ನವೆಂಬರ್ 4, 2026, ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿ ಬೈಠಕ್ ನ ಸಮಾರೋಪದ ಬಳಿಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿಮಾತನಾಡಿದರು.
ಪ್ರತಿ ವರ್ಷ ದಸರಾ ಮತ್ತು ದೀಪಾವಳಿಯ ನಡುವಿನ ಅವಧಿಯಲ್ಲಿ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿ ಬೈಠಕ್ ನಡೆಯುತ್ತದೆ. ಕಳೆದ ವರ್ಷ ಈ ಸಭೆ ಜಬಲ್ಪುರದಲ್ಲಿ ನಡೆದಿತ್ತು. ಈ ಬಾರಿ ಇಂದೋರ್ನ ಡೈಲಿ ಕಾಲೇಜಿನ ಸಂತ ಶ್ರೀ ರವಿದಾಸ್ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಒಟ್ಟು 401 ಮಂದಿ ಉಪಸ್ಥಿತರಿದ್ದರು.
ಸಂಘಶತಾಬ್ದಿ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ ಕಾರ್ಯಕ್ರಮಗಳು, ಸಂಘಟನಾತ್ಮಕ ವಿಸ್ತರಣೆ, ಸೇವಾಚಟುವಟಿಕೆಗಳು, ಸಾಮಾಜಿಕ ಸಾಮರಸ್ಯ, ಯುವಜನರ ಸಮಸ್ಯೆಗಳು ಹಾಗೂ ಮುಂದಿನ ದಿನಗಳ ಕಾರ್ಯಯೋಜನೆಗಳ ಕುರಿತು ಅವರು ಮಾಹಿತಿ ನೀಡಿದರು.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೇವಾ ಕಾರ್ಯ: ಇತ್ತೀಚಿನ ಮಳೆ, ಪ್ರವಾಹ ಮತ್ತು ಚಂಡಮಾರುತಗಳಿಂದ ದೇಶದ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸಿದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅಸ್ಸಾಂನ ಮೇಲ್ಭಾಗದ ಜಿಲ್ಲೆಗಳಲ್ಲಿ ಪ್ರವಾಹದಿಂದ 805 ಗ್ರಾಮಗಳ 67,700 ಕುಟುಂಬಗಳು ಬಾಧಿತವಾಗಿದ್ದವು. 1,500ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದವು. 1,600ಕ್ಕೂ ಹೆಚ್ಚು ಸ್ವಯಂಸೇವಕರು 42,200ಕುಟುಂಬಗಳಿಗೆ ಆಹಾರ, ಕುಡಿಯುವ ನೀರು ಮತ್ತು ಔಷಧಗಳನ್ನು ಒದಗಿಸಿದ್ದಾರೆ. 150 ಮನೆಗಳ ಪುನರ್ನಿರ್ಮಾಣಕ್ಕೆ ಅಗತ್ಯ ಸಾಮಗ್ರಿಗಳನ್ನು ನೀಡಲಾಗಿದೆ. ಆಹಾರ, ನೀರು ಮತ್ತು ಔಷಧಗಳ ಪರಿಹಾರ ಕಾರ್ಯಗಳಿಗಾಗಿ ಐದು ಕೋಟಿಗೂ ಅಧಿಕ ರೂಪಾಯಿ ದೇಣಿಗೆ ಲಭಿಸಿದೆ ಎಂದು ತಿಳಿಸಿದರು.
ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸಂಭವಿಸಿದ ಚಂಡಮಾರುತದಿಂದ ಜಾನುವಾರುಗಳು ಮೃತಪಟ್ಟಿದ್ದು, ಸಾವಿರಾರು ತೆಂಗಿನ ಮರಗಳು ನಾಶವಾಗಿವೆ. ಐದರಿಂದ ಆರು ದಿನಗಳವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಕೃಷಿ ಭೂಮಿಗೆ ಉಪ್ಪುನೀರು ನುಗ್ಗಿದ ಪರಿಣಾಮ ಮುಂದಿನ ಒಂದು ಅಥವಾ ಎರಡು ವರ್ಷಗಳವರೆಗೆ ಕೃಷಿ ಉತ್ಪಾದನೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ತಕ್ಷಣದ ಪರಿಹಾರದ ಜೊತೆಗೆ ದೀರ್ಘಕಾಲೀನ ಪುನರ್ವಸತಿ ಮತ್ತು ಕೃಷಿ ಪುನಶ್ಚೇತನದ ಬಗ್ಗೆಯೂ ಚಿಂತಿಸಬೇಕಾಗಿದೆ ಎಂದರು.
ಉತ್ತರ ಪ್ರದೇಶದ ಲಖನೌ ಮತ್ತು ಚಿತ್ರಕೂಟದಲ್ಲಿ ಭಾರೀ ಮಳೆಯಿಂದ 40000 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬಾಧಿತವಾಗಿದ್ದವು. ಸುಮಾರು 25000 ಸಾವಿರ ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದವು. ಲಖನೌನಲ್ಲಿ 300ಕ್ಕೂ ಹೆಚ್ಚು ಸ್ವಯಂಸೇವಕರು ಸ್ಥಳೀಯ ಆಡಳಿತದೊಂದಿಗೆ ಕೈಜೋಡಿಸಿ ನಾಲ್ಕೈದು ದಿನಗಳ ಕಾಲ ಪರಿಹಾರ ಕಾರ್ಯ ನಡೆಸಿದರು.
ಚಿತ್ರಕೂಟದ 28 ಗ್ರಾಮಗಳಲ್ಲಿ 350ಕ್ಕೂ ಹೆಚ್ಚು ಸ್ವಯಂಸೇವಕರು ಹಗಲು-ರಾತ್ರಿ ಸೇವೆ ಸಲ್ಲಿಸಿದರು. ಆರು ಸಾವಿರಕ್ಕೂ ಹೆಚ್ಚು ಜನರಿಗೆ ಎಂಟರಿಂದ ಹತ್ತು ದಿನಗಳ ಕಾಲ ಆಹಾರ ಮತ್ತು ಕುಡಿಯುವ ನೀರು ಒದಗಿಸಲಾಯಿತು. 5,600ಕ್ಕೂ ಹೆಚ್ಚು ಜನರಿಗೆ ವೈದ್ಯಕೀಯ ನೆರವುನೀಡಲಾಯಿತು. ಈ ಕಾರ್ಯಗಳಲ್ಲಿ ಸ್ಥಳೀಯ ಆಡಳಿತ ಮತ್ತು ವಿವಿಧ ಸಂಘಟನೆಗಳು ಸಹಕಾರ ನೀಡಿದ್ದವು
ಕಾರ್ಯವಿಸ್ತಾರ: ಸಂಘಶತಾಬ್ದಿ ಸಂದರ್ಭದಲ್ಲಿ ಸಂಘಟನಾತ್ಮಕ ವಿಸ್ತರಣೆಗಾಗಿ ಹೊಸ ಗ್ರಾಮಗಳು ಮತ್ತು ನಗರ ಬಡಾವಣೆಗಳನ್ನು ತಲುಪುವ ಪ್ರಯತ್ನ ಮಾಡಲಾಗಿದೆ. ಹೊಸ ಪ್ರದೇಶಗಳಲ್ಲಿ ಒಂದು ವಾರ ಅಥವಾ ಹತ್ತು ದಿನಗಳ ಕಾಲ ಶಾಖೆಗಳನ್ನು ನಡೆಸಿ ಅಲ್ಲಿನ ಜನರಿಗೆ ಸಂಘದ ಕಾರ್ಯವೈಖರಿಯನ್ನು ಪರಿಚಯಿಸಲಾಗುತ್ತಿದೆ. ಇಂತಹ ತಾತ್ಕಾಲಿಕ ಶಾಖೆಗಳನ್ನು ಅಧಿಕೃತ ಅಂಕಿಅಂಶಗಳಲ್ಲಿ ಪರಿಗಣಿಸಲಾಗುವುದಿಲ್ಲ. ನಿರಂತರವಾಗಿ ನಡೆಯುವ ಶಾಖೆಗಳನ್ನಷ್ಟೇ ವಾರ್ಷಿಕ ವರದಿಯಲ್ಲಿ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ದೇಶಾದ್ಯಂತ 63,208 ಸ್ಥಾನಗಳಲ್ಲಿ 99,423 ದೈನಂದಿನ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಅಕ್ಟೋಬರ್ನಿಂದ 12,025 ಶಾಖೆಗಳ ಹೆಚ್ಚಳವಾಗಿದೆ.
ಇದರ ಜೊತೆಗೆ 34,982 ಸಾಪ್ತಾಹಿಕ ಮಿಲನಗಳು ನಡೆಯುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.26ಕ್ಕೂ ಅಧಿಕ ಬೆಳವಣಿಗೆಯಾಗಿದೆ. ದೂರದ ಗ್ರಾಮಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಚದುರಿದ ಜನವಸತಿ ಪ್ರದೇಶಗಳಲ್ಲಿ 14,096 ಮಾಸಿಕ ಮಿಲನಗಳು ನಡೆಯುತ್ತಿವೆ. ಕಳೆದ ವರ್ಷಕ್ಕಿಂತ 463 ಮಾಸಿಕ ಮಿಲನಗಳು ಹೆಚ್ಚಾಗಿವೆ. ಒಟ್ಟಾರೆ ದೇಶದ 1,03,397 ಸ್ಥಳಗಳಲ್ಲಿ ಸಂಘದ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಈ ವರ್ಷ ಹೊಸದಾಗಿ 10,241 ಸ್ಥಳಗಳಿಗೆ ಸಂಘದ ಕಾರ್ಯ ವಿಸ್ತರಿಸಿದೆ. ಒಂದು ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ಶಾಖೆಗಳು ಇರಬಹುದು. ಉದಾಹರಣೆಗೆ ರತ್ಲಾಮ್ ನಗರವನ್ನು ಒಂದು ಸ್ಥಳವೆಂದು ಪರಿಗಣಿಸಿದರೂ ಅಲ್ಲಿ ಹತ್ತು ಶಾಖೆಗಳಿವೆ. ಹೀಗಾಗಿ ಶಾಖೆಗಳ ಸಂಖ್ಯೆ ಮತ್ತು ಶಾಖೆಗಳು ನಡೆಯುವ ಸ್ಥಳಗಳ ಸಂಖ್ಯೆ ವಿಭಿನ್ನವಾಗಿವೆ ಎಂದು ಸ್ಪಷ್ಟಪಡಿಸಿದರು.
ಹಿಂದು ಸಮ್ಮೇಳನಗಳು: ಸಂಘಶತಾಬ್ದಿ ಅಂಗವಾಗಿ ದೇಶಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಟ್ಟು 65,664 ಹಿಂದು ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 37,080 ಹಾಗೂ ನಗರಪ್ರದೇಶಗಳ 28,584 ಬಡಾವಣೆಗಳಲ್ಲಿ ಸಮ್ಮೇಳನಗಳು ನಡೆದಿವೆ. ಈ ಕಾರ್ಯಕ್ರಮಗಳಲ್ಲಿ 3,08,449 ಗ್ರಾಮಗಳ ಜನರು ಭಾಗವಹಿಸಿದ್ದು, ಒಟ್ಟಾರೆ ಸುಮಾರು ಐದು ಕೋಟಿ ಜನರು ಪಾಲ್ಗೊಂಡಿದ್ದಾರೆ.
ಸಮಾಜದಲ್ಲಿ ಪರಸ್ಪರ ಸಹಕಾರ, ಸಾಮರಸ್ಯ ಮತ್ತು ಒಗ್ಗಟ್ಟನ್ನು ಬೆಳೆಸುವುದು ಈ ಸಮ್ಮೇಳನಗಳ ಪ್ರಮುಖ ಉದ್ದೇಶವಾಗಿದೆ. ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸೇರಿದವರೂ ಸಮಾಜದ ಸಾಮಾನ್ಯ ಹಿತದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂಬ ಸಂದೇಶ ನೀಡಲಾಗಿದೆ. ಪಂಚ ಪರಿವರ್ತನೆಯ ಆಶಯಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ 28 ಹಿಂದೂ ಸಮ್ಮೇಳನಗಳು ನಡೆದಿವೆ. ಲಡಾಖ್ನಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂಡಮಾನ್ನ ಪೋರ್ಟ್ಬ್ಲೇರ್ನಲ್ಲಿ ನಡೆದ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಅಂಡಮಾನ್ ಸುತ್ತಮುತ್ತಲಿನ 13 ಸಣ್ಣ ದ್ವೀಪಗಳ ಜನರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೃಹ ಸಂಪರ್ಕ ಅಭಿಯಾನ: ಸಂಘದ ಕಾರ್ಯ ಮತ್ತು ಚಿಂತನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ದೇಶಾದ್ಯಂತ ಮೂರು ವಾರಗಳ ಕಾಲ ಗೃಹ ಸಂಪರ್ಕ ಅಭಿಯಾನ ನಡೆಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 4,63,340 ಕಾರ್ಯಕರ್ತರು ಹಾಗೂ ನಗರಪ್ರದೇಶಗಳಲ್ಲಿ 41,825 ಕಾರ್ಯಕರ್ತರು ಸಂಪರ್ಕ ಕಾರ್ಯದಲ್ಲಿ ಭಾಗವಹಿಸಿದ್ದರು. ಒಟ್ಟಾರೆ 10ಕೋಟಿಗೂ ಹೆಚ್ಚು ಮನೆಗಳನ್ನು ಸಂಪರ್ಕಿಸಲಾಗಿದೆ.
ಪ್ರತಿ ಮನೆಯಲ್ಲಿಯೂ ಐದರಿಂದ 25 ನಿಮಿಷಗಳವರೆಗೆ ಮಾತುಕತೆ ನಡೆಸಿ ಸಂಘದ ಉದ್ದೇಶ, ಕಾರ್ಯಚಟುವಟಿಕೆಗಳು ಮತ್ತು ಪಂಚಪರಿವರ್ತನೆಯ ವಿಚಾರಗಳನ್ನು ತಿಳಿಸಲಾಗಿದೆ. ಸಂಪರ್ಕಿಸಿದ ಮನೆಗಳ ಪೈಕಿ ಶೇ.95ರಿಂದ 99ರಷ್ಟು ಜನರು ಉತ್ತಮವಾಗಿ ಸ್ವಾಗತಿಸಿದ್ದಾರೆ. ಎಲ್ಲರೂ ಸಂಘಕ್ಕೆ ಸೇರಬೇಕು ಎಂಬುದು ಉದ್ದೇಶವಲ್ಲ; ಸಂಘದ ವಿಚಾರಗಳನ್ನು ಜನರಿಗೆ ತಲುಪಿಸುವುದೇ ಮುಖ್ಯವಾಗಿತ್ತು. ಅನೇಕರು ಈ ವಿಚಾರಗಳನ್ನು ಆಲಿಸಿ ಪ್ರೋತ್ಸಾಹಿಸಿದ್ದಾರೆ. ನಂತರ ಹಲವರು ಹಿಂದು ಸಮ್ಮೇಳನಗಳು ಹಾಗೂ ಇತರ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಯುವಜನರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗಾಗಿ ಕಾರ್ಯಕ್ರಮಗಳು: 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿಹೆಚ್ಚಿನವರು ವಿದ್ಯಾರ್ಥಿಗಳು ಅಥವಾ ಉದ್ಯಮಿಗಳಾಗಿರುತ್ತಾರೆ. ಅವರನ್ನು ಸಂಘದ ಕಾರ್ಯಚಟುವಟಿಕೆಗಳಿಗೆ ಪರಿಚಯಿಸುವ ಉದ್ದೇಶದಿಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ತಲುಪಲು 21,237 ಸ್ಥಳಗಳಲ್ಲಿ ಹಾಗೂ ಉದ್ಯಮಿಗಳು ಮತ್ತು ಇತರ ಯುವಜನರನ್ನು ತಲುಪಲು 14,285 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು ಮುಂದಿನ ದಿನಗಳಲ್ಲಿಯೂ ಪ್ರಮುಖ ಆದ್ಯತೆಯಾಗಿರಲಿದೆ ಎಂದರು.
ಸಾಮಾಜಿಕ ಸದ್ಭಾವನಾ ಸಭೆ: ಹಿಂದು ಸಮಾಜದ ವಿವಿಧ ವರ್ಗಗಳ ಪ್ರಮುಖರು, ಸಾಮಾಜಿಕ ಮುಖಂಡರು ಹಾಗೂ ಧಾರ್ಮಿಕ ನಾಯಕರನ್ನು ಒಟ್ಟುಗೂಡಿಸಿ ವಿಶೇಷ ಸಭೆಗಳನ್ನು ಆಯೋಜಿಸಲಾಗಿದೆ. ಜೈನರು, ಸಿಖ್ಖರು, ಬೌದ್ಧರು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರನ್ನು ಆಹ್ವಾನಿಸಿ ಸಮಾಜದಲ್ಲಿ ಯಾವುದೇ ರೀತಿಯ ತಾರತಮ್ಯ ಅಥವಾ ಭೇದಭಾವ ಇರಬಾರದು ಎಂಬ ವಿಚಾರವನ್ನು ಚರ್ಚಿಸಲಾಗಿದೆ. ಪರಸ್ಪರ ಗೌರವ, ಸಹಕಾರ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಂಚ ಪರಿವರ್ತನೆ ಮತ್ತು ಯುವಜನರ ಮಾದಕ ವ್ಯಸನ ಕುರಿತು ಜಾಗೃತಿ: ಮುಂದಿನ ದಿನಗಳಲ್ಲಿ ಪಂಚ ಪರಿವರ್ತನೆಯ ಆಶಯಗಳನ್ನು ಸಮಾಜದಲ್ಲಿ ನಿರಂತರವಾಗಿ ಅನುಷ್ಠಾನಗೊಳಿಸುವುದು ಪ್ರಮುಖ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯಸನದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಸಮಾಜದ ಎಲ್ಲ ಸಂಘಟನೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳೂ ಈ ಸಮಸ್ಯೆಯ ವಿರುದ್ಧ ಕಾರ್ಯನಿರ್ವಹಿಸಬೇಕು ಎಂದರು.
ಯುವಜನರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಾದಕ ವಸ್ತುಗಳ ಅಕ್ರಮ ಜಾಲ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಮತ್ತು ಗೃಹ ಸಚಿವರು ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ವ್ಯಸನಕ್ಕೆ ಒಳಗಾದ ಯುವಜನರಿಗೆ ಮಾನಸಿಕ ಸಮಾಲೋಚನೆ, ಅದರಿಂದ ಕುಗ್ಗಿದವರಿಗೆ ಕುಟುಂಬದ ಬೆಂಬಲ ಮತ್ತು ಸೂಕ್ತ ಮಾರ್ಗದರ್ಶನ ಒದಗಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಸಂಘಟನೆಗಳೊಂದಿಗೆ ಕಾರ್ಯಯೋಜನೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸಂತರು ಮತ್ತು ಧಾರ್ಮಿಕ ನಾಯಕರ ಕೊಡುಗೆ: ಒಡಿಶಾದ ಕಂಧಮಾಲ್ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಹತ್ಯೆಗೀಡಾದ ಸ್ವಾಮಿ ಶ್ರದ್ಧಾನಂದರ ಕುರಿತು ಸ್ಮರಿಸಿದ ದತ್ತಾತ್ರೇಯ ಹೊಸಬಾಳೆ ಅವರು, ಸಮಾಜದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಜನಸೇವೆಯಲ್ಲಿ ತೊಡಗಿರುವ ಸಂತರು ಮತ್ತು ಸಂನ್ಯಾಸಿಗಳ ಕೊಡುಗೆಯನ್ನು ಗೌರವಿಸುವ ಅಗತ್ಯವಿದೆ ಎಂದರು.
ವಿದೇಶಗಳಲ್ಲಿ ಸರಸಂಘಚಾಲಕರ ಸಂವಾದ: 2026 ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಅಮೆರಿಕದ ನ್ಯೂಯಾರ್ಕ್, ಬ್ರಿಟನ್ನ ಲಂಡನ್ ಹಾಗೂ ಕೆನಡಾದ ಟೊರೊಂಟೊ ನಗರಗಳಿಗೆ ಭೇಟಿ ನೀಡಿ ವಿವಿಧ ಸಂಘಟನೆಗಳು ಮತ್ತು ಸ್ಥಳೀಯ ಸಮುದಾಯಗಳ ಪ್ರಮುಖರೊಂದಿಗೆ ಸಂವಾದ ನಡೆಸಿದ್ದರು.
ಈ ಸಂದರ್ಭದಲ್ಲಿ ಭಾರತದ ಏಕತೆ, ವಿಶ್ವಬಂಧುತ್ವ, ಮಾನವೀಯತೆಯ ಏಕತೆ ಮತ್ತು ‘ವಸುಧೈವ ಕುಟುಂಬಕಂ’ ಸಂದೇಶವನ್ನು ಜಾಗತಿಕ ಸಮುದಾಯಕ್ಕೆ ಪರಿಚಯಿಸಲಾಯಿತು. ಸ್ವಾಮಿನಾರಾಯಣ ಮಂದಿರ, ಖಾಲ್ಸಾ ಗುರುದ್ವಾರ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿನೀಡಿ ಅಲ್ಲಿನ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ಸ್ಥಳೀಯ ಸಮಾಜದ ಪ್ರಮುಖರು ಮತ್ತು ವಿವಿಧ ಸಮುದಾಯಗಳ ಜನರೊಂದಿಗೆ ಸಂವಾದ ನಡೆಸಿದರು. ಭಾರತದಲ್ಲಿ ಸಂಘದ ಶಾಖೆಗಳ ಮೂಲಕ ನಡೆಯುತ್ತಿರುವ ಸಾಮಾಜಿಕ ಸಂಘಟನೆ, ಸೇವಾ ಚಟುವಟಿಕೆಗಳು ಹಾಗೂ ಕಾರ್ಯಕರ್ತರ ನಿರ್ಮಾಣದ ಕುರಿತು ವಿದೇಶಗಳಲ್ಲಿನ ಜನರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಪ್ರಶ್ನೋತ್ತರ
ಡಿಜಿಟಲ್ ವೇದಿಕೆಗಳು ಮತ್ತು ಯುವಜನರ ಮೇಲೆ ಪ್ರಭಾವದ ಕುರಿತು: ದೇಶಾದ್ಯಂತ ನಡೆದ ಯುವ ಸಮ್ಮೇಳನಗಳಲ್ಲಿ ಹೊಸ ಡಿಜಿಟಲ್ ವೇದಿಕೆಗಳು ಯುವಜನರ ಮೇಲೆ ಬೀರುತ್ತಿರುವ ಪ್ರಭಾವದ ಕುರಿತು ಚರ್ಚಿಸಲಾಗಿದೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಈ ವಿಚಾರದಲ್ಲಿ ಸಂಘದ ದೃಷ್ಟಿಕೋನ ಎರಡು ಆಯಾಮಗಳನ್ನು ಹೊಂದಿದೆ. ಮೊದಲನೆಯದಾಗಿ, ತಂತ್ರಜ್ಞಾನವನ್ನು ಸಂಪೂರ್ಣವಾಗಿ ತಡೆಯುವುದು ಸುಲಭದ ಪರಿಹಾರವಲ್ಲ. ಟಿಕ್ಟಾಕ್ ನಿಷೇಧದಂತಹ ಕ್ರಮಗಳನ್ನು ಭಾರತ ಹಿಂದೆ ಕೈಗೊಂಡಿತ್ತು. ಕೆಲವು ದೇಶಗಳು 13 ವರ್ಷದೊಳಗಿನ ಮಕ್ಕಳಿಗೆ ಇಂಟರ್ನೆಟ್ ಬಳಕೆಯ ಮೇಲೆ ನಿರ್ಬಂಧ ಹಾಗೂ ರಾತ್ರಿ 10 ಗಂಟೆಯ ನಂತರ ಇಂಟರ್ನೆಟ್ ಬಳಕೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿವೆ. ಭಾರತದಲ್ಲಿಯೂ ಇಂತಹ ಕ್ರಮಗಳ ಕುರಿತು ಚರ್ಚೆಗಳಿವೆ. ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಂಡರೆ ಸಂಘಕ್ಕೆ ಆಕ್ಷೇಪವಿಲ್ಲ. ಆದರೆ ಕೇವಲ ಕಾನೂನುಗಳಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ.
ಎರಡನೆಯದಾಗಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವುದು ಅಗತ್ಯ. ಕುಟುಂಬ, ಶಾಲೆ, ಸಂಘದ ಶಾಖೆಗಳು ಹಾಗೂ ಸಾಮಾಜಿಕ ಸಂಸ್ಥೆಗಳು ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪೋಷಕರು, ಶಿಕ್ಷಕರು ಮತ್ತು ಹಿರಿಯರು ತಮ್ಮ ನಡವಳಿಕೆಯ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು. ಕುಟುಂಬ ಪ್ರಬೋಧನದ ಭಾಗವಾಗಿ ಪ್ರತಿದಿನ ಕನಿಷ್ಠ ಅರ್ಧ ಗಂಟೆ ಅಥವಾ ವಾರದಲ್ಲಿ ಒಂದು ಗಂಟೆಯಾದರೂ ಮೊಬೈಲ್ ಮತ್ತು ಇತರ ಡಿಜಿಟಲ್ ಸಾಧನಗಳನ್ನು ಬದಿಗಿಟ್ಟು ಕುಟುಂಬದ ಸದಸ್ಯರು ಒಟ್ಟಿಗೆ ಸಮಯ ಕಳೆಯಬೇಕು. ಭಾರತದ ಇತಿಹಾಸ, ಸಂಸ್ಕೃತಿ, ಸಮಾಜಸೇವೆ ಹಾಗೂ ಕುಟುಂಬದ ಉತ್ತಮ ಕಾರ್ಯಗಳ ಕುರಿತು ಚರ್ಚಿಸಬೇಕು. ದೇವಾಲಯಗಳೂ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳಾಗಬೇಕು ಎಂದರು.
ಯುವಜನರ ಪ್ರತಿಭಟನೆ ಮತ್ತು ಸಾಮಾಜಿಕ ಅಶಾಂತಿಯ ಕುರಿತು: ಯುವಜನರ ಪ್ರತಿಭಟನೆಗಳು ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಹೊಸಬಾಳೆ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಮೂಲಕ ಸರ್ಕಾರ ಬದಲಾವಣೆಯಾಗುವುದು ಸಹಜ. ಆದರೆ ರಾಜಕೀಯ ಉದ್ದೇಶಗಳಿಗಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ವಿಭಜನೆಗೆ ಕಾರಣವಾಗುವುದು ಅಥವಾ ಹಿಂಸಾಚಾರಕ್ಕೆ ಪ್ರೇರೇಪಿಸುವುದು ಸಮಾಜದ ಹಿತದೃಷ್ಟಿಯಿಂದ ಸರಿಯಲ್ಲ ಎಂದರು.
ಯುವಜನರ ಪ್ರಶ್ನೆಗಳು ಮತ್ತು ಅಸಮಾಧಾನಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳೆಂದು ಪರಿಗಣಿಸಬಾರದು. ಅವರ ಸಮಸ್ಯೆಗಳನ್ನು ಆಲಿಸಿ, ಅವರೊಂದಿಗೆ ಸಕಾರಾತ್ಮಕ ಸಂವಾದ ನಡೆಸಬೇಕು. ತಮ್ಮ ಯುವಕಾಲದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಅವರು, ಪ್ರತಿ ಪೀಳಿಗೆಯ ಯುವ ಜನರಲ್ಲಿಯೂ ವ್ಯವಸ್ಥೆಯ ಕುರಿತು ಅಸಮಾಧಾನ ಮತ್ತು ಪ್ರಶ್ನೆಗಳು ಇರುವುದು ಸಹಜ ಎಂದರು.
ಯುವಜನರ ಪ್ರತಿಭೆ, ಕೌಶಲ್ಯ ಮತ್ತು ಸೇವಾ ಮನೋಭಾವವನ್ನು ಸಕಾರಾತ್ಮಕ ಚಟುವಟಿಕೆಗಳತ್ತ ಮುನ್ನಡೆಸಬೇಕು. ಈ ನಿಟ್ಟಿನಲ್ಲಿ ಸಂಘದ ‘ಸೀಮಾ ದರ್ಶನ’ ಅಥವಾ ‘ಸೀಮಾ ಕೋ ಪ್ರಣಾಮ್’ ಕಾರ್ಯಕ್ರಮದ ಮೂಲಕ ಕೇರಳ, ಬಿಹಾರ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕಾಲೇಜು ವಿದ್ಯಾರ್ಥಿಗಳನ್ನು ಅಸ್ಸಾಂನ ಗಡಿ ಪ್ರದೇಶಗಳಿಗೆ ಕರೆದೊಯ್ದು ಪರಸ್ಪರ ಪರಿಚಯ ಮತ್ತು ರಾಷ್ಟ್ರೀಯ ಏಕತೆಯ ಭಾವನೆ ಬೆಳೆಸಲಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಅರಾಜಕ ಶಕ್ತಿಗಳು ಪ್ರಭಾವ ಬೀರುವುದನ್ನು ತಡೆಯಲು ಮೂರು ಅಂಶಗಳ ಅಗತ್ಯವಿದೆ. ಯುವಜನರ ನೈಜ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಸ್ಪಂದಿಸುವುದು, ಅರಾಜಕ ಶಕ್ತಿಗಳು ಸಮಾಜದ ಮೇಲೆ ಪ್ರಭಾವ ಬೀರುವುದನ್ನು ತಡೆಯುವುದು ಹಾಗೂ ಸಜ್ಜನಶಕ್ತಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ಒಳ್ಳೆಯ ವ್ಯಕ್ತಿಗಳು ಮನೆಯೊಳಗೆ ಮಾತ್ರ ಸೀಮಿತವಾಗದೆ ಸಮಾಜದ ಹಿತಕ್ಕಾಗಿ ಧ್ವನಿ ಎತ್ತಬೇಕು ಎಂದರು.
ಮೀಸಲಾತಿ ಕುರಿತು ಸಂಘದ ನಿಲುವು: ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವುದು ಸಂಘದ ನಿಲುವಲ್ಲ ಎಂದು ಹೊಸಬಾಳೆ ಸ್ಪಷ್ಟಪಡಿಸಿದರು. ಐತಿಹಾಸಿಕ ಮತ್ತು ಸಾಮಾಜಿಕ ತಾರತಮ್ಯದಿಂದ ಹಿಂದುಳಿದಿರುವ ಸಮುದಾಯಗಳಿಗೆ ಮೀಸಲಾತಿ ಮುಂದುವರಿಯಬೇಕು. ಸಮಾಜದಲ್ಲಿನ ಅಸಮಾನತೆ ಮತ್ತು ತಾರತಮ್ಯ ನಿವಾರಣೆಯಾಗುವವರೆಗೆ ಮೀಸಲಾತಿ ವ್ಯವಸ್ಥೆ ಮುಂದುವರಿಯಬೇಕು.
ಅಮೆರಿಕದಂತಹ ದೇಶಗಳಲ್ಲಿ ಅಫರ್ಮೇಟಿವ್ ಆಕ್ಷನ್ ವ್ಯವಸ್ಥೆ ಜಾರಿಯಲ್ಲಿದೆ. ಭಾರತದಲ್ಲಿ ಸಾಮಾಜಿಕ ಮತ್ತು ಐತಿಹಾಸಿಕ ಅಸಮಾನತೆಗಳನ್ನು ನಿವಾರಿಸಲು ಮೀಸಲಾತಿ ವ್ಯವಸ್ಥೆ ಇದೆ. ಮೀಸಲಾತಿಯ ಪ್ರಯೋಜನ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅರ್ಹ ಸಮುದಾಯದ ಕೆಲವು ವರ್ಗಗಳಿಗೆ ಪ್ರಯೋಜನ ತಲುಪದೆ ಉಳಿದಿದ್ದರೆ ಅಗತ್ಯ ಸುಧಾರಣೆಗಳನ್ನು ಪರಿಗಣಿಸಬಹುದು. ಆದರೆ ಈ ಬದಲಾವಣೆಗಳನ್ನು ಮೀಸಲಾತಿಯ ಫಲಾನುಭವಿಗಳು ಮತ್ತು ಸಂಬಂಧಿತ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿಯೇ ಕೈಗೊಳ್ಳಬೇಕು ಎಂದರು.
ಸಂಘದ ನೋಂದಣಿ ಕುರಿತು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಒಂದು ಸಂಘಟನೆ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಕಡ್ಡಾಯವಾಗಿ ನೋಂದಣಿಯಾಗಿರಬೇಕು ಎಂಬ ಕಾನೂನು ಇಲ್ಲ ಎಂದರು. ಅನೇಕ ಸಂಘಟನೆಗಳು ನೋಂದಣಿ ಇಲ್ಲದೆಯೂ ಸಮಾಜಕ್ಕಾಗಿ ಒಟ್ಟಾಗಿ ಕೆಲಸ ಮಾಡಬಹುದು. ಸಂಘವು ತನ್ನನ್ನು ಸಮಾಜದಿಂದ ಪ್ರತ್ಯೇಕವಾದ ಸಂಸ್ಥೆಯೆಂದು ಪರಿಗಣಿಸುವುದಿಲ್ಲ. ಸಮಾಜವನ್ನು ಸಂಘಟಿಸುವುದೇ ಅದರ ಮೂಲ ಉದ್ದೇಶವಾಗಿದೆ.
ಸಂಘದ ಎಲ್ಲ ಚಟುವಟಿಕೆಗಳು ಸಂವಿಧಾನ ಮತ್ತು ದೇಶದ ಕಾನೂನುಗಳ ವ್ಯಾಪ್ತಿಯಲ್ಲಿಯೇ ನಡೆಯುತ್ತಿವೆ. ತಮಿಳುನಾಡಿನಲ್ಲಿ ಸಂಘದ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ ಸಂದರ್ಭದಲ್ಲಿ ನ್ಯಾಯಾಲಯ ಅನುಮತಿ ನೀಡುವಂತೆ ನಿರ್ದೇಶಿಸಿತ್ತು. ಕರ್ನಾಟಕದಲ್ಲಿಯೂ ಇದೇ ರೀತಿಯ ಪರಿಸ್ಥಿತಿಯಲ್ಲಿ ರಾಜ್ಯ ಗೃಹ ಸಚಿವರ ನಿಲುವಿನ ಹೊರತಾಗಿಯೂ ಸಂಘದ ವಟುವಟಿಕೆಗಳಿಗೆ ಅನುಮತಿ ನೀಡಬೇಕಾಯಿತು ಎಂದು ಅವರು ಉಲ್ಲೇಖಿಸಿದರು.
ಹಿಂದು ಮತ್ತು ಹಿಂದುತ್ವದ ನಡುವಿನ ಸಂಬಂಧದ ಕುರಿತು: ಹಿಂದು ಮತ್ತು ಹಿಂದುತ್ವವನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ್ಲ. ಹಿಂದೂ ಸಮಾಜ ಇರುವುದರಿಂದಲೇ ಹಿಂದುತ್ವದ ಪರಿಕಲ್ಪನೆ ಅಸ್ತಿತ್ವದಲ್ಲಿದೆ. ಕೇವಲ ಮಾನವ ದೇಹ ಹೊಂದಿರುವುದರಿಂದ ವ್ಯಕ್ತಿ ಮಾನವೀಯ ಗುಣಗಳನ್ನು ಹೊಂದಿದ್ದಾನೆ ಎಂದರ್ಥವಲ್ಲ. ಮಾನವೀಯತೆಗೆ ಕೆಲವು ಮೌಲ್ಯಗಳು ಮತ್ತು ಗುಣಗಳು ಅಗತ್ಯ. ಅದೇ ರೀತಿ ಹಿಂದು ವ್ಯಕ್ತಿತ್ವಕ್ಕೆ ಅರ್ಥ ನೀಡುವ ಮೌಲ್ಯಗಳು ಮತ್ತು ಗುಣಗಳೇ ಹಿಂದುತ್ವ ಎಂದು ವಿವರಿಸಿದರು.
ಹಿಂದುತ್ವವು ಹಿಂದು ಧರ್ಮಕ್ಕೆ ಮಾತ್ರ ಸೀಮಿತವಾದ ಪರಿಕಲ್ಪನೆಯಲ್ಲ; ಅದು ಹಿಂದೂತನವನ್ನು ಪ್ರತಿನಿಧಿಸುವ ಮೌಲ್ಯ ಮತ್ತು ಜೀವನದೃಷ್ಟಿಯಾಗಿದೆ. ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಸಂಘ ಸ್ಥಾಪನೆಯ ಸಂದರ್ಭದಲ್ಲಿ ಹಿಂದುಗಳಾಗಿರುವ ಜನರಲ್ಲಿ ಹಿಂದುತ್ವದ ಮೌಲ್ಯ ಮತ್ತು ಚೈತನ್ಯವನ್ನು ಜಾಗೃತಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದ್ದರು ಎಂದರು.
ಸಂಘವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯವಿಸ್ತರಣೆ ಮಾಡಲಿದೆಯೆ? ಎಂಬ ಪ್ರಶ್ನೆಯ ಕುರಿತು: ಸಂಘವು ಅಂತಾರಾಷ್ಟ್ರೀಯ ಸಂಘಟನೆಯಾಗುವ ಉದ್ದೇಶ ಹೊಂದಿಲ್ಲ ಎಂದು ಹೊಸಬಾಳೆ ಸ್ಪಷ್ಟಪಡಿಸಿದರು. ವಿಶ್ವದ ಸುಮಾರು 80 ದೇಶಗಳಲ್ಲಿ ಸ್ವಯಂಸೇವಕರು ಸ್ಥಳೀಯ ಹಿಂದೂ ಸಮುದಾಯಗಳೊಂದಿಗೆ ಸಂಪರ್ಕ ಹೊಂದಿದ್ದು, ಆಯಾ ದೇಶಗಳ ಕಾನೂನುಗಳಿಗೆ ಅನುಗುಣವಾಗಿ ಸಂಘಟನಾತ್ಮಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಪತ್ರಿಕೆಗಳು, ನಿಯತಕಾಲಿಕೆಗಳು, ಸಂಸತ್ ವೇದಿಕೆಗಳು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಸಂಘದ ಕುರಿತು ಚರ್ಚೆಗಳು ನಡೆಯುತ್ತಿವೆ. ಕೆಲವು ವಿದೇಶಿ ಸಂಸ್ಥೆಗಳು ತಮ್ಮ ಸರ್ಕಾರಗಳು ಸಂಘದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿವೆ ಎಂದು ಹೇಳಿದರು.
ಮಹಿಳೆಯರ ಭಾಗವಹಿಸುವಿಕೆ ಕುರಿತು: ಕುಟುಂಬ ಪ್ರಬೋಧನ ಮತ್ತು ಪಂಚ ಪರಿವರ್ತನೆಯ ಚಟುವಟಿಕೆಗಳ ಮೂಲಕ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಸಮಾಜದಲ್ಲಿನ ಅವರ ಸ್ಥಾನಮಾನದ ಕುರಿತು ಚರ್ಚಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ತಿಂಗಳಿಗೊಮ್ಮೆ ಕುಟುಂಬ ಪ್ರಬೋಧನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಹಿಳಾ ಸಮನ್ವಯದ ಮೂಲಕವೂ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮಹಿಳೆಯರ ಸಾಮಾಜಿಕ ಸ್ಥಾನಮಾನ, ಸಮಾಜದಲ್ಲಿನ ಅಸಮತೋಲನ ಮತ್ತು ಮಾದಕ ವ್ಯಸನದಂತಹ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತಿದೆ. ಪುರುಷ ಯುವಜನರಷ್ಟೇ ಅಲ್ಲದೆ ಕೆಲವು ಪ್ರದೇಶಗಳಲ್ಲಿ ಯುವತಿಯರಲ್ಲಿಯೂ ಮಾದಕ ವ್ಯಸನ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹೀಗಾಗಿ ಈ ವಿಚಾರಗಳ ಚರ್ಚೆಯಲ್ಲಿ ಮಹಿಳೆಯರನ್ನೂ ಒಳಗೊಳ್ಳಲಾಗುತ್ತಿದೆ. ದೇಶಾದ್ಯಂತ ನಡೆದ ಹಿಂದು ಸಮ್ಮೇಳನಗಳಲ್ಲಿ ಸುಮಾರು ಶೇ.95ರಷ್ಟು ಕಾರ್ಯಕ್ರಮಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಭಾಷಣಕಾರರು ಭಾಗವಹಿಸಿದ್ದರು ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಕುರಿತು: ಪರಿಸರ ಸಂರಕ್ಷಣೆಯನ್ನು ಜನರ ದೈನಂದಿನ ಜೀವನದ ಭಾಗವನ್ನಾಗಿಸುವುದು ಸಂಘದ ಉದ್ದೇಶವಾಗಿದೆ. ಮನೆ, ನೆರೆಹೊರೆ, ಬಡಾವಣೆ ಮತ್ತು ಕಾರ್ಯಸ್ಥಳಗಳಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ನವೆಂಬರ್ 29ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯರು ಸುಮಾರು 30 ಸಾವಿರ ಸಸಿಗಳನ್ನು ನೆಡುವ ಸಂಕಲ್ಪ ಮಾಡಲಿದ್ದಾರೆ. ಸಸಿ ನೆಡುವುದಷ್ಟೇ ಮುಖ್ಯವಲ್ಲ; ಅವು ಮರಗಳಾಗಿ ಬೆಳೆಯುವವರೆಗೆ ಆರೈಕೆ ಮಾಡುವ ಜವಾಬ್ದಾರಿಯನ್ನೂ ವಹಿಸಬೇಕು ಎಂದರು.
ಪರಿಸರ ಸ್ನೇಹಿ ಮನೆಗಾಗಿ ಐದು ಪ್ರಮುಖ ಮಾನದಂಡಗಳನ್ನು ಗುರುತಿಸಲಾಗಿದೆ. ಮಳೆನೀರು ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಅವುಗಳಲ್ಲಿ ಪ್ರಮುಖವಾಗಿವೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ಇಂತಹ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
ಪ್ರಯಾಗ್ರಾಜ್ನಲ್ಲಿ ನಡೆದ ಹಿಂದಿನ ಕುಂಭಮೇಳದ ಸಂದರ್ಭದಲ್ಲಿ ‘ಒಂದು ತಟ್ಟೆ, ಒಂದು ಚೀಲ’ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಅನ್ನದಾನ ಕೇಂದ್ರಗಳಲ್ಲಿ ಬಳಸಿ ಎಸೆಯುವ ತಟ್ಟೆಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೇಶದ ವಿವಿಧ ಭಾಗಗಳಿಂದ ಮರುಬಳಕೆ ಮಾಡಬಹುದಾದ ತಟ್ಟೆಗಳನ್ನು ಸಂಗ್ರಹಿಸಿ ಅನ್ನದಾನ ಕೇಂದ್ರಗಳಿಗೆ ಒದಗಿಸಲಾಗಿತ್ತು ಎಂದರು.
ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಈಶಾನ್ಯ ಭಾರತದಲ್ಲಿ ಸಂಘಕಾರ್ಯ ಕುರಿತು: ಪಶ್ಚಿಮ ಬಂಗಾಳದಲ್ಲಿ ಸಂಘದ ಶಾಖೆಗಳ ಸಂಖ್ಯೆ ಸುಮಾರು 150 ಪಟ್ಟು ಹೆಚ್ಚಾಗಿದೆ. ಹಿಂದೆ ಅಲ್ಲಿ ಶಾಖೆ ಆರಂಭಿಸಲು ನೇರ ವಿರೋಧ ಮತ್ತು ದೈಹಿಕ ಅಡೆತಡೆಗಳು ಎದುರಾಗುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ ಎಂದು ತಿಳಿಸಿದರು.
ತ್ರಿಪುರಾ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ವಿವಿಧ ಭಾಗಗಳಲ್ಲಿ ನಾಲ್ವರು ಕಾರ್ಯಕರ್ತರು ಹತ್ಯೆಗೀಡಾಗಿದ್ದರು. ಕೇರಳದಲ್ಲಿಯೂ ಸಂಘದ ಕಾರ್ಯಕರ್ತರು ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಆದರೂ ಸಂಘದ ಕಾರ್ಯವಿಸ್ತರಣೆ ಮುಂದುವರಿದಿದೆ.
ಅರುಣಾಚಲ ಪ್ರದೇಶದ 48 ಬ್ಲಾಕ್ಗಳಲ್ಲಿ ಸಂಪರ್ಕ ಕಾರ್ಯಕ್ರಮ ನಡೆಸಲಾಗಿದೆ. ಮಿಜೋರಾಂನಲ್ಲಿ ಹಿಂದು ಜನಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿಯೂ ಎರಡು ಸ್ಥಳಗಳಲ್ಲಿ ಶಾಖೆಗಳನ್ನು ಆರಂಭಿಸಲಾಗಿದೆ. ಲಡಾಖ್ನಲ್ಲಿಯೂ ಸಂಘದ ಶಾಖೆಗಳಿವೆ.
ಪಶ್ಚಿಮ ಉತ್ತರ ಪ್ರದೇಶದ ಮೀರತ್ ಮತ್ತು ಬ್ರಜ್ ಪ್ರಾಂತಗಳ ವ್ಯಾಪ್ತಿಯ ಮೀರತ್, ಗಾಜಿಯಾಬಾದ್, ಆಗ್ರಾ ಮತ್ತು ಮಥುರಾ ಪ್ರದೇಶಗಳ ಪ್ರತಿಯೊಂದು ಖಂಡದಲ್ಲಿಯೂ ಶಾಖೆಗಳಿವೆ. ಮಾಳವ ಪ್ರಾಂತದಲ್ಲಿಯೂ ಸಂಘದ ಕಾರ್ಯವ್ಯಾಪ್ತಿ ಗಣನೀಯವಾಗಿದೆ. ಕೇರಳದ ದಕ್ಷಿಣ ಭಾಗದ 444 ಮಂಡಲಗಳ ಎಲ್ಲ ಗ್ರಾಮಗಳಲ್ಲಿಯೂ ಶಾಖೆಗಳಿವೆ. ಕರ್ನಾಟಕದ ಶೃಂಗೇರಿ ಪ್ರದೇಶದ ಎಲ್ಲ ಗ್ರಾಮಗಳಲ್ಲಿಯೂ ಸಂಘದ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR)ಯ ಕುರಿತು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದತ್ತಾತ್ರೇಯ ಹೊಸಬಾಳೆ ಅವರು, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ತಮ್ಮ ಕಾರ್ಯಸೂಚಿಗೆ ಅನುಗುಣವಾಗಿ ನಡೆದುಕೊಳ್ಳುವುದು ಸಹಜ. ಆದರೆ ಯಾವುದೇ ವಿರೋಧ ಅಥವಾ ಆರೋಪಗಳು ವಾಸ್ತವಾಂಶಗಳ ಆಧಾರದ ಮೇಲೆ ಇರಬೇಕು ಎಂದರು.
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಮತ್ತು ನವೀಕರಿಸುವುದು SIR ಪ್ರಕ್ರಿಯೆಯ ಉದ್ದೇಶವಾಗಿದೆ. ಮೃತಪಟ್ಟವರ ಹೆಸರುಗಳು, ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ದಾಖಲಾಗಿರುವ ನಕಲಿ ಹೆಸರುಗಳು ಪಟ್ಟಿಯಲ್ಲಿ ಉಳಿಯಬಾರದು. ಮತದಾರರ ಪಟ್ಟಿಯಿಂದ ಸುಮಾರು 13 ಕೋಟಿ ಹೆಸರುಗಳನ್ನು ತೆಗೆದುಹಾಕಿರುವ ವಿಚಾರವನ್ನು ಉಲ್ಲೇಖಿಸಿದ ಅವರು, ಅವುಗಳಲ್ಲಿ ಹಲವು ಕೋಟಿ ಹೆಸರುಗಳು ಮೃತಪಟ್ಟವರದ್ದಾಗಿದ್ದವು ಎಂದು ಹೇಳಿದರು.
ತಮ್ಮ ಹೆಸರೇ ಸುಮಾರು 20 ವರ್ಷಗಳ ಹಿಂದೆ ಸಹೋದರರು ದಾಖಲಿಸಿದ್ದ ಸ್ವಗ್ರಾಮದ ಮತದಾರರ ಪಟ್ಟಿಯಲ್ಲಿಯೂ ಇನ್ನೂ ಇರುವುದನ್ನು ಉದಾಹರಣೆಯಾಗಿ ನೀಡಿದರು. ಆದರೆ ತಾವು ಬೆಂಗಳೂರಿನಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿಯೇ ಮತ ಚಲಾಯಿಸುತ್ತಿರುವುದಾಗಿ ತಿಳಿಸಿದರು. ಒಬ್ಬ ವ್ಯಕ್ತಿಯ ಹೆಸರು ಎರಡು ಸ್ಥಳಗಳಲ್ಲಿ ಉಳಿಯುವ ಅಗತ್ಯವೇನು ಎಂದು ಪ್ರಶ್ನಿಸಿದರು.
ಭಾರತದ ನಾಗರಿಕರಲ್ಲದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿದ್ದರೆ ದೇಶದ ಆರ್ಥಿಕ ಹಿತಾಸಕ್ತಿ ಮತ್ತು ಸಾಮಾಜಿಕ ಸುರಕ್ಷತೆಯ ದೃಷ್ಟಿಯಿಂದ ಅದು ಕಳವಳಕಾರಿ ಸಂಗತಿ ಎಂದರು. ಮತದಾರರ ಪಟ್ಟಿಯ ಪರಿಷ್ಕರಣೆ ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆಯಾಗಿದ್ದು, ಅರ್ಹರಲ್ಲದವರ ಹೆಸರುಗಳನ್ನು ತೆಗೆದುಹಾಕಬೇಕು. ತಪ್ಪಾಗಿ ಹೆಸರು ತೆಗೆದುಹಾಕಲ್ಪಟ್ಟಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆಗಳಿವೆ ಎಂದು ಹೇಳಿದರು.
ಕಾಶಿ, ಮಥುರಾ ಮತ್ತು ಜ್ಞಾನವಾಪಿ ವಿಚಾರ: ಕಾಶಿ, ಮಥುರಾ ಮತ್ತು ಜ್ಞಾನವಾಪಿ ಸೇರಿದಂತೆ ಧಾರ್ಮಿಕ ಮಹತ್ವದ ಸ್ಥಳಗಳ ವಿಚಾರದಲ್ಲಿ ರಾಮಜನ್ಮಭೂಮಿ ಹೋರಾಟದ ಮಾದರಿಯಲ್ಲಿಯೇ ಹೋರಾಟ ನಡೆಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಂದು ವಿಚಾರವನ್ನೂ ಒಂದೇ ರೀತಿಯಲ್ಲಿ ನಿರ್ವಹಿಸಬೇಕೆಂದಿಲ್ಲ. ಪ್ರತಿಯೊಂದು ಸಮಸ್ಯೆಯ ಸ್ವರೂಪಕ್ಕೆ ಅನುಗುಣವಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಬೇಕು ಎಂದರು.
ಕೆಲವು ವಿಚಾರಗಳು ಈಗಾಗಲೇ ನ್ಯಾಯಾಲಯದಲ್ಲಿವೆ. ಅವು ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಮುಂದುವರಿಯಬೇಕು. ಕಾಶಿ ಮತ್ತು ಮಥುರಾ ವಿಚಾರಗಳಲ್ಲಿ ಧಾರ್ಮಿಕ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ತಮ್ಮ ಮಟ್ಟದಲ್ಲಿ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ರಾಮಜನ್ಮಭೂಮಿ ವಿಚಾರವನ್ನು ರಾಷ್ಟ್ರದ ಗಮನಕ್ಕೆ ತರುವ ಅಗತ್ಯವಿದ್ದ ಕಾರಣ ಸಂಘ ಸಕ್ರಿಯವಾಗಿ ಭಾಗವಹಿಸಿತ್ತು. ಉಳಿದ ವಿಚಾರಗಳಲ್ಲಿ ಹಿಂದು ಸಮಾಜವೇ ತನ್ನ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಸಮರ್ಥವಾಗಿದೆ ಎಂದು ತಿಳಿಸಿದರು.
ಪ್ರಾಂತಗಳ ಬದಲಿಗೆ ಸಂಭಾಗ ವ್ಯವಸ್ಥೆಯ ಕುರಿತು: ಸಂಘದ ಪ್ರಸ್ತುತ 46 ಪ್ರಾಂತಗಳ ಸಂಘಟನಾತ್ಮಕ ವ್ಯವಸ್ಥೆಯನ್ನು 88 ಸಂಭಾಗಗಳಾಗಿ ಪುನರ್ರಚಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದತ್ತಾತ್ರೇಯ ಹೊಸಬಾಳೆ, ಸಂಭಾಗ ಮಟ್ಟದಲ್ಲಿಯೂ ಪ್ರಾಂತಗಳ ಮಾದರಿಯಲ್ಲೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದರು. ಪ್ರಾಂತ ಸಂಘಚಾಲಕ, ಪ್ರಾಂತ ಕಾರ್ಯವಾಹ ಮತ್ತು ಪ್ರಾಂತ ಪ್ರಚಾರಕರ ರೀತಿಯಲ್ಲಿ ಸಂಭಾಗ ಸಂಘಚಾಲಕ ಸೇರಿದಂತೆ ಇತರ ಜವಾಬ್ದಾರಿಗಳನ್ನು ನಿರ್ವಹಿಸುವ ಪದಾಧಿಕಾರಿಗಳ ವ್ಯವಸ್ಥೆಯೂ ರೂಪುಗೊಳ್ಳಲಿದೆ ಎಂದು ತಿಳಿಸಿದರು.
ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಸಂಘಟನಾತ್ಮಕ ವಿಸ್ತರಣೆಯ ಜೊತೆಗೆ ಸಾಮಾಜಿಕ ಸಾಮರಸ್ಯ, ಸೇವೆ, ಯುವಜನರ ಜಾಗೃತಿ, ಪರಿಸರ ಸಂರಕ್ಷಣೆ ಮತ್ತು ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಮಾಜದ ಸಹಕಾರದೊಂದಿಗೆ ಈ ಕಾರ್ಯಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಸಲಾಗುವುದು ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಪತ್ರಿಕಾಗೋಷ್ಠಿಯ ಆರಂಭದಲ್ಲಿ ಸಭೆಗೆ ಸ್ಥಳಾವಕಾಶ ಕಲ್ಪಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನಾ ಕಾರ್ಯಕರ್ತರು, ಡೈಲಿಕಾಲೇಜಿನ ಆಡಳಿತ ಮಂಡಳಿ, ಸ್ಥಳೀಯ ನಿರ್ವಹಣಾ ಸಮಿತಿ, ದೇವಾಸ್ ರಾಜಮನೆತನ ಹಾಗೂ ಇತರ ಟ್ರಸ್ಟಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮುಂಬರುವ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಉಪಸ್ಥಿತರಿದ್ದರು.