ಅರುಣ್ ಜೇಟ್ಲಿ ದೇಶದ ಅತ್ಯಂತ ಮೆಚ್ಚಿನ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದವರು. ಅವರು ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದ ಅವರು ಬಿಜೆಪಿ ಪಕ್ಷದ ಅದ್ವಿತೀಯ ಬೆಳೆವಣಿಗೆಗೆ ಮತ್ತು ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದವರು. ಇಂದು ಅವರ ಜಯಂತಿ.

ಪರಿಚಯ
ಅರುಣ್ ಜೇಟ್ಲಿ ಅವರು ಡಿಸೆಂಬರ್ 28, 1957 ರಂದು ದೆಹಲಿಯಲ್ಲಿ ಜನಿಸಿದರು. ತಂದೆ ಕಿಶನ್, ತಾಯಿ ರತನ್ ಪ್ರಭಾ ಜೇಟ್ಲಿ. ಅರುಣ್ ಜೇಟ್ಲಿ 1969-70ನೇ ವರ್ಷದ ಅವಧಿಯಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು. ಬಳಿಕ 1973ರಲ್ಲಿ ಇಲ್ಲಿನ ಶ್ರೀರಾಮ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ನಂತರ 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ದಿ ಲಾ ಎಂಬಲ್ಲಿ ಕಾನೂನು ಪದವಿ ಪಡೆದರು. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಮಟ್ಟದ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗಳಿಸಿದ್ದರು.

ರಾಜಕೀಯ ಜೀವನ
ವಿದ್ಯಾರ್ಥಿ ಸಂಘದ ನಾಯಕನಾಗಿ ತಮ್ಮ ರಾಜಕೀಯ ಆಸಕ್ತಿ ಆರಂಭವಾಯ್ತು. ಎಪ್ಪತ್ತರ ದಶಕದಲ್ಲೇ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನಾಯಕನಾಗಿದ್ದರು. ಬಳಿಕ 1974ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ಇನ್ನು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಚಾರ ವಿರುದ್ಧದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಜಯ ಪ್ರಕಾಶ್ ನಾರಾಯಣ್ ಅವರೇ, ಇವರನ್ನು ವಿದ್ಯಾರ್ಥಿಗಳ ರಾಷ್ಟ್ರೀಯ ಸಮಿತಿ ಸಂಯೋಜಕರನ್ನಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರಿಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ನಂತರ ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘವನ್ನು ಸೇರಿದರು.


1991ರಿಂದ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು, ಪ್ರಧಾನಿ ಮೋದಿ ನೇತೃತ್ವದ ಮೊದಲ ಅವಧಿಯ ಸರಕಾರದಲ್ಲಿ ಹಣಕಾಸು ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅಂತೆಯೇ 1999ರಲ್ಲಿ ವಾಜಪೇಯಿ ಸರಕಾರದಲ್ಲಿ ಅವರು ಮಾಹಿತಿ ಹಾಗೂ ಪ್ರಸಾರ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಂತೆಯೇ ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ, ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಜಾರಿ ವೇಳೆ ಪ್ರಮುಖ ಪಾತ್ರ ವಹಿಸಿದ್ದರು. ಹಣಕಾಸು ಇಲಾಖೆಯಡಿ ಆದಾಯ ಇಲಾಖೆ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಬದಲಾವಣೆ ತರುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.

2006ರಿಂದ ರಾಜ್ಯಸಭೆ ಸದಸ್ಯ

ರಾಗಿದ್ದ ಅರುಣ್ ಜೇಟ್ಲಿ ಅವರನ್ನು, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ 2009ರಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಅಂತೆಯೇ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲೂ ಅರುಣ್ ಜೇಟ್ಲಿ ಕಾರ್ಯ ನಿರ್ವಹಿಸಿದ್ದರು. ಒಬ್ಬರು 2 ಹುದ್ದೆಗಳನ್ನು ನಿರ್ವಹಿಸಬಾರದೆಂಬ ಪಕ್ಷದ ನಿಯಮಕ್ಕೆ ಬದ್ಧರಾಗಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜ್ಯಸಭೆಯಲ್ಲಿ ಅಣ್ಣಾ ಹಜಾರೆ ಅವರ ಲೋಕಪಾಲ್ ಮಸೂದೆ, ಮಹಿಳಾ ಮೀಸಲಾತಿ ಮಸೂದೆಗೆ ಅವರು ಬೆಂಬಲ ನೀಡಿದ್ದರು.
ಚುನಾವಣೆಗಳಿಂದ ದೂರವೇ ಇದ್ದ ಜೇಟ್ಲಿ
ಕೇಂದ್ರದಲ್ಲಿ ವಾಜಪೇಯಿ ಸರಕಾರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಜೇಟ್ಲಿ, 2014ರವರೆಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 2014ರಲ್ಲಿ ನವಜೋತ್ ಸಿಂಗ್ ಸಿಧು ಅವರ ಬದಲಿಗೆ ಅಮೃತ್ಸರದಿಂದ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಈ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು. ಗುಜರಾತ್ನಿಂದ ರಾಜ್ಯಸಭೆ ಸದಸ್ಯರಾಗಿದ್ದ ಅವರನ್ನು 2018 ಮಾರ್ಚ್ನಲ್ಲಿ ಉತ್ತರ ಪ್ರದೇಶದಿಂದ ಮರು ಆಯ್ಕೆ ಮಾಡಲಾಗಿತ್ತು.


ಕಾನೂನು ವೃತ್ತಿ
1977ರಿಂದ ವಕೀಲ ವೃತ್ತಿ ಆರಂಭಿಸಿದರು. ದೇಶದ ಹಲವಾರು ಹೈಕೋರ್ಟ್ ಸೇರಿದಂತೆ ಸುಪ್ರೀಂಕೋರ್ಟ್ನಲ್ಲಿಯೂ ವಕೀಲರಾಗಿ ಸೇವೆ ಸಲ್ಲಿಸಿದರು. 1989ರಲ್ಲಿ ವಿ.ಪಿ. ಸಿಂಗ್ ಸರ್ಕಾರದಲ್ಲಿ ಅವರನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಯಿತು. ಅವರು ಬೋಫೋರ್ಸ್ ಹಗರಣದ ಎಲ್ಲಾ ಕಾಗದ ವ್ಯವಹಾರಗಳ ಕೆಲಸವನ್ನು ಮಾಡಿದರು. ಜನತಾ ದಳದ ಶರದ್ ಯಾದವ್ರಿಂದ ಹಿಡಿದು, ಕಾಂಗ್ರೆಸ್ನ ಮಾಧವ್ರಾವ್ ಸಿಂಧ್ಯಾ, ಬಿಜೆಪಿಯ ಎಲ್.ಕೆ. ಅಡ್ವಾಣಿಯವರವರೆಗೂ ಇವರು ವಕೀಲರಾಗಿದ್ದರು ಎಂಬುದು ಗಮನಾರ್ಹ.


ಇವರು ಕಾನೂನು ಹಾಗೂ ಪ್ರಸಕ್ತ ವ್ಯವಹಾರಗಳ ಬಗ್ಗೆ ಹಲವಾರು ಪುಸ್ತಕಗಳು ಬರೆದು ಪ್ರಕಟಿಸಿದ್ದಾರೆ. ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ “ಭಾರತದಲ್ಲಿ ಅಪರಾಧಗಳು” ಎಂಬ ವಿಷಯಾಧಾರಿತ ಪತ್ರಗಳನ್ನು ಇಂಡೋ-ಬ್ರಿಟಿಷ್ ಲೀಗಲ್ ಫೋರಂ ಎದುರಿಗೆ ಮಂಡಿಸಿದರು. ಜೂನ್ 1998ರಲ್ಲಿ ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ಹಗರಣಗಳ ಸಂಬಂಧ ನಡೆದ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಪ್ರಶಸ್ತಿ
ಅರುಣ್ ಜೇಟ್ಲಿ ಅವರಿಗೆ 2020 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮವಿಭೂಷಣವನ್ನು ಮರಣೋತ್ತರವಾಗಿ ನೀಡಲಾಯಿತು. ಅರುಣ್ ಜೇಟ್ಲಿ ಅವರು ಅನಾರೋಗ್ಯ ಸಮಸ್ಯೆಯಿಂದ ಅಗಸ್ಟ್ 24, 2019ರಲ್ಲಿ ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.