ಇಂದು ಪುಣ್ಯಸ್ಮರಣೆ

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಶಾಸ್ತ್ರಿ ಅವರು ಭಾರತದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷ ವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದ ಮಹಾನ್ ನಾಯಕ. ಅವರು ರಾಷ್ಟ್ರದ ಬೆಳವಣಿಗೆಗೆ ನೀಡಿದ ಕೊಡುಗೆ ಅವಿಸ್ಮರಣೀಯ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಇಂದು ಅವರ ಪುಣ್ಯಸ್ಮರಣೆ.


ಆರಂಭಿಕ ಜೀವನ
ಲಾಲ್ ಬಹದ್ದೂರ್ ಶಾಸ್ತ್ರಿ ಅಕ್ಟೋಬರ್ 2, 1904 ರಲ್ಲಿ ಉತ್ತರಪ್ರದೇಶದ ಮೊಘಲ್ಸರಾಯ್ ಜಿಲ್ಲೆಯಲ್ಲಿ ಜನಿಸಿದರು. ವಾರಣಾಸಿಯ ಹರೀಶ್ ಚಂದ್ರ ಪ್ರೌಢಶಾಲೆಯಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದರು. ನಂತರ 1925 ರಲ್ಲಿ ಅವರು ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ಪದವಿ ಮುಗಿಸಿದರು. ನಂತರ ಅವರು ‘ಶಾಸ್ತ್ರಿ’ ಅಂದರೆ ವಿದ್ವಾಂಸ ಎಂಬ ಬಿರುದನ್ನು ಪಡೆದರು.


ರಾಜಕೀಯ ಜೀವನ
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಕಾಲೇಜು ಮುಗಿಸಿದ ನಂತರ ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ಸರ್ವೆಂಟ್ಸ್ ಆಫ್ ಪೀಪಲ್ ಸೊಸೈಟಿಗೆ (ಲೋಕ್ ಸೇವಾ ಮಂಡಲ್) ಸೇರಿದರು. ಇದು ದಲಿತರ ಉನ್ನತಿಗಾಗಿ ಶ್ರಮಿಸುತ್ತಿದ್ದ ಸಂಸ್ಥೆಯಾಗಿತ್ತು. ನಂತರದ ದಿನಗಳಲ್ಲಿ ಅವರು ಸರ್ವೆಂಟ್ಸ್ ಆಫ್ ಪೀಪಲ್ ಸೊಸೈಟಿಯ ಅಧ್ಯಕ್ಷರಾದರು. ಸ್ವಾತಂತ್ರ್ಯ ಹೋರಾಟದ ಚಳವಳಿಗಳಲ್ಲೂ ಭಾಗವಹಿಸಿದ್ದ ಶಾಸ್ತ್ರೀಜಿ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ತೊಡಗಿಕೊಂಡರು. ಅಸಹಕಾರ ಚಳವಳಿಗೆ ಬೆಂಬಲ ನೀಡಿದ್ದಕ್ಕಾಗಿ 1921ರಲ್ಲಿ ಅವರನ್ನು ಬಂಧಿಸಲಾಯಿತು.

1928 ರ ಹೊತ್ತಿಗೆ ಶಾಸ್ತ್ರಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು.
1930 ರಲ್ಲಿ ಮಹಾತ್ಮ ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹ ಚಳವಳಿಯನ್ನು ಪ್ರಾರಂಭಿಸಿದಾಗ ಶಾಸ್ತ್ರಿ ಅವರು ಉಪ್ಪಿನ ಮೇಲೆ ತೆರಿಗೆ ಪಾವತಿಸದಂತೆ, ಜೊತೆಗೆ ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸುವಂತೆ ಜನರನ್ನು ಒಗ್ಗೂಡಿಸಿದರು. ಹೀಗಾಗಿ ಅವರನ್ನು ಸುಮಾರು ಎರಡೂವರೆ ವರ್ಷಗಳ ಕಾಲ ಬಂಧಿಸಲಾಯಿತು. ಜೈಲಿನಿಂದ ಹೊರಬಂದ ಶಾಸ್ತ್ರೀಜಿಯವರನ್ನು ಯುಪಿ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ನಂತರ ಅಲಹಾಬಾದ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆದರು.
ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭಿಸಿದಾಗ ಶಾಸ್ತ್ರಿ ಅವರು ಆಂದೋಲನದ ಕುರಿತು ಪ್ರಚಾರ ಮಾಡಲು ಶುರು ಮಾಡಿದರು. ಇದರಿಂದಾಗಿ ಅವರನ್ನು ಮತ್ತೆ 1946 ರವರೆಗೆ ಸೆರೆಮನೆಯಲ್ಲಿಡಲಾಯಿತು.

ಸ್ವಾತಂತ್ರ್ಯದ ನಂತರ
ಸ್ವಾತಂತ್ರ್ಯೋತ್ತರ ಭಾರತ ದೇಶವನ್ನು ಒಗ್ಗೂಡಿಸಲು ಮತ್ತು ದೇಶದ ಅಭಿವೃದ್ಧಿಗಾಗಿ ಶಾಸ್ತ್ರೀಜಿ ಶ್ರಮಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಉತ್ತರ ಪ್ರದೇಶದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಸ್ವಾತಂತ್ರ್ಯಾನಂತರ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋವಿಂದ್ ವಲ್ಲಭ್ ಪಂತ್ ಅವರ ಅಡಿಯಲ್ಲಿ ಪೊಲೀಸ್ ಮತ್ತು ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಪೊಲೀಸ್ ಸಚಿವರಾಗಿ, ಶಾಸ್ತ್ರಿ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದರು. ಗುಂಪನ್ನು ಚದುರಿಸಲು ಲಾಠಿಗಳ ಬದಲಿಗೆ ನೀರನ್ನು ಬಳಸುವಂತೆ ಅವರು ಪೊಲೀಸ್ ಇಲಾಖೆಗೆ ಸಲಹೆಯನ್ನಿತ್ತರು. 1947 ರಲ್ಲಿ ಗಲಭೆಗಳು, ಸಾಮೂಹಿಕ ವಲಸೆ ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಅವರು ಸಮರ್ಥವಾಗಿ ನಿಯಂತ್ರಿಸಿದರು.

1951 ರಲ್ಲಿ ಜವಾಹರಲಾಲ್ ನೆಹರು ಅವರು ಭಾರತದ ಪ್ರಧಾನಿಯಾಗಿದ್ದಾಗ, ಶಾಸ್ತ್ರಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. 1952, 1957 ಮತ್ತು 1962 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶಾಸ್ತ್ರಿ ನಿರ್ಣಾಯಕ ಪಾತ್ರ ವಹಿಸಿದರು.

ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಹಬೂಬ್ನಗರದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಶಾಸ್ತ್ರಿಯವರು ತುಂಬಾ ದುಃಖಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದರು. ಆದರೆ ಅವರ ರಾಜೀನಾಮೆಯನ್ನು ತಿರಸ್ಕರಿಸಲಾಯಿತು. 1961 ರಲ್ಲಿ ಅವರನ್ನು ಭಾರತದ ಗೃಹ ಸಚಿವರನ್ನಾಗಿ ಮಾಡಲಾಯಿತು. ಗೃಹ ಸಚಿವರಾಗಿದ್ದ ಅವಧಿಯಲ್ಲಿ ಅವರು ಕೆ. ಸಂತಾನಂ ಅವರ ನೇತೃತ್ವದಲ್ಲಿ ಭ್ರಷ್ಟಾಚಾರ ತಡೆ ಸಮಿತಿಯನ್ನು ರಚಿಸಿದರು.


ಜವಾಹರಲಾಲ್ ನೆಹರು ಅವರ ಮರಣದ ನಂತರ 9 ಜೂನ್ 1964 ರಂದು ದೇಶದ ಎರಡನೇ ಪ್ರಧಾನಮಂತ್ರಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೇಮಕಗೊಂಡರು. ನಂತರ ಶಾಸ್ತ್ರಿಯವರು ದೇಶದ ಅಭಿವೃದ್ಧಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. 9 ಜೂನ್ ಜೂನ್ 1964 ರಿಂದ 11 ಜನವರಿ 1966 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದರು ಶಾಸ್ತ್ರಿ ಅವರು ಹಿಂದಿ, ಇಂಗ್ಲಿಷ್ ಭಾಷಾ ಗೊಂದಲವನ್ನು, ಕಾಶ್ಮೀರದ ಹಜರತ್ ಬಾಲ್ ನಂತಹ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿದರು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ನಾಡಿನ ಯೋಧರಿಗೆ, ರೈತರಿಗೆ ರಾಷ್ಟ್ರವ್ಯಾಪಿ ಮನ್ನಣೆ ದೊರೆಯುವಂತೆ ಮಾಡುವಲ್ಲಿ ಶಾಸ್ತ್ರಿ ಅವರ ಮುಂದಾಳತ್ವ ಮಹತ್ವದ್ದಾಗಿದೆ.

ಟಾಷ್ಕೆಂಟ್ ಒಪ್ಪಂದಕ್ಕೆಂದು ರಷ್ಯಾಗೆ ತೆರಳಿದ್ದ ಶಾಸ್ತ್ರೀಜಿ ಅವರು ಜನವರಿ 11 1966 ರಲ್ಲಿ ಅನುಮಾನಾಸ್ಪದವಾಗಿ ಮರಣಹೊಂದಿದರು. ಶಾಸ್ತ್ರೀಜಿ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಭಾರತ ಸರ್ಕಾರ ರಾಷ್ಟ್ರದ ಪರಮೋಚ್ಚ ನಾಗರಿಕ ಪ್ರಶಸ್ತಿ ಭಾರತರತ್ನ ನೀಡಿ ಗೌರವಿಸಿದೆ‌.

Leave a Reply

Your email address will not be published.

This site uses Akismet to reduce spam. Learn how your comment data is processed.