ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಹರಿಭಾವು ವಝೆ (92) ಅವರು ಶನಿವಾರ ಬೆಳಗ್ಗೆ 10:20 ಗಂಟೆಗೆ ಬೆಳಗಾವಿಯಲ್ಲಿ ನಿಧನರಾದರು.
ಕುರುಂದವಾಡದ ರಾಜ ಬಾಪುಸಾಹೇಬ ಪಟವರ್ಧನರಲ್ಲಿ ಸಿನಿಯರ್ ಕ್ಲರ್ಕ್ ಆಗಿದ್ದ ಚಿಂತಾಮಣರಾವ್ ವಝೆ ಹಾಗೂ ರಾಧಾಬಾಯಿ ದಂಪತಿಗಳಿಗೆ 1932 ಅಕ್ಟೋಬರ್ 4ರಂದು ಹರಿಭಾವು ಅವರು ಜನಿಸಿದರು. ಹರಿಭಾವು ಅವರೂ ಸೇರಿ 3 ಸಹೋದರರು, 3 ಸಹೋದರಿಯರ ತುಂಬು ಕುಟುಂಬ ಅವರದ್ದು. ತಮ್ಮ 4ನೇ ತರಗತಿಯಲ್ಲಿದ್ದಾಗ ನಾರಬಾ ಪಾಟೀಲ ಅವರ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಭಾಜಿ ಶಾಖೆಯ ಸ್ವಯಂಸೇವಕರಾದರು.
ಕ್ರಮೇಣ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಶಾಖೆಯ ಶಿಕ್ಷಕ, ಮುಖ್ಯ ಶಿಕ್ಷಕ, ಕಾರ್ಯವಾಹ, ಬೆಳಗಾವಿ ನಗರ ಕಾರ್ಯವಾಹ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ತಮ್ಮ ಎಮ್.ಎಸ್ಸಿ ಪದವಿ ನಂತರ ಸಂಘದ ಪ್ರಚಾರಕರಾಗಿ ಹೊರಟರು. ಯಾದವರಾವ ಜೋಶಿ ಅವರ ಮಾರ್ಗದರ್ಶನ ಹಾಗೂ ಸಹವಾಸ ಹರಿಭಾವು ಅವರಿಗೆ ನಿರಂತರವಾಗಿತ್ತು. ಮಂಗಳೂರು ನಗರ ಪ್ರಚಾರಕ, ಶಿವಮೊಗ್ಗ ಜಿಲ್ಲಾ ಪ್ರಚಾರಕ, ನಂತರ ಮೈಸೂರ ವಿಭಾಗ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು.
1982ರಲ್ಲಿ ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಪ್ರಮುಖರಾಗಿ, ಗುಪ್ತಗಾಮಿನಿಯಾದ ಸರಸ್ವತಿ ನದಿಯ ಶೋಧ ಕಾರ್ಯದಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಈ ಕುರಿತು 14 ಭಾಷೆಗಳಲ್ಲಿ 3 ರೀತಿಯ ಪುಸ್ತಕಗಳನ್ನೂ ಸಹ ಪ್ರಕಟಿಸಿದ್ದರು. ಪಾರ್ಶ್ವವಾಯುಗೆ ತುತ್ತಾಗಿ 5 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರಿಭಾವು ಅವರು ಶನಿವಾರ ಇಹಲೋಕ ತ್ಯಜಿಸಿದರು.
“ಸಂಘದ ಪ್ರಚಾರಕರಾಗಿ ಇಡೀ ಜೀವಮಾನವನ್ನು ಶ್ರೀಗಂಧದಂತೆ ಸವೆಸಿದ್ದರು. ಅತ್ಯಂತ ಸವಾಲಿರುವ ಕ್ಷೇತ್ರಗಳಲ್ಲಿ ’ಸ್ವಯಮೇವ ಮೃಗೇಂದ್ರತಾ’ ಎಂಬಂತೆ ಕಾರ್ಯ ನಿರ್ವಹಿಸಿ ಸಂಘವನ್ನು ಬೆಳೆಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಎಂದೂ ವ್ಯಥೆ ಪಡೆದೆ ಭೀಷ್ಮ ಶರಶ್ಯೈಯಲ್ಲಿ ಪ್ರಾಣಬಿಟ್ಟ ಹಾಗೆ ಹರಿ ಭಾಊ ಅವರು ನಮ್ಮನ್ನು ಅಗಲಿದ್ದಾರೆ.”
- ಸು. ರಾಮಣ್ಣ, ಜ್ಯೇಷ್ಠ ಪ್ರಚಾರಕರು, ರಾ.ಸ್ವ. ಸಂಘ
“ಬಾಲ್ಯ ಕಾಲದಿಂದ ನಮಗೆಲ್ಲ ಸಂಸ್ಕಾರ ನೀಡಿ ಬೆಳೆಸಿದವರು. ಇತಿಹಾಸ ಸಂಕಲನ ಸಮಿತಿಯಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಅನೇಕ ಕಾರ್ಯಕರ್ತರನ್ನು ಬೆಳೆಸಿದ್ದರು. ವ್ಯಕ್ತಿತ್ವದಿಂದ ಆಶಾವಾದಿಯಾಗಿದ್ದರು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೂ ಎಲ್ಲರೊಂದಿಗೆ ಲವಲವಿಕೆ, ಉತ್ಸಾಹದಿಂದ ಮಾತನಾಡಿಸುತ್ತಿದ್ದರು. ಅವರ ನಿಧನದಿಂದ ಸಂಘ ಹಾಗೂ ಕಾರ್ಯಕರ್ತರಿಗೆ ದೊಡ್ಡ ಕೊರತೆ ಉಂಟಾಗಿದೆ.”
- ಅರವಿಂದರಾವ್ ದೇಶಪಾಂಡೆ, ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕರು, ರಾ.ಸ್ವ. ಸಂಘ