
ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಓದುವ ಅಭಿರುಚಿಯನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 6ನೇ ಕನ್ನಡ ಪುಸ್ತಕ ಹಬ್ಬ–2026 ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು, ಮೊದಲ ವಾರದಲ್ಲೇ ಪುಸ್ತಕಪ್ರೇಮಿಗಳು, ವಿದ್ಯಾರ್ಥಿಗಳು,ಸಾಹಿತಿಗಳು ಹಾಗೂ ಗಣ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಅಕ್ಟೋಬರ್ 31ರಿಂದ ಡಿಸೆಂಬರ್ 6 ರವರೆಗೆ ಒಟ್ಟು 37 ದಿನಗಳ ಕಾಲ ಪುಸ್ತಕ ಹಬ್ಬ ಆಯೋಜಿಸಲಾಗಿದೆ.


ಅಕ್ಟೋಬರ್ 31ರಂದು ಖ್ಯಾತ ಸಾಹಿತಿ ಶತಾವಧಾನಿ ಆರ್ ಗಣೇಶ್ ಉಪಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಉದ್ಘಾಟನಾ ದಿನವೇ ಸಾವಿರಾರು ಪುಸ್ತಕಾಸಕ್ತರು ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಿ, ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಆಸ್ವಾದಿಸಿದ್ದರು.ಪುಸ್ತಕ ಹಬ್ಬಕ್ಕೆ ಉಡುಪಿಯ ಅದಮಾರು ಮಠದ ಪೂಜ್ಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಗಳು ಭೇಟಿ ನೀಡಿ ಪುಸ್ತಕಗಳ ಸಂಗ್ರಹವನ್ನು ವೀಕ್ಷಿಸಿದರು.

ಪುಸ್ತಕ ಹಬ್ಬದ ಕುರಿತು ಮಾತನಾಡಿದ ಪುಸ್ತಕ ಪ್ರೇಮಿಯೋರ್ವರು “ರಾಷ್ಟ್ರೋತ್ಥಾನ ಸಾಹಿತ್ಯದ ನೇತೃತ್ವದಲ್ಲಿ ಚಾಮರಾಜಪೇಟೆಯ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ಹಬ್ಬವು ಕನ್ನಡ ಸಾರಸ್ವತ ಲೋಕದಲ್ಲೇ ಒಂದು ಅದ್ಭುತ ವಿಸ್ಮಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತನಾಮ ಲೇಖಕರ ಕೃತಿಗಳಿಂದ ಹಿಡಿದು ಯುವ ಬರಹಗಾರರ ಪುಸ್ತಕಗಳವರೆಗೆ ಇಲ್ಲಿ ವಿಶಾಲವಾದ ಸಂಗ್ರಹ ಲಭ್ಯವಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಜೊತೆಗೆ ಹಲವು ಸಾಹಿತ್ಯ ಸಂಸ್ಥೆಗಳು ಮತ್ತು ಪ್ರಕಾಶನ ಸಂಸ್ಥೆಗಳ ಪುಸ್ತಕಗಳಿಗೂ ಅವಕಾಶ ಕಲ್ಪಿಸಲಾಗಿದೆ. ಪುಸ್ತಕಗಳು ಕೈಗೆಟುಕುವ ದರದಲ್ಲಿ ದೊರೆಯುತ್ತಿರುವುದು ವಿಶೇಷ.

“ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಚಿಂತಕರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಪುಸ್ತಕ ಹಬ್ಬದಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು Footfalls ಬರುತ್ತಿರುವುದು ಹರ್ಷದಾಯಕ. ಪ್ರತಿಯೊಬ್ಬರೂ ಈ ಅವಕಾಶವನ್ನು ಬಳಸಿಕೊಂಡು ಪುಸ್ತಕಗಳನ್ನು ಖರೀದಿಸಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂಬುದು ಶಿಕ್ಷಕರೊಬ್ಬರ ಅಭಿಮತ.

ಇದೇ ವೇಳೆ ಪುಸ್ತಕ ಹಬ್ಬಕ್ಕೆ ಭೇಟಿ ನೀಡಿದ ಸಾಹಿತ್ಯಾಸಕ್ತರು, ಇಲ್ಲಿ ವೇದ, ಪುರಾಣ, ಇತಿಹಾಸ, ಸಾಹಿತ್ಯ, ಶಿಕ್ಷಣ, ಸಂಗೀತ ಸೇರಿದಂತೆ ಜ್ಞಾನದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿರುವುದನ್ನು ಮೆಚ್ಚಿಕೊಂಡಿದ್ದಾರೆ. ಪ್ರತಿವರ್ಷ ಪುಸ್ತಕ ಖರೀದಿಸುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಒಂದೇ ಸೂರಿನಡಿ ಪರಿಚಯಿಸುವ ಪ್ರಯತ್ನ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಬೆಳೆಸಲು ಪುಸ್ತಕ ಹಬ್ಬ ಪ್ರಮುಖ ವೇದಿಕೆಯಾಗಿದೆ. ವಿದ್ಯಾರ್ಥಿಗಳೂ ಪುಸ್ತಕ ಖರೀದಿಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೊಸ ತಲೆಮಾರಿನಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಆಶಾದಾಯಕ ಬೆಳವಣಿಗೆಯಾಗಿದೆ.ಕೇವಲ ಪುಸ್ತಕಗಳ ಮಾರಾಟಕ್ಕೆ ಸೀಮಿತವಾಗದೆ, ಕನ್ನಡ ಸಾಹಿತ್ಯದ ಹಿರಿಯ ಮತ್ತು ಯುವ ಬರಹಗಾರರನ್ನು ಓದುಗರಿಗೆ ಪರಿಚಯಿಸುವ, ವಿವಿಧ ಸಾಹಿತ್ಯ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಹಾಗೂ ಪುಸ್ತಕ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ಈ ಪುಸ್ತಕ ಹಬ್ಬ ಹೊಂದಿದೆ.ಡಿಸೆಂಬರ್ 6ರವರೆಗೆ ನಡೆಯಲಿರುವ ಈ ಪುಸ್ತಕ ಹಬ್ಬಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕನ್ನಡ ಪುಸ್ತಕಗಳನ್ನು ಖರೀದಿಸಿ, ಓದುವ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೈಜೋಡಿಸಬೇಕಿದೆ.