ಲಿ ಕೇಳಿದಾಗ ತಕ್ಷಣವೇ ಅವರು “ನನಗಂತೂ ರಾಮರಾಜ್ಯವೇ ಬೇಕು” ಎಂದು ಹೇಳಿದ್ದರು.
ಕಾರಣ, ಮಹಾತ್ಮಾಗಾಂಧಿ ಯವರ ಕಲ್ಪನೆಯ ರಾಮರಾಜ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವಿದೆ ಇಂದಿನಂತೆ ಮಾತ್ರ ಕೆಲವರ ಪ್ರಾತಿನಿಧಿಕ ಪ್ರಜಾಪ್ರಭುತ್ವವಲ್ಲ. ಹೀಗೆ ಮೌಲ್ಯಾಧಾರಿತ ಜೀವನ ಚಾಲ್ತಿಯಲ್ಲಿದ್ದ ಕಾರಣದಿಂದಲೇ ಮಹಾಭಾರತ ಯುದ್ಧವೇ ನಡೆದುಹೋದರೂ ,ಸಾಮ್ರಾಜ್ಯಗಳೇ ಉರುಳಿಹೋದರೂ ಇಲ್ಲಿನ ಜೀವನ ಬದಲಾಗಲಿಲ್ಲ.

ಕಮ್ಯುನಿಸಂ ಮತ್ತು ಫ್ಯಾಸಿಸಂಗಳ ಉಗಮದಿಂದ ಹತಾಶರಾಗಿದ್ದ ಫ್ರಾನ್ಸ್ ನ ಚಿಂತಕ ಜಾಕಿ ಮೆರಿತೊನ್ ಪ್ರಜಾಪ್ರಭುತ್ವ ಮತ್ತು ಕ್ರಿಸ್ತತತ್ವಗಳ ಆಧಾರದ ಮೇಲೆ ನಿಂತ ಚಿಂತನೆಯೊಂದನ್ನ ಪ್ರಸ್ತುತ ಪಡಿಸಿದ್ದರು.
ಆದರೆ ಪಂಡಿತ್ ದೀನ್ ದಯಾಳ ಉಪಾಧ್ಯಾಯರು ಪ್ರಸ್ತುತ ಪಡಿಸಿದ ಸಮಗ್ರ ಚಿಂತನೆಯ ಮೂಲದಲ್ಲಿ ಯಾವುದೇ ರಾಜಕೀಯ ಸಿದ್ದಾಂತವಾಗಲಿ ಅಥವಾ ಮತೀಯ ಚಿಂತನೆಗಳಿಲ್ಲದೆ ಮಾತ್ರ ಶಾಶ್ವತ ಮೌಲ್ಯಾಧಾರಿತ ತತ್ವಗಳಿವೆ. ಈ ಮುಕ್ತ , ಸರ್ವವ್ಯಾಪಿ,ಸರ್ವೋಪಕಾರಿ ತತ್ವಗಳೇ ಭಾರತೀಯ ವೈಚಾರಿಕತೆಯ ಮೆರುಗನ್ನು ಹೆಚ್ಚಿಸುತ್ತವೆ. ಇದು ನಂಬಿಕಸ್ತರ ಭೂಮಿಯಲ್ಲ ಇದು ಸತ್ಯಶೋಧಕರ ಭೂಮಿ.
ಯಾವುದೇ ನಂಬಿಕೆಯ ಹಿಂಬಾಲಕನಾಗುವದು ತುಂಬಾ ಸರಳ ,ಅಲ್ಲಿ ನೀವು ನಿಮ್ಮ ಬುದ್ಧಿಯನ್ನು ಖರ್ಚು ಮಾಡಬೇಕಿಲ್ಲ ಇರುವದನ್ನು ಒಪ್ಪಿಕೊಂಡರಾಯಿತು .ಆದರೆ ಈ ನಾಡಿನ ತತ್ವಗಳ ಮಹಿಮೆ ಅರಿತವರು ನಿತ್ಯ ಮುಕ್ತ ವಿಚಾರವುಳ್ಳವರು. ಅದಕ್ಕೆ ಇಲ್ಲಿನ ತತ್ವಶಾಸ್ತ್ರಿಗಳು ಅನಿಕೇತರಾಗಿ ಸತ್ಯವನ್ನು ನೇತಿ ನೇತಿ ಎಂದು ವರ್ಣಿಸಿದ್ದಾರೆ. ” ಅದರ ಮುಕ್ತರೂಪವೇ ಹಿಂದೂ ಚಿಂತನೆಯ ಶಾಶ್ವತತೆಗೆ ,ಸನಾತನ ಜೀವನಕ್ಕೆ ಕಾರಣ” ಎಂದು ಭಗಿನಿ ನಿವೇದಿತಾ ಹೇಳಿದ್ದೂ ಇದೇ ಅರ್ಥದಲ್ಲಿ.

Sri Ram Madhav addressing in Manthana on Integral thought

ಈ ವಿಚಾರಧಾರೆಯನ್ನು ಒಂದು ನಿಶ್ಚಿತ ರೂಪದಲ್ಲಿ ಹಿಡಿದಿಡುವ ಅದನ್ನು ಸೀಮಿತಗೊಳಿಸುವ ಯಾವುದೇ ಪ್ರಯತ್ನ ಅದು ಆಂಗ್ಲಿಕರಣ, ಸೆಮೆಟಿಕೀಕರಣವೇ ಸರಿ.
ಭಾರತದಲ್ಲಿ ಚಾರಿತ್ರ ಮತ್ತು ಶೀಲ ಎಂದು ಗುರುತಿಸಲ್ಪಡುವ ಗುಣಗಳನ್ನು ಆಂಗ್ಲದಲ್ಲಿ character ಎಂಬ ಏಕರೂಪ ಲಕ್ಷಣದಲ್ಲಿ ಹಿಡಿದಿಡುತ್ತಾರೆ. ಸಾಮಯಿಕ ಸಾಮಾಜವೊಂದರ ಒಪ್ಪಿತ ಪದ್ಧತಿಗಳು ಚರಿತ್ರ ಎನಿಸುತ್ತವೆ .ಉದಾಹರಣೆಗೆ ಏಕ ಪತ್ನಿವೃತ ವು ಸಮಾಜವು ಕಾಲಘಟ್ಟದಲ್ಲಿ ಒಪ್ಪಿಕೊಂಡಿರುವ ಚರಿತ್ರ. ಇದು ಬಾಹ್ಯ ರೀತಿಯಲ್ಲಿ ಆರೋಪಿತವಾಗಿದ್ದು. ಆಜ್ಞೆಯಂತೆ ನಡೆದುಕೊಳ್ಳುವದು ಚರಿತ್ರವಾನನ ಲಕ್ಷಣ.ಆದರೆ ನಮ್ಮ ಸಂಸ್ಕೃತಿ ನಮಗೆ ಇನ್ನೂ ಹೆಚ್ಚಿನದನ್ನು ಕಲಿಸಿದೆ ಅದುವೇ ಶೀಲ. ಈ ಆಂತರ್ಯದ ಕರೆ “ಶೀಲ”ದ ಕಾರಣದಿಂದಲೇ ಆಚಾರ್ಯ ರಾಮಾನುಜರು ದೇವಸ್ಥಾನದ ವೇದಿಕೆಯಿಂದಲೇ ಎಲ್ಲರೂ ಮುಕ್ತಿಗೆ ಅರ್ಹರು ಯಾರಿಗೂ ಜಾತಿಯಿಲ್ಲ ಎಂದು ಘೋಷಿಸಿದ್ದು. ವ್ಯಕ್ತಿಯನ್ನು ಸಣ್ಣ ಸಣ್ಣ ಘಟಕಗಳಾಗಿ ವಿಘಟಿಸಿನೋಡುವ ವಿಚಾರಗಳ ಮಧ್ಯೆ ಭಾರತೀಯ ಚಿಂತನೆಯೊಂದೆ ಆತನ ಸಮಗ್ರತೆಯನ್ನು ಎತ್ತಿಹಿಡಿಯುವ ಅವನ ಸಂಪೂರ್ಣತೆಯ ಪರಿಚಯವೇ ನಿಜವಾದ ಪರಿಚಯ ಎನ್ನುವದನ್ನು ಬಲವಾಗಿ ಹೇಳುತ್ತದೆ. ತಮ್ಮ ಕೊನೆಯ ಸಾಕ್ಷಾತ್ಕಾರದಲ್ಲಿ ಗುರೂಜಿ ಇರಾನಿನ ಪತ್ರಕರ್ತನಿಗೆ ” ಋಜುತ್ವದ ಮಾರ್ಗದಲ್ಲಿ ನಡೆದದ್ದೇ ಆದರೆ ಮುಸ್ಲಿಮನ ನಡುವಳಿಕೆಯು ಹಿಂದುವಿನಷ್ಟೇ ಸ್ವೀಕೃತ” ಎಂದು ಹೇಳಿದ್ದರು.

ಇಂತಹ ವಿಚಾರದ ರಕ್ಷಣೆ ಇಂದಿನ ಅಗತ್ಯತೆಯಾಗಿದೆ. ಒಂಟಿ ಹೆಣ್ಣು ಮಗಳೊಬ್ಬಳು ರಾತ್ರಿಯಲ್ಲಿ ಏಕಾಂತವಾಗಿ ನಿರ್ಭೀತಿಯಿಂದ ನಡೆದಾಡುವ ಸಮಾಜವನ್ನು ಕಾಣುವದು ನನ್ನಾಸೆ ಎಂಬುದು ಗಾಂಧೀಜಿಯವರ ಅನಿಸಿಕೆಯಾಗಿತ್ತು. ಇದರ ಗೂಢ ಅರ್ಥ , ಹೆಣ್ಣೊಬ್ಬಳು ಮಧ್ಯರಾತ್ರಿ ಒಬ್ಬಂಟಿಯಾಗಿ ನಡೆದಾಡುವ ಪ್ರಸಂಗದಲ್ಲೂ ಅದರ ಬಗ್ಗೆ ಅನ್ಯಥಾ ಭಾವಿಸದ ಸಮಾಜಿಕ ಚಾರಿತ್ರ್ಯ ಇರಬೇಕಾಗುತ್ತದೆ.ಇಂತಹ ವೈಚಾರಿಕತೆಯೇ ಭಾರತೀಯ ವಿಚಾರಧಾರೆ . ಸಂಘವು ಇಂತಹ ವೈಚಾರಿಕತೆಯ ವಾಹಕ. ವೈಚಾರಿಕ ಸಾಮರ್ಥ್ಯವುಳ್ಳ ನಾವೆಲ್ಲರೂ ಈ ಸನಾತನ ವೈಚಾರಿಕತೆಯ ಮರುಪ್ರಸರಣದ ಕಾರ್ಯದಲ್ಲಿ ಇನ್ನೂ ಹೆಚ್ಚಿನ ಶಕ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದು ಹೇಳುವದರೊಂದಿಗೆ ಉಪನ್ಯಾಸ ಮುಕ್ತಾಯಗೊಂಡಿತು.

Leave a Reply

Your email address will not be published.

This site uses Akismet to reduce spam. Learn how your comment data is processed.