ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ (91) ಅವರು ಇಂದು ವಿಧಿವಶರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ (ಜ. 12) ಇಂದು ಮಧ್ಯಾಹ್ನ 1.05ರ ಸುಮಾರಿಗೆ ಸ್ವಾಮಿಜೀ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಎತ್ತಿಹಿಡಿದ ಸ್ವಾಮಿ ಹರ್ಷಾನಂದ ಅವರು ರಾಮಕೃಷ್ಣ ಆಶ್ರಮದ ಹಿರಿಯ ಸಂನ್ಯಾಸಿಯಾಗಿದ್ದರು.
ರಾಮಕೃಷ್ಣ ಆಶ್ರಮದ 6ನೇ ಅಧ್ಯಕ್ಷರಾದ ಸ್ವಾಮಿ ವಿರಜಾನಂದರಿಂದ ಮಂತ್ರ ದೀಕ್ಷೆ ಸ್ವೀಕರಿಸಿ ಮಂಗಳೂರು,ಮೈಸೂರು, ಬೇಲೂರು ಮಠ ಹಾಗೂ ಅಲಹಾಬಾದ್ ರಾಮಕೃಷ್ಣ ಮಠಗಳಲ್ಲಿ ಕಾರ್ಯನಿರ್ವಹಿಸಿದ್ದರು. 1989ರಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಹಿಂದೂಧರ್ಮ–ಸಂಸ್ಕೃತಿಗಳನ್ನು ಪರಿಚಯಿಸುವ ಪುಟ್ಟ ಪುಸ್ತಕಗಳನ್ನು; ‘ಪ್ರಶ್ನೋತ್ತರ ರೂಪದಲ್ಲಿ ಹಿಂದೂ ಧರ್ಮ’, ‘ಗೀತಾ ಸಾರ ಸರ್ವಸ್ವ’, ‘ಸವಾಲು-ಸರಿಯುತ್ತರ’, ಹಿಂದೂ ದೇವ-ದೇವಿಯವರನ್ನು ಕುರಿತ ಕಿರು ಹೊತ್ತಗೆ ಗಳನ್ನು ರಚಿಸುವುದರ ಜೊತೆಗೇ ವಿದ್ವತ್ಪೂರ್ಣವಾದ, ಸಂಸ್ಕೃತದಲ್ಲೇ ರಚಿತವಾದ ‘ಈಶಾವಾಸ್ಯ ಉಪನಿಷತ್’ ಗ್ರಂಥ, ‘ನಾಮ ರಾಮಾಯಣ ಮಹಿಮಾ’, ಇವೆಲ್ಲಕ್ಕೂ ಮಿಗಿಲಾದ 35 ವರ್ಷಗಳ ಜ್ಞಾನತಪದ ಫಲವಾದ ‘ಎ ಕನ್ಸೈಸ್ ಎನ್ಸೈಕ್ಲೋಪಿಡಿಯಾ ಆಫ್ ಹಿಂದೂಯಿಸಮ್’ (ಮೂರು ಸಂಪುಟಗಳು) – ಇವು ಸ್ವಾಮೀಜಿ ಯವರ ಕೆಲವು ಕೃತಿಗಳು. ‘ಎನ್ಸೈಕ್ಲೋಪಿಡಿಯಾ’ ಅವರ ಮೇರುಕೃತಿ.